ನಿರಾಶ್ರಿತರಿಗೆ ಸಹಾಯಹಸ್ತ ನೀಡಿದ ಸ್ಟಾರ್ಸ್​

ಟೀಮ್​ ವೈ.ಎಸ್​​.ಕನ್ನಡ

0

ನಟ ವಿಕ್ರಮ್ ನಿರ್ಮಾಣದಲ್ಲಿ ನಿರಾಶ್ರಿತರಿಗಾಗಿ ವಿಡಿಯೋ ಸಾಂಗ್...
ನಿರಾಶ್ರಿತರಿಗಾಗಿ ತಾರೆಗಳ ಸಮಾಗಮ...

ಕಳೆದ ಒಂದು ತಿಂಗಳ ಹಿಂದೆ ಪ್ರಕೃತಿ ಮುನಿಸಿನಿಂದ ಚೆನ್ನೈ ಮಹಾನಗರ ಚದುರಿ ಹೋಗಿತ್ತು..ಅದೆಷ್ಟೋಜನರು ಪ್ರಾಣ ಕಳೆದುಕೊಂಡ್ರೆ, ಅದೆಷ್ಟೋ ಜನ ತಮ್ಮ ಸಂಸಾರವನ್ನೇ ಗಂಗಾ ಮಾತೆಗೆ ಅರ್ಪಿಸಿಬಿಟ್ಟರು. ಪ್ರಕೃತಿಯ ಮುನಿಸು ಒಂದೆರೆಡು ದಿನವಲ್ಲ ಒಂದು ತಿಂಗಳು ಹಾಗೇ ಮುಂದುವರಿದಿತ್ತು. ಇದನ್ನು ಕಂಡ ಅಕ್ಕ ಪಕ್ಕದ ರಾಜ್ಯದವರು ಕೂಡ ಇಲ್ಲಿನ ನಿರಾಶ್ರಿತರಿಗೆ ಸಹಾಯ ಹಸ್ತ ಚಾಚಿ ತಮ್ಮಕೈಲಾದ ನೆರವು ನೀಡಿದ್ದಾರೆ. ಇನ್ನು ಚೆನೈ ಜನತೆಯ ಪಾಡನ್ನ ನೋಡಿದ ಅಲ್ಲಿನ ನಟ ,ನಟಿಯರು ಕಲಾವಿದರು ಸೇರಿದಂತೆ ಇಡೀ ದಕ್ಷಿಣ ಭಾರತದ ಚಿತ್ರರಂಗದ ಅನೇಕ ಗಣ್ಯರು ಚೆನೈ ಮಹಾನಗರಕ್ಕೆ ಬೇಟಿಕೊಟ್ಟು ಅವರಲ್ಲಿ ಒಂದಾಗಿ ಸಹಾಯ ಮಾಡಿದ್ರು. ತಾರೆಗಳ ನೆರವು ಅಷ್ಟಕ್ಕೆ ಸೀಮಿತವಾಗಿಲ್ಲ. ಟಾಲಿವುಡ್ ಸ್ಟಾರ್​ಗಳೆಲ್ಲ ಒಟ್ಟಾಗಿ ವಿಕ್ರಮ್​ ನೇತೃತ್ವದಲ್ಲಿ ಸ್ಪಿರಿಟ್​ ಆಫ್ ಚೆನ್ನೈ ಅನ್ನೋ ಹೆಸರಿನಲ್ಲಿ ಹೊಸ ವಿಡಿಯೋ ಸಾಂಗ್ ಅನ್ನು ನಿರ್ಮಾಣ ಮಾಡಲು ಸಜ್ಜಾಗಿದ್ದಾರೆ.

ಸ್ಪಿರಿಟ್ ಆಫ್ ಚೆನ್ನೈ ..

ಚೆನ್ನೈನಲ್ಲಿ ಮಹಾಮಳೆಯಾದ ಸಂದರ್ಭದಲ್ಲಿ ಅದೆಷ್ಟೋ ಜನರು ಪ್ರಾಣ ಕಳೆದುಕೊಂಡ್ರು. ಅಷ್ಟೇ ಅಲ್ಲ ಮಳೆಯ ಅಬ್ಬರಕ್ಕೆ ನಲುಗಿದವರಿಗೆ ಸಹಾಯ ಮಾಡಲು ಸ್ವಯಂ ಪ್ರೇರಿತವಾಗಿ ಬಂದ ಅನೇಕರು ಜೀವದಾನ ಮಾಡಿದ್ರು. ಇವರ ಮಧ್ಯೆ ಆರ್ಮಿ ಅಧಿಕಾರಿಗಳ ಕಾರ್ಯಕ್ಕಂತೂ ಸಲಾಂ ಹೇಳಲೇಬೇಕು. ಇಂಥಹ ಸಾಧಕರಿಗೆ ಹಾಗೂ ಮಹಾಮಳೆಯಲ್ಲಿ ಅಸುನೀಗಿದ ಜೀವಗಳಿಗೆ ಸಲಾಂ ಹೇಳೋ ನಿಟ್ಟಿನಲ್ಲಿ ಈ ವಿಡಿಯೋ ಸಾಂಗ್​ ತಯಾರಾಗುತ್ತಿದೆ. ಈಗಾಗ್ಲೇ ಸ್ಪಿರಿಟ್ ಆಫ್ ಚೆನ್ನೈನ ಆಡಿಯೋ ಸಾಂಗ್​ ಈಗಾಗ್ಲೇ ರಿಲೀಸ್​ ಆಗಿದೆ. ಈ ಹಾಡಿಗೆ ದಕ್ಷಿಣದ ಫೇಮಸ್ ಸಿಂಗರ್​ಗಳು ಧ್ವನಿಯಾಗಿದ್ದಾರೆ. ಒಟ್ಟು 23 ಗಾಯಕ ಗಾಯಕಿಯರು ಸ್ಪಿರಿಟ್ ಆಫ್ ಚೆನ್ನೈನಲ್ಲಿ ಹರಿಹರನ್, ಬಾಲಸುಬ್ರಮಣ್ಯಂ, ಶಂಕರ್ ಮಹಾದೇವನ್ ಸೇರಿದಂತೆ ಹಲವು ಜನಪ್ರಿಯ ಗಾಯಕರ ಮಧುರ ಕಂಠವಿದೆ.

ದಕ್ಷಿಣ ಭಾರತದ ಬಿಗ್ ಸ್ಟಾರ್ಸ್ ಸಮಾಗಮ

ಇನ್ನು ಆಡಿಯೋ ಸಾಂಗ್ ನಲ್ಲಿ ಚೆನ್ನೈ ಪ್ರವಾಹದ ಸಂದರ್ಭದ ವಿಡಿಯೋ ಹಾಗೂ ಫೋಟೋಗಳನ್ನ ಉಪಯೋಗಿಸಿಕೊಳ್ಳಲಾಗಿದೆ. ಈ ಹಾಡಿಗೆ ಈಗಾಗ್ಲೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದ್ದು ವಿಡಿಯೋ ಸಾಂಗ್ ನ ಚಿತ್ರೀಕರಣ ಕೂಡ ಶುರುವಾಗಿದೆ. ಟಾಲಿವುಡ್ , ಕಾಲಿವುಡ್, ಸ್ಯಾಂಡಲ್​ವುಡ್​ ಹಾಗೂ ಮಾಲಿವುಡ್ ನ ಎಲ್ಲಾ ಖ್ಯಾತ ನಟರು ಇದರಲ್ಲಿ ಕಾಣಿಸಿಕೊಂಡಿದ್ದಾರೆ. ನಟ ವಿಕ್ರಮ್ ಈ ಹಾಡನ್ನ ನಿರ್ಮಾಣ ಮಾಡೋದ್ರ ಜೊತೆಯಲ್ಲಿ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಈಗಾಗ್ಲೆ ಚೆನ್ನೈನ ಸುತ್ತ ಮುತ್ತ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು ನಟ ಸೂರ್ಯ, ಅಭಿಷೇಕ್ ಬಚ್ಚನ್ , ಪ್ರಭಾಸ್ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಇನ್ನು ಸ್ಯಾಂಡಲ್​ವುಡ್​ನಿಂದ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್​, ರಾಕಿಂಗ್ ಸ್ಟಾರ್​ ಯಶ್​ ಕೂಡ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಖುಷಿಯಲ್ಲಷ್ಟೇ ಅಲ್ಲ, ದುಃಖದಲ್ಲೂ ಭಾಗಿ...

ದಕ್ಷಿಣ ಭಾರತದ ರಾಜ್ಯಗಳಲ್ಲಿ ಚೆನೈ ಜನರು ಸಿನಿಮಾವನ್ನ ಪ್ರೀತಿಸುವಷ್ಟು ಮತ್ಯಾರೂ ಪ್ರೀತಿಸೋಲ್ಲ. ಸಿನಿಮಾ ಕ್ರೇಝ್​ ಅವರಿಗೆ ಹೆಚ್ಚಾಗಿದೆ. ಇನ್ನುಅಲ್ಲಿಯ ಸ್ಟಾರ್ಸ್ ಕೂಡ ತಮ್ಮ ಅಭಿಮಾನಿಗಳಿಗೆ ಬೇಕಾದಂತಹ ಸಿನಿಮಾಗಳನ್ನ ಮತ್ತು ಅವರಿಗೆ ಇಷ್ಟವಾಗುವಂತ ಪಾತ್ರಗಳನ್ನ ಮಾಡುತ್ತಾ ಬಂದಿದ್ದಾರೆ. ಖುಷಿಯಲ್ಲಿದ್ದಾಗ ತಮ್ಮ ಸಿನಿಮಾಗಳನ್ನ ನೋಡಿ ಕಲಾವಿದರನ್ನ ಬೆಳೆಸಿದ ಅಭಿಮಾನಿಗಳಿಗೆ ಪುಟ್ಟ ಹಾಡಿನ ಮೂಲಕ ವಂದನೆ ಸಲ್ಲಿಸಲು ಸ್ಟಾರ್​ ನಟರು ಮುಂದಾಗಿದ್ದಾರೆ. ಕಷ್ಟದಲ್ಲಿ ಮಾತ್ರವಲ್ಲದೆ ನಿಮ್ಮ ದುಃಖದಲ್ಲೂ ನಾವು ಭಾಗಿಯಾಗುತ್ತೇವೆ ಅನ್ನೋ ಸಂದೇಶವನ್ನ ಸಾರುತ್ತಿದ್ದಾರೆ. ಸಿನಿಮಾಗಳನ್ನು ವ್ಯಾಪಾರದಂತೆ ನೋಡುವ ಈ ಕಾಲದಲ್ಲಿ ತಮ್ಮ ಅಭಿಮಾನಿಗಳಿಗಾಗಿ ಏನು ಬೇಕಾದರೂ ಮಾಡಲು ನಾವು ಸಿದ್ದ ಎನ್ನುತ್ತಿರುವ ಈ ನಟರ ಪ್ರೀತಿಯನ್ನ ಮೆಚ್ಚಲೇಬೇಕು.