ಇದು ‘ಉತ್ಕರ್ಷ’- ಇದರಲ್ಲಿದೆ ಯಶಸ್ಸಿನ ಸ್ಪರ್ಶ

ಟೀಮ್​ ವೈ.ಎಸ್​​.ಕನ್ನಡ

1

ವಿಶ್ವದ ಅತ್ಯಂತ ಹಳೆಯ ಅಭಿವೃದ್ಧಿ ಹಣಕಾಸು ಸಂಸ್ಥೆ ಯುನೈಟೆಡ್ ಕಿಂಗ್‍ಡಮ್‍ನ ಕಾಮನ್‍ವೆಲ್ತ್ ಡೆವೆಲಪ್‍ಮೆಂಟ್ ಕಾರ್ಪೊರೇಷನ್ ಮತ್ತು ಸಾಹಸೋದ್ಯಮ ಬಂಡವಾಳ ನಿಧಿಗಳಿಗೆ ಮೀಸಲಾದ, ಹಾಗೂ ಭಾರತದಲ್ಲಿ ಕೆಳ ಹಂತದ ಗ್ರಾಹಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲಸ ಮಾಡುತ್ತಿರುವ ಅತಿ ದೊಡ್ಡ ಸಂಸ್ಥೆಗಲ್ಲಿ ಒಂದಾದ ಲೋಕ್ ಕ್ಯಾಪಿಟಲ್ ಕೈ ಜೋಡಿಸಿವೆ. ಈ ಮೂಲಕ ಡಿ ಸರಣಿಯ ಅಡಿಯಲ್ಲಿ ಉತ್ಕರ್ಷ್ ಮೇಕ್ರೋ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್‍ಗೆ 2.10 ಕೋಟಿ ಡಾಲರ್‍ನಷ್ಟು ಬಂಡವಾಳ ಹೂಡಿಕೆ ಮಾಡುವ ಕುರಿತು ಘೋಷಣೆ ಮಾಡಿವೆ.

ಡಿ ಸರಣಿಯಲ್ಲಿ ಘೋಷಣೆಯಾಗಿರುವ ಈ ನಿಧಿಯನ್ನು ಕಂಪನಿಯ ಸೇವೆ ಮತ್ತು ಉತ್ಪನ್ನಗಳನ್ನು ಹೆಚ್ಚಿಸಿಕೊಳ್ಳಲು ಹಾಗೂ ಈಗಿರುವ ಮಾರುಕಟ್ಟೆಯಲ್ಲಿ ಅಭಿವೃದ್ಧಿ ಹೊಂದುತ್ತಲೇ, ಭೌಗೋಳಿಕವಾಗಿ ಬೇರೆ ಬೇರೆ ಪ್ರದೇಶಗಳಿಗೆ ವಿಸ್ತರಿಸಿಕೊಳ್ಳಲು ಉಪಯೋಗಿಸಲಾಗುವುದು. ಈಗಾಗಲೇ ಬಂಡವಾಳ ಹೂಡಿರುವ ಐಎಫ್‍ಸಿ, ಎನ್‍ಎಮ್‍ಐ ಮತ್ತು ಆವಿಷ್ಕಾರ್ ಕೂಡ ಈ ಸುತ್ತಿನ ಫಂಡಿಂಗ್‍ನಲ್ಲಿ ಭಾಗವಹಿಸಿದ್ದರು.

ವಾರಣಾಸಿ ಮೂಲದ ಉತ್ಕರ್ಷ್​ ಅನ್ನು 2009ರಲ್ಲಿ ಗೋವಿಂದ್ ಸಿಂಗ್ ಎಂಬುವವರು ಸ್ಥಾಪಿಸಿದ್ರು. ಉತ್ತರ ಹಾಗೂ ಮಧ್ಯ ಭಾರತದ ಸೌಲಭ್ಯ ವಂಚಿತರಿಗೆ ಕಿರು ಬಂಡವಾಳದ ಉತ್ಪನ್ನಗಳನ್ನು ಒದಗಿಸುವ ಕೆಲಸ ಮಾಡುತ್ತದೆ ಈ ಉತ್ಕರ್ಷ್. ಈಶಾನ್ಯ ಹಾಗೂ ದಕ್ಷಿಣ ಭಾರತಕ್ಕೆ ಹೋಲಿಸಿದ್ರೆ ಈ ಭಾಗಗಳಿಗೆ ಹಣಕಾಸಿನ ಸೌಲಭ್ಯ ಅಷ್ಟಾಗಿ ತಲುಪಿಲ್ಲದಿರುವುದೇ ಉತ್ಕರ್ಷ್ ಈ ಪ್ರದೇಶಗಳತ್ತ ಹೆಚ್ಚು ಗಮನ ಹರಿಸಲು ಕಾರಣ.

ಜನರಿಗೆ ಸಾಲ ಹಾಗೂ ಪಿಂಚಣಿಗಳನ್ನು ಒದಗಿಸುವ ಮೂಲಕ ಹಾಗೂ ಸಣ್ಣ ಉದ್ದಿಮೆಗಳಿಗೆ ಸಾಲ ನೀಡುವ ಮೂಲಕ ವಿಶಾಲ ಅವಕಾಶಗಳಿರುವ ಈ ವಲಯಕ್ಕೆ ಉತ್ಕರ್ಷ್ ಕಾಲಿಟ್ಟಿದೆ. ಮಹಿಳೆಯರನ್ನೇ ಹೆಚ್ಚು ಕೇಂದ್ರೀಕರಿಸಿರುವ ಪರಿಣಾಮ, ಕಂಪನಿಯ ಗ್ರಾಹಕರೂ ಮಹಿಳೆಯರೇ ಆಗಿದ್ದಾರೆ. ಕಡಿಮೆ ಆದಾಯದ ಮಹಿಳೆಯರಿಗಾಗಿಯೇ ವಿಶೇಷವಾಗಿ ಜಂಟಿ ಹೊಣೆಗಾರಿಕೆಯ ಗುಂಪು ಸಾಲವನ್ನು ವಿನ್ಯಾಸಗೊಳಿಸಲಾಗಿದೆ. ಉತ್ಕರ್ಷ್ ಕಾರ್ಯನಿರ್ವಹಿಸುತ್ತಿರುವ ರಾಜ್ಯಗಳಲ್ಲಿ ಸುಮಾರು 4 ಲಕ್ಷದಷ್ಟು ಆರ್ಥಿಕವಾಗಿ ಹೊರತುಪಡಿಸಿದ ಮಹಿಳೆಯರು ಈ ಸೇವೆಗಳನ್ನು ಪಡೆದಿದ್ದಾರೆ.

ಉತ್ಕರ್ಷ್ ಮೈಕ್ರೋ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್, ಭಾರತೀಯ ರಿಸರ್ವ್ ಬ್ಯಾಂಕ್‍ನಿಂದ ಬ್ಯಾಂಕಿಂಗ್ ರಹಿತ ಹಣಕಾಸು ಕಂಪನಿಯಾಗಿ (Non Banking Finance Company-MFI (NBFC-MFI)) ನೋಂದಣಿಯಾಗಿದೆ. ಉತ್ಕರ್ಷ್ ತಾನು ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರಗಳಲ್ಲಿ, ಕೌಶಲ್ಯವಿದ್ದರೂ ಆರ್ಥಿಕ ತೊಂದರೆಯಿಂದ ಬಳಲುತ್ತಿರುವ ಜನರಿಗೆ ಹಣಕಾಸು ಹಾಗೂ ಹಣಕಾಸೇತರ ಸೇವೆಗಳನ್ನು ಒದಗಿಸುತ್ತದೆ. ಆರಂಭದಲ್ಲಿ ಜಂಟಿ ಹೊಣೆಗಾರಿಕೆ ರಚನೆ ಮತ್ತು ವಿಮೆ ಅಡಿಯಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿತ್ತು. ಆದ್ರೆ ಕ್ರಮೇಣ ಚಿಕ್ಕ ಉದ್ಯಮಗಳು ಹಾಗೂ ಪಿಂಚಣಿಗಳನ್ನೂ ನೀಡಲು ಪ್ರಾರಂಭಿಸಿರೋದು ವಿಶೇಷ.

ಇಷ್ಟು ಮಾತ್ರವಲ್ಲಿ ಸಮುತ್ಕರ್ಷ್ ವೆಲ್​​ಫೇರ್ ಸೊಸೈಟಿಯೊಂದಿಗೆ ಸೇರಿ ವೃತ್ತಿಪರ ತರಬೇತಿ ಹಾಗೂ ಮಾರುಕಟ್ಟೆ ಸಂಪರ್ಕಗಳು, ಸೌರ ಶಕ್ತಿ ಉತ್ಪಾದನೆ, ಆರೋಗ್ಯ ಸೇವೆ ಮತ್ತು ಆರ್ಥಿಕ ಜಾಗೃತಿ ತರಬೇತಿಗಳನ್ನೂ ಉತ್ಕರ್ಷ್ ನೀಡುತ್ತಿದೆ.

ಸದ್ಯ ಉತ್ತರ ಪ್ರದೇಶ, ಬಿಹಾರ, ಉತ್ತರಾಖಂಡ್, ದೆಹಲಿ, ಹರ್ಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಹಿಮಾಚಲ ಪ್ರದೇಶಗಳ ಒಟ್ಟು 56 ಜಿಲ್ಲೆಗಳಲ್ಲಿ ಉತ್ಕರ್ಷ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ. ಈ ರಾಜ್ಯಗಳಲ್ಲಿ ಒಟ್ಟು 213 ಶಾಖೆಗಳಿದ್ದು, 4.80 ಲಕ್ಷಕ್ಕಿಂತಲೂ ಹೆಚ್ಚು ಸಕ್ರಿಯ ಗ್ರಾಹಕರಿದ್ದಾರೆ. 2014ರ ನವೆಂಬರ್‍ವರೆಗಿನ ಮಾಹಿತಿ ಪ್ರಕಾರ ಉತ್ಕರ್ಷ್ 552 ಕೋಟಿ ರೂಪಾಯಿಯಷ್ಟು ಸಾಲ ಬಂಡವಾಳ ನೀಡಿದೆ.

ಬಂಡವಾಳ ಹೂಡಿಕೆ ಕುರಿತು ಮಾತನಾಡುವ ಉತ್ಕರ್ಷ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ, ಗೋವಿಂದ್ ಸಿಂಗ್, ‘ಕಾಮನ್‍ವೆಲ್ತ್ ಡೆವೆಲಪ್‍ಮೆಂಟ್ ಕಾರ್ಪೊರೇಷನ್ ಮತ್ತು ಲೋಕ್ ಕ್ಯಾಪಿಟಲ್ ನಮ್ಮ ಕಂಪನಿಯಲ್ಲಿ ಬಂಡವಾಳ ಹೂಡಲು ಮುಂದಾಗಿರೋದು ತುಂಬಾ ಖುಷಿ ನೀಡಿದೆ. ನಮ್ಮ ಪ್ರಸಕ್ತ ಬಂಡವಾಳ ಹೂಡಿಕೆದಾರರೂ ಕೂಡ ಈ ಸುತ್ತಿನಲ್ಲಿ ಭಾಗವಹಿಸುತ್ತಿರುವುದು, ನಮ್ಮ ಮೇಲಿನ ಅವರ ನಂಬಿಕೆ ತೋರಿಸುತ್ತದೆ. ಈ ಬೆಳವಣಿಗೆಗಳು ನಮ್ಮಲ್ಲಿ ಇನ್ನಷ್ಟು ಸ್ಫೂರ್ತಿ ತುಂಬಿದೆ. ಈ ಬಂಡವಾಳದ ಒಳಹರಿವಿನಿಂದ ಮತ್ತಷ್ಟು ಜಿಲ್ಲೆಗಳಲ್ಲಿ ಕಾರ್ಯ ವಿಸ್ತರಿಸಿ, ವೈವಿಧ್ಯಮಯ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಜನರಿಗೆ ನೀಡಬಯಸುತ್ತೇವೆ. ಆರ್ಥಿಕ ಪ್ರಾರಂಭಗಳಲ್ಲಿ ಹೆಚ್ಚು ಜವಾಬ್ದಾರಿವಹಿಸಿ, ಸಾಮಾಜಿಕವಾಗಿ ಮಧ್ಯಸ್ಥಿಕೆ ವಹಿಸಿ, ಗ್ರಾಹಕರೊಂದಿಗೆ ಕೈ ಜೋಡಿಸಿ ಅವರ ಉನ್ನತಿಗಾಗಿ ಹೆಚ್ಚು ಶ್ರಮಿಸಲು ಪ್ರೇರೇಪಣೆ ದೊರೆತಿದೆ’ ಅಂತಾರೆ.

ಲೋಕ್ ಕ್ಯಾಪಟಿಲ್‍ನ ಎರಡು ನಿಧಿಗಳಿಂದ ಒಟ್ಟು 86 ಮಿಲಿಯನ್ ಡಾಲರ್‍ನಷ್ಟು ಹಣವನ್ನು ನಿರ್ವಹಿಸುತ್ತ್ತಿದೆ. ಈ ನಿಧಿಗಳನ್ನು ಇದುವರೆಗೆ 19 ಸಾಮಾಜಿಕ ಉದ್ಯಮಗಳಲ್ಲಿ ತೊಡಗಿಸಲಾಗಿದೆ. ಅವುಗಳೇ ಈ ಗುಂಪಿನ ರಚನೆಯ ಕೇಂದ್ರಗಳಾಗಿವೆ. ಸಾಮಾಜಿಕ ಉದ್ದಿಮೆಗಳನ್ನು ಪ್ರೋತ್ಸಾಹಿಸುವ ಮೂಲಕ, ಮೂಲಭೂತ ಸೇವೆಗಳನ್ನು ನೀಡುವ ಮೂಲಕ, ವಾಣಿಜ್ಯವಾಗಿ ಎಲ್ಲರಿಗೂ ಕೈಗೆಟುಕುವ ರೀತಿಯಲ್ಲಿ ಒದಗಿಸುವುದೇ ಲೋಕ್ ಕ್ಯಾಪಿಟಲ್ಸ್‍ನ ಗುರಿಯಾಗಿದೆ. ಈ ಸಾಮಾಜಿಕ ಉದ್ಯಮಗಳನ್ನು ವೃತ್ತಿಪರತೆಯಲ್ಲಿ, ಹಾಗೂ ಆರ್ಥಿಕವಾಗಿ ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಲೋಕ್ ಕ್ಯಾಪಿಟಲ್ ಪ್ರತಿಭಾನ್ವಿತ ಮತ್ತು ದೂರದೃಷ್ಟಿಯಿರುವವರನ್ನು ಪಾಲುದಾರರನ್ನಾಗಿ ಮಾಡಿಕೊಳ್ಳಲು ಚಿಂತನೆ ನಡೆಸಿದೆ.

ಉತ್ಕರ್ಷ್‍ನಲ್ಲಿ ಬಂಡವಾಳ ಹೂಡುವ ಕುರಿತು ಘೋಷಣೆಯಾದ ಬೆನ್ನಲ್ಲೇ ಲೋಕ್ ಅಡ್ವೈಸರಿ ಸರ್ವೀಸಸ್‍ನ ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿಶಾಲ್ ಮೆಹ್ತಾ, ‘ಆರ್ಥಿಕವಾಗಿ ಬಂಡವಾಳವನ್ನೂ ಒಟ್ಟುಗೂಡಿಸಿ, ಸಣ್ಣ ಉದ್ದಿಮೆಗಳು ಅಭಿವೃದ್ಧಿ ಹೊಂದುತ್ತಿರುವ ಈ ಸಮಯದಲ್ಲಿ, ಅವುಗಳಿಗೆ ದೃಢವಾದ ಸಾಂಸ್ಥಿಕ ರಚನೆ ಹೊಂದಲು ಒಳ್ಳೆಯ ಅವಕಾಶ ಮತ್ತು ಸ್ಥಳಾವಕಾಶವಿದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡಿರುವ ನಮಗೆ ದೂರದೃಷ್ಟಿ ಹಾಗೂ ಸಾಮರ್ಥ್ಯವಿರುವ ಉದ್ಯಮಗಳಿಗೆ ಬಂಡವಾಳ ಹೂಡುವುದು ಬಹು ಮುಖ್ಯವಾಗಿದೆ. ಉತ್ಕರ್ಷ್ ಅಂತಹ ಸಂಸ್ಥೆಗಳಲ್ಲೊಂದು ಅಂತ ಹೇಳಲು ಇಚ್ಛಿಸುತ್ತೇನೆ. ಗೋವಿಂದ್ ಸಿಂಗ್ ಮತ್ತು ತಂಡ, ಕ್ಲಿಷ್ಟಕರ ಭೌಗೋಳಿಕ ರಚನೆಯಲ್ಲಿ ಹಣಕಾಸಿನ ಸಂಬಂಧಗಳನ್ನು ಮತ್ತು ಪ್ರಕ್ರಿಯೆಗಳನ್ನು ಗಮನದಲ್ಲಿಟ್ಟುಕೊಂಡೇ ಒಂದು ಶಕ್ತಿಯುತ ಸಂಸ್ಥೆಯನ್ನು ಕಟ್ಟಿದ್ದಾರೆ.’ ಅಂತ ಉತ್ಕರ್ಷ್‍ನಲ್ಲಿ ಬಂಡವಾಳ ಹೂಡಲು ಕಾರಣಗಳನ್ನು ತಿಳಿಸುತ್ತಾರೆ.

ಲೇಖಕರು: ಜೈ ವರ್ಧನ್​​
ಅನುವಾದಕರು: ವಿಶಾಂತ್​​​​​​​

Related Stories