ಲಾಜಿಸ್ಟಿಕ್​ ಉದ್ಯಮಕ್ಕೆ ಹೊಸ ಕಿಕ್- ಲಾರಿ ಮಾಲೀಕರ ಮನಗೆದ್ದ "Blackbuck"​​

ಟೀಮ್​ ವೈ.ಎಸ್​. ಕನ್ನಡ

0

ಇವತ್ತು ನಮ್ಮಲ್ಲಿ ಟ್ರಕ್​ಗಳಿಗೆ, ಲಾರಿಗಳ ಸಂಖ್ಯೆಗಳಿಗೇನು ಕೊರತೆ ಇಲ್ಲ. ಆದ್ರೆ ಅದಕ್ಕೆ ಹೂಡಿದ ಬಂಡವಾಳ ವಾಪಾಸ್​ ಪಡೆಯೋದು ಹೇಗೆ..?, ಲಾಜಿಸ್ಟಿಕ್​ ವಲಯದಿಂದ ಲಾಭ ಮಾಡಿಕೊಳ್ಳೋದು ಹೇಗೆ..? ಟ್ರಕ್​ಗಳನ್ನು ಖರೀದಿಸಿದ ನಂತರ ಹೊಸ ಆರ್ಡರ್​ಗಳನ್ನು ಪಡೆಯುವುದು ಹೇಗೆ ಎಂಬ ಚಿಂತೆ ಮಾಲೀಕರನ್ನು ಕಾಡುತ್ತದೆ. ಅಂತಹವರಿಗಾಗಿಯೇ ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಒಂದು ಆ್ಯಪ್ ಆಧಾರಿತ ಸೇವೆ ಒದಗಿಸುತ್ತಿದೆ.

ಹೌದು ಮೇಟ್ರೋ ಪಾಲಿಟಿನ್ ಸಿಟಿಯಲ್ಲಿ ಎಲ್ಲವೂ ಆ್ಯಪ್ ಆಧಾರಿತ ಸೇವೆಗಳೇ. ಅದು ಕಾರು ಬುಕ್ ಮಾಡುವುದಾಗಲಿ, ಬೈಕ್ ಬುಕ್ ಮಾಡುವುದಾಗಲಿ, ಎಲ್ಲವೂ ಆ್ಯಪ್ ಆಧಾರಿತವಾಗಿ ಕೆಲಸ ಮಾಡುತ್ತಿದೆ. ಈಗ ಬೆಂಗಳೂರಿನಲ್ಲಿ ಟ್ರಕ್ ಅಥವಾ ಲಾರಿಯನ್ನು ಸಹ ಆ್ಯಪ್​​ನಿಂದ ಬುಕ್ ಮಾಡುವ ಒಂದು ಸ್ಟಾರ್ಟ್ ಅಪ್ ಪ್ರಾರಂಭವಾಗಿ ಅದು ಯಶಸ್ವಿಯಾಗಿದೆ.

ಓಲಾ, ಉಬರ್ ಮುಂತಾದ ಆ್ಯಪ್ ಆಧಾರಿತ ಟ್ಯಾಕ್ಸಿ ಕ್ಯಾಬ್​ಗಳ ಸೇವೆಯನ್ನು ನೀವು ಪಡೆದಿರಬಹುದು. ಇದೀಗ ಲಾಜಿಸ್ಟಿಕ್ಸ್ ವಲಯದಲ್ಲಿ ಕೂಡ ಟ್ರಕ್ ಆಪರೇಟರ್​ಗಳಿಗೆ ಇಂತಹುದೇ ಆ್ಯಪ್ ಆಧಾರಿತ ಸ್ಟಾರ್ಟಪ್ ಅಸ್ತಿತ್ವಕ್ಕೆ ಬಂದಿದೆ. ಬೆಂಗಳೂರು ಮೂಲದ ಬ್ಲಾಕ್ ಬಕ್ ಎಂಬ ಹೊಸ ಸ್ಟಾರ್ಟ್​ಅಪ್​  ಓಲಾ, ಉಬರ್ ಆ್ಯಪ್ ಆಧಾರಿತ ಸೇವೆ ನೀಡಿ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿರುವುದಿಲ್ಲದೆ ಫ್ಲಿಪ್ ಕಾರ್ಟ್ ನಂತಹ ದೊಡ್ಡ ಕಂಪನಿಗಳಿಂದ ಬಂಡವಾಳವನ್ನು ಇದು ಆಕರ್ಷಿಸಿದೆ.

ಇದನ್ನು ಓದಿ: ಶ್ರದ್ಧೆ ಇದ್ದರೆ ಯಶಸ್ಸು ಖಂಡಿತ- ಶ್ರಮವಹಿಸಿದರೆ ಲಾಭ ಖಚಿತ..!

ಯಾವಾಗ ಆರಂಭ..?

ಐಐಟಿಯಲ್ಲಿ ಖರಗ್​ಪುರ್​ನಲ್ಲಿ ಪದವಿ ಪಡೆದಿರುವ ರಾಜೇಶ್ ನಂತರ ಐಟಿಸಿಯಲ್ಲಿ ಕೆಲಸ ಮಾಡುತ್ತಿದ್ದರು. ಹೊಸದಾಗಿ ಏನಾದರೊಂದು ಉದ್ಯಮ ಮಾಡಬೇಕು ಎಂಬ ಉದ್ದೇಶದಿಂದ ಕೆಲಸಕ್ಕೆ ರಾಜೀನಾಮೆ ನೀಡಿದ ಅವರು ಐಟಿಸಿಯಲ್ಲಿ ಕೆಲಸ ಮಾಡುತ್ತಿರುವಾಗಲೇ ಲಾಜಿಸ್ಟಿಕ್ಸ್​ನಲ್ಲಿ ಟೆಕ್ನಾಲಜಿ ಬಳಸುವ ಬಗ್ಗೆ ಚಿಂತನೆ ನಡೆಸಿದ್ದರು. ಕೆಲಸ ಬಿಟ್ಟ ನಂತರ ಲಾಜಿಸ್ಟಿಕ್ ಉದ್ಯಮದಲ್ಲಿ ಸುಮಾರು 17 ವರ್ಷ ಅನುಭವ ಹೊಂದಿದ್ದ ರಾಮ ಸುಬ್ರಮಣಿಯಂ ಅವರ ಜತೆ ಸ್ಟಾರ್ಟ್​ಅಪ್​​ ಅಭಿವೃದ್ಧಿಗೊಳಿಸುವ ಬಗ್ಗೆ ಚರ್ಚೆ ನಡೆಸಿ, ಅವರನ್ನು ಹೊಸ ಪ್ರಯತ್ನಕ್ಕೆ ಸೇರಿಸಿಕೊಂಡರು. ಇವರ ಮತ್ತೊಬ್ಬ ಗೆಳೆಯ ಚಾಣಕ್ಯ ಎಂಬುವವರು ಕೂಡ ಇವರೊಂದಿಗೆ ಸೇರಿಕೊಂಡು ಈ ಬ್ಲಾಕ್ ಬಕ್​ನ್ನು ಕಳೆದ ವರ್ಷದ ಏಪ್ರಿಲ್​ನಲ್ಲಿ ಆರಂಭಗೊಳಸಿದರು. ಈ ಬ್ಲಾಕ್ ಬಕ್ ಡಿಸೆಂಬರ್ ಹೊತ್ತಿಗೆ ಹತ್ತು ಸಾವಿರ ಟ್ರಕ್​ಗಳನ್ನು ತನ್ನ ಜಾಲದಲ್ಲಿ ಹೊಂದಿತ್ತು. ಈಗ ಇದರ ಸಂಖ್ಯೆ ಸುಮಾರು ಐವತ್ತು ಸಾವಿರಕ್ಕಿಂತಲು ಹೆಚ್ಚಾಗಿದೆ. ಇದು ಬ್ಲಾಕ್ ಬಕ್​ನ ಯಶಸ್ಸನ್ನು ಹೇಳುತ್ತದೆ.

ರಿಜಿಸ್ಟರ್ ಮಾಡಿಕೊಳ್ಳುವುದು ಹೇಗೆ..?

ಟ್ರಕ್ ಮಾಲೀಕರು ಬ್ಲ್ಯಾಕ್​ಬುಕ್ ಆ್ಯಪ್ ಅನ್ನು ಪ್ಲೇ ಸ್ಟೋರ್​ನಿಂದ ಡೌನ್​ಲೋಡ್ ಮಾಡಿಕೊಳ್ಳಬಹುದು.  ಕಾರ್ಪೊರೇಟ್ ವಲಯದ ಕಂಪನಿಗಳು, ಮಧ್ಯಮ ಮತ್ತು ಸಣ್ಣ ಉದ್ದಿಮೆಗಳಿಂದ ಸರಕು ಸಾಗಣೆಯ ಆರ್ಡರ್​ಗಳನ್ನು ಪಡೆಯಬಹುದು. ಇಂತಹ ಮಾದರಿಯನ್ನು ಬಿ2ಬಿ (ಬಿಸಿನೆಸ್ ಟು ಬಿಸಿನೆಸ್) ಎನ್ನಲಾಗುತ್ತದೆ. ಕೇವಲ 1 ಟ್ರಕ್ (ಲಾರಿ) ಹೊಂದಿರುವ ಮಾಲೀಕರಿಂದ ಆರಂಭಿಸಿ 300-400 ಟ್ರಕ್​ಗಳನ್ನು ನಡೆಸುತ್ತಿರುವವರೂ ಈ ಸ್ಟಾರ್ಟಅಪ್ ಸೇವೆ ಗಳಿಸಬಹುದು.

ಬ್ಲ್ಯಾಕ್​ಬಕ್​ನಿಂದ ಟ್ರಕ್ ಅಥವಾ ಲಾರಿ ಮಾಲೀಕರು, ಚಾಲಕರು ಹಲವು ಬಗೆಯ ಅನುಕೂಲ ಪಡೆಯಬಹುದು. ತಮ್ಮ ಟ್ರಕ್​ಗಳಿಂದ ಹೊಸ ಆರ್ಡರ್​ಗಳನ್ನು ಈ ಆ್ಯಪ್ ಮೂಲಕ ಪಡೆಯಬಹುದು. ಟ್ರಕ್​ಗಳು ಕೆಲಸವಿಲ್ಲದೆ ನಿಲ್ಲುವುದು ತಪ್ಪುತ್ತದೆ. ಮತ್ತೊಂದು ಕಡೆ ಗ್ರಾಹಕರಿಗೆ ಸ್ಪರ್ಧಾತ್ಮಕ ದರದಲ್ಲಿ ಟ್ರಕ್​ಗಳನ್ನು ಬುಕ್ ಮಾಡಬಹುದು. ಹಲವು ಆಯ್ಕೆಗಳೂ ಅವರಿಗೆ ಸಿಗುತ್ತದೆ. ಪೆಪ್ಸಿಕೊ ಕಂಪನಿಯಿಂದ ಬ್ಲ್ಯಾಕ್ ಬಕ್ ಮೊದಲ ಆರ್ಡರ್ ಅನ್ನು ಪಡೆದಿತ್ತು.ಈಗ ಬ್ಲ್ಯಾಕ್​ಬಕ್ ಸೇವೆಯನ್ನು ಹಿಂದುಸ್ತಾನ್ ಯುನಿಲಿವರ್, ಜ್ಯೋತಿ ಲ್ಯಾಬೊರೇಟರೀಸ್, ಹಿಂದುಸ್ತಾನ್ ಕೋಕಾಕೋಲಾ ಬೆವರೀಜಸ್, ಅಮುಲ್, ಏಷ್ಯನ್ ಪೈಂಟ್ಸ್, ಐಟಿಸಿ, ಮ್ಯಾರಿಕೊ ಆ್ಯಂಡ್ ಬ್ರಿಟಾನಿಯಾ ಮುಂತಾದ ಕಾರ್ಪೊರೇಟ್ ವಲಯದ ದಿಗ್ಗಜ ಕಂಪನಿಗಳೂ ಪಡೆಯುತ್ತಿವೆ.

ರಿಯಾಯತಿ ದರದಲ್ಲಿ ಡಿಸೇಲ್

ಯಾವುದೇ ಒಬ್ಬ ಚಾಲಕ ಅಥವಾ ಮಾಲೀಕ ಈ ಬ್ಲಾಕ್​ಬಕ್​ನಲ್ಲಿ ರಿಜಿಸ್ಟರ್ ಮಾಡಿಸಿಕೊಂಡರೆ ಆರ್ಡರ್ ಜತೆಗೆ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್​ಗಳಲ್ಲಿ ರಿಯಾಯಿತಿ ದರದಲ್ಲಿ ಡೀಸೆಲ್ ಕೂಡಾ ಪಡೆಯಬಹುದು. ಬ್ಲ್ಯಾಕ್​ಬಕ್ ಈಗಾಗಲೇ 167 ಕೋಟಿ ರೂಪಾಯಿಗೂ ಹೆಚ್ಚು ಬಂಡವಾಳವನ್ನು ಹೂಡಿಕೆದಾರರಿಂದ ಗಳಿಸಿದೆ. ಫ್ಲಿಫ್​ಕಾರ್ಟ್, ಟೈಗರ್ ಗ್ಲೋಬಲ್, ಡಿಎಸ್​ಟಿ ಗ್ಲೋಬಲ್ ಮುಂತಾದ ಕಂಪನಿಗಳು ಹೂಡಿವೆ. ದೇಶದ 220 ನಗರ, ಪಟ್ಟಣಗಳಲ್ಲಿ ತನ್ನ ವಹಿವಾಟನ್ನು ವಿಸ್ತರಿಸಿದೆ. ಟ್ರಕ್ ಅಥವಾ ಲಾರಿ ಮಾಲೀಕರು ಬ್ಲ್ಯಾಕ್​ಬಕ್ ಆ್ಯಪ್ ಅನ್ನು ಡೌನ್​ಲೋಡ್ ಮಾಡಿಕೊಂಡು ಲಾಗಿನ್ ಆಗಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಒಟ್ಟಿನಲ್ಲಿ ಇನ್ನು ನಿಮಗೆ ಟ್ರಕ್ ಬೇಕಾದರೆ ನೀವು ಪ್ಲೇ ಸ್ಟೋರ್ ಹೋಗಿ ಬ್ಲಾಕ್ ಬಕ್​ ಆ್ಯಪ್​ನ್ನು  ಡೌನ್​ಲೋಡ್ ಮಾಡಿಕೊಂಡು ಅದರಲ್ಲಿ ಉತ್ತಮ ಬೆಲೆಯಲ್ಲಿ ಬುಕ್ ಮಾಡಿಕೊಳ್ಳಬಹುದು.

ಇದನ್ನು ಓದಿ:

1. ಕನ್ನಡ ಚಿತ್ರರಂಗಕ್ಕೆ ಕಾರ್ಪೊರೇಟ್ ಎಂಟ್ರಿ!

2. ಕೈ ಹಿಡಿಯಿತು ಕೈ ರುಚಿಯ ರಹಸ್ಯ- ಶ್ರಮದ ಹಿಂದಿತ್ತು ಕಿಚ್ಚನ ಸಪೋರ್ಟ್​

3. ವಯಸ್ಸಿನಲ್ಲೇನಿದೆ..? ಉದ್ಯಮಿಗಳಿಗೆ ಅದು ಕೇವಲ ಸಂಖ್ಯೆಯಷ್ಟೇ..

Related Stories