ಭವಿಷ್ಯ ಬದಲಿಸ ಹೊರಟ ದೀಪಾ ಪೊಟ್ಟಂಗಡಿ: ಸಾಧನೆಗೆ ಮೆಟ್ಟಿಲಾದ ಜಾತಕ!

ಟೀಮ್​​ ವೈ.ಎಸ್​​.

ಭವಿಷ್ಯ ಬದಲಿಸ ಹೊರಟ ದೀಪಾ ಪೊಟ್ಟಂಗಡಿ: ಸಾಧನೆಗೆ ಮೆಟ್ಟಿಲಾದ ಜಾತಕ!

Sunday October 25, 2015,

3 min Read

ಜಾತಕ ಅನ್ನೋದು ನಂಬಿಕೆ ಮೇಲೆ ನಿಂತಿದೆ. ಕೆಲವರಿಗೆ ಜಾತಕದಲ್ಲಿ ನಂಬಿಕೆಯಿದ್ರೆ ಇನ್ನು ಕೆಲವರಿಗೆ ಅದರಲ್ಲಿ ವಿಶ್ವಾಸವಿಲ್ಲ. ಆದ್ರೆ ಜಾತಕವನ್ನೇ ಸುಳ್ಳು ಮಾಡಲು ಹೊರಟಿದ್ದ ದೀಪಾ ಪೊಟ್ಟಂಗಡಿ ಅವರ ಬದುಕಲ್ಲಿ ಭವಿಷ್ಯವೇ ನಿಜವಾಗಿದೆ. ಬೆಂಗಳೂರಿನ ಎಕಾಲಿಪ್ಟಸ್ ಸಿಸ್ಟಮ್ಸ್ ಕಂಪನಿಯಲ್ಲಿ ದೀಪಾ ಇನ್‍ಸ್ಟ್ರಕ್ಷನಲ್ ಡಿಸೈನರ್ ಆಗಿ ಸೇವೆ ಸಲ್ಲಿಸ್ತಿದ್ದಾರೆ. ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದಿರುವ ದೀಪಾ ಅವರಿಗೆ ಕಂಪ್ಯೂಟರ್ ಮತ್ತು ತಂತ್ರಜ್ಞಾನ ಸುಲಭವಾಗಿ ಒಲಿದಿದೆ.

ಜಾತಕದಲ್ಲೇನಿತ್ತು..?

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದೀಪಾ ಚೆನ್ನಾಗಿ ಬರೆದಿರ್ಲಿಲ್ಲ. ಇದ್ರಿಂದ ಆತಂಕಗೊಂಡ ಪೋಷಕರು ಜ್ಯೋತಿಷಿಯ ಬಳಿ ಹೋದ್ರು. ದೀಪಾರ ಜಾತಕ ನೋಡಿದ ಜ್ಯೋತಿಷಿ ಅವರಿಗೆ ಕಂಪ್ಯೂಟರ್ ಸೈನ್ಸ್ ಮಾಡಿದ್ರೆ ಒಳ್ಳೆಯದು ಎಂದಿದ್ರು. ಆದ್ರೆ ಜ್ಯೋತಿಷಿಯ ಮಾತನ್ನು ಸುಳ್ಳುಮಾಡಬೇಕೆಂಬ ಹಠಕ್ಕೆ ಬಿದ್ದ ದೀಪಾ, ಇಂಗ್ಲಿಷ್ ಸಾಹಿತ್ಯವನ್ನೇ ಆಯ್ದುಕೊಂಡ್ರು. ಬೋಲಾಪುರದ ಶಾಂತಿನಿಕೇತನ ವಿವಿಯಲ್ಲಿ ಪದವಿ ಪಡೆದ ದೀಪಾ ಅವರಿಗೆ ಕೆಲಸ ಮಾತ್ರ ಸಿಗಲಿಲ್ಲ. ನಿರುದ್ಯೋಗಿಯಾಗಿದ್ದ ದೀಪಾ, ಎನ್‍ಐಐಟಿ ಸೇರಲು ನಿರ್ಧರಿಸಿದ್ರು.

ತಂತ್ರಜ್ಞಾನದ ಜೊತೆ `ಮುಕ್ತ ಸಂಬಂಧ'

ಎನ್‍ಐಐಟಿ ಸೇರಿದ ದೀಪಾ ಮೂರು ವರ್ಷಗಳ ಕಾಲ ಜೆಎನ್‍ಐಐಟಿ ಕೋರ್ಸ್ ಮಾಡಿದ್ರು. 2000ನೇ ಇಸ್ವಿಯಲ್ಲಿ ಪ್ರೋಗ್ರಾಮಿಂಗ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ರು. ಸಹಜವಾಗಿಯೇ ಕಂಪ್ಯೂಟರ್ ಬಗ್ಗೆ ದೀಪಾಗೆ ಸೆಳೆತ ಶುರುವಾಗಿತ್ತು. ಕ್ಯಾಲಿಕಟ್‍ನ ಎನ್‍ಐಐಟಿಯಲ್ಲೇ ಕೆಲಕಾಲ ಕರ್ತವ್ಯ ನಿರ್ವಹಿಸಿದ ದೀಪಾ, ನಂತರ ಬೆಂಗಳೂರಿಗೆ ಶಿಫ್ಟ್ ಆದ್ರು. ಒರಾಕಲ್‍ನಲ್ಲಿ ಇನ್‍ಸ್ಟ್ರಕ್ಷನಲ್ ಡಿಸೈನರ್ ಆಗಿ ಸೇರಿದ ದೀಪಾ ಪೊಟ್ಟಂಗಡಿ ಅವರ ಬದುಕಿಗೆ ಬಿಗ್ ಬ್ರೇಕ್ ಸಿಕ್ಕಿತ್ತು. ಅಲ್ಲಿಂದ ಐಟಿ ಕ್ಷೇತ್ರದಲ್ಲಿನ ತಮ್ಮ ಜರ್ನಿ ಮುಂದುವರಿಸಿದ ದೀಪಾ ಸದ್ಯ ಎಕಾಲಿಪ್ಟಸ್ ಸಿಸ್ಟಮ್ಸ್‍ನಲ್ಲಿ ಕೆಲಸ ಮಾಡ್ತಿದ್ದಾರೆ. ಪ್ರಾಡಕ್ಟ್ ಡೆವಲಪ್‍ಮೆಂಟ್, ಪ್ರೋಗ್ರಾಮ್ ಮ್ಯಾನೇಜ್‍ಮೆಂಟ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸ್ತಿದ್ದಾರೆ. ಕಳೆದ ಒಂದು ದಶಕದಲ್ಲಿ ಅಪಾರ ಅನುಭವ ಗಳಿಸಿರುವ ದೀಪಾ ಹೊಸ ತಂತ್ರಜ್ಞಾನಕ್ಕೆ ತಮ್ಮನ್ನು ತಾವು ಅಳವಡಿಸಿಕೊಂಡಿದ್ದಾರೆ.

image


ಆತ್ಮವಿಶ್ವಾಸವೇ ಆನೆಬಲ...

ದೀಪಾ ಅವರದ್ದು ನಿರ್ಭೀತ ವ್ಯಕ್ತಿತ್ವ. ಅವರ ಯಶಸ್ಸಿನ ಮೂಲ ಕೂಡ ಇದೇ. ಜೆಮ್‍ಶೆಡ್‍ಪುರದಲ್ಲಿ ಜನಿಸಿದ ದೀಪಾ ಪೊಟ್ಟಂಗಡಿ ಅಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿದ್ರು. ನಂತರ ಕೇರಳಕ್ಕೆ ಶಿಫ್ಟ್ ಆದ್ರು. ದೀಪಾಗೆ ಅವರ ತಂದೆಯೇ ಪ್ರೇರಣೆ. ಟಿಸ್ಕೋ ಉದ್ಯೋಗಿಯಾಗಿದ್ದ ಅವರು ಪರಿಶ್ರಮಿಯಾಗಿದ್ರು. ಮಧ್ಯಮ ವರ್ಗದ ಬದುಕು ಅವರದ್ದಾಗಿದ್ರೂ ಇಬ್ಬರು ಮಕ್ಕಳಲ್ಲಿ ಉನ್ನತ ಮೌಲ್ಯಗಳನ್ನು ಬೆಳೆಸಿದ್ರು. ತಂದೆ ಹಾಕಿಕೊಟ್ಟ ಹಾದಿಯಲ್ಲೇ ಸಾಗಿದ ದೀಪಾ ಎಲ್ಲರೂ ಗುರುತಿಸುವಂಥ ಸಾಧನೆ ಮಾಡಿದ್ದಾರೆ.

1. ಪ್ರಾಮಾಣಿಕತೆ : ಪ್ರಾಮಾಣಿಕತೆ ಅನ್ನೋದು ತಮಗೆ ಒಳ್ಳೆಯದು ಹಾಗೂ ಕೆಟ್ಟದ್ದು ಎರಡನ್ನೂ ಮಾಡಿದೆ ಎನ್ನುತ್ತಾರೆ ದೀಪಾ. ಆದ್ರೆ ತಮ್ಮನ್ನು ಚೆನ್ನಾಗಿ ಬಲ್ಲವರು ನನ್ನಿಂದ ಪ್ರಾಮಾಣಿಕ ಅಭಿಪ್ರಾಯ ಪಡೆಯುತ್ತಾರೆ ಅನ್ನೋದು ದೀಪಾರ ವಿಶ್ವಾಸ.

2. ನೇರಮಾತು : ಪ್ರಾಮಾಣಿಕವಾಗಿಲು ನೇರ ಹಾಗೂ ಖಡಕ್ ಮಾತು ಅನಿವಾರ್ಯ ಅನ್ನೋದು ದೀಪಾ ಅವರ ಅಭಿಪ್ರಾಯ.

3. ಪರಿಶ್ರಮ : ವೃತ್ತಿ ಜೀವನದುದ್ದಕ್ಕೂ ತಂದೆ ಪರಿಶ್ರಮಪಟ್ಟಿದ್ದನ್ನು ದೀಪಾ ನೋಡಿದ್ದಾರೆ. ಅದು ಅವರಿಗೆ ಪ್ರೇರಣೆಯಾಗಿದೆ.

4. ಸಂಬಂಧಗಳ ನಿರ್ವಹಣೆ : ಸಂಬಂಧಗಳು ತಮ್ಮ ಪಾಲಿಗೆ ಅತ್ಯಮೂಲ್ಯ ಅನ್ನೋದು ದೀಪಾ ಅವರ ಮನದಾಳದ ಮಾತು. ನನ್ನಲ್ಲೇನಾದರೂ ತಪ್ಪಿದ್ರೆ ಅದು ನನಗೆ ಅರಿವಾಗದಿದ್ದಲ್ಲಿ ನನ್ನ ಸ್ನೇಹಿತರೇ ಅದನ್ನು ಕಂಡುಹಿಡಿಯುತ್ತಾರೆಂದು ದೀಪಾ ಹೆಮ್ಮೆಯಿಂದ ಹೇಳಿಕೊಳ್ತಾರೆ.

ದೀಪಾ ಪೊಟ್ಟಂಗಡಿ ಅವರಿಗೆ ತಮ್ಮ ತಂದೆ ಜೆಫ್ ಬೆಜೋಸ್, ಜೆಮ್‍ಶೆಡ್ ಜೀ ಟಾಟಾ ಹಾಗೂ ಶೆರಿಲ್ ಸ್ಯಾಂಡ್‍ಬರ್ಗ್ ಅವರೇ ಸ್ಪೂರ್ತಿ. ಪರೋಪಕಾರದ ಬಗ್ಗೆ ಎಲ್ಲರೂ ಮಾತನಾಡ್ತಾರೆ. ಆದ್ರೆ ಅದಕ್ಕೆ ಪ್ರತ್ಯಕ್ಷ ಸಾಕ್ಷಿ ಜೆಮ್ ಶೆಡ್ ಜೀ ಟಾಟಾ.

ತಂತ್ರಜ್ಞಾನದಲ್ಲಿ ಸೈ ಎನಿಸಿಕೊಂಡ ಮಹಿಳೆ...

ಮಹಿಳೆ ಎಂಬ ಕಾರಣಕ್ಕೆ ತಮಗೆ ಸರಿಯಾದ ಅಧಿಕಾರ ಸಿಕ್ಕಿಲ್ಲ ಎಂಬ ಭಾವನೆ ದೀಪಾ ಅವರಿಗೆ ಬರಲೇ ಇಲ್ಲ. ಯಾಕಂದ್ರೆ ಅವರ ಮೇಲೆ ಪೋಷಕರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ರು. ಆದ್ರೆ ತಂತ್ರಜ್ಞಾನ ಲೋಕವನ್ನು ಹೊಕ್ಕ ಮಹಿಳೆಗೆ ಇಷ್ಟು ಮಾತ್ರ ಸಾಲದು.

1. ತಂತ್ರಜ್ಞಾನದ ಬಗೆಗಿನ ವಿವಿಧ ತರಬೇತಿಗಳಲ್ಲಿ ಭಾಗಿಯಾಗುವುದು.

2. ಸಿಕ್ಕ ಅವಕಾಶವನ್ನೆಲ್ಲ ಕಲಿಕೆಗೆ ಬಳಸಿಕೊಳ್ಳುವುದು.

3. ಆಸಕ್ತಿಯನ್ನು ಪೋಷಿಸಿ ಯಶಸ್ಸು ಗಳಿಸಲು ಯಾವುದೇ ನೆಪ ಹೇಳದಿರುವುದು.

4. ಮಹತ್ವದ ಸಭೆ ಹಾಗೂ ಕಾನ್ಫರೆನ್ಸ್​​​ಗಳಲ್ಲಿ ಭಾಗಿಯಾಗುವುದು.

ಮದುವೆಯ ನಂತರವೂ ದೀಪಾ ಯಶಸ್ವಿ ವೃತ್ತಿ ಜೀವನವನ್ನು ನಡೆಸುತ್ತಿದ್ದಾರೆ. ಮೊದಲೆಲ್ಲ ಎಲ್ಲದರಲ್ಲೂ ಪರಿಪೂರ್ಣರಾಗಿರಬೇಕೆಂದು ದೀಪಾ ಬಯಸುತ್ತಿದ್ರು. ಆದ್ರೆ ಈಗ ಒಂದು ದಿನ ಅಡುಗೆ ಚೆನ್ನಾಗಿ ಆಗಿಲ್ಲವೆಂದಾಕ್ಷಣ ಬೇಸರವಾಗೊಲ್ಲ ಅಂತಾ ಮಾರ್ಮಿಕವಾಗಿ ನುಡಿಯುತ್ತಾರೆ.

ಸಾಹಿತ್ಯಕ್ಕೆ ಏನಾಯ್ತು..?

ತಂತ್ರಜ್ಞಾನ ಕ್ಷೇತ್ರದಲ್ಲಿದ್ರೂ ಸಾಹಿತ್ಯದ ಬಗ್ಗೆ ದೀಪಾ ಅವರಿಕೆ ಆಸಕ್ತಿ ಕಡಿಮೆಯಾಗಿಲ್ಲ. ಸಮಯ ಸಿಕ್ಕಾಗಲೆಲ್ಲ ಅವರು ಓದುತ್ತಾರೆ. ಹೊಸ ಬಗೆಯ ಅಡುಗೆ ಮಾಡುವ ಹವ್ಯಾಸವೂ ಇದೆ. ಇದನ್ನು ಬಿಟ್ರೆ ಫಿಟ್‍ನೆಸ್ ಕಡೆ ಗಮನಹರಿಸ್ತಾರೆ. ಪೇಂಟಿಂಗ್‍ನಲ್ಲೂ ಅವರಿಗೆ ಅಪಾರ ಆಸಕ್ತಿಯಿದೆ.

ಪ್ರತಿಭೆ ಇದ್ರೂ ಅಡುಗೆ ಮನೆಗೆ ಸೀಮಿತವಾಗಿರುವಂಥ ಗೃಹಿಣಿಯರಿಗಾಗಿ ಏನನ್ನಾದರೂ ಮಾಡಬೇಕೆಂಬ ಬಯಕೆ ಅವರಿಗಿದೆ. ತಮ್ಮ ಸ್ನೇಹಿತೆಯ ತಾಯಿಯ ಪೇಂಟಿಂಗ್ಸ್‍ಗೆ ವೇದಿಕೆ ಕಲ್ಪಿಸುವ ಸಲುವಾಗಿ ದೀಪಾ ವೆಬ್‍ಸೈಟ್ ಒಂದನ್ನು ಮಾಡಿಕೊಟ್ಟಿದ್ದಾರೆ. ಮಹಿಳೆಯರ ಶ್ರೇಯೋಭಿವೃದ್ಧಿಗೆ ದುಡಿಯುವ ದೀಪಾ ಅವರ ಆಸೆ ಆದಷ್ಟು ಬೇಗ ಈಡೇರಲಿ ಅನ್ನೋದೇ ಎಲ್ಲರ ಹಾರೈಕೆ.