ಪಬ್ಲಿಕ್ ಪ್ಲೇಸ್​ನಲ್ಲಿ ಹೊಡೆಯಬೇಡಿ ಧಮ್ : ಬೀಳುತ್ತೆ 1000 ರೂಪಾಯಿ ಫೈನ್

ಟೀಮ್ ವೈ.ಎಸ್.ಕನ್ನಡ 

ಪಬ್ಲಿಕ್ ಪ್ಲೇಸ್​ನಲ್ಲಿ ಹೊಡೆಯಬೇಡಿ ಧಮ್ : ಬೀಳುತ್ತೆ 1000 ರೂಪಾಯಿ ಫೈನ್

Wednesday February 15, 2017,

2 min Read

ಧೂಮಪಾನ ಮಾಡುವ ಚಟಕ್ಕೆ ಬಿದ್ದವರು ಸರ್ಕಾರದ ನಿಯಮಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಕೊಡ್ತಿಲ್ಲ. ಎಲ್ಲಿ ಬೇಕಂದ್ರಲ್ಲಿ ನಿಂತು ಧಮ್ ಹೊಡೀತಾರೆ. ಧೂಮಪಾನ ನಿಷೇಧ ಅನ್ನೋ ಬೋರ್ಡ್ ಎದುರೇ ನಿಂತು ಸಿಗರೇಟ್ ಅಥವಾ ಬೀಡಿ ಸೇದಿದ್ರೂ ಅಚ್ಚರಿ ಪಡಬೇಕಾಗಿಲ್ಲ. ‘ಸಿಗರೇಟ್ ಮತ್ತು ಇತರ ತಂಬಾಕು ಪದಾರ್ಥಗಳ ಕಾಯ್ದೆ 2003’ರ ಸೆಕ್ಷನ್ 4ರ ಪ್ರಕಾರ ಯಾವುದೇ ಒಬ್ಬ ವ್ಯಕ್ತಿ ಬಸ್, ರೈಲ್ವೆ ಸ್ಟೇಶನ್, ಸಿನೆಮಾ ಹಾಲ್, ಆಸ್ಪತ್ರೆ, ಗ್ರಂಥಾಲಯ, ಸರ್ಕಾರಿ ಆಸ್ಪತ್ರೆಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ರೆ ಆತನಿಗೆ ಪೊಲೀಸರು 200 ರೂಪಾಯಿ ದಂಡ ವಿಧಿಸಬಹುದು. ಈ ಕಠಿಣ ನಿಯಮವನ್ನು ಜಾರಿಗೆ ತಂದಿದ್ರೂ ಹಲವರು ಅದನ್ನು ಉಲ್ಲಂಘಿಸ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಬಿಂದಾಸ್ ಆಗಿ ಧೂಮಪಾನ ಮಾಡ್ತಿದ್ದಾರೆ.

image


ಕರ್ನಾಟಕ ಸರ್ಕಾರದ 200 ರೂಪಾಯಿ ದಂಡಂ ದಶಗುಣಂ ನಿಯಮ ಧೂಮಪಾನಿಗಳ ಮೇಲೆ ಪರಿಣಾಮವನ್ನೇ ಬೀರುತ್ತಿಲ್ಲ. ಹಾಗಾಗಿ ಸರ್ಕಾರ ದಂಡದ ಮೊತ್ತವನ್ನು 1000 ರೂಪಾಯಿಗೆ ಹೆಚ್ಚಳ ಮಾಡುತ್ತಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಆದೇಶ ಕೂಡ ಹೊರಬೀಳಲಿದೆ. ದಂಡದ ಮೊತ್ತ ಹೆಚ್ಚಳ ಸಂಬಂಧ ಶಿಫಾರಸ್ಸನ್ನು ಸಮಿತಿ ಸರ್ಕಾರಕ್ಕೆ ನೀಡಿದೆ. ಸರ್ಕಾರ ಶಿಫಾರಸ್ಸನ್ನು ಒಪ್ಪಿಕೊಂಡು ಜಾರಿಗೆ ತಂದಿದ್ದೇ ಆದಲ್ಲಿ ಧೂಮಪಾನಿಗಳ ವಿರುದ್ಧ ಕಠಿಣ ನಿಯಮ ಜಾರಿಗೆ ತರುತ್ತಿರುವ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕದ ಪಾಲಾಗಲಿದೆ. ಈ ನಿಯಮಕ್ಕೆ ಸರ್ಕಾರದ ಸಮ್ಮತಿ ಸಿಕ್ಕ ಬಳಿಕ ಅದರ ಪರಿಣಾಮಕಾರಿ ಜಾರಿ ಬಗ್ಗೆ ಚರ್ಚೆ ನಡೆಯಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಈ ವಿಷಯ ತಿಳಿಸಿದ್ದಾರೆ. ‘ಗ್ರಾಮೀಣ ಪ್ರದೇಶ ಮತ್ತು ಇತರ ಜಿಲ್ಲಾ ಕೇಂದ್ರಗಳಲ್ಲಿ ಧೂಮಪಾನ ನಿಯಮ ಉಲ್ಲಂಘನೆ ಪ್ರಕರಣಗಳು ವರದಿಯಾಗುತ್ತಲೇ ಇವೆ. ದೊಡ್ಡ ದೊಡ್ಡ ಸೂಚನಾ ಫಲಕಗಳನ್ನು ಹಾಕಿದ್ರೂ ಜನರು ಕ್ಯಾರೇ ಅಂತಿಲ್ಲ. ಹಾಗಾಗಿ ದಂಡವನ್ನು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ’ ಅಂತಾ ಹೇಳಿದ್ದಾರೆ.

ಕಾಲೇಜು ಮತ್ತು ಶಾಲೆಗಳ ಬಳಿ ಅಪ್ರಾಪ್ತರಿಗೆ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವವರಿಗೂ ಅತ್ಯಧಿಕ ದಂಡ ವಿಧಿಸಲು ನಿರ್ಧರಿಸಲಾಗಿದೆ. ದಂಡದ ಮೊತ್ತವನ್ನು 200 ರೂಪಾಯಿಯಿಂದ 1000 ರೂಪಾಯಿಗೆ ಏರಿಕೆ ಮಾಡಲಾಗ್ತಿದೆ. ತಂಬಾಕು ರಹಿತ ವಲಯವನ್ನು ಕೂಡ 92 ಮೀಟರ್ ನಿಂದ 100 ಮೀಟರ್ ಗೆ ಹೆಚ್ಚಳ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದರಿಂದ ಆಗುತ್ತಿರುವ ಹಾನಿ ಬಗ್ಗೆ ಸಿಎಂ ಕೂಡ ಅರಿತಿದ್ದು ಸರ್ಕಾರ ಶೀಘ್ರದಲ್ಲೇ ಪ್ರಸ್ತಾವನೆಗಳಿಗೆ ಅಸ್ತು ಎನ್ನುವ ನಿರೀಕ್ಷೆ ಇದೆ.

ದಂಡ ಹೆಚ್ಚಳದಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಕೂಡ ದೊರೆಯಲಿದೆ. ಅಔಖಿPಂ ಮೂಲಕ ಈ ಹಿಂದೆ ಕೂಡ ಸರ್ಕಾರ ಉತ್ತಮ ಆದಾಯ ಗಳಿಸಿತ್ತು. ಈ ಹಣವನ್ನು ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಬಳಸಿಕೊಳ್ಳಲಾಗುತ್ತದೆ. ದಂಡ ಹೆಚ್ಚಳ ಮಾಡುವುದರಿಂದ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವವರ ಸಂಖ್ಯೆ ಕಡಿಮೆಯಾಗುತ್ತದೆ, ಇದರಿಂದ ಧೂಮಪಾನದಿಂದಾಗುವ ಅಪಾಯ ಕೂಡ ಕಡಿಮೆಯಾಗುವ ನಿರೀಕ್ಷೆ ಇದೆ. 

ಇದನ್ನೂ ಓದಿ.. 

ಶಿಕ್ಷಣ ಜಗತ್ತಿಗೆ ಡಾ.ರಾಜ್ ಫ್ಯಾಮಿಲಿ- ಯುಪಿಎಸ್​ಸಿ ಆಕಾಂಕ್ಷಿಗಳಿಗೆ ಹೊಸ ಕನಸು

ಗುಜರಾತ್​​ನಲ್ಲಿದೆ ದೇಶದ ಮೊತ್ತಮೊದಲ ಕ್ಯಾಶ್​​ಲೆಸ್ ಟೌನ್​ಶಿಪ್