ವಿಶ್ವದ ಮೊದಲ ಆಂಡ್ರಾಯ್ಡ್ ಸ್ಮಾರ್ಟ್ ವಾಚ್ ನೀಡಿದ ಅರ್ಧಕ್ಕೇ ಶಾಲೆ ಬಿಟ್ಟ19ರ ಉದ್ಯಮಿ ಸಿದ್ಧಾಂತ್ ವತ್ಸ್

ಟೀಮ್​​ ವೈ.ಎಸ್​. ಕನ್ನಡ

ವಿಶ್ವದ ಮೊದಲ ಆಂಡ್ರಾಯ್ಡ್ ಸ್ಮಾರ್ಟ್ ವಾಚ್ ನೀಡಿದ ಅರ್ಧಕ್ಕೇ ಶಾಲೆ ಬಿಟ್ಟ19ರ ಉದ್ಯಮಿ ಸಿದ್ಧಾಂತ್ ವತ್ಸ್

Thursday December 10, 2015,

4 min Read

ಟೆಡ್‍ಎಕ್ಸ್ ಸ್ಪೀಕರ್‍ಗಳಲ್ಲೊಬ್ಬರಾದ, ವಿಶ್ವದ ಮೊದಲ ಆಂಡ್ರಾಯ್ಡ್ ಸ್ಮಾರ್ಟ್-ವಾಚ್ ಸಹ ಸಂಸ್ಥಾಪಕ, ಅರ್ಧಕ್ಕೇ ಶಾಲೆ ಬಿಟ್ಟ 19 ವರ್ಷದ ಸಿದ್ಧಾಂತ್ ವತ್ಸ್ ಎನ್‍ಜಿಓ ಒಂದರ ಕಾರ್ಯಾಚರಣೆಗಳ ನಿರ್ವಹಣೆಯನ್ನೂ ನೋಡಿಕೊಳ್ಳುತ್ತಿದ್ದಾರೆ. ಅವರನ್ನು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರೂ ಆಮಂತ್ರಿಸಿದ್ದರು. ಹೀಗೆ ಬಿಹಾರದ ಪಾಟ್ನಾ ಮೂಲದ ಈ ಹುಡುಗ 19ರ ಹರೆಯದರಲ್ಲೇ ತನ್ನ ವಯಸ್ಸಿಗೂ ಮೀರಿದ, ಬೇರೆಯವರು ಕನಸು ಕಾಣುವ ಸಾಧನೆಯನ್ನು ಮಾಡಿದ್ದಾನೆ.

ಕೇವಲ ಕೆಲ ನಿಮಿಷ ಮಾತನಾಡಿದ್ರೆ ಸಾಕು ಸಿದ್ಧಾಂತ್ ವತ್ಸ್ ಅವರು ಎಷ್ಟು ವಿಭಿನ್ನ ಮತ್ತು ಕ್ರೇಜಿ ಅನ್ನೋದು ಗೊತ್ತಾಗುತ್ತೆ. ತನ್ನ ಕನಸುಗಳನ್ನು ಬೆನ್ನತ್ತಿಹೋಗುವ ಅತಿಯಾದ ಉತ್ಸಾಹ ಅವರಲ್ಲಿದೆ. ಈ ನಿಟ್ಟಿನಲ್ಲಿ ಮುನ್ನುಗ್ಗಲು ತನ್ನ ಪ್ರೌಢ ಶಾಲಾ ಶಿಕ್ಷಣವನ್ನೂ ಅರ್ಧಕ್ಕೇ ನಿಲ್ಲಿಸಿ ಶಾಲೆಯಿಂದ ಹೊರಬಂದ ಗಟ್ಟಿಗನೀತ. ‘ಶಿಕ್ಷಣವನ್ನು ಮುಂದೂಡುವ ನನ್ನ ನಿರ್ಧಾರವನ್ನು ಕೇಳಿ ಪೋಷಕರು ಶಾಕ್ ಆಗಿದ್ದರು’ ಅಂತ ನೆನಪಿಸಿಕೊಳ್ತಾರೆ ಸಿದ್ಧಾಂತ್.

image


‘ನಾನೊಬ್ಬ ಕನಸುಗಾರ’

ಸಿದ್ಧಾಂತ್ ಅವರಲ್ಲಿ ಕೆಲ ವಿಶೇಷ ಗುಣಗಳಿವೆ. ಇದರಿಂದಾಗಿಯೇ ಅವರು ಅವರ ಗೆಳೆಯರಿಗಿಂತ ವಿಭಿನ್ನವಾಗಿ ನಿಲ್ತಾರೆ. ಅಂತಹ ಕೆಲ ಗುಣಗಳ ಕುರಿತ ಮಾಹಿತಿ ಇಲ್ಲಿದೆ ನೋಡಿ.

1. ಅವನೊಬ್ಬ ಕನಸುಗಾರ. ಸಿದ್ಧಾಂತ್ ಉದ್ಯಮಿಯಾಗಲು ಅದೇ ಮೊದಲ ಕಾರಣ. ರಿಸ್ಕ್ ತೆಗೆದುಕೊಳ್ಳಲು ಆತನಿಗೆ ಭಯವಿಲ್ಲ. ನಿಜ ಏನಂದ್ರೆ, ಅವನು ಅವುಗಳನ್ನು ರಿಸ್ಕ್ ಅಂತಲೇ ಪರಿಗಣಿಸುವುದಿಲ್ಲ.

2. ಬಾಲಿವುಡ್ ಸಿನಿಮಾಗಳಂತೆ ಎಲ್ಲವೂ ಒಳ್ಳೆಯ ರೀತಿಯಲ್ಲಿ ಅಂತ್ಯವಾಗಬೇಕು. ಇಲ್ಲದಿದ್ದರೆ ಅದು ಅಂತ್ಯವೇ ಇಲ್ಲ ಅನ್ನೋದು ಸಿದ್ಧಾಂತ್ ನಂಬಿಕೆ. (ಪಿಕ್ಚರ್ ತೋ ಅಭೀ ಬಾಕೀ ಹೈ ಮೇರೆ ದೋಸ್ತ್)

3. 8ನೇ ತರಗತಿಯಲ್ಲಿರುವಾಗಲೇ ಸಿದ್ಧಾಂತ್ ಒಂದು ಎನ್‍ಜಿಓ ಅರ್ಥಾತ್ ಸ್ವಯಂ ಸೇವಾ ಸಂಘವನ್ನು ಪ್ರಾರಂಭಿಸಿದ್ರು

4. ತನ್ನದೇ ಕಾನೂನು ಕಟ್ಟಳೆಗಳಲ್ಲಿ ಸಿದ್ಧಾಂತ್ ತನ್ನನ್ನು ತಾನೇ ಕಟ್ಟಿಹಾಕಿಕೊಳ್ಳಲಿಲ್ಲ. ತನಗೆ ನೈತಿಕವಾಗಿ ಏನು ಸರಿ ಅನ್ನಿಸಿತೋ ಅದನ್ನು ಮುನ್ನುಗ್ಗಿ ಮಾಡುತ್ತಿದ್ದ.

ಕಿರೀಟದಲ್ಲಿ ಗರಿ

1. ಆಂಡ್ರಾಯ್ಡ್ ಸಿಸ್ಟಮ್ಸ್

ಸಿದ್ಧಾಂಥ್ ವತ್ಸ್ ಕೇವಲ 17 ವರ್ಷದವರಿದ್ದಾಗ ಅಪೂರ್ವ ಸುಕಂತ್ ಮತ್ತು ಇನ್ನೂ ಇಬ್ಬರು ಗೆಳೆಯರೊಂದಿಗೆ ಸೇರಿ ಆಂಡ್ರಾಯ್ಡ್​​​ ಸಿಸ್ಟಮ್ಸ್ ಪ್ರಾರಂಭಿಸಿದ್ರು. ‘ವಿಶ್ವದ ಮೊದಲ ಆಂಡ್ರಾಯ್ಡ್ ಸ್ಮಾರ್ಟ್ ವಾಚ್ ಮಾಡಿದ್ದು ನಾವೇ. ಆ ವಾಚ್‍ಗೆ ನಾವು ‘ಆಂಡ್ರಾಯ್ಡ್​​​ ’ ಎಂದು ಹೆಸರಿಟ್ಟೆವು. ಈ ವಾಚ್ ಮೂಲಕ ನಾವು ಕರೆ ಮಾಡಬಹುದು, ಇಂಟರ್‍ನೆಟ್ ಬಳಸಬಹುದು, ವಾಟ್ಸಾಪ್ ಮೂಲಕ ಸಂದೇಶಗಳನ್ನು ಕಳಿಸಬಹುದು, ಹಾಡುಗಳನ್ನು ಕೇಳಬಹುದು ಹಾಗೂ ಫೋಟೋಗಳನ್ನೂ ಕ್ಲಿಕ್ಕಿಸಬಹುದು. ಅಷ್ಟೇ ಯಾಕೆ ಒಂದು ಮೊಬೈಲ್ ಫೋನ್‍ನಲ್ಲಿ ನೀವು ಏನೆಲ್ಲಾ ಮಾಡಬಹುದೋ? ಅದನ್ನೆಲ್ಲಾ ಈ ವಾಚ್ ಮೂಲಕವೂ ಮಾಡಬಹುದು’ ಅಂತ ಆಂಡ್ರಾಯ್ಡ್​​​ ವಾಚ್ ಕುರಿತು ಮಾಹಿತಿ ನೀಡ್ತಾರೆ ಸಿದ್ಧಾಂತ್ ವತ್ಸ್.

ಇದಕ್ಕಾಗಿಯೇ ತನ್ನ ಪ್ರೌಢಶಾಲಾ ಶಿಕ್ಷಣವನ್ನು ಎರಡು ವರ್ಷ ಮುಂದೂಡಿದ್ರು ಸಿದ್ಧಾಂತ್. ಈ ಆಂಡ್ರಾಯ್ಡ್ಲಿ ವಾಚ್ 2013ರಿಂದಲೇ ವಿಶ್ವದೆಲ್ಲೆಡೆ ದೊರೆಯುತ್ತಿದೆ. ಬೆಲೆ ಕೇವಲ 220 ಡಾಲರ್ ಮಾತ್ರ. ಬರೊಬ್ಬರಿ 110 ದೇಶಗಳಲ್ಲಿ ಈ ಆಂಡ್ರಾಯ್ಡ್ಲಿ ವಾಚ್ ಮಾರಾಟವಾಗುತ್ತಿದ್ದು, ಇದೇ ಆಗಸ್ಟ್ - ಸೆಪ್ಟೆಂಬರ್‍ನಲ್ಲಿ ಇದರ ಹೊಸ ವರ್ಷನ್ ಕೂಡ ಬಿಡುಗಡೆಯಾಗಿದೆ. ‘ಈ ಹೊಸ ವರ್ಷನ್ ಮೊದಲ ವರ್ಷನ್‍ಗಿಂತ ವೇಗವಾಗಿ ಕೆಲಸ ಮಾಡುತ್ತೆ. ಹೊಸ ಡಿಸೈನ್ ನಿಜವಾದ ವಾಚ್‍ಗಳಂತೆಯೇ ಕಾಣಿಸುತ್ತವೆ. ಯಾಕಂದ್ರೆ ಮೊದಲ ವರ್ಷನ್‍ನ ವಾಚ್‍ಗಳು ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿದ್ದು, ಈ ಹೊಸ ವಾಚ್ ಹೆಚ್ಚು ಆಕರ್ಷಣೀಯವಾಗಿದೆ. ಹೀಗಾಗಿಯೇ ಫ್ಯಾಷನ್‍ಗಾಗಿಯೂ ಈ ವಾಚ್‍ಅನ್ನು ಧರಿಸಬಹುದು’ ಅಂತ ಹೇಳ್ತಾರೆ ಸಿದ್ಧಾಂತ್ ವತ್ಸ್.

image


2. ದಿ ಫಲಕ್ ಫೌಂಡೇಶನ್

ಸಿದ್ಧಾಂತ್ ಅವರ ತಾಯಿ ಪ್ರಾರಂಭಿಸಿದ ಫಲಕ್ ಫೌಂಡೇಶನ್, ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಜಾಗೃತಿ ವಲಯಗಳಲ್ಲಿ ಕೆಲಸ ಮಾಡುತ್ತಿದೆ. ಸಿದ್ಧಾಂತ್ 7ನೇ ತರಗತಿಯಲ್ಲಿರುವಾಗಲೇ ಈ ಎನ್‍ಜಿಓ ಮಕ್ಕಳಿಗೆ ಸಾಮಾನ್ಯ ಕಂಪ್ಯೂಟರ್ ಕೌಶಲ್ಯ, ಇಂಗ್ಲೀಷ್ ಮತ್ತು ಗಣಿತ ವಿಷಯಗಳನ್ನು ಕಲಿಸತೊಡಗಿದ. ಕ್ರಮೇಣ ದಿನ ಕಳೆದಂತೆ ಸಿದ್ಧಾಂತ್ ಎನ್‍ಜಿಓನ ಇತರೆ ಕಾರ್ಯಗಳಲ್ಲೂ ಕೈಜೋಡಿಸತೊಡಗಿದ. ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸತೊಡಗಿದ. ಇದುವರೆಗಿನ ತಮ್ಮ ಸ್ವಯಂಸೇವಾ ಸಂಘದ ಅತಿ ದೊಡ್ಡ ಸಾಧನೆ ಬಗ್ಗೆ ಹೇಳಿಕೊಳ್ಳುವ ಸಿದ್ಧಾಂತ್, ‘ನನ್ನ ಎನ್‍ಜಿಓ ಮೂಲಕ ನಾನು ಅಮೆರಿಕಾದ ವರ್ಜೀನಿಯಾದ ಮಾನೆಸ್ಟ್ರಿಯ ಸಹಾಯದೊಂದಿಗೆ ಬೋಧ್‍ಗಯಾದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸನ್ಯಾಸಿಗಳ ವಿಹಾರವನ್ನು ನಿರ್ಮಿಸುವಲ್ಲಿ ಯಶಸ್ವಿಯಾದೆ. ಭಾರೀ ವಿದೇಶೀ ಹೂಡಿಕೆಯ ಮೂಲಕ ಅದನ್ನು ನಿರ್ಮಿಸಲಾಗಿತ್ತು. ಸುಮಾರು 1000ಕ್ಕೂ ಹೆಚ್ಚು ಮಂದಿ ದೇಶ ವಿದೇಶಗಳಿಂದ ಅದರ ಪ್ರಾರಂಭೋತ್ಸವಕ್ಕೆ ಬಂದಿದ್ದರು. ಇದು ಬಿಹಾರ ರಾಜ್ಯದ ಆರ್ಥಿಕತೆಗೆ ಅದರದೇ ರೀತಿಯಲ್ಲಿ ಸಹಾಯ ಮಾಡಲಿದೆ, ಹಾಗೂ ಪ್ರವಾಸೋದ್ಯಮದ ಮೂಲಕ ಆರ್ಥಿಕತೆಯನ್ನು ಹೆಚ್ಚಿಸಲಿದೆ.

3. ಟೆಡ್‍ಎಕ್ಸ್, ಹೊರೇಸಿಸ್ ಬ್ಯುಸಿನೆಸ್ ಮೀಟ್ (ವಿಶ್ವದ ಅತ್ಯುತ್ತಮ 100 ಉದ್ಯಮ ಹೊಸತನಗಳಿಗೆ ನಾಮಾಂಕಿತವಾಗಿದೆ), ಮತ್ತು ಬಿಗ್‍ಎಫ್ (ಬಿಲ್ ಗೇಟ್ಸ್ ಜೊತೆಯಲ್ಲಿ) ಸೇರಿದಂತೆ ಸಿದ್ಧಾಂತ್ ಇದುವರೆಗೆ ಸುಮಾರು 100ಕ್ಕೂ ಹೆಚ್ಚು ಸಮ್ಮೇಳನಗಳಲ್ಲಿ ಮಾತನಾಡಿದ್ದಾರೆ.

4. ಭಾರತೀಯ ಪ್ರಧಾನ ಮಂತ್ರಿ ಕಚೇರಿಯಿಂದ ಸಿದ್ಧಾಂತ್ ಅವರಿಗೆ ಅತ್ಯುತ್ತಮ ಉದ್ಯಮಶೀಲತೆಗೆ ಪ್ರಶಸ್ತಿ ದೊರೆತಿದೆ. ಹಾಗೂ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಸಿದ್ಧಾಂತ್ ಅವರನ್ನು ಶ್ವೇತಭವನಕ್ಕೆ ಆಮಂತ್ರಿಸಿದ್ದರು ಅನ್ನೋದು ಮತ್ತೊಂದು ವಿಶೇಷ.

ಸ್ಫೂರ್ತಿ...

‘ಒಂದೇ ಕೆಲಸವನ್ನು ತುಂಬಾ ಸಮಯದವರೆಗೆ ಮಾಡುವುದು ನನಗೆ ಇಷ್ಟವಾಗುವುದಿಲ್ಲ. ಹೀಗಾಗಿಯೇ ನಾನು ಒಂದೆಡೆ ಕೂರುವುದಿಲ್ಲ. ನಾನು ನನ್ನ ಕನಸುಗಳನ್ನು ಬೆನ್ನಟ್ಟಬೇಕು. ನಾನು ನನ್ನ ಮನಸ್ಸಿಗೆ ಬಂದ ಎಲ್ಲವನ್ನೂ ಮಾಡಬೇಕು ಅಂದುಕೊಳ್ಳುವವನು. ನನಗೆ ಏನೂ ಸ್ಫೂರ್ತಿ ನೀಡುವುದಿಲ್ಲ. ಏನಾದ್ರೂ ಮಾಡಬೇಕು ಅಂದುಕೊಂಡು, ಹೇಗೋ ಅದನ್ನು ಮಾಡಿಯೇ ತೀರುವುದು ನನ್ನ ಗುಣ. ನನ್ನ ಬಳಿ ಎಲ್ಲದಕ್ಕೂ ತುಂಬಾ ಸಮಯವಿದೆ ಅಂತನ್ನಿಸುತ್ತೆ’ ಅಂತಾರೆ ಸಿದ್ಧಾಂತ್

image


ಸವಾಲುಗಳು

ಸಿದ್ಧಾಂತ್ ಪ್ರಕಾರ ಭಾರತದಲ್ಲಿ ನಮ್ಮ ಅತಿ ದೊಡ್ಡ ಸವಾಲುಗಳು ಅಂದ್ರೆ ನಮ್ಮನ್ನು ವಿರೋಧಿಸುವ ನಮ್ಮ ಗೆಳೆಯರು, ಸಂಬಂಧಿಕರು ಹಾಗೂ ನೆರೆಹೊರೆಯ ಮನೆಯವರಂತೆ.

‘ಅವರು ನಿನ್ನ ಐಡಿಯಾ ಯಾವುದಕ್ಕೂ ಪ್ರಯೋಜನಕ್ಕೆ ಬಾರದು ಅಂದುಬಿಡ್ತಾರೆ. ಅಷ್ಟು ಮಾತ್ರವಲ್ಲ, ನಿನ್ನನ್ನು ಬಿಟ್ಟು ಇನ್ನುಳಿದವರೆಲ್ಲರೂ, ಕೆಲವೊಮ್ಮೆ ನಿನ್ನದೇ ತಂಡದ ಸದಸ್ಯರೂ ನಿನ್ನ ಯೋಜನೆ ಕೆಲಸ ಮಾಡೋದಿಲ್ಲ ಅಂತ ಹಲವು ಕಾರಣಗಳನ್ನೇ ಕೊಟ್ಟುಬಿಡ್ತಾರೆ. ಆದ್ರೆ ಯಾರೂ ಅದು ಹೇಗೆ ಕೆಲಸ ಮಾಡುತ್ತೆ ಅಂತ ಮಾತ್ರ ಹೇಳೋದಿಲ್ಲ’ ಅಂತ ಬೆಟ್ಟು ಮಾಡಿ ತೋರಿಸುತ್ತಾರೆ ಸಿದ್ಧಾಂತ್.

ನಾಯಕತ್ವ ಶೃಂಗಸಭೆ – ಮುಂದಿನ ಹೆಜ್ಜೆ

ಸಿದ್ಧಾಂತ್ ಒಂದು ಅಂತಾರಾಷ್ಟ್ರೀಯ ಮಟ್ಟದ ವೇದಿಕೆ ನಿರ್ಮಿಸಲು ಯೋಜನೆ ಹಾಕಿದ್ದಾರೆ. ಆ ಮೂಲಕ ಬೇರೆ ಬೇರೆ ವಲಯಗಳ ಜನ ಮತ್ತೊಬ್ಬರನ್ನು ಸಂಪರ್ಕಿಸಿ, ಇತರರಿಗೆ ಸ್ಫೂರ್ತಿ ತುಂಬುವಂತಾಗಬೇಕು ಅನ್ನೋದು ಅವರ ಆಶಯ. ‘ನಾಯಕತ್ವ ಶೃಂಗಸಭೆ ಅಥವಾ ಲೀಡರ್‍ಶಿಪ್ ಸಮ್ಮಿಟ್ ಕೂಡ ಟೆಡ್‍ಎಕ್ಸ್‍ನಂತೆಯೇ ಇರುತ್ತದೆ. ಅಲ್ಲಿ ಉದ್ಯಮಿಗಳು ತಮ್ಮ ಯಶೋಗಾಥೆಯನ್ನು ಮತ್ತೊಬ್ಬರಿಗೆ ಹೇಳಬಹುದು. ಅಷ್ಟೇ ಅಲ್ಲ, ಇದನ್ನು ಮುಂದಿನ ದಿನಗಳಲ್ಲಿ ಶಾಲೆ ಮತ್ತು ಕಾಲೇಜುಗಳಿಗೂ ವಿಸ್ತರಿಸುವ ಐಡಿಯಾ ಇದೆ’ ಅಂತ ತಮ್ಮ ಐಡಿಯಾ ಕುರಿತು ಹೆಚ್ಚಿನ ಮಾಹಿತಿ ನೀಡ್ತಾರೆ ಸಿದ್ಧಾಂತ್.

‘ಅದನ್ನು ಬಿಟ್ಟರೆ ನನಗೆ ನಿಜವಾಗಿಯೂ ಮತ್ತಿನ್ನೇನೂ ಗೊತ್ತಿಲ್ಲ. ನನಗೆ ಯಾವಾಗ ಬೇಕಾದ್ರೂ ಏನಾದ್ರೂ ಐಡಿಯಾ ಹೊಳೆಯಬಹುದು, ತಕ್ಷಣ ನಾನದರ ಹಿಂದೆ ಬೀಳುತ್ತೇನೆ’ ಅಂತ ಹೇಳುವುದನ್ನು ಮರೆಯುವುದಿಲ್ಲ ಸಿದ್ಧಾಂತ್.

ಲೇಖಕರು: ಅಲೋಕ್​​​ ಸೋನಿ

ಅನುವಾದಕರು: ವಿಶಾಂತ್​