ಜನವರಿ 16ರಂದು `ಸ್ಟಾರ್ಟ್-ಅಪ್ ಇಂಡಿಯಾ'ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಟೀಮ್​ ವೈ.ಎಸ್​. ಕನ್ನಡ

ಜನವರಿ 16ರಂದು `ಸ್ಟಾರ್ಟ್-ಅಪ್ ಇಂಡಿಯಾ'ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

Tuesday January 05, 2016,

3 min Read

ಭಾರತ ಸರ್ಕಾರದ `ಸ್ಟಾರ್ಟ್-ಅಪ್ ಇಂಡಿಯಾ' ಚಳವಳಿಯ ಭಾಗವಾಗಿರುವುದು `ಯುವರ್‍ಸ್ಟೋರಿ' ಪಾಲಿಗೆ ನಿಜಕ್ಕೂ ಹೆಮ್ಮೆಯ ಸಂಗತಿ. ಜನವರಿ 16ರಂದು ನವದೆಹಲಿಯಲ್ಲಿ `ಸ್ಟಾರ್ಟ್‍ಅಪ್ ಇಂಡಿಯಾ'ಗೆ ಚಾಲನೆ ಸಿಗಲಿದೆ. ದೇಶದ ಯವ ಜನತೆಯ ಉದ್ಯಮಶೀಲತೆಯ ಉತ್ಸಾಹವನ್ನು ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಉದ್ದೇಶ. ಖ್ಯಾತ ಕಂಪನಿಗಳ 1500ಕ್ಕೂ ಹೆಚ್ಚು ಸಿಇಓಗಳು ಮತ್ತು ಸಂಸ್ಥಾಪಕರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. `ಸ್ಟಾರ್ಟ್-ಅಪ್ ಇಂಡಿಯಾ'ದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. `ಸ್ಟಾರ್ಟ್-ಅಪ್ ಇಂಡಿಯಾ'ಗೆ ಔಪಚಾರಿಕವಾಗಿ ಚಾಲನೆ ನೀಡಲಿರುವ ಪ್ರಧಾನಿ ಮೋದಿ, ಆರಂಭಿಕ `ಆ್ಯಕ್ಷನ್ ಪ್ಲಾನ್' ಅನ್ನು ಕೂಡ ಬಿಡುಗಡೆ ಮಾಡಲಿದ್ದಾರೆ. ಕೇಂದ್ರ ಹಣಕಾಸು ಹಾಗೂ ಕಾರ್ಪೊರೇಟ್ ವ್ಯವಹಾರಗಳ ಸಚಿವ ಅರುಣ್ ಜೇಟ್ಲಿ ಜನವರಿ 16ರಂದು ಬೆಳಗ್ಗೆ 9.30ಕ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ದೆಹಲಿಯ ವಿಜ್ಞಾನ ಭವನದಲ್ಲಿ ಸಮಾರಂಭವನ್ನು ಆಯೋಜಿಸಲಾಗಿದ್ದು, ವಾಣಿಜ್ಯ ಮತ್ತು ಕೈಗಾರಿಕಾ ಖಾತೆಯ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿರಲಿದ್ದಾರೆ.

image


`ಸ್ಟಾರ್ಟ್‍ಅಪ್ ಇಂಡಿಯಾ' ಕಾರ್ಯಕ್ರಮದಲ್ಲಿ ಇಡೀ ದಿನ ಉದ್ಯಮಗಳ ಬಗ್ಗೆ ಜಾಗತಿಕ ಕಾರ್ಯಾಗಾರ ನಡೆಯಲಿದೆ. ಈ ಕೆಳಕಂಡ ವಿಚಾರಗಳ ಮೇಲೆ ಚರ್ಚಾಕೂಟವನ್ನು ಕೂಡ ಏರ್ಪಡಿಸಲಾಗಿದೆ.

*ವಾಣಿಜ್ಯೋದ್ಯಮ ಮತ್ತು ಬದಲಾವಣೆಗಳ ಬಗ್ಗೆ ವರ್ಣನೆ : ಭಾರತೀಯ ಉದ್ಯಮಗಳ ಬೆಳವಣಿಗೆ ಮತ್ತು ಏಳಿಗೆಗೆ ಬೇಕಾದ ಅಗತ್ಯಗಳೇನು?

*ಮಹಿಳೆಯರಿಗೆ ಉತ್ತೇಜನ : ಸಾಹಸಿ ಮಹಿಳಾ ಉದ್ಯಮಿಗಳ ಕಹಾನಿ

*ಡಿಜಿಟಲೈಸೇಶನ್‍ನಿಂದ ಭಾರತದ ಭವಿಷ್ಯದಲ್ಲಾಗುವ ಬದಲಾವಣೆಗಳೇನು?

*ಭಾರತದ ಆರೋಗ್ಯ ಸೇವೆಗಳನ್ನು ಉತ್ತಮಪಡಿಸುವುದು

*ಆರ್ಥಿಕ ಸೇರ್ಪಡೆಯ ವ್ಯಾಪ್ತಿ

ಹಣಕಾಸು ಖಾತೆಯ ರಾಜ್ಯ ಸಚಿವ ಜಯಂತ್ ಸಿನ್ಹಾ ಅವರ ನೇತೃತ್ವದಲ್ಲಿ ``ಶೋ ಮಿ ದಿ ಮನಿ: ಹೌ ಡು ವಿ ಕ್ಯಾಪಿಟಲೈಸ್ ಎಂಟರ್‍ಪ್ರೆನ್ಯೂರ್‍ಶಿಪ್'' ಅನ್ನೋ ವಿಚಾರದ ಮೇಲೆ ವಿಸ್ತೃತ ಚರ್ಚೆ ನಡೆಯಲಿದೆ. ``ಫೇಸ್ ಟು ಫೇಸ್ ವಿತ್ ಪಾಲಿಸಿ ಮೇಕರ್ಸ್'' ಹೆಸರಿನಲ್ಲಿ ಪ್ರಶ್ನೋತ್ತರ ಅವಧಿಯನ್ನು ಕೂಡ ಆಯೋಜಿಸಲಾಗಿದೆ. ಕೇಂದ್ರ ಸರ್ಕಾರದ ಪ್ರಮುಖ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳು ನೇರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಸರ್ಕಾರ, ಉದ್ಯಮಕ್ಕೆ ಅನುಕೂಲಕರ ಪರಿಸರ ನಿರ್ಮಾಣ ಮಾಡುವಲ್ಲಿ ಯಾವ ರೀತಿ ಶ್ರಮಿಸುತ್ತಿದೆ ಎಂಬುದನ್ನು ವಿವರಿಸಲಿದ್ದಾರೆ. ಉದ್ಯಮಗಳ ಬೆಳವಣಿಗೆಗೆ ಪೂರಕವಾದ ಪರಿಸರ ನಿರ್ಮಾಣ ಮಾಡುವ ಬಗ್ಗೆ ಸರ್ಕಾರದ ಬದ್ಧತೆಯನ್ನು ಬಲಪಡಿಸುವುದು ಇದರ ಉದ್ದೇಶ. ಕಂದಾಯ ಇಲಾಖೆ, ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಇಲಾಖೆ, ಕಾರ್ಪೊರೇಟ್ ವ್ಯವಹಾರಗಳ ಇಲಾಖೆ, ಹಣಕಾಸು ವ್ಯವಹಾರಗಳ ಇಲಾಖೆ, ಆರ್ಥಿಕ ವ್ಯವಹಾರಗಳ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಜೈವಿಕ ತಂತ್ರಜ್ಞಾನ ಇಲಾಖೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಇಲಾಖೆ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ಚರ್ಚಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಷ್ಟೇ ಅಲ್ಲ ಸೆಬಿ (SEBI) ಮತ್ತು ಎಸ್‍ಐಡಿಬಿಐ(SIDBI)ನ ಪ್ರತಿನಿಧಿಗಳು ಕೂಡ ಹಾಜರಿರಲಿದ್ದಾರೆ.


image


`ಸಾಫ್ಟ್​​ ಬ್ಯಾಂಕ್'ನ ಸಿಇಓ ಮತ್ತು ಸಂಸ್ಥಾಪಕ ಮಾಸಾಯೋಶಿ ಸನ್, `ಊಬರ್'ನ ಸಂಸ್ಥಾಪಕ ಟ್ರಾವಿಸ್ ಕಲಾನಿಕ್, `ವಿ ವರ್ಕ್'ನ ಸಂಸ್ಥಾಪಕರಾದ ಆ್ಯಡಮ್ ನ್ಯೂಮನ್ ಸೇರಿದಂತೆ ಹಲವು ಜಾಗತಿಕ ಮುಖಂಡರು ಮತ್ತು ಬಂಡವಾಳಗಾರರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ವಿಶೇಷ. ಸಿಲಿಕಾನ್ ವ್ಯಾಲಿಯ ಪ್ರಖ್ಯಾತ ಸಿಇಓಗಳು, ಸಂಸ್ಥಾಪಕರು, ಬಂಡವಾಳಗಾರರು, ಏಂಜೆಲ್ ಹೂಡಿಕೆದಾರರನ್ನೊಳಗೊಂಡ 40 ಮಂದಿಯ ನಿಯೋಗ ಕೂಡ `ಸ್ಟಾರ್ಟ್‍ಅಪ್ ಇಂಡಿಯಾ' ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಭಾಗಿಯಾಗುತ್ತಿದೆ. ಅವರು ಕೂಡ ಪ್ರಶ್ನೋತ್ತರ ಅವಧಿಯಲ್ಲಿ ಉಪಸ್ಥಿತರಿರಲಿದ್ದಾರೆ.

`ಲಾಂಚ್‍ಪ್ಯಾಡ್ ಎಕ್ಸೆಲರೇಟರ್' ಹೆಸರಿನ ಕಾರ್ಯಕ್ರಮವೊಂದನ್ನು ಗೂಗಲ್ ಆಯೋಜಿಸುತ್ತಿದೆ. ಉದ್ಯಮಗಳ ಬಂಡವಾಳದ ಬಗ್ಗೆ ಸಾಫ್ಟ್ ಬ್ಯಾಂಕ್‍ನ ಅಧ್ಯಕ್ಷ ನಿಕೇಶ್ ಅರೋರಾ ಮಾತನಾಡಲಿದ್ದಾರೆ. ದೇಶದಲ್ಲಿ ಉದ್ಯಮಗಳ ಸಾಧನೆಯನ್ನು ಬಿಂಬಿಸುವ ವಾಸ್ತವಿಕ ಪ್ರದರ್ಶನವೊಂದನ್ನು ಕೂಡ ಹಮ್ಮಿಕೊಳ್ಳಲಾಗಿದೆ.

ಕಳೆದ ಬಾರಿ ರೇಡಿಯೋದಲ್ಲಿ ಪ್ರಸಾರವಾಗುವ `ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ತಿಳಿಸಿದಂತೆ, ಕಾರ್ಯಕ್ರಮದಲ್ಲಿ `ಸ್ಟಾರ್ಟ್‍ಅಪ್ ಇಂಡಿಯಾ'ದ ಸಂಪೂರ್ಣ ಕಾರ್ಯವೈಖರಿಯನ್ನು ಅನಾವರಣಗೊಳಿಸಲಾಗುತ್ತದೆ. ದೇಶದ ಔದ್ಯಮಿಕ ಪರಿಸರವನ್ನು ಉತ್ತಮಪಡಿಸಲು ಸರ್ಕಾರ ಹಮ್ಮಿಕೊಳ್ಳುತ್ತಿರುವ ಯೋಜನೆಗಳನ್ನು ಇದರಲ್ಲಿ ಹೈಲೈಟ್ ಮಾಡಲಾಗುತ್ತದೆ. ಉದ್ಯಮ ಸಂಸ್ಕೃತಿಯನ್ನು ಪ್ರಚಾರ ಮಾಡುವ ನಿಟ್ಟಿನಲ್ಲಿ `ಸ್ಟಾರ್ಟ್‍ಅಪ್ ಇಂಡಿಯಾ' ಕಾರ್ಯಕ್ರಮವನ್ನು ಐಐಟಿ, ಐಐಎಂ, ಎನ್‍ಐಟಿ, ಐಐಐಟಿ ಹಾಗೂ ಸರ್ಕಾರದ ವಿಶ್ವವಿದ್ಯಾನಿಲಯಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಅಷ್ಟೇ ಅಲ್ಲ ಭಾರತದ 350 ಜಿಲ್ಲೆಗಳಲ್ಲಿ ಯುವಕರ ಸಂಘಗಳು ಕೂಡ ಈ ಕಾರ್ಯಕ್ರಮವನ್ನು ವೀಕ್ಷಿಸಲಿದೆ. `ಯುವರ್‍ಸ್ಟೋರಿ', `ಐಸ್ಪಿರಿಟ್', `ನ್ಯಾಸ್ಕಾಮ್', `ಶಿ ದಿ ಪೀಪಲ್ ಡಾಟ್ ಟಿವಿ', `ಕೈರೋಸ್ ಸೊಸೈಟಿ' ಹಾಗೂ ಎಫ್‍ಐಸಿಸಿಐ, ಸಿಐಐ ಜೊತೆಗೂಡಿ ಕೈಗಾರಿಕಾ ನೀತಿ ಹಾಗೂ ಉತ್ತೇಜನಾ ಇಲಾಖೆ ಈ ಕಾರ್ಯಕ್ರಮವನ್ನು ಆಯೋಜಿಸಿದೆ.