ಇದು ನನ್ನಿಂದ ಯಾಕೆ ಸಾಧ್ಯವಿಲ್ಲ..? 80ರ ನಂತ್ರವೂ ಆಕೆ ಯಶಸ್ವಿ ವ್ಯಾಪಾರಿ.

ಪಿ.ಅಭಿನಾಷ್​​

ಇದು ನನ್ನಿಂದ ಯಾಕೆ ಸಾಧ್ಯವಿಲ್ಲ..? 80ರ ನಂತ್ರವೂ ಆಕೆ ಯಶಸ್ವಿ ವ್ಯಾಪಾರಿ.

Friday October 30, 2015,

6 min Read

‘ಆಕೆಯ ಪ್ರಸಿದ್ಧಿ ಬಗ್ಗೆ ಆಕೆಗೂ ಅರಿವಿಲ್ಲ' ಟೇಬಲ್‍ನಲ್ಲಿ ಕೂತು ಮಾತನಾಡಿಕೊಳ್ಳುತ್ತಿದ್ದ ನಮ್ಮಿಬ್ಬರ ನಡುವೆ ಬಂದ ಆ ಮೂರನೇ ವ್ಯಕ್ತಿ ಹೇಳಿದ್ದರು. ನಾವು ಅವರನ್ನ ಸಂದರ್ಶಿಸಬೇಕು ಅಂತಾ ಹೊರಟಾಗ ಸಂಜೆ ಸುಮಾರು 4.30 ಆಗಿರಬಹುದು. ವಾರದ ದಿನವಾಗಿದ್ದರಿಂದ ಕೋಲ್ಕತ್ತಾದ ಬ್ಯುಸಿ ರಸ್ತೆಗಳನ್ನ ದಾಟಿ, ಹಲ್ದಿರಾಮ್ಸ್ ಮುಂದಿರುವ ತಮ್ಮಿಷ್ಟದ ಜಾಗದಲ್ಲಿ ತಮ್ಮ ಅಂಗಡಿಯನ್ನ ತೆರೆದಿಡುತ್ತಿದ್ದರು 87ರ ಹರೆಯದ ಶೀಲಾ ಘೋಷ್. ನಮ್ಮ ಮಾತು ಕೇಳ್ತಿದ್ದಂತೆ, ಹಲ್ಲುಗಳಿಲ್ಲದ ಬೊಚ್ಚು ಬಾಯಲ್ಲಿ ನಗು ಬೀರುತ್ತ ನಮ್ಮನ್ನ ಸ್ವಾಗತಿಸಿದ ಶೀಲಾ, ತನ್ನೆಲ್ಲಾ ಸಾಮಾಗ್ರಿಗಳನ್ನ ವಾಪಸ್ ತನ್ನ ಬ್ಯಾಗ್‍ಗೆ ತುಂಬಿಕೊಂಡು, ನಾವು ಕುಳಿತಿದ್ದ ಹಲ್ದಿರಾಮ್ಸ್ ಟೇಬಲ್‍ನತ್ತ ನಡೆದುಬಂದ್ರು. ಆದ್ರೆ, ಅಲ್ಲಿ ಆಕೆಯನ್ನ ಮಾತನಾಡಿಸುವುದು ಅಸಾದ್ಯವಾಗಿತ್ತು, ಯಾಕಂದ್ರೆ, ಅಲ್ಲಿದ್ದ ಜನರೆಲ್ಲಾ ಒಂದು ಕ್ಷಣ ನಿಂತು ಶೀಲಾ ಘೋಷ್ ಅವ್ರನ್ನ ನೋಡಿ ಸಂತಸದ ನಗೆ ಬೀರುತ್ತಿದ್ದರು, ಪ್ರಶಂಶಿಸುತ್ತ, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಶೀಲಾ ಘೋಷ್ ಪ್ರಸಿದ್ಧಿ ಪಡೆದಿದ್ದಾರೆ ಅನ್ನೋದು ನನಗೆ ಗೊತ್ತಿತ್ತು. ಆದ್ರೆ, ಇಷ್ಟರ ಮಟ್ಟಿಗೆ ಅನ್ನೋ ಸತ್ಯ ನನಗೆ ಆ ದಿನ ಅರಿವಿಗೆ ಬಂದಿತ್ತು.

image


ನನ್ನ ಸ್ನೇಹಿತೆಯೊಬ್ಬರು ಫೇಸ್‍ಬುಕ್‍ನಲ್ಲಿ ಶೀಲಾ ಅವರ ಕಥೆಯನ್ನ ಶೇರ್ ಮಾಡಿದ್ದ ದಿನ ಆಕೆಯ ಪರಿಚಯ ನನಗಾಗಿತ್ತು. ಅವರ ಮಗನ ಅಕಾಲಿಕ ಮರಣ ಆಕೆ 80ರ ಹರೆಯದಲ್ಲಿ, ತನ್ನ ಜೀವನದಲ್ಲೇ ಮೊಟ್ಟ ಮೊದಲ ಬಾರಿಗೆ ಮನೆಯಿಂದ ಹೊರಬಂದು ದುಡಿಯುವಂತೆ ಮಾಡಿತ್ತು. ಆಕೆ ದುಡಿದು ಹಣ ಸಂಪಾದನೆ ಮಾಡದೆ ಇದ್ದಿದ್ರೆ, ಇಷ್ಟೊತ್ತಿಗಾಗ್ಲೇ ಆಕೆಯ ಕುಟುಂಬ ಬೀದಿಗೆ ಬೀಳಬೇಕಿತ್ತು. ಕೇಳೋದಕ್ಕೆ ತುಂಬಾ ಸಿಂಪಲ್ ಅನಿಸಿದ್ರೂ, ಮತ್ತೊಬ್ಬರನ್ನ ಪ್ರೇರೇಪಿಸುವ ಮಹಾನ್ ಶಕ್ತಿ ಈ ಕಥೆಯಲ್ಲಿದೆ. ಹಾಗಾಗೇ ಇದು ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿದೆ. ನಮ್ಮ ಆರ್ಟಿಕಲ್ ಬರೆಯಲು ಪೂರಕವಾಗುವಂತೆ ಪ್ರಶಸ್ತವಾದ ಸ್ಥಳದಲ್ಲೇ ಕುಳಿತು ಅವರು ಮಾತು ಆರಂಭಿಸಿದ್ದರು. ಹೌದು, ಹಲ್ದಿರಾಮ್ಸ್​​​ನಲ್ಲಿ ಮಾತನಾಡಲು ಸಮಸ್ಯೆಯಾಗಿದ್ರಿಂದ, ಮನೆಗೆ ಕರೆದುಕೊಂಡು ಹೋಗುವಂತೆ ನಾವು ಮನವಿ ಮಾಡಿದ್ದೆವು. ನಗುನಗುತ್ತಾ ನಾವು ಗುರುತಿಲ್ಲದವರು ಅನ್ನೋದನ್ನೂ ಲೆಕ್ಕಿಸದೆ, ನಮ್ಮನ್ನ ಸೀದಾ ಅವರ ಮನೆಗೆ ಕರೆದೊಯ್ದರು. ಆದ್ರೆ, ಅದಕ್ಕೂ ಮೊದಲು ನಾವು ಕೊಟ್ಟ ಲಡ್ಡುಗಳನ್ನ ತಿನ್ನುತ್ತಾ, ಹಲ್ಲಿಲ್ಲದ ಬಾಯಿಂದ ನಗೆ ಬೀರುತ್ತಲೇ ಶರತ್ತೊಂದನ್ನ ನಮ್ಮ ಮುಂದಿಟ್ಟಿದ್ದರು. ಇಂದು ನನಗಾಗಬೇಕಿದ್ದ ವ್ಯಾಪಾರದ ಹಣವನ್ನ ನೀವು ನೀಡಿದ್ರೆ ಬರುತ್ತೇನೆ ಎಂದರು. ಅವರು ರಸ್ತೆ ಬದಿ ಮಾರಾಟ ಮಾಡುವ, ಬ್ರಾಂಡ್ ಅಲ್ಲದ ಕರಿಯುವ ಪದಾರ್ಥಗಳ ಪ್ಯಾಕೆಟ್‍ಗಳಿದ್ದ ಅವರ ಬ್ಯಾಗ್‍ನ್ನು ಇಣುಕಿ ನೋಡಿ ಸರಿ ಅಂತಾ ಒಪ್ಪಿಕೊಂಡಿದ್ದೆ. ಇವತ್ತು ನಿನ್ನ ಪಾಕೆಟ್ ಖಾಲಿಯಾಗತ್ತೆ ಅಂತ ಕೆಣಕಿದ್ರು ನನ್ನ ಜೊತೆಯಲ್ಲಿದ್ದ ಆ ತಾಯಿ. ಆದ್ರೆ, ಪ್ರತಿ ಪ್ಯಾಕೆಟ್‍ಗೆ ಗರಿಷ್ಟ ಅಂದ್ರು ಮೂವತ್ತು ರೂಪಾಯಿ. ಎಷ್ಟು ಪ್ಯಾಕೆಟ್‍ಗಳಿರಬಹುದು ಆಕೆಯ ಬ್ಯಾಗ್‍ನಲ್ಲಿ, ಕೊಂಡುಕೊಂಡರಾಯ್ತು ಅಂತಾ ನಾನು ಆಕೆಯನ್ನ ಹಿಂಬಾಲಿಸಿದ್ದೆ.

ಅವರ ಮನೆ ಸೇರಿದ ನಂತ್ರ ಔಪಚಾರಿಕವಾಗಿ ಸಂಜೆಯ ಚಹಾ ಕುಡಿದಾಯ್ತು. ಇನ್ನೇನು ಅವರನ್ನ ಮಾತಿಗೆಳೆಯಬೇಕು ಎನ್ನುವಷ್ಟರಲ್ಲಿ, ಅವರು ನಿಮಗಾಗಿ ಒಂದು ಹಾಡನ್ನ ಹಾಡಬೇಕು, ಈ ಹಾಡನ್ನ ನಾನು ನನ್ನ ಪತಿಗಾಗಿ ನನ್ನ ಮದುವೆಯ ಮೊದಲ ರಾತ್ರಿ ಹಾಡಿದ್ದೆ, ಅಂತಾ ಹಾಡುಲು ಶುರು ಮಾಡಿದ್ರು. ಒಗೋ ಸುಂದರೋ. . ತುಂಬಾ ಚೆನ್ನಾಗಿದೆ. . . ಎಂದೆ ಅವರ ಹಾಡು ಸಂಪೂರ್ಣಗೊಂಡ ನಂತರ. ‘ನೀವೇ ಬರೆದದ್ದ' ? ಇಲ್ಲಾ ರಬೀಂದ್ರನಾಥ್ ಟ್ಯಾಗೋರ್ ಅಂದ್ರು ಮೆಲುಧನಿಯಲ್ಲಿ.

image


ಮತ್ತೆ ತಮ್ಮ ಹಾಡು ಮುಂದುವರೆಸಿದ್ರು, ‘ನಿಮ್ಮ ರಾಗವೇ ನಿಮ್ಮ ಪತಿಗೂ ಸ್ಪೂರ್ತಿಯಾಗಿರಬೇಕಲ್ಲವಾ'? ಅಂತ ಕೇಳಿದೆ. ಹೌದು ಅಂತ ನಾಚಿಕೆಯಿಂದ ತಲೆಯಾಡಿಸಿದ್ರು. ‘ಅವರಿಗೆ ನನ್ನ ಹಾಡುಗಳು ತುಂಬಾ ಇಷ್ಟವಾಗ್ತಾ ಇತ್ತು’ . ಬಂಗಾಳದ ಬಿಶ್ನುಪುರ್‍ನಲ್ಲಿ ಶೈಲಾ ಅವರು ಜನಿಸಿದ್ರು. ಅವರ ತಂದೆ ವೃತ್ತಿಯಲ್ಲಿ ವೈದ್ಯರಾಗಿದ್ದರು. ತಾಯಿ ಗೃಹಿಣಿ. ಏಳು ಮಕ್ಕಳ ಪೈಕಿ ಶೈಲಾ ಅವರೇ ಹಿರಿಯರು. ಆಕೆ ಜನಿಸಿದ ದಿನಾಂಕ ತಿಳಿದಿಲ್ಲವಾದ್ರೂ, ನನಗೀಗ 87 ಇರಬಹುದು ಅಂತಾರೆ. ‘ನಾನು ಅಬ್ಬರದ ಹುಡುಗಿಯಾಗಿದ್ದೆ’, ಈಜುವುದು ನನ್ನ ಇಷ್ಟದ ಹವ್ಯಾಸವಾಗಿತ್ತು. ಶಾಲೆಯಿಂದ ಮನೆಗೆ ಬರ್ತಿದ್ದ ಹಾಗೇ ನನ್ನ ಬ್ಯಾಗ್ ಹಾಗೂ ಪುಸ್ತಕಗಳನ್ನ ಹಾಸಿಗೆ ಮೇಲೆ ಬಿಸಾಡಿ, ಪಕ್ಕದಲ್ಲೇ ಇದ್ದ ಕೆರೆಯಲ್ಲಿ ಈಜಲು ಹೋಗುತ್ತಿದ್ದೆ. ಇನ್ನು, ಸಂಜೆ ವೇಳೆ ನನ್ನ ತಾಯಿಯ ತಲೆಯಲ್ಲಿದ್ದ ಬಿಳಿಕೂದಲನ್ನ ಹೆಕ್ಕಿ ಕೀಳುವ ಕೆಲಸವೂ ನನ್ನದಾಗಿತ್ತು. ಇಷ್ಟವಿಲ್ಲದ ಈ ಕೆಲಸ ಮುಗಿಸ್ತಿದ್ದ ಹಾಗೇ ನೇರಳೆ ಮರವನ್ನ ಏರಿ ಕೂರುತ್ತಿದೆ, ರಾತ್ರಿ ಊಟಕ್ಕೆ ಕರೆಯುವವರೆಗೂ ಕೆಳಗಿಳಿಯುತ್ತಿರಲಿಲ್ಲ’. ಅಂತಾ ನೆನೆಸಿಕೊಳ್ಳುತ್ತಾರೆ. ನಮ್ಮ ಹಳ್ಳಿಯಲ್ಲಿದ್ದವರು, ರಾತ್ರಿ ವೇಳೆ ಮರವೇರಬಾರದು ಅನ್ನೋ ಮೂಡನಂಬಿಕೆಯಲ್ಲಿದ್ದರು. ನನ್ನ ತಾಯಿ ಎಷ್ಟು ಬೇಡ ಅಂದ್ರೂ ಮರವೇರುತ್ತಿದ್ದ ನನ್ನನ್ನ ತಡೆಯಲು , ಒಮ್ಮೆ ಆ ಮರದಲ್ಲಿ ಭೂತವಿದೆ ಅಂತಾ ಹೆದರಿಸಿದ್ದರು. ಅಂದೇ ಕೊನೆ. ಮತ್ತಿನ್ನೆಂದು ನಾನು ಆ ಮರವನ್ನೇರಲೇ ಇಲ.. ಅಂತಾ ನಗುತ್ತಾರೆ ಈ ಮಹಾತಾಯಿ.

ಓದಿನಲ್ಲಿ ಶೀಲಾ ಅವರಿಗೆ ಆಸಕ್ತಿ ಇತ್ತು, ಆದರೂ ಎರಡನೇ ತರಗತಿವರೆಗೂ ಮಾತ್ರ ಓದಲು ಸಾಧ್ಯವಾಯಿತು. ಹಳ್ಳಿಯ ಶಾಲೆಯಲ್ಲಿ ಎರಡನೇ ತರಗತಿಯವರೆಗೂ ಮಾತ್ರ ಹೇಳಿಕೊಡಲಾಗ್ತಾ ಇತ್ತು. ನನ್ನ ತಮ್ಮಂದಿರು ಸಿಟಿಯ್ಲಲಿದ್ದ ಶಾಲೆಗೆ ಹೋಗಲು ಪ್ರಾರಂಭಿಸಿದರು. ಅವರು ಶಾಲೆಯಿಂದ ಹಿಂದಿರುಗುತ್ತಿದ್ದಂತೆ, ನಾನು ಅವರ ಪುಸ್ತಕಗಳನ್ನ ಕಸಿದು, ಅಂದಿನ ಅವರ ಪಾಠವನ್ನ ಯಾರ ಸಹಾಯವೂ ಇಲ್ಲದೆ, ಓದಿಕೊಳ್ಳುತ್ತಿದ್ದೆ. ನನ್ನ ತಂದೆ ವಿದ್ಯಾವಂತರಾಗಿದ್ರೂ, ಹೆಣ್ಣುಮಕ್ಕಳನ್ನ ಓದಿಸಬೇಕು ಎನ್ನುವ ಹಂಬಲವಿದ್ದರೂ, ಆಗೆಲ್ಲಾ ಹೆಣ್ಣುಮಕ್ಕಳನ್ನ ಹೆಚ್ಚಾಗಿ ಓದಿಸುತ್ತರಲಿಲ್ಲ. ಹೆಣ್ಣುಮ್ಕಕಳನ್ನ ಶಾಲೆಗೆ ಹೋಗದಂತೆ ತಡೆಯಲಾಗ್ತಾ ಇತ್ತು. ಇದ್ದುದ್ದರಲ್ಲಿ ನಾನೇ ಅದೃಷ್ಟವಂತೆ, ಕೊನೆ ಪಕ್ಷ ಎರಡನೇ ತರಗತಿವರೆಗೂ ಶಾಲೆಗೆ ಹೋಗುವ ಅವಕಾಶ ಸಿಕ್ಕಿತ್ತು. ನನ್ನ ತಮ್ಮಂದಿರು ಪ್ರಾಥಮಿಕ ಶಿಕ್ಷಣ, ಮುಗಿಸಿ, ಪ್ರೌಡ ಶಿಕ್ಷಣದತ್ತ ಹೋಗುತ್ತಿದ್ದರೆ, ನಾವು ಹೆಣ್ಣುಮಕ್ಕಳನ್ನ ಒಬ್ಬೊಬ್ಬರಾಗಿಯೇ ಮದುವೆ ಮಾಡಿ ಕೊಡಲಾಗ್ತಾ ಇತ್ತು. ನಾನೇ ಮೊದಲನೆಯವಳಾಗಿದ್ದರಿಂದ ನನ್ನ ಸರದಿಯೇ ಮೊದಲಿತ್ತು.

image


ಹದಿನಾಲ್ಕನೇ ವಯಸ್ಸಿನಲ್ಲೇ ನನ್ನ ವಿಹಾಹವಾಯ್ತು. ಹದಿನೈದನೇ ವಯಸ್ಸಿಗೆ ನಾನು ತಾಯಿಯಾಗಿದ್ದೆ. ನನ್ನ ಮಗ ನನ್ನ ಮದುವೆಯ ಮುಂದಿನ ವರ್ಷವೇ ಹುಟ್ಟಿದ. ಅವನನ್ನ ಹಿಂಬಾಲಿಸಿ, ಇಬ್ಬರು ಹೆಣ್ಣುಮಕ್ಕಳು ಜನಿಸಿದರು. ಬಾಲೆಯಾಗಿದ್ದರೂ, ಬಾಲ್ಯ ಅಲ್ಲಿಗೆ ಮುಗಿದಿತ್ತು. ಈಜುವುದು, ಮರ ಹತ್ತುವುದು, ಪುಸ್ತಕಗಳನ್ನ ಓದುವ ಹವ್ಯಾಸಗಳು ಅಲ್ಲಿಗೆ ಕೊನೆಗೊಂಡಿದ್ದವು. ಗಂಡನ ಮನೆ ತುಂಬಾ ಕಟ್ಟುನಿಟ್ಟಿನದಾಗಿತ್ತು. ‘ನಾನು ಯಾವಾಗಲೂ ಮುಖಕ್ಕೆ ಮುಸುಕು ಹಾಕಿಕೊಂಡಿರಬೇಕಿತ್ತು. ಮನೆಯಿಂದ ಹೊರಹೋಗುವ ಬಗ್ಗೆ ಯೋಚಿಸುವುದಿರಲಿ, ಕಿಟಿಕಿಯಿಂದಾಚೆಗೂ ನೋಡಿದರೂ, ಬಯ್ಯುತ್ತಿದ್ದರು’ .

ಮಾವ ರೈಲ್ವೇ ಇಲಾಖೆಯಲ್ಲಿದ್ದರು, ಗಂಡ ಕೂಡ ರೈಲ್ವೇ ಇಲಾಖೆಯಲ್ಲೇ ಕೆಲಸಕ್ಕೆ ಸೇರಿದ್ದರು. ಶೀಲಾ ಅವರಿಗೆ ಮನೆಯಿಂದ ಹೊರಹೋಗಲು ಅವಕಾಶ ಇರಲಿಲ್ಲವಾದ್ರೂ, ಆಕೆಯ ಗಂಡನಿಗೆ ಇಲಾಖೆಯಿಂದ ಸಿಗುತ್ತಿದ್ದ ಪ್ರಯಾಣ ಭತ್ಯೆಯಿಂದಾಗಿ ಅವರು ತನ್ನ ಗಂಡನೊಂದಿಗೆ ದೇಶದ ಉದ್ದಗಲಕ್ಕೂ ಪ್ರಯಾಣ ಮಾಡಿದ್ದಾರೆ. ‘ನನಗೆ ಪ್ರಯಾಣ ಮಾಡುವುದು ಅಂದ್ರೆ ತುಂಬಾ ಇಷ್ಟ’. ಅಂತಾ ಸಂತಸದಿಂದ ಹೇಳ್ತಾರೆ ಶೀಲಾ. ‘ನಾನು, ಪುರಿ, ಭುಬನೇಶ್ವರ, ದೆಹಲಿ, ಆಗ್ರಾ, ಮಥುರಾ, ವೃಂದಾವನ, ಕನ್ಯಾಕುಮಾರಿ, ಮದುರೈ, ಪಾಂಡಿಚೆರಿ, ಸೇರಿದಂತೆ ಹಲವು ಪ್ರದೇಶಗಳಿಗೆ ಹೋಗಿದ್ದೇನೆ. ತಿರುಪತಿಯಲ್ಲಿ ರಾತ್ರಿಯಿಡೀ ಸರತಿ ಸಾಲಿನಲ್ಲಿ ನಿಂತು ದರ್ಶನ ಮಾಡಿದ್ದೇನೆ’, ಅಂತ ಹಳೇ ನೆನಪುಗಳನ್ನು ಕೆದಕುತ್ತಾರೆ ಆದ್ರೆ, ಪತಿಯ ಮರಣದ ನಂತ್ರ ಶೀಲಾರ ಪ್ರಯಾಣವೂ ಮುಕ್ತಾಯವಾಗಿತು.

ಅಲ್ಲಿಂದ ಶೀಲಾ, ಒಬ್ಬ ಒಳ್ಳೆ ತಾಯಿಯಾಗುವತ್ತ ಗಮನ ನೆಟ್ಟರು. ತನ್ನ ಮಗ ಹಾಗೂ ಹೆಣ್ಣುಮಕ್ಕಳನ್ನ ಸಮವಾಗಿ ಓದಿಸುವ ಪಣ ತೊಟ್ಟರು. ಆದ್ರೆ, ದೈವವೇ ಬೇರೆ ಬಗೆದಿತ್ತು. ಆಕೆಯ ಹಿರಿಯ ಮಗಳು ಒಂಭತ್ತನೇ ತರಗತಿಯಲ್ಲಿರುವಾಗಲೆ ತೀರಿಹೋದಳು. ಆಕೆಯ ಕಿರಿಯ ಮಗಳು, ಮಾನಸಿಕ ಕಾಯಿಲೆಯಿಂದ ಬಳಲ್ತಾ ಇದ್ದುದ್ದರಿಂದ, ಹೆಚ್ಚು ಓದಲು ಸಾಧ್ಯವಾಗಲಿಲ್ಲ. ‘ನನ್ನ ಎರಡನೇ ಮಗಳು ದ್ವಿತೀಯ ಪಿಯುಸಿವರೆಗೂ ಓದಿದಳಾದ್ರೂ, ಸೋಂಕಿನಿಂದಾಗಿ ಕಾಲೇಜಿನಿಂದ ಹೊರಗುಳಿಬೇಕಾಯಿತು. ವೈದ್ಯರ ಬಳಿ ತೋರಿಸಿ, ಆಸ್ಪತ್ರೆಯಲ್ಲಿ ದಾಖಲು ಮಾಡಿ, ಮತ್ತೆ ಕಾಲೇಜಿಗೆ ಕಳುಹಿಸಿದರು ಪ್ರಯೋಜನವಾಗಲಿಲ್ಲ. ಮತ್ತೆರಡೇ ದಿನದಲ್ಲಿ ಜ್ವರದಿಂದ ಬಳಲಿದಳು. ಹಾಗಾಗಿ, ಶಾಶ್ವತವಾಗಿ ಕಾಲೇಜಿನಿಂದ ಹೊರಗುಳಿಯಲೇ ಬೇಕಾಯ್ತು.

ನಂತ್ರ ಆಕೆ, ತನ್ನ ಕನಸನ್ನ ಮಗನ ಮೂಲಕ ನನಸು ಮಾಡಲು ಪ್ರಯತ್ನಿಸಿದರು. ತನ್ನ ತಂದೆಯಂತೆ ಮಗನೂ ಕೂಡ ರೈಲ್ವೇ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ್ದ. ‘ನಾವು ಎಂದಿಗೂ ಶ್ರೀಮಂತ ವರ್ಗಕ್ಕೆ ಸೇರಿದವರಾಗಿರಲಿಲ್ಲ, ಆದ್ರೆ, ಸಭ್ಯ ಮಧ್ಯಮ ವರ್ಗದವರಾಗಿದ್ದೆವು, ಸಂತಸದ ಜೀವನ ಸಾಗಿಸ್ತಾ ಇದ್ದ ನಮಗೆ ಬೇರೇನೂ ಬೇಕಾಗಿರಲಿಲ್ಲ’. ಆದ್ರೆ, ಅವರ ಮಗ ಶ್ವಾಸಕೋಶದ ಕಾಯಿಲೆಗೆ ತುತ್ತಾಗಿದ್ದರು. 1993ರಲ್ಲಿ ಹಲವು ಬಾರಿ ಶ್ವಾಸಕೋಶದ ಚಿಕಿತ್ಸೆಗೆ ಒಳಪಟ್ಟರು. ‘ಅವರು ಸಂಬಳ ನೀಡುವುದನ್ನು ನಿಲ್ಲಿಸಿಬಿಟ್ಟರು. ನಮ್ಮ ಜೀವನೋಪಾಯಕ್ಕೆ ಅವನ ಸಂಬಳವನ್ನೇ ನೆಚ್ಚಿಕೊಂಡಿದ್ದ ನಾವು, ತುತ್ತು ಅನ್ನಕ್ಕೂ ಅವನ ಚಿಕಿತ್ಸೆಗೂ ಪರದಾಡಬೇಕಾಯ್ತು. ಅವನ ಚಿಕಿತ್ಸೆಗಾಗಿ ನಾನು ಲೋನ್‍ಗಳನ್ನ ಪಡೆದುಕೊಂಡೆ. ಮೊದಮೊದಲು ಅವರು ನನ್ನ ಮಗನ ಶ್ವಾಸಕೋಶದಿಂದ ಮೂರರಿಂದ ನಾಲ್ಕು ಲೀಟರ್​​ನಷ್ಟು ನೀರನ್ನ ಹೊರತೆಗೆಯುತ್ತಿದ್ದರು. ಆ ನಂತ್ರ ಅದು ಏಳುಲೀಟರ್‍ಗೆ ಏರಿಕೆಯಾಯ್ತು. ಅಂದು ಅವರು 11 ಲೀಟರ್‍ನಷ್ಟು ನೀರನ್ನ ಹೊರತೆಗೆದ ದಿನ ಅವನಿಗೆ ಸೋಂಕು ತಗುಲಿತ್ತು. ಮಾರನೆಯ ದಿನವೇ ಆತ ಮೃತಪಟ್ಟನು. ಆತನಿಗೆ ಕೇವಲ 47 ವರ್ಷ ವಯಸ್ಸಾಗಿತ್ತು’.

‘ಆತ ಹದಿಮೂರು ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದ. ಅವನ ಸಾವಿನ ನಂತ್ರ ದೊಡ್ಡ ಸಾಲದ ಹೊರೆ ನಮ್ಮ ಹೆಗಲೇರಿತು’.ಕೇವಲ ಎರಡನೇ ತರಗತಿವರೆಗಿನ ಶಿಕ್ಷಣ, ಪ್ರಪಂಚ ಏನು ಅಂತ ಅರಿವಿಲ್ಲದ ಮುಗ್ಧೆ, ಆದ್ರೂ ಸಂಸಾರ ದೂಗಿಸಲು ಏನಾದ್ರೂ ಮಾಡಲೇ ಬೇಕಿತ್ತು. ‘ನಾವು ಮೇಣದ ಬತ್ತಿಗಳನ್ನ ಸಿದ್ದಪಡಿಸಿ ಮಾರಾಟ ಮಾಡಲು ಆರಂಭಿಸಿದೆವು. ನನ್ನ ಮೊಮ್ಮಗ ಮೇಣವನ್ನ ಹಾಗೂ ಬೇಕಾಗಿದ್ದ ಎಲ್ಲಾ ಸಾಮಾಗ್ರಿಗಳನ್ನ ತಂದು ಕೊಡ್ತಾ ಇದ್ದ. ನಾನು ಹಾಗೂ ನನ್ನ ಸೊಸೆ ಇಬ್ಬರೂ ಮೇಣವನ್ನ ವಿವಿಧ ಬಗೆಯಲ್ಲಿ ಹಾಗೂ ಆಕರ್ಷಣೀಯವಾಗಿ ಸಿದ್ದಪಡಿಸ್ತಾ ಇದ್ವಿ. ಮೇಣದ ಬತ್ತಿಗೆ ಸಾಕಷ್ಟು ಬೇಡಿಕೆ ಇತ್ತು. ಹೆಚ್ಚಾಗಿ ಮಾರಾಟವೂ ಆಗ್ತಾ ಇತ್ತು. ಆದ್ರೆ, ಮೇಣದ ಬತ್ತಿಗೆ ಅಗತ್ಯವಿದ್ದ ಕಚ್ಚಾ ವಸ್ತುಗಳಿಗೆ ಹೆಚ್ಚಿನ ಬೆಲೆ ಇತ್ತು. ಆ ಸಾಮಾಗ್ರಿಗಳಿಗೆ ನಮ್ಮ ಆದಾಯವೆಲ್ಲಾ ಖರ್ಚಾಗ್ತಿತ್ತು. ಲಾಭ ಬಿಡಿಗಾಸಿನಷ್ಟೂ ಇರಲಿಲ್ಲ. ಹಾಗಾಗಿ ಮೇಣದ ಬತ್ತಿಯ ವ್ಯಾಪಾರವನ್ನ ನಿಲ್ಲಿಸಿದೆವು’.

ಹಪ್ಪಳ, ಸೆಂಡಿಗೆ ಒತ್ತುವುದು ಅವರ ಮೊಮ್ಮಗನ ಐಡಿಯಾ. ಮೊಮ್ಮಗ ಇದ್ದರೂ ಕೂಡ ದುರ್ಬಲ ದೇಹದ ಶೀಲಾ ಯಾಕೆ ಪ್ರತಿನಿತ್ಯ ಮಾರಾಟಕ್ಕಾಗಿ ರಸ್ತೆಗಿಳಿಯುತ್ತಾರೆ ಅಂತಾ ಎಂಥವರಿಗೂ ಆಶ್ಚರ್ಯವಾಗತ್ತೆ. ‘ನನ್ನ ಮೊಮ್ಮಗ ವ್ಯಾಪಾರ ಮಾಡುವುದರಲ್ಲಿ ತುಂಬಾ ವೀಕ್. ಬೆಳಗ್ಗೆ ಬ್ಯಾಗ್ ತುಂಬಾ ಹಪ್ಪಳ ಸೆಂಡಿಗೆಗಳನ್ನ ತೆಗೆದುಕೊಂಡು ಹೋಗಿ, ದಿನವಿಡೀ ತಿರುಗಿದ್ರೂ ಒಂದು ಪೊಟ್ಟಣವನ್ನೂ ಮಾರಾಟ ಮಾಡಿಬರುತ್ತಿರಲಿಲ್ಲ. ನಂತ್ರ ನಾನೇ ವ್ಯಾಪಾರಕ್ಕೆ ಮುಂದಾದೆ. ಈ ಮುದುಕಿಯನ್ನ ನೋಡಿಯಾದ್ರೂ ಜನ ಹಪ್ಪಳ, ಸೆಂಡಿಗೆ ಕೊಂಡುಕೊಳ್ತಾರೆ’ ಅಂತಾ ಮುಗುಳ್ನಗುತ್ತಾರೆ. ಶೀಲಾ ಒಬ್ಬ ಒಳ್ಳೆಯ ವ್ಯಾಪಾರಿಯೂ ಹೌದು, ಹೆಮ್ಮೆಯ ಮಹಿಳೆಯೂ ಹೌದು. ಯಾರ ಬಳಿಯೂ ಶೀಲಾ ಸುಮ್ಮನೆ ಹಣ ಪಡೆದುಕೊಳ್ಳುವುದಿಲ್ಲ. ಆದ್ರೆ, ಯಾವುದೇ ಅಳುಕಿಲ್ಲದೆ, ತನ್ನ ಸರಕನ್ನ ಮಾರಾಟ ಮಾಡುವುದು ಹೇಗೆ ಅನ್ನೋದು ಆಕೆಗೆ ತಿಳಿದಿದೆ. ಶೀಲಾ ಅವರ ಇದೇ ನಡತೆಯಿಂದಾಗಿ ನಾನೂ ಕೂಡ ಅವರಿಂದ 1200 ರೂಪಾಯಿಗಳ ಸೆಂಡಿಗೆ ಹಪ್ಪಳವನ್ನ ಖರೀದಿ ಮಾಡಬೇಕಾಯ್ತು.

ಶೀಲಾ ಮನೆಯಿಂದ ತನ್ನ ವ್ಯಪಾರದ ಸ್ಥಳಕ್ಕೆ ಮುಟ್ಟಲು ಮೂರು ಬಸ್‍ಗಳನ್ನ ಬದಲಾಯಿಸಬೇಕು. ಪ್ರತಿಬಾರಿ ಟ್ರಾಫಿಕ್ ಪೊಲೀಸರು ಆಕೆ ರಸ್ತೆ ದಾಟುವುದರಿಂದ ಹಿಡಿದು, ತನ್ನ ಬಸ್ ಹಿಡಿಯುವವರೆಗೂ ಆಕೆಗೆ ಸಾಥ್ ನೀಡ್ತಾರೆ.

‘ನೀವು ಪ್ರತಿನಿತ್ಯ 1200 ರೂಪಾಯಿಗಳನ್ನ ಸಂಪಾದಿಸುತ್ತೀರಾ?’ ನಾನು ನಿಟ್ಟುಸಿರು ಬಿಟ್ಟೆ. ‘ಇದರರ್ಥ ನೀವು ತಿಂಗಳಿಗೆ ಮೂವತ್ತು ಸಾವಿರ ರೂಪಾಯಿಗಳನ್ನ ಗಳಿಸ್ತೀರಿ ಅಂತಾಯ್ತು! ಇದ್ರಲ್ಲಿ ಲಾಭ ಎಷ್ಟಿರತ್ತೆ? ಖರ್ಚು ಕಳೆದು ಎಷ್ಟು ಉಳಿಯತ್ತೆ?’ ‘ನಾನು ವಯಸ್ಸಾದ ಮುದುಕಿ ನನಗೆ ಗಣಿತ ಬರೋದಿಲ್ಲ ಆದ್ರೆ, ನನಗೆ ಇಷ್ಟು ಮಾತ್ರ ಗೊತ್ತು ನಾನು ದಿನಕ್ಕೆ 1200 ರೂಪಾಯಿಗಳಷ್ಟು ವ್ಯಾಪಾರ ಮಾಡ್ತೀನಿ. ಹಾಗಾಗೆ ನಿನ್ನಿಂದಾನು ಅಷ್ಟೇ ಪಡೆದುಕೊಂಡೆ’ ಅಂತ ತುಂಟತನದ ನಗೆ ಬೀರಿದರು ಶೀಲಾ.

ಶೀಲಾ ಅವರಿಗೆ ತಕ್ಷಣವೇ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ ಮಾಡಿಸಬೇಕಿದೆ. ಆದ್ರೆ ಅಷ್ಟು ಹಣ ಅವರ ಬಳಿಯಿಲ್ಲ. ಆಕೆಯ ದೇಹ ಸಂಪೂರ್ಣ ಬಾಗಿ ಹೋಗಿದ್ರೂ, ಯಾವುದೇ ಸಹಾಯವಿಲ್ಲದೆ ನಡೆಯುತ್ತಾರೆ, ದಿನನಿತ್ಯ ಮೂರು ಗಂಟೆಗಳ ಪ್ರಯಾಣ ಮಾಡುತ್ತಾರೆ. ಟ್ರಾಫಿಕ್ ಪೊಲೀಸ್, ಹಲ್ದಿರಾಮ್ಸ್ ಸಿಬ್ಬಂದಿ, ಹಾಗೂ ದಿನನಿತ್ಯದ ಪ್ರಯಾಣಿಕರು ಆಕೆಯನ್ನ ಬಸ್ ಹತ್ತಿಸುವುದರಿಂದ ಹಿಡಿದು ಆಕೆಗೆ ರಸ್ತೆ ದಾಟಲು ಸಹಾಯ ಮಾಡುತ್ತಾರೆ. ಶೀಲಾ ಒಂದು ದಿನವೂ ತನ್ನ ವ್ಯಾಪಾರವನ್ನ ತಪ್ಪಿಸಲ್ಲ, ಕ್ಷಣ ಮಾತ್ರಕ್ಕೂ ಆಕೆಯ ಮುಖದಿಂದ ನಗೆ ದೂರವಾಗಲ್ಲ, ತನ್ನ ಸರಕನ್ನು ಕೊಂಡುಕೊಳ್ಳದಿರುವವರನ್ನೂ ನಗುಮೊಗದಿಂದಲೇ ಮಾತನಾಡಿಸುತ್ತಾರೆ. ಆಕೆಯ ವಯಸ್ಸು ಎಂದಿಗೂ ಆಕೆಯ ಸಾಮರ್ಥ್ಯ ಹಾಗೂ ಶಕ್ತಿಯನ್ನ ಕುಗ್ಗಿಸಿಲ್ಲ. ‘ನನಗ್ಯಾಕೆ ಮಾಡಲು ಸಾದ್ಯವಿಲ್ಲ? ಬೆರುಗುಗೊಳಿಸುವಂತೆ ಪ್ರಶ್ನೆ ಮಾಡುತ್ತಾರೆ.

ಆಕೆಯ ಚುರುಕುತನದ ಹಿಂದಿರುವ ಸೀಕ್ರೆಟ್ ಏನು ಅಂತಾ ಕೇಳಿದ್ರೆ, ‘ನನ್ನ ಸಲಹೆ ಯಾರ ಸಲಹೆಯನ್ನೂ ಕೇಳಬೇಡಿ ಅನ್ನೋದು, ಅದು ಒಳ್ಳೆಯದಾಗ್ಲೀ ಕೆಟ್ಟದ್ದೇ ಆಗ್ಲೀ ನಮಗೆ ಸರಿ ಅನಿಸಿದ್ದನ್ನೇ ಮಾಡಬೇಕು, ಅದರಲ್ಲೇ ಮುಂದುವರೆಯಬೇಕು’. ದೃಡ ಮಾತುಗಳಲ್ಲಿ ಹೇಳಿದ್ರು ಶೀಲಾ. ಆಕೆ ನಮ್ಮನ್ನ ಲವಲವಿಕೆಯಿಂದಲೇ ಬೀಳ್ಕೊಡಲು ಮುಂದಾದ್ರು. ಮತ್ತೊಮ್ಮೆ ಮನೆಗೆ ಬರುವಂತೆ ಆಮಂತ್ರಿಸಿದ್ರು, 1200 ರೂಪಾಯಿ ಇಷ್ಟು ಸುಂದರ ಸಂಜೆಗೆ ಹೆಚ್ಚಲ್ಲ ಅಂತಾ ನಾ ಅಲ್ಲಿಂದ ಹೊರಟ್ಟಿದ್ದೆ.