ನಂಬಿದ್ರೆ ನಂಬಿ...ಬಿಟ್ರೆ ಬಿಡಿ.. ಈ ಬೈಕ್​​ ಮೈಲೇಜ್​​​ 350 ಕಿಲೋಮೀಟರ್​​​​​​..!

ಉಷಾ ಹರೀಶ್​​​

ನಂಬಿದ್ರೆ ನಂಬಿ...ಬಿಟ್ರೆ ಬಿಡಿ.. ಈ ಬೈಕ್​​ ಮೈಲೇಜ್​​​ 350 ಕಿಲೋಮೀಟರ್​​​​​​..!

Sunday November 29, 2015,

2 min Read

ಭಾರತದ ರಸ್ತೆಗಳಲ್ಲಿ ದ್ವಿಚಕ್ರವಾಹಗಳು ಅಬ್ಬಬ್ಬಾ ಅಂದ್ರೆ 1 ಲೀಟರ್ ಪೆಟ್ರೋಲ್​​ಗೆ 80 ಕಿ.ಮೀ ಮೈಲೇಜ್ ಕೊಡುತ್ತವೆ. 100 ಕಿಲೋಮೀಟರ್​​ ಏನಾದರೂ ಕೊಡುವಂತಹ ಬೈಕ್​​ಗಳಿದ್ದರೆ ಅದು ನಮ್ಮ ಅದೃಷ್ಟ ಎನ್ನಬಹುದು. ಆದರೆ ಕರ್ನಾಟಕದ ಬಾಗಲಕೋಟೆ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಪ್ರತಿ ಲೀಟರ್ ಪೆಟ್ರೋಲ್​​ಗೆ ಬರೋಬ್ಬರಿ 360 ಕಿಲೋಮೀಟರ್ ಮೈಲೇಜ್ ಕೊಡುವ ಬೈಕ್ ತಯಾರಿಸಿದ್ದಾನೆ.

ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎರಡನೇ ವರ್ಷದ ಮೆಕಾನಿಕಲ್ ಓದುತ್ತಿರುವ ಸೂರಜ್ ರಾಯ್ಕರ್ ಈ ಬೈಕಿನ ತಯಾರಕ. ಮೊದಲಿನಿಂದಲೂ ಬೈಕ್​​ಗಳೆಂದರೆ ಸಾಕಷ್ಟು ಕ್ರೇಜ್ ಇದ್ದ ಸೂರಜ್ ರಾಯ್ಕರ್ ಅವರಿಗೆ ಆ ಕ್ರೇಜ್ ಇಂತಹ ಒಂದು ಸಾಧನೆ ಮಾಡುವುದಕ್ಕೆ ದಾರಿ ಮಾಡಿಕೊಟ್ಟಂತಾಯಿತು.

ತನ್ನ ಗುರು ಡಾ. ಕುಪ್ಪಸದ ಮಾರ್ಗದರ್ಶನದಲ್ಲಿ ಹೈಬ್ರೀಡ್ ಮಿಷನ್ ಒಂದನ್ನು ಪಡೆದ ಸೂರಜ್​​​ ಅತ್ಯಂತ ಕಡಿಮೆ ಇಂಧನದಲ್ಲಿ ಅತಿಹೆಚ್ಚು ಕಿಲೋಮೀಟರ್ ಕ್ರಮಿಸುವ ಬೈಕ್​ನ್ನು ತಯಾರಿಸಿದ್ದಾರೆ.

ಈ ಬೈಕ್ ಬಗ್ಗೆ ಮಾಹಿತಿ ಪಡೆದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಂಸೆ ವ್ಯಕ್ತಪಡಿಸಿರುವುದಲ್ಲದೇ ಸಹಾಯದ ಭರವಸೆಯನ್ನು ನೀಡಿದ್ದಾರೆ.

image


ಒಂದು ಲೀಟರ್​​ನಿಂದ ಅಷ್ಟೊಂದು ದೂರ ಕ್ರಮಿಸಲು ಸಾಧ್ಯನಾ ಎಂದು ನೋಡಿದರೆ ಸೂರಜ್ ಅವರ ಇಂಜಿನ್​​​​ ತಯಾರಿಕೆಯಲ್ಲೇ ಅದರ ಕಾರ್ಯಕ್ಷಮತೆಯನ್ನು ಸಾಧಿಸಿದೆ. ಐಸಿ ಎಂಜಿನ್, ಒಟ್ಟು 8 ಬ್ಯಾಟರಿ ಮತ್ತು ಚಾರ್ಜರ್​​ಗಳನ್ನು ಬಳಸಿಕೊಂಡು ಈ ಬೈಕ್ ತಯಾರು ಮಾಡಿದ್ದಾರೆ ಸೂರಜ್ ರಾಯ್ಕರ್. ಇದಕ್ಕೆ ಎರಡು ಚಾರ್ಜಿಂಗ್ ಬ್ಯಾಟರಿಗಳನ್ನು ಅಳವಡಿಸಲಾಗಿದ್ದು ಈ ಬ್ಯಾಟರಿಗಳು ಚಾರ್ಜ್ ಆಗಲು ಮಾತ್ರ ಪೆಟ್ರೋಲ್ ಬಳಕೆಯಾಗುತ್ತದೆ. ಚಾರ್ಜ್ ಖಾಲಿಯಾದ ನಂತರ ರಿಚಾರ್ಜ್ ಆಗಲು ಮತ್ತು ಗಾಡಿ ಚಲಿಸಲು ಪೆಟ್ರೋಲ್ ಬಳಕೆಯಾಗುತ್ತದೆ. ಆದ್ದರಿಂದ 1 ಲೀಟರ್ ಪೆಟ್ರೋಲ್ ಹಾಕಿದರೆ ಸಾಕು 360 ಕಿ.ಮೀ.ವರೆಗೆ ಓಡುತ್ತೆ.

ಬ್ಯಾಟರಿ ಚಾರ್ಜ್ ಆದ ಕೂಡಲೇ ನಂತರ ಪೆಟ್ರೋಲ್ ಸರಬರಾಜು ನಿಂತು ಬ್ಯಾಟರಿ ಮೂಲಕವೇ ಬೈಕ್ ಚಲಿಸುತ್ತೆ. ಹೀಗಾಗಿ 1 ಲೀಟರ್ ಪೆಟ್ರೋಲ್ ಬಳಕೆಯಾಗೋ ಹೊತ್ತಿಗೆ 360 ಕಿಲೋಮೀಟರ್ ವರೆಗೆ ಕ್ರಮಿಸಬಹುದು ಈ ಬೈಕ್. ಇಂತಹ ಅಪರೂಪದ ಬೈಕ್ ತಯಾರಿಸಿದ್ದು ತನಗೆ ಹೆಮ್ಮೆ ತಂದಿದೆ ಅಂತಾನೆ ಸಾಧಕ ಸೂರಜ್.

ಕೇವಲ 50 ಸಾವಿರಕ್ಕೆ ಬೈಕ್

ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಬೈಕ್​​ಗಳು 80 ರಿಂದ 90 ಸಾವಿರದವರೆಗೆ ಬೆಲೆ ಇರುತ್ತದೆ. ಆದರೆ ಈ ಬೈಕ್ ನಿರ್ಮಾಣಕ್ಕೆ ಹಳೆಯ ಯಂತ್ರಗಳನ್ನು ಬಳಸಿದ್ದರಿಂದ ಕೇವಲ 50 ಸಾವಿರ ರೂಪಾಯಿ ಖರ್ಚಾಗಿದೆ. ಕಡಿಮೆ ಪೆಟ್ರೋಲ್ ಬಳಕೆಯಿಂದ ಇಂಧನ ಉಳಿತಾಯದ ಜೊತೆಗೆ ವಾಯುಮಾಲಿನ್ಯವನ್ನು ಸಹ ತಡೆಯಬಹುದು. ಬ್ಯಾಟರಿ ಮೂಲಕ ಬೈಕ್ ಸಂಚರಿಸುವುದರಿಂದ ಶಬ್ಧ ಮಾಲಿನ್ಯವೂ ಇರುವುದಿಲ್ಲ.

ಬೆಂಗಳೂರಿನಂತಹ ಮಹಾನಗರಗಳಲ್ಲಿ ಸಂಚರಿಸಲು ಅತ್ಯಂತ ಯೋಗ್ಯವಾಗಿರೋ ಈ ಬೈಕ್ ಅವಿಷ್ಕಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಸೂರಜ್ ಪತ್ರ ಬರೆದಿದ್ದಾನೆ. ಇದಕ್ಕೆ ಪ್ರಧಾನಿ ಕಚೇರಿಯಿಂದ ಮರುತ್ತರದ ಪತ್ರ ಬಂದಿದೆ. ಆದರಲ್ಲಿ ಈತ ನೂತನ ಬೈಕ್ ನಿರ್ಮಾಣದ ಘಟಕ ಸ್ಥಾಪನೆಗೆ ಮುಂದಾಗುವುದಾದರೆ ಕೇಂದ್ರ ಸರ್ಕಾರದಿಂದ ವತಿಯಿಂದ ಸಹಕಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಒಟ್ಟಾರೆ ಅತೀ ಕಡಿಮೆ ಇಂಧನ ಬಳಕೆ, ಶಬ್ಧ ಮಾಲಿನ್ಯ, ವಾಯು ಮಾಲಿನ್ಯ ಇದಾವುದು ಇಲ್ಲದ ಬೈಕ್ನ್ನು ಅವಿಷ್ಕಾರ ಮಾಡಿದ ಸೂರಜ್ ಸಾಧನೆ ಕನ್ನಡಿಗರಿಗೆ ಒಂದು ಹೆಮ್ಮೆ ಎಂದೇ ಹೇಳಬಹುದು. ಸೂರಜ್ ಅವರ ಸಾಧನೆಗೆ ಸೂಕ್ತ ಪ್ರೋತ್ಸಾಹ ದೊರೆತರೆ ಭಾರತದ ರಸ್ತೆಗಳಿಗೆ ಉತ್ತಮ ಬೈಕ್ ಸಿಗಬಹುದು.