ವಿದ್ಯಾರ್ಥಿಗಳಿಗೆ ವರದಾನ `ಅಲ್ಮಾಮ್ಯಾಪರ್'

ಟೀಮ್​​ ವೈ.ಎಸ್​​.

0

"ಅಲ್ಮಾಮ್ಯಾಪರ್" ಪುಣೆ ಮೂಲದ ಸಂಸ್ಥೆ. ಶೈಕ್ಷಣಿಕ ತಂತ್ರಜ್ಞಾನಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದೆ. ಒಸ್ವಲ್ ಟೆಕ್ನೋ ವೆಂಚರ್ಸ್ ಎಲ್‍ಎಲ್‍ಪಿಯಿಂದ `ಅಲ್ಮಾಮ್ಯಾಪರ್' 4,00,000 ಡಾಲರ್ ಮೊತ್ತವನ್ನು ಪಡೆದುಕೊಂಡಿದೆ. ಈ ನಿಧಿಯನ್ನು ತಂತ್ರಜ್ಞಾನ, ಉತ್ಪಾದಕತೆ ಮತ್ತು ವಿವಿಧ ನಗರಗಳಲ್ಲಿನ ಕಾರ್ಯಾಚರಣೆಯನ್ನು ಅಳೆಯಲು ಬಳಸಿಕೊಳ್ಳುತ್ತಿರುವುದಾಗಿ `ಅಲ್ಮಾಮ್ಯಾಪರ್' ಘೋಷಿಸಿದೆ. ಈ ವೆಬ್‍ಸೈಟ್ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಇರುವಂಥದ್ದು. ವಿದ್ಯಾರ್ಥಿಗಳಿಗೆ ಎದುರಾಗುವ ದಿನನಿತ್ಯದ ಸಮಸ್ಯೆಗಳನ್ನು ಈ ವೆಬ್‍ಸೈಟ್ ಮೂಲಕ ಪರಿಹರಿಸಿಕೊಳ್ಳಬಹುದು. ಸದ್ಯ ಇದರಲ್ಲಿ ಮೂರು ವಿಭಾಗಗಳಿವೆ. ಕ್ಯಾಂಪಸ್, ಈವೆಂಟ್ಸ್ ಮತ್ತು ಲೈಬ್ರರಿ. ಹಳೆ ವಿದ್ಯಾರ್ಥಿಗಳೊಂದಿಗೆ ಕಾಲೇಜಿನ ಎಲ್ಲ ವಿದ್ಯಾರ್ಥಿಗಳ ಸಂಪರ್ಕ ಏರ್ಪಡಿಸುವ ಸಂಸರ್ಭದಲ್ಲಿ ಉಂಟಾಗಬಹುದಾದ ಸಮಸ್ಯೆಗಳನ್ನು ಕ್ಯಾಂಪಸ್ ಮೂಲಕ ನಿವಾರಿಸಲಾಗುತ್ತದೆ. ಬೇರೆ ಬೇರೆ ಕಾಲೇಜುಗಳಲ್ಲಿ ಈವೆಂಟ್‍ಗಳನ್ನು ಪ್ರಚಾರ ಮಾಡಲು ಹಾಗೂ ಪರಿಚಯಿಸಲು ಇದು ಸಹಾಯ ಮಾಡುತ್ತದೆ. ಇನ್ನು ಗ್ರಂಥಾಲಯದ ಮೂಲಕ ವಿದ್ಯಾರ್ಥಿಗಳು ಸುಲಭವಾಗಿ ತಮಗೆ ಬೇಕಾದ ನೋಟ್ಸ್, ಆರ್ಟಿಕಲ್ಸ್ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳಬಹುದು.

ಈಗ `ಅಲ್ಮಾಮ್ಯಾಪರ್' ವೆಬ್‍ಸೈಟನ್ನು 40 ಕಾಲೇಜುಗಳು ಬಳಸಿಕೊಳ್ಳುತ್ತಿವೆ. 60,000 ಬಳಕೆದಾರರಿಗೆ ಇದು ಸಮಸ್ಯೆ ಪರಿಹರಿಸುವ ವೇದಿಕೆಯಾಗಿದೆ. ಈ ನವೆಂಬರ್ ತಿಂಗಳಿನಲ್ಲೇ ಮೊಬೈಲ್ ಅಪ್ಲಿಕೇಷನ್ ಅನ್ನು ಕೂಡ ಬಿಡುಗಡೆ ಮಾಡಲು ಸಂಸ್ಥೆ ಯೋಜನೆ ಹಾಕಿಕೊಂಡಿದೆ. ಈ ವೇದಿಕೆಯನ್ನು ಬಳಸಿಕೊಂಡು ಪೂರಕ ಉತ್ಪನ್ನಗಳನ್ನು ತಯಾರಿಸಿ ಒಂದು ಸಂಪೂರ್ಣ ಪರಿಸರವನ್ನೇ ರಚಿಸುವ ಕನಸು ಕೂಡ ಸಂಸ್ಥೆಗಿದೆ. ಇನ್ನು ಈ ಮೂಲಕ ಆದಾಯ ಗಳಿಕೆಗೂ `ಅಲ್ಮಾಮ್ಯಾಪರ್'ನ ಸಿಇಓ ಪಂಕಜ್ ಕೌಲ್ ತಂತ್ರಗಳನ್ನು ರೂಪಿಸಿದ್ದಾರೆ. ವಿದ್ಯಾರ್ಥಿ ಸಮುದಾಯಕ್ಕೆ ಬೇಕಾದ ಉತ್ಪನ್ನಗಳು ಹಾಗೂ ಸೇವೆಗಳನ್ನು ಕಲ್ಪಿಸುವ ವೆಂಡರ್‍ಗಳ ಜೊತೆಗೂ `ಅಲ್ಮಾಮ್ಯಾಪರ್' ಒಪ್ಪಂದ ಮಾಡಿಕೊಳ್ತಿದೆ. ವಿದ್ಯಾರ್ಥಿಗಳ ಬದುಕನ್ನು ಸರಳ ಹಾಗೂ ಪ್ರಯೋಜನಕಾರಿಯನ್ನಾಗಿ ಮಾಡಲು ಮೌಲ್ಯಯುತ ಒಪ್ಪಂದಗಳನ್ನು ಮಾಡಿಕೊಳ್ಳುವುದೇ ನಮ್ಮ ಉದ್ದೇಶ ಎನ್ನುತ್ತಾರೆ ಪಂಕಜ್ ಕೌಲ್. ಈ ಯೋಜನೆ ಕೂಡ ನವೆಂಬರ್‍ನಲ್ಲೇ ಜಾರಿಯಾಗಲಿದೆ.

`ಅಲ್ಮಾಮ್ಯಾಪರ್' ಸಂಸ್ಥೆ ಸದ್ಯ ಎರಡು ಮೂಲ ಮಾದರಿಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ. ಮುಂದಿನ ವರ್ಷದ ಫೆಬ್ರವರಿಯಿಂದ ಪೈಲಟ್ ಪ್ರಾಜಕ್ಟ್​​ನ್ನು ಕೂಡ ಲಾಂಚ್ ಮಾಡಲಾಗುತ್ತೆ. ಸದ್ಯ ಮುಂಬೈ, ಪುಣೆ ಹಾಗೂ ಅಹಮದಾಬಾದ್‍ನಲ್ಲಿ ಕಚೇರಿಗಳನ್ನು ಹೊಂದಿರುವ `ಅಲ್ಮಾಮ್ಯಾಪರ್' ಸದ್ಯದಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿಗೂ ಕಾಲಿಡಲಿದೆ. ಹೈದ್ರಾಬಾದ್, ನವದೆಹಲಿ ಮತ್ತು ಚಂಡೀಗಢದಲ್ಲೂ ಕಚೇರಿ ತೆರೆಯಲು ಸಿದ್ಧತೆ ಮಾಡಿಕೊಂಡಿದೆ. ಸದ್ಯ 10 ಸಿಬ್ಬಂದಿಯ ತಂಡ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸ್ತಾ ಇದೆ. ಮಾರಾಟ ವಿಭಾಗವನ್ನು ಇನ್ನಷ್ಟು ಚುರುಕಾಗಿಸಲು 3-8 ಜನರ ತಂಡವನ್ನು ನೇಮಕ ಮಾಡಲು ಕೂಡ ಸಂಸ್ಥೆ ಮುಂದಾಗಿದೆ. `ಅಲ್ಮಾಮ್ಯಾಪರ್' ವೆಬ್‍ಸೈಟ್ 2,50,000 ಬಳಕೆದಾರರನ್ನು ಸಂಪಾದಿಸುವ ಗುರಿ ಹೊಂದಿದೆ. ಈ ವರ್ಷಾಂತ್ಯದೊಳಗೆ 20 ಸಿಬ್ಬಂದಿಯ ತಂಡವನ್ನು ಕೂಡ ಕಟ್ಟಲಿದೆ.

ಯುವರ್‍ಸ್ಟೋರಿ ಟೇಕ್...

ಶಿಕ್ಷಣ ಕ್ಷೇತ್ರದಲ್ಲಿನ ತಂತ್ರಜ್ಞಾನ ಉದ್ಯಮ ಕಳೆದ ಕೆಲ ತಿಂಗಳಲ್ಲಿ ಭಾರೀ ಮೊತ್ತದ ಹೂಡಿಕೆಗೆ ಸಾಕ್ಷಿಯಾಗಿದೆ. ಮೇ ತಿಂಗಳಲ್ಲಿ `ಟಾಪರ್' 65 ಕೋಟಿ ರೂಪಾಯಿ ಬಾಚಿಕೊಂಡಿದೆ. ಬೆಂಗಳೂರು ಮೂಲದ `ವೇದಾಂತು', ಆಕ್ಸೆಲ್ ಪಾರ್ಟ್‍ನರ್ಸ್ ಹಾಗೂ ಟೈಗರ್ ಗ್ಲೋಬಲ್ ಮ್ಯಾನೇಜ್‍ಮೆಂಟ್‍ನಿಂದ 5 ಮಿಲಿಯನ್ ಡಾಲರ್ ಮೊತ್ತವನ್ನು ವಿಸ್ತರಿಸಿಕೊಂಡಿದೆ. ಈ ವರ್ಷ ಏಪ್ರಿಲ್‍ನಲ್ಲಿ `ಸಿಂಪ್ಲಿಲರ್ನ್' ಕೂಡ ಮೂರನೇ ಬಾರಿ ಬಂಡವಾಳ ಮೊತ್ತವನ್ನು 15 ಮಿಲಿಯನ್ ಡಾಲರ್‍ಗೆ ವಿಸ್ತರಿಸಿದೆ.

ಹಾಗಂತ ಹೊಸ ಉದ್ಯಮಗಳಿಗೆ ಇಲ್ಲಿ ಜಾಗವಿಲ್ಲ ಎಂದರ್ಥವೇನಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ವಿಪುಲ ಅವಕಾಶಗಳಿವೆ. ಯುವರ್‍ಸ್ಟೋರಿ ಜೊತೆ ಮಾತನಾಡಿದ್ದ ಫ್ಲಿಂಟ್ ಡಾಟ್ ಕಾಮ್‍ನ ಸಿಇಓ ಹರೀಶ್ ಅಯ್ಯರ್, ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ರು. ಪ್ರತಿಯೊಬ್ಬ ವಿದ್ಯಾರ್ಥಿ ಅಥವಾ ಬಳಕೆದಾರರಿಗೆ ಶಿಕ್ಷಣ ಕ್ಷೇತ್ರದಲ್ಲಿ ಬೇರೆ ಬೇರೆ ಅಗತ್ಯತೆಗಳಿರುವುದರಿಂದ ಸಂಯೋಜನೆಗಳ ಕ್ರಮಪಲ್ಲಟನೆ ಮತ್ತು ಏಕರೂಪತೆ ಹೆಚ್ಚು ಉತ್ಪನ್ನಗಳಿಗೆ ಬೇಡಿಕೆ ಸೃಷ್ಟಿಸಿದೆ ಎನ್ನುತ್ತಾರೆ ಹರೀಶ್ ಅಯ್ಯರ್. ಭಾರೀ ಬೆಳವಣಿಗೆಯಿಂದಾಗಿ ಶಿಕ್ಷಣ ತಂತ್ರಜ್ಞಾನದ ಉದ್ಯಮಗಳು ಬೇಡಿಕೆಯನ್ನು ಪೂರೈಸಲು ಶಕ್ತವಾಗಿವೆ. ಹೂಡಿಕೆ ಕೂಡ ಉತ್ತುಂಗದಲ್ಲಿದೆ ಅನ್ನೋದು ಅವರ ಅಭಿಮತ. ಅಪಾರ ಸಾಧ್ಯಾಸಾಧ್ಯತೆಗಳ ಮೂಲಕ ಈ ಕೈಗಾರಿಗೆ ಹೊಸ ಮಾರ್ಗದರ್ಶನದೊಂದಿಗೆ ಸಾಗುವ ಹಾದಿ ನಿಜಕ್ಕೂ ಕುತೂಹಲಕರ.

ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುತ್ತಲೇ ಉದ್ಯಮ ಲೋಕದಲ್ಲೂ `ಅಲ್ಮಾಮ್ಯಾಪರ್' ಹೆಸರು ಮಾಡ್ತಾ ಇದೆ. ಇಂಥ ಸಂಸ್ಥೆಗಳಿಗೆ ಇನ್ನಷ್ಟು ಪ್ರೋತ್ಸಾಹ ಹಾಗೂ ಬಂಡವಾಳದ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೂಡ ಪಂಕಜ್ ಕೌಲ್ ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡು ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿರುವ `ಅಲ್ಮಾಮ್ಯಾಪರ್'ನಂತಹ ಇನ್ನಷ್ಟು ಸಂಸ್ಥೆಗಳು ಹುಟ್ಟಿಕೊಂಡಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಹಾಗೂ ಹೊಸ ಆವಿಷ್ಕಾರಗಳಾಗೋದ್ರಲ್ಲಿ ಸಂಶಯವೇ ಇಲ್ಲ.

Related Stories