ಸೌಂದರ್ಯವೃದ್ಧಿಗಾಗಿ ತಜ್ಞರನ್ನು ಹುಡುಕಬೇಡಿ- ಡಾ.ತ್ರಾಸಿಯವರನ್ನು ಸಂಪರ್ಕಿಸಿ

ಟೀಮ್​ ವೈ.ಎಸ್​​.

ಸೌಂದರ್ಯವೃದ್ಧಿಗಾಗಿ ತಜ್ಞರನ್ನು ಹುಡುಕಬೇಡಿ- ಡಾ.ತ್ರಾಸಿಯವರನ್ನು ಸಂಪರ್ಕಿಸಿ

Monday October 19, 2015,

4 min Read

ನೀವಿಂದು ಸೌಂದರ್ಯವರ್ಧಕಗಳ ಉದ್ಯಮದಲ್ಲಿದ್ದೀರಿ ಎಂದರೆ ನಿಮ್ಮ ಸೌಂದರ್ಯ ಕಾಪಾಡಿಕೊಳ್ಳಲು ಮೇಕ್ಅಪ್ ಹಾಗೂ ಕಾಸ್ಮೆಟಿಕ್ಸ್ ಅತ್ಯಗತ್ಯ. ಪ್ರಸ್ತುತ ಮಾರುಕಟ್ಟೆಯಲ್ಲಿ ಹೇಗೆ ಸುಂದರವಾಗಿ ಕಾಣಿಸಿಕೊಳ್ಳಬೇಕು ಅನ್ನುವುದರ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜನಗಳ ಮುಂದೆ ಹತ್ತು ಹಲವು ಆಯ್ಕೆಗಳಿವೆ. ಆದರೆ ಜನರು ಇದೆಲ್ಲದರ ಹೊರತಾಗಿಯೂ ಈ ಆಯ್ಕೆಯನ್ನು ಸ್ವೀಕರಿಸುತ್ತಿದ್ದಾರೆ. ಇಲ್ಲಿ ಆಯ್ಕೆಗಳಿಲ್ಲದಿದ್ದರೂ ಪರಿಣಿತರು ದೈಹಿಕ ಸೌಂದರ್ಯಕ್ಕೆ ಸಂಬಂಧಿಸಿದ ತೊಡಕುಗಳನ್ನು ಸರಿಪಡಿಸಲು ಮುಂದಾಗುತ್ತಿದ್ದಾರೆ. ಕನಸುಗಳ ನಾಡು ಎಂದೇ ಪ್ರಸಿದ್ಧವಾಗಿರುವ ಮುಂಬೈನಲ್ಲಿ ಈ ತೊಡಕುಗಳನ್ನು ಸರಿಪಡಿಸುವ ಪ್ರಾವೀಣ್ಯ ಹೊಂದಿರುವವರು ಅನೇಕರಿದ್ದಾರೆ. ಪ್ರತಿಯೊಂದು ವಿಭಾಗಗಳಲ್ಲೂ ತಜ್ಞರನ್ನು ಹೊಂದಿರುವ ಕೆಲವು ಸಂಸ್ಥೆಗಳು, ತಮ್ಮ ಯೌವನವನ್ನು ಕಾಪಾಡಿಕೊಳ್ಳಲು ಬಯಸುವ ಹಲವು ವಿಐಪಿ ಗ್ರಾಹಕರುಗಳನ್ನು ಹೊಂದಿವೆ.

image


ಚರ್ಮರೋಗ, ಗುಪ್ತರೋಗ ಹಾಗೂ ಲೈಂಗಿಕ ರೋಗಗಳಿಗೆ ಸಂಬಂಧಿಸಿದ ತಜ್ಞರೊಬ್ಬರನ್ನು ಯುವರ್ ಸ್ಟೋರಿ ಸಂಪರ್ಕಿಸಿತ್ತು. ಈ ವಿಚಾರಗಳಲ್ಲಿ ಅಗಾಧ ಪಾಂಡಿತ್ಯ ಹೊಂದಿರುವ ಅವರೇ ಡಾ.ಶ್ರೀಲತಾ ಸುರೇಶ್ ತ್ರಾಸಿ. ಅವರು ತಮ್ಮ ಗ್ರಾಹಕರು ಅಥವಾ ರೋಗಿಗಳ ಹೆಸರನ್ನು ಬಹಿರಂಗಗೊಳಿಸಲಿಲ್ಲವಾದರೂ ಅವರ ಬಳಿ ಪ್ರಸಿದ್ಧ ಸೆಲೆಬ್ರಿಟಿಗಳು, ರಾಜಕಾರಣಿಗಳು ಹಾಗೂ ಪ್ರಸಿದ್ಧ ವ್ಯಕ್ತಿಗಳು ಕಳೆದ 25 ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿರುವ ಸಂಗತಿಯನ್ನು ತಿಳಿಸಿದರು. ಮುಂಬೈನ ಪ್ರಸಿದ್ಧ ನಾಯರ್ ಆಸ್ಪತ್ರೆ ಹಾಗೂ ರಾಜವಾಡಿ ಆಸ್ಪತ್ರೆಗಳಲ್ಲಿ ಪರಿಣಿತ ಉಪನ್ಯಾಸಕರೂ ಆಗಿರುವ ಡಾ. ಶ್ರೀಲತಾ ತ್ರಾಸಿ ವೃತ್ತಿಪರ ವೈದ್ಯೆ, ಉದ್ಯಮಿ ಹಾಗೂ ಪ್ರೊಫೆಸರ್​​ ಕೂಡ ಹೌದು. ದಂತವೈದ್ಯರೊಂದಿಗೆ ತಮ್ಮ 23ನೇ ವಯಸ್ಸಿನಲ್ಲಿಯೇ ಮದುವೆಯಾದ ತ್ರಾಸಿಯವರು ಬದುಕಿನಲ್ಲಿ ಹಲವು ಏರಿಳಿತಗಳನ್ನು ಕಂಡಿದ್ದಾರೆ.

ಚರ್ಮರೋಗ ತಜ್ಞರ ಪರಿಚಯ

ಡಾಕ್ಟರ್ ತ್ರಾಸಿಯವರ ಮಾವ ಪ್ರಸಿದ್ಧ ಚರ್ಮರೋಗ ತಜ್ಞರಾಗಿದ್ದರು. ಪ್ಲಾಸ್ಟಿಕ್ ಸರ್ಜರಿ ಹಾಗೂ ಬೋಟಿಕ್ಸ್ ತಂತ್ರಜ್ಞಾನ ನಮ್ಮ ಆಸ್ಪತ್ರೆಗಳಿಗೆ ಕಾಲಿಡುವ ಮುನ್ನವೇ ಅವರು ಹಲವು ವರ್ಷಗಳ ಕಾಲ ಈ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸಿದ್ದರು. ಮದುವೆಯ ಬಳಿಕ ತ್ರಾಸಿ ತಮ್ಮ ಮಾವನ ಕ್ಲಿನಿಕ್​ಗೆ ನಿರಂತರವಾಗಿ ಭೇಟಿ ನೀಡುತ್ತಿದ್ದರು. ಬಳಿಕ ಅಲ್ಲಿಯೇ ಸಹಾಯಕರಾಗಿ ಸೇರಿಕೊಂಡರು. ಒಂದಕ್ಕೊಂದು ಸಂಪರ್ಕವೆಂಬಂತೆ ತ್ರಾಸಿಯವರ ಚರ್ಮದ ವಿಚಾರಕ್ಕೆ ಸಂಬಂಧಪಟ್ಟ ಆಸಕ್ತಿ ದಿನೇ ದಿನೇ ಹೆಚ್ಚಾಗತೊಡಗಿತು. ಕಾಲೇಜಿನ ದಿನಗಳಲ್ಲಿ ನನ್ನ ಕಲಿಕೆ ಹಾಗೂ ತರಬೇತಿ ಉತ್ತಮವಾಗಿತ್ತಾದರೂ ಸೂಕ್ತವಾದ ಅನುಭವದ ಕೊರತೆಯಿಂದಾಗಿ ನನಗೆ ಈ ಕ್ಷೇತ್ರದಲ್ಲಿ ಸಾಧಿಸಲಾಗಿರಲಿಲ್ಲ. ಇದೇ ಕ್ಷೇತ್ರದಲ್ಲಿ ಏನಾದರೊಂದು ಸ್ವಂತ ಬಲದಿಂದ ಮಾಡಬೇಕು ಅನ್ನುವ ಬಲವಾದ ಇಚ್ಛೆ ನನಗಿತ್ತು ಅಂದಿದ್ದಾರೆ ಶ್ರೀಲತಾ ತ್ರಾಸಿ.

ತಮ್ಮ ಕಲಿಕೆಯ ನಂತರ 1982ರಲ್ಲಿ ಸೌಂದರ್ಯ ವರ್ಧನೆಯ ಉನ್ನತ ಕಲಿಕೆಗಾಗಿ ತ್ರಾಸಿ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯಕ್ಕೆ ತೆರಳಿದರು. ಭಾರತಕ್ಕೆ ಮರಳಿದ ಬಳಿಕ ತಮ್ಮ ನೆಚ್ಚಿನ ಅಂಶವಾದ ಚರ್ಮಶಾಸ್ತ್ರದಲ್ಲಿ ಶಸ್ತ್ರಕ್ರಿಯೆ ಅನ್ನುವ ಹೊಸ ವಿಭಾಗವೊಂದನ್ನು ನಾಯರ್ ಆಸ್ಪತ್ರೆಯಲ್ಲಿ ತೆರೆದರು. ಹಾಂಕಾಂಗ್‌ನಿಂದ ಬೋಟಿಕ್ಸ್ ಕಲಿತು ತರಬೇತಿ ನೀಡಲಾರಂಭಿಸಿದ ಮೊದಲ ಮಹಿಳಾ ವೈದ್ಯೆಯೂ ಅವರಾಗಿದ್ದರು. ತಮ್ಮ ಉನ್ನತ ಕಲಿಕೆಯ ನಂತರ ಮಾವನ ಜೊತೆಗೆ ನಿರಂತರವಾಗಿ ಸೇವೆ ಒದಗಿಸಲಾರಂಭಿಸಿದರು. 1988ರಲ್ಲಿ ಪೂರ್ಣಕಾಲಿಕವಾಗಿ ಚರ್ಮಶಾಸ್ತ್ರ ವಿಭಾಗದಲ್ಲಿ ಚಿಕಿತ್ಸೆ ನೀಡಲಾರಂಭಿಸಿದ ತ್ರಾಸಿ, ಈ ಕ್ಷೇತ್ರದಲ್ಲಿ ಹಲವು ಹೊಸ ಬಗೆಯ ತಂತ್ರಜ್ಞಾನಗಳನ್ನು ಪರಿಚಯಿಸಿದರು. ಚರ್ಮದ ಪಾಲಿಶಿಂಗ್, ಚರ್ಮಕ್ಕೆ ಹೊರಗಿನಿಂದ ಹೊಸ ವರ್ಣಗಳನ್ನು ಲೇಪಿಸುವುದು, ಚರ್ಮ ಶಾಸ್ತ್ರದ ಶಸ್ತ್ರಕ್ರಿಯೆ ಇವೇ ಮುಂತಾದ ಅತ್ಯಾಧುನಿಕ ತಂತ್ರಜ್ಞಾನಗಳಿಂದ ಸೌಂದರ್ಯವೃದ್ಧಿಗೆ ಹೊಸ ಕಾಯಕಲ್ಪ ನೀಡಿದರು. ಯೌವ್ವನದಲ್ಲಿ ಸರ್ವೇಸಾಧಾರಣವಾದ ಮೊಡವೆ,ಕಪ್ಪುಚುಕ್ಕೆ ಮುಂತಾದ ಸಮಸ್ಯೆಗಳಿಗೂ ತ್ರಾಸಿ ಪರಿಹಾರೋಪಾಯ ಕಂಡುಕೊಂಡರು.

ಈ ಕ್ಷೇತ್ರದಲ್ಲಿ ಸಾಧನೆ ನಿರ್ವಹಿಸಲು ಪ್ರತಿ ಹಂತದಲ್ಲಿಯೂ ಅಪ್‌ಡೇಟ್ ಆಗುವುದು ಅನಿವಾರ್ಯವಾಗಿತ್ತು ಹಾಗೂ ಪ್ರತಿ 6 ತಿಂಗಳಿಗೆ ನಾವು ನಮ್ಮ ಗ್ರಾಹಕರಿಗೆ ಹೊಸ ಹೊಸ ತಂತ್ರಜ್ಞಾನಗಳನ್ನು ಆವಿಷ್ಕರಿಸಿ ಕೊಟ್ಟೆವು. ಇದರಿಂದಾಗಿ ನಮ್ಮ ಸೇವೆಯನ್ನು ಗ್ರಾಹಕರು ವಿಶ್ವಾಸಪೂರ್ವಕವಾಗಿ ಒಪ್ಪಿಕೊಂಡರು ಎಂದು ತ್ರಾಸಿ ಹೇಳಿದ್ದಾರೆ.

ಗ್ರಾಹಕರ ಆಧಾರದಲ್ಲಿ ಬೆಳವಣಿಗೆಯ ಮಾನದಂಡ

ಅತ್ಯಾಧುನಿಕ ತಂತ್ರಜ್ಞಾನ ಹಾಗೂ ನವೀನ ಮಾದರಿಯ ಚಿಕಿತ್ಸೆಗಳ ಮೂಲಕ ರೋಗಿಗಳಿಗೆ ಅಥವಾ ಚರ್ಮರೋಗಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುವವರಿಗೆ ತ್ರಾಸಿ ಅತ್ಯುತ್ತಮ ಸೇವೆ ಒದಗಿಸಲಾರಂಭಿಸಿದರು. ಬಾಯಿಯಿಂದ ಬಾಯಿಗೆ ಹರಡಿದ ಇವರ ಚಿಕಿತ್ಸೆಯ ಗುಣಮಟ್ಟ ನಿಧಾನವಾಗಿ ಅವರನ್ನು ಹುಡುಕಿಕೊಂಡು ಬರುವಂತೆ ಮಾಡಿತು. ಇಂದು ತ್ರಾಸಿ ಮುಂಬೈನಲ್ಲಿ 3 ಕ್ಲಿನಿಕ್‌ಗಳನ್ನು ಹೊಂದಿದ್ದು ರಾಮಕೃಷ್ಣ ಮಿಷನ್ ಆಸ್ಪತ್ರೆ, ಆಶಾ ಪರೇಖ್ ಆಸ್ಪತ್ರೆ ಮುಂತಾದ ಪ್ರಸಿದ್ಧ ಕೇಂದ್ರಗಳ ಜೊತೆ ಇಂಡಿಯನ್ ಏರ್‌ಲೈನ್ಸ್ ಹಾಗೂ ಏರ್‌ಇಂಡಿಯಾದಂತಹ ಸಂಸ್ಥೆಗಳಲ್ಲೂ ಕ್ರಿಯಾಶೀಲರಾಗಿದ್ದಾರೆ.

ಇಂದಿನ ವ್ಯಾವಹಾರಿಕ ಮಾರುಕಟ್ಟೆಯಲ್ಲಿ ಸೌಂದರ್ಯವರ್ಧನೆ ಅತ್ಯಂತ ಲಾಭದಾಯಕ ಉದ್ಯಮವಾಗಿದೆ. ಸಾಕಷ್ಟು ಹೊಸ ಉದ್ದಿಮೆದಾರರು ಇಲ್ಲಿನ ಅವಕಾಶ ಬಾಚಿಕೊಳ್ಳುತ್ತಿದ್ದಾರೆ. ಆದರೆ ತ್ರಾಸಿ ಇಂತಹ ಅಂಕಿಅಂಶಗಳಿಗಿಂತ ಅತ್ಯುನ್ನತ ಚಿಕಿತ್ಸಾ ಮಾದರಿಗೆ ಪೂರ್ಣ ಅಂಕ ನೀಡುತ್ತಾರೆ. ಬಹಳಷ್ಟು ಜನ ಯಾವುದೇ ಅನುಭವ ಹಾಗೂ ಪರಿಣಿತಿ ಇಲ್ಲದೇ ತಮ್ಮನ್ನು ತಾವು ಈ ಕ್ಷೇತ್ರದಲ್ಲಿ ಪ್ರವೀಣರೆಂದು ಕರೆದುಕೊಳ್ಳುತ್ತಾರೆ. ಅವರ ಸೇವೆಗಳು ದುಬಾರಿ ಹಾಗೂ ಅನಿಶ್ಚಿತವಾಗಿಯೂ ಇರುತ್ತವೆ. ಅಂತಹವರ ಬಳಿ ಹೋಗುವವರೂ ತಮ್ಮ ಬಳಿ ಬರುತ್ತಾರೆ. ಅಂತಹ ಕ್ಲಿಷ್ಟಕರ ಸವಾಲುಗಳನ್ನು ಸ್ವೀಕರಿಸುವುದು ತಮಗೆ ಇತ್ತೀಚೆಗೆ ಅಭ್ಯಾಸವಾಗಿದೆ ಎನ್ನುತ್ತಾರೆ ತ್ರಾಸಿ.

ಡಾ.ತ್ರಾಸಿ ತಮ್ಮ ಮಗಳಾದ ಶೆಫಾಲಿ ನೆರೂರ್ಕರ್‌ಗೆ ತರಬೇತಿ ನೀಡುತ್ತಿದ್ದಾರೆ. ಶೆಫಾಲಿ ಅವರ ಕುಟುಂಬದ ಮೂರನೇ ತಲೆಮಾರಿನ ಚರ್ಮರೋಗ ಪರಿಣಿತೆ. ಈ ಕ್ಷೇತ್ರದಲ್ಲಿ ಎಂಡಿ ಕಲಿತಿರುವ ಶೆಫಾಲಿ ಪ್ರಸೂತಿ ಹಾಗೂ ದಂತವೈದ್ಯಕೀಯ ವಿಭಾಗಗಳನ್ನು ಆಯ್ದುಕೊಳ್ಳುವ ಬದಲು ತಾಯಿಯ ದಾರಿಯನ್ನೇ ಅನುಸರಿಸಿದರು. ಇಂದು ಸಾಕಷ್ಟು ಅತ್ಯಾಧುನಿಕ ತಾಂತ್ರಿಕತೆಗಳು ಈ ವಿಭಾಗದಲ್ಲಿ ಸಂಶೋಧಿಸಲ್ಪಡುತ್ತಿವೆ. ಶಸ್ತ್ರಚಿಕಿತ್ಸೆ ನಡೆಸದೇ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹಾಗಾಗಿ ಈ ಕ್ಷೇತ್ರದಲ್ಲಿ ಪರಿಣಿತಿ ಸಾಧಿಸಿದವರ ಅಗತ್ಯತೆ ಇದೆ ಎನ್ನುವುದು ತ್ರಾಸಿ ಹಾಗೂ ಅವರ ಮಗಳಾದ ಶೆಫಾಲಿ ಅವರ ಅಭಿಪ್ರಾಯ.

ತಾಯಿ ಮಗಳ ಸಂಬಂಧ

ತಮ್ಮ ಎದುರಿದ್ದ ಉಳಿದ ಲಾಭದಾಯಕ ಆಯ್ಕೆಗಳನ್ನು ತಿರಸ್ಕರಿಸಿ ಚರ್ಮರೋಗ ಕ್ಷೇತ್ರವನ್ನು ಆರಿಸಿಕೊಂಡು ಆಸಕ್ತಿಯಿಂದ ತರಬೇತಿ ಪಡೆಯುತ್ತಿರುವ ಶೆಫಾಲಿ ಅವರನ್ನು ಡಾ.ತ್ರಾಸಿ ಮುಕ್ತಕಂಠದಿಂದ ಶ್ಲಾಘಿಸುತ್ತಾರೆ. ಶೆಫಾಲಿ ತಮ್ಮ ಆಜ್ಞಾವರ್ತಿ ಮಗಳು ಎನ್ನುವುದು ಅವರ ಹೆಮ್ಮೆ.

ತಮ್ಮ ಬಾಲ್ಯವನ್ನು ನೆನೆಸಿಕೊಳ್ಳುತ್ತಾ ಶೆಫಾಲಿ ಹೇಳುವಂತೆ ಅವರ ತಾಯಿ ಸದಾ ರೋಗಿಗಳ ಆರೈಕೆ ಹಾಗೂ ಚಿಕಿತ್ಸೆಯಲ್ಲಿ ತೊಡಗಿಕೊಂಡಿರುತ್ತಿದ್ದರು. ಆ ಸಂದರ್ಭದಲ್ಲಿ ತಮ್ಮ ಶಾಲೆಯ ಕಾರ್ಯಕ್ರಮಗಳಲ್ಲಿ ಅಥವಾ ಇನ್ನಿತರ ಮುಖ್ಯ ಸಂದರ್ಭಗಳಲ್ಲಿ ತಾಯಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದ ದಿನಗಳನ್ನು ಶೆಫಾಲಿ ಜ್ಞಾಪಿಸಿಕೊಳ್ಳುತ್ತಾರೆ. ಆದರೂ ಅಮ್ಮನ ಅವಿರತ ಶ್ರದ್ಧೆಯ ಕುರಿತಾಗಿ ಸಾಕಷ್ಟು ಉತ್ತಮ ಅಭಿಪ್ರಾಯ ಹೊಂದಿರುವ ಶೆಫಾಲಿ ಹಾಗಾಗಿಯೇ ಈ ಕ್ಷೇತ್ರವನ್ನು ಆರಿಸಿಕೊಂಡಿದ್ದಾಗಿ ಸ್ಪಷ್ಟೀಕರಣ ನೀಡುತ್ತಾರೆ. ಚರ್ಮರೋಗ ತಜ್ಞೆಯಾಗಿ ಪರಿಣಿತಿ ಸಾಧಿಸಿ ತಮ್ಮ ಅನುಭವ ಹಾಗೂ ಕಲಿಕೆಯನ್ನು ವಿಸ್ತಾರಗೊಳಿಸಬೇಕು ತನ್ಮೂಲಕ ತಾಯಿಯ ಕೆಲವು ಆಲೋಚನೆಗಳನ್ನು ಬ್ರಾಂಡ್ ಮಾಡಬೇಕು ಎನ್ನುವುದು ಶೆಫಾಲಿ ಅವರ ಕನಸು. ಮಾರುಕಟ್ಟೆ ತಮಗೆ ಪೂರಕವಾದರೆ ಮುಂಬರುವ ದಿನಗಳಲ್ಲಿ ತಮ್ಮ ಸೇವೆ ಇನ್ನಷ್ಟು ವ್ಯಾಪ್ತಿ ಪಡೆದುಕೊಳ್ಳುತ್ತದೆ ಶೆಫಾಲಿ ಆತ್ಮವಿಶ್ವಾಸದಿಂದ ಹೇಳಿದ್ದಾರೆ.

ಇಲ್ಲೊಂದು ಗಮನಿಸಲೇಬೇಕಾದ ಸಂಗತಿಯೆಂದರೆ ಚರ್ಮರೋಗಕ್ಕೆ ಸಂಬಂಧಿಸಿದ ಚಿಕಿತ್ಸೆ ಹಾಗೂ ತಂತ್ರಜ್ಞಾನಗಳ ಹೊರತಾಗಿ ಈ ಇಬ್ಬರೂ ಪರಿಣಿತ ತಾಯಿ ಮಗಳು ಯಾವುದೇ ಕಾಸ್ಮೆಟಿಕ್ಸ್ ಅಥವಾ ಸೌಂದರ್ಯವರ್ಧಕಗಳ ಜಾಹೀರಾತು ಮಾಡುವುದಿಲ್ಲ. ವೈದ್ಯೆಯಾಗಿ ಯಾವುದೋ ಒಂದು ನಿರ್ದಿಷ್ಟ ಸೌಂದರ್ಯವರ್ಧಕವನ್ನು ಸೂಚಿಸಿ ಅದರ ಮೂಲಕವೇ ಸಮಸ್ಯೆಗಳನ್ನು ತಾತ್ಕಾಲಿಕವಾಗಿ ಪರಿಹರಿಸುವುದು ಉತ್ತಮ ವಿಧಾನವಲ್ಲ. ಅದರ ಬದಲಿಗೆ ಗ್ರಾಹಕ ಅಥವಾ ಸಮಸ್ಯೆಯಿಂದ ಬಳಲುವವರಿಗೆ ನಮ್ಮ ವಿಭಿನ್ನ ಆಲೋಚನೆಗಳಿಂದ ಪರಿಹಾರ ನೀಡಬಹುದು. ಸ್ವಲ್ಪ ತಡವಾದರೂ ಈ ನಿಧಾನಗತಿಯ ಚಿಕಿತ್ಸೆಯಿಂದ ಪರಿಹಾರ ಸಾಧ್ಯವಿದೆ ಎನ್ನುತ್ತಾರೆ ಡಾ.ತ್ರಾಸಿ. ವೃತ್ತಿಬದುಕಿನ ನೈತಿಕತೆ ಹಾಗೂ ಧೋರಣೆಗಳು ವೃತ್ತಿಪರತೆಯ ಅತೀ ಮುಖ್ಯ ಮೌಲ್ಯಾಧಾರಿತ ಲಕ್ಷಣಗಳು ಎನ್ನುವುದನ್ನು ತ್ರಾಸಿ ಮತ್ತು ಶೆಫಾಲಿ ಅಕ್ಷರಶಃ ಪಾಲಿಸುತ್ತಿದ್ದಾರೆ.