ಗಡಿಯಾಚೆಗಿನ ಸಾಧನೆ- ಮಹಿಳಾ ಚಾಲಕರಿಗೆ ಸ್ಪೂರ್ತಿ ಈ ಮೂವರು

ಪಿ.ಅಭಿನಾಷ್​​

0

ಆ ಮಹಿಳೆಯರಿಗೆ ಸಾಧಿಸಬೇಕು ಅನ್ನೋ ಛಲ ಇತ್ತು. ಸಾಧನೆ ಹಾದಿ ಆರಂಭವಾಗಿದ್ದು, ದಿಲ್ಲಿಯಿಂದ ಸಾಗಿದ್ದು ಲಂಡನ್​​​ವರೆಗೆ. ಆದ್ರೆ ಅದು ವಾಯು ಮಾರ್ಗದಲ್ಲಲ್ಲ, ರಸ್ತೆ ಮೂಲಕ...! ಇದ್ರ ಬಗ್ಗೆ ಕೇಳಿದ್ರೆ ನಿಮಗೆ ಅಚ್ಚರಿ ಆಗಬಹುದು. ಆದ್ರೆ ಇದು ಸತ್ಯ. ಹೌದು, ಜೀಪ್ ಮೂಲಕ ಲಂಡನ್ ಸೇರಿರುವ ಮೂವರು ಮಹಿಳೆಯರ ಸಾಧನೆ ಇದು.

ರಾಜಧಾನಿ ದಿಲ್ಲಿಯಿಂದ ಲಂಡನ್​​ಗೆ ಹೋಗೋದು ಕಷ್ಟ ಏನಲ್ಲ ಬಿಡಿ. ಆದ್ರೆ, ರಸ್ತೆ ಮಾರ್ಗದ ಮೂಲಕ ಹದಿನೇಳು ರಾಷ್ಟ್ರಗಳನ್ನ ದಾಟಿ ಮುಂದೆ ಸಾಗೋದು ಮಾತ್ರ ಸುಲಭದ ಮಾತಲ್ಲ. ಮಹಿಳಾ ಸಬಲೀಕರಣಕ್ಕಾಗಿ ದಿಲ್ಲಿಯಿಂದ ಲಂಡನ್​​ವರೆಗೂ ಜೀಪ್​​ನಲ್ಲಿ ಸಾಗಿದ್ದಾರೆ ಮೂವರು ಮಹಿಳೆಯರು. ಹೌದು, ದಿಲ್ಲಿ ಮೂಲದ ನಿಧಿ ತಿವಾರಿ, ಬೆಂಗಳೂರು ಮೂಲದ ರಶ್ಮಿ ಕೊಪ್ಪರ್ ಹಾಗು ಸೌಮ್ಯ ಗೋಯಲ್ ಸಾಧನೆ ಮಾಡಿರುವ ಮಹಿಳೆಯರು. ಕಳೆದ ಜುಲೈ 23ರಂದು ಇಂಡಿಯಾ ಗೇಟ್​​ನಿಂದ ಇವರ ಪ್ರಯಣ ಆರಂಭವಾಗಿತ್ತು. ಹೊರಟ ಕೆಲವೇ ದಿನಗಳಲ್ಲಿ ಇವರಿಗೆ ಆಘಾತ ಕಾದಿತ್ತು. ಯಾಕಂದ್ರೆ ಇಂಡಿಯಾ ಬಾರ್ಡರ್​​ನಿಂದ ಮುಂದೆ ಸಾಗದಂತೆ ಬೃಹತ್ ಭೂಕುಸಿತ ಎದುರಾಗಿತ್ತು. ಹಿಂದೆಯೂ ಬರಲಾಗದೆ, ಮುಂದೆಯೂ ಸಾಗಲಾಗದೆ, ನಾಲ್ಕು ವಾರಗಳ ಕಾಲ ಗಡಿಯಲ್ಲಿನ ಹಳ್ಳಿಯೊಂದರಲ್ಲೇ ಕಾಲ ಕಳೆಯಬೇಕಾಯ್ತು. ಆದ್ರೂ ಗುರಿ ಮುಟ್ಟಬೇಕೆಂಬ ಇವರ ನಿರ್ಧಾರ ಸ್ವಲ್ಪವೂ ಸಡಿಗೊಳ್ಳಲಿಲ್ಲ. ನಾಲ್ಕು ವಾರಗಳ ನಂತ್ರ ಮತ್ತೆ ತಮ್ಮ ಜರ್ನಿಯನ್ನ ಮುಂದುವರೆಸಲು ನಿರ್ಧರಿಸಿದರು. ಅಷ್ಟರಲ್ಲಾಗ್ಲೇ ಹಲವು ದೇಶಗಳ ವೀಸಾ ಅವಧಿ ಮುಗಿದು ಹೋಗಿತ್ತು. ಮತ್ತೆ ಬೆಂಗಳೂರಿಗೆ ವಾಪಾಸಾದ ತಂಡ, ವೀಸಾ ರಿನೀವಲ್ ಮಾಡಿಸಿಕೊಂಡು ಉಳಿದುಕೊಂಡಿದ್ದ ಜಾಗಕ್ಕೆ ಹೋಗಿ ಮುಟ್ಟಿದ್ರು. ಅಲ್ಲಿಂದ ಮತ್ತೆ ಪ್ರಯಾಣ ಆರಂಭವಾಗಿತ್ತು.

17 ರಾಷ್ಟ್ರಗಳಲ್ಲಿ ಸಾಗಿತ್ತು ಪಯಣ

ಇಂಡಿಯಾದಿಂದ ಮ್ಯಾನ್​​ಮಾರ್​​​ ,ಚೀನಾ, ನಂತ್ರ ಮಧ್ಯ ಪ್ರಾಚ್ಯ ದೇಶಗಳಾದ ಕಝಕಿಸ್ತಾನ್, ಉಜ್ಬೇಕಿಸ್ತಾನ್, ಟರ್ಕ್​ಮೆನಿಸ್ತಾನ್​​​ಗಳನ್ನ ದಾಟಿ ರಷ್ಯಾ ಮೂಲಕ ಯುರೋಪಿಯನ್ ರಾಷ್ಟ್ರಗಳನ್ನ ಮುಟ್ಟಿದ್ದಾರೆ. ಫಿನ್​​ಲೆಂಡ್, ಸೌತ್ ಲ್ಯಾಥ್ವಿಯಾ, ಪೊಲಂಡ್, ಜರ್ಮನಿ, ಬೆಲ್ಜಿಯಂ, ಫ್ರಾನ್ಸ್ ಮುಟ್ಟಿ ನಂತ್ರ ರಸ್ತೆ ಮಾರ್ಗದಲ್ಲಿ ಅಂದುಕೊಂಡಂತೆ ಲಂಡನ್ ಮುಟ್ಟಿದ್ರು. ಅಕ್ಟೋಬರ್ 28ರಂದು ತಮ್ಮ ಪ್ರಯಾಣವನ್ನ ಅಂತ್ಯಗೊಳಿಸಿದ್ದಾರೆ. 23,700 ಕಿಲೋಮೀಟರ್ ಮಾರ್ಗವನ್ನ 95 ದಿನಗಳಲ್ಲಿ ಮುಟ್ಟಿದ್ದಾರೆ ಈ ಮೂವರು ಮಹಿಳೆಯರು.

ಕಠಿಣ ಹಾದಿ

ಗೊತ್ತಿಲ್ಲದ ಭಾಷೆ, ಒಗ್ಗದ ಆಹಾರ ಪದ್ದತಿ, ವಿಭಿನ್ನ ಹವಾಮಾನದ ನಡುವೆಯೂ ಇವರ ಹಾದಿ ಸಾಗಿತ್ತು. 'ಆರ್ಡರ್ ಮಾಡಿದ ಊಟ ಏನು ಅನ್ನೋದು ನಮ್ಮ ಟೇಬಲ್ ಮೇಲೆ ಬಂದ ನಂತ್ರವಷ್ಟೇ ಗೊತ್ತಾಗ್ತಾ ಇತ್ತು. ಕೆಲವೆಡೆ ಹಾದಿ ಸುಗಮವಾಗಿತ್ತು, ಆದ್ರೆ ಇನ್ನು ಕೆಲ ರಸ್ತೆಗಳು ಸವಾಲಿನದಾಗಿದ್ದವು.ಕೆಲವೊಮ್ಮೆ ಅಂದುಕೊಂಡಂತೆ ಸರಿಯಾದ ಸಮಯಕ್ಕೆ ತಲುಪಬೇಕಾದ ಸ್ಥಳವನ್ನ ಮುಟ್ಟುತ್ತಿದ್ದೆವು. ಆದ್ರೆ ಕೆಲವೊಮ್ಮೆ ಬಹಳ ತಡವಾಗ್ತಾ ಇತ್ತು. ಹೊಸ ಸ್ಥಳ, ಅಪರಿಚಿತ ಜನರೂ ಕೆಲವೇ ನಿಮಿಷಗಳಲ್ಲಿ ನಮಗೆ ಪರಿಚಿತರಾಗ್ತಿದ್ದರು' ಅಂತಾರೆ ರಶ್ಮಿ ಕೊಪ್ಪರ್.

ಹಲವು ತಿಂಗಳುಗಳ ಸಿದ್ದತೆ

ಹೀಗೊಂದು ಸಾಧನೆ ಮಾಡಬೇಕು ಅಂತಾ ಹೊರಟಾಗ ನಡೆಸಿದ ಸಿದ್ದತೆ ಅಷ್ಟಿಷ್ಟಲ್ಲ. ಜೀಪ್ ಮೂಲಕ ತೆರಳಲು ಅವಶ್ಯವಿರುವ ಪರವಾನಗಿ, ಎಲ್ಲಾ ರಾಷ್ಟ್ರಗಳ ವೀಸಾಗಳು, ಪೆಟ್ರೊಲ್ ಬಂಕ್​​ಗಳು ಎಲ್ಲೆಲ್ಲಿ ಸಿಗಬಹುದು, ನಾವು ಎಲ್ಲಿಲ್ಲಿ ಉಳಿದುಕೊಳ್ಳಬಹುದು. ಸೇಫ್ ಆಗಿರುವ ಪ್ರದೇಶಗಳು ಯಾವುವು. ಅನ್ಸೇಪ್ ಎನಿಸಿಕೊಳ್ಳುವ ಮಾರ್ಗಗಳು ಯಾವುವು ಎಲ್ಲೆಲ್ಲಿ ಸಾಗಬೇಕು ಎಲ್ಲೆಲ್ಲಿ ಉಳಿದುಕೊಳ್ಳಬೇಕು ಹೀಗೆ ಒಂದು ದೊಡ್ಡ ಪಟ್ಟಿಯೇ ಸಿದ್ದಗೊಂಡಿತ್ತು. ಸರಿಯಾದ ಯೋಜನೆ ರೂಪಿಸಿಕೊಂಡಿದ್ದ ಮೂವರು ಯಶಸ್ವಿಯಾಗಿ ಗುರಿ ಮುಟ್ಟಿದ್ದರು. ಮಹಿಂದ್ರಾ ಫಸ್ಟ್ ಚಾಯ್ಸ್ ಇವರ ಈ ಪ್ರಯಾಣಕ್ಕೆ ಸ್ಪಾನ್ಸರ್ ಆಗಿತ್ತು. ಆರ್ಕಟಿಕ್ ಸರ್ಕಲ್​​ಗೆ ಮೊದಲ ಬಾರಿಗೆ ಮಹೀಂದ್ರ ಜೀಪ್ ತೆಗೆದುಕೊಂಡು ಹೋದ ಹೆಗ್ಗಳಿಕೆಗೂ ಈ ಮೂವರ ತಂಡ ಪಾತ್ರವಾಗಿದೆ. 35ರ ಆಸುಪಾಸಿನಲ್ಲಿರುವ ಈ ಮೂವರಿಗೂ ತನ್ನದೆ ಆದ ಕುಟುಂಬವಿದೆ. ಮಕ್ಕಳೂ ಇದ್ದಾರೆ. ಅವ್ರೆಲ್ಲ ನಮಗೆ ತುಂಬಾ ಸಪೋರ್ಟ್ ಮಾಡಿದ್ದಾರೆ ಅಂತಾ ಸಂತಸ ವ್ಯಕ್ತಪಡಿಸ್ತಾರೆ. 'ನಾವು ಹೀಗೊಂದು ಯೋಜನೆಯನ್ನ ಕುಟುಂಬಸ್ಥರಿಗೆ ತಿಳಿಸಿದಾಗ ಅವರು ಪ್ರೋತ್ಸಾಹಿಸಿದ್ರು. ನಾವು ಸಂಚರಿಸುವಾಗ ಬಹುತೇಕ ಕಡೆಗಳಲ್ಲ ವೈಫೈ ಸಿಗ್ತಾ ಇತ್ತು. ಹಾಗಾಗಿ,ಆಗಾಗ ಮನೆಯವರೊಂದಿಗೆ ಮಾತನಾಡಲು ಸಾಧ್ಯವಾಗ್ತಾ ಇತ್ತು. ಎಲ್ಲಾ ಕಾಲದಲ್ಲೂ ನಮ್ಮ ಬೆಂಬಲಕ್ಕಿದ್ದ ನನ್ನ ಫ್ಯಾಮಿಲಿಗೆ ಧನ್ಯವಾದಗಳು' ಅಂತಾರೆ ಸೌಮ್ಯ ಗೋಯಲ್.

ಮಹಿಳಾ ಚಾಲಕರಿಗೆ ಸ್ಪೂರ್ತಿಯಾದ್ರು

ವುಮೆನ್ ಬಿಯಾಂಡ್ ಬೌಂಡರೀಸ್ ಎನ್ನುವ ಮಹಿಳಾ ಚಾಲಕರ ಕಮ್ಯೂನಿಟಿಗೆ ಸೇರಿದವರಾಗಿದ್ದಾರೆ ಈ ಮೂವರು. ವೃತ್ತಿಯಲ್ಲಿ ರಶ್ಮಿ ಕೊಪ್ಪರ್ ಫ್ರೊಫೆಸರ್, ಸೌಮ್ಯ ಫಿಸಿಯೋಥೆರಪಿಸ್ಟ್. ಟ್ರಾವೆಲಿಂಗ್ ಇವರ ಹವ್ಯಾಸ. ಹದಿನೇಳು ರಾಷ್ಟ್ರಗಳನ್ನ ರಸ್ತೆ ಮಾರ್ಗದಲ್ಲಿ , ಯಾವುದೇ ಬ್ಯಾಕಪ್ ಕಾರ್ ಇಲ್ಲದೆ ಸಾಗಿರುವ ಇವರ ಸಾಧನೆ ನಿಜಕ್ಕೂ ಅದೆಷ್ಟೋ ಮಹಿಳಾ ಚಾಲಕರಿಗೆ ಸ್ಪೂರ್ತಿಯಾಗಿದೆ.