ಸೌಂದರ್ಯ ಜಗತ್ತಿನಲ್ಲಿ ಹೊಸ ಸಂಚಲನ - ಮನೆಬಾಗಿಲಿಗೆ `ವ್ಯೋಮೋ' ಸೇವೆ

ಟೀಮ್ ವೈ.ಎಸ್.

0

ಆರೋಗ್ಯ ಮತ್ತು ಸೌಂದರ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇದು ಪ್ರತಿ ಕ್ಷಣದ ಅನಿವಾರ್ಯತೆಯೂ ಹೌದು. ಹಾಗಾಗಿ ಆರೋಗ್ಯ ಮತ್ತು ಸೌಂದರ್ಯ ಸೇವೆಗಳು ದಿನೇ ದಿನೇ ಅತ್ಯಂತ ಮಹತ್ವ ಪಡೆದುಕೊಳ್ತಿವೆ. ಈ ಕ್ಷೇತ್ರದಲ್ಲಿನ ಬಂಡವಾಳ 4.8 ಬಿಲಿಯನ್ ಡಾಲರ್‍ಗೂ ಅಧಿಕ. ಇದುವರೆಗೂ ಸೌಂದರ್ಯ ಜಗತ್ತಿನಲ್ಲಿ ಹೆಸರು ಮಾಡಿದವರು ವ್ಯಾನಿಟಿ ಕ್ಯೂಬ್ ಮತ್ತು ಬುಲ್‍ಬುಲ್ ಕಂಪನಿಗಳು. ಆದ್ರೀಗ ಬೆಂಗಳೂರು ಮೂಲದ ವ್ಯೋಮೋ ತೀವ್ರ ಪೈಪೋಟಿ ನೀಡ್ತಾ ಇದೆ. ಫ್ಯಾಷನ್ ಜಗತ್ತಿನ ನೂತನ ಐಕಾನ್ ಎನಿಸಿಕೊಂಡಿದೆ. ಸಲೂನ್ ಮತ್ತು ಸೌಂದರ್ಯ ಸೇವೆಗಳಲ್ಲಿ ನಂಬರ್ ವನ್ ಅನ್ನೋ ಪಟ್ಟಕ್ಕೆ ಸನಿಹದಲ್ಲಿದೆ.

ವ್ಯೋಮೋವನ್ನು ಹುಟ್ಟುಹಾಕಿದವರು ಯಾರು ಗೊತ್ತಾ? ಲಂಡನ್ ಬ್ಯುಸಿನೆಸ್ ಸ್ಕೂಲ್‍ನ ಅತ್ಯಂತ ಬುದ್ಧಿವಂತ ವಿದ್ಯಾರ್ಥಿಗಳು ಎನಿಸಿಕೊಂಡಿದ್ದ ಅಭಿನವ್ ಖರೆ ಮತ್ತು ಪೂನಮ್ ಮಾರ್ವಾ. ಆಗ ಇವರಿಬ್ರೂ ಕ್ಲಾಸ್‍ಮೇಟ್ಸ್, ಈಗ ವ್ಯೋಮೋದ ಸೃಷ್ಟಿಕರ್ತರು. ಗ್ರಾಹಕರು ಮತ್ತು ಸೌಂದರ್ಯ ಸೇವೆಯನ್ನೇ ಉದ್ಯೋಗವನ್ನಾಗಿ ಆಯ್ಕೆ ಮಾಡಿಕೊಂಡವರಿಗೆಲ್ಲ ವ್ಯೋಮೋ ಸಂಪೂರ್ಣ ಪರಿಹಾರವನ್ನು ಒದಗಿಸುತ್ತಿದೆ. ಸೌಂದರ್ಯ ಸೇವೆಯ ಅಗತ್ಯತೆಗಳ ಬಗ್ಗೆ ವ್ಯೋಮೋ ಮೊಬೈಲ್ ಅಪ್ಲಿಕೇಷನ್ ಒಂದನ್ನು ತಯಾರಿಸಿದೆ. ಗ್ರಾಹಕರು ವ್ಯೋಮೋದ ಸಲೂನ್‍ಗಳಲ್ಲಿ ಅಪಾಯಿಂಟ್‍ಮೆಂಟ್ ಪಡೆದು ತಮಗೆ ಬೇಕಾದ ಸಲಹೆ ಸೂಚನೆ ಹಾಗೂ ಸೇವೆಯನ್ನು ಪಡೆದುಕೊಳ್ಳಬಹುದು. ಇಲ್ಲವಾದಲ್ಲಿ ವ್ಯೋಮೋದ ತಜ್ಞರೇ ನಿಮ್ಮ ಮನೆಬಾಗಿಲಿಗೆ ಬಂದು ಸೌಂದರ್ಯ ಸಮಸ್ಯೆಗಳಿಗೆ ಪರಿಹಾರ ಕೊಡುತ್ತಾರೆ. ಡೋರ್ ಟು ಡೋರ್ ಸರ್ವೀಸ್ ನೀಡುತ್ತಿರುವ ಏಕೈಕ ಸಂಸ್ಥೆ ಇದು.

ವಿಶೇಷ ಅಂದ್ರೆ ವ್ಯೋಮೋ ಯಶಸ್ಸಿನ ಹಿಂದೆ ಕ್ರಿಕೆಟಿಗ ಯುವರಾಜ್ ಸಿಂಗ್ ಕೂಡ ಇದ್ದಾರೆ. ಅವರ ಬೆಂಬಲವೂ ಇದೆ. ಕಳೆದ ಮೇ ತಿಂಗಳಿನಲ್ಲಿ ವ್ಯೋಮೋದ ಮೊಬೈಲ್ ಆ್ಯಪ್ ಅನ್ನು ಬಿಡುಗಡೆ ಮಾಡಲಾಯ್ತು. ಗ್ರಾಹಕರ ಪ್ರತಿಕ್ರಿಯೆ ಎಷ್ಟು ಅದ್ಭುತವಾಗಿತ್ತೆಂದರೆ ಆ್ಯಪ್ ಬಿಡುಗಡೆಯಾದ 45 ದಿನಗಳಲ್ಲಿ 53,000 ಗ್ರಾಹಕರು ಪ್ರವಾಹದಂತೆ ಹರಿದು ಬಂದರು. ಗ್ರಾಹಕರು ತಮಗೆ ಬೇಕಾದ ಸಲೂನ್ ಹಾಗೂ ಸ್ಪಾವನ್ನು ಆಯ್ದುಕೊಳ್ಳಲು ವ್ಯೋಮೋ ನೆರವಾಗುತ್ತದೆ. ಬೆಲೆ, ಗ್ರಾಹಕರ ಪ್ರತಿಕ್ರಿಯೆಯನ್ನೆಲ್ಲ ಅರಿತು ಬುಕ್ಕಿಂಗ್ ಮಾಡುವ ಅವಕಾಶವಿದೆ. ಸಲೂನ್ ಮತ್ತು ಸ್ಪಾಗಳ ಬುಕ್ಕಿಂಗ್‍ಗೆ ಗ್ರಾಹಕರು ಪರದಾಡಬೇಕಾಗಿಲ್ಲ. ಮೊಬೈಲ್ ಆ್ಯಪ್ ಮೂಲಕ ಒಂದೇ ಸ್ಪರ್ಷದಲ್ಲಿ ಬೇಕಾದ ಸಲೂನ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

ಅಭಿನವ್ ಖರೇ, ಸಹ ಸಂಸ್ಥಾಪಕ
ಅಭಿನವ್ ಖರೇ, ಸಹ ಸಂಸ್ಥಾಪಕ

ಶೂನ್ಯದಿಂದ 17000ದ ತನಕ..

ದೆಹಲಿ, ಮುಂಬೈ ಹಾಗೂ ಬೆಂಗಳೂರಲ್ಲಿ ಒಟ್ಟು 3000 ಸಲೂನ್ ಮತ್ತು ಸ್ಪಾಗಳಿವೆ. 1500 ಮಂದಿ ಸ್ಟೈಲಿಸ್ಟ್ ಗಳಿದ್ದಾರೆ. 45 ದಿನಗಳಲ್ಲೇ ಸುಮಾರು 17,000 ಮಂದಿ ವ್ಯೋಮೋ ಸೇವೆಯನ್ನು ಮೆಚ್ಚಿಕೊಂಡು ಅದನ್ನೇ ಪಡೆಯುತ್ತಿದ್ದಾರೆ. ಎರಡು ತಿಂಗಳೊಳಗೆ ಇಷ್ಟೊಂದು ಅದ್ಭುತ ಯಶಸ್ಸು ಸಿಕ್ಕಿರುವುದು ಅಭಿನವ್ ಖರೆ ಅವರಿಗೆ ಖುಷಿ ತಂದಿದೆ. ವ್ಯೋಮೋದಲ್ಲಿ ಫ್ರೀಲಾನ್ಸರ್ ಸ್ಟೈಲಿಸ್ಟ್ ಗಳನ್ನು ಬಳಸಿಕೊಳ್ಳಲಾಗುತ್ತಿದೆ. ತಿಂಗಳಿಗೆ ಬರೀ 10,000 ಸಂಬಳ ಪಡೆಯುವ ಬದಲು ಫ್ರೀಲಾನ್ಸರ್ ಆಗಿದ್ದಲ್ಲಿ 50,000 ರೂಪಾಯಿ ವರೆಗೂ ದುಡಿಯಬಹುದು. ವ್ಯೋಮೋದ ಈ ಹೊಸ ತಂತ್ರ ಸ್ಟೈಲಿಸ್ಟ್ ಗಳನ್ನು ಆಕರ್ಷಿಸುತ್ತಿದೆ.

ಗ್ರಾಹಕರೇ ಬಾಸ್

ಕಸ್ಟಮರ್‍ಗಳೇ ಕಿಂಗ್ ಎನ್ನುತ್ತಾರೆ ವ್ಯೋಮೋದ ಸಹ ಸಂಸ್ಥಾಪಕ ಹಾಗೂ ಸಿಇಓ ಅಭಿನವ್ ಖರೆ. ಗ್ರಾಹಕರ ಪ್ರತಿಕ್ರಿಯೆಯೇ ಕಂಪನಿಯ ಯಶಸ್ಸಿಗೆ ರಹದಾರಿ ಅನ್ನೋದು ಅವರ ಅಭಿಪ್ರಾಯ. ಕಂಪನಿಯ ಸೇವೆಯ ಬಗ್ಗೆ ಗ್ರಾಹಕರ ಪ್ರತಿಕ್ರಿಯೆಯನ್ನು ಅರಿಯಲು ಕಂಪನಿ ಸರ್ವೆ ಕೂಡ ನಡೆಸುತ್ತಿದೆ. ಗ್ರಾಹಕರನ್ನು ಸೆಳೆಯುವ ಸಲುವಾಗಿಯೇ ಮನೆ ಮನೆ ಸೇವೆಯನ್ನೂ ಪರಿಚಯಿಸಲಾಗಿದೆ. ಆಹಾರ ಮತ್ತು ಆರೋಗ್ಯವನ್ನು ಬಿಟ್ಟರೆ ಜನರ ಗಮನ ಸೆಳೆಯುವುದು ಸೌಂದರ್ಯ. ಆಹಾರ, ಆರೋಗ್ಯವನ್ನು ಬಿಟ್ಟರೆ ದುಡಿಮೆಯಲ್ಲಿ ಅತಿ ಹೆಚ್ಚನ್ನು ವ್ಯಯಿಸುವುದು ಕೂಡ ಸೌಂದರ್ಯಕ್ಕಾಗಿಯೇ. ಬ್ಯೂಟಿ ಟ್ರೀಟ್‍ಮೆಂಟ್‍ಗಾಗಿ ಒಬ್ಬ ಮಹಿಳೆ ಕನಿಷ್ಟ 2 ರಿಂದ 3000 ರೂಪಾಯಿ ಖರ್ಚು ಮಾಡುತ್ತಾಳೆ. ಹಾಗಾಗಿಯೇ ಅಭಿನಮ್ ಖರೆ ಈ ಉದ್ಯಮಕ್ಕೆ ಇಳಿದಿದ್ದಾರೆ.

ಕೇವಲ ಹಣ ಗಳಿಸುವುದು ಮಾತ್ರ ವ್ಯೋಮೋದ ಉದ್ದೇಶವಲ್ಲ. ಗ್ರಾಹಕರಿಗೆ ಬೇಕಾದ ಸೌಂದರ್ಯ ಸೇವೆಯನ್ನು ಒದಗಿಸುವುದರ ಜೊತೆಗೆ ಅವರ ವಿಶ್ವಾಸ ಗಳಿಸಿಕೊಂಡು ಮುನ್ನುಗ್ಗುತ್ತಿದೆ. ಸೌಂದರ್ಯ ಪ್ರಿಯರ ಪಾಲಿಗಂತೂ ವ್ಯೋಮೋ ಸಲೂನ್‍ಗಳು ಹೇಳಿ ಮಾಡಿಸಿದಂಥ ತಾಣ. ಕೆಲವೇ ತಿಂಗಳುಗಳಲ್ಲಿ ಅಭಿನವ್ ಖರೆ ಸೌಂದರ್ಯ ಲೋಕದಲ್ಲೊಂದು ಸಂಚಲನ ಮೂಡಿಸಿದ್ದಾರೆ.