ಗ್ರಾಹಕರೇ ಚಿಂತೆ ಬಿಡಿ..`ಸುವಿಧಾ' ಇದೆಯಲ್ಲ..

ಟೀಮ್​ ವೈ.ಎಸ್​​.

0

ರೆಡ್‍ಬಸ್..ಫ್ಲಿಪ್‍ಕಾರ್ಟ್ ಈ ಹೆಸರುಗಳನ್ನು ಕೇಳದವರೇ ಇಲ್ಲ. ಕೇವಲ ಭಾರತದಲ್ಲಿ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ಸಂಸ್ಥೆಗಳಿವು. ಇವೆರಡೂ ಕಂಪನಿಗಳ ಸಾಮ್ಯತೆ ಅಂದ್ರೆ ಭಾರತದಲ್ಲಿ ಸರ್ವೇ ಸಾಮಾನ್ಯವಾಗಿದ್ದ ಸಮಸ್ಯೆಗಳಿಗೆ ಇವು ಪರಿಹಾರ ಹುಡುಕಿವೆ. ರೆಡ್‍ಬಸ್ ಇರೋದ್ರಿಂದ ಪ್ರಯಾಣಿಕರಿಗೆ ನೆಮ್ಮದಿ. ಯಾಕಂದ್ರೆ ಟಿಕೆಟ್ ಬುಕ್ಕಿಂಗ್‍ಗೆ ಅಂಥ ತಲೆನೋವೇ ಇಲ್ಲ. ಇನ್ನು ಫ್ಲಿಪ್‍ಕಾರ್ಟ್ ಅಂದಾಕ್ಷಣ ನೆನಪಾಗೋದೇ ಶಾಪಿಂಗ್. ಭಾರತದಲ್ಲಿ ಆನ್‍ಲೈನ್ ಶಾಪಿಂಗ್ ಇಷ್ಟು ಜನಪ್ರಿಯವಾಗಿದ್ದೇ ಫ್ಲಿಪ್‍ಕಾರ್ಟ್‍ನಿಂದ. ಫ್ಲಿಪ್‍ಕಾರ್ಟ್ ಹಾಗೂ ರೆಡ್‍ಬಸ್‍ನಷ್ಟೇ ಎತ್ತರಕ್ಕೆ ಬೆಳೆದಿರುವ ಮತ್ತೊಂದು ಸಂಸ್ಥೆ ಅಂದ್ರೆ ಸುವಿಧಾ. ದೇಶದಲ್ಲಿ ಬ್ರಾಡ್‍ಬ್ಯಾಂಡ್ ಸಂಪರ್ಕ ಒದಗಿಸ್ತಾ ಇರೋ ಸುವಿಧಾ, ಆನ್‍ಲೈನ್ ವಹಿವಾಟಿಗೂ ಅವಕಾಶ ಕಲ್ಪಿಸಿದೆ. ಇನ್ಶೂರೆನ್ಸ್ ಪ್ರೀಮಯಮ್ ಕಟ್ಟೋದ್ರಿಂದ ಹಿಡಿದು, ರೈಲು - ವಿಮಾನ ಟಿಕೆಟ್ ಬುಕ್ಕಿಂಗ್ ಎಲ್ಲವನ್ನೂ ನೀವು ಸುವಿಧಾ ಮೂಲಕವೇ ಮಾಡಬಹುದು. ಪರೇಶ್ ರಾಜ್ದೆ ಸುವಿಧಾ ಸಂಸ್ಥಾಪಕರು. ಭಾರತದಲ್ಲಿ ಸುವಿಧಾ ಸುಮಾರು 50,000 ಅಂಗಡಿಗಳನ್ನು ಹೊಂದಿದೆ. 300ಕ್ಕೂ ಹೆಚ್ಚು ಮಂದಿ ಗ್ರಾಹಕರಿಗೆ ಸೇವೆ ಒದಗಿಸುತ್ತಿದ್ದಾರೆ.

ಗುಜರಾತ್‍ನ ಕಛ್‍ನಲ್ಲಿ ಜನಿಸಿದ ಪರೇಶ್, ಉನ್ನತ ವ್ಯಾಸಂಗಕ್ಕಾಗಿ ಮುಂಬೈಗೆ ಬಂದ್ರು. ಸಿಎ ಮಾಡಲು ಬಂದಿದ್ದ ಪರೇಶ್ ವಾಣಿಜ್ಯ ನಗರಿಗೆ ಮಾರು ಹೋದ್ರು. ಸಿಎ ಮುಗಿಸಿ 10 ವರ್ಷ ಮುಂಬೈನಲ್ಲೇ ಪ್ರ್ಯಾಕ್ಟೀಸ್ ಮಾಡಿದ ಪರೇಶ್, ನಂತರ ಸ್ವ ಉದ್ಯಮದತ್ತ ಚಿತ್ತ ಹರಿಸಿದ್ರು. ಧನ್‍ಧನ್‍ಧನ್ ಎಂಬ ಆನ್‍ಲೈನ್ ಲಾಟರಿ ಶುರು ಮಾಡಿದ್ರು. ಬಳಿಕ ಅದನ್ನು ಶಾಪೋರ್ಜಿ ಪಲ್ಲುಂಜಿ ಮಿಸ್ತ್ರಿ ಎಂಬುವವರಿಗೆ ಮಾರಾಟ ಮಾಡಿದ್ರು. ಸುವಿಧಾ ಪರೇಶ್ ಅವರ ಎರಡನೇ ಕಂಪನಿ. ಈ ಸಂಸ್ಥೆ ಸ್ಥಾಪಿಸಲು ಪರೇಶ್ ಅವರಿಗಾದ ಕಹಿ ಅನುಭವವೇ ಕಾರಣ. ರೈಲ್ವೆ ಟಿಕೆಟ್ ಖರೀದಿಸಲು ಪರದಾಡಿದ್ದ ಪರೇಶ್ ಜನಸಾಮಾನ್ಯರ ಬವಣೆಯನ್ನು ಅರ್ಥಮಾಡಿಕೊಂಡ್ರು. ಜನರ ಸಮಸ್ಯೆಗೆ ಸ್ಪಂದಿಸುವಂಥ ಯಾವುದೇ ಸೌಲಭ್ಯ ಭಾರತದಲ್ಲಿಲ್ಲ ಅನ್ನೋದನ್ನು ಅರ್ಥಮಾಡಿಕೊಂಡ ಪರೇಶ್ ಮೊದಲು ರೈಲ್ವೆ ನಿಲ್ದಾಣಗಳಲ್ಲಿನ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿದ್ರು. ಇಂದಿಗೂ ಜನರು ಕ್ಯೂನಲ್ಲಿ ನಿಂತೇ ಟಿಕೆಟ್‍ಗಾಗಿ ಪರದಾಡ್ತಾರೆ ಅನ್ನೋದನ್ನ ಮನಗಂಡರು. ಐಆರ್‍ಸಿಟಿಸಿ ವೆಬ್‍ಸೈಟ್‍ನಲ್ಲಿ ಟಿಕೆಟ್ ಮುಂಗಡ ಬುಕ್ಕಿಂಗ್ ಹಾಗೂ ವಿತರಣೆಗೆ ನೆರವಾಗಲು ನಿರ್ಧರಿಸಿದ್ರು. ಸುವಿಧಾ ರೈಲ್ವೆ ಟಿಕೆಟ್ ಒದಗಿಸುತ್ತೆ ಅಂತಾದ್ರೆ ಉಳಿದ ಸೇವೆಗಳನ್ಯಾಕೆ ಕೊಡಬಾರದು ಅನ್ನೋ ಆಲೋಚನೆ ಕೂಡ ಪರೇಶ್ ಅವರಿಗೆ ಬಂದಿತ್ತು. ಹಾಗಾಗಿಯೇ ಗ್ರಾಹಕರಿಗೆ ಬೇಕಾದ ಹತ್ತಾರು ಸೇವೆಗಳನ್ನು ಸುವಿಧಾ ನೀಡುತ್ತಿದೆ.

ಸುವಿಧಾ ಮಾದರಿ..

ಕಿರಾಣಿ ಅಂಗಡಿಗಳು, ಟ್ರಾವೆಲ್ ಏಜೆಂಟ್‍ಗಳಂತಹ ಚಿಲ್ಲರೆ ವ್ಯಾಪಾರಿಗಳೊಂದಿಗೆ ಸುವಿಧಾ ಕೆಲಸ ಮಾಡುತ್ತದೆ. ಪಾಲುದಾರರಾಗಲು ಒಪ್ಪಿದ ವ್ಯಾಪಾರಿಗಳು ಕಂಪ್ಯೂಟರ್ ಹಾರ್ಡ್‍ವೇರ್ ಹಾಗೂ ಇಂಟರ್ನೆಟ್ ಸಂಪರ್ಕ ಪಡೆಯಬೇಕು. ಸ್ವಲ್ಪ ಹಣವನ್ನು ಸುವಿಧಾದಲ್ಲಿ ಠೇವಣಿ ಇಡಬೇಕು. ತಿಂಗಳಿಗೆ 30,000 ರೂಪಾಯಿ ವ್ಯಾಪಾರವಾಗುತ್ತದೆ ಎಂಬ ನಿರೀಕ್ಷೆಯಿದ್ರೆ ಆ ಹಣವನ್ನು ವ್ಯಾಪಾರಿ ಮೊದಲೇ ಸುವಿಧಾಕ್ಕೆ ಕೊಡಬೇಕು. ಸುವಿಧಾ ಮೂಲಕ ಗ್ರಾಹಕರು ವ್ಯವಹಾರ ಮಾಡಿದಾಗ ಅವರಿಟ್ಟ ಠೇವಣಿ ಹಣ ಕಡಿತವಾಗುತ್ತಾ ಹೋಗುತ್ತದೆ. ಎಲ್ಲ ವಹಿವಾಟನ್ನೂ ಚಿಲ್ಲರೆ ವ್ಯಾಪಾರಿಯೇ ನೋಡಿಕೊಳ್ಳುವುದರಿಂದ ಗ್ರಾಹಕರಿಗೆ ತಲೆನೋವಿಲ್ಲ. ನೇರವಾಗಿ ವ್ಯವಹಾರ ಮಾಡಿದಂತೆಯೇ ಆನ್‍ಲೈನ್ ಮೂಲಕವೂ ಮಾಡಬಹುದು. ಭಾರತದ ಆರ್ಥಿಕತೆಯಲ್ಲಿ ಶೇಕಡಾ 92ರಷ್ಟು ನಗದನ್ನೇ ಅವಲಂಬಿಸಿದೆ ಎನ್ನುತ್ತಾರೆ ಪರೇಶ್. ಜೊತೆಗೆ ಸುವಿಧಾ ಸೇವೆ ಪಡೆಯಲು ಗ್ರಾಹಕರು ಹಣ ಪಾವತಿಸಬೇಕಾಗಿಲ್ಲ. ಸುವಿಧಾ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ತಲುಪಬಹುದು. ದೇಶದ 20 ಪ್ರಮುಖ ನಗರಗಳಲ್ಲಿ ಸುವಿಧಾ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಜಾಹೀರಾತು ಹಾಗೂ ಮಾರ್ಕೆಟಿಂಗ್‍ಗೆ ವ್ಯಾಪಾರಿಗಳು ಹೆಚ್ಚಿನ ಹಣ ವ್ಯಯಿಸಬೇಕಾಗಿಲ್ಲ. ಸುವಿಧಾ ಕಾರ್ಯದಕ್ಷತೆ ಬಗೆಗಂತೂ ಎರಡು ಮಾತಿಲ್ಲ.

ಪರೇಶ್​​ ರಾಜ್ದೆ
ಪರೇಶ್​​ ರಾಜ್ದೆ

ಯಶಸ್ಸಿನ ಹಾದಿಯಲ್ಲಿ ಸುವಿಧಾ..

ಸುವಿಧಾಗೆ 25 ಮಿಲಿಯನ್ ಡಾಲರ್ ನೆರವು ಹರಿದು ಬಂದಿದೆ. ಎನ್‍ವಿಪಿ, ರಿಲಯನ್ಸ್ ವೆಂಚರ್ ಅಸೆಟ್ ಮ್ಯಾನೇಜ್‍ಮೆಂಟ್, ಇಂಟರ್‍ನ್ಯಾಶನಲ್ ಫೈನಾನ್ಸ್ ಕಾರ್ಪೊರೇಷ್‍ನಂತಹ ಘಟಾನುಘಟಿ ಕಂಪನಿಗಳು ಸುವಿಧಾ ಬೆನ್ನಿಗೆ ನಿಂತಿವೆ. ಸುವಿಧಾ ಯಶಸ್ಸಿನಲ್ಲಿ ಸಂಸ್ಥೆಯ 250 ಸದಸ್ಯರ ಪಾಲೂ ಇದೆ. ಸದ್ಯ ಸಿಇಓ ಹರೇಶ್ ಭತೀಜಾ ಸಂಸ್ಥೆಯ ಜವಾಬ್ದಾರಿ ಹೊತ್ತಿದ್ದಾರೆ. ಗ್ರಾಹಕರಿಗೆ ಏನು ಬೇಕೋ ಅದನ್ನು ಗಮನದಲ್ಲಿಟ್ಟುಕೊಂಡೇ ಸುವಿಧಾ ಕಾರ್ಯನಿರ್ವಹಿಸ್ತಾ ಇದೆ. ಅದನ್ನೇ ಅವಕಾಶವನ್ನಾಗಿ ಬಳಸಿಕೊಂಡಿದೆ ಎನ್ನುತ್ತಾರೆ ಹರೇಶ್. ಭಾರತದಲ್ಲಿ ಸುವಿಧಾ ಸೇವೆಯನ್ನು ಮತ್ತಷ್ಟು ವಿಸ್ತರಿಸಲು ಹರೇಶ್ ಯೋಜನೆ ಹಾಕಿಕೊಂಡಿದ್ದಾರೆ. ಸುವಿಧಾದಿಂದ ಅತಿ ಹೆಚ್ಚು ಪ್ರಯೋಜನ ಪಡೆದ ಗ್ರಾಹಕರನ್ನು ಅಭಿನಂದಿಸಲು ತೀರ್ಮಾನಿಸಿದ್ದಾರೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ಪಾಲುದಾರಿಕೆ ಮಾಡಿಕೊಂಡಿರುವ ಸುವಿಧಾ ಚಾನೆಲ್ ಕಾರ್ಡ್ ಒಂದನ್ನು ಬಿಡುಗಡೆ ಮಾಡಿದೆ. ಎಲ್ಲಿಯವರೆಗೆ ಭಾರತದಲ್ಲಿ ಹಣದ ಜೊತೆ ಪ್ರಣಯ ಮುಂದುವರಿಯುತ್ತದೆಯೋ ಅಲ್ಲಿಯವರೆಗೆ ಸುವಿಧಾ ಯಶಸ್ಸಿಗೆ ಯಾವುದೇ ಅಡ್ಡಿಯಿಲ್ಲ.

Related Stories