ಹಿರಿಯ ಜೀವಗಳಿಗಾಗಿ ಸೀನಿಯರ್ ಶೆಲ್ಫ್

ಟೀಮ್​ ವೈ.ಎಸ್​. ಕನ್ನಡ

0

ಮೂರು ತಲೆಮಾರುಗಳು ಒಂದೇ ಸೂರಿನಡಿಯಲ್ಲಿ ವಾಸಿಸುವ, ಅವಿಭಕ್ತ ಕುಟುಂಬಗಳು ಅಥವಾ ಜಾಯಿಂಟ್ ಫ್ಯಾಮಿಲಿ ಪರಿಕಲ್ಪನೆ ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗುತ್ತಿದೆ. ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ದೂರದ ಪ್ರದೇಶಗಳನ್ನು ಸೇರುತ್ತಿರುವ ಕಾರಣ, ಹಿರಿಯ ಪೋಷಕರು ತಮ್ಮನ್ನು ತಾವೇ ನೋಡಿಕೊಳ್ಳಬೇಕಾದ ಪರಿಸ್ಥಿತಿಯಿದೆ. ಒಮ್ಮೊಮ್ಮೆ ನಮ್ಮ ಹಿರಿಯರು ಸ್ಮಾರ್ಟ್‍ಫೋನ್‍ಗಳಲ್ಲಿ ಕರೆ ಮಾಡಲು ಅಥವಾ ಸರಳವಾದ ಯಾವುದೇ ಕೆಲಸ ಮಾಡಲೂ ಹೆಣಗಾಡುವುದನ್ನು ನೋಡಿದ್ರೆ, ಅವರಿಗಾಗಿಯೇ ನಿರ್ಮಿಸಲಾಗಿರುವ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಇಲ್ಲವಲ್ಲಾ ಅನ್ನೋ ಕೊರಗು ನಮ್ಮನ್ನೂ ಕಾಡದೇ ಇರದು.

ಇದಕ್ಕೆ ಕಾರಣ ಏನಂದ್ರೆ, ಅವರನ್ನು ನಾವು ಗ್ರಾಹಕರಂತೆ ನೋಡೇ ಇಲ್ಲ. ಆದ್ರೆ ಈಗ ಕಾಲ ಬದಲಾಗಿದೆ. ಹಿರಿಯ ನಾಗರಿಕರು ಈಗ ಆಸ್ತಿ ಸಂಪಾದನೆ ಮಾಡಬೇಕು, ತಮ್ಮ ಮಕ್ಕಳಿಗೆ ಅದನ್ನು ನೀಡಬೇಕು ಅನ್ನೋ ನಂಬಿಕೆಯಲ್ಲಿಲ್ಲ. ಹಾಗೇ ಮಕ್ಕಳೂ ಕೂಡ ಪೋಷಕರ ಆಸ್ತಿಯನ್ನೇ ನಂಬಿ ಕುಳಿತಿಲ್ಲ. ಇದರಿಂದಾಗಿ ಹಿರಿಯರು ತಾವು ಸಂಪಾದಿಸಿದ ಹಣವನ್ನು ತಮಗೆ ಹೇಗೆ ಬೇಕೋ ಹಾಗೆ ಖರ್ಚು ಮಾಡಬಹುದು. ಹೀಗಾಗಿಯೇ ತಮ್ಮನ್ನು ಗುರಿಯನ್ನಾಗಿಸಿ ಯಾವುದಾರೂ ಉತ್ಪನ್ನ ಮಾರುಕಟ್ಟೆಗೆ ಹೊಸದಾಗಿ ಬಂದ್ರೆ, ಅದನ್ನು ಖರೀದಿಸಲು ಇಂತಹ ಹಿರಿಯ ಜನ ಹಿಂದೆ ಬೀಳೋದಿಲ್ಲ. ಆದ್ರೆ ಈ ವಲಯದ ಗ್ರಾಹಕರ ಬಗ್ಗೆ ಮಾರುಕಟ್ಟೆಗಳು, ಕಂಪನಿಗಳು ಹೆಚ್ಚಾಗಿ ಗಮನ ಹರಿಸಿಲ್ಲವಷ್ಟೇ.

‘ನಾನು ಒಮ್ಮೆ ನನ್ನ ತಾಯಿಗೆ ಬ್ಲಡ್ ಪ್ರೆಷರ್ ಯಂತ್ರ ಖರೀದಿಸಲು ಬರೊಬ್ಬರಿ ನಾಲ್ಕು ತಾಸುಗಳೇ ಬೇಕಾದ್ವು. ಈ ಸ್ವಂತ ಅನುಭವವೇ ನಾನು ಸೀನಿಯರ್ ಶೆಲ್ಫ್ ಪ್ರಾರಂಭಿಸಲು ಕಾರಣ’ ಹೀಗೆ ತಾವು ಸೀನಿಯರ್ ಶೆಲ್ಫ್ ಪ್ರಾರಂಭಿಸಿದ ಬಗ್ಗೆ ಹೇಳುತ್ತಾ ಸಾಗುತ್ತಾರೆ ರಾಹುಲ್ ಉಪಾಧ್ಯಾಯ್.

10 ಕೋಟಿ ಹಿರಿಯ ನಾಗರಿಕರಿರುವ ಭಾರತ ವಿಶ್ವದ ಎರಡನೇ ಅತಿ ಹೆಚ್ಚು ಹಿರಿಯ ನಾಗರಿಕರ ಜನಸಂಖ್ಯೆ ಇರುವ ದೇಶ. ರಾಹುಲ್ ಪ್ರಕಾರ ಈ ಸಂಖ್ಯೆ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. 2000ರ ಪ್ರಾರಂಭದಲ್ಲಿ ಇಂಟರ್‍ನೆಟ್ ಯುಗ ಆರಂಭವಾದಾಗ ನಿವೃತ್ತಿ ಹೊಂದಿದ ಬಹುತೇಕರು ತಮ್ಮ 40ರ ಆಸುಪಾಸಿನ ವಯಸ್ಸಿನವರಾಗಿದ್ದರು. ಈ ಪೀಳಿಗೆಗೆ ತಂತ್ರಜ್ಞಾನದ ಬಗ್ಗೆ ಹೆಚ್ಚು ಒಲವಿತ್ತು, ಇವರು ಆರ್ಥಿಕವಾಗಿ ಸದೃಢರಾಗಿದ್ದರು ಮತ್ತು ಗ್ರಾಹಕರಾಗಿ ಹೊಸದಾಗಿ ಮಾರುಕಟ್ಟೆಗೆ ಬರುವ ವಸ್ತುಗಳನ್ನು ಖರೀದಿಸಿ, ಪರೀಕ್ಷಿಸುವ ಮನೋಭಾವ ಉಳ್ಳವರಾಗಿದ್ದರು.

35 ಸಾವಿರ ಕೋಟಿ ಮೌಲ್ಯದ ಮಾರುಕಟ್ಟೆಗೆ ಲಗ್ಗೆ

ತಮಗಾದ ಅನುಭವದಿಂದ ತಕ್ಷಣ ಎಚ್ಚೆತ್ತುಕೊಂಡ ರಾಹುಲ್ ತಮ್ಮಂತೆಯೇ ಪ್ರತಿದಿನ ಸಮಸ್ಯೆ ಎದುರಿಸುತ್ತಿರುವ ಮಕ್ಕಳು ಹಾಗೂ ಹಿರಿಯ ಪೋಷಕರಿಗೆ ಸಹಾಯವಾಗುವಂತೆ ಏನಾದ್ರೂ ಮಾಡಲೇಬೇಕು ಅಂತ ದೃಢನಿರ್ಧಾರ ಮಾಡಿದ್ರು. ಹೀಗಾಗಿಯೇ ಕಾರ್ಯಪ್ರವೃತ್ತರಾದ ರಾಹುಲ್ ಈ ನಿಟ್ಟಿನಲ್ಲಿ ಮಾಹಿತಿ ಕಲೆ ಹಾಕತೊಡಗಿದ್ರು. ಕೆಲವೇ ದಿನಗಳಲ್ಲಿ ಸೀನಿಯರ್ ಶೆಲ್ಫ್‍ನೊಂದಿಗೆ ಮಾರುಕಟ್ಟೆಗೆ ಇಳಿದೇಬಿಟ್ಟರು. ಸೀನಿಯರ್ ಶೆಲ್ಫ್ ಒಂದು ಆನ್‍ಲೈನ್ ಮಾರುಕಟ್ಟೆ ತಾಣ. ಹಿರಿಯ ನಾಗರಿಕರೇ ಇದರ ಗ್ರಾಹಕರು. ಅವರ ಜೀವನವನ್ನು ಸರಳೀಕರಿಸುವ ಹಾಗೂ ಅದ್ಧೂರಿ ಜೀವನ ಶೈಲಿಯನ್ನು ಕೈಗೆಟುಕುವ ಬೆಲೆಯಲ್ಲಿ ನೀಡಲಾಗುತ್ತೆ. 35 ಸಾವಿರ ಕೋಟಿ ರೂಪಾಯಿ ಮೌಲ್ಯದ ಈ ಮಾರುಕಟ್ಟೆ ಎಷ್ಟು ವೇಗವಾಗಿ ಬೆಳೀತಿದೆ ಅಂದ್ರೆ ಕೆಲವೇ ವರ್ಷಗಳಲ್ಲಿ 96 ಸಾವಿರ ಕೋಟಿ ರೂಪಾಯಿ ತಲುಪುತ್ತೆ ಅನ್ನುತ್ತೆ ಸಿಎಜಿ. ಈ ವಲಯದಲ್ಲಿರುವ ಕೆಲವೇ ಕಂಪನಿಗಳಲ್ಲಿ ಸೀನಿಯರ್ ಶೆಲ್ಫ್ ಮೊದಲ ಸಾಲಿನಲ್ಲಿದೆ.

‘ಭಾರತದಲ್ಲಿ ಈ ಕ್ಷೇತ್ರ ಇಲ್ಲದಿರುವುದೇ ಈ ವಲಯದ ಅತಿ ದೊಡ್ಡ ಸವಾಲು. ಅಂತಾರಾಷ್ಟ್ರೀಯ ಮಾರುಕಟ್ಟೆಗಳಂತೆ ಹಿರಿಯರ ಆರೈಕೆಯ ವಲಯ ಭಾರತದಲ್ಲಿ ಇನ್ನೂ ಬೆಳೆದಿಲ್ಲ. ಈಗಷ್ಟೇ ಕಣ್ತೆರೆದಿರುವ ಎಳೆಯ ಮಗುವಿನಂತಿದೆ. ಹಾಗೂ ಉತ್ಪನ್ನಗಳ ಲಭ್ಯತೆಯೂ ತೀರಾ ಕಡಿಮೆ’ ಅಂತಾರೆ ರಾಹುಲ್ ಉಪಾಧ್ಯಾಯ್.

ಪ್ರತಿ 10 ಜನರಲ್ಲಿ 4 ಮಂದಿ ಹಿರಿಯ ನಾಗರಿಕರು ಸ್ವತಂತ್ರವಾಗಿ ವಾಸಿಸುತ್ತಾರೆ. ಆದ್ರೂ ಪರಿಣಿತ ಹಿರಿಯರಿಗೆ ಆರೈಕೆ ಸೇವೆ ಕೆಲ ಟಯರ್ 2 ಮತ್ತು ಟಯರ್ 3 ನಗರಗಳೂ ಸೇರಿದಂತೆ ಕೆಲವೇ ಕೆಲವು ನಿರ್ದಿಷ್ಟ ನಗರಗಳಿಗಷ್ಟೇ ಸೀಮಿತವಾಗಿದೆ. ಈ ನಿಟ್ಟಿನಲ್ಲಿ ಆನ್‍ಲೈನ್ ಡೊಮೈನ್‍ಅನ್ನು ಸೃಷ್ಟಿಸಿದ್ದೇವೆ. ನಾನೇ ಖುದ್ದಾಗಿ 18 ತಿಂಗಳ ಕಾಲ ಹಿರಿಯ ನಾಗರಿಕರೊಂದಿಗೆ ಚರ್ಚಿಸಿ, ಅವರ ಕುಟುಂಬದವರೊಂದಿಗೆ ಮಾತನಾಡಿ, ಅವರ ಅವಶ್ಯಕತೆಗಳು ಹಾಗೂ ಅವರ ಯೋಚನಾಲಹರಿಗಳ ಕುರಿತು ಮಾಹಿತಿ ಕಲೆ ಹಾಕಿದ್ದೇನೆ’ ಅಂತಾರೆ ರಾಹುಲ್.

‘ಭಾರತದಲ್ಲಿ ಒಂದು ಕುಟುಂಬ ಅಂದ್ರೆ, ಅದರ ಸದಸ್ಯರ ನಡುವೆ ಗಾಢವಾದ ಸಂಬಂಧವಿರುತ್ತೆ. ಬೆಸುಗೆಯಿರುತ್ತೆ. ಇದೇ ಈ ವಲಯದಲ್ಲಿರುವ ನಮ್ಮಂತಹ ಉದ್ಯಮಿಗಳಿಗೆ ಸಕಾರಾತ್ಮಕ ಬೆಳವಣಿಗೆ’ ಅಂತಲೂ ತಮ್ಮ ಮಾತನ್ನು ಮುಂದುವರಿಸುತ್ತಾರೆ ರಾಹುಲ್.

ಹಿರಿಯ ಜೀವಗಳಿಗೆ ಸಹಕಾರಿಯಾಗಿರುವಂತಹ ಸಂಶೋಧನೆಗಳು ಹಾಗೂ ಆವಿಷ್ಕಾರಗಳು ಸಾಕಷ್ಟಿವೆ. ಆದ್ರೆ ಅವು ಸರಳವಾಗಿ ಕೈಗೆಟುಕುವುದಿಲ್ಲ. ಅಂಗಡಿ - ಮಾರುಕಟ್ಟೆಯಿರಲಿ, ಆನ್‍ಲೈನ್‍ನಲ್ಲೂ ಇವುಗಳ ಲಭ್ಯತೆ ತೀರಾ ಕಡಿಮೆ. ಪಾಶ್ಚಿಮಾತ್ಯ ದೇಶಗಳಲ್ಲಿ ವಾಲ್ಮಾರ್ಟ್‍ನಂತಹ ಸರಣಿ ಅಂಗಡಿಗಳಲ್ಲಿ ಹಿರಿಯ ನಾಗರಿಕರಿಗೆಂದೇ ಒಂದು ವಿಭಾಗವಿರುತ್ತೆ. ಅಂತಹ ಸೌಲಭ್ಯ ಭಾರತಕ್ಕೂ ಬರಬೇಕಿದೆ. ಈ ಮೂಲಕ ಸ್ವತಂತ್ರ್ಯ ಹಿರಿಯ ನಾಗರಿಕರ ಮಾರುಕಟ್ಟೆಯನ್ನು ಸೆಳೆಯಬಹುದು.

ಸೀನಿಯರ್ ಶೆಲ್ಫ್ ಈ ಎಲ್ಲಾ ಉತ್ಪನ್ನಗಳನ್ನೂ ಹಾಗೂ ಸೌಲಭ್ಯಗಳನ್ನೂ ಒಂದೇ ಸೂರಿನಡಿಯಲ್ಲಿ ಗ್ರಾಹಕರಿಗೆ ಒದಗಿಸುತ್ತದೆ. ‘ನಮ್ಮದೇ ಆವಿಷ್ಕಾರವಿಲ್ಲದ ಉತ್ಪನ್ನಗಳ ಮಾರುಕಟ್ಟೆಯ ತಾಣ ನಮ್ಮದು. ಮೌಲ್ಯಾಧಾರಿತ ಹಾಗೂ ಆದರ್ಶ, ತತ್ವಗಳನ್ನು ಹೊಂದಿರುವ ಕಂಪನಿ’. ಹಿರಿಯ ನಾಗರಿಕರಿಗೆ ಸಂಬಂಧಿಸಿದ ಉತ್ಪನ್ನಗಳನ್ನು ಹೊತುಪಡಿಸಿ ಬೇರೆ ವಸ್ತುಗಳನ್ನು ಉತ್ಪಾದಿಸುವ ಕಂಪನಿಗಳೂ ನಮ್ಮ ಬಳಿ ಬಂದು, ಅವರ ಉತ್ಪನ್ನಗಳಿಗೂ ನಮ್ಮ ಆನ್‍ಲೈನ್ ವೆಬ್‍ಸೈಟ್‍ನಲ್ಲಿ ಸೇರಿಸಿಕೊಳ್ಳುವಂತೆ ದುಂಬಾಲು ಬಿದ್ದಿದ್ದರು. ಆದ್ರೆ ಸೀನಿಯರ್ ಶೆಲ್ಫ್ ಮಾತ್ರ ನಾವು ಹಿರಿಯ ನಾಗರಿಕರನ್ನೇ ಫೋಕಸ್ ಮಾಡುತ್ತೇವೆ ಅಂತ ಹೇಳಿ ಸುಮ್ಮನಾಗಿದೆ.

ಇನ್ನು ಈ ವಲಯದಲ್ಲಿರುವ ಮತ್ತೊಂದು ಪ್ರಮುಖ ಸಮಸ್ಯೆ ಅಂದ್ರೆ ಅದು ಇಂಟರ್‍ನೆಟ್ ಬಳಕೆ. ಯಾಕಂದ್ರೆ ಭಾರತದಲ್ಲಿ ಕೇವಲ 6 ಪ್ರತಿಶತಃ ಹಿರಿಯ ನಾಗರಿಕರು ಮಾತ್ರ ಇಂಟರ್‍ನೆಟ್ ಬಗ್ಗೆ ಅರಿವು ಹೊಂದಿದ್ದಾರೆ. ಹೀಗಾಗಿಯೇ ರಾಹುಲ್ ಉಪಾಧ್ಯಾಯ್ ವಯಸ್ಸಾ ಪೋಷಕರು ಮಾತ್ರವಲ್ಲ ಅವರ ಮಕ್ಕಳನ್ನೂ ಟಾರ್ಗೆಟ್ ಮಾಡಲು ಹಲವು ಯೋಜನೆ ಹಾಕಿಕೊಂಡಿದ್ದಾರೆ.

ಪ್ರತಿ ತಿಂಗಳು 30ರಿಂದ 35 ಸಾವಿರ ಮಂದಿ ನಮ್ಮ ವೆಬ್‍ಸೈಟ್‍ಗೆ ಭೇಟಿ ನೀಡ್ತಾರೆ. ನಮಗೆ ಉತ್ಪನ್ನಗಳನ್ನು ಮಾರಾಟ ಮಾಡೋದಷ್ಟೇ ಸವಾಲಲ್ಲ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸಿವುದೂ ಅಷ್ಟೇ ದೊಡ್ಡ ಸವಾಲಾಗಿದೆ. ಹೀಗಾಗಿಯೇ ನಾವು ನಮ್ಮ ಗ್ರಾಹಕರಿಗೆ ಏನು ಖರೀದಿಸಬೇಕು? ಯಾಕೆ ಖರೀದಿಸಬೇಕು? ಅದರಿಂದ ಉಪಯೋಗವೇನು? ಅನ್ನೋದರ ಕುರಿತೂ ಮಾಹಿತಿ ನೀಡಿ ಸಹಕರಿಸುತ್ತೇವೆ’ ಅಂತಾರೆ ರಾಹುಲ್. ಮೂರು ತಿಂಗಳ ಹಿಂದಿನವರೆಗೂ ಖುದ್ದು ರಾಹುಲ್ ಅವರೇ ಜನರ ಕರೆಗಳನ್ನು ಸ್ವೀಕರಿಸುತ್ತಿದ್ರು ಹಾಗೂ ಗ್ರಾಹಕರೊಂದಿಗೆ ಚರ್ಚಿಸುತ್ತಿದ್ದರು.

ಸೀನಿಯರ್ ಶೆಲ್ಫ್​​ನಲ್ಲಿ ಪ್ರತಿ ತಿಂಗಳು 300 ರಿಂದ 350 ವ್ಯಾಪಾರ ವಹಿವಾಟು ನಡೆಯುತ್ತವೆ. ಪ್ರತಿ ಮಾರಾಟದ ಬೆಲೆ ಸರಿಸುಮಾರು 2500 ರೂಪಾಯಿಯಷ್ಟಿರುತ್ತೆ. ಹೀಗೆ ಕಳೆದ ಕೆಲ ತಿಂಗಳಿಂದ ಸೀನಿಯರ್ ಶೆಲ್ಫ್ ಮಾರಾಟದಲ್ಲಿ ಎಂಟು ಪಟ್ಟು ಪ್ರಗತಿ ಕಂಡಿದ್ದು, ವರ್ಷದಿಂದ ವರ್ಷಕ್ಕೆ ಆದಾಯದಲ್ಲಿ ಮೂರು ಪಟ್ಟು ಹೆಚ್ಚಾಗುತ್ತಿದೆ.

‘ಈಗ್ಗೆ ಕೆಲ ತಿಂಗಳ ಹಿಂದೆ ಆನ್‍ಲೈನ್ ಮೂಲಕವೇ 3.5 ಲಕ್ಷ ರೂಪಾಯಿಯ ವೀಲ್‍ಚೇರ್ ಮಾರಿದ್ದು ನಮಗೆ ಇದುವರೆಗಿನ ಅತಿ ದೊಡ್ಡ ಸಾಧನೆ ಎನ್ನಬಹುದು. ರಾಜಮುಂದ್ರಿಯ ಗ್ರಾಹಕರೊಬ್ಬರು ಅದನ್ನು ಖರೀದಿಸಿದ್ರು’ ಅಂತ ನಗುತ್ತಾರೆ ರಾಹುಲ್. ಇದು ಭಾರತೀಯರು ಆನ್‍ಲೈನ್ ಶಾಪಿಂಗ್ ಮೇಲಿಟ್ಟಿರುವ ನಂಬಿಕೆಯನ್ನು ಹಾಗೂ ಹಿರಿಯ ನಾಗರಿಕರಿಗಾಗಿಯೇ ಇರುವ ಉತ್ಪನ್ನಗಳ ಅವಶ್ಯಕತೆಯ ಮಹತ್ವದ ಕುರಿತು ಸಾರಿ ಹೇಳುತ್ತದೆ.

‘ನಮ್ಮ ಆನ್‍ಲೈನ್ ವೆಬ್‍ಸೈಟ್ ಮೂಲಕ ಶಾಪಿಂಗ್ ಮಾಡಿ, ಉತ್ತಮ ಗುಣಮಟ್ಟದ ವಸ್ತುಗಳನ್ನು ಖರೀದಿಸಿ ಖುಷಿಯಾಗುವ ಹಿರಿಯ ಜೀವಗಳು ಮೆಚ್ಚುಗೆ ವ್ಯಕ್ತಪಡಿಸುವುದು, ನಮಗೆ ತುಂಬಾ ಖುಷಿ ನೀಡುತ್ತದೆ. ಅದೇ ನಮಗೆ ಎಲ್ಲಕಿಂತ ದೊಡ್ಡ ಬಹುಮಾನ’ ಅಂತಾರೆ ರಾಹುಲ್.

ಮೊದಲು ಕಂಪನಿ ಪ್ರಾರಂಭಿಸಲು ರಾಹುಲ್‍ಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಹೀಗಾಗಿಯೇ ಅವರು ತಮ್ಮ ಪಿಎಫ್ ಹಣವನ್ನೇ ಪಡೆದು, ಸೀನಿಯರ್ ಶೆಲ್ಫ್‍ನಲ್ಲಿ ಬಂಡವಾಳ ಹೂಡಿದ್ರು. ಕೆಲವೇ ದಿನಗಳಲ್ಲಿ ಕಂಪನಿ, ಇಬ್ಬರು ಬೇರೆ ಬಂಡವಾಳ ಹೂಡಿಕೆದಾರರನ್ನೂ ತನ್ನತ್ತ ಸೆಳೆಯಿತು. ‘ನಾವು ಆದಷ್ಟು ವೆಚ್ಚ ನಿಯಂತ್ರಣ ತಂತ್ರವನ್ನು ಅಳವಡಿಸಿಕೊಂಡಿದ್ದೀವಿ. ಮುಂದಿನ ಹೆಜ್ಜೆಗೆ 6 ಕೋಟಿ ರೂಪಾಯಿ ಬಂಡವಾಳ ಆಕರ್ಷಿಸುವ ಉದ್ದೇಶವಿದೆ. ಆ ಯೋಜನೆ ಮೂಲಕ ಪ್ರಸವ ವೇದನೆ ಅನುಭವಿಸುವ ಹೆಂಗಸರು, ಆಗ ಆಸ್ಪತ್ರೆಗೆ ಬರೋದೇ ತುಂಬಾ ದೊಡ್ಡ ಕಷ್ಟ. ಹೀಗಾಗಿಯೇ ಮನೆಯಲ್ಲೇ ಡೆಲಿವರಿ ಮಾಡಿಕೊಳ್ಳಬಹುದಾದ ಸೌಲಭ್ಯ ಒದಗಿಸಲಿದ್ದೇವೆ’ ಅಂತ ಭವಿಷ್ಯದ ಪ್ಲ್ಯಾನ್‍ಗಳ ಕುರಿತು ಹೇಳುತ್ತಾ ಮಾತು ಮುಗಿಸುತ್ತಾರೆ ರಾಹುಲ್ ಉಪಾಧ್ಯಾಯ್.

ಲೇಖಕರು: ಬಿಂಜಾಲ್​ ಷಾ
ಅನುವಾದಕರು: ವಿಶಾಂತ್​​

Related Stories