ಸುಲಭವಾಗಿ ಆಪರೇಟ್ ಮಾಡಬಹುದಾದ ಕನೊ ಕಂಪ್ಯೂಟರ್

ಟೀಮ್​​ ವೈ.ಎಸ್​​.

ಸುಲಭವಾಗಿ ಆಪರೇಟ್ ಮಾಡಬಹುದಾದ ಕನೊ ಕಂಪ್ಯೂಟರ್

Sunday October 18, 2015,

3 min Read

ಚಿಕ್ಕವರಿಂದ ದೊಡ್ಡವರವರೆಗೂ ಪ್ರಿಯವಾಗಿರುವ ಕನೊ ಕಂಪ್ಯೂಟರ್ ಕಿಟ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ..? ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ನೋಡಲು ಚಿಕ್ಕದಿರುವ ಈ ಕಂಪ್ಯೂಟರ್ ಕಿಟ್‍ನಲ್ಲಿ ವಿಶೇಷತೆಗಳ ಆಗರವಿದೆ ಎಂದೇ ಹೇಳಬಹುದು. ಎಲ್ಲಾ ವಯೋಮಾನದವರಿಗೂ ಸಹಾಯವಾಗಲೆಂದು ತಯಾರಿಸಿರುವ ಈ ಕನೊ ಕಂಪ್ಯೂಟರ್ ಹುಟ್ಟಿಕೊಂಡದ್ದು 2013ರಲ್ಲಿ. ಇದರ ಸಂಸ್ಥಾಪಕರು ಅಲೆಕ್ಸ್ ಕ್ಲೈನ್, ಯೊನಟನ್ ರಾಜ್ ಫ್ರೈಡ್‍ಮ್ಯಾನ್, ಸೌಲ್ ಕ್ಲೈನ್. ಲಂಡನ್‍ನಲ್ಲಿ ಮುಖ್ಯಶಾಖೆಯನ್ನು ಹೊಂದಿರುವ ಕನೊ ಕಂಪ್ಯೂಟರ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯುವ ಸಲುವಾಗಿ ಕನೊ ಕಂಪ್ಯೂಟರ್‍ನ ಸಹ ಸಂಸ್ಥಾಪಕ ಮತ್ತು ಸಿಇಒ ಯೊನಟನ್ ರಾಜ್ ಫ್ರೈಡ್‍ಮ್ಯಾನ್ ಅವರನ್ನು ಮಾತನಾಡಿಸಿದಾಗ ಅವರು ಹೇಳಿರುವುದು ಹೀಗೆ...

image


ಯಾವುದೇ ಮಕ್ಕಳು ಸುಲಭವಾಗಿ ಅಸೆಂಬಲ್ ಮಾಡುವಂತೆ ಕನೊ ಕಂಪ್ಯೂಟರ್ ಅನ್ನು ಮಾಡಲಾಗಿದೆ. ಯಾರೇ ಆಗಲಿ, ಎಲ್ಲಿಯಾದರೂ ಈ ಕಂಪ್ಯೂಟರ್ ಬಳಸಬಹುದಾಗಿದೆ. ಅದಕ್ಕೆಂದೆ ಫೆಂಟಾಸ್ಟಿಕ್ ಆದ ರಾಸ್ಪ್ ಬೆರ್ರಿ ಪೈನ ಚಿಕ್ಕ ಮಷಿನ್ ಕೂಡ ಕೊಡಲಾಗುತ್ತದೆ. 8 ವರ್ಷದ ಮಕ್ಕಳು ಸಹ ಇದನ್ನು ಉಪಯೋಗಿಸಬಹುದು ಎಂದರೆ ಇದರ ಸಾಮರ್ಥ್ಯವನ್ನು ನೀವೇ ಊಹಿಸಿಕೊಳ್ಳಬಹುದು. ಇನ್ನು ಸಿಂಪಲ್ ಆಗಿ ಹೇಳುವುದಾದರೆ ಕನೊ ಕಂಪ್ಯೂಟರ್ ಬಳಸುವವರಿಗೆ ಒಂದು ಚಿಕ್ಕ ಬಾಕ್ಸ್ ಕೊಡಲಾಗುತ್ತದೆ. ಆ ಬಾಕ್ಸ್​​ನಲ್ಲಿ ರಾಸ್ಪ್ ಬೆರ್ರಿ ಪೈ ಸೇರಿದಂತೆ ಟ್ರಾಕ್ ಪ್ಯಾಡ್ ಜೊತೆಗೆ ವೈರ್ ಲೆಸ್ ಕೀ ಬೋರ್ಡ್, ಕೇಬಲ್ಸ್, ವೈಫೈ ಡೊಂಗಲ್, ಸ್ಪೀಕರ್ ಕೂಡ ಇರುತ್ತದೆ. ಜೊತೆಗೆ ನಿಮಗೆ ಗೈಡ್ ಮಾಡಲಿಕ್ಕೆ ಕನೊಗೆ ಸಂಬಂಧಿಸಿದ ಪುಸ್ತಕ ಸಹ ಇರುತ್ತದೆ. ಅಷ್ಟೇ ಅಲ್ಲ ಕನೊ ಆಪರೇಟಿಂಗ್ ಸಿಸ್ಟಮ್‍ನಲ್ಲಿ ಮಲ್ಟಿಮೀಡಿಯಾ ಪ್ಯಾಕೇಜಸ್, ಪ್ಲಸ್ ಕನೊ ಬ್ಲಾಕ್ಸ್​​ಗಳಿರುತ್ತವೆ.

ಕನೊ ಇಂದು ಇಷ್ಟರಮಟ್ಟಿಗೆ ಗುರುತಿಸಿಕೊಳ್ಳಲು ಒಂದು ತಂಡದ ಶ್ರಮವೇ ಇದೆ ಎಂದು ಹೇಳುವ ಯೊನಟನ್ ರಾಜ್ ಫ್ರೈಡ್‍ಮ್ಯಾನ್ ಇದಕ್ಕೆ ಪ್ರೋತ್ಸಾಹಿಸಿದ, ನೆರವು ನೀಡಿದ ಕುಟುಂಬ ವರ್ಗದವರವನ್ನು, ಸ್ನೇಹಿತರ ಹೆಸರನ್ನು ಪ್ರಸ್ತಾಪಿಸುವುದನ್ನು ಮರೆಯುವುದಿಲ್ಲ.

ಮುನ್ನುಡಿ ಬರೆದ ಕಿಕ್ ಸ್ಟಾರ್ಟರ್ ಕ್ಯಾಂಪೇನ್

ನವೆಂಬರ್ 19, 2013ರಂದು ಕನೊ ಕ್ರೌಡ್ ಫಂಡಿಂಗ್ ಕ್ಯಾಂಪೇನ್ ಕಿಕ್ ಸ್ಟಾರ್ಟರ್ ಆರಂಭಿಸಿತು. ಆಗ ಕನೊಗಾದ ಲಾಭ ಅಷ್ಟಿಷ್ಟಲ್ಲ. ಹೊಸ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಿದ ಈ ಕಂಪ್ಯೂಟರ್ ಕೆಲವೇ ಗಂಟೆಗಳಲ್ಲಿ ಇಡೀ ಜಗತ್ತಿಗೆ ಪರಿಚಯವಾಗಿ ವಿಶ್ವವಿಖ್ಯಾತಿ ಗಳಿಸಿತು. 99 ಡಾಲರ್ ಬೆಲೆಯನ್ನು ಹೊಂದಿದ್ದ ಕನೊ ಕಂಪ್ಯೂಟರ್ ಕಿಟ್‍ನಲ್ಲಿ ಕೀಬೋರ್ಡ್, ಎಸ್‍ಡಿ ಮೆಮೊರಿ ಕಾರ್ಡ್, ಕೇಸ್ ಮೋಡ್ಸ್, ಮಲ್ಟಿಪಲ್ ಇನ್‍ಸ್ಟ್ರಕ್ಷನ್ ಹೊಂದಿರುವ ಬುಕ್‍ಲೆಟ್ ಎಲ್ಲವೂ ಇತ್ತಾದ್ದರಿಂದ ಬಿಸಿ ಬಿಸಿ ದೋಸೆಯಂತೆ ಮಾರಾಟವಾಯಿತು. ಲಾಂಚ್ ಆದ ಮೊದಲ 18 ಗಂಟೆಗೆ ಯುಎಸ್ ಡಾಲರ್ 100,000 ಲಾಭವನ್ನು ಕನೊ ಪಡೆಯಿತು. ಹಾಗೆಯೇ 23 ದಿನಗಳಲ್ಲಿ ಮತ್ತು ಆನಂತರ ಅದರ ಗಳಿಕೆ 700,000 ಕ್ಕೆ ಮುಟ್ಟಿತು.

ಕನೊಗೆ ಪ್ರೇರಣೆಯೆಂದರೆ...

ವಿಶ್ವದಾದ್ಯಂತ ಜನತೆಗೆ ಸಹಾಯವಾಗುವಂತಹ ಏನಾದರೊಂದು ಹೊಸ ಟೂಲ್ಸ್ ಪರಿಚಯಿಸಬೇಕೆಂದು ಕೊಂಡಿದ್ದ ಯೊನಟನ್ ರಾಜ್ ಫ್ರೈಡ್‍ಮ್ಯಾನ್ ಅವರ ತಂಡ ಎಲ್ಲಾ ವಯೋಮಾನದವರಿಗೂ ಅನುಕೂಲವಾಗುವಂತಹ ಟೂಲ್ಸ್ ನೀಡಬೇಕು. ಆದರೆ ಅದು ಜಸ್ಟ್ ಟೂಲ್ಸ್ ಆಗಬಾರದು ಎಂದುಕೊಂಡು ಹೊಸ ಅವಿಷ್ಕಾರಕ್ಕೆ ಕೈ ಹಾಕಿತು. ಆಗ ಎದುರಿಸಿದ ಮೊದಲನೇ ಚಾಲೆಂಜ್ ಸೌಲ್‍ನ 6 ವರ್ಷದ ಮಗ ಮೈಕಾ. ಹೌದು, ಆದರೆ ಮೈಕಾ ಇವರಿಗೆ ಚಾಲೆಂಜಿಂಗ್ ಎನ್ನುವುದಕ್ಕಿಂತ ಇವರ ಕನಸಿಗೆ ಸ್ಫೂರ್ತಿಯಾದ ಹುಡುಗನೆಂದೇ ಹೇಳಬಹುದು. ಏಕೆಂದರೆ ಅವನು ಬಯಸಿದ್ದು ಲೆಗೊ ತರಹದ ಅಥವಾ ಅದಕ್ಕಿಂತಲೂ ಫನ್ ಆಂಡ್ ಸಿಂಪಲ್ ಆಗಿರುವ ರಾಸ್ಪ್ ಬೆರ್ರಿ ಪೈ ಕಿಟ್. ಮೈಕಾನ ಆಸಕ್ತಿಯನ್ನು ತಿಳಿದುಕೊಂಡವರಿಗೆ ಜಗತ್ತಿನಲ್ಲಿರುವ ಯಂಗ್ ಜನರೇಶನ್ ಸಹ ಇದೇ ರೀತಿ ಯೋಚಿಸಬಹುದು ಅಂದುಕೊಂಡು ಜನವರಿ 2013ರಲ್ಲಿ ಅಲೆಕ್ಸ್ ಕ್ಲೈನ್ ಹಾಗೂ ಇತರ ತಮ್ಮ ಸ್ನೇಹಿತರೊಡಗೂಡಿ ಕನೊ ಮೊದಲ ಮಾದರಿಯನ್ನು ತಯಾರಿಸಿದರು. ನಂತರ ಇದನ್ನು ಲಂಡನ್‍ನ ಕಡಿಮೆ ಆದಾಯದ ಪ್ರದೇಶಗಳಲ್ಲಿರುವ ಶಾಲೆಗಳಲ್ಲಿ ಕಿಟ್ ಅನ್ನು ಪರಿಚಯಿಸಿದರು. ಆಗ ಕಿಟ್ ನೋಡಿದ ಮಕ್ಕಳು ಉತ್ಸಾಹದಿಂದ ಪ್ರತಿಕ್ರಯಿಸಿದರು.

ಮೊದಲೆರಗಿದ ಸವಾಲುಗಳು

“ಒಂದು ಕಂಪೆನಿ ಸ್ಥಾಪಿಸುವಾಗ ವಿವಿಧ ರೀತಿಯ ಸಮಸ್ಯೆಗಳು ಎದುರಾದರೂ, ಅದು ಕಂಪೆನಿಯ ಮೇಲೆ ಅವಲಂಬಿಸಿರುತ್ತದೆ 2 ವರ್ಷಗಳ ಹಿಂದೆ ಸ್ಥಾಪನೆಯಾದ ಕನೊ ಪ್ರಾಥಮಿಕ ಹಂತದಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಇಲ್ಲವೆಂಬ ಆತಂಕವಿತ್ತು. ಅಂದರೆ ಜನರ ಆಕಾಂಕ್ಷೆಯೇ ಒಂದು ಕಂಪನಿಗೆ ಸವಾಲೆಂದು ಹೇಳಬಹುದು. ಆದರೆ ಕನೊ ಕ್ರಮೇಣ ಜನರ ವಿಶ್ವಾಸವನ್ನು ಗಳಿಸುವಲ್ಲಿ ಸಫಲವಾಯಿತು. ಕಂಪನಿ ಕಟ್ಟುವಾಗ ಸಾಕಷ್ಟು ವಿಷಯ ತಿಳಿದುಕೊಂಡೆವು, ಕಲಿತೆವು. ಮತ್ತೊಂದು ಅಂಶವೆಂದರೆ ಸವಾಲುಗಳು ಮುಂದುವರೆದರೆ ನಮಗೆ ಅದಕ್ಕೆ ತಕ್ಕಂತೆ ಸರಿಯಾದ ವ್ಯಕ್ತಿಗಳು ಸಿಗುತ್ತಾ ಹೋಗುತ್ತಾರೆ. ಅದಕ್ಕೆ ನಾವು ಸಹ ಅತ್ಯುತ್ತಮ ಟೀಮ್ ಹೊಂದಿರುವುದು. ಉದಾಹರಣೆಗೆ ನಮ್ಮ ಸಾಫ್ಟ್​​ ವೇರ್ ಆರ್ಕಿಟೆಕ್ಟ್ ಅಲೆಜಾಂಡ್ರೋ ಸೈಮನ್. ಇವರು ಮೊದಲು ಸೋನಿ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆನಂತರ ನಮ್ಮ ಕಂಪೆನಿಯ ಕಚೇರಿ ಆರಂಭವಾಗುವುದಕ್ಕಿಂತ ಮುಂಚೆಯೇ ನಮ್ಮ ಬಳಿ ಸೇರಿಕೊಂಡರು. ಒಂದು ಕಂಪೆನಿಯ ಕೆಲಸ ಬಿಟ್ಟು ಬಂದು ನಮ್ಮಂಥ ಕಂಪನಿಗೆ ಬಂದು ಸೇರುವುದೆಂದರೆ ಇದು ಒಂದು ರೀತಿಯ ಸವಾಲೇ” ಎಂಬುದು ಕನೊ ಸಂಸ್ಥಾಪಕರ ಅಭಿಪ್ರಾಯ.

ಮುಂದಿನ ಗುರಿ

ಸಾಧ್ಯವಾದಷ್ಟು ವಿಶ್ವದಾದ್ಯಂತ ಇರುವ ಎಲ್ಲಾ ಜನರಿಗೂ ‘ಕನೊ’ ತಲುಪಬೇಕು. ನಮಗೆ ತಿಳಿದಿರುವಂತೆ ಭಾರತದಲ್ಲಿ ವಾಸಿಸುವ ಬಹಳಷ್ಟು ಜನರಿಗೆ ಕಂಪ್ಯೂಟರ್ ಬಗ್ಗೆ ತಿಳಿದಿಲ್ಲ. ಇದಕ್ಕೆ ಆಗ್ನೇಯ ಏಷ್ಯಾ ರಾಷ್ಟ್ರಗಳು ಏನೂ ಹೊರತಾಗಿಲ್ಲ. ಶಿಕ್ಷಣ, ಕಲಿಕೆ, ತಂತ್ರಜ್ಞಾನದಿಂದ ವಂಚಿತರಾಗಿದ್ದಾರೆ. ಹಾಗೆ ನೋಡಿದರೆ ಇಲ್ಲಿನ ಅನೇಕ ನಗರಗಳು ಇದೀಗ ಅಭಿವೃದ್ಧಿ ಹೊಂದುತ್ತಿದ್ದು, ಅದರಲ್ಲೂ ಬೆಂಗಳೂರಿನಂತಹ ಮಹಾನಗರಗಳಲ್ಲಿ ಬಹೃತ್ ಕಂಪನಿಗಳು ತಲೆ ಎತ್ತಿ ನಿಂತಿವೆ. ಜನಸಂಖ್ಯೆಯೂ ಸಾಕಷ್ಟಿದೆ. ನಾವು ಇಂತಹ ನಗರಗಳನ್ನು ಆಯ್ದುಕೊಂಡು ಅಲ್ಲಿನ ಯಂಗ್ ಜನರೇಶನ್‍ಗೆ ಕನೊ ಬಗ್ಗೆ ಮಾಹಿತಿ ನೀಡಿದರೆ ಪ್ರಗತಿ ಹೊಂದಲು ಸಾಧ್ಯ ಎನ್ನುತ್ತಾರೆ ಯೊನಟನ್ ರಾಜ್ ಫ್ರೈಡ್‍ಮ್ಯಾನ್.