ಟಾಟಾ ಸನ್ಸ್ ಸಂಸ್ಥೆಯ ಚುಕ್ಕಾಣಿ ಹಿಡಿದ ಚಂದ್ರಶೇಖರನ್..  

ಟೀಮ್ ವೈ.ಎಸ್.ಕನ್ನಡ 

0

ವಿವಾದಗಳಿಂದ ಬಳಲಿದ್ದ ಟಾಟಾ ಸನ್ಸ್ ಸಂಸ್ಥೆಗೆ ಹೊಸ ಸಾರಥಿಯ ಆಯ್ಕೆಯಾಗಿದೆ. ಟಿಸಿಎಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎನ್. ಚಂದ್ರಶೇಖರನ್ ಟಾಟಾ ಸನ್ಸ್ ಕಂಪನಿಯ ನೂತನ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಸೈರಸ್ ಮಿಸ್ತ್ರಿ ವಜಾ ನಂತರ ಅಧ್ಯಕ್ಷ ಸ್ಥಾನ ತೆರವಾಗಿತ್ತು. ರತನ್ ಟಾಟಾ ಮಧ್ಯಂತರ ಚೇರ್ಮನ್ ಆಗಿ ಕಾರ್ಯನಿರ್ವಹಿಸ್ತಾ ಇದ್ರು. ಈಗ ಆ ಸ್ಥಾನವನ್ನು ಚಂದ್ರಶೇಖರನ್ ತುಂಬಿದ್ದಾರೆ.

ಚಂದ್ರ ಅಂತಾನೇ ಇವರು ಜನಪ್ರಿಯರಾಗಿದ್ದಾರೆ. 54ರ ಹರೆಯದ ಚಂದ್ರಶೇಖರನ್ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಲು ಟಾಟಾ ಸನ್ಸ್ ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ರತನ್ ಟಾಟಾ, ಟಿವಿಎಸ್ ಗ್ರೂಪ್ ಮುಖ್ಯಸ್ಥ ವೇಣು ಶ್ರೀನಿವಾಸನ್, ಬೈನ್ ಕ್ಯಾಪಿಟಲ್ ನ ಅಮಿತ್ ಚಂದ್ರ, ರೋನೆನ್ ಸೇನ್ ಹಾಗೂ ಕುಮಾರ್ ಭಟ್ಟಾಚಾರ್ಯ ಅವರನ್ನೊಳಗೊಂಡ ಸರ್ಚ್ ಕಮಿಟಿ ‘ಟಾಟಾ ಸನ್ಸ್’ ಅಧ್ಯಕ್ಷ ಹುದ್ದೆಗಾಗಿ ಸೂಕ್ತ ವ್ಯಕ್ತಿಯ ಹುಡುಕಾಟ ನಡೆಸಿತ್ತು.

2009ರಿಂದ್ಲೂ ಚಂದ್ರಶೇಖರನ್ ಅವರು ಟಾಟಾ ಗ್ರೂಪ್​ನ 'ಕ್ರೌನ್ ಜ್ಯುವೆಲ್' ಹಾಗೂ ಸಾಫ್ಟ್ ವೇರ್ ಸಂಸ್ಥೆ 'ಟಿಸಿಎಸ್' ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸೈರಸ್ ಮಿಸ್ತ್ರಿ ಅವರನ್ನು ವಜಾ ಮಾಡಿದ ದಿನ 2016ರ ಅಕ್ಟೋಬರ್ 25ರಂದು ಟಾಟಾ ಸನ್ಸ್ ನಿರ್ದೇಶಕರಾಗಿ ಅವರನ್ನು ನೇಮಕ ಮಾಡಲಾಗಿತ್ತು. ಉಪ್ಪಿನಿಂದ ಹಿಡಿದು ಸಾಫ್ಟ್​ವೇರ್​ವರೆಗೆ ಪ್ರತಿಯೊಂದು ಉತ್ಪನ್ನವನ್ನೂ ಟಾಟಾ ಸನ್ಸ್ ಕಂಪನಿ ಉತ್ಪಾದಿಸ್ತಾ ಇದೆ. ಹಾಗಾಗಿ ಟಾಟಾ ಸನ್ಸ್ ಚುಕ್ಕಾಣಿ ಹಿಡಿಯಲು ಅರ್ಹರನ್ನು ಆಯ್ಕೆ ಮಾಡುವ ಮಹತ್ತರ ಜವಾಬ್ಧಾರಿ ಸಮತಿ ಮೇಲಿತ್ತು. 4 ತಿಂಗಳು ನೂತನ ಅಧ್ಯಕ್ಷರಿಗಾಗಿ ಹುಡುಕಾಟ ನಡೆಸಿದ ಸಮಿತಿ ಚಂದ್ರಶೇಖರನ್ ಅವರಿಗೆ ಟಾಟಾ ಸನ್ಸ್ ಹೊಣೆ ವಹಿಸಿದೆ.

ಸೈರಸ್ ಮಿಸ್ತ್ರಿ ಜೊತೆಗಿನ ಕಾನೂನು ಗುದ್ದಾಟ ನಡೆಯುತ್ತಿರುವಾಗ್ಲೇ ಚಂದ್ರಶೇಖರನ್ ಸಂಸ್ಥೆಯ ಅಧ್ಯಕ್ಷಗಿರಿ ವಹಿಸಿಕೊಂಡಿದ್ದಾರೆ. ನಿರ್ದೇಶಕ ಸ್ಥಾನದಿಂದ ಮಿಸ್ತ್ರಿ ಅವರನ್ನು ವಜಾಗೊಳಿಸಿದ ಟಾಟಾ ಸನ್ಸ್ ಕ್ರಮವನ್ನು ಪ್ರಶ್ನಿಸಿ ಮಿಸ್ತ್ರಿ ಕುಟುಂಬದವರ ಒಡೆತನದ ಎರಡು ಸಂಸ್ಥೆಗಳು 'ನ್ಯಾಶನಲ್ ಕಂಪನಿ ಲಾ ಟ್ರಿಬ್ಯುನಲ್'ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿವೆ. ಮಿಸ್ತ್ರಿ ನಾಯಕತ್ವದಲ್ಲಿ ನಂಬಿಕೆ ಕಳೆದುಕೊಂಡಿದ್ದ ಟಾಟಾ ಸನ್ಸ್ ಸಂಸ್ಥೆ ಅವರನ್ನು ಅಧ್ಯಕ್ಷ ಹುದ್ದೆಯಿಂದ ವಜಾ ಮಾಡಿತ್ತು. ಮಧ್ಯಂತರ ಅಧ್ಯಕ್ಷರಾಗಿ ರತನ್ ಟಾಟಾ ಅಧಿಕಾರ ಪಡೆದುಕೊಂಡಿದ್ರು. ಇನ್ನೊಂದೆಡೆ ರತನ್ ಟಾಟಾ ವಿರುದ್ಧ ಗಂಭೀರ ಆರೋಪ ಮಾಡಿದ್ದ ಮಿಸ್ತ್ರಿ, ಕಾನೂನು ಹೋರಾಟ ಶುರುಮಾಡಿದ್ದಾರೆ.

ನೂತನ ಅಧ್ಯಕ್ಷ ಚಂದ್ರಶೇಖರನ್ ತಮಿಳುನಾಡು ಮೂಲದವರು. ತಿರುಚಿಯ ರೀಜನಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಾಸ್ಟರ್ಸ್ ಮುಗಿಸಿದ್ದ ಅವರು 1978ರಲ್ಲಿ ಟಿಸಿಎಸ್ ಸಂಸ್ಥೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದರು. ಅವರ ನಾಯಕತ್ವದಲ್ಲಿ ಟಿಸಿಎಸ್ ಸಂಸ್ಥೆ ಉತ್ತಮ ಆದಾಯ ಗಳಿಸಿದೆ. 2015-16ರಲ್ಲಿ ಟಿಸಿಎಸ್ ಆದಾಯ 16.5 ಬಿಲಿಯನ್ ಡಾಲರ್. ಭಾರತದ ಅತ್ಯಂತ ಮೌಲ್ಯಯುತ ಕಂಪನಿ ಎಂಬ ಹೆಗ್ಗಳಿಕೆ ಕೂಡ ಟಿಸಿಎಸ್ ಗಿದೆ.

ಚಂದ್ರಶೇಖರನ್ ಒಬ್ಬ ಒಳ್ಳೆಯ ಛಾಯಾಗ್ರಾಹಕ, ಅಥ್ಲೀಟ್ ಕೂಡ. ವಿಶ್ವದಾದ್ಯಂತ ನಡೆದ ಅನೇಕ ಮ್ಯಾರಥಾನ್ ನಲ್ಲಿ ಪಾಲ್ಗೊಂಡಿದ್ದಾರೆ. ಬೋಸ್ಟನ್, ನ್ಯೂಯಾರ್ಕ್, ಬರ್ಲಿನ್, ಚಿಕಾಗೊ, ಟೋಕಿಯೋ ಮತ್ತು ಮುಂಬೈ ಮ್ಯಾರಥಾನ್ ನಲ್ಲಿ ಚಂದ್ರ ಭಾಗವಹಿಸಿದ್ದರು. 

ಇದನ್ನೂ ಓದಿ.. 

ಕಾಫಿ ಕುಡಿದು ಫ್ರೆಶ್​ ಆಗಿ- "ಫ್ಲೈಯಿಂಗ್ ಸ್ಕ್ವಿರಲ್"ನಲ್ಲಿದೆ ಆಧುನಿಕತೆಯ ಮೋಡಿ..!

ಅನಾಥ ಹೆಣ್ಣುಮಕ್ಕಳಿಗೂ 'ದಂಗಲ್' ನೋಡುವ ಚಾನ್ಸ್ : ಎಲ್ಲರಿಗೂ ಮಾದರಿ ಇಂದೋರ್ ಕಲೆಕ್ಟರ್