ಇಲ್ಲಿದೆ ಬೀದಿ ನಾಯಿಗಳಿಗೊಂದು ಆಸರೆ- ಅದೇ ಅಚಲಾ ಪಾಣಿಯ ‘ಲೆಟ್ಸ್ ಲಿವ್ ಟುಗೆದರ್’

ವಿಶಾಂತ್​​

ಇಲ್ಲಿದೆ ಬೀದಿ ನಾಯಿಗಳಿಗೊಂದು ಆಸರೆ- ಅದೇ ಅಚಲಾ ಪಾಣಿಯ ‘ಲೆಟ್ಸ್ ಲಿವ್ ಟುಗೆದರ್’

Monday November 02, 2015,

3 min Read

ಹೈಟೆಕ್ ಸಿಟಿ, ಸಿಲಿಕಾನ್ ವ್ಯಾಲಿ, ಗಾರ್ಡನ್ ಸಿಟಿ, ಹೆಲ್ತ್ ಹಬ್ ಅಂತೆಲ್ಲಾ ಕರೆಸಿಕೊಳ್ಳುತ್ತಿರುವ ಬೆಂಗಳೂರನ್ನು ಹಲವು ಸಮಸ್ಯೆಗಳೂ ಬೆಂಬಿಡದೆ ಕಾಡುತ್ತಿವೆ. ಅಂತಹ ಸಮಸ್ಯೆಗಳಲ್ಲಿ ಬೀದಿನಾಯಿಗಳ ಕಾಟವೂ ಒಂದು. ಅಂಕಿಅಂಶಗಳ ಪ್ರಕಾರ ಪ್ರತೀ ವರ್ಷ ಬರೊಬ್ಬರಿ 25 ಸಾವಿರ ಮಂದಿ ಬೆಂಗಳೂರಿನಲ್ಲಿ ಬೀದಿನಾಯಿಗಳಿಂದ ಕಚ್ಚಿಸಿಕೊಳ್ಳುತ್ತಾರಂತೆ. ಹಲವು ಮಕ್ಕಳು ಬೀದಿನಾಯಿಗಳ ದಾಳಿಗೆ ಬಲಿಯಾಗಿರುವ ಪ್ರಕರಣಗಳೂ ಆಗಿಂದಾಗ್ಗೆ ರಾಜಧಾನಿಯಲ್ಲಿ ಸುದ್ದಿ ಮಾಡುತ್ತಿರುತ್ತವೆ. ಈ ಸಂಬಂಧ ಸಾರ್ವಜನಿಕರೂ ಬಿಬಿಎಂಪಿಯನ್ನು ದೂಷಿಸುತ್ತಲೇ ಇರ್ತಾರೆ. ಮತ್ತೊಂದೆಡೆ ಬೀದಿನಾಯಿಗಳ ಹಾವಳಿ ತಡೆಗಟ್ಟಲು ನಾನಾ ಯೋಜನೆಗಳನ್ನು ಹಾಕಿಕೊಂಡಿರುವ ಪಾಲಿಕೆ ತನ್ನ ಕೆಲಸವನ್ನು ಸಮರ್ಥಿಸಿಕೊಳ್ಳುತ್ತಲೇ ಇದೆ. ಆದ್ರೆ ಈ ರೌಡಿ ಬೀದಿ ನಾಯಿಗಳಿಗೆ ಅಂತ್ಯ ಹಾಡುವುದಕ್ಕೆ ಇದುವರೆಗೂ ಸಾಧ್ಯವಾಗಿಲ್ಲ.

image


ಈ ಮಧ್ಯೆ ನಗರದ ಸ್ವಯಂಸೇವಾ ಸಂಸ್ಥೆಯೊಂದು ಬೀದಿ ನಾಯಿಗಳ ಹಾವಳಿಗೆ ತನ್ನದೇ ರೀತಿಯಲ್ಲಿ ಪರಿಹಾರ ಕಂಡುಹಿಡಿದಿದೆ. ಇಡೀ ಬೆಂಗಳೂರೇ ಬೀದಿ ನಾಯಿಗಳ ವಿರುದ್ಧವಿರುವಾಗ, ಈ ಸಂಸ್ಥೆ ಅವುಗಳನ್ನು ರಕ್ಷಿಸಿ, ಪೋಷಿಸಿ, ಚಿಕಿತ್ಸೆ ಕೊಡಿಸಿ, ದತ್ತು ಕೊಡುವ ಮೂಲಕ ಬೀದಿ ನಾಯಿಗಳ ಪರವಾಗಿ ನಿಂತಿದೆ. ಈ ಮೂಲಕ ‘ಲೆಟ್ಸ್ ಲಿವ್ ಟುಗೆದರ್’ ಸಂಸ್ಥೆ ಪಾಲಿಕೆ ಮಾಡಬೇಕಿರುವ ಕೆಲಸವನ್ನು ತಾನು ಮಾಡ್ತಿದೆ.

‘ಲೆಟ್ಸ್ ಲಿವ್ ಟುಗೆದರ್’ ಹಿನ್ನೆಲೆ

ಮೂಲತಃ ಗ್ರಾಫಿಕ್ ಡಿಸೈನರ್ ಆಗಿರುವ ಅಚಲಾ ಪಾಣಿ ‘ಲೆಟ್ಸ್ ಲಿವ್ ಟುಗೆದರ್’ ಸಂಸ್ಥಾಪಕಿ. ಕಳೆದ 15 ವರ್ಷಗಳಿಂದ 1,500ಕ್ಕೂ ಹೆಚ್ಚು ಬೀದಿ ನಾಯಿಮರಿಗಳನ್ನು ರಕ್ಷಿಸಿರುವ ಸಾರ್ಥಕತೆ ಅವರದು. 6 ವರ್ಷಗಳ ಹಿಂದೆ ‘ಲೆಟ್ಸ್ ಲಿವ್ ಟುಗೆದರ್’ ಪ್ರಾರಂಭಿಸಿದ ಅಚಲಾ, ಇದುವರೆಗೆ 40ಕ್ಕೂ ಹೆಚ್ಚು ಬಾರಿ ಬೀದಿ ನಾಯಿಮರಿಗಳ ದತ್ತು ಶಿಬಿರ ಆಯೋಜಿಸಿದ್ದಾರೆ. ಆ ಮೂಲಕ 650 ಬೀದಿ ನಾಯಿಮರಿಗಳನ್ನು ದತ್ತು ನೀಡಿದ್ದಾರೆ. ಅರ್ಥಾತ್ ಬೀದಿಯಲ್ಲಿ ಹುಟ್ಟಿ, ಬೀದಿಯಲ್ಲೇ ಬೆಳೆದು, ತಾವೂ ತೊಂದರೆ ಅನುಭವಿಸುತ್ತಾ, ಜನರಿಗೂ ತೊಂದರೆ ಕೊಡುತ್ತಾ ಕೊನೆಗೆ ಬೀದಿಯಲ್ಲೇ ಹೆಣವಾಗಲಿದ್ದ 650 ಬೀದಿನಾಯಿಗಳಿಗೆ ಮರುಜೀವ ನೀಡಿದ್ದಾರೆ.

image


ನಗರದ ಯಾವ ಮೂಲೆಯಿಂದ ಕರೆ ಬಂದರೂ ‘ಲೆಟ್ಸ್ ಲಿವ್ ಟುಗೆದರ್’ ತಂಡದ ಸ್ವಯಂ ಸೇವಕರು ಅಥವಾ ಸದಸ್ಯರು ಅಲ್ಲಿಗೆ ತೆರಳಿ ಬೀದಿ ನಾಯಿಗಳನ್ನು ರಕ್ಷಿಸುತ್ತಾರೆ. ಬಳಿಕ ಅದಕ್ಕೆ ಚಿಕಿತ್ಸೆ ಕೊಡಿಸಿ, ಕೆಲ ದಿನಗಳ ಕಾಲ ಆರೈಕೆ ಮಾಡಿ ನಂತರ ದತ್ತು ಕೊಡಲಾಗುತ್ತೆ. ಅಲ್ಲದೇ ಬೀದಿನಾಯಿಗಳ ಹಾವಳಿಯಿರುವ ಮೆಜೆಸ್ಟ್ಟಿಕ್, ನಾಗಶೆಟ್ಟಿಹಳ್ಳಿ ಸೇರಿದಂತೆ ಹಲವೆಡೆ ಜಾಗೃತಿ ಕಾರ್ಯಕ್ರಮ ಕೈಗೊಂಡಿದ್ದಾರೆ. ರಸ್ತೆಯಲ್ಲಿ ಓಡಾಡುವಾಗ ಬೀದಿನಾಯಿಗಳು ಎದುರಾದಾಗ ಹೇಗೆ ವರ್ತಿಸಬೇಕು ಎಂಬುದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶ ಅವರದು. ಮೊದಲು ದತ್ತು ಶಿಬಿರಗಳನ್ನು ನಡೆಸುತ್ತಿದ್ದರಾದರೂ, ಈಗ ಪ್ರಾಣಿ ಪ್ರಿಯರು ದೇವಯ್ಯಾ ಪಾರ್ಕ್‍ನ ಅವರ ಕಚೇರಿಗೇ ತೆರಳಿ ತಮಗಿಷ್ಟವಾದ ಬೀದಿ ನಾಯಿಮರಿಗಳನ್ನು ದತ್ತು ಪಡೆಯಬಹುದು.

‘ಬೀದಿನಾಯಿಗಳೇ, ಸಾಕುನಾಯಿಗಳಾದಾಗ ಮಾತ್ರ ಬೆಂಗಳೂರಿನ ಬೀದಿನಾಯಿಗಳ ಸಮಸ್ಯೆ ನಿವಾರಣೆಯಾಗೋದು ಸಾಧ್ಯ. ಈ ನಿಟ್ಟಿನಲ್ಲಿ ‘ಲೆಟ್ಸ್ ಲಿವ್ ಟುಗೆದರ್’ ಶ್ರಮಿಸುತ್ತಿದೆ. ಹೆಚ್ಚಾಗಿ ಜನರಲ್ಲಿ ಅರಿವು ಮೂಡಿದರೆ ಇನ್ನು ಕೆಲವೇ ವರ್ಷಗಳಲ್ಲಿ ಬೀದಿ ನಾಯಿಗಳ ಸಮಸ್ಯೆಯಿಂದ ಬೆಂಗಳೂರು ಮುಕ್ತವಾಗಬಹುದು’ ಅಂತಾರೆ ಅಚಲಾ ಪಾಣಿ. 2010ರ ಯಂಗ್ ಅಚೀವರ್ಸ್ ಅವಾರ್ಡ್, 2011ರ ಕರ್ನಾಟಕ ರಾಜ್ಯ ವುಮನ್ಸ್ ಎಕ್ಸಲೆನ್ಸ್ ಪ್ರಶಸ್ತಿ, ಹಾಗೂ ಅದೇ ವರ್ಷ ಮುಂಬೈನ ಪ್ರತಿಷ್ಠಿತ ಫನ್, ಫಿಯರ್‍ಲೆಸ್ ಫೀಮೇಲ್ ಇನ್ಸ್​​​ಪಿರೇಷನ್ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳು ಅಚಲಾ ಪಾಣಿ ಅವರ ಸೇವೆಗೆ ದೊರೆತಿವೆ.

image


ಬಿಬಿಎಂಪಿ ವ್ಯಾಪ್ತಿಯಲ್ಲಿ 2000ರಿಂದ 2013ರವರೆಗೆ ಬರೊಬ್ಬರಿ 50 ಸಾವಿರಕ್ಕೂ ಹೆಚ್ಚು ಬೀದಿನಾಯಿಗಳನ್ನು ದಯಾಮರಣದ ಹೆಸರಿನಲ್ಲಿ ಹತ್ಯೆ ಮಾಡಲಾಗಿದ್ದು, ಅದರ ವಿರುದ್ಧ ‘ಲೆಟ್ಸ್ ಲಿವ್ ಟುಗೆದರ್’ ಸೇರಿದಂತೆ ಹಲವು ಪ್ರಾಣಿದಯಾ ಸಂಘಗಳು ಧ್ವನಿಯೆತ್ತಿದ್ದವು. ಅದರ ಫಲಿತಾಂಶವೆಂಬಂತೆ ಈಗ ದಯಾಮರಣದ ಸಂಖ್ಯೆ ಕಡಿಮೆಯಾಗಿದೆ. 2014ರ ಏಪ್ರಿಲ್‍ನಿಂದ 2015ರ ಮಾರ್ಚ್‍ವರೆಗೂ ಕೇವಲ 67 ಬೀದಿ ನಾಯಿಗಳನ್ನು ದಯಾಮರಣದ ಅಡಿಯಲ್ಲಿ ಹತ್ಯೆ ಮಾಡಲಾಗಿದೆ. ಹೀಗೆ ಬೀದಿ ನಾಯಿಗಳ ಹತ್ಯೆ ಸಂಖ್ಯೆಯಲ್ಲಿ ಇಳಿಕೆಯಾಗಲು ಅಚಲಾ ಪಾಣಿಯವರ ಶ್ರಮ ಅಪಾರ. ಹೀಗಾಗಿಯೇ ‘ಲೆಟ್ಸ್ ಲಿವ್ ಟುಗೆದರ್’ನ ಹಲವು ಕಾರ್ಯಕ್ರಮಗಳಲ್ಲಿ ಪಾಲಿಕೆ ಕೂಡ ಕೈಜೋಡಿಸಿದೆ. ಅಲ್ಲದೇ ಹ್ಯುಮೇನ್ ಸೊಸೈಟಿ ಇಂಟರ್‍ನ್ಯಾಷನಲ್ ಸಹಯೋಗದೊಂದಿಗೆ ಅಚಲಾ ಪಾಣಿ ಪ್ರತಿ ವರ್ಷ ಬೀದಿನಾಯಿಗಳಿಗೆ ರೇಬೀಸ್ ಇಂಜೆಕ್ಷನ್ ಹಾಗೂ ಸಂತಾನಹರಣ ಚಿಕಿತ್ಸೆ ನೀಡುತ್ತಿದ್ದಾರೆ. ‘ಹತ್ಯೆ ಮಾಡುವುದೊಂದೇ ಬೀದಿ ನಾಯಿಗಳ ಹಾವಳಿ ತಪ್ಪಿಸುವ ಕ್ರಮವಲ್ಲ, ಆ ಸಮಸ್ಯೆಯನ್ನು ಮಾನವೀಯ ದಾರಿಯಿಂದಲೂ ಬಗೆಹರಿಸಬಹುದು’ ಅನ್ನೋದು ಅಚಲಾ ಅಭಿಮತ.

image


ಬೀದಿನಾಯಿಗಳು ಮಾತ್ರವಲ್ಲ ಹಲವು ಬೆಕ್ಕುಗಳನ್ನೂ ‘ಲೆಟ್ಸ್ ಲಿವ್ ಟುಗೆದರ್’ ರಕ್ಷಿಸಿದೆ. ವಿಶೇಷ ಅಂದ್ರೆ ಅಚಲಾ ಪಾಣಿಯವರ ಈ ನಿಸ್ವಾರ್ಥ ಸೇವೆಗೆ ಅವರ ತಾಯಿಯೇ ಸ್ಫೂರ್ತಿಯಂತೆ. ಮನೆಯಲ್ಲೇ ಕಚೇರಿ ಮಾಡಿಕೊಂಡಿರುವ ಅಚಲಾ ಪಾಣಿ, ಅಲ್ಲೇ ಹಲವು ಬೀದಿ ನಾಯಿಮರಿಗಳಿಗೆ ಆಶ್ರಯ ನೀಡಿದ್ದಾರೆ. ‘ಲೆಟ್ಸ್ ಲಿವ್ ಟುಗೆದರ್’ನಲ್ಲಿ ಖಾಯಂ ಸದಸ್ಯರು ಅಂತಿಲ್ಲವಾದರೂ ಸ್ವಯಂಸೇವಕರು ಹಾಗೂ ಇಂಟರ್ನ್‍ಶಿಪ್‍ಗೆ ಬರುವ ಕಾಲೇಜ್ ಮಕ್ಕಳು ಅಚಲಾ ಕಾರ್ಯಕ್ಕೆ ಸಾಥ್ ನೀಡ್ತಾರೆ. ಇತ್ತೀಚೆಗಷ್ಟೇ ಜರ್ಮನ್ ಮೂಲದ ವಿದ್ಯಾರ್ಥಿಯೊಬ್ಬರು ಸುಮಾರು 4 ತಿಂಗಳ ಕಾಲ ‘ಲೆಟ್ಸ್ ಲಿವ್ ಟುಗೆದರ್’ನಲ್ಲಿ ಇಂಟರ್ನ್‍ಶಿಪ್ ಮಾಡಿದ್ದು ವಿಶೇಷ.

image


ನಮ್ಮ ದೇಶೀ ಬೀದಿನಾಯಿಗಳು ಯಾವುದೇ ಬ್ರೀಡ್ ನಾಯಿಗಳಿಗೂ ಕಡಿಮೆ ಇಲ್ಲ ಅನ್ನೋ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಬೇಕು. ಈಗಿನ ಕಾಲದಲ್ಲಿ ವಿದೇಶೀ ತಳಿಯ ನಾಯಿಗಳನ್ನು ಸಾಕೋದು ಅಂದ್ರೆ ಫ್ಯಾಶನ್ ಆಗೋಗಿದೆ, ಅದೊಂಥರಾ ಘನತೆ ಎಂಬಂತಾಗಿದೆ. ಹೀಗಾಗಿಯೇ ಜನ ಮುಗಿಬಿದ್ದು ವಿದೇಶೀ ತಳಿ ನಾಯಿಗಳನ್ನು ಸಾವಿರಾರು ರೂಪಾಯಿ ಹಣ ತೆತ್ತು ಖರೀದಿಸುತ್ತಾರೆ. ಹಾಗೇ ಪ್ರತಿ ತಿಂಗಳು ಅವುಗಳಿಗೆ ಸಾವಿರಾರು ರೂಪಾಯಿ ವ್ಯಯಿಸುತ್ತಾರೆ. ಇದರಿಂದಾಗಿ ನಗರದಲ್ಲಿ ಡಾಗ್ ಬ್ರೀಡರ್‍ಗಳ ಸಂಖ್ಯೆಯೂ ಹೆಚ್ಚಾಗಿದೆ. ಆದ್ರೆ ಅದರ ಬದಲು ಬೀದಿನಾಯಿಮರಿಯನ್ನು ದತ್ತು ಪಡೆದರೆ, ಅದಕ್ಕೂ ಜೀವನ ನೀಡಿದಂತಾಗುತ್ತೆ. ಹಾಗೇ ನಮ್ಮ ದೇಶೀ ನಾಯಿಗಳನ್ನು ಸಾಕಲು ಅಷ್ಟೊಂದು ಖರ್ಚೂ ಆಗೋದಿಲ್ಲ. ವಿದೇಶೀ ಬ್ರೀಡ್ ನಾಯಿಗಳು ಮನೆ ಸೇರುತ್ತಿದ್ದರೆ, ನಮ್ಮ ದೇಶೀ ನಾಯಿಗಳು ಬೀದಿ ಪಾಲಾಗುತ್ತಿವೆ. ಹೀಗಾಗಿಯೇ ಜನರಲ್ಲಿ ಇದರ ಕುರಿತು ಅರಿವು ಮೂಡಬೇಕು ಅಂತಾರೆ ಅಚಲಾ ಪಾಣಿ. ಈ ನಿಟ್ಟಿನಲ್ಲಿಯೇ ಮಾಧ್ಯಮಗಳ ಮೂಲಕ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಅವರು. ಹಾಗೇ ಸಿನಿಮಾ ಸ್ಟಾರ್‍ಗಳು ಹಾಗೂ ಸೆಲೆಬ್ರಿಟಿಗಳ ಮೂಲಕ ಹೆಚ್ಚು ಜನರಿಗೆ ಈ ಸಂದೇಶ ತಲುಪಿಸುವ ಯೋಚನೆ ಅಚಲಾ ಪಾಣಿಯವರದು.

ಅದೇನೇ ಇರಲಿ ‘ಲೆಟ್ಸ್ ಲಿವ್ ಟುಗೆದರ್’ಗೆ ಯಶಸ್ಸು ಸಿಗಲಿ ಹಾಗೂ ಅಚಲಾ ಪಾಣಿಯವರು ಇದೇ ರೀತಿ ತಮ್ಮ ಸಮಾಜ ಮುಖೀ ಕೆಲಸ ಮುಂದುವರಿಸಲಿ...