ಟೆಕ್ಕಿ ವಿಶಾಲ್ ಯಶೋಗಾಥೆ - ‘ಪೈಥೋನ್’ ಕಲಿತು ‘ಕ್ಲೋನಿಯೋ’ ಅಭಿವೃದ್ಧಿ..!

ಟೀಮ್​​ ವೈ.ಎಸ್​. ಕನ್ನಡ

ಟೆಕ್ಕಿ ವಿಶಾಲ್ ಯಶೋಗಾಥೆ - ‘ಪೈಥೋನ್’ ಕಲಿತು ‘ಕ್ಲೋನಿಯೋ’ ಅಭಿವೃದ್ಧಿ..!

Friday December 18, 2015,

3 min Read

ಪೈಥೋನ್​​...ಕ್ಲೋನಿಯೋ..ಇಂತಹ ಪದಗಳ ಒಮ್ಮೆ ಕಿವಿಗೆ ಬಿದ್ದ ತಕ್ಷಣ ಒಂದು ಕ್ಷಣ ಗಲಿಬಿಲಿಗೊಳ್ಳುವುದು ಸಹಜ. ಇದೇನಪ್ಪಾ ಅಂತ ಹೆಚ್ಚಿನವರು ತಲೆ ಚಚ್ಚಿಕೊಳ್ಳುವ ಚಾನ್ಸೇ ಅಧಿಕ. ಕೆಲವರು ಇದು ಹೆದರಿಕೆ ಹುಟ್ಟಿಸುತ್ತದೆ ಅಂತ ಅಭಿಪ್ರಾಯ ಪಟ್ಟರೆ, ಇನ್ನು ಕೆಲವರು ಈ ಪದ ಅತ್ಯಂತ ಸಂಕೀರ್ಣವಾಗಿದೆ ಎಂದು ದೂರಿದ್ದಾರೆ.

ಇದೆಲ್ಲ ವಿಶಾಲ್ ನಾರಾಯಣ ಗೌಡ ಅವರ ಸಂಶೋಧನೆಗೆ ಸಂಬಂಧಿಸಿದ ಮಾತಾಗಿದೆ. ಕೇವಲ ವ್ಯಾಮೋಹದಿಂದಾಗಿ ಪ್ರತಿಯೊಂದನ್ನು ಆರಂಭಿಕ ಹಂತದಲ್ಲೇ ಕಲಿತು ಸಾಧನೆ ಮಾಡಿದ ಸಾಧಕನ ಯಶೋಗಾಥೆ ಇದಾಗಿದೆ. ಇವರ ಪ್ರಯತ್ನದ ಫಲವಾಗಿ ಹೊರಹೊಮ್ಮಿದ ಉತ್ಪನ್ನವೇ ಕ್ಲೋನಿಯೋ- ದತ್ತಾಂಶಗಳ ನಿಯಂತ್ರಣ ವ್ಯವಸ್ಥೆಯ ಆವೃತ್ತಿಯಾಗಿದೆ. ಈ ಪ್ರಯತ್ನಕ್ಕೆ ನಾರಾಯಣ ಗೌಡ ಜೊತೆ ಕೈ ಜೋಡಿಸಿದವರು ಅವರ ಸ್ನೇಹಿತ ಅಗಸ್ಟ್ಸ್.

image


ತಮ್ಮ ಬಾಲ್ಯ ಕಾಲದಲ್ಲಿ ವಿಶಾಲ್ ಅವರಿಗೆ ಪ್ರೋಗ್ರಾಂ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರಲಿಲ್ಲ. ಈಗಲೂ ನಾನು ಕಲಿಯುತ್ತಿದ್ದೇನೆ. ಪರಿಪೂರ್ಣತೆಯನ್ನು ಇನ್ನಷ್ಟು ಸಾಧಿಸಬೇಕಾಗಿದೆ. ಬೆಂಗಳೂರಿನ ನಿವಾಸಿಯಾಗಿರುವ ವಿಶಾಲ್, ತಮ್ಮ ಕನಸು ಸಾಕಾರಗೊಂಡದ್ದನ್ನು ಈ ರೀತಿ ಹೇಳುತ್ತಾರೆ. ಕಂಪ್ಯೂಟರ್ ಶಿಕ್ಷಣದ ಬಗ್ಗೆ ಆಸಕ್ತಿ ಇತ್ತು. ಆದರೆ ಅದರಲ್ಲಿ ಪ್ರೋ‌ಗ್ರಾಮಿಂಗ್ ಎಂದರೆ ಮಾರುದ್ದ ದೂರ ಸರಿಯುತ್ತಿದ್ದೆ. ಇದರಿಂದಾಗಿ ಪಿಯುಸಿ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ತೊಂದರೆ ಕೂಡ ಎದುರಿಸಿದ್ದೆ ಎನ್ನುತ್ತಾರೆ ವಿಶಾಲ್.

ಎಂಜಿನಿಯರಿಂಗ್​ನಲ್ಲಿ ಅಪಾರ ಆಸಕ್ತಿ

ಈ ಸಂದರ್ಭದಲ್ಲಿ ವಿಶಾಲ್ ಅವರ ಕನಸಿಗೆ ಜೀವ ತುಂಬಿದವರು ಅವರ ಸ್ನೇಹಿತ ಅಗಸ್ಟ್ಸ್. ತಮ್ಮ ಸ್ನೇಹಿತ ಪ್ರೋಗ್ರಾಮಿಂಗ್ ಬಗ್ಗೆ ಆಸಕ್ತಿ ಹೊಂದಿಲ್ಲ ಎಂಬುದು ಅಗಸ್ಟ್ಸ್​​​ಗೆ ತಿಳಿದಿತ್ತು. ಇದನ್ನು ಪರಿಗಣಿಸಿಯೇ ತುಂಬಾ ಪರಿಶ್ರಮ ಪಟ್ಟರು. ತಮ್ಮ ಸ್ನೇಹಿತನಿಗೆ ಕಂಪ್ಯೂಟರ್ ತಂತ್ರಜ್ಞಾನದ ಬುನಾದಿ ಶಿಕ್ಷಣ,ಜ್ಞಾನ ದೊರೆಯುವಂತಾಗಲು ಪ್ರಯತ್ನಿಸಿದರು.

ಕಂಪ್ಯೂಟರ್ ಸೈನ್ಸ್ ಕುರಿತಂತೆ ಇತರ ವಿಷಯಗಳಿಗಿಂತ ಹೆಚ್ಚಾಗಿ ವಿಶಾಲ್ ಆಸಕ್ತಿ ಹೊಂದಿದ್ದರು. ಇದರಿಂದಾಗಿ ಸಹಜವಾಗಿಯೇ ಕಂಪ್ಯೂಟರ್ ಸೈನ್ಸ್ ಶಿಕ್ಷಣವನ್ನು ಆಯ್ಕೆಮಾಡಿದರು. ಶಾಲಾ ಶಿಕ್ಷಣದ ಬಳಿಕ ಕೇಂಬ್ರಿಡ್ಜ್​​ ತಂತ್ರಜ್ಞಾನ ಸಂಸ್ಥೆಯಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯವನ್ನು ಆಯ್ಕೆ ಮಾಡಿದರು. ತಮ್ಮ ಶಿಕ್ಷಣದ ಅವಧಿಯಲ್ಲಿ ವಿಶಾಲ್ ಕಂಪ್ಯೂಟರ್ ಕುರಿತಂತೆ ಇನ್ನಷ್ಟು ಮಾಹಿತಿ ಕಲೆ ಹಾಕಿದರು. ಈ ವಿಷಯದಲ್ಲಿ ಹೆಚ್ಚಿನ ಅಧ್ಯಯನಕ್ಕೆ ಮುಂದಾದರು. Java ಸೇರಿದಂತೆ ಹಲವು ಕಂಪ್ಯೂಟರ್ ಭಾಷೆ ಕಲಿಯಲು ಆರಂಭಿಸಿದರು. ಹೆಚ್ಚಿನ ವಿಷಯಗಳು ಪಠ್ಯ ಕ್ರಮಕ್ಕೆ ಸಂಬಂಧಿಸಿದ ಕ್ಷೇತ್ರಗಳಾಗಿದ್ದರೂ ಆಂಡ್ರಾಯಿಡ್​​ ತಂತ್ರಜ್ಞಾನ ಕಲಿಯಲು ವಿಶೇಷ ಆಸಕ್ತಿ ಪ್ರದರ್ಶಿಸಿದರು.

ಸಹಪಾಠಿ ವಿದ್ಯಾರ್ಥಿಗಳು ಹಲವು ಸಂಸ್ಥೆಗಳಲ್ಲಿ ತಮ್ಮ ಪ್ರಾಜೆಕ್ಟ್ ವರ್ಕ್ ಗೆ ಅಂತಿಮ ರೂಪ ನೀಡುತ್ತಿದ್ದರೆ, ವಿಶಾಲ್ ಮತ್ತು ಆತನ ಗೆಳೆಯ ತಮ್ಮದೇ ತಂತ್ರಜ್ಞಾನ ಅಭಿವೃದ್ಧಿಪಡಿಸುವುದರಲ್ಲಿ ನಿರತರಾಗಿದ್ದರು. ರಾಸ್ ಬೆರಿ ಪಿ Raspberry pi ಗೆ ಆಂಡ್ರಾಯಿಡ್ ಜೆಲ್ಲಿಬೀನ್ ತಂತ್ರಾಂಶ ಸಿದ್ಧಪಡಿಸಿದರು. ರಾಸ್ ಬೆರಿ ಪಿ ಗೆ ಬಳಕೆದಾರನ ಬೂಟ್ ಲೋಡರ್ ಅಭಿವೃದ್ಧಿಪಡಿಸಿದರು.

ವಿಶಾಲ್​ ಸಾಧನೆ ಏನು..?

ಇಂಜಿನಿಯರಿಂಗ್ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ವಿಶಾಲ್ ಕ್ಯೂನೋಕ್ಸ್ ಸಿಸ್ಟಂ ಸಂಸ್ಥೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. Motorola ಸಂಸ್ಥೆಗೆ ತಂತ್ರಜ್ಞಾನ ಸಿದ್ಧಪಡಿಸಿದರು. ತಂತ್ರಜ್ಞಾನ ಅಭಿವೃದ್ಧಿ ತಂಡದ ಸದಸ್ಯರಾಗಿದ್ದ ವಿಶಾಲ್, ತಮ್ಮ ಸಂಸ್ಥೆಯ ಪ್ರಗತಿಯೊಂದಿಗೆ ತಾವು ಕೂಡ ಬೆಳೆಯಬೇಕೆಂಬ ಕನಸು ಕಂಡಿದ್ದರು. ಇದು ಸವಾಲಿನ ಕೆಲಸಲಾಗಿತ್ತು. ಮಾಹಿತಿ ಕೋಶ ವಿಸ್ತಾರವಾಗಿತ್ತು. ಎಲ್ಲವನ್ನೂ ತಿಳಿದುಕೊಳ್ಳಬೇಕೆಂಬ ಹಂಬಲದಿಂದ ಆ ನಿಟ್ಟಿನಲ್ಲಿ ಮುಂದುವರಿದರು. ಬಳಿಕ ಬಾಷ್​​ ಮತ್ತು ಅಟೋಮೇಟಿಂಗ್ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಲು ಪ್ರಯತ್ನಿಸಿದರು. ಅರ್ಪಣಾ ಮನೋಭಾವದಿಂದ ಮುನ್ನಡೆದರು.

ಈ ಸಂದರ್ಭದಲ್ಲಿ ಜೊತೆಗಿದ್ದ ಸ್ನೇಹಿತ ಅಗಸ್ಟ್ಸ್​​ ಮುಕ್ತ ಮೂಲ ಅಂದರೆ ಓಪನ್ ಸೋರ್ಸ್ ಸಾಫ್ಟವೇರ್ ಪರಿಚಯಿಸಿದರು. ಇಲ್ಲಿ ಕನಸುಗಳು ಮೊಳಕೆಯೊಡೆದವು. ಚರ್ಚೆ, ಸಮಾಲೋಚನೆ ನಿರಂತರವಾಗಿ ನಡೆಯಿತು. ನನ್ನ ಬಳಿ ಒಂದು ಹೊಸ ಚಿಂತನೆ ಇದೆ ಎಂದ ಅಗಸ್ಟ್ಸ್,ಇದರಲ್ಲಿ ಕೈ ಜೋಡಿಸುವಂತೆ ವಿಶಾಲ್ ಅವರನ್ನು ಕೋರಿದರು.

ವಿಶಾಲ್​ ಆರಂಭದ ದಿನಗಳು ಹೇಗಿದ್ದವು..?

ಹೊಸ ಮಾಹಿತಿ ಬಗ್ಗೆ ಸ್ನೇಹಿತರ ಮಧ್ಯೆ ಗಹನ ಚರ್ಚೆಯೇ ನಡೆಯಿತು. ಗಿಟ್ ಮತ್ತು ಪೈಥೋನ್ ತಂತ್ರಾಂಶವನ್ನು ಆನ್ ಲೈನ್ ಮೂಲಕ ಕಲಿಯುವಂತೆ ಅಗಸ್ಟ್ಸ್ ಸೂಚನೆ ನೀಡಿದರು. ಪೈಥೋನ್ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ವಿಶಾಲ್, ಅದನ್ನು ಸಮಗ್ರ ಅಧ್ಯಯನಕ್ಕೆ ಮುಂದಾದರು. ಬಾಷ್​​ಗೆ ವಿದಾಯ ಹೇಳಿದ ವಿಶಾಲ್, ಕೇವಲ ಪೈಥೋನ್ ನತ್ತ ಮಾತ್ರ ತಮ್ಮ ಗಮನ ಕೇಂದ್ರೀಕರಿಸಿದ್ದರು. ಇದರಲ್ಲಿ ವಿಶಾಲ್ ಪರಿಪೂರ್ಣತೆ ಗಳಿಸುತ್ತಿದ್ದಂತೆ ಹೊಸ ಕಲ್ಪನೆ ಕ್ಲೋನಿಯೋ ಬಗ್ಗೆ ಗಮನ ಹರಿಸಿದರು.

ತಮ್ಮ ಆರಂಭಿಕ ದಿನಗಳ ಬಗ್ಗೆ ವಿಶಾಲ್ ಈ ರೀತಿ ಹೇಳುತ್ತಾರೆ.

‘ನಾನು ನನ್ನ ಕೆಲಸಕ್ಕೆ ರಾಜೀನಾಮೆ ನೀಡಿದೆ. ನನ್ನ ಪಾಲಕರಲ್ಲಿ ಹೊಸ ಯೋಜನೆ ಬಗ್ಗೆ ಚರ್ಚೆ ನಡೆಸಿದೆ. ತಂದೆಗೆ ತುಂಬಾ ಸಂತೋಷವಾಯಿತು. ಆದರೆ ತಾಯಿ ಮಾತ್ರ ಪರವಾಗಿಲ್ಲ ಎಂದಷ್ಟೇ ಹೇಳಿದರು. ಆದರೂ ಅವರಿಬ್ಬರೂ ನನ್ನ ಯೋಜನೆಗಳನ್ನು ತುಂಬಾ ಬೆಂಬಲಿಸಿದರು. ಕೆಲಸಕ್ಕೆ ರಾಜಿನಾಮೆ ನೀಡಿದ ಬಳಿಕ ಅಗಸ್ಟ್ಸ್​ಜೊತೆ ಕೈ ಜೋಡಿಸಿದೆ. ಸತತವಾಗಿ ನನಗೆ ಅಗಸ್ಟ್ಸ್​​ ಪ್ರಾಜೆಕ್ಟ್ ಗಳನ್ನು ನೀಡುತ್ತಲೇ ಹೋದ. ಎಲ್ಲವನ್ನೂ ನಾನು ಪೂರ್ಣಗೊಳಿಸಿದೆ. ಹೀಗೆ ನಮ್ಮ ಸಾಧನೆ ಯಶಸ್ಸಿನತ್ತ ಮುನ್ನಡೆಯಿತು’ ಎನ್ನುತ್ತಾರೆ ವಿಶಾಲ್.

ಕ್ಲೋನಿಯೋ ಹುಟ್ಟಿನ ಬಗ್ಗೆ ಭಾವುಕರಾಗಿ ಮಾತನಾಡಿದ ವಿಶಾಲ್ ಇದು ಎಣಿಸಿದಷ್ಟು ಸುಲಭವಾಗಿರಲಿಲ್ಲ. ಯಾಕೆಂದರೆ ವಿಶಾಲ್​​ಗೆ ಕೇವಲ ಪೈಥೋನ್ ಬಗ್ಗೆ ಮಾತ್ರ ಅರಿವಿತ್ತು. ಕ್ಲೋನಿಯೋ ದತ್ತಾಂಶ ಆಧಾರಿತ ನಿಯಂತ್ರಣ ವ್ಯವಸ್ಥೆ ಆವೃತ್ತಿಯಾಗಿದ್ದು, ಅದು ಎಲ್ಲ ದತ್ತಾಂಶ ಮಾಹಿತಿಗೆ ಪೂರಕವಾಗಬೇಕಿತ್ತು. ಇದು ಅತ್ಯಂತ ಸವಾಲು ಕೂಡ ಆಗಿತ್ತು. ಇದಕ್ಕಾಗಿ ದತ್ತಾಂಶ ಸಾಫ್ಟ್​ವೇರ್​ಗೆ ಸಂಬಂಧಿಸಿದ ಸಮಗ್ರ ಮಾಹಿತಿ ಕಲೆ ಹಾಕಿ ಅಧ್ಯಯನ ನಡೆಸಲು ವಿಶಾಲ್ ನಿರ್ಧರಿಸಿದರು. ಮೋಂಗೊ ಡಿಬಿ ಆರಂಭಿಸಿ ರಿಲೇಷನಲ್ ಡಾಟಾಬೇಸ್ ವರೆಗೆ ಜ್ಞಾನ ಸಂಪಾದಿಸಿದರು.

2014ರ ಮೇ ತಿಂಗಳಲ್ಲಿ ಆರಂಭಿಸಿದ ಈ ತಂಡಕ್ಕೆ ಆರು ತಿಂಗಳ ಸಮಯಾವಕಾಶ ಬೇಕಾಯಿತು. ಮೊದಲ ಆವೃತ್ತಿ ಈ ಅವಧಿಯಲ್ಲಿ ಸಿದ್ಧವಾಯಿತು. ಬಳಿಕ ಇದನ್ನು ಮಾರುಕಟ್ಟೆ ಮಾಡುವ ಬಗ್ಗೆ ಆಲೋಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಗಸ್ಟ್ಸ್​ ಒಂದು ಸಲಹೆ ನೀಡಿದ. ಬೇರೆ ಹೊಸ ತಲೆ ಮಾರಿನ ಯೋಜನಾ ಸಂಸ್ಥೆಗಳಿಗೆ ಸೇರಿ ಮಾರುಕಟ್ಟೆ ತಂತ್ರಗಾರಿಕೆ ಕಲಿಯುವಂತೆ ಪ್ರೇರೇಪಿಸಿದ. ವಿಶಾಲ್ ಇದೇ ಹಾದಿಯಲ್ಲಿ ಮುಂದುವರಿದರು. ಇತ್ತೀಚೆಗೆ ಕ್ಲೋನಿಯೋಕ್ಕೆ ಗುಡ್ ಬೈ ಹೇಳಿ ಹ್ಯಾಕರ್ ಅರ್ಥ್ ಸಂಸ್ಥೆಯಲ್ಲಿ ಡೆವಲಪರ್ ಆಗಿ ಸೇರಿದರು.

ಅತ್ಯಂತ ಸಂಕೀರ್ಣವಾಗಿರುವ ಆವೃತ್ತಿ ವ್ಯವಸ್ಥೆಯನ್ನು ಕೆಲವೇ ತಿಂಗಳಲ್ಲಿ ವಿಶಾಲ್​ ಕರಗತ ಮಾಡಿದ್ದರು. ಈ ಕ್ಷೇತ್ರದಲ್ಲಿ ಪರಿಪೂರ್ಣ ಸಾಧನೆ ಮಾಡಲು ವಿಶಾಲ್ ತುಂಬಾ ದೂರ ಸಾಗಬೇಕಿದ್ದರೂ. ಅದು ಅಸಾಧ್ಯವಾದುದಲ್ಲ. ಯಾಕೆಂದರೆ ಛಲದಂಕಮಲ್ಲ ವಿಶಾಲ್ ಅದನ್ನು ಈಗಾಗಲೇ ಸಾಧಿಸಿ ತೋರಿಸಿದ್ದಾರೆ. ತಾಳ್ಮೆ ಈ ಸಾಧನೆಯ ತಳಹದಿ ಎನ್ನುತ್ತಾರೆ ವಿಶಾಲ್. ವಿಶಾಲ್ ಕೊನೆಯಲ್ಲಿ ಅತ್ಯಂತ ವಿನಯದಿಂದ ಈ ರೀತಿ ಹೇಳುತ್ತಾರೆ. ‘ನಾನು ಏನು ಮಾಡುತ್ತಿದ್ದೇನೆ ಎಂಬುದನ್ನು ಎಷ್ಟು ಪ್ರೀತಿಸುತ್ತಿದ್ದೇನೆ ಎಂಬುದು ನನಗೆ ಎಂದಿಗೂ ತಿಳಿದಿರಲಿಲ್ಲ’ ಎಂದು ನುಡಿಯುತ್ತಾರೆ.

ಲೇಖಕರು: ಆದಿತ್ಯಾ ಭೂಷಣ್​​ ದ್ವಿವೇದಿ

ಅನುವಾದಕರು: ಎಸ್​​.ಡಿ.