ಡಯಲ್​​ ಎ ಬ್ಯಾಂಕ್​​​- ಒಂದೇ ಕರೆಯಲ್ಲಿ ಸಮಸ್ಯೆಗಳಿಗೆಲ್ಲಾ ಪರಿಹಾರ..

ಟೀಮ್​​ ವೈ.ಎಸ್​​.

0

ಪ್ರಶ್ನೆ: ಮ್ಯೂಚುವಲ್ ಫಂಡ್ಸ್ ಬಗ್ಗೆ ನೀವೇನು ತಿಳಿದುಕೊಂಡಿದ್ದೀರಿ?

ಉತ್ತರ: ಮ್ಯೂಚುವಲ್ ಫಂಡ್ಸ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳ ವಿಚಾರ. ಹೂಡಿಕೆಗೂ ಮೊದಲು ದಾಖಲಾತಿಗಳನ್ನು ಸರಿಯಾಗಿ ಪರಿಶೀಲಿಸಿ.

ಮ್ಯೂಚುವಲ್ ಫಂಡ್ಸ್ ಬಗ್ಗೆ ನಿಮಗಿಷ್ಟೇ ತಿಳಿದಿದ್ದರೆ ಅದು ನಿಮ್ಮ ಸಮಸ್ಯೆ ಅಲ್ಲ. ಆರ್ಥಿಕ ಉತ್ಪನ್ನಗಳು ಹೀಗೆಯೇ ವಿನ್ಯಾಸಗೊಳಿಸಲ್ಪಟ್ಟಿರುತ್ತವೆ.

ತಮ್ಮ ಕಷ್ಟದ ಸಂದರ್ಭದಲ್ಲಿ ಬಳಕೆಯಾಗುವಂತೆ ಜೀವವಿಮೆ, ಆರೋಗ್ಯವಿಮೆ ಅಥವಾ ಇನ್ಯಾವುದೇ ತರಹದ ಆರ್ಥಿಕ ಭದ್ರತೆಯನ್ನು ಹೊಂದಿರುವ ಉದ್ಯಮಿಯೇ ಇಲ್ಲ ಎನ್ನಬಹುದು. ಇದಕ್ಕೆ ಹಲವಾರು ಕಾರಣಗಳಿವೆ. ಒಂದು, ಅವರಿಗೆ ಉತ್ತಮವಾದ, ಅಗತ್ಯವುಳ್ಳ ವಿಮೆಯ ಪಾಲಿಸಿಗಳನ್ನು ಪರಿಶೀಲಿಸುವಷ್ಟು ಸಮಯ ಇರುವುದಿಲ್ಲ. ಎರಡು, ಬ್ಯಾಂಕ್‌ಗಳಲ್ಲಿ ವಿಚಾರಿಸಿದರೆ, ಇರುವ ಸೇವೆಗಳಲ್ಲೇ ತಮ್ಮಷ್ಟು ಉತ್ತಮವಾದ ಸೇವೆ ಇನ್ಯಾರೂ, ಇನ್ಯಾವುದೇ ಬ್ಯಾಂಕ್ ಸಹ ನೀಡುವುದಿಲ್ಲ ಎಂಬ ಸ್ವಶ್ಲಾಘನೆಯ ಮಾತುಗಳನ್ನಷ್ಟೇ ಆಡುತ್ತಾರೆ ಹೊರತು ವಾಸ್ತವ ವಿಚಾರ ಏನಿದೆಯೋ ಅದನ್ನು ತಿಳಿಸುವುದಿಲ್ಲ. ಮೂರನೆಯದಾಗಿ ಉದ್ಯಮಿಗಳು ತಮ್ಮ ಹಣವನ್ನು ಎಲ್ಲಿ ಹೂಡಿಕೆ ಮಾಡಿದರೆ ಒಳ್ಳೆಯದು ಎಂಬ ವಿಚಾರದ ಕುರಿತು ಚಿಂತಿಸುತ್ತಾರೆಯೇ ಹೊರತು ವಿಮೆ, ಪಾಲಿಸಿಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಇಚ್ಛಿಸುವುದಿಲ್ಲ.

ಉದ್ಯಮಕ್ಕೆ ಹೂಡಿಕೆಯ ಹೊರತಾಗಿಯೂ ಬೇರೆಡೆ ಹಣ ಉಳಿಸಬಹುದಾದ ವಿಚಾರವನ್ನು ಉದ್ಯಮಿಗೆ ವಿವರಿಸುವುದೂ ಸಹ ದೊಡ್ಡ ಸವಾಲಿನ ವಿಚಾರ. ನಿಮ್ಮ ಅಗತ್ಯಗಳಿಗೆ ಉತ್ತಮ ಪರಿಹಾರ ಸೂಚಿಸುವ ಸಲುವಾಗಿಯೇ ಆರಂಭವಾಗಿದೆ ಡಯಲ್ ಎ ಬ್ಯಾಂಕ್. ಡಯಲ್ ಎ ಬ್ಯಾಂಕ್ ಭಾರತದ ಪ್ರಪ್ರಥಮ ಆರ್ಥಿಕ ಸಹಾಯವಾಣಿ. ಈ ಸಂಸ್ಥೆ 90 ಬ್ಯಾಂಕ್‌ಗಳು, 40 ಮ್ಯೂಚುವಲ್ ಫಂಡ್ಸ್, 20 ಇನ್ಶೂರೆನ್ಸ್ ಸಂಸ್ಥೆಗಳೊಂದಿಗೆ ಸೇರಿದ್ದು, ಮ್ಯೂಚುವಲ್ ಫಂಡ್ಸ್, ಸಾಲ ಅಥವಾ ಇನ್ಯಾವುದೇ ರೀತಿಯ ಆರ್ಥಿಕ ಉತ್ಪನ್ನಗಳ ಕುರಿತು ಮಾಹಿತಿ ನೀಡುತ್ತದೆ. ಡಯಲ್ ಎ ಬ್ಯಾಂಕ್ 18 ನಗರಗಳಲ್ಲಿ ತನ್ನ ಸೇವೆ ಆರಂಭಿಸಿದ್ದು, ಸಹಾಯವಾಣಿ ಸಂಖ್ಯೆ 60011600ಕ್ಕೆ ಕರೆ ಮಾಡುವ ಮೂಲಕ ನಿಮಗೆ ಅಗತ್ಯವಿರುವ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.

ಸಿಟಿ ಬ್ಯಾಂಕ್ ಮತ್ತು ಐಎನ್‌ಜಿ ಬ್ಯಾಂಕ್‌ ನಂತಹ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದ ಗೌರವ್ ಖುರಾನಾ, 2011ರಲ್ಲಿಡಯಲ್ ಎ ಬ್ಯಾಂಕ್ ಸಂಸ್ಥೆಯನ್ನು ಆರಂಭಿಸಿದರು.

ಭಾರತದಲ್ಲಿ ತನ್ನ ಜಾಲವನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದ ಜೆರಾಕ್ಸ್ ಸಂಸ್ಥೆಯ ಮೂಲಕ ವೃತ್ತಿಜೀವನ ಆರಂಭಿಸಿದ ಗೌರವ್, ನಂತರ ಚಂಡೀಘಡದಲ್ಲಿ ತಮ್ಮ ಮೊದಲ ಶಾಖೆ ತೆರೆದ ಸಿಟಿ ಬ್ಯಾಂಕ್‌ಗೆ ಸೇರಿದರು. ಅಲ್ಲದೇ ತಮ್ಮ 30ನೇ ವಯಸ್ಸಿನಲ್ಲೇ ಸಿಟಿ ಬ್ಯಾಂಕ್‌ನ ಅತೀ ಕಿರಿಯ ಉಪಾಧ್ಯಕ್ಷರಾಗಿದ್ದ ಹೆಮ್ಮೆಯೂ ಇವರಿಗಿದೆ. ತಾವು ಕಾರ್ಯನಿರ್ವಹಿಸುತ್ತಿದ್ದ ವೇಳೆಯಲ್ಲಿ ಬ್ಯಾಂಕ್ ಉತ್ಪನ್ನಗಳನ್ನು ಮಾರಲು ಅರ್ಹರಲ್ಲದ ಹಾಗೂ ಆರ್ಥಿಕ ಉತ್ಪನ್ನದ ಕುರಿತು ಸಂಪೂರ್ಣ, ಸಮರ್ಪಕ ಮಾಹಿತಿ ಇರದ ಮಧ್ಯವರ್ತಿಗಳು ಕೆಲಸ ಮಾಡುವುದನ್ನು ಗೌರವ್ ಗಮನಿಸಿದ್ದರು. 2008ರಲ್ಲಿ 8ನೇ ಶ್ರೇಯಾಂಕದಲ್ಲಿದ್ದ ಐಎನ್‌ಜಿಗೆ ಗೌರವ್ ಮತ್ತು ಸಿಟಿ ಬ್ಯಾಂಕ್‌ನಲ್ಲಿ ಏಷಿಯಾ ಫೆಸಿಫಿಕ್ ಸಿಇಓ ಆಗಿದ್ದ ವ್ಯಕ್ತಿಯೂ ಕೂಡ ಸೇರಿದರು.

ಆರಂಭದ ಸವಾಲುಗಳು

ಬ್ಯಾಂಕ್ ಉದ್ಯಮಗಳ ಕುರಿತು ಮಾಹಿತಿ ನೀಡುವ ಸಂಸ್ಥೆಯೊಂದನ್ನು ಸ್ಥಾಪಿಸುವುದು ಅಷ್ಟೇನೂ ಸುಲಭದ ಕೆಲಸವಲ್ಲ. ಡಯಲ್ ಎ ಬ್ಯಾಂಕ್ ಉದ್ಯಮವನ್ನು ಆರಂಭಿಸುವಾಗ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಹಲವು ನಗರಗಳಲ್ಲಿ ಕ್ರಿಯಾಶೀಲ ದೂರವಾಣಿ ಕರೆಗಳ ವೇದಿಕೆ ನಿರ್ಮಿಸಲು ಬಹಳಷ್ಟು ಸಮಯ ಹಿಡಿಯಿತು. ಇದಲ್ಲದೇ ದೊಡ್ಡ ದೊಡ್ಡ ಬ್ಯಾಂಕ್‌ಗಳ ಪಾರ್ಟ್‌ನರ್ ಶಿಪ್ ಪಡೆಯುವುದು ಸಹ ಸವಾಲಾಗಿತ್ತು.

ಈ ಸವಾಲುಗಳನ್ನು ನಿಭಾಯಿಸಿದ ಕುರಿತು ಗೌರವ್ ಯುವರ್ ಸ್ಟೋರಿ ಜೊತೆಗೆ ಮಾತನಾಡಿದ್ದಾರೆ. ಎಲ್ಲಾ ಉದ್ಯಮಿಗಳ ಜೀವನದಲ್ಲೂ ಒಳ್ಳೇ ಕಾಲ ಬಂದೇ ಬರುತ್ತದೆ. ಒಂದು ದಿನ ಎಲ್ಲಾ ಮಾನಸಿಕ ಸವಾಲುಗಳಿಂದ ಮುಕ್ತವಾಗಿ, ತಾವು ನಿರ್ವಹಿಸುತ್ತಿದ್ದ ಉದ್ಯೋಗವನ್ನು ಬಿಟ್ಟು ನಿಮ್ಮದೇ ಸ್ವಂತ ಉದ್ಯಮದಲ್ಲಿ ಮುಂದುವರೆಯಲು ನಿಮ್ಮ ತಲೆಯನ್ನು ತಗ್ಗಿಸಿ ಉದ್ಯಮವನ್ನು ಸ್ವಲ್ಪಸ್ವಲ್ಪವಾಗಿ ಕಟ್ಟುವುದೇ ಉದ್ಯಮಿಗಾಗುವ ನಿಜವಾದ ಸಂತೋಷ. ಇದು ಜೀವನದಲ್ಲಿ ಮತ್ತೊಮ್ಮೆ ಲೆಗೋ ಆಟವಾಡುವಂತೆಯೇ ಇರುತ್ತದೆ. ಬದುಕನ್ನು, ಉದ್ಯಮವನ್ನು ಹೊಸದಾಗಿ ಕಟ್ಟಬೇಕಿರುತ್ತದೆ ಎಂದಿದ್ದಾರೆ ಗೌರವ್.

ಸ್ಪರ್ಧೆ

ಬ್ಯಾಂಕ್ ಬಜಾರ್.ಕಾಮ್, ಪಾಲಿಸಿ ಬಜಾರ್.ಕಾಮ್, ಅಪ್ನಾಪೈಸಾ.ಕಾಮ್, ಇನ್ಸುರೆನ್ಸ್ ಪಂಡಿತ್‌.ಕಾಮ್ ಎಂಬ ಸಂಸ್ಥೆಗಳು ಇದೇ ಉದ್ಯಮದಲ್ಲಿ ತೊಡಗಿಕೊಂಡಿವೆ. ಆದರೆ ಈ ಯಾವುದೇ ಸಂಸ್ಥೆಗಳು ಆರ್ಥಿಕ ಉತ್ಪನ್ನಗಳ ಕುರಿತು ಧ್ವನಿ ಆಧಾರಿತ ಪರಿಹಾರಗಳನ್ನು ನೀಡುತ್ತಿಲ್ಲ. ಈ ಮೂಲಕ ಮೇಲಿನ ಎಲ್ಲಾ ಸೇವೆಗಳಿಗಿಂತ ಡಯಲ್ ಎ ಬ್ಯಾಂಕ್ ಸಂಸ್ಥೆ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಫೋನ್ ಮೂಲಕ ಸಹಾಯ ಮಾಡುವ ಮೂಲಕ ಗ್ರಾಹಕರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು, ಅನುಮಾನಗಳನ್ನು ನಿವಾರಿಸಿಕೊಳ್ಳಲು ಸಹಾಯವಾಗಿದೆ.

ಈ ಸ್ಪರ್ಧೆಗಳ ಬಗ್ಗೆ ಗೌರವ್ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ. ನಿಮ್ಮ ಉದ್ಯಮದ ವೇಗವನ್ನು ಹೆಚ್ಚಿಸಲು, ಮೇಲ್ಮಟ್ಟಕ್ಕೇರಿಸಲು, ಇನ್ನಷ್ಟು ಶ್ರಮವಹಿಸಿ ಕಾರ್ಯನಿರ್ವಹಿಸಲು, ಗಟ್ಟಿಯಾಗಿ ಹೋರಾಡುವಲ್ಲಿಯೇ ಸ್ಪರ್ಧೆಯ ಸೌಂದರ್ಯ ಇದೆ. ಹಳೆಯ ಮತ್ತು ದೊಡ್ಡ ಸಂಸ್ಥೆಗಳಿಂದ ಈ ಕ್ಷೇತ್ರದಲ್ಲಿ ಕಷ್ಟಕರವಾದ ಸ್ಪರ್ಧೆಯನ್ನು ಎದುರಿಸುತ್ತಿದ್ದೇವೆ. ದೊಡ್ಡ ಮಟ್ಟದ ಹೂಡಿಕೆ ಮಾಡಿರುವವರನ್ನು ಅಷ್ಟು ಸುಲಭವಾಗಿ ಹಿಂದಿಕ್ಕಲು ಅಸಾಧ್ಯ. ಮಾರುಕಟ್ಟೆಯ ಗಾತ್ರ ಸಾಕಷ್ಟು ದೊಡ್ಡದಾಗಿದೆ. ಇಲ್ಲಿ ಒಂದೇ ಉದ್ಯಮಕ್ಕೆ ಸೇರಿದ ವಿವಿಧ ಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿ ಸೇವೆಯನ್ನು ಒದಗಿಸುವುದು ಸಾಧ್ಯವಿದೆ ಎಂದು ನಾನು ನಂಬುತ್ತೇನೆ ಎನ್ನುತ್ತಾರೆ ಗೌರವ್.

ಕಳೆದ 2 ವರ್ಷಗಳಲ್ಲಿ 180 ಸಾವಿರ ಗ್ರಾಹಕರನ್ನು ತನ್ನತ್ತ ಸೆಳೆದುಕೊಂಡಿದೆ ಡಯಲ್ ಎ ಬ್ಯಾಂಕ್. ಪ್ರತಿದಿನ 3200 ಗ್ರಾಹಕರು ಇವರನ್ನು ಸಂಪರ್ಕಿಸುತ್ತಿದ್ದಾರೆ.

ಪಾಠಗಳು

ಈ ಉದ್ಯಮದಲ್ಲಿ ಬೆಳೆಯಲು ಸಹಾಯಕವಾದ ವಿಚಾರಗಳನ್ನು ಗೌರವ್ ಹೀಗೆ ಹೇಳುತ್ತಾರೆ.

1. ಉದ್ಯಮದ ಉದ್ದಕ್ಕೂ ತಾಳ್ಮೆ ಅತೀ ಅಗತ್ಯ

2. ಯೋಜನೆಗಳ ಕುರಿತು ಸದಾ ಚಿಂತನೆ

3. ಪ್ರತಿದಿನವೂ ಹೊಸ ಶಕ್ತಿಯಿಂದ ಕೆಲಸಕ್ಕಿಳಿಯುವುದರ ಮೂಲಕ ಹಿಂದಿನ ದಿನ ಬಾಕಿ ಕಾರ್ಯಗಳ ಪೂರೈಕೆ

4. ನಿಮ್ಮ ಬಳಿ ಏನಿದೆಯೋ ಅದನ್ನು ಮಾರಬೇಡಿ, ನಿಮ್ಮ ಗ್ರಾಹಕನಿಗೆ ಏನು ಅಗತ್ಯವೋ ಅದನ್ನು ಮಾರಿ

ಇವು ಗೌರವ್ ಕಲಿತಿರುವ, ಅನುಸರಿಸುತ್ತಿರುವ ಪಾಠಗಳು.

ಈ ಸಂಸ್ಥೆಯ ಕಾಲ್‌ ಸೆಂಟರ್ ಮಾದರಿಯ ಪರಿಣಿತ ಸಲಹೆ ಗ್ರಾಹಕರಿಗೆ ಅತ್ಯುತ್ತಮ ಮಾಹಿತಿ ಒದಗಿಸಿಕೊಡುವ ಜೊತೆಗೆ ಬ್ಯಾಂಕರ್‌ಗಳ ನಡುವಿನ ವ್ಯತ್ಯಾಸ ಸ್ಪಷ್ಟವಾಗಿ ತಿಳಿಯಪಡಿಸುತ್ತದೆ. ಉದಾಹರಣೆಗೆ ಗ್ರಾಹಕರಿಗೆ ಬ್ಲೂಚಿಪ್​​ ಹಾಗೂ ಡಿಸ್ಕವರಿ ಫಂಡ್ಸ್ ಅಥವಾ ಜೀವವಿಮೆಯ ಪ್ರಾಥಮಿಕ ಯೋಜನೆಗಳು ಹಾಗೂ ಯೂಲಿಪ್ ಪ್ಲಾನ್‌ನ ಆಫರ್​​ಗಳ ನಡುವಿನ ಸ್ಪಷ್ಟ ವ್ಯತ್ಯಾಸದ ಅರಿವಿರುವುದಿಲ್ಲ. ಈ ಎಲ್ಲಾ ಸಂಸ್ಥೆಗಳು ತಮ್ಮ ಗುಣಮಟ್ಟ ಹಾಗೂ ಸೇವೆಯನ್ನು ವರ್ಣಿಸುತ್ತವೆಯೇ ವಿನಃ ಮಾರುಕಟ್ಟೆಯ ವಿದ್ಯಮಾನಗಳನ್ನು ಅವಲೋಕಿಸುವುದಿಲ್ಲ. ಆದರೆ ಡಯಲ್ ಎ ಬ್ಯಾಂಕ್ ಸಂಸ್ಥೆ ಸದ್ಯದ ಮಾರುಕಟ್ಟೆ ವಹಿವಾಟು ಹಾಗೂ ಆರ್ಥಿಕತೆಗಳ ಸಂಪೂರ್ಣ ಒಳನೋಟವನ್ನು ಆಯ್ಕೆಯ ಸಹಿತ ವಿವರಿಸುತ್ತದೆ. ಹೀಗಾಗಿ ಇದು ಬಳಕೆದಾರರ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ.

Related Stories

Stories by YourStory Kannada