ಕನ್ನಡಿಗರ ಒಡನಾಡಿ- ಕೃಷಿಕರ ಜೀವನಾಡಿ- ಕೇವಲ ನೆನಪಾಗಿ ಉಳಿಯಲಿದೆ ಮೈಸೂರು ಬ್ಯಾಂಕ್

ಟೀಮ್​ ವೈ.ಎಸ್​. ಕನ್ನಡ

1

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು. ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೊಡ್ಡ ಹೆಸರಾಗಿತ್ತು. 104 ವರ್ಷಗಳ ಅದ್ಭುತ ಇತಿಹಾಸ ಹೊಂದಿತ್ತು. ಆದ್ರೆ ಇನ್ನುಮುಂದೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕೇವಲ ನೆನಪು ಮಾತ್ರ. ಕನ್ನಡಿಗರ ಹೆಮ್ಮೆಯ ಬ್ಯಾಂಕ್ ಆಗಿದ್ದ ಮೈಸೂರು ಬ್ಯಾಂಕ್ ಈಗ ಸ್ಟೇಟ್ ಬ್ಯಾಂಕ್ ಇಂಡಿಯಾ ಜೊತೆಗೆ ವಿಲೀನವಾಗಿದೆ. 104 ವರ್ಷಗಳ ಇತಿಹಾಸ ಅಂತ್ಯ ಕಂಡಿದೆ. ಹಲವರು ಗ್ರಾಹಕರನ್ನು, ಉದ್ಯಮಿಗಳನ್ನು ಹೊಂದಿದ್ದ ಮೈಸೂರು ಬ್ಯಾಂಕ್ ಕನ್ನಡಿಗರ ಪಾಲಿಗೆ ನಿಜಕ್ಕೂ ಆತ್ಮವಿಶ್ವಾಸದ ಪ್ರತೀಕವಾಗಿತ್ತು. ಕನ್ನಡಿಗರ ಸ್ವಾಭಿಮಾನದ ಶಕ್ತಿಯಾಗಿತ್ತು. ಆದ್ರೆ ಈಗ ಮೈಸೂರು ಬ್ಯಾಂಕ್ ಇಲ್ಲ. ಬದಲಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆಗೆ ಒಡನಾಡಿಯಾಗಿ ಬಿಟ್ಟಿದೆ.

ಕನ್ನಡಿಗರ ಒಡನಾಡಿ

ಎಸ್​ಬಿಎಂ ಕನ್ನಡಿಗರ ಒಡನಾಡಿಯಾಗಿತ್ತು. ಮೈಸೂರು ಸಂಸ್ಥಾನದ ಜನರಿಗೆ ಉಪಯೋಗವಾಗಲಿ ಎಂದು 1913ರಲ್ಲಿ ಮೈಸೂರು ಬ್ಯಾಂಕ್ ಲಿಮಿಟೆಡ್​ ಅನ್ನು ಸ್ಥಾಪಿಸಲಾಗಿತ್ತು. IVನೇ ಕೃಷ್ಣರಾಜ ಒಡೆಯರ್ ಆಳ್ವಿಕೆ ಕಾಲದಲ್ಲಿ ಈ ಬ್ಯಾಂಕ್ ಆರಂಭವಾಗಿತ್ತು. ಅಕ್ಟೋಬರ್ 2ರಂದು ಆರಂಭವಾಗಿದ್ದ ಈ ಬ್ಯಾಂಕ್​​ನಲ್ಲಿ ಆರಂಭದಲ್ಲಿದ್ದ ಠೇವಣಿ 20 ಲಕ್ಷ ರೂಪಾಯಿಗಳು. ಅಂದಿನಿಂದ ಇಲ್ಲಿ ತನಕ ಅದು ಕಾರ್ಯನಿರ್ವಹಿಸಿತ್ತು. ಆರಂಭದಲ್ಲಿ ಖಾಸಗಿ ಬ್ಯಾಂಕ್ ಆಗಿ ಆರಂಭವಾದ ಮೈಸೂರು ಬ್ಯಾಂಕ್ ಸ್ವಾತಂತ್ರ್ಯಾ ನಂತರ ನಡೆದ ಬ್ಯಾಂಕ್​ಗಳ ರಾಷ್ಟ್ರೀಕರಣ ವೇಳೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಅನ್ನುವ ಮಾನ್ಯತೆಯನ್ನು ಪಡೆದುಕೊಂಡಿತ್ತು. ಕರ್ನಾಟಕದ ಅತೀ ದೊಡ್ಡ ಬ್ಯಾಂಕ್ ಆಗಿ ಬೆಳೆದ ಎಸ್​ಬಿಎಂ ರಾಜ್ಯದ ಮೂಲೆ ಮೂಲೆಗಳಲ್ಲಿ ಶಾಖೆಗಳನ್ನು ಹೊಂದಿತ್ತು. ಅಷ್ಟೇ ಅಲ್ಲ ಹೊರ ರಾಜ್ಯಗಳಲ್ಲೂ ಶಾಖೆಗಳನ್ನು ಹೊಂದಿ ಕನ್ನಡಿಗರ ಹೆಮ್ಮೆಯ ಪ್ರತೀಕವಾಗಿತ್ತು. ಎಸ್​ಬಿಎಂ ಒಟ್ಟಾರೆ 976 ಶಾಖೆಗಳನ್ನು ಹೊಂದಿತ್ತು. ಅಷ್ಟೇ ಅಲ್ಲ ಸುಮಾರು 10,627ಕ್ಕಿಂತಲೂ ಅಧಿಕ ಕಾರ್ಮಿಕರ ಪಾಲಿಗೆ ಅನ್ನದಾತನಾಗಿ ಬೆಳೆದಿತ್ತು. ಕರ್ನಾಟಕದಲ್ಲೇ ಸುಮಾರು ಶೇಕಡಾ 79 ಅಂದ್ರೆ 772 ಬ್ರಾಂಚ್​ಗಳನ್ನು ಹೊಂದಿತ್ತು. ಬೆಂಗಳೂರಿನಲ್ಲಿ ಮುಖ್ಯ ಕಚೇರಿಗಳನ್ನು ಹೊಂದಿದ್ದ ಎಸ್​ಬಿಎಂ ಮೈಸೂರು, ಮಂಗಳೂರು, ಮಂಡ್ಯ, ಹಾಸನ, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ತುಮಕೂರು, ಕೋಲಾರಾ, ಚೆನ್ನೈ, ಕೊಯಂಬತ್ತೂರು, ಹೈದ್ರಾಬಾದ್, ಮುಂಬೈ ಮತ್ತು ನವದೆಹಲ್ಲಿ ರೀಜನಲ್ ಆಫೀಸ್​​ಗಳನ್ನು ಹೊಂದಿತ್ತು. ಅಷ್ಟೇ ಅಲ್ಲ ಭಾರತದಲ್ಲಿನ ಲಾಭದಾಯಕ ಬ್ಯಾಂಕ್​ಗಳ ಪೈಕಿ ಎಸ್​​ಬಿಎಂಗೆ ದೊಡ್ಡ ಸ್ಥಾನವಿತ್ತು.

ಸರಕಾರದ ಬ್ಯಾಂಕ್..!

ಅಂದಹಾಗೇ ಎಸ್​ಬಿಎಂಗೆ ಸರಕಾರದ ಬ್ಯಾಂಕ್ ಅನ್ನುವ ಹೆಸರು ಕೂಡ ಇತ್ತು. ಯಾಕಂದ್ರೆ ಸರಕಾರದ ಖಜಾನೆ ಕೂಡ ಇದೇ ಬ್ಯಾಂಕ್ ಆಗಿತ್ತು. ರಾಜ್ಯ ಸರಕಾರದ ಬಹುತೇಕ ಉದ್ಯೋಗಿಗಳಿಗೆ ಸಂಬಳ ಆಗ್ತಾ ಇದ್ದಿದ್ದು ಇದೇ ಬ್ಯಾಂಕ್ ಖಾತೆ ಮೂಲಕ. ಅಷ್ಟೇ ಕೃಷಿ ಚಟುವಟಿಕೆಯಿಂದ ಹಿಡಿದು, ಗೃಹಸಾಲ, ವಾಹನ ಸಾಲ ಸೇರಿದಂತೆ ಎಲ್ಲಾ ವ್ಯವಹಾರಗಳಲ್ಲೂ ಗ್ರಾಹಕರ ಪಾಲಿಗೆ ಪ್ರಿಯವಾಗಿದ್ದ ಬ್ಯಾಂಕಿಂಗ್ ಕ್ಷೇತ್ರವಾಗಿತ್ತು. ಕಾವೇರಿ- ಕಲ್ಪತರು ಗ್ರಾಮೀಣ ಬ್ಯಾಂಕ್ ಪಾಲಿಗೆ ಎಸ್​ಬಿಎಂ ಮೂಲ ಬ್ಯಾಂಕ್ ಆಗಿತ್ತು ಅನ್ನುವುದನ್ನು ಮರೆಯುವ ಹಾಗಿಲ್ಲ. ಮೈಸೂರಿನಲ್ಲಿ ಮುಖ್ಯಕಚೇರಿ ಹೊಂದಿರುವ ಕಾವೇರಿ-ಕಲ್ಪತರು ಗ್ರಾಮೀಣ ಬ್ಯಾಂಕ್ ಕೃಷಿ ಹಾಗೂ ಕೃಷಿಕರ ಪಾಲಿಗೆ ಅತ್ಯಂತ ನೆಚ್ಚಿನ ಬ್ಯಾಂಕ್ ಅನ್ನುವುದನ್ನು ಮರೆಯುವ ಹಾಗಿಲ್ಲ.

ಸರ್. ಎಂ. ವಿಶ್ವೇಶ್ವರಯ್ಯನವರ ಕನಸಿನ ಬ್ಯಾಂಕ್

ಮೈಸೂರು ಬ್ಯಾಂಕ್ ಲಿಮಿಟೆಡ್ ಅನ್ನುವ ಹೆಸರಿನಿಂದ ಆರಂಭವಾಗಿದ್ದ ಎಸ್​ಬಿಎಂ ಮೈಸೂರು ಸಂಸ್ಥಾನದ ದಿವಾನರಾಗಿ ಕೆಲಸ ಮಾಡುತ್ತಿದ್ದ ಸರ್. ಎಂ. ವಿಶ್ವೇಶ್ವರಯ್ಯ ಹಾಗೂ ರಾಜನಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕನಸಿನ ಕೂಸಾಗಿತ್ತು. ಮೈಸೂರು ಸಂಸ್ಥಾನದ ಜನರಿಗೆ ಸುಲಭವಾಗಿ ಬ್ಯಾಂಕ್ ಸೇವೆ ನೀಡುವ ಉದ್ದೇಶದಿಂದ ಈ ಬ್ಯಾಂಕ್ ಆರಂಭವಾಗಿತ್ತು. 104 ವರ್ಷಗಳ ಹಿಂದೆ ಯಾವ ಉದ್ದೇಶದಿಂದ ಬ್ಯಾಂಕ್ ಆರಂಭವಾಗಿತ್ತೋ ಅದೇ ಉದ್ದೇಶದೊಂದಿಗೆ ಕೊನೆಯ ದಿನದ ತನಕ ಎಸ್​ಬಿಎಂ ಕಾರ್ಯನಿರ್ವಹಿಸಿತ್ತು.

ಸ್ಟೇಟ್​ಬ್ಯಾಂಕ್ ಜೊತೆ ವಿಲೀನ

ಕಳೆದ ಕೆಲ ವರ್ಷಗಳಿಂದ ಭಾರತದಲ್ಲಿ ಬ್ಯಾಂಕ್​ಗಳ ವಿಲೀನ ಪ್ರಕ್ರಿಯೆ ಆರಂಭವಾಗಿತ್ತು. ಆದ್ರೆ ಎಸ್​ಬಿಎಂ 2017ರ ಮಾರ್ಚ್ 31ರ ತನಕ ಕಾರ್ಯನಿರ್ವಹಿಸಿದೆ. ಏಪ್ರಿಲ್ 1ರಿಂದ ಸ್ಟೇಟ್​ಬ್ಯಾಂಕ ಆಗಿ ಬದಲಾಗಿದೆ. ಈಗಾಗಲೇ ಶಾಖೆಗಳ ಬದಲಾವಣೆ, ಖಾತೆಗಳ ವರ್ಗಾವಣೆ ಕುರಿತಂತೆ ಮುಂದಿನ ವ್ಯವಹಾರಕ್ಕೆ ಬೇಕಾದ ಪ್ರಕ್ರಿಯೆಗಳು ನಡೆಯುತ್ತಿವೆ.

5 ಬ್ಯಾಂಕ್​ಗಳ ವಿಲೀನ

ಎಸ್​ಬಿಐ ಜೊತೆಗೆ ಸ್ಟೇಟ್ ಬ್ಯಾಂಕ್ ಮೈಸೂರು ಮಾತ್ರವಲ್ಲದೆ ಒಟ್ಟು 5 ಬ್ಯಾಂಕ್​ಗಳು ವಿಲೀನಗೊಳ್ಳುತ್ತಿವೆ. ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ, ಪಟಿಯಾಲಾ, ಟ್ರಾವಂಕೂರ್, ಹೈದರಾಬಾದ್ ಕೂಡಾ ವಿಲೀನವಾಗಲಿದೆ. ಈ ಹಿಂದೆ ಸೌರಾಷ್ಟ್ರ ಮತ್ತು ಇಂದೋರ್ ಬ್ಯಾಂಕುಗಳೂ ವಿಲೀನವಾಗಿದ್ದವು. ವಿಲೀನದಿಂದ ಒಟ್ಟು 22,000 ಕ್ಕೂ ಅಧಿಕ ಶಾಖೆಗಳು ಮತ್ತು 58,000ಕ್ಕೂ ಅಧಿಕ ಎಟಿಎಂಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬುಟ್ಟಿಗೆ ಬಂದು ಬೀಳಲಿವೆ. ಅಷ್ಟೇ ಅಲ್ಲ ಭಾರತದ ಅತೀ ದೊಡ್ಡ ಬ್ಯಾಂಕ್ ಆಗಿ ಎಸ್​ಬಿಐ ರೂಪುಗೊಳ್ಳಲಿದೆ. ವಿಶ್ವದ ಅತೀ ದೊಡ್ಡ ಬ್ಯಾಂಕ್​ಗಳ ಪೈಕಿ ಎಸ್​ಬಿಐಗೂ ಸ್ಥಾನಸಿಗಲಿದೆ.

ಇದನ್ನು ಓದಿ: ನವರಸ ಸಾಧನಗಳ ಪರಿಣಿತ- ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವ ಕನ್ನಡಿಗ

ಕಸ್ಟಮರ್ಸ್​ಗೆ ನೋ ಟೆನ್ಷನ್

ಎಸ್​ಬಿಎಂ, ಎಸ್​ಬಿಐ ಜೊತೆಗೆ ವಿಲೀನಗೊಂಡರೆ ಮುಂದೇನಾಗುತ್ತೆ ಅನ್ನುವ ಟೆನ್ಷನ್ ಗ್ರಾಹಕರಲ್ಲಿ ಇರುವುದು ಸಹಜ. ಆದ್ರೆ ಎಸ್​ಬಿಎಂನ ಗ್ರಾಹಕರು ಯಾವುದೇ ಗಾಬರಿಯಾಗಬೇಕಿಲ್ಲ. ಎಸ್​ಬಿಎಂನಲ್ಲಿ ಖಾತೆ ಹೊಂದಿರುವ ಗ್ರಾಹಕರು ಯಾವುದೇ ರೀತಿಯಲ್ಲಿ ಗಾಬರಿಯಾಗಬೇಕಿಲ್ಲ ಎಂದು ಎಸ್​ಬಿಎಂ ಪ್ರಕಟಿಸಿದೆ. ವಿಲೀನ ಪ್ರಕ್ರಿಯೆ ಸರಿದಾರಿಗೆ ತರಲು ಎರಡು ತಿಂಗಳು ಸಮಯಾವಕಾಶವನ್ನು ಗ್ರಾಹಕರಲ್ಲಿ ಕೋರಿದೆ. ವಿಲೀನ ಪ್ರಕ್ರಿಯೆಯಿಂದಾಗಿ ಎಸ್​ಬಿಐ ಭಾರತದಲ್ಲಿ 23,500 ಶಾಖೆ, 55,000 ಎಟಿಎಂಗಳನ್ನು ಹೊಂದಿರುವ ಬ್ಯಾಂಕ್ ಆಗಿ ಬದಲಾಗಲಿದೆ.

ಸಾಲಗಾರರಿಗೆ ಲಾಭ ಇದೆ

ಎಸ್​ಬಿಐ ಜೊತೆಗೆ ಎಸ್​ಬಿಎಂ ಸೇರಿಕೊಂಡಿರುವುದರಿಂದ ಕನ್ನಡಿಗರಿಗೆ ಸಾಕಷ್ಟು ಬೇಜಾರು ಆಗಬಹುದು. ಆದ್ರೆ ಸಾಲಗಾರರು ಮಾತ್ರ ಕೊಂಚ ಖುಷಿ ಪಡುವುದು ಗ್ಯಾರೆಂಟಿ. ಎಸ್.ಬಿ.ಎಂಗೆ ಹೋಲಿಸಿದರೆ ಎಸ್.ಬಿ.ಐ ನಲ್ಲಿ ಸಾಲದ ಮೂಲ ದರಗಳು ಕಡಿಮೆ ಇದೆ. ಹಾಗಾಗಿ ಸಾಲಗಾರರಿಗೆ ವಿಲೀನದಿಂದ ಲಾಭವಾಗಲಿದೆ.

ಒಟ್ಟಿನಲ್ಲಿ ಕನ್ನಡಿಗರ ಪಾಲಿನ ಹೆಮ್ಮೆಯಾಗಿದ್ದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇನ್ನು ಮುಂದೆ ಕೇವಲ ನೆನಪು ಮಾತ್ರ. ಮೈಸೂರು ಬ್ಯಾಂಕ್ ಅಂದಾಗ ಮೈಸೂರು ಸಂಸ್ಥಾನದ ನೆನಪಾಗುತ್ತಿತ್ತು. ವಿಶ್ವೇಶ್ವರಯ್ಯನವರ ಚಿತ್ರವೊಂದು ಕಣ್ಣ ಮುಂದೆ ಹಾದು ಹೋಗುತ್ತಿತ್ತು. ಆದ್ರೆ ಇನ್ನುಮುಂದೆ ಎಸ್​ಬಿಎಂ ಇಲ್ಲ ಬದಲಾಗಿ ಎಸ್​ಬಿಐ ಮಾತ್ರ ಕಾರ್ಯನಿರ್ವಹಿಸಲಿದೆ. 

ಇದನ್ನು ಓದಿ:

1. ಕ್ರೆಡಿಟ್ ಕಾರ್ಡ್​ಗಿಂತ ಡೆಬಿಟ್ ಕಾರ್ಡ್ ವಾಸಿ- ನೋಟ್ ಬ್ಯಾನ್ ಬಳಿಕ ವ್ಯವಹಾರದಲ್ಲಿ ಡೆಬಿಟ್ ಕಾರ್ಡ್ ಫಸ್ಟ್

2. ಆಡುವ ವಯಸ್ಸಿನಲ್ಲಿ ಉದ್ಯಮದ ಕನಸು- 13ನೇ ವರ್ಷದಲ್ಲೇ ಸಿಇಒ ಆಗಿ ದಾಖಲೆ ಬರೆದ ಯುವ ಉದ್ಯಮಿ

3. 500 ರೂಪಾಯಿ ಸಂಬಳದಿಂದ ಆರಂಭವಾದ ಜೀವನ- ಕೋಟಿ ದಾಟಿದೆ ತಿಂಗಳ ಆದಾಯ

Related Stories