``ರಂಗೋಲಿ ಬಿಡಿಸಬಲ್ಲ ಮಹಿಳೆ ಗ್ರಾಫಿಕ್ಸ್ ಡಿಸೈನ್ ಕೂಡ ಮಾಡಬಲ್ಲಳು’’ –ಆವೋ ಸಾಥ್ ಮಾ

ಟೀಮ್ ವೈ.ಎಸ್​. ಕನ್ನಡ

``ರಂಗೋಲಿ ಬಿಡಿಸಬಲ್ಲ ಮಹಿಳೆ ಗ್ರಾಫಿಕ್ಸ್ ಡಿಸೈನ್ ಕೂಡ ಮಾಡಬಲ್ಲಳು’’ –ಆವೋ ಸಾಥ್ ಮಾ

Thursday December 24, 2015,

3 min Read


ಭಾರತದಲ್ಲಿ ಸಾಕಷ್ಟು ಮಹಿಳೆಯರು ಮದುವೆಯಾದ್ಮೇಲೆ ತಮ್ಮ ಮನೆ ಕೆಲಸದಲ್ಲಿ ಎಷ್ಟು ಬ್ಯುಸಿಯಾಗ್ತಾರೆಂದ್ರೆ ಅವರಿಗೆ ಬೇರೆ ಕೆಲಸ ಮಾಡಲು ಸಮಯ ಸಿಗುವುದಿಲ್ಲ. ಉದ್ಯೋಗ ಸೇರಿದಂತೆ ತಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಲು ಟೈಂ ಸಾಕಾಗುವುದಿಲ್ಲ. ಅವರು ಎಷ್ಟು ಎತ್ತರಕ್ಕೇರಬಹುದಿತ್ತು ಎಂಬ ಬಗ್ಗೆ ಯೋಜನೆ ಕೂಡ ಮಾಡುವುದಿಲ್ಲ. ಮನೆ ಕೆಲಸದಲ್ಲಿ ತಮ್ಮನ್ನು ತಾವು ಮೆರೆಯುವ ಮಹಿಳೆಯರನ್ನು ಮತ್ತೆ ಸ್ವಾವಲಂಬಿಯಾಗಿ ಮಾಡಿ, ಅವರನ್ನು ಶಿಕ್ಷಿತರನ್ನಾಗಿ ಮಾಡಲು ಆರಂಭವಾದ ಅಭಿಯಾನ `ಆವೋ ಸಾಥ್ ಮಾ’. ರಾಜಧಾನಿ ದೆಹಲಿಯಲ್ಲಿರುವ `ಲಕ್ಷ ಜೀವನ್ ಜಾಗೃತಿ’ ಸಂಸ್ಥೆ ಈ ಕ್ಯಾಂಪೇನ್ ನಡೆಸ್ತಿದೆ. ರಾಹುಲ್ ಗೋಸ್ವಾಮಿ ಹಾಗೂ ಸುಮೈಯಾ ಅಫ್ರೀನ್ ಈ ಸಂಸ್ಥೆಯ ಸಂಸ್ಥಾಪಕರು. ಕಳೆದ ಐದು ವರ್ಷಗಳಿಂದ ಈ ಸಂಸ್ಥೆ ಮಹಿಳೆಯರ ಸಶಕ್ತೀಕರಣ ಕಾರ್ಯದಲ್ಲಿ ನಿರತವಾಗಿದೆ. ಈ ಸಂಸ್ಥೆಯಿಂದ ಇಲ್ಲಿಯವರೆಗೆ ಸುಮಾರು 63 ಸಾವಿರ ಮಹಿಳೆಯರು ಪ್ರಯೋಜನ ಪಡೆದಿದ್ದಾರೆ.

image


ಸುಮೈಯಾ ಬಿಸಿಎ ಹಾಗೂ ಅದರ ನಂತರ ಸಾಮಾಜಿಕ ಸೇವೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಸ್ಟರ್ ಡಿಗ್ರಿ ವೇಳೆ `ಲಕ್ಷ ಜೀವನ್ ಜಾಗೃತಿ’ ಸಹ ಸಂಸ್ಥಾಪಕ ರಾಹುಲ್ ಗೋಸ್ವಾಮಿ ಭೇಟಿಯಾದ್ರು. ಅಹಮದಾಬಾದ್ ನ ಐಐಎಂನಲ್ಲಿ ಸಾಮಾಜಿಕ ಕಾರ್ಯಕ್ಕೆ ಸಂಬಂಧಿಸಿದಂತೆ ಸಂಶೋಧನೆ ಮಾಡ್ತಿದ್ದರು ಗೋಸ್ವಾಮಿ. ಸಂಶೋಧನೆ ವೇಳೆ ಮಹಿಳೆಯರ ಅನಕ್ಷರತೆ ಮತ್ತು ಅವರ ಅಸಹಾಯಕತೆಯ ಅರಿಯಾಯ್ತು. ಇದನ್ನು ಗಮನದಲ್ಲಿಟ್ಟುಕೊಂಡು ಗೋಸ್ವಾಮಿ ಹಾಗೂ ಸುಮೈಯಾ 2009ರಲ್ಲಿ `ಲಕ್ಷ ಜೀವನ್ ಜಾಗೃತಿ’ ಸಂಸ್ಥೆ ಆರಂಭಿಸಿದ್ರು. ನಂತರ ಮಹಿಳೆಯರನ್ನ ಸಬಲೀಕರಣ ಮಾಡುವ ಕೆಲಸದಲ್ಲಿ ಸಮೈಯಾ ಹಾಗೂ ರಾಹುಲ್ ನಿರತರಾದರು.

image


ಅವರು ತಮ್ಮ ಕೆಲಸವನ್ನು ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ಆರಂಭಿಸಿದರು. ತಮ್ಮ ಸುತ್ತಮುತ್ತ ಇರುವ ಅನಕ್ಷರಸ್ಥ ಮಹಿಳೆಯರಲ್ಲಿ ಎಷ್ಟು ಮಂದಿ ಮುಂದೆ ಓದಲು ಇಚ್ಛಿಸುತ್ತಾರೆ. ಹಾಗೂ ಮನೆ ಕೆಲಸ ಬಿಟ್ಟು ಬೇರೆ ಕೆಲಸ ಮಾಡಲು ಬಯಸುತ್ತಾರೆಂಬುದನ್ನು ತಿಳಿಯಲು ಅವರು ಮೊದಲು ಒಂದು ಸರ್ವೆ ಮಾಡಿದ್ರು.

`` ನಾವು 5 ಸಾವಿರ ಮಹಿಳೆಯರ ಸರ್ವೆ ನಡೆಸಿದೆವು. ಅದರಲ್ಲಿ ಅನೇಕ ಮಹಿಳೆಯರು ಓದಲು ಬಯಸಿದ್ದರು. ಹಾಗೂ ಮುಂದೆ ಏನಾದರೊಂದು ಮಾಡಲು ಬಯಸಿದ್ದರು. ಸರ್ವೆ 21 ವರ್ಷದಿಂದ ಹಿಡಿದು 50 ವರ್ಷದೊಳಗಿನ ಮಹಿಳೆಯರನ್ನು ಒಳಗೊಂಡಿತ್ತು. ಅನೇಕ ಮಹಿಳೆಯರು ತಮ್ಮ ಕನಸನ್ನು ನನಸು ಮಾಡಲು ಹಾಗೂ ಜೀವನದಲ್ಲಿ ಸಾಧಿಸಲು ಸಿದ್ಧರಿದ್ದರು ಎಂಬುದು ಸರ್ವೆ ಮೂಲಕ ತಿಳಿಯಿತು.’’ ಎನ್ನುತ್ತಾರೆ ಸುಮೈನಾ.

image


ಮದುವೆ ನಂತರ ಮನೆ ಕೆಲಸದಲ್ಲಿ ಬ್ಯುಸಿಯಾಗಿ ಶಿಕ್ಷಣ ಮರೆತಿದ್ದ ಅನೇಕ ಮಹಿಳೆಯರು ಈಗ ಮತ್ತೆ ಕಲಿಯುವ ಆಸಕ್ತಿ ಹೊಂದಿದ್ದರು. ಮನೆ ಕೆಲಸ ಬಿಟ್ಟು ಬೇರೆ ಕೆಲಸ ಮಾಡುವ ಕನಸು ಕೂಡ ಕಂಡಿದ್ದರು. ಸರ್ವೆಯಲ್ಲಿ ಅನೇಕರು ತಮ್ಮ ಮಕ್ಕಳಿಗೆ ಕಲಿಸುವ ಉದ್ದೇಶದಿಂದ ತಾವು ಶಿಕ್ಷಣ ಕಲಿಯಬೇಕೆಂದು ಬಯಸಿದ್ದರು. ಮತ್ತೆ ಕೆಲವರು ಕಂಪ್ಯೂಟರ್ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂದು ಹಂಬಲಿಸಿದ್ದರು.

image


ಸಾಕ್ಷರತೆ ಮೂಲಕ ಅವರು ತಮ್ಮ ಕೆಲಸ ಆರಂಭಿಸಿದರು. ಕೇಂದ್ರಕ್ಕೆ ಮಹಿಳೆಯರನ್ನು ಕರೆ ತರುವುದು ಸಂಸ್ಥೆಯ ಉದ್ದೇಶವಾಗಿತ್ತು. ಮನೆ ಕೆಲಸದಲ್ಲಿ ಬಿಡುವು ಮಾಡಿಕೊಂಡು ಅಕ್ಷರಾಭ್ಯಾಸ ಮಾಡಲು ಕೇಂದ್ರಕ್ಕೆ ಬರುವುದು ಮಹಿಳೆಯರಿಗೆ ದೊಡ್ಡ ಕೆಲಸವಾಗಿತ್ತು. ಇದನ್ನು ಪರಿಗಣಿಸಿದ ಸಂಸ್ಥೆ ಸಮಯ ಸಿಕ್ಕಾಗ ಬಂದು ಅಕ್ಷರಭ್ಯಾಸ ಮಾಡುವ ಅವಕಾಶ ನೀಡ್ತು. ಇದಕ್ಕಾಗಿ ಸಂಘಟನೆ `ಆವೋ ಸಾಥ್ ಮಾ’ ಎಂಬ ಕ್ಲಬ್ ಆರಂಭಿಸಿತು. ಈ ಕ್ಲಬ್ ನಲ್ಲಿ ಸಮಾಜದ ಎಲ್ಲ ವರ್ಗದ ಮಹಿಳೆಯರಿಗೆ ವಿವಿಧ ಬಗೆಯ ಶಿಕ್ಷಣ ನೀಡಲಾಗುತ್ತದೆ. ಮಹಿಳೆ ಅನಕ್ಷರಸ್ಥೆಯಾಗಿದ್ದರೆ ಇಂಗ್ಲೀಷ್,ಹಿಂದಿ,ಗಣಿತ ವಿಷಯದ ಮೂಲಭೂತ ಶಿಕ್ಷಣ ನೀಡಲಾಗುತ್ತದೆ. ಶಿಕ್ಷಿತ ಮಹಿಳೆ ಅಶಿಕ್ಷಿತ ಮಹಿಳೆಗೆ ಶಿಕ್ಷಣ ನೀಡುತ್ತಾಳೆ. ಇದರಿಂದ ಶಿಕ್ಷಿತ ಮಹಿಳೆಯ ಇಂಗ್ಲೀಷ್ ಮತ್ತಷ್ಟು ಸುಧಾರಿಸುವುದಲ್ಲದೆ, ಕಂಪ್ಯೂಟರ್ ಬಗ್ಗೆ ಆಕೆಗೆ ಮಾಹಿತಿ ಸಿಗುತ್ತದೆ.

ಮಹಿಳೆಯರಿಗೆ ಗ್ರಾಫಿಕ್ಸ್ ಡಿಸೈನ್ ಹಾಗೂ ವೆಬ್ ಡಿಸೈನ್ ಕೋರ್ಸ್ ಕೂಡ ನಡೆಸಲಾಗುತ್ತದೆ.

`` ರಂಗೋಲಿ ಬಿಡಿಸಬಲ್ಲ ಮಹಿಳೆ ಗ್ರಾಫಿಕ್ಸ್ ಡಿಸೈನ್ ಯಾಕೆ ಮಾಡಲ್ಲ’’ ಎನ್ನುತ್ತಾರೆ ಸುಮೈಯಾ.

ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಸೆಂಟರ್ ತೆರೆದಿರುತ್ತದೆ. ಒಂದೂವರೆ ಗಂಟೆ ಕೇವಲ ಮಹಿಳೆಯರಿಗೆ ಅಕ್ಷರಾಭ್ಯಾಸ ಮಾತ್ರವಲ್ಲ ಬದಲಾಗಿ ಕಂಪ್ಯೂಟರ್ ಶಿಕ್ಷಣ ಹಾಗೂ ಆತ್ಮವಿಶ್ವಾಸ ಹೆಚ್ಚಿಸಲು ಕೌನ್ಸಿಲಿಂಗ್ ಕೂಡ ಮಾಡಲಾಗುತ್ತದೆ. ಇಲ್ಲಿ ತರಬೇತಿ ಪಡೆದ ಮಹಿಳೆಯರು ಬ್ಯಾಂಕ್ ಹಾಗೂ ಆಸ್ಪತ್ರೆಯಲ್ಲೊಂದೇ ಅಲ್ಲ, ಕಂಪ್ಯೂಟರ್ ಸಂಬಂಧಿ ಕೆಲಸಗಳನ್ನೂ ಮಾಡ್ತಿದ್ದಾರೆ. ಕೆಲ ಮಹಿಳೆಯರು ಇತರ ಮಹಿಳೆಯರಿಗೆ ಕಲಿಸುವ ಕೆಲಸ ಮಾಡ್ತಿದ್ದಾರೆ. `ಲಕ್ಷ ಜೀವನ್ ಜಾಗೃತಿ’ ಕೇವಲ ಮಹಿಳೆಯರು ಶಿಕ್ಷಣದ ಹಸಿವನ್ನು ಮಾತ್ರ ನೀಗಿಸ್ತಾ ಇಲ್ಲ, ಅವರನ್ನು ಸದೃಢರನ್ನಾಗಿ ಮಾಡ್ತಾ ಇದೆ. ಸ್ವಾವಲಂಭಿ ಬದುಕು ನಡೆಸಲು ನೆರವಾಗ್ತಾ ಇದೆ. ಮಹಿಳೆಯರು ಉದ್ಯೋಗ ಹುಡುಕುವುದೊಂದೇ ಅಲ್ಲ, ತಾವೇ ಉದ್ಯೋಗ ರಚಿಸುವ ಆತ್ಮವಿಶ್ವಾಸ ತುಂಬ್ತಾ ಇದೆ.

image


2013ರಲ್ಲಿ ಐಐಎಂ ಇಂದೋರ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಉತ್ತಮ ಉದ್ಯೋಗ ಮಾದರಿ ಪ್ರಶಸ್ತಿ ಪಡೆದಿದೆ. ಟಾಟಾ ಸೋಶಿಯಲ್ ಎಂಟರ್ ಪ್ರೈಸಸ್ ಆಯ್ಕೆ ಮಾಡಿದ 20 ಸಂಸ್ಥೆಗಳಲ್ಲಿ ಈ ಸಂಸ್ಥೆ ಕೂಡ ಆಯ್ಕೆಯಾಗಿತ್ತು. ಸಾಮಾಜಿಕ ಕಾರ್ಯದಿಂದ ವಾಷಿಂಗ್ಟನ್​​ನಲ್ಲಿರುವ ಗ್ಲೋಬಲ್ ಗುಡ್ ಫಂಡ್ ಗೆ ಸಂಸ್ಥೆ ಆಯ್ಕೆಯಾಗಿದೆ. ವಿವಿಧ ದೇಶಗಳ 14 ಸಾವಿರ ಸಂಘಟನೆಗಳಲ್ಲಿ ಆಯ್ಕೆಯಾದ 12 ಸಂಘಟನೆಗಳಲ್ಲಿ ಇದು ಸ್ಥಾನ ಪಡೆದಿದೆ. ಇಲ್ಲಿಯವರೆಗೆ ಸುಮಾರು 63 ಸಾವಿರ ಮಹಿಳೆಯರು ಸಂಸ್ಥೆಯಿಂದ ಪ್ರಯೋಜನ ಪಡೆದಿದ್ದಾರೆ. ಸ್ವಾವಲಂಬಿಯಾಗುವ ಉದ್ದೇಶದಿಂದ ಪ್ರತಿದಿನ ಇಲ್ಲಿಗೆ ಸುಮಾರು ನೂರಾರು ಮಹಿಳೆಯರು ಬರ್ತಾರೆ. ಸಂಸ್ಥೆಯಲ್ಲಿ 7 ಮಂದಿ ಕೆಲಸ ಮಾಡ್ತಿದ್ದಾರೆ. ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಸ್ಕೂಲ್ ಆಫ್ ಮದರ್ ತೆರೆಯಲು ಸುಮೈಯಾ ಬಯಸುತ್ತಿದ್ದಾರೆ.


ಲೇಖಕ : ಹರೀಶ್ ಬಿಸ್ತ್

ಅನುವಾದಕರು: ರೂಪಾ ಹೆಗಡೆ

    Share on
    close