ವನ್ಯಜೀವಿಗಳ ರಕ್ಷಕ: ಚೇತನ್ ಶರ್ಮಾ

ವಿಸ್ಮಯ

ವನ್ಯಜೀವಿಗಳ ರಕ್ಷಕ: ಚೇತನ್ ಶರ್ಮಾ

Thursday March 24, 2016,

3 min Read

ಬೆಂಗಳೂರು ಎಂಬ ಕಾಕ್ರಿಟ್ ಕಾಡಿನಲ್ಲಿ ಎಲ್ಲರೂ ತಮ್ಮ ಕೆಲಸದಲ್ಲಿ ಬ್ಯೂಸಿಯಾಗಿರುತ್ತಾರೆ. ಇನ್ನು ಪ್ರಾಣಿಗಳ ಪ್ರೇಮ ದೂರದ ಮಾತು. ಶೇಕಡ 100ರಲ್ಲಿ 20 ಜನ್ರು ಮಾತ್ರ ತಮ್ಮ ಬ್ಯೂಸಿ ಲೈಫ್​ನಲ್ಲಿ ಪ್ರಾಣಿಗಳಿಗೂ ಸಮಯ ಮೀಸಲಾಡುತ್ತಾರೆ.. ಆದ್ರೆ ಇಲ್ಲೊಬ್ಬ ವನ್ಯಜೀವಿಗಳ ರಕ್ಷಣಿಯ ಕೆಲಸದಲ್ಲಿ ನಿರತನಾಗಿದ್ದಾನೆ. ಓದಿದ್ದು 10ನೇ ಕ್ಲಾಸ್, ಆಗಿದ್ದು ಮಾತ್ರ ವನ್ಯಜೀವಿಯ ಮುಖ್ಯ ರಕ್ಷಕರಾಗಿ.. ಹೆಸರು ಚೇತನ್ ಶರ್ಮಾ.. ಬೆಂಗಳೂರಿನ ನಿವಾಸಿ.

image


ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪ್ರೀತಿ, ಕ್ರೇಜ್ಹ್​ ಇರುತ್ತೆ.. ಕೆಲವ್ರಿಗೆ ಬೈಕ್ ಕೊಂಡುಕೊಳ್ಳಬೇಕು ಅಂತ ಇದ್ರೆ, ಇನ್ನು ಹಲವರಿಗೆ ಬೇರೆ ಬೇರೆ ಕ್ರೇಜ್ ಇರುತ್ತೆ.. ಹಾಗೇ ಚೇತನ್ ಶರ್ಮಾರಿಗೆ ಬೈಕ್ ಅಂದ್ರೆ ಎಲ್ಲಿಲ್ಲದ ಪ್ರೀತಿ.. ಇದಕ್ಕಾಗಿ ಎಲ್ಲೆಂದ್ರಲ್ಲಿ ಕೆಲಸವನ್ನು ಮಾಡಿದ್ರು.. ಕೊನೆಗೂ ಬೈಕ್ ಖರೀದಿ ಮಾಡಿದ್ರು.. ಆದ್ರೆ ಕೆಲಸಕ್ಕೆ ಗುಡ್ ಬೈ ಹೇಳಿದ್ರು. ನಂತ್ರ ಅವ್ರ ಪ್ರೀತಿಯ ಬೈಕ್ ಅನ್ನು ಉಳಿಸಿಕೊಳ್ಳೊಕ್ಕೆ ಪೀಪಲ್ ಫಾರ್ ಅನಿಮಲ್ಸ್ ಆಸ್ಪತ್ರೆಗೆ ಆಂಬುಲೇನ್ಸ್ ಚಾಲಕನಾಗಿ ಸೇರಿಕೊಂಡ್ರು.. ಹಾಗೇ ಒಮ್ಮೆ ಇದಕ್ಕಿದ್ದಂತೆ ಆಸ್ಪತ್ರೆಯಲ್ಲಿ ಹಾವು ಕಾಣಿಸಿಕೊಂಡಿತ್ತು.. ಆಗ ಶರ್ಮಾ ಅವ್ರು ಆ ಹಾವು ಹಿಡಿದ್ರು..ನಂತ್ರ ಈ ವಿಷ್ಯಆಸ್ಪತ್ರೆಯವ್ರು ಚಾಲಕನಿಂದ ವನ್ಯ ಜೀವಿಗಳ ರಕ್ಷಣಿಯ ಕೆಲಸಕ್ಕೆ ಸೇರಿಸಿಕೊಂಡ್ರು..ಆಗಿನಿಂದ ಆರಂಭವಾದ ಇವ್ರ ವನ್ಯ ಜೀವಿ ಪ್ರೇಮ ನಿರಂತರವಾಗಿದೆ.

ಇದನ್ನು ಓದಿ: ಜನರಲ್ Knowledge ಅಲ್ಲ, ಜನರ Knowledge ಇಂಪಾರ್ಟೆಂಟ್.! - ಆದರ್ಶ್ ಬಸವರಾಜ್

ವನ್ಯ ಜೀವಿಗಳನ್ನು ರಕ್ಷಿಸಲು ಸಂಸ್ಥೆಯ ರಕ್ಷಣಾ ವ್ಯವಸ್ಥಾಪಕರೊಂದಿಗೆ ನಿತ್ಯ ಹೋಗುತ್ತಿದ್ದ ಅವರು, ಹದ್ದು, ಜಿಂಕೆ, ಗರುಡ, ಹಾವು ಹೀಗೆ ವನ್ಯ ಪ್ರಾಣಿ ಪಕ್ಷಿಗಳನ್ನು ರಕ್ಷಿಸಲು ಸಹಾಯ ಮಾಡುತ್ತಿದ್ದರು. ಹೀಗೆ ಸಹಾಯ ಮಾಡುತ್ತಲೇ ವನ್ಯ ಜೀವಿಗಳ ರಕ್ಷಣೆ ಮಾಡುವುದನ್ನೂ ಕಲಿತ ಚೇತನ್‌, ಇಂದು ಅದೇ ಸಂಸ್ಥೆಯಲ್ಲಿ ಮುಖ್ಯ ರಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

" ಅಂದಿನಿಂದ ನನ್ನ ಜೀವನ ಹೊಸದಾಗಿ ಪ್ರಾರಂಭವಾಯಿತು. ಇದಾದ ನಂತರ ನನಗೆ ಎಂದೂ ಕೆಲಸ ಬಿಡುವ ಆಲೋಚನೆ ಮನಸ್ಸಿಗೆ ಬಂದೇ ಇಲ್ಲ. ಇಲ್ಲಿ ಕೆಲಸಕ್ಕೆ ಸೇರುವ ಮುನ್ನ ಎಲ್ಲೂ ಸರಿಯಾಗಿ ಕೆಲಸ ಮುಂದುವರೆಸುತ್ತಲೇ ಇರಲಿಲ್ಲ. ಚಾಲಕನಾಗಿದ್ದಾಗ ನಾನು ಸಂಸ್ಥೆಯಲ್ಲಿ ಆಶ್ರಯ ಪಡೆದಿರುವ ಜೀವಿಗಳ ಆರೈಕೆಯನ್ನೂ ಮಾಡುತ್ತಿದ್ದೆ. ಅವುಗಳಿಗೆ ಊಟ ಮಾಡಿಸುತ್ತಿದ್ದೆ. ಅವುಗಳ ಪಂಜರ ಹಾಗೂ ಬೋನುಗಳನ್ನು ಸ್ವಚ್ಛಗೊಳಿಸುತ್ತಿದ್ದೆ. ಆಗಿನಿಂದಲೇ ಅವುಗಳ ಮತ್ತು ನನ್ನ ನಡುವೆ ಒಂದು ರೀತಿಯ ಬಾಂಧವ್ಯ ಬೆಸೆಯತೊಡಗಿತ್ತು. ಈಗ ಅವುಗಳಿಂದ ದೂರವಿರಲು ನನಗೆ ಆಗುವುದೇ ಇಲ್ಲ. ಅವುಗಳೂ ನನ್ನ ಜೀವನದ ಒಂದು ಭಾಗವೇ ಆಗಿವೆ" 
      - ಚೇತನ್ ಶರ್ಮಾ, ವನ್ಯ ಜೀವಿ ರಕ್ಷಕ

ವನ್ಯಜೀವಿಯ ರಕ್ಷಕನ ರಕ್ಷಣೆ ಎಷ್ಟು..?

ಪಿಎಫ್‌ಎ ಸೇರಿ ಒಂಬತ್ತು ವರ್ಷ ಕಳೆದಿರುವ ಚೇತನ್‌ ಸತತವಾಗಿ ಏಳು ವರ್ಷಗಳಿಂದ ಸಾವಿರಾರು ನಾಗರಹಾವು, ಗಾಯಗೊಂಡ ನವಿಲು, ಜಿಂಕೆಗಳು, ಕಾಡುಪಾಪ, ಲೆಕ್ಕವಿಲ್ಲದಷ್ಟು ಹದ್ದು, ಗರುಡ, ಕೋತಿ ಸೇರಿದಂತೆ ಇತರೆ ವನ್ಯ ಜೀವಿಗಳ ರಕ್ಷಣೆ ಮಾಡಿದ್ದಾರೆ. ‘ವನ್ಯ ಜೀವಿ ರಕ್ಷಿಸಲು ತರಬೇತಿಯ ಅಗತ್ಯ ಇದೆ. ಆದರೆ ನಾನು ಕೆಲಸಕ್ಕೆ ಸೇರಿದಾಗ ಯಾವುದೇ ತರಬೇತಿ ಪಡೆದಿರಲಿಲ್ಲ. ಕೆಲವನ್ನು ನೋಡನೋಡುತ್ತಲೇ ಕಲಿತರೆ, ಮತ್ತೆ ಕೆಲವನ್ನು ಅನುಭವದಿಂದ ಕಲಿತಿದ್ದೇನೆ. ಯಾವುದೇ ಪ್ರಾಣಿ ಅಥವಾ ಪಕ್ಷಿ ಅಪಾಯದಲ್ಲಿದ್ದಾಗ ರಕ್ಷಿಸುವ ಮೊದಲು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಪ್ರಾಣಿಯ ಜೊತೆಗೆ ನಮ್ಮ ಪ್ರಾಣಕ್ಕೂ ಕುತ್ತು ಬರುತ್ತದೆ. ಕೆಲವೊಮ್ಮೆ ಅದೃಷ್ಟವಶಾತ್‌ ಇಂತಹ ಪರಿಸ್ಥಿತಿಯಿಂದ ನಾನು ಪಾರಾಗಿದ್ದೇನೆ’ ಎಂದು ನೆನಪುಗಳನ್ನ ನೆನಪಿಸಿಕೊಳ್ಳುತ್ತಾರೆ ಚೇತನ್.

image


ಮುನ್ನೆಚ್ಚರಿಕೆ ಅಗತ್ಯ..

‘ಎಷ್ಟೇ ತರಬೇತಿ ಇದ್ದರೂ ಪ್ರಾಣಿಗಳನ್ನು ರಕ್ಷಿಸಲು ಹೋಗುವಾಗ ಮನಸ್ಸಿನಲ್ಲಿ ಸ್ವಲ್ಪ ಭಯ ಇದ್ದೇ ಇರುತ್ತದೆ. ಕಾರಣ ನೋವಿನಲ್ಲಿರುವ ಪ್ರಾಣಿ ಪಕ್ಷಿಗಳು ಹೆಚ್ಚಿನ ಒತ್ತಡದಲ್ಲಿರುತ್ತವೆ. ಅದರಲ್ಲೂ ಅಂತಹ ಪರಿಸ್ಥಿತಿಯಲ್ಲಿ ಅಪರಿಚಿತರು ಅವುಗಳ ಬಳಿಗೆ ಹೋದರೆ ತಡ ಮಾಡದೆ ದಾಳಿ ಮಾಡುತ್ತವೆ. ಎರಡು ವರ್ಷಗಳ ಹಿಂದೆ ಎಂ.ಜಿ. ರಸ್ತೆ ಬಳಿ ವ್ಯಕ್ತಿಯೊಬ್ಬರಿಗೆ ಸಿಕ್ಕಿದ ಗರುಡನನ್ನು ತರಲು ಹೋಗಿದ್ದೆ. ಕಾರಿನ ಡಿಕ್ಕಿಯಲ್ಲಿದ್ದ ಗರುಡ ಪಕ್ಷಿಯನ್ನು ಎತ್ತಿಕೊಳ್ಳುವಾಗ ಅದು ಭಯದಿಂದ ತನ್ನ ಕಾಲುಗಳಿಂದ ಗಟ್ಟಿಯಾಗಿ ನನ್ನ ಕೈ ಹಿಡಿದುಕೊಂಡಿತ್ತು. ಇದರಿಂದಾಗಿ ಅದರ ಉಗುರುಗಳು ಕೈಯನ್ನು ಸೀಳಿ, ಆಳವಾದ ಗಾಯವಾಗಿತ್ತು. ಅದನ್ನು ಬಿಡಿಸಿಕೊಳ್ಳುವಷ್ಟರಲ್ಲಿ ನನ್ನ ಕಣ್ಣು ತುಂಬಿ ಬಂದಿತ್ತು’ ಎಂದು ತಾವು ಎದುರಿಸಿದ ಘಟನೆಯನ್ನು ವಿವರಿಸುತ್ತಾರೆ.

ಕೊಳಕ ಮಂಡಲ ಹಿಡಿಯುವುದು ಕಷ್ಟ..

ಪ್ರತಿನಿತ್ಯ ಐದರಿಂದ ಆರು ಜೀವಿಗಳನ್ನು ರಕ್ಷಿಸುವ ಚೇತನ್‌, ದಿನವೂ ಒಂದಲ್ಲಾ ಒಂದು ಹಾವು ಹಾಗೂ ಹದ್ದನ್ನು ಕಾಪಾಡುತ್ತಾರೆ. ‘ಸ್ನೇಕ್‌ ಶರ್ಮಾ’ ಎಂದೇ ಖ್ಯಾತಿ ಪಡೆದಿರುವ ಇವರು ಹಾವುಗಳನ್ನು ಹಿಡಿಯುವುದರಲ್ಲಿ ನಿಪುಣ. ಇಲ್ಲಿಯವರೆಗೆ ಸಾವಿರಾರು ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿರುವ ಇವರಿಗೆ, ಕೊಳಕ ಮಂಡಲ ಹಾವು ಹಿಡಿಯುವುದು ಕೊಂಚ ಕಷ್ಟದ ಕೆಲಸ. ಹಾವುಗಳನ್ನು ಕೈಯಲ್ಲಿ ಮುಟ್ಟಿದಷ್ಟೂ ಹೆಚ್ಚು ಒತ್ತಡಕ್ಕೆ ಒಳಗಾಗುತ್ತವೆ. ಇದರಿಂದಾಗಿ ಅವುಗಳು ದಾಳಿ ಮಾಡುವ ಸಾಧ್ಯತೆ ಹೆಚ್ಚು. ಅದರಲ್ಲೂ ಕೊಳಕ ಮಂಡಲ ಹಾವು ಹೆಚ್ಚು ಒತ್ತಡಕ್ಕೊಳಗಾಗಿದ್ದಾಗ ಅದು ನಾಲ್ಕು ಅಡಿಯಷ್ಟು ಹಾರಿ ಕಚ್ಚುತ್ತದೆ. ಇದರಿಂದಾಗಿ ಅವುಗಳನ್ನು ಹಿಡಿಯುವುದು ತುಂಬಾ ಅಪಾಯಕಾರಿ. ಜೊತೆಗೆ ಕೋತಿಗಳು ಹಾಗೂ ಹದ್ದುಗಳು ತುಂಬಾ ಹೆಚ್ಚಾಗಿ ಗಾಯಗೊಂಡಿದ್ದಾಗ ಏನೂ ಮಾಡುವುದಿಲ್ಲ. ಆದರೆ ಕೊಂಚ ಗಾಯವಾಗಿದ್ದಾಗ ಮಾತ್ರ ಮುಟ್ಟಲು ಹೋದರೆ ದಾಳಿ ಮಾಡುತ್ತವೆ. ಹೀಗಾಗಿಯೇ ಮೊದಲು ಅವುಗಳಿಗೆ ಯಾರೂ ಕಾಣದಂತೆ ಬಟ್ಟೆ ಅಥವಾ ಬಲೆ ಹಾಕಿ, ನಂತರ ಅವುಗಳನ್ನು ಹಿಡಿಯಬೇಕೆಂಬ ಸಲಹೆ ನೀಡುತ್ತಾರೆ ಚೇತನ್.

ಒಂದು ಕರೆ ಬಂದ್ರೆ ಅಲ್ಲಿಗೆ ಪಯಣ..

ಬೆಂಗಳೂರು ಸೇರಿದಂತೆ ನಗರದ ಹೊರ ವಲಯಗಳಾದ ತುಮಕೂರು, ಕುಣಿಗಲ್‌, ದೊಡ್ಡಬಳ್ಳಾಪುರದಿಂದ ವನ್ಯಜೀವಿಗಳ ರಕ್ಷಣೆಗೆ ಕರೆ ಬಂದಾಗ ಚೇತನ್‌ ಅಲ್ಲಿಗೂ ತೆರಳಿ ರಕ್ಷಣೆ ಮಾಡಿದ್ದಾರೆ. ಅಲ್ಲದೆ ಮನೆಗಳಲ್ಲಿ ಕೋತಿ ಹಾಗೂ ಗಿಣಿ ಸಾಕಿರುವ ಕುರಿತು ಮಾಹಿತಿ ಸಿಕ್ಕರೂ ಅವುಗಳನ್ನು ರಕ್ಷಿಸಲು ತಕ್ಷಣವೇ ಹೊರಟುಬಿಡುತ್ತಾರೆ.ವನ್ಯ ಜೀವಿಗಳ ರಕ್ಷಣೆ ಮಾಡಲು ಸಂಸ್ಥೆ ವತಿಯಿಂದ ಕೇವಲ ಒಂದು ಬೈಕ್‌ ಹಾಗೂ ಕೆಲವು ಸಲಕರಣೆಗಳನ್ನು ನೀಡಲಾಗಿದೆ. ಉಳಿದಂತೆ ಎಲ್ಲವನ್ನೂ ಸ್ಥಳದಲ್ಲೇ ಹೊಂದಿಸಿಕೊಳ್ಳಬೇಕು. ಎಲ್ಲೋ 20 ಅಡಿ ಆಳದಲ್ಲಿ ಸಿಲುಕಿರುವ ಹಾವನ್ನು ರಕ್ಷಿಸಲು, ನೂರು ಅಥವಾ ಇನ್ನೂರು ಅಡಿ ಎತ್ತರದ ಮರದ ತುದಿಯಲ್ಲಿ ಸಿಲುಕಿರುವ ಹಕ್ಕಿಯನ್ನು ರಕ್ಷಿಸಲು ಏಣಿ, ಹಗ್ಗ ಬೇಕಾಗುತ್ತವೆ. ಕಾನೂನು ಬಾಹಿರವಾಗಿ ಮನೆಗಳಲ್ಲಿ ಸಾಕಿರುವ ಕೋತಿ, ಗಿಳಿ ಹಾಗೂ ಇತರೆ ಜೀವಿಗಳನ್ನು ಬಿಡಿಸಲು ಹೋದಾಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ. ಇಂತಹ ಪ್ರಕರಣಗಳಲ್ಲಿ ಸಾರ್ವಜನಿಕರು ಅವರಿಗೆ ಸಹಕರಿಸುವುದು ಕಡಿಮೆ. ಆಗ ಸಂಯಮದಿಂದ ವರ್ತಿಸುವ ಚೇತನ್‌ ಸಾಕಷ್ಟು ಜೀವಿಗಳನ್ನು ಮುಕ್ತಗೊಳಿಸಿದ್ದಾರೆ. ಹೀಗೆ ಜೀವಿಗಳನ್ನು ರಕ್ಷಿಸುತ್ತಾ ತಮ್ಮ ಪ್ರಾಣಿ ಪ್ರೀತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.


ಇದನ್ನು ಓದಿ:

1. ಗಂಟೆಗಟ್ಟಲೆ ಮಾತಾಡಬೇಕಾ ಇಲ್ಲಿದೆ 'ನಾನು' ಆ್ಯಪ್!

2. ಕೊಳತ ಟೊಮ್ಯಾಟೋದಿಂದ ವಿದ್ಯತ್ ಉತ್ಪಾದನೆ ಸಾಧ್ಯ...

3. ಆನ್​ಲೈನ್​ನಲ್ಲಿ ಬುಕ್​​ ಮಾಡಿ- ಕುಳಿತಲ್ಲಿಗೆ ಬರುತ್ತೆ ಸೀ ಫುಡ್​..!