ವಡಾಪಾವ್ ಬ್ರಾಂಡ್​​​​ ಆಗಿದ್ದು ಹೇಗೆ ಗೊತ್ತಾ? ಇದು ಜಂಬೋಕಿಂಗ್ ಕಥೆ

ಟೀಮ್​​ ವೈ.ಎಸ್​​.

ವಡಾಪಾವ್ ಬ್ರಾಂಡ್​​​​ ಆಗಿದ್ದು ಹೇಗೆ ಗೊತ್ತಾ? ಇದು ಜಂಬೋಕಿಂಗ್ ಕಥೆ

Thursday October 22, 2015,

5 min Read

ನೀವು ಮಹಾರಾಷ್ಟ್ರದಲ್ಲಿ ಇದ್ದೀರಿ ಎಂದರೆ, ವಡಾಪಾವ್ ತಿನ್ನಲು ಮರೆಯದಿರಿ. ಕಾರಣ, ಅಲ್ಲಿನ ವಡಾಪಾವ್ ರುಚಿಯೇ ಅದ್ಭುತ. ಎಲ್ಲಾ ದಿನಾಚರಣೆಗಳಂತೆ ಇಲ್ಲಿ ವಡಾಪಾವ್​ಗೂ ಒಂದು ದಿನಾಚರಣೆ ಇದೆ. ಕಳೆದ 14 ವರ್ಷಗಳಿಂದಲೂ ವಡಾಪಾವ್ ದಿನಾಚರಿಸಲಾಗುತ್ತಿದೆ. ಇದರ ಹಿಂದೆ ಜಂಬೋಕಿಂಗ್ ಯಶಸ್ಸಿನ ಕಥೆ ಇದೆ.

ಜಂಬೋಕಿಂಗ್ ಅನ್ನು ಸ್ಥಾಪಿಸಿದವರು ಧೀರಜ್ ಗುಪ್ತಾ. ಧೀರಜ್ ಉದ್ಯಮಿಗಳ ಕುಟುಂಬವೊಂದರ ಮೂರನೇ ತಲೆಮಾರು. ಧೀರಜ್ ಕುಟುಂಬವು ಹೊಟೇಲ್, ಕ್ಯಾಟರಿಂಗ್, ಸ್ವೀಟ್ ಮಳಿಗೆಗಳು ಹೀಗೆ ಆಹಾರಕ್ಕೆ ಸಂಬಂಧಪಟ್ಟ ಉದ್ಯಮದಲ್ಲಿ ತೊಡಗಿಸಿಕೊಂಡಿದೆ. ಪುಣೆಯ ಸಿಂಬ್ಯೋಸಿಸ್​​ನಲ್ಲಿ ಎಂಬಿಎ ಪದವಿ ಪಡೆದ ಧೀರಜ್, ನೇರ ಆಹಾರೋದ್ಯಮಕ್ಕೆ ಧುಮುಕಿದರು. ದುಬೈನಂತಹ ಭಾರತೀಯರ ಸಂಖ್ಯೆ ಹೆಚ್ಚಿರುವ ನಗರಗಳಿಗೆ ಸ್ವೀಟ್​​ಗಳನ್ನು ರಫ್ತು ಮಾಡಲು ಆರಂಭಿಸಿದರು. ಆದರೆ, ಇದರಲ್ಲಿ ನಷ್ಟ ಅನುಭವಿಸಿದ ಕಾರಣ, ತಮ್ಮ ಉದ್ಯಮಕ್ಕೆ ಶಟರ್ ಎಳೆದರು.

image


ಆದರೆ ಎದೆಗುಂದಲಿಲ್ಲ. ಮುಂಬೈ ಉಪನಗರ ಮತ್ತು ಮಲಾದ್ ಗಳಲ್ಲಿ ಚಾಟ್ ಫ್ಯಾಕ್ಟರಿ ಹೆಸರಿನಲ್ಲಿ ಸ್ಟ್ರೀಟ್ ಫುಡ್ ಸೆಂಟರ್ ಆರಂಭಿಸಿದರು. ಇದು ಕೈ ಹಿಡಿಯಿತು. ವ್ಯಾಪಾರ ಕುದುರಿತ್ತಿದ್ದಂತೆಯೇ, ಅವರ ಮೆನುವಿನಲ್ಲಿದ್ದ ಐಟಂಗಳ ಪೈಕಿ ವಡಾಪಾವ್ ಜಾಸ್ತಿ ಸೇಲ್ ಆಗುತ್ತಿದೆ ಎನ್ನುವುದು ಗಮನಕ್ಕೆ ಬಂತು. ಹೀಗಾಗಿ ಧೀರಜ್ ಅವರು, ವಡಾಪಾವ್ ಮೇಲೆಯೇ ಕೆಲಸ ಆರಂಭಿಸಿದರು. ಹಾಗೆ ಜಂಬೋ ಕಿಂಗ್ ಆರಂಭವಾಯಿತು.

ಆರಂಭಿಕ ದಿನಗಳು

“ಇದೊಂಥರಾ ವಿಚಿತ್ರ ಅನುಭವ. ನಿಮಗೆ ಮದುವೆಯಾಗಿದೆ ಆದರೆ ಮುಂದೆ ಏನೇನಾಗಲಿದೆ ಎನ್ನುವುದು ಗೊತ್ತಿರುವುದಿಲ್ಲ. ಇದು ಕೂಡಾ ಅಂತಹದ್ದೇ ಪರಿಸ್ಥಿತಿ. ನೀವು ಎಲ್ಲವನ್ನೂ ಇಂಪ್ರೂವ್ ಮಾಡುತ್ತಲೇ ಇರಬೇಕು. ಎಲ್ಲದಕ್ಕೂ ಅಡ್ಜಸ್ಟ್ ಆಗಲೇ ಬೇಕು. ಮದುವೆಯ ಆರಂಭದ 5 ವರ್ಷಗಳು ಒಂದು ರೀತಿ, ಮಕ್ಕಳಾದ ಬಳಿಕದ ಜೀವನ ಮತ್ತೊಂದು ರೀತಿ ಎಲ್ಲವೂ ಬದಲಾಗುತ್ತಲೇ ಇರುತ್ತದೆ. ಇಲ್ಲಿ ಫಾರ್ಮುಲಾ ಇಲ್ಲ. ಪ್ರತಿಯೊಬ್ಬ ಗಂಡ-ಹೆಂಡತಿಯೂ ಭಿನ್ನ” ಎನ್ನುತ್ತಾರೆ ಧೀರಜ್. ಉದ್ಯಮಿಗಳ ಕುಟುಂಬದಿಂದ ಬಂದು, ಅದರಲ್ಲೂ ಬ್ಯುಸಿನೆಸ್ ಸ್ಕೂಲ್ ಪದವೀಧರನಿಗೆ ಹಾದಿ ಬೀದಿಯಲ್ಲಿ ಕೆಲಸ ಮಾಡುವುದು ಸುಲಭದ ಕೆಲಸವಾಗಿರಲಿಲ್ಲ.

ಜಂಬೋಕಿಂಗ್​​ನ ಮೊದಲ ಔಟ್ಲೆಟ್ ಅನ್ನು 2001ರಲ್ಲಿ ಆರಂಭಿಸಲಾಯಿತು. ರಸ್ತೆಬದಿಗಳಲ್ಲಿ ವಡಾಪಾವ್​ಗೆ 2 ರೂಪಾಯಿ ದರವಿದ್ದರೆ, ಇವರು ಪ್ರೀಮಿಯಂ ದರವನ್ನು 5 ರೂಪಾಯಿಗೆ ನಿಗದಿಪಡಿಸಿದದರು. “ಜನರಿಗೆ ಅಂಗಡಿಗಳಲ್ಲಿ ಬಂದು ವಡಾಪಾವ್ ತಿನ್ನುವುದು ಕುತೂಹಲ ಕೆರಳಿಸಿತ್ತು. ತುಂಬಾ ಸ್ವಚ್ಛತೆಗೆ ಗಮನಕೊಟ್ಟಿದ್ದು ನಮ್ಮತ್ತ ಜನರು ಬರಲು ಕಾರಣವಾಯಿತು. ಆ ಬಳಿಕ ನಾವು ಬೇರೆ ಬೇರೆ ಫ್ಲೇವರ್​​ಗಳನ್ನು ಪರಿಚಯಿಸಿದೆವು. ಚೀಸ್ ವಡಾಪಾವ್, ಬಟರ್ ವಡಾಪಾವ್, ಶೇಜ್ವಾನ್ ವಡಾಪಾವ್ ಹೀಗೆ ವೈವಿಧ್ಯಮಯವಾಗಿ ಜನರ ಮುಂದೆ ನಾವು ಮೆನು ಇಟ್ಟೆವು. ನಮ್ಮ ವ್ಯಾಪಾರವು ಸ್ಥಿರವಾಗಿ ಅಭಿವೃದ್ಧಿಯಾಯಿತು. ನಾವು ಹೊಸ ಹೊಸ ಅನ್ವೇಷನೆ ಮಾಡುತ್ತಾ ಸಾಗಿದೆವು.”

ನಾವು ಆರಂಭದಲ್ಲೇ ಟೈರ್-1 ಮತ್ತು ಟೈರ್-2 ಸಿಟಿಗಳಲ್ಲಿ ಫ್ರಾಂಚೈಸಿ ಮಳಿಗೆಗಳನ್ನು ಸ್ಥಾಪಿಸಿದೆವು. ಭಾರೀ ಪ್ರಮಾಣದಲ್ಲಿ ಜನರ ಓಡಾಟ ಇರುವ ರೈಲ್ವೇ ನಿಲ್ದಾಣಗಳ ಬಳಿ 200-300 ಚದರ ಅಡಿ ಜಾಗದಲ್ಲಿ ಮಳಿಗೆಗಳನ್ನು ನಡೆಸಿದೆವು. ತುರ್ತು ಕೆಲಸಕ್ಕೆ ಹೋಗುವ ಪ್ರಯಾಣಿಕರಿಗೆ ರೆಡಿಮೇಡ್ ವಡಾಪಾವ್​​ಗಳು ಭಾರೀ ಇಷ್ಟವಾದವು. ಆದರೆ, ಎಲ್ಲಾ ಜನನಿಬಿಡ ಸ್ಥಳಗಳಲ್ಲಿ ವ್ಯಾಪಾರ ಸಾಧ್ಯವಾಗುವುದಿಲ್ಲ ಎನ್ನುವುದಕ್ಕೆ ಬುಂಡೇರ್ ರೈಲ್ವೇ ನಿಲ್ದಾಣದ ಹತ್ತಿರದಲ್ಲಿರುವ ಮಸೀದಿ ಬಳಿಯ ಒಂದು ಶಾಪ್ ಸಾಕ್ಷಿ.

“ನಮಗೆ ಸ್ಕೈವಾಕರ್ ಬಳಿ ಒಂದು ಕಡೆ ಜಾಗ ಸಿಕ್ಕಿತು. ಅದಂತೂ ಅದ್ಭುತವಾದ ಜಾಗ. ಅಲ್ಲಿ ಮಳಿಗೆ ತೆರೆದರೂ ಒಂದೇ ಒಂದು ವಡಾಪಾವ್ ಖರ್ಚಾಗಳಲಿಲ್ಲ. ಅಲ್ಲೇ ಕೇವಲ 50 ಮೀಟರ್ ದೂರದಲ್ಲಿ ವಡಾಪಾವ್ ಬೀದಿವ್ಯಾಪಾರಿಯೊಬ್ಬ ಸಿಕ್ಕಾಪಟ್ಟೆ ಬ್ಯುಸಿನೆಸ್ ಮಾಡುತ್ತಿದ್ದ. ಇಷ್ಟೊಂದು ಬಂಡವಾಳ ಹಾಕಿ, ಮಳಿಗೆ ತೆರದರೂ, ಪಕ್ಕದವನ ವ್ಯಾಪಾರ ನೋಡಿದಾಗ ಹೊಟ್ಟೆಗೆ ಬೆಂಕಿ ಹಾಕಿದಂತಾಗುತ್ತಿತ್ತು. ಇದಕ್ಕೆ ಕಾರಣ ಹುಡುಕಿದಾಗ ನಮಗೆ ದೊಡ್ಡ ಪಾಠ ಕಲಿತಂತಾಯಿತು. ಅದೇನೆಂದರೆ, ಈ ಹಾದಿಯಲ್ಲಿ ಒಂದೇ ಒಂದು ಕಚೇರಿ ಇರಲಿಲ್ಲ. ಕಾಲೇಜು ಇರಲಿಲ್ಲ. ಅಲ್ಲಿ ಓಡಾಡುವವರೆಲ್ಲಾ ಫ್ಯಾಕ್ಟರಿ ಮತ್ತು ಮಿಲ್​​ಗಳಲ್ಲಿನ ಕಾರ್ಮಿಕರು. ಅವರಿಗೆ ಒಂದು ರೂಪಾಯಿ ವ್ಯತ್ಯಾಸ ಕೂಡಾ ದೊಡ್ಡ ವ್ಯತ್ಯಾಸವೇ. ನಿಮ್ಮ ಸ್ವಚ್ಛತೆ, ಥ್ಯಾಂಕ್ಯೂ ಯಾವುದೂ ಅವರಿಗೆ ಬೇಕಾಗಿಲ್ಲ. ಪೇಪರ್ ಪೀಪ್​​ನಲ್ಲಿ ಕೊಟ್ಟ ವಡಾಪಾವ್ ಅವರ ಹೊಟ್ಟೆ ತುಂಬಿಸಿದರೆ ಸಾಕು. ಅವತ್ತೇ ನಾವು ಜನ ನೋಡಿ ಅಂಗಡಿ ಹಾಕಬೇಡ, ಎಂಬ ಸಿದ್ಧಾಂತ ರೂಪಿಸಿಕೊಂಡೆವು.”

ಉದ್ಯಮದಲ್ಲಿ ಮತ್ತೊಂದು ಪಾಠವನ್ನೂ ಕಲಿತಿದ್ದಾರೆ. ಅದು ಮಳಿಗೆಗಳಿಗೆ ಸಂಬಂಧಿಸಿದ್ದು. ಆರಂಭದಲ್ಲಿ ಫ್ರಾಂಚೈಸಿ ಮಾದರಿ ಆರಂಭಿಸಿದರೂ, 2007ರಲ್ಲಿ ಜಂಬೋಕಿಂಗ್ ಸ್ವಂತ ಮಳಿಗೆಗಳನ್ನು ಸ್ಥಾಪಿಸಲು ನಿರ್ಧರಿಸಿತು. “ನಮಗೆ ಮೊದಲ ಹಂತದಲ್ಲಿ ಸಣ್ಣ ಪ್ರಮಾಣದ ವಿಸಿ ಬಂಡವಾಳ ಸಿಕ್ಕಿತು. ಹಲವರು ನಮಗೆ ಸ್ವಂತ ಮಳಿಗೆಗಳನ್ನು ಹಾಕುವುದರಿಂದ ಹೆಚ್ಚು ಆದಾಯ ಬರುತ್ತದೆ ಮತ್ತು ಬೇಗನೇ ಬೆಳೆಯಬಹುದು ಎಂಬ ಸಲಹೆ ನೀಡಿದರು. ಮುಂದಿನ ಮೂರು ವರ್ಷಗಳ ಕಾಲ ನಾವು ಫ್ರಾಂಚೈಸಿಗಳನ್ನು ವಾಪಸ್ ಖರೀದಿಸಿ, ಸ್ವಂತ ಮಳಿಗೆಗಳನ್ನು ಆರಂಭಿಸಿದೆವು. ಎರಡನ್ನೂ ಮುಂದುವರಿಸಿತ್ತಿದ್ದರೆ, ಸುಮಾರು 200 ಕೋಟಿ ರೂಪಾಯಿ ವಹಿವಾಟು ನಡೆಸಬಹುದಿತ್ತು. ಸ್ವಂತ ಮಳಿಗೆಗಳಿಂದಾಗಿ ನಮ್ಮ ವಿಸ್ತರಣೆ ಕುಂಠಿತವಾಯಿತು. ಕಾರಣ, ಅತಿ ಹೆಚ್ಚು ಸಮಯ ನಿರ್ವಹಣೆಗೇ ತಗಲುತ್ತಿತ್ತು.” ಎನ್ನುತ್ತಾರೆ ಧೀರಜ್.

ಒಂದಂತೂ ಅವರು ಸ್ಪಷ್ಟಪಡಿಸಿಕೊಂಡಿದ್ದರು. ಯಾವುದೇ ಕಾರಣಕ್ಕೂ ತಮ್ಮ ಬ್ರಾಂಡ್​​ನಿಂದ ಬದಲಾಗುವುದಿಲ್ಲ ಎಂದು ನಿರ್ಧರಿಸಿಬಿಟ್ಟಿದ್ದರು. ಹೀಗಾಗಿ 12 ವರ್ಷಗಳಿಂದಲೂ ಜಂಬೋಕಿಂಗ್ ಆಹಾರ ಉದ್ಯಮಕ್ಕೆ ಮುಖ್ಯವಾಗಿ ವಡಾಪಾವ್ ಉದ್ಯಮಕ್ಕೆ ಹತ್ತಿರವಾಗಿಯೇ ನಿಂತುಕೊಂಡಿದೆ. ವಡಾಪಾವ್​ನಲ್ಲೇ ಬಹುತೇಕ ಪ್ರಯೋಗಗಳನ್ನು ಮಾಡಿದ್ದಾರೆ, ಆದರೆ ಹೊಸ ಉತ್ಪನಕ್ಕೆ ಕೈ ಹಾಕಲಿಲ್ಲ. “ಮೊದಲ 15 ವರ್ಷಗಳ ಕಾಲ ಮೆಕ್​​ಡೊನಾಲ್ಡ್ಸ್​​ ಮೆನುವಿನಲ್ಲಿ ಬರ್ಗರ್, ಫ್ರೈಸ್ ಮತ್ತು ಕೋಕ್ ಮಾತ್ರ ಇತ್ತು. 5-6 ವರ್ಷಗಳ ಬಳಿಕವೂ ಅವರ ಬಳಿ ಇದ್ದದ್ದು 2-3 ಐಟಮ್​​ಗಳು ಮಾತ್ರ. ಅವರು ತಮ್ಮ ಗಮನವನ್ನೆಲ್ಲಾ ಒಂದೇ ಉತ್ಪನ್ನದ ಮೇಲೆ ಕೇಂದ್ರೀಕರಿಸಿದ್ದರು. ಇದೇ ವೇಳೆ ಅವರು ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡರು,”ಎನ್ನುತ್ತಾರೆ ಧೀರಜ್.

ಈ ಪ್ರಯಾಣಕ್ಕೆ ಸ್ಫೂರ್ತಿ

ಧೀರಜ್ ಅವರು ಮೆಕ್​​ಡೊನಾಲ್ಡ್ಸ್​​ನ ಅತಿ ದೊಡ್ಡ ಫ್ಯಾನ್. ಅವರು ಜಂಬೋಕಿಂಗ್ ಮೂಲಕ ಅಂತಹದ್ದೇ ಒಂದು ಬ್ರಾಂಡ್ ಮರುಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. “ನೀವು ಯಾವುದೇ ಬ್ರಾಂಡ್ ತೆಗೆದುಕೊಳ್ಳಿ, ಶೇಕಡಾ 90ರಷ್ಟು ಕಂಪನಿಗಳು ಅಮೆರಿಕಾದಿಂದಲೇ ಬಂದಿವೆ. ಅವರಿಗೆ ಬ್ರಾಂಡ್ ರೂಪಿಸುವುದು ಗೊತ್ತಿದೆ. ಸೋನಿ ಬ್ರಾಂಡ್ ರೂಪಿಸಲು ಜಪಾನ್​​ನ ಅಕಿಯೋ ಮೊರಿಟಾ ಕೂಡಾ ಅಮೆರಿಕಾದಲ್ಲಿ ಹೋಗಿ ನೆಲೆಸಬೇಕಾಯಿತು ಎನ್ನುತ್ತಾರೆ ಧೀರಜ್. ಅವರಿಗೆ ರೇ ಕ್ರೋಕ್ಸ್ ಅವರು ಆತ್ಮಚರಿತ್ರೆಯೇ ಬೈಬಲ್ ಇದ್ದಂತೆ.

ಜಂಬೋಕಿಂಗ್ ಬಳಿ ಈಗ 10-75 ರೂಪಾಯಿಗಳವರೆಗಿನ ವಿಭಿನ್ನ ವಡಾಪಾವ್ ಗಳಿವೆ. ಇತ್ತೀಚೆಗಷ್ಟೇ ವಡಾಪಾವ್ ರೂಪದಲ್ಲಿ ಸಮೋಸಾವನ್ನೂ ಪರಿಚಯಿಸಲಾಗಿದೆ. ಇದು ಹೊಸ ಅವತಾರದಲ್ಲಿದ್ದರೂ ರುಚಿ ಮಾತ್ರ ಹಾಗೆಯೇ ಇದೆ. ಗಂಟೆಗೆ 1.5 ಟನ್​ನಷ್ಟು ವಡಾಪಾವ್ ತಯಾರಿಸುವ ಸಾಮರ್ಥ್ಯದ ಪಾಕಶಾಲೆಯನ್ನೂ ಜಂಬೋಕಿಂಗ್ ಹೊಂದಿದೆ. ಇಷ್ಟು ಸಾಮರ್ಥ್ಯ ಹೊಂದಿರುವುದರಿಂದಲೇ ಗ್ರಾಹಕರಿಗೆ ಕೊರತೆಯಾಗದಷ್ಟು ಮಟ್ಟದಲ್ಲಿ ವಡಾಪಾವ್ ತಯಾರಿಸಲಾಗುತ್ತಿದೆ ಎನ್ನುತ್ತಾರೆ ಧೀರಜ್. ಮಾರುಕಟ್ಟೆಯಲ್ಲಿ ಸಾಕಷ್ಟು ಆಹಾರ ಕ್ಯಾಟಗರಿಗಳಿವೆ. ಆದರೆ, ಸಾಮಾನ್ಯ ವೈದ್ಯನಿಗಿಂತ ಸ್ಪೆಷಲಿಸ್ಟ್ ವೈದ್ಯನೇ ಜಾಸ್ತಿ ಸಂಪಾದಿಸುತ್ತಾನೆ, ಹಾಗೆಯೇ ನಾವು ಕೂಡಾ ವಡಾಪಾವ್ ಸ್ಪೆಷಲಿಸ್ಟ್ ಎನ್ನುತ್ತಾರೆ ಧೀರಜ್.

image


ಆಹಾರ ತಯಾರಿಕೆ ಜೊತೆಗೆ ಸಾಕಷ್ಟು ಓದುವ ಹವ್ಯಾಸ ಹೊಂದಿರುವ ಧೀರಜ್ ಮಾರುಕಟ್ಟೆ, ಜಾಹೀರಾತಿಗೆ ಸಂಬಂಧಿಸಿದ ಕೃತಿಗಳನ್ನೂ ಅಭ್ಯಾಸ ಮಾಡುತ್ತಾರೆ. ಜ್ಯಾಕ್ ಟ್ರಾಟ್ ಬರೆದಿರುವ ಡೆತ್ ಆಫ್ ಅಡ್ವಟೈಸಿಂಗ್ ಅಂಡ್ ರೈಸ್ ಆಫ್ ಪಿ.ಆರ್, ಅಲ್ ರೀಸ್ ಫೊಕಸ್ ಅವರ ಸಂಗ್ರಹದಲ್ಲಿವೆ. ಮಾರ್ಕೆಟಿಂಗ್ ಮತ್ತು ಪ್ರಚಾರಕ್ಕೆ ಜಾಹೀರಾತು ಏಜೆನ್ಸಿಗಳಿಗೆ 2 ಕೋಟಿ ಕೊಡುವ ಬದಲು, 200 ರೂಪಾಯಿ ಪುಸ್ತಕರ ಖರೀದಿಸುವುದು ಒಳ್ಳೆಯದು, ಅದೇ ನನ್ನನ್ನು ಓದಲು ಪ್ರೇರೇಪಿಸುತ್ತದೆ ಎಂದು ನಗುತ್ತಾರೆ ಧೀರಜ್.

ಉದ್ಯಮಿಯ ಕಷ್ಟದ ಜೀವನ

ಸಧ್ಯ ಜಂಬೋಕಿಂಗ್ ಬೃಹತ್ತಾಗಿ ಬೆಳೆದಿದೆ. ಮುಂಬೈ, ಥಾಣೆ, ಬೆಂಗಳೂರು, ಔರಂಗಾಬಾದ್, ಮೈಸೂರು, ದೆಹಲಿ, ಅಮರಾವತಿ, ಇಂದೋರ್, ರಾಜ್ಪುರ್ ಹೀಗೆ 9 ನಗರಗಳಲ್ಲಿ ವ್ಯವಹಾರ ನಡೆಸುತ್ತಿದೆ. ಆದರೆ, ಆರಂಭದಲ್ಲಿ ಎಲ್ಲವೂ ಹೀಗಿರಲಿಲ್ಲ. ತಾಳ್ಮೆಯೇ ಎಲ್ಲದಕ್ಕೂ ಅಗತ್ಯ ಎನ್ನುತ್ತಾರೆ ಧೀರಜ್. “ನಾನು ಎಂಬಿಎ ಮುಗಿಸಿದಾಗ ಗೆಳೆಯರಿಗೆಲ್ಲಾ ದೊಡ್ಡ ದೊಡ್ಡ ಕೆಲಸ ಕೈತುಂಬಾ ಸಂಬಳ ಸಿಕ್ಕಿತ್ತು. ಅವರು ನನ್ನನ್ನು ನೋಡಿ ನಗುತ್ತಿದ್ದರು, ಬೀದಿ ವ್ಯಾಪಾರಿಗಳ ಜೊತೆ ಸ್ಪರ್ಧಿಸಲು ಎಂಬಿಎ ಮಾಡಬೇಕಿತ್ತಾ ಎಂದು ಕಿಚಾಯಿಸುತ್ತಿದ್ದರು,” ಎಂದು ಹಳೆಯ ನೆನಪಿಗೆ ಜಾರುತ್ತಾರೆ ಧೀರಜ್.

ಉದ್ಯಮ ಸ್ಥಾಪಿಸಲು ನಿಮಗೆ ತುಂಬಾ ತಾಳ್ಮೆ ಇರಬೇಕು. ಹಠ ಛಲ ಇರಬೇಕು. ನಿಮ್ಮ ಆಸುಪಾಸಿನವರು ದುಡ್ಡ ಮಾಡುತ್ತಾ, ಇಂಕ್ರಿಮೆಂಟ್ ಪಡೆಯುತ್ತಾ ಇದ್ದರೆ, ನೀವು ಕೇವಲ ಕನಸಿನಲ್ಲೇ ಕಾಲ ಕಳೆಯಬೇಕಾಗುತ್ತದೆ. ಹೆಚ್ಚೆಂದರೆ ನಿಮ್ಮ ಸಂಗಾತಿಯಷ್ಟೇ ನಿಮ್ಮನ್ನು ನಂಬಬಹುದು, ಬೇರಾರೂ ನಂಬಲ್ಲ. ನಿಮ್ಮನ್ನು ನಂಬಲು ಯಾರೂ ಇರುವುದಿಲ್ಲ. ಯಾಕೆಂದರೆ, ಯಾರೂ ಮಾಡದ್ದನ್ನು ನೀವು ಮಾಡಲು ಹೊರಟಿರುತ್ತೀರಿ. ಮೊದಲ ಮೂರು ವರ್ಷಗಳು ಏಕಾಂತದ ಸಮಯ. ನೀವು ಮಾಡಿದ್ದೆಲ್ಲವನ್ನೂ ವಿವರಿಸುತ್ತಾ ಇರಬೇಕಾಗುತ್ತದೆ. ಮೆಕ್​ಡೊನಾಲ್ಡ್ ಮಾಡಬಹುದು ಆದರೆ ವಡಾಪಾವ್ ನಿಂದ ಅದೆಲ್ಲಾ ಸಾಧ್ಯವಿಲ್ಲ ಅಂತ ಜನ ಹೇಳುತ್ತಿರುತ್ತಾರೆ. ಇಂತಹ ವಾತಾವರಣದಲ್ಲೇ ನೀವು ಕೆಲಸ ಮಾಡಬೇಕು ಅಂತ ಹೇಳುತ್ತಾರೆ ಧೀರಜ್.

ಇಡೀ ಉದ್ಯಮ ಕಟ್ಟಿ ಬೆಳೆಸುವಲ್ಲಿ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದು ಅವರ ಪತ್ನಿ ರೀತಾ ಗುಪ್ತಾ. ಅವರೇ ಬೆಂಬಲದ ಪಿಲ್ಲರ್ ಎನ್ನುತ್ತಾರೆ ಧೀರಜ್. ರೀತಾ ಕೂಡಾ ಸಿಂಬ್ಯೋಸಿಸ್​​ನಲ್ಲಿ ಮ್ಯಾನೇಜ್​​ಮೆಂಟ್ ಪದವೀಧರೆ. ಜೀವನ ಸಾಂಗತ್ಯದಂತೆಯೇ, ಮಾರ್ಕೆಟಿಂಗ್, ಬ್ರಾಂಡಿಂಗ್, ಪೊಸಿಷನಿಂಗ್ ಎಲ್ಲದರಲ್ಲೂ ಪತಿ-ಪತ್ನಿ ಜೊತೆಯಾಗಿ ಸಾಗಿದ್ದಾರೆ. ರೀತಾ ಅತಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಈಗಲೂ ಅವರು ಜಂಬೋಕಿಂಗ್​​ನಲ್ಲಿ ತೊಡಗಿಸಿಕೊಂಡಿದ್ದಾರೆ.

ಮೊದಲ ದಿನದಿಂದಲೂ ಜಂಬೋಕಿಂಗ್ ಹಣ ಮಾಡಲು ಆರಂಭಿಸಿತ್ತು. ಆದರೆ ಅದೆಲ್ಲವನ್ನೂ ಮತ್ತೆ ಉದ್ಯಮಕ್ಕೆ ಸುರಿಯಲಾಯಿತು. ಹೊಸ ಮೆಷಿನ್​​ಗಳು, ಹೊಸ ವ್ಯವಸ್ಥೆಗಳನ್ನು ಅಳವಡಿಸಲಾಯಿತು. 2008-09ರ ನ್ಯೂಸ್ ಪೇಪರ್​​ಗಳನ್ನು ಓದಿದರೆ ಸಾಕು, ಸ್ಪೆನ್ಸರ್ 500 ಮಳಿಗೆಗಳನ್ನು ಆರಂಭಿಸುತ್ತಿದೆ, ರಿಲಯನ್ಸ್ 5000 ಚದರ ಅಡಿ ಜಾಗ ಖರೀದಿಸುತ್ತಿದೆ. ಮೆಕ್​ಡೊನಾಲ್ಡ್ಸ್​​ 100 ಮಳಿಗೆ ತೆರೆಯುತ್ತಿದೆ… ಆದರೆ, ಉದ್ಯಮಿಯಾಗಿ ನನ್ನ ಬಳಿ ಕೇವಲ 10 ಸ್ಟೋರ್​​ಗಳಿದ್ದವು. ಹಾಗಿದ್ದರೆ, ನಾವು ಮಹತ್ವಾಕಾಂಕ್ಷಿಗಳಲ್ಲವೇ? ನಾವು ಕೂಡಾ ಅಂತಹದ್ದೇ ಪ್ರಯತ್ನಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡವರು. ಒಂದು ಹಂತದಲ್ಲಿ, ನೌಕರರ ಸಂಖ್ಯೆ ಕಡಿತಗೊಳಿಸಿ, ನಮ್ಮ ಯೋಜನೆಯನ್ನೆಲ್ಲಾ ಕೈಬಿಡಬೇಕಾಗಿ ಬಂದಿತ್ತು.

ಆ ಬಳಿಕ ನಮ್ಮ ಅಗತ್ಯಕ್ಕೆ ತಕ್ಕಂತೆ ತಂಡಗಳನ್ನು ರೂಪಿಸತೊಡಗಿದೆವು. 3ರಿಂ10 ಸ್ಟೋರ್​​​ಗಳಿಗೆ ಒಂದು ತಂಡ, 11ರಿಂದ 50ಕ್ಕೆ ಒಂದು ರೀತಿಯ ತಂಡ, 100 ಸ್ಟೋರ್​​ಗಳಿಗೆ ವಿಭಿನ್ನ ತಂಡ.. ಹೀಗೆ ಪ್ರತಿಯೊಂದಕ್ಕೂ ಗಮನ ಕೊಟ್ಟೆವು. ನೀವು ಒಂದು ತಂಡವಾಗಿ ಹೆಚ್ಚು ಕ್ರಿಯಾಶೀಲವಾಗಬೇಕು. ನಾನು ನನ್ನ ತಂಡಕ್ಕೆ ಯಾವಾಗಲೂ 3 ವರ್ಷಗಳ ನಂತರದ ಯೋಜನೆಯನ್ನು ತೋರಿಸಿ ಈಗಿನಿಂದಲೇ ಕಾರ್ಯಪ್ರವೃತ್ತವಾಗುವಂತೆ ಹೇಳುತ್ತೇನೆ.

ಈಗಾಗಲೇ ಜಂಬೋಕಿಂಗ್ ಏನಿಲ್ಲವೆಂದರೂ 100 ಮಿಲಿಯನ್ ವಡಾಪಾವ್​​ಗಳನ್ನು ಮಾರಾಟ ಮಾಡಿದೆ. ಪದವಿ ಮುಗಿದ ಬಳಿಕ ಕೆಲಸ ಗಿಟ್ಟಿಸುವುದು ಧೀರಜ್ ಅವರಿಗೆ ಕಷ್ಟವೇ ಆಗಿರಲಿಲ್ಲ. ಆದರೆ ಅಲ್ಪ ಯಶಸ್ಸಿಗೆ ಅವರು ಶಾರ್ಟ್​ಕಟ್ ಹಾದಿ ಹಿಡಿಯಲಿಲ್ಲ. ಯಾರು ಅತ್ಯಂತ ಕಠಿಣ ಪರಿಶ್ರಮದಲ್ಲಿ ಮತ್ತು ಸುದೀರ್ಘ ಯಶಸ್ಸಿನಲ್ಲಿ ನಂಬಿಕೆ ಇಡುತ್ತಾರೋ ಅವರಿಗೆ ಮಾತ್ರ ಯಶಸ್ಸು ಲಭಿಸುತ್ತದೆ ಎನ್ನುವುದು ಅವರ ಸ್ಫೂರ್ತಿ ವಾಕ್ಯ.