`ರೈಡಿಂಗ್ ದಿ ವೇವ್ ಆಫ್ ಡಿಸ್ರಪ್ಷನ್'- ತಂತ್ರಜ್ಞಾನ & ಉದ್ಯಮ ತಂತ್ರಗಳಿಗೆ 8 ಸಲಹೆ

ಟೀಮ್​​ ವೈ.ಎಸ್​​. ಕನ್ನಡ

`ರೈಡಿಂಗ್ ದಿ ವೇವ್ ಆಫ್ ಡಿಸ್ರಪ್ಷನ್'- ತಂತ್ರಜ್ಞಾನ & ಉದ್ಯಮ ತಂತ್ರಗಳಿಗೆ 8 ಸಲಹೆ

Sunday December 06, 2015,

6 min Read

"ನೋ ಆರ್ಡಿನರಿ ಡಿಸ್ರಪ್ಷನ್ : ದಿ ಫೋರ್ ಫೋರ್ಸಸ್ ಆಫ್ ಬ್ರೇಕಿಂಗ್ ಆಲ್ ದಿ ಟ್ರೆಂಡ್ಸ್'' ಪುಸ್ತಕದ ಪ್ರಕಾರ ಜಾಗತಿಕ ಆರ್ಥಿಕತೆಯನ್ನು ಪರಿವರ್ತಿಸುವ ಮತ್ತು ಒಂದುಗೂಡಿಸುವ ನಾಲ್ಕು ಶಕ್ತಿಗಳೆಂದರೆ: ಉದಯೋನ್ಮುಖ ಮಾರುಕಟ್ಟೆಗಳ ಬೆಳವಣಿಗೆ, ತಂತ್ರಜ್ಞಾನದ ತ್ವರಿತ ಪ್ರಭಾವ, ವಿಶ್ವದ ಜನಸಂಖ್ಯೆಯಲ್ಲಿ ಹೆಚ್ಚುತ್ತಿರುವ ವಯಸ್ಸಾದವರ ಸಂಖ್ಯೆ, ವ್ಯಾಪಾರ, ಬಂಡವಾಳ ಹಾಗೂ ಜನರ ಜಾಗತಿಕ ಹರಿವು. ಇದರ ಫಲಿತಾಂಶ ಕೆಲವರಿಗೆ ಅವಕಾಶ, ಇನ್ನು ಹಲವರಿಗೆ ಸವಾಲು, ಮತ್ತು ಎಲ್ಲರಿಗೂ ಕಲಿಕೆಯ ಒತ್ತಡವನ್ನು ತಂದೊಡ್ಡಿದೆ.

image


`ಮೆಕಿನ್ಸಿ ಗ್ಲೋಬಲ್ ಇನ್‍ಸ್ಟಿಟ್ಯೂಟ್'ನ ನಿರ್ದೇಶಕರೂ ಆಗಿರುವ ಲೇಖಕ ರಿಚರ್ಡ್ ಡೊಬ್ಸ್, ಜೇಮ್ಸ್ ಮನ್ಯಿಕಾ ಹಾಗೂ ಜೊನಾಥನ್ ವೋಟ್ಜೆಲ್, ಉದ್ಯಮಗಳಿಗೆ ಸಾಂಸ್ಥಿಕ ಒಳನೋಟಗಳ ಜೊತೆ ಜಾಗತಿಕ ಮೆಗಾ ಪ್ರವೃತ್ತಿಗಳ ಒಂದು ವಿಶ್ಲೇಷಣೆ ಮಾಡಿದ್ದಾರೆ. ಲಂಡನ್ ಮೂಲದ ಡೊಬ್ಸ್, ``ವ್ಯಾಲ್ಯೂ: ದಿ ಫೋರ್ ಕಾರ್ನರ್‍ಸ್ಟೋನ್ಸ್ ಆಫ್ ಫೈನಾನ್ಸ್'' ಪುಸ್ತಕದ ಸಹ ಲೇಖಕರು. ಸಿಲಿಕಾನ್ ವ್ಯಾಲಿ ನಿವಾಸಿ ಜೇಮ್ಸ್, `ಬ್ರೂಕ್ಸ್ ಇನ್‍ಸ್ಟಿಟ್ಯೂಶನ್'ನ ಹಿರಿಯ ಸಹೋದ್ಯೋಗಿ. ಜೊತೆಗೆ `ಹಾರ್ವಡ್ ವಿವಿ',`ಯುಸಿ ಬೆರ್ಕೆಲೇ' ಮತ್ತು `ಆಕ್ಸ್​​​ಫರ್ಡ್ ವಿವಿ'ಯ ಸಲಹಾ ಮಂಡಳಿಯಲ್ಲಿದ್ದಾರೆ. ಚೀನಾ ಮೂಲದ ಜೊನಾಥನ್, ತಮ್ಮ ರಾಷ್ಟ್ರದ ಬಗ್ಗೆ 4 ಪುಸ್ತಕಗಳನ್ನು ಬರೆದಿದ್ದಾರೆ.

"ನಾವು ಪವಾಡಗಳನ್ನು ಮರುಕಳಿಸುವ ಯುಗದಲ್ಲಿ ವಾಸಿಸುತ್ತಿದ್ದೇವೆ'' ಎಂಬ ಸಾಲುಗಳಿಂದ ಪುಸ್ತಕವನ್ನು ಲೇಖಕರು ಆರಂಭಿಸಿದ್ದಾರೆ. ಡಿಜಿಟಲ್ ತಂತ್ರಜ್ಞಾನದ ವೇಗ ಉದ್ಯಮದಲ್ಲಿ ಪರಿವರ್ತನೆ ತರುತ್ತಿದೆ, ಆವಿಷ್ಕಾರದ ಹೊಸ ಅಲೆಯನ್ನು ಸೃಷ್ಟಿಸುತ್ತಿದೆ. ತಂತ್ರಜ್ಞಾನ, ಕಡಿಮೆ ಬಂಡವಾಳ ಹಾಕಿ ಉದ್ಯಮ ಆರಂಭಿಸಿ ಅತ್ಯಂತ ವೇಗವಾಗಿ ಪ್ರಮಾಣ ಪಡೆಯುವಂತೆ ಮಾಡುತ್ತದೆ ಅನ್ನೋದು ಲೇಖಕರ ಮಾತು.

ಉಗಿ ಯಂತ್ರಗಳ ಸ್ನಾಯು ವ್ಯವಸ್ಥೆ 1700ರಲ್ಲಿ ಕೈಗಾರಿಕಾ ಕ್ರಾಂತಿಯನ್ನು ಪ್ರಚೋದಿಸಿತ್ತು. ಈಗ ಡಿಜಿಟಲ್ ತಂತ್ರಜ್ಞಾನದ ನರ ವ್ಯವಸ್ಥೆ ವರ್ಧಿಸಿದೆ. ಇದಕ್ಕೆ ಕಾರಣ ಹಿಂದೆಂದಿಗಿಂತ ತ್ವರಿತಗತಿಯಲ್ಲಿ ಸಂಭವಿಸುತ್ತಿರುವ ಹೊಸ ಅನ್ವೇಷಣೆಗಳು. ಒಟ್ಟು ಜಾಗತಿಕ ಜಿಡಿಪಿ ಬೆಳವಣಿಗೆಯಲ್ಲಿ ಡಿಜಿಟಲ್ ಬಂಡವಾಳ 1/3ರಷ್ಟು ಪಾಲು ಹೊಂದಿದೆ. ಇಂತಹ ಬೌದ್ಧಿಕ ಆಸ್ತಿಗೆ ಉತ್ತಮ ಉದಾಹರಣೆ ಅಂದ್ರೆ ಗೂಗಲ್ ಸರ್ಚ್ ಮತ್ತು ಅಮೇಝಾನ್ ಶಿಫಾರಸುಗಳು.

280 ಪುಟಗಳ ಪುಸ್ತಕದಿಂದ ಆಯ್ದ, ಉದ್ಯಮ ಹಾಗೂ ಸಂಸ್ಥೆಯ ಆರಂಭಕ್ಕೆ ಬೇಕಾದ 8 ತಂತ್ರಗಳು ಇಲ್ಲಿವೆ.

1. ನಗರೀಕರಣ

ದೇಶದ ಜನಸಂಖ್ಯೆ ಎಲ್ಲಿ ಆಧುನಿಕ ಜಗತ್ತನ್ನು, ಜಾಗತಿಕ ಆರ್ಥಿಕತೆಯನ್ನು ಭೇಟಿ ಮಾಡುತ್ತದೋ ಅದೇ ನಗರ. ದೇಶದ ಮೂಲೆಯಿಂದ ನಗರಕ್ಕೆ ವಲಸೆ ಬರುತ್ತಿರುವ ದೊಡ್ಡ ಸಮೂಹಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗುತ್ತಿದೆ. ಮೂಲಸೌಕರ್ಯ, ವಸತಿ ಕಲ್ಪಿಸುವ ಸವಾಲುಗಳ ಜೊತೆ ನಗರೀಕರಣದ ಜಾಲ, ಉತ್ಪಾದಕತೆ, ಹೊಸ ಸೇವೆಗಳ ನಾವೀನ್ಯತೆ ಮತ್ತು ಸ್ಮಾರ್ಟ್ ಸಿಟಿಗಳ ಮಾದರಿಯ ಮೇಲೆ ಪರಿಣಾಮ ಬೀರುತ್ತಿದೆ. `ಹೋಮ್‍ಪ್ಲಸ್', `ಝಿಪ್‍ಕಾರ್', `ಲಿಫ್ಟ್' ಕೂಡ ಈ ಸಾಲುಗಳಲ್ಲಿವೆ. ನ್ಯೂಯಾರ್ಕ್ ಹಾಗೂ ವಿಯೆನ್ನಾದಲ್ಲಿ ಉಪಯೋಗಿಸದ ಫೋನ್ ಬೂತ್‍ಗಳನ್ನು ಪರಸ್ಪರ ಮಾಹಿತಿ ಮತಗಟ್ಟೆಗಳನ್ನಾಗಿ ಪರಿವರ್ತಿಸಲಾಗಿದೆ. `ಲಿಮಾ'ದಲ್ಲಿ ಸಂಗ್ರಾಹಕರು ಕಂಡೆನ್ಸರ್‍ಗಳ ಮೂಲಕ ನೀರನ್ನು ಉತ್ಪಾದಿಸುತ್ತಿದ್ದಾರೆ.

image


`ದಿ ಸೆನ್ಸೇಬಲ್ ಸಿಟಿ ಲ್ಯಾಬ್' ಸಿಂಗಾಪುರಕ್ಕಾಗಿ ಸಾರಿಗೆ ದೃಶ್ಯೀಕರಣ ಉಪಕರಣಗಳನ್ನು ತಯಾರಿಸಿದೆ. ಗ್ರಾಹಕರನ್ನು ಅಲರ್ಟ್ ಮಾಡಲು ಮತ್ತು ಸೇವೆಯನ್ನು ಉತ್ತಮಪಡಿಸಲು ಲಂಡನ್‍ನ ಸಾರಿಗೆ ಸಂಸ್ಥೆಗಳು ಬಸ್ ಡೇಟಾವನ್ನು ಅಪ್ಲಿಕೇಷನ್ ಡೆವಲಪರ್ಸ್ ಜೊತೆ ಶೇರ್ ಮಾಡಿಕೊಳ್ತಾರೆ. ಬೆಂಗಳೂರಲ್ಲಿ ನಗರ ವಿತರಣಾ ಕೇಂದ್ರಗಳ ಮೂಲಕ `ಟೆಲೆಮ್ಯಾಟಿಕ್ಸ್' ಸಂಚಾರ ವಿಳಂಬವನ್ನು ನಿಯಂತ್ರಿಸಲು ನೆರವಾಗುತ್ತಿದೆ. ಜಾಗತಿಕ ಆರ್ಥಿಕ ಶಕ್ತಿ ಮತ್ತು ಸಾಮಥ್ರ್ಯಕ್ಕೆ ತಕ್ಕಂತೆ ಬದುಕಬೇಕೆಂದ್ರೆ ಭಾರತಕ್ಕೆ ರೋಮಾಂಚಕ ನಗರಗಳ ಅವಶ್ಯಕತೆಯಿದೆ.

2. ಜಾಗತಿಕ ವ್ಯಾಪ್ತಿ

ರಾಷ್ಟ್ರೀಯ ಇ-ಕಾಮರ್ಸ್ ಆಟಗಾರರೆಡೆಗೆ ಈಗ ಹೆಚ್ಚು ಗಮನಹರಿಸಲಾಗ್ತಿದೆ. `ಇಬೇ', `ಅಲಿಬಾಬಾ'ದಂತಹ ಕಂಪನಿಗಳು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿವೆ. ಡಿಜಿಟಲ್ ವಿತರಣೆ ಹಾಗೂ ಸೂಕ್ಷ್ಮ ಕೆಲಸದ ಮೂಲಕ ಸಣ್ಣ ಪುಟ್ಟ ಕಂಪನಿಗಳು ಹಾಗೂ ಮಾರಾಟಗಾರರು ಸೂಕ್ಷ್ಮ ಬಹುರಾಷ್ಟ್ರೀಯ ಸಂಸ್ಥೆಗಳೆಂದು ಹೆಸರು ಮಾಡಿವೆ. ವಿಶ್ವದ ಅತಿ ದೊಡ್ಡ ಆನ್‍ಲೈನ್ ವೇದಿಕೆ `ಕಿವಾ' 360 ಮಿಲಿಯನ್ ಡಾಲರ್ ಸಾಲ ಪಡೆದಿದೆ. ಸೊನ್ನೆಯಿಂದ ಆರಂಭವಾಗಿದ್ದ ಬ್ರಿಟನ್‍ನ `ಟ್ರಾನ್ಸ್‍ಫರ್ ವೈಸ್' ಕಂಪನಿ 4 ವರ್ಷಗಳೊಳಗೆ 1 ಬಿಲಿಯನ್ ಡಾಲರ್ ವಹಿವಾಟು ನಡೆಸಿದೆ. ನೈಜೀರಿಯಾದ ಇ-ಕಾಮರ್ಸ್ ಕಂಪನಿ `ಜುಮಿಯಾ' ಕೀನ್ಯಾ, ಈಜಿಪ್ಟ್, ಮೊರಾಕ್ಕೊ, ಇವೊರಿ ಕೋಸ್ಟ್‍ಗೂ ತನ್ನ ಸೇವೆಯನ್ನು ವಿಸ್ತರಿಸಿದೆ. ಕೀನ್ಯಾದಲ್ಲಿ ಆರಂಭವಾದ ಮೊಬೈಲ್ ಮನಿ ಸೇವೆ ಈಗ ಆಫ್ರಿಕನ್ ರಾಷ್ಟ್ರಗಳು ಹಾಗೂ ಏಷ್ಯಾಕ್ಕೂ ವಿಸ್ತರಿಸಿದೆ.

3. SMAC

ಡಿಜಿಟಲೈಸೇಶನ್ ಮೂರು ರೀತಿಯ ರೂಪಾಂತರಗಳನ್ನು ಪ್ರಕಟಿಸಿದೆ : ಭೌತಿಕ ವಸ್ತುಗಳ ವಾಸ್ತವಿಕತೆ, ಮಾಹಿತಿ ವರ್ಧನೆ ಮತ್ತು ಆನ್‍ಲೈನ್ ವೇದಿಕೆಗಳು. ಬಹಿರಂಗ ಅಂಕಿ-ಅಂಶಗಳು ಹೊಸ ಬಗೆಯ ಮಾಹಿತಿಯನ್ನು ನೀಡುತ್ತಿವೆ. ಸೋಶಿಯಲ್, ಮೊಬೈಲ್, ಎನಲಿಟಿಕ್, ಕ್ಲೌಡ್ (SMAC) `ಅಲಿಬಾಬಾ'ದಿಂದ ಹಿಡಿದು `ಊಬರ್'ವರೆಗೂ ಕಂಪನಿಗಳ ಬೆಳವಣಿಗೆಗೆ ಚಾಲನೆ ನೀಡಿದೆ. ಲಿಂಕ್ಡಇನ್ ಪ್ರತಿಭಾ ಪರಿಹಾರದ ಮೂಲಕ ಶೇಕಡಾ 50ರಷ್ಟು ಆದಾಯ ಗಳಿಸಿದೆ. ಅಮೆರಿಕದ ಉದ್ಯಮ `ವಾಲ್ಲಾಬೇ' ಓಪನ್ ಡೇಟಾವನ್ನು ಬಳಸಿಕೊಂಡು ಗ್ರಾಹಕರಿಗೆ ವಿವಿಧ ಬಗೆಯ ಖರೀದಿ ಆರ್ಡರ್ ಹಾಗೂ ಗರಿಷ್ಠ ಪ್ರತಿಫಲ ಪಡೆಯಲು ಯಾವ ಕ್ರೆಡಿಟ್ ಕಾರ್ಡ್ ಬಳಕೆ ಗ್ರಾಹಕರಿಗೆ ಸೂಕ್ತ ಎಂಬುದನ್ನು ಶಿಫಾರಸು ಮಾಡುತ್ತಿದೆ. ಹೈತಿ ಭೂಕಂಪ ಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯ ಹಾಗೂ ವಿಪತ್ತು ಮೇಲ್ವಿಚಾರಣೆಗಾಗಿ `ಓಪನ್ ಸ್ಟ್ರೀಟ್ ಮ್ಯಾಪ್' ಪ್ರಾಜೆಕ್ಟ್​​​ಗಳನ್ನು ಬಳಸಿಕೊಳ್ಳಲಾಗುತ್ತಿದೆ.

4. ಆರೋಗ್ಯ ಮತ್ತು ಸಹಾಯಕ ತಂತ್ರಜ್ಞಾನ

ಬಹುತೇಕ ದೇಶಗಳಲ್ಲಿ ಯುವ ಲಾಭಾಂಶದ ಬಗ್ಗೆ ಹೆಚ್ಚಿನ ಗಮನ ಕೊಡಲಾಗ್ತಿದೆ. ಆದ್ರೂ ಮಾನವ ಜನಸಂಖ್ಯೆಯಲ್ಲಿ ವಯಸ್ಸಾದವರ ಪ್ರಮಾಣವೇ ಹೆಚ್ಚು. 2040ರ ವೇಳೆಗೆ ಇಡೀ ವಿಶ್ವಕ್ಕೆ ಹೋಲಿಸಿದರೆ ಚೀನಾ ಅತಿ ಹೆಚ್ಚು ಬುದ್ಧಿಮಾಂದ್ಯ ರೋಗಿಗಳನ್ನು ಹೊಂದಲಿದೆ. 2050ರ ವೇಳೆಗೆ ಭಾರತ 300 ಮಿಲಿಯನ್‍ಗೂ ಹೆಚ್ಚು ಹಿರಿಯ ನಾಗರೀಕರನ್ನು ಹೊಂದಲಿದೆ. ಅದಕ್ಕೆ ತಕ್ಕಂತೆ ಚಿಕಿತ್ಸೆಗೆ ಬೇಕಾದ ವಿನೂತನ ತಂತ್ರಜ್ಞಾನಗಳು ಕೂಡ ಈಗ ಲಭ್ಯವಿವೆ. ಮಾನವನ ದೇಹದ ಭಾಗಗಳ 3ಡಿ ಪ್ರಿಂಟಿಂಗ್, ವಯಸ್ಸಾದವರಿಗೆ ವಿನೂತನ ಸೇವಾ ಮಾದರಿ ಸಿಗುತ್ತಿದೆ. 18ಕ್ಕೂ ಹೆಚ್ಚು ನಗರಗಳಲ್ಲಿ `ಪೋರ್ಟಿಯಾ ಮೆಡಿಕಲ್ಸ್' ಮನೆಮನೆಗೆ ತೆರಳಿ ಆರೋಗ್ಯ ಸೇವೆ ನೀಡುತ್ತಿದೆ. ನೇರವಾಗಿ ವೈದ್ಯರನ್ನು ನಿಯಂತ್ರಕ ಡೇಟಾಗಳೊಂದಿಗೆ ಸಂಪರ್ಕಿಸಲು `ಮೆಡ್‍ಟ್ರೋನಿಕ್' ಸಂಸ್ಥೆ `ಕೇರ್ ಲಿಂಕ್ ಎಕ್ಸ್​​​ಪ್ರೆಸ್' ಅನ್ನು ಬಿಡುಗಡೆ ಮಾಡಿದೆ. ವಿಕಲಚೇತನರಿಗಾಗಿ ಡಾಯ್ಚ್ ಬ್ಯಾಂಕ್, ಬ್ರೈಲಿ ಲಿಪಿ ಇರುವ ಧ್ವನಿ ಸಲಹೆ ಹೊಂದಿರುವ ಎಟಿಎಂಗಳನ್ನು ಆವಿಷ್ಕರಿಸಿದೆ.

5. ಹೊಸ ಮಾರುಕಟ್ಟೆ ಮಾದರಿ

ಚುರುಕಾದ ಉದ್ಯಮಿಗಳು ಒಂದು ವಿಭಾಗದಿಂದ ಇನ್ನೊಂದರತ್ತ ಮುಖಮಾಡ್ತಿದ್ದಾರೆ. `ನೆಟ್‍ಫಿಕ್ಸ್' ಬಾಡಿಗೆಯಿಂದ ಸ್ಟ್ರೀಮಿಂಗ್‍ಗೆ ಉದ್ಯಮವನ್ನು ಬದಲಾಯಿಸಿತ್ತು, ಬಳಿಕ ಮೂಲ ನಿರ್ಮಾಣ ಕಾರ್ಯಕ್ಕೆ ಇಳಿದಿದೆ. `ಡಾಲರ್ ಶೇವಿಂಗ್ ಕ್ಲಬ್' ಆನ್‍ಲೈನ್ ಪ್ರಚಾರವನ್ನು ಬಳಸಿಕೊಂಡು ಉದ್ಯಮ ದೈತ್ಯ `ಜಿಲೆಟ್'ಗೆ ಪೈಪೋಟಿ ಒಡ್ಡುತ್ತಿದೆ. ಡಿಜಿಟಲ್ ತಂತ್ರಜ್ಞಾನಗಳು ಕೇವಲ ಹೊಸ ಉದ್ಯಮ ಮಾದರಿಗಳನ್ನು ಮಾತ್ರ ಉತ್ತೇಜಿಸುತ್ತಿಲ್ಲ, ಬದಲಾಗಿ ಆರ್ಥಿಕ ಹಂಚಿಕೆಯಂತಹ ಹೊಸ ಮಾರುಕಟ್ಟೆ ಮಾದರಿಯನ್ನೂ ಪ್ರೋತ್ಸಾಹಿಸುತ್ತಿವೆ. ಇಡೀ ಉದ್ಯಮ ವಲಯವನ್ನೇ ಅಲುಗಾಡಿಸುತ್ತಿವೆ. ಊಬರ್ ವಿರುದ್ಧ ಜಗತ್ತಿನಾದ್ಯಂತ ನಡೆದ ಟ್ಯಾಕ್ಸಿ ಕ್ಯಾಬ್ ಕಂಪನಿಗಳ ಪ್ರತಿಭಟನೆಯೇ ಇದಕ್ಕೆ ಸಾಕ್ಷಿ. ಅನಕ್ಷರಸ್ಥ ಬಳಕೆದಾರರಿಗೂ ತಂತ್ರಜ್ಞಾನ ಮತ್ತು ಉದ್ಯಮವನ್ನು ಪರಿಚಯಿಸಲು ಹೊಸ ಮಾದರಿಗಳನ್ನು ಅಳವಡಿಸುವ ಅಗತ್ಯವಿದೆ. ಧ್ವನಿ ಸಕ್ರಿಯಗೊಳಿಸಿಕೊಂಡಿರುವ ವೆಬ್‍ಸೈಟ್‍ಗಳು 300 ಮಂದಿ ಅನಕ್ಷರಸ್ಥ ಭಾರತೀಯರಿಗೆ ಸೇವೆ ಒದಗಿಸಲಿವೆ.

image


6. ಕೆಲಸ ಯಾಂತ್ರೀಕರಣಗೊಳಿಸುವಿಕೆ

ಲೇಖಕರು ಉದ್ಯೋಗಗಳನ್ನು 3 ಬಗೆಯಾಗಿ ವಿಂಗಡಿಸಿದ್ದಾರೆ : ಉತ್ಪಾದನೆ, ವಹಿವಾಟು ಮತ್ತು ಪರಸ್ಪರ ಬೆರೆಯುವಿಕೆ. ಗುಮಾಸ್ತರ ಕೆಲಸಕ್ಕೆ ಈಗ ಕಂಪ್ಯೂಟರ್ ಬಂದಿದೆ. ಸ್ಟೆನೋಗ್ರಾಫರ್ಸ್ ಮತ್ತು ಬ್ಯಾಂಕ್ ಟೆಲ್ಲರ್ಸ್ ಈಗ ಮೇಲಿನ ಹುದ್ದೆಗೇರುತ್ತಿದ್ದಾರೆ. ಪತ್ರಕರ್ತರಾಗಿಯೋ, ಷೇರು ಮಾರುಕಟ್ಟೆ ವಿಮರ್ಷಕರಾಗಿಯೋ ಕೆಲಸ ಮಾಡುತ್ತಿದ್ದಾರೆ. ಈ ಸ್ಥಳಾಂತರ ಏಕಕಾಲಕ್ಕೆ ಸಾಫ್ಟ್​​​ವೇರ್ ಎಂಜಿನಿಯರ್‍ಗಳು, ಡೊಮೈನ್ ತಜ್ಞರು ಹಾಗೂ ರೋಬೋಟಿಕ್ಸ್​​​ಗೆ ಹೆಚ್ಚು ಅವಕಾಶ ಕಲ್ಪಿಸಿದೆ. 2020ರ ವೇಳೆಗೆ ಇಂಡಸ್ಟ್ರಿಯಲ್ ರೋಬೋಟಿಕ್ಸ್ ಮೌಲ್ಯ 40 ಬಿಲಿಯನ್ ಡಾಲರ್‍ನಷ್ಟಾಗಲಿದೆ. ಸೋಲಾರ್ ಪ್ಯಾನಲ್‍ಗಳನ್ನು ಸ್ವಚ್ಛಗೊಳಿಸಲು ಬರ್ಲಿನ್‍ನ `ಸೋಲಾರ್ ಬ್ರಶ್' ಕಡಿಮೆ ತೂಕದ ರೋಬೋಟ್ ಒಂದನ್ನು ಅಭಿವೃದ್ಧಿಪಡಿಸಿದೆ. `ಬಿಎಂಡಬ್ಲ್ಯೂ' ಕೂಡ `ಮೊಬಿ - ಸೆಲ್' ಎಂಬ ರೋಬೋಟ್ ಅನ್ನು ಬಳಸುತ್ತಿದೆ.

7. ಗೋ ಗ್ರೀನ್

ಜಾಗತಿಕ ತಾಪಮಾನ ಹಾಗೂ ಸಂಪನ್ಮೂಲಗಳ ಮರು ಉತ್ಪಾದನೆ ಇಡೀ ವಿಶ್ವಕ್ಕೇ ಎದುರಾಗಿರುವ ಸವಾಲು. ಗೂಗಲ್‍ನಂತಹ ಕಂಪನಿಗಳು ತಮ್ಮ ಡಿಜಿಟಲ್ ಸೌಲಭ್ಯಗಳಿಗಾಗಿ ತಟಸ್ಥ ಇಂಗಾಲವನ್ನುಳ್ಳ ಶಕ್ತಿಯನ್ನು ಬಳಸಿಕೊಳುತ್ತಿವೆ. ಸೌರ ಶಕ್ತಿ, ಪವನ ವಿದ್ಯುತ್, ಸಮುದ್ರ ನೀರನ್ನು ತಂಪು ಮಾಡುವಿಕೆ ಮತ್ತು ಇಂಧನ ದಕ್ಷತೆಯ ಬೆಳಕನ್ನೇ ಬಳಸಿಕೊಳ್ಳುತ್ತಿವೆ. ಸರಿಯಾದ ತಂಪಾಗಿಸುವಿಕೆ ಮತ್ತು ಬೇಗನೆ ಹಾಳಾಗಬಲ್ಲ ವಸ್ತುಗಳು ಹೆಚ್ಚು ಪೋಲಾಗುವುದನ್ನು ತಪ್ಪಿಸಲು `ವಾಲ್‍ಮಾರ್ಟ್' ಸ್ಮಾರ್ಟ್ ಪೂರೈಕೆ ಸರಣಿ ತಂತ್ರಜ್ಞಾನವನ್ನಯ ಬಳಸುತ್ತಿದೆ. ವಿದ್ಯುತ್ ಸಂಗ್ರಹ ಹಾಗೂ ವಿತರಣಾ ಸಾಮರ್ಥ್ಯ ಹೆಚ್ಚಿಸಲು `ಎನ್‍ಎಫ್‍ಸಿ' ದೊಡ್ಡ ಪ್ರಮಾಣದ ಬ್ಯಾಟರಿಗಳನ್ನು ತಯಾರಿಸುತ್ತಿದೆ.

8. ಅಡ್ಡಿಯ ನಡುವೆಯೂ ಬದುಕಲು ಕಲಿಯಿರಿ

ವೇಗವಾಗಿ ಬೆಳೆಯುತ್ತಿರುವ ಹೊಸಬರಿಂದ ಪೈಪೋಟಿಯ ಅಲೆ ಎದುರಾಗುತ್ತಿದೆ. ಅದು ಕೇವಲ ಆಯಕಟ್ಟಿನ ರಾಡಾರ್ ಮೇಲಿಲ್ಲ. ವಿಮರ್ಷಾತ್ಮಕ ಸಮೂಹವನ್ನು ಹೊಂದುವವರೆಗೆ ಅದು ರಾಡಾರ್‍ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಅನ್ನೋದು ಲೇಖಕರ ಎಚ್ಚರಿಕೆ. `ಸ್ನಾಪ್‍ಚಾಟ್' ಬಿಡುಗಡೆಯಾಗಿ 2 ವರ್ಷಗಳೊಳಗೆ ಫೇಸ್‍ಬುಕ್ ಹಾಗೂ ಇನ್‍ಸ್ಟಾಗ್ರಾಮ್‍ನ ಫೋಟೋ ಶೇರಿಂಗ್ ಚಟುವಟಿಕೆಗಳನ್ನು ಮೀರಿಸಿದೆ. ಶೇ.99ರಷ್ಟು ಭೌತಿಕ ವಸ್ತುಗಳು ಸಂಬಂಧಪಡದೇ ಉಳಿದಿವೆ. ವಿಶಾಲ ಅವಕಾಶಗಳನ್ನು ಹೈಲೈಟ್ ಮಾಡುತ್ತಿವೆ. ತಂತ್ರಜ್ಞಾನದ ಈ ಅಲೆ ಉದ್ಯಮ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ನಿರಂತರ ಮರು ಕೌಶಲ್ಯಕ್ಕೆ ಕರೆ ನೀಡುತ್ತಿದೆ. ಕುಶಲತೆಯ ಭದ್ರತೆ ವೇಗವಾಗಿ ಸವೆಯುತ್ತಿದೆ. ಪರಿಣಾಮ ತಾಂತ್ರಿಕ ಉದ್ಯಮಗಳಿಗೆ ಅವಕಾಶದ ಬಾಗಿಲು ತೆರೆದಿದೆ. ಉದಯೋನ್ಮುಖ ಉದ್ಯಮಗಳ ಬಗ್ಗೆ ಹೂಡಿಕೆದಾರರು ಕೂಡ ಒಂದು ಕಣ್ಣಿಡಬೇಕು.

ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸ್ಪರ್ಧಾತ್ಮಕ ಡಿಜಿಟಲ್ ಜಗತ್ತಿನಲ್ಲಿ, ಅದನ್ನು ಬೋರ್ಡ್ ಗೇಮ್ ಅಲ್ಲ ವಿಡಿಯೋ ಗೇಮ್‍ನಂತೆ ಪರಿಗಣಿಸಿ ಯೋಜನೆಗಳನ್ನು ರೂಪಿಸಿ ಕಾರ್ಯಾಚರಣೆಗಿಳಿಯಬೇಕು. ರೇಸ್‍ನಲ್ಲಿ ಮುನ್ನಡೆ ಸಾಧಿಸಲು ಸ್ವಾಧೀನ ಮತ್ತು ವಿಲೀನ ಪ್ರಕ್ರಿಯೆ ಅತ್ಯಂತ ಒಳ್ಳೆಯ ಮಾರ್ಗ. ಫೇಸ್‍ಬುಕ್, ವಾಟ್ಸ್ ಆ್ಯಪ್ ಅನ್ನು ಸ್ವಾಧೀನಪಡಿಸಿಕೊಂಡಿರುವುದೇ ಇದಕ್ಕೆ ಸಾಕ್ಷಿ.

ಬಹುರಾಷ್ಟ್ರೀಯ ಕಂಪನಿಗಳಿಗೆ ಶಿಫಾರಸುಗಳು

ರಾಷ್ಟ್ರಮಟ್ಟದ ಉದ್ಯಮಗಳು, ಎಂಎನ್‍ಸಿಗಳು ಮತ್ತು ಸರ್ಕಾರಿ ನೀತಿ ತಯಾರಕರಿಗೂ ಈ ಪುಸ್ತಕದಲ್ಲಿ ಕೆಲ ಟಿಪ್ಸ್ ಕೊಡಲಾಗಿದೆ. ಚೀನಾ ಮತ್ತು ಭಾರತದಂತಹ ಉದಯೋನ್ಮುಖ ಮಾರುಕಟ್ಟೆಗಳೊಂದಿಗೆ ಆಳವಾಗಿ ತೊಡಗಿಸಿಕೊಳ್ಳುವುದು ಅತ್ಯಂತ ಅವಶ್ಯಕ. ತಂತ್ರಜ್ಞಾನ, ಸಮತೋಲನವನ್ನು ಅಧಿಕಾರದಿಂದ ಸಮಗ್ರತೆಗೆ ಬದಲಾಯಿಸಿದೆ. ಕಾರ್ಪೊರೇಟ್ ನಷ್ಟವನ್ನು ತಪ್ಪಿಸಲು ದೊಡ್ಡ ಸಂಸ್ಥೆಗಳು ಉದ್ಯಮಗಳ ಜೊತೆ ಒಪ್ಪಂದ ಮಾಡಿಕೊಳ್ಳುವುದನ್ನು ಕಲಿಯಬೇಕು. ತಯಾರಕ ಸ್ಥಳಗಳಲ್ಲೇ ವಹಿವಾಟು ಆರಂಭಿಸುವುದು, ವೇಗವರ್ಧಕಗಳ ಮೂಲಕ ಸ್ಥಳೀಯ ವಿನ್ಯಾಸಗಾರರು ಮತ್ತು ಉತ್ಪಾದಕರನ್ನು ಆಕರ್ಷಿಸುವುದು ಉತ್ತಮ ಪ್ರಯತ್ನ. ಮರುಶೋಧ, ಭಿನ್ನತೆ ಮತ್ತು ಬೆಳವಣಿಗೆ ಯಶಸ್ಸಿನ ಪ್ರಮುಖ ಅಂಶಗಳು. `ಜಿಇ' ಶೇ.25ಕ್ಕಿಂತ ಹೆಚ್ಚು ಉತ್ಪನ್ನಗಳನ್ನು ಭಾರತದಲ್ಲೇ ಉತ್ಪಾದಿಸುತ್ತಿದೆ. ಕೊರಿಯಾ ಬಿಟ್ರೆ `ಎಲ್‍ಜಿ' ಕಂಪನಿಯ ಅತಿದೊಡ್ಡ ಉತ್ಪನ್ನ ನಾವೀನ್ಯತೆಯ ಕೇಂದ್ರ ಇರುವುದು ಬೆಂಗಳೂರಿನಲ್ಲಿ ಮಾತ್ರ.

1-1500 ವರ್ಷಗಳವರೆಗೆ ಭಾರತ ಮತ್ತು ಚೀನಾ ವಿಶ್ವದ ಆರ್ಥಿಕ ಚಟುವಟಿಕೆಗಳಲ್ಲಿ 2/3ರಷ್ಟು ಪಾಲನ್ನು ಹೊಂದಿದ್ದವು. 1950ರ ಬಳಿಕ ಗುರುತ್ವ ಆರ್ಥಿಕ ಕೇಂದ್ರ ಯುರೋಪ್‍ಗೆ ಸ್ಥಳಾಂತರಗೊಂಡಿದೆ. 2025ರ ವೇಳೆಗೆ ಅದು ಮತ್ತೆ ಭಾರತ ಹಾಗೂ ಚೀನಾದ ಪಾಲಾಗಲಿದೆ. ಈ ಬದಲಾವಣೆಯ ಅಲೆಯಲ್ಲಿ ಈಜಿ ದಡ ತಲುಪುವ ಸಾಮಥ್ರ್ಯವನ್ನು ಕಂಪನಿಗಳು ಹೊಂದಬೇಕು. ಸ್ಮಾರ್ಟ್ ಪ್ಲಾನಿಂಗ್, ಬದಲಾಯಿಸುವ ಮನಸ್ಸು, ಉದ್ಯಮ ನಿರ್ವಹಣೆಗೆ ತೆರೆದುಕೊಳ್ಳುವಿಕೆ ಜಾಗತಿಕ ಹರಿವಿನೊಂದಿಗೆ ಈಜಲು ಬೇಕೇಬೇಕು.

ಲೇಖಕರು: ಮದನ್​​ ಮೋಹನ್​​ ರಾವ್​​

ಅನುವಾದಕರು: ಭಾರತಿ ಭಟ್​​​