ರೈಲು ಪ್ರಯಾಣಕ್ಕೆ ವೇಗ ನೀಡಿದ ಗತಿಮಾನ್..!

ಅಗಸ್ತ್ಯ

ರೈಲು ಪ್ರಯಾಣಕ್ಕೆ ವೇಗ ನೀಡಿದ ಗತಿಮಾನ್..!

Thursday April 07, 2016,

2 min Read

ಎಕ್ಸ್​​ಪ್ರೆಸ್, ಜನರಲ್, ಸೆಮಿ ಎಕ್ಸ್​ಪ್ರೆಸ್ ರೈಲುಗಳಲ್ಲಿ ಸಂಚರಿಸಿದ್ದ ಪ್ರಯಾಣಿಕರು ಇದೀಗ ಸೆಮಿ ಹೈಸ್ಪೀಡ್ ರೈಲಿನಲ್ಲಿ ಓಡಾಡುವ ಭಾಗ್ಯ ದೊರೆತಿದೆ. ಆದರೆ ಆ ಭಾಗ್ಯ ದೆಹಲಿಯಿಂದ ಆಗ್ರಾಕ್ಕೆ ಪ್ರಯಾಣಿಸುವ ರೈಲ್ವೆ ಪ್ರಯಾಣಿಕರಿಗಷ್ಟೇ ಸೀಮಿತವಾಗಿದೆ. ಏಕೆಂದರೆ ದೇಶದಲ್ಲಿ ಮೊದಲ ಬುಲೆಟ್ ರೈಲು ಸಂಚಾರದ ನಿರೀಕ್ಷೆಯಲ್ಲಿರುವ ಜನರಿಗೆ ಅದರ ಆರಂಭಿಕ ಹಂತವಾಗಿ ಸೆಮಿ ಹೈಸ್ಪೀಡ್ ರೈಲಿಗೆ ಚಾಲನೆ ನೀಡಲಾಗಿದೆ. ಗತಿಮಾನ್ ಎಕ್ಸ್​​ಪ್ರೆಸ್ ಎಂದು ಹೆಸರಿಟ್ಟಿರುವ ಕೇಂದ್ರ ರೈಲ್ವೆ ಇಲಾಖೆ, ಈ ಸೆಮಿ ಹೈಸ್ಪೀಡ್ ರೈಲನ್ನು ದೆಹಲಿಯ ಹಜರತ್ ನಿಜಾಮುದ್ದೀನ್ ನಿಲ್ದಾಣದಿಂದ ಆಗ್ರಾದ ದಂಡು ನಿಲ್ದಾಣದವರೆಗೆ ಸೇವೆ ನೀಡಲು ನಿರ್ಧರಿಸಿದೆ. ಆಮೂಲಕ ದೇಶದ ರೈಲ್ವೆ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿಯೊಂದು ಶುರುವಾಗಿದೆ.

image


ಸದ್ಯ ಸಂಚಾರ ಆರಂಭಿಸಿರುವ ಗತಿಮಾನ್ ಸೆಮಿ ಹೈಸ್ಪೀಡ್ ದೆಹಲಿಯ ಹಜರತ್ ನಿಜಾಮುದ್ದೀನ್ ನಿಲ್ದಾಣದಿಂದ ಆಗ್ರಾದ ದಂಡು ನಿಲ್ದಾಣದವರೆಗಿನ 187 ಕಿ.ಮೀ. ಉದ್ದದ ಮಾರ್ಗವನ್ನು ಕೇವಲ 100 ನಿಮಿಷಗಳಲ್ಲಿ ಕ್ರಮಿಸಲಿದೆ. ಇದು ದೇಶದಲ್ಲಿ ಸದ್ಯ ಇರುವ ಉಳಿದ ರೈಲುಗಳಿಗಿಂತ ಅತಿ ವೇಗದ ಸಂಚಾರವಾಗಿದೆ. ಈ ರೈಲು ವಿದ್ಯುತ್ ಚಾಲಿತ ಇಂಜಿನ್ ಹೊಂದಿದೆ.

ಇದನ್ನು ಓದಿ: ಡೆಡ್ಲಿ ಡೇಂಜರಸ್​ ಗೇಮ್​ನ ಪಂಟ, ಬೆಂಗಳೂರಿನ ಯುವ ಸಂತ..!

ಹಲವು ವೈಶಿಷ್ಟೃಗಳ ಗತಿಮಾನ್

ವೇಗದಲ್ಲಷ್ಟೇ ಅಲ್ಲದೆ ಈ ರೈಲು ಹಲವು ವಿಶಿಷ್ಟ ವ್ಯವಸ್ಥೆಯನ್ನು ಹೊಂದಿದೆ. ಅದರಂತೆ ರೈಲಿನ ಬೋಗಿಗಳಲ್ಲಿ ಜೈವಿಕ ಶೌಚಗೃಹಗಳಿವೆ. ಅದೇ ರೀತಿ ಪ್ರಯಾಣಿಕರ ಹಸಿವು ತಣಿಸಲು ಸ್ಪಾನಿಷ್ ಆಮ್ಲಿಟ್, ಡೇಟ್ ವಾಲ್‍ನಟ್‍ಕೇಕ್, ಗೋಧಿ ಉಪ್ಪಿಟ್ಟು, ಕಾಂಜೀವರಂ ಇಡ್ಲಿ, ಆಲೂ ಕುಲ್ಚಾ, ಮಿನಿ ದೋಸೆ, ಚಿಕನ್ ರೋಲ್ಸ್, ಸ್ವಿಸ್ ರೋಲ್ಸ್ ಸೇರಿದಂತೆ ಇನ್ನಿತರ ಬಗೆಬಗೆಯ ಖಾದ್ಯಗಳು ಇಲ್ಲಿ ದೊರೆಯಲಿದೆ. ಹಾಗೆಯೇ ರೈಲಿನ ಗರಿಷ್ಠ ವೇಗ ಗಂಟೆಗೆ 160 ಕಿ.ಮಿ.ಗಳಷ್ಟಿದೆ. ಹಾಗೆಯೇ, 8 ಎಸಿ ಬೋಗಿಗಳು, ಉಚಿತ ಟಿವಿ ವೀಜ್ಷಣೆ, ಗಗನ ಸಖಿಯರಂತೆ ರೈಲು ಸಖ/ಸಖಿಯರು, ಜಿಪಿಎಸ್ ಆಧಾರಿತ ಮಾಹಿತಿ ಸೇವೆ, ಬೋಗಿಗಳಲ್ಲಿ ಮೆಟ್ರೋ ರೈಲು ಮಾದರಿಯಲ್ಲಿ ಸ್ವಯಂ ಚಾಲಿತ ಬಾಗಿಲುಗಳು, ಉಚಿತ ವೈ-ಫೈ ವ್ಯವಸ್ಥೆ ಗತಿಮಾನ್ ಪ್ರಯಾಣಿಕರಿಗೆ ದೊರೆಯುತ್ತಿದೆ.

image


ಮೊದಲ ಸೆಮಿ ಹೈಸ್ಪೀಡ್ ರೈಲು ಸಂಚಾರ ಆರಂಭಗೊಳ್ಳುತ್ತಿದ್ದಂತೆ ಇನ್ನಷ್ಟು ಸೆಮಿ ಹೈಸ್ಪೀಡ್‍ಗಳನ್ನು ಹಳಿ ಮೇಲೆ ಓಡಿಸಲು ಕೇಂದ್ರ ರೈಲ್ವೆ ಇಲಾಖೆ ಸಿದ್ಧತೆ ನಡೆಸಿದೆ. ಅದರಂತೆ ದೆಹಲಿಯಿಂದ ಭೋಪಾಲ, ಚಂಡೀಗಢ, ಕಾನ್ಪುರ, ಲಖ್ನೌಗಳಿಗೆ ಈ ವೇಗದ ರೈಲು ಸಂಚಾರ ಮಾಡಲಾಗುತ್ತದೆ. ಅದಕ್ಕೆ ಇನ್ನಷ್ಟು ದಿನ ಕಾಯಬೇಕಾದ ಅನಿವಾರ್ಯತೆ ಪ್ರಯಾಣಿಕರದ್ದಾಗಿದೆ.

ವೇಗದ ರೈಲುಗಳು ಎಲ್ಲೆಲ್ಲಿವೆ..?

ಸದ್ಯ ಸಂಚಾರಕ್ಕೆ ಚಾಲನೆ ನೀಡಲಾಗಿರುವ ಗತಿಮಾನ್ ಎಕ್ಸ್​​ಪ್ರೆಸ್ ರೈಲು ವಿಶ್ವ ಮಟ್ಟಕ್ಕೆ ಹೋಲಿಸಿದರೆ ನಿಧಾನಗತಿಯ ರೈಲಾಗಿದೆ. ಯೂರೋಪ್, ಚೀನಾ, ಜಪಾನ್ ದೇಶಗಳಲ್ಲಿ ಗಂಟೆಗೆ 300 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ರೈಲುಗಳಿವೆ. ಅದರಂತೆ 2004ರ ಏಪ್ರಿಲ್​​ನಲ್ಲಿ ಸಂಚಾರ ಆರಂಭಿಸಿದ ಜಪಾನ್‍ನ ಶಾಂಘೈ ಮೆಗ್ಲೆವ್ ರೈಲು ವಿಶ್ವದ ಅತಿ ವೇಗದ ರೈಲು ಎಂಬ ಹೆಗ್ಗಳಿಕೆ ಪಡೆದಿದೆ. ಆರಂಭದಲ್ಲಿ ಇದರ ವೇಗ ಗಂಟೆಗೆ 430 ಕಿ.ಮಿ. ಇತ್ತು. 2015ರಲ್ಲಿ ಅದರ ವೇಗ ಗಂಟೆಗೆ ಪ್ರಾಯೋಗಿಕವಾಗಿ 603 ಕಿ.ಮಿ. ಆಗಿದೆ. ಇನ್ನು ಚೀನಾದಲ್ಲಿ ಬೀಜಿಂಗ್‍ನಿಂದ ಶಾಂಘೈ ಮಾರ್ಗದಲ್ಲಿ ಸಂಚರಿಸುವ ಹಾರ್ಮನಿ ಸಿಆರ್‍ಎಚ್ 380ಎ ಹೆಸರಿನ ರೈಲು ಗಂಟೆಗೆ 380 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿದೆ. ಅದೇ ರೀತಿ ಇಟಲಿಯ ಎಜಿವಿ ಇಟಾಲೋ ರೈಲು ಗಂಟೆಗೆ 360 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿದೆ.

ಇದನ್ನು ಓದಿ

1. ರಜಾ ದಿನಗಳಿಗೆ ಸಿಂಪಲ್​ ಆಗಿ ಪ್ಲಾನ್​ ಮಾಡಿ...

2. ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡುವ ತಮಟೆ ಶಿವಮ್ಮನ ಕಥೆ..!

3. ಹ್ಯಾಪಿ ಬರ್ತ್‍ಡೇ ಬಿಡಿ, ಕನ್ನಡದಲ್ಲಿ ಹುಟ್ಟುಹಬ್ಬದ ವಿಶ್ ಮಾಡಿ..!