ಛತ್ರಿ ಮಾರುವ ಎಂಬಿಎ ಪದವೀಧರ

ಟೀಮ್​ ವೈ.ಎಸ್​​​.

0

ಧಾರ್ಮಿಕ ಕಾರ್ಯಕ್ರಮಗಳಲ್ಲಿ, ಫೋಟೋಗ್ರಫಿಯಲ್ಲಿ ಇದನ್ನು ಬಳುಸುತ್ತಾರೆ. ಆಕ್ರಮಣ ಮಾಡಲೂ ಹಾಗೆಯೇ, ಆಕ್ರಮಣದಿಂದ ತಪ್ಪಿಸಿಕೊಳ್ಳಲೂ ಸಹ ಇದರ ಬಳಕೆಯಾಗುತ್ತದೆ. ಇದರ ಮೊಟ್ಟಮೊದಲ ಉಲ್ಲೇಖವಾಗಿದ್ದು 24 ಶತಮಾನಗಳ ಹಿಂದೆ. ಆಗ ಅದರ ಹೆಸರು ‘ಝೌ ಲಿ’ ಎಂದಾಗಿತ್ತು. ಭಾರತೀಯ ಸಂದರ್ಭದಲ್ಲಿ, ಮಹಾಭಾರತದ ಜಮದಗ್ನಿ ಹಾಗೂ ಆತನ ಪತ್ನಿ ರೇಣುಕಾಳ ಘಟನೆಯಲ್ಲಿ ಇದರ ಉಲ್ಲೇಖವಿದೆ.

ನಮಗೆಲ್ಲರಿಗೂ ತಿಳಿದಿರುವಂತೆ ಮಳೆ ಮತ್ತು ಬಿಸಿನಿಲಿಂದ ರಕ್ಷಣೆ ಪಡೆಯಲು ಛತ್ರಿಯನ್ನು ಬಳಸುತ್ತೇವೆ. ಆದರೆ, ಇದೇ ಛತ್ರಿಯನ್ನಿಟ್ಟುಕೊಂಡು ವಿಭಿನ್ನವಾಗಿ ಯೋಚಿಸಿದ ಪ್ರತೀಕ್ ದೋಷಿ ಮಾತ್ರ, ಈ ಸಾಮಾನ್ಯ ಛತ್ರಿಗಳ ಮೇಲೆಯೇ ತಮ್ಮ ಬೃಹತ್ ವ್ಯಾಪಾರವನ್ನು ಆರಂಭಿಸಿದರು. ಕೇವಲ ಎರಡು ತಿಂಗಳ ಅವಧಿಯಲ್ಲಿ 30 ಲಕ್ಷ ರೂಪಾಯಿ (50 ಸಾವಿರ ಯುಎಸ್ ಡಾಲರ್) ಗಳಿಗಿಂತಲೂ ಹೆಚ್ಚು ಸಂಪಾದಿಸಿದ ಪ್ರತೀಕ್, ತುಂಬು ಹೃದಯದಿಂದ ಮಳೆಯನ್ನು ಸ್ವಾಗತಿಸಿ, ಅಪ್ಪಿಕೊಳ್ಳುತ್ತಾರೆ.

ಆರಂಭಿಕ ದಿನಗಳು...

ಸಣ್ಣ ಮಾರುಕಟ್ಟೆಯಲ್ಲಿ ಕೆಲವೇ ಕೆಲವು ಕೊಡೆಗಳನ್ನು ಮಾರುವ ಮೂಲಕ 2014 ರಲ್ಲಿ ಪ್ರತೀಕ್ ಚೀಕಿ ಚಂಕ್ ಆರಂಭಿಸಿದರು. ಆರಂಭದಲ್ಲಿ ದೊರಕಿದ ಉತ್ತಮ ಪ್ರತಿಕ್ರಿಯೆಯಿಂದ ಪ್ರೇರಿತರಾಗಿ, ವಿಭಿನ್ನ ಡಿಸೈನ್ ಗಳುಳ್ಳ, ಕೈಗೆಟಕುವ ಬೆಲೆಯ ಕೊಡೆಗಳನ್ನು ಮಾರುವ ಕಂಪನಿಯನ್ನು ಸ್ಥಾಪಿಸುವ ನಿರ್ಧಾರ ಮಾಡಿದರು. ಪ್ರತೀಕ್ ಹೇಳುತ್ತಾರೆ, “ ಎರಡು ಕಾರಣಗಳಿಂದಾಗಿ ನನಗೆ ಈ ಆಲೋಚನೆ ಬಂತು. ಇದನ್ನು ಮೊದಲು ಯಾರೂ ಮಾಡಿರಲಿಲ್ಲ, ಹೀಗಾಗಿ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಬಳಸುವ ವಿಪುಲ ಅವಕಾಶವಿತ್ತು. ಎರಡನೆಯದಾಗಿ, ಮತ್ತೊಬ್ಬರನ್ನು ಶ್ರೀಮಂತರನ್ನಾಗಿ ಮಾಡುವ ಏಕತಾನತೆಯ ಕೆಲಸವನ್ನು ಸಹಿಸಿಕೊಳ್ಳುವುದು ನನ್ನಿಂದ ಸಾಧ್ಯವಿರಲಿಲ್ಲ”

ತಮ್ಮ ಕೊಡೆ ಮಾರಾಟ ಮಾಡುವ ಯೋಚನೆಗೆ ಹಾಗೂ ಅದನ್ನೇ ವೃತ್ತಿಯಾಗಿ ಆಯ್ದುಕೊಳ್ಳಲು ಹೊರಟಾಗ ತಮ್ಮ ಗೆಳೆಯರು ಬೆನ್ನ ಹಿಂದೆ ಗೇಲಿ ಮಾಡಿದ್ದನ್ನುಪ್ರತೀಕ್ ನೆನಪಿಸಿಕೊಳ್ಳುತ್ತಾರೆ. ಎಂಬಿಎ ಮುಗಿಸಿದ ಪ್ರತೀಕ್ ಗೆಳೆಯರು ದೊಡ್ಡ ಮೊತ್ತದ ಸಂಬಂಳದ ಚೆಕ್ ಗಳನ್ನು ಪಡೆಯುತ್ತಿದ್ದರೆ, ಪ್ರತೀಕ್ ಮಾತ್ರ ತಮ್ಮ ಯೋಚನೆಯನ್ನು ಅನುಷ್ಠಾನಗೊಳಿಸಲು ಅಗತ್ಯವಾಗಿರುವ ಕನಿಷ್ಠ ಬಂಡವಾಳದ ಹುಡುಕಾಟದಲ್ಲಿ ಊರೆಲ್ಲ ಸುತ್ತುತ್ತಿದ್ದರು.

ಪ್ರತೀಕ್ ದೋಷಿ, ಸಂಸ್ಥಾಪಕ, ಚೀಕಿ ಚಂಕ್
ಪ್ರತೀಕ್ ದೋಷಿ, ಸಂಸ್ಥಾಪಕ, ಚೀಕಿ ಚಂಕ್

ಪ್ರತೀಕ್, ಅಂತೂ ಇಂತೂ ತಮ್ಮ ಗೆಳೆಯರು ಹಾಗೂ ಕುಟುಂಬದ ಮೂಲಕ 500 ಕೊಡೆಗಳನ್ನು ತಯಾರಿಸಿ, ಮಾರುವಲ್ಲಿ ಯಶಸ್ವಿಯಾದರು. ಇದಕ್ಕಾಗಿ ಕಾಲೇಜುದಿನಗಳಲ್ಲಿ ಮನೆಪಾಠ ಹೇಳಿಕೊಟ್ಟು ಸಂಪಾದಿಸಿದ್ದ 1,35,000 ರೂಪಾಯಿಗಳ ಬಂಡವಾಳ ಹೂಡಿದ್ದರು. ಈ ಹಣ ಛತ್ರಿಯ ಡಿಸೈನ್, ಉತ್ಪಾದನೆ ಹಾಗೂ ವೆಬ್ ಸೈಟ್ ಅನ್ನೂ ರೂಪಿಸುವುದರಲ್ಲೇ ಖರ್ಚಾಯಿತು. ಅವರ ಈ ಯೋಚನೆ ಅನುಷ್ಠಾನಗೊಂಡರೂ, ಹೇಳಿಕೊಳ್ಳುವಂತಹ ಲಾಭವೇನೂ ಬರಲಿಲ್ಲ.

ಪ್ರತೀಕ್ ನೆನೆಸಿಕೊಳ್ಳುತ್ತಾರೆ.....

ಓದು ಮುಗಿದ ನಂತರ, ನಾನು ನಿರುದ್ಯೋಗಿಯಾಗಿದ್ದೆ. ಟೈಮ್ ಪಾಸ್ ಮಾಡುವ ಹಂತ ಮುಗಿದಿದ್ದು, ಸೂಕ್ತ ಉದ್ಯೋಗವನ್ನು ಹುಡುಕಿಕೋ ಎಂದು ನನ್ನ ಸುತ್ತಲಿನ ಜನ ಹೇಳುತ್ತಿದ್ದರು. ನನ್ನ ಗೆಳೆಯರು ಒಂದೆರಡು ತಿಂಗಳಿನಲ್ಲಿ ಡೆಸ್ಕ್ ಜಾಬ್ ಗಳಲ್ಲಿ ಕೂತು ಗಳಿಸಿದ ಮೊತ್ತವನ್ನು ನಾನು ಗಳಿಸಲು ನನಗೆ ಒಂದೂವರೆ ವರ್ಷಕ್ಕಿಂತಲೂ ಜಾಸ್ತಿ ಹಿಡಿಯಿತು. ಜೊತೆಗೆ, ಇದಕ್ಕಾಗಿ ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹಲವಾರು ಬಾರಿ ಇಷ್ಟು ಕಷ್ಟಪಡುವುದು ನಿಜವಾಗಲೂ ಅಗತ್ಯವೆ? ಈ ಕಷ್ಟಕ್ಕೆ ಏನಾದರೂ ಅರ್ಥವಿದೆಯೆ ಎಂದು ಅನ್ನಿಸಿದ್ದುಂಟು.

ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಎಂಬಿಎ ಪದವೀಧರನೊಬ್ಬ ಎರಡು ವರ್ಷದಲ್ಲಿ ಗಳಿಸುವಷ್ಟು ಮೊತ್ತವನ್ನು ಪ್ರತೀಕ್, ಕೇವಲ ಛತ್ರಿಗಳನ್ನು ಮಾರುವ ಮೂಲಕ ಮೂರೇ ತಿಂಗಳಿನಲ್ಲಿ ಗಳಿಸುತ್ತಾರೆ.

ಚೀಕಿ ಚಂಕ್​​ನ ಪ್ಯಾಕೇಜಿಂಗ್​​ ವಿಭಾಗ
ಚೀಕಿ ಚಂಕ್​​ನ ಪ್ಯಾಕೇಜಿಂಗ್​​ ವಿಭಾಗ

ಕಷ್ಟದ್ದಾಗಿತ್ತು ಆದರೆ ಸಾರ್ಥಕವಾಗಿತ್ತು...!

ಸುಂದರ ಮತ್ತು ಉತ್ತಮ ಗುಣಮಟ್ಟದ ಛತ್ರಿಯೊಂದನ್ನೂ ತಯಾರಿಸುವುದು ಸುಲಭದ ಕೆಲಸವಲ್ಲ. ಅದಕ್ಕಾಗಿ ಛತ್ರಿಯ ಹಿಡಿಕೆ, ಪ್ಯಾನೆಲ್, ಬಟ್ಟೆ, ಫ್ರೇಮ್, ಹೊಲಿಗೆ, ಡಿಸೈನ್ ಗಳ ಮುದ್ರಣ – ಎಲ್ಲವೂ ನಿಖರ ಮತ್ತು ಪರಿಪೂರ್ಣವಾಗಿರಬೇಕು. ಛತ್ರಿ ತಯಾರಿಕೆಗಾಗಿ, ಪ್ರತೀಕ್ ಫ್ರೇಮ್ ಗಳನ್ನು ರಾಜಸ್ಥಾನದಿಂದ ಹಾಗೂ ಬಟ್ಟೆಯನ್ನು ಸ್ಥಳೀಯ ಪೂರೈಕೆದಾರರಿಂದ ತರಿಸುತ್ತಾರೆ. ಡೈಸೈನ್ ಮುದ್ರಣ ಹಾಗೂ ಹೊಲಿಗೆಯನ್ನು ಗುತ್ತಿಗೆ ನೀಡುತ್ತಾರೆ. “ನಿಗದಿತ ವೇಳೆಯಲ್ಲಿ ಛತ್ರಿಯನ್ನು ತಯಾರಿಸಲು ನಾನು ಎಲ್ಲ ರೀತಿಯ ಕೆಲಸ ಮಾಡಿದ್ದೇನೆ. ಹತ್ತು ಕೇಜಿ ಬಟ್ಟೆ ಬೆನ್ನ ಮೇಲೆ ಹೊತ್ತು ಒಂದು ಕಿಲೋಮೀಟರ್ ನಡೆದಿದ್ದೇನೆ. ಅಲ್ಪ ಬೆಳಕಿನ ಕೋಣೆಯಲ್ಲಿ ಮುದ್ರಕರ ಜೊತೆ ಕುಳಿತು ಉತ್ತಮ ಡಿಸೈನ್ ಗಳಿಗಾಗಿ ಮನವೊಲಿಸಿದ್ದೇನೆ” ಎಂದು ಪ್ರತೀಕ್​​ ಹೇಳುತ್ತಾರೆ

ಚೀಕಿ ಚಂಕ್ ನಲ್ಲಿ ಪ್ಯಾಕೇಜಿಂಗ್..

ಛತ್ರಿಗಳ ಆರ್ಡರ್ ದಿನಕ್ಕೆ 400 ಮೀರಿದ್ದರಿಂದ, ಸಣ್ಣ ತಂಡಕ್ಕೆ ಪ್ರತಿಯೊಂದು ಛತ್ರಿಯನ್ನು ಪ್ಯಾಕ್ ಮಾಡುವುದು, ಗುಣಮಟ್ಟವನ್ನು ಪರೀಕ್ಷಿಸುವುದು, ಬಿಲ್ ಬರೆಯುವುದು ಹಾಗೂ ಇತರ ಸಣ್ಣಪುಟ್ಟ ಕೆಲಸಗಳನ್ನು ಮಾಡುವುದು ಅಸಾಧ್ಯವಾಯಿತು. “ವಿವಿಧ ಪರಿಣಿತರು, ವಿವಿಧ ಪ್ರಕ್ರಿಯೆಗಳಿಂದ ಮಾಡುವ ಮದುವೆಯ ಹಾಗಿತ್ತು ನಮ್ಮ ಪರಿಸ್ಥಿತಿ. ಅದು ಸುಲಭವಾಗಿರಲಿಲ್ಲ, ಆದರೆ ಮೌಲ್ಯಯುತವಾಗಿತ್ತು. ಈ ಸಮಸ್ಯೆಯನ್ನು ಬಗೆಹರಿಸಲು ಇ-ಕಾಮರ್ಸ್ ನಲ್ಲಿ ನಮಗೆ ಪರಿಯವಿರುವ ಪ್ರತಿಯೊಬ್ಬರಿಗೂ ಕರೆ ಮಾಡಿ ಅವರು ಕೆಲಸ ಮಾಡುವ ಪದ್ಧತಿಯನ್ನು ಅರ್ಥಮಾಡಿಕೊಂಡೆವು” ಎಂದು ಹೇಳಲು ಪ್ರತೀಕ್​​ ಮರೆಯೋದಿಲ್ಲ.

ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಪೈ ಚಾರ್ಟ್ ಗಳನ್ನು, ಎಕ್ಸೆಲ್ ಶೀಟ್ ತಯಾರಿಸುವುದನ್ನು ಕಲಿಸಲಾಗುತ್ತದೆ. ಆದರೆ ನಿಜವಾದ ಕಲಿಕೆ ಉದ್ಯೋಗ ಮಾಡಿದಾಗ ಆಗತ್ತದೆ ಎಂದು ಪ್ರತೀಕ್ ನಂಬುತ್ತಾರೆ. “ನೀವು ರಸ್ತೆ ಬದಿಗೆ ಹೋಗಿ ಅಲ್ಲಿ ಕೆಲಸ ಹೇಗೆ ನಡೆಯುತ್ತದೆ ಎಂದು ಗಮನಿಸಿದರೆ, ಒಂದು ವಿಭಿನ್ನ ಅನುಭವ ನಿಮಗಾಗುತ್ತದೆ. ನಾನು ಮನುಷ್ಯರ ವರ್ತನೆ, ಚೌಕಾಸಿ ಮಾಡುವ ಬಗೆ ಸಾಕಷ್ಟು ಕಲಿತೆ. ಇದೆಲ್ಲಕ್ಕಿಂತ ಹೆಚ್ಚಾಗಿ ನಾನು ಕಲಿತ ದೊಡ್ಡ ಪಾಠವೆಂದರೆ ಗೀತೆಯಲ್ಲಿ ಹೇಳಿದ ಹಾಗೆ ಕರ್ಮಣ್ಯೆವಾಧಿಕಾರಸ್ತೆ ಮಾ ಫಲೇಷು ಕದಾಚನ (ಕರ್ಮ ಮಾಡುವುದರ ಮೇಲಷ್ಟೇ ನಿನಗೆ ಅಧಿಕಾರವಿದೆ, ಅದರ ಫಲವನ್ನು ಮಾತ್ರ ಬಯಸಬೇಡ).

ಏಳು ಜನರ ಚೀಕಿ ಚಿಂಕ್ ತಂಡದಲ್ಲಿ ಇಬ್ಬರು ಎಂಬಿಎ ಕಲಿಯುತ್ತಿರುವವರು, ಓರ್ವ ಅಕೌಂಟಂಟ್ ಮತ್ತು ಇಬ್ಬರೂ ಪೂರ್ಣಾವಧಿ ಕೆಲಸಗಾರಿದ್ದಾರೆ. ಇವರು ಛತ್ರಿಯ ಗುಣಮಟ್ಟ ಪರೀಕ್ಷಿಸಿ, ಪ್ಯಾಕ್ ಮಾಡುತ್ತಾರೆ. ನೀರನ್ನು ಹಾಯಿಸಿ ಪ್ರತಿಯೊಂದು ಛತ್ರಿಯ ಗುಣಮಟ್ಟವನ್ನು ಪರೀಕ್ಷಿಸುವುದರಿಂದ ಗ್ರಾಹಕರಿಂದ ಛತ್ರಿಗಳು ತಿರಸ್ಕೃತಗೊಳ್ಳುವುದಿಲ್ಲ.

ಖರ್ಚಿಲ್ಲದ ಮಾರ್ಕೆಟಿಂಗ್.

ಪ್ರತೀಕ್ ಅವರ ಪ್ರಕಾರ, ಚೀಕಿ ಚಂಕ್ ಮಾರ್ಕೆಟಿಂಗ್ ಮಾಡುವಲ್ಲಿ ಫೋಟೋಗ್ರಫಿ ಪ್ರಮುಖ ಪಾತ್ರ ವಹಿಸಿದೆ. ಇ-ಕಾಮರ್ಸ್ ಜಾಲತಾಣಗಳ ಮೂಲಕ ಕೂಡ ಮಾರ್ಕೆಟಿಂಗ್ ಮಾಡುವುದು ಮುಖ್ಯ ಎಂದು ಪ್ರತೀಕ್ ಭಾವಿಸುತ್ತಾರೆ. “ವೆಬ್ ಸೈಟಿನಲ್ಲಿ ವಸ್ತುವಿನ ಚಿತ್ರವನ್ನು ಅಪ್ ಲೋಡ್ ಮಾಡಿದ ಕ್ಷಣದಿಂದ ಮಾರ್ಕೆಟಿಂಗ್ ಆರಂಭವಾಗುತ್ತದೆ. ವಸ್ತುವಿನ ಶೋಧನೆಗೆ ಬಳಸುವ ಕೀ ವರ್ಡ್ ಗಳೇ ಮೊದಲ ಪರಿಷ್ಕರಣೆಯನ್ನು ಮಾಡುತ್ತವೆ. ಹೀಗಾಗಿ ನಾವು ಸುಮಾರು 100 ಕೀ ವರ್ಡ್ ಗಳನ್ನು ಹಾಕಿದ್ದೇವೆ. ಆ ಮೂಲಕ ಗ್ರಾಹಕರು ನಮ್ಮ ವಸ್ತುಗಳನ್ನು ನೋಡಬಹುದು. ಕೆಲವೊಂದು ಕೀ ವರ್ಡ್ ಗಳು ತನ್ನಿಂದ ತಾನೇ ಪೂರ್ಣಗೊಳ್ಳತ್ತವೆ. ನಾನು ಮೇ 27 ರಂದು ತುಂಬಾ ಟೆನ್ಶನ್ ನಲ್ಲಿದ್ದೆ. ಯಾಕೆಂದರೆ ಅಂದು ನಾನು ನಮ್ಮ ಛತ್ರಿಯನ್ನು ಮೊಟ್ಟಮೊದಲಬಾರಿಗೆ ಅಮೇಜಾನ್ ನಲ್ಲಿ ಮಾರಾಟಕ್ಕಿಟ್ಟಿದ್ದೆ. ಅಂದೇ ನನ್ನ ಅಂಕಲ್ ಗೆ ಕರೆ ಮಾಡಿ ಆ ಛತ್ರಿಯನ್ನು ಖರೀದಿ ಮಾಡುವಂತೆ ವಿನಂತಿಸಿದೆ. ಮೊದನ ದಿನ ಕನಿಷ್ಠ ಒಂದಾದರೂ ಸೇಲ್ ಆಗಲಿ ಎಂಬ ದೃಷ್ಟಿಯಿಂದ. ಆಗ ನಮ್ಮ ಛತ್ರಿ 20 ನೇ ಪುಟದಲ್ಲಿತ್ತು. ಕೇವಲ ಮೂರು ವಾರಗಳ ನಂತರ ನಮ್ಮ ಛತ್ರಿ ಮೊದಲ ಪುಟಕ್ಕೆ ಬಂತು, ಅಷ್ಟೇ ಅಲ್ಲ amazon.in ನಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಛತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು” ಎನ್ನುತ್ತಾರೆ ಪ್ರತೀಕ್.

ನಂಬರ್ ಗಳ ಸುರಿಮಳೆ

ಪ್ರಸ್ತುತ ಚೀಕಿ ಚಂಕ್​ ತನ್ನ ಉತ್ಪಾದನೆಗಳನ್ನುತನ್ನ ಸ್ವಂತ ವೆಬ್ ಸೈಟ್, ಫ್ಲಿಪ್ ಕಾರ್ಟ್, ಅಮೇಜಾನ್, ಸ್ನಾಪ್ ಡೀಲ್ ಹಾಗೂ ಮುಂಬೈನ (ಬಾಂದ್ರಾ, ಮಾತುಂಗಾ, ಬ್ರೀಚ್ ಕ್ಯಾಂಡಿ ಮತ್ತು ಚರ್ಚ್ ಗೇಟ್) ಕೆಲ ಭಾಗಗಳಲ್ಲಿ ಮಾರಾಟ ಮಾಡುತ್ತಿದೆ. ಆದರೆ ಮಾರಾಟದ ಬಹುಭಾಗ ಇ-ಕಾಮರ್ಸ್ ವೆಬ್ ಸೈಟ್​ಗ​ಳಿಂದ ಬರುತ್ತಿದೆ. ಚೀಕಿ ಚಂಕ್ ಈಗಾಗಲೇ ಪ್ರಸಕ್ತ ವರ್ಷದಲ್ಲಿ 7000 ಛತ್ರಿಗಳನ್ನು ಮಾರಾಟ ಮಾಡಿದೆ. ಆದರೆ ಅದರ ಗುರಿ ಇದ್ದದ್ದು ಮಾತ್ರ 1000. ಬಿಹಾರ್, ಛತ್ತೀಸ್ ಘರ್, ಓಡಿಶಾ ಸೇರಿದಂತೆ ದ್ವಿತೀಯ ಮತ್ತು ತೃತೀಯ ಶ್ರೇಣಿ ಪಟ್ಟಣಗಳಲ್ಲಿ ಶೇ. 40 ರಷ್ಟು ವ್ಯಾಪಾರವಾಗಿದೆ. ಇವರಲ್ಲಿ ಹಲವರು ಸಗಟು ಮಾರಾಟಗಾರರಾಗಿದ್ದು, ಸಗಟು ರೂಪದಲ್ಲಿ ಖರೀದಿಸಿ ನಂತರ ಚಿಲ್ಲರೆ ಮಾರಾಟ ಮಾಡುತ್ತಾರೆ. ಈ ಸೀಸನ್​ನಲ್ಲಿ ಛತ್ರಿಗಳ ಮಾರಾಟದ ಸಂಖ್ಯೆ 10 ಸಾವಿರ ತಲುಪಬಹುದು ಎಂದು ನಂಬಿದ್ದಾರೆ ಪ್ರತೀಕ್. ಆರಂಭದಲ್ಲಿ, ಸಗಟು ಮಾರಾಟದಾರರಿಗೆ ಅಲ್ಪ ಪ್ರಮಾಣದ ಟೋಕನ್ ಮೊತ್ತವನ್ನು ನೀಡಿ, ಸಾಲದ ಅವಧಿಯನ್ನು ಹೆಚ್ಚಿಸುವಂತೆ ನೋಡಿಕೊಂಡಿದ್ದಾರೆ.

ಭಿನ್ನರಾಗಿ ಕಾಣಿ....

ಚೀಕಿ ಚಂಕ್ ಸಾವಧಾನವಾಗಿ ಒಂದೊಂದೇ ಮೆಟ್ಟಿಲು ಹತ್ತುತ್ತಿದೆ. ಕಂಪನಿ ಈಗಾಗಲೇ ಕೆಲವು ವಿನೂತನ ಮಾದರಿಗಳನ್ನು ತಯಾರಿಸಿದ್ದು ಈ ದೀಪಾವಳಿಯ ವೇಳೆಗೆ ಅವು ಮಾರುಕಟ್ಟೆ ಪ್ರವೇಶಿಸಲಿವೆ. ಈ ವ್ಯಾಪಾರದಲ್ಲಿ ಮುಂದುವರೆಯಬೇಕೆಂದರೆ ವಿನೂತನ ಮಾದರಿಯ ವಸ್ತುಗಳನ್ನು ಒಂದೊಂದಾಗಿ ಹಾಗೂ ನಿರಂತರವಾಗಿ ನೀಡುತ್ತಿರಬೇಕು ಎಂದು ಪ್ರತೀಕ್ ಭಾವಿಸುತ್ತಾರೆ. ಪ್ರತೀಕ್, ಬಂಡವಾಳ ಹೂಡಿಕೆದಾರರ ನಿರೀಕ್ಷೆಯಲ್ಲಿದ್ದಾರೆ.

“ಹತ್ತು ಜನರ ಗುಂಪು ಕೇವಲ ಕಪ್ಪು ಛತ್ರಿಗಳನ್ನು ಹಿಡಿದುಕೊಂಡಿರುವಾಗ ಹನ್ನೊಂದನೆಯ ವ್ಯಕ್ತಿ ವಿನೂತನ ಮಾದರಿಯ ಹಳದಿ ಛತ್ರಿಯನ್ನು ಹಿಡಿದರೆ, ನಿಮ್ಮ ಮುಖದ ಮೇಲೆ ಮಂದಹಾಸ ಮೂಡದೇ ಇರದು. ನಾವು ನಮ್ಮ ಎಲ್ಲ ಉತ್ಪನ್ನಗಳನ್ನೂ ಹೀಗೆ ವಿಭಿನ್ನವಾಗಿ ಮಾಡಬೇಕು ಎಂದುಕೊಂಡಿದ್ದೇವೆ” ಅನ್ನುತ್ತಾರೆ ಪ್ರತೀಕ್.

ಬಾಡಿಗೆಗೆ, ಗುತ್ತಿಗೆಗೆ, ಕಂಪನಿಯ ವಿಸ್ತರಣೆಗೆ ಪ್ರತೀಕ್ ತುಡಿಯುತ್ತಿದ್ದಾರೆ. ಹತ್ತರಲ್ಲಿ ಹನ್ನೊಂದನೆಯವರಾಗದೆ, ಭಿನ್ನವಾಗರಿಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಆತ್ಮವಿಶ್ವಾಸದ ಮೂಲಕ ಪ್ರತೀಕ್ ತಮ್ಮ ದೂರದರ್ಶಿತ್ವವನ್ನು ಹೀಗೆ ಹೇಳುತ್ತಾರೆ –“ಒಂದು ಸಾಧಾರಣ ಕಾಫಿ ಮಗ್ ಅಥವಾ ಸಾಧಾರಣ ಟಿ – ಶರ್ಟ್ ಅನ್ನು ಎಂದಿಗೂ ನೀವು ನೋಡಲಾರಿರಿ. ಈಗಾಗಲೇ ಹಲವರು ಇದನ್ನೇ ಮಾಡುತ್ತದ್ದಾರೆ, ಆದರೆ ನಾವು ಮಾತ್ರ ಇದನ್ನೇ ಪುನಾರಾವರ್ತಿಸಲು ಸಿದ್ಧರಿಲ್ಲ. ಅದ್ಭುತ ಸೃಜನ ಶೀಲತೆಯನ್ನು ನಮ್ಮಿಂದ ಶೀಘ್ರವೇ ಕಾಣಲಿದ್ದೀರಿ”


Related Stories