ಕೇರಳದಲ್ಲಿ ಮಹಿಳೆಯರೇ ಸ್ಥಾಪಿಸಿದ ಮೊದಲ ಬಯೋಕೆಮಿಕಲ್ ಕಂಪನಿ- ಇದು ಏಕಾ ಸ್ಟೋರಿ

ಟೀಮ್​​ ವೈ.ಎಸ್​. ಕನ್ನಡ

ಕೇರಳದಲ್ಲಿ ಮಹಿಳೆಯರೇ ಸ್ಥಾಪಿಸಿದ ಮೊದಲ ಬಯೋಕೆಮಿಕಲ್ ಕಂಪನಿ- ಇದು ಏಕಾ ಸ್ಟೋರಿ

Tuesday December 15, 2015,

4 min Read

ಏಕಾ ಕಥೆ ಶುರುವಾಗಿದ್ದು ಈಗ್ಗೆ ಏಳು ವರ್ಷಗಳ ಹಿಂದೆ. ತ್ರಿವೆಂಡ್ರಮ್‍ನ ಶ್ರೀ ಚಿತ್ರ ತಿರುನಾಳ್ ಕಾಲೇಜ್ ಆಫ್ ಎಂಜಿನಿಯರಿಂಗ್‍ನ ವಿದ್ಯಾರ್ಥಿಗಳಾದ ಆದ್ರ ಚಂದ್ರಮೌಳಿ ಮತ್ತು ಗಾಯತ್ರಿ ತಂಕಾಚಿ ಅವರು ತಮ್ಮ ತರಗತಿ ಮುಗಿಸಿಕೊಂಡು ಹೊರಬಂದಾಗ ಈ ಪ್ಲಾನ್​​ ಹುಟ್ಟಿದ್ದು. ಇವರೊಂದಿಗೆ ಜೈವಿಕ ತಂತ್ರಜ್ಞಾನ ಮತ್ತು ಬಯೋಕೆಮಿಕಲ್ ಎಂಜಿನಿಯರಿಂಗ್‍ನ ಎಸ್‍ಸಿಟಿಸಿಇ ಬ್ಯಾಚ್‍ನಲ್ಲಿದ್ದ ಇವರ ಸಹಪಾಠಿಗಳಿಗೂ ಏನಾದ್ರೂ ಮಾಡಬೇಕೆಂಬ ಕನಸು ಮತ್ತು ಉತ್ಸಾಹಗಳಿತ್ತು. ಅದರಂತೆ ಎಲ್ಲರೂ ಹುಡುಗಿಯರೇ ಸೇರಿ ಜೈವಿಕ ತಂತ್ರಜ್ಞಾನ ಮತ್ತು ಜೀವರಾಸಾಯನಿಕ ವಲಯದ ಮೊದಲ ಕಂಪನಿ ಏಕಾ ಬಯೋಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್‍ಅನ್ನು ಕೇರಳದ ತ್ರಿವಂಡ್ರಮ್‍ನಲ್ಲಿ ಪ್ರಾರಂಭಿಸಿದ್ರು.

image


ಜೈವಿಕ ತಂತ್ರಜ್ಞಾನ, ಜೀವ ರಾಸಾಯನ ಹಾಗೂ ಕಿಣ್ವಕ ಉತ್ಪನ್ನಗಳು, ರಾಸಾಯನಿಕ ಉತ್ಪನ್ನಗಳು ಅಥವಾ ಜೈವಿಕ ಮೂಲದ ಸಾರಗಳ ಆರ್ಡರ್ ಪಡೆದು ಉತ್ಪಾದಿಸಿ ಪೂರೈಸುತ್ತದೆ. ಉತ್ಸಾಹಭರಿತ ಕೆಲಸ ಸ್ನೇಹೀ ವಾತಾವರಣ ಸೃಷ್ಟಿಸುವ ಮೂಲಕ ಕ್ರಿಯಾತ್ಮಕ, ಟೀಮ್‍ವರ್ಕ್, ನಾವೀನ್ಯತೆ ಹಾಗೂ ಒಗ್ಗಟ್ಟಾಗಿ ಎಲ್ಲರೂ ಕೆಲಸ ಮಾಡುತ್ತಿರುವುದೇ ಏಕಾ ಯಶಸ್ಸಿನ ಗುಟ್ಟು ಅಂತಾರೆ ಆದ್ರ್ರ. ‘ಇದರಿಂದ ಬೇಡಿಕೆಗೆ ತಕ್ಕಂತೆ ಉತ್ಪಾದನೆಯೂ ಹೆಚ್ಚುತ್ತದೆ ಹಾಗೂ ಸಾಮಾನ್ಯ ಜನರಿಗೆ ಸಹಾಯವಾಗುತ್ತದೆ’ ಅಂತಾರೆ ಅವರು.

ತಂಡದ ಪ್ರಮುಖ ಸದಸ್ಯರು

ಆದ್ರ್ರ ಮತ್ತು ಗಾಯತ್ರಿ ಇಬ್ಬರೂ ತ್ರಿವೆಂಡ್ರಮ್‍ನ ಎಸ್‍ಸಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್‍ನಲ್ಲಿ ಜೈವಿಕ ತಂತ್ರಜ್ಞಾನ ಮತ್ತು ಜೀವರಾಸಾಯನ ಶಿಲ್ಪಶಾಸ್ತ್ರಗಳಲ್ಲಿ ಪದವಿ ಪಡೆದಿದ್ದಾರೆ. ನಂತರ ಆದ್ರ್ರ ಸ್ಕಾಲರ್‍ಶಿಪ್‍ನಲ್ಲಿ ಬ್ರಿಟನ್‍ನ ವಾರ್‍ವಿಕ್ ಬ್ಯುಸಿನೆಸ್ ಸ್ಕೂಲ್‍ನಲ್ಲಿ ಮ್ಯಾನೇಜ್ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆದ್ರ್ರ ಮತ್ತು ಗಾಯತ್ರಿ ಇಬ್ಬರಿಗೂ ಉತ್ಪನ್ನ ನಿರ್ವಹಣೆ ಮತ್ತು ಮಾರ್ಕೆಟಿಂಗ್ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ಬಯೋಮೆಡಿಕಲ್ ಮಾರ್ಕೆಟಿಂಗ್‍ಗಳಲ್ಲಿ ಕೆಲಸ ಮಾಡಿದ ಅನುಭವವಿದೆ.

image


ಏಕಾ ಕಂಪನಿಯ ವೈಜ್ಞಾನಿಕ ತಂಡದ ಮುಖ್ಯಸ್ಥರಾಗಿ ನಿಧಿನ್ ಶ್ರೀಕುಮಾರ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಅವರು ಕ್ಯಾಲಿಕಟ್‍ನ ಎನ್‍ಐಟಿಯಲ್ಲಿ ಪಿಎಚ್‍ಡಿ ಓದುತ್ತಿದ್ದಾರೆ. ಹಾಗೇ ನಿಧಿನ್ ಎನ್‍ಐಐಎಸ್‍ಟಿ- ಸಿಎಸ್‍ಐಆರ್‍ನಲ್ಲಿ ಹಿರಿಯ ಸಂಶೋಧನಾ ಸದಸ್ಯರೂ ಆಗಿದ್ದಾರೆ. ಎಸ್‍ಸಿಟಿಸಿಇಯಲ್ಲಿ ಜೈವಿಕ ತಂತ್ರಜ್ಞಾನ ಮತ್ತು ಬಯೋಕೆಮಿಕಲ್ ಎಂಜಿನಿಯರಿಂಗ್‍ನಲ್ಲಿ ಬಿಟೆಕ್ ಪದವಿ ಪಡೆದ ಬಳಿಕ ಅವರು ಮಣಿಪಾಲ್ ವಿಶ್ವವಿದ್ಯಾಲಯದಲ್ಲಿ ಕೈಗಾರಿಕಾ ಜೈವಿಕ ತಂತ್ರಜ್ಞಾನದಲ್ಲಿ ಎಂಟೆಕ್ ಶಿಕ್ಷಣ ಪೂರ್ಣಗೊಳಿಸಿದರು. ‘ನಮ್ಮ ಗುರು ಮತ್ತು ವೈಜ್ಞಾನಿಕ ಸಲಹೆಗಾರ ವಿ.ಪಿ. ಪಾಟಿ ಅವರಿಗೆ ರೀಸರ್ಚ್‍ನಲ್ಲಿ 42 ವರ್ಷಗಳ ಅನುಭವವಿದೆ. ಹಾಗೇ ಅವರು ನೂರಕ್ಕೂ ಹೆಚ್ಚು ಸಂಶೋಧನಾ ಪೇಪರ್‍ಗಳನ್ನು ಪ್ರಕಟಿಸಿದ್ದಾರೆ.’ ಅಂತ ಹೇಳುತ್ತಾರೆ ಆದ್ರ್ರ.

ಸವಾಲುಗಳು ಮತ್ತು ಅಡೆತಡೆಗಳು

ಕೆಲ ಜೈವಿಕ ತಂತ್ರಜ್ಞಾನ ಸ್ಟಾರ್ಟಅಪ್‍ಗಳಿರುವ ಕೇರಳದಲ್ಲಿ ಬಯೋಟೆಕ್ ಕಂಪನಿಯನ್ನು ಪ್ರಾರಂಭಿಸಬೇಕೆಂದರೂ ಹಲವು ಸವಾಲುಗಳಿವೆ. ಅದರಲ್ಲಿ ಪ್ರಮುಖವಾದುದು ಕಚೇರಿ ಛಾನಸ ಅಥವಾ ರೆಡ್ ಟೇಪ್. ಜೊತೆಗೆ ನಮ್ಮ ಸಂಸ್ಥೆಗೆ ಪರವಾನಗಿ ಪಡೆಯಲು ಕಾನೂನು ಹಾಗೂ ನಿಯಂತ್ರಕ ಪ್ರಕ್ರಿಯೆಗಳ ಕುರಿತು ಮಾಹಿತಿ ನೀಡಲು ಸರಿಯಾದ ವ್ಯವಸ್ಥೆಯಿಲ್ಲದಿದ್ದುದೂ ಪ್ರಮುಖವಾಗಿ ಕಾಡಿದ ಸಮಸ್ಯೆ ಅಂತಾರೆ ಆದ್ರ್ರ. ‘ಆದ್ರೂ ಮಾರ್ಗದರ್ಶಕರು, ಗುರುಗಳು ಹಾಗೂ ಸ್ಥಳೀಯ ಆಡಳಿತಗಾರರು ನಮ್ಮನ್ನು ಬೆಂಬಲಿಸಿದ್ರು. ಅನುಭವಿಗಳ ಸಲಹೆಗಳ ಮೂಲಕ ನಾವು ಪ್ರಾರಂಭದಲ್ಲಿ ಎದುರಿಸಿದ ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಯ್ತು’ ಅಂತ ತಮ್ಮ ಅನುಭವಗಳನ್ನು ಹಂಚಿಕೊಳ್ತಾರೆ ಆದ್ರ್ರ. ಸಂಬಂಧಪಟ್ಟ ಅಧಿಕಾರಿಗಳು, ಗ್ರಾಹಕರು ಹಾಗೂ ಸಾಮಾನ್ಯ ಜನರೊಂದಿಗೆ... ಹೀಗೆ ಬಹುತೇಕ ಪುರುಷರೊಂದಿಗೆ ವ್ಯವಹರಿಸಬೇಕಾದ ಕಾರಣ ಮೊದಲು ಭಯವಿತ್ತಾದ್ರೂ, ಮಾತುಕತೆ ನಡೆಸುವಾಗ ಯಾವುದೇ ಸಮಸ್ಯೆ ಉಂಟಾಗಲಿಲ್ಲ ಅಂತ ಸಮಾಧಾನದ ನಿಟ್ಟುಸಿರುಬಿಡ್ತಾರೆ ಆದ್ರ್ರ.

‘ಹಾಗಂತ ನಮ್ಮ ಪಯಣ ತುಂಬಾ ಸುಖಕರವಾಗಿತ್ತು ಅಂತೇನಲ್ಲ. ಯಾಕಂದ್ರೆ ಕೆಲವು ಬಾರಿ ಒಬ್ಬೊಬ್ಬರು ನಮಗೆ ಏನೇನೋ ಪ್ರಶ್ನೆಗಳನ್ನು ಕೇಳಿ ಇರುಸು ಮುರುಸು ಉಂಟು ಮಾಡುತ್ತಿದ್ದರು. ನಿಮ್ಮ ಹಿಂದೆ ಯಾರಿದ್ದಾರೆ? ಕೇವಲ ಇಬ್ಬರು ಹುಡುಗಿಯರೇ ಒಂದು ಉದ್ಯಮ ನಡೆಸ್ತಾರೆ ಅಂದ್ರೆ ನನಗೆ ನಂಬೋಕೆ ಆಗ್ತಿಲ್ಲ ಅಂತೆಲ್ಲಾ ಹೇಳುತ್ತಿದ್ದರು. ಆದ್ರೆ ನಾವು ಅದನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ’ ಅಂತ ನಗುತ್ತಾರೆ ಆದ್ರ್ರ.

ಸೌಲಭ್ಯಗಳು ಮತ್ತು ಉತ್ಪನ್ನಗಳ ನಿರ್ಮಾಣ

2014ರ ಅಕ್ಟೋಬರ್ 3ರಂದು ಏಕಾ ತನ್ನ ಕಾರ್ಯಾಚರಣೆ ಪ್ರಾರಂಭಿಸಿತು. ಇನ್ನು ನವೆಂಬರ್ ತಿಂಗಳಿನಲ್ಲೇ ಏಕಾ, ಕೇರಳ ಹಣಕಾಸು ಕಾರ್ಪೊರೇಷನ್ ಸಹಭಾಗಿತ್ವದಲ್ಲಿ ಕೇರಳ ರಾಜ್ಯ ಆಯೋಜಿಸಿದ್ದ ಸರ್ಕಾರ ಕೇರಳ ರಾಜ್ಯ ಉದ್ಯಮಾಭಿವೃದ್ಧಿ ಮಿಷನ್ ಸ್ಕೀಮ್‍ಗೆ ಆಯ್ಕೆಯಾಯ್ತು.

ಆದ್ರ್ರ ಅವರ ಪ್ರಕಾರ ಅದು ಏಕಾ ಪಾಲಿಗೆ ಅತಿದೊಡ್ಡ ಮೈಲಿಗಲ್ಲಾಗಿತ್ತು. ಅದಕ್ಕೆ ಕಾರಣ ಏಕಾ ಪ್ರಾರಂಭವಾದಾಗಿನಿಂದ ಅದೇ ಮೊದಲ ಬಾರಿಗೆ ಕಂಪನಿಗೆ ಹೊರಗಡೆಯಿಂದ ಬಂಡವಾಳ ಹರಿದುಬರತೊಡಗಿತು. ನಂತರ ಇದೇ ವರ್ಷ ಜನವರಿಯಲ್ಲಿ ಏಕಾ ತಂಡ ಅವರದೇ ಸ್ವಂತ ಲ್ಯಾಬೊರೇಟರಿ ಪ್ರಾರಂಭಿಸಲು ಮುಂದಾಯ್ತು. ಜೊತೆಗೆ ತ್ರಿವೆಂಡ್ರಮ್‍ನ ವಾಳುತಕಾಡ್‍ನ ಘಟಕದಲ್ಲಿ ಸಣ್ಣ ಮಟ್ಟದಲ್ಲಿ ಉತ್ಪಾದನೆಯನ್ನೂ ಪ್ರಾರಂಭಿಸಿತು. ಏಕಾ ಕಂಪನಿಯ ಆಳುತಕಾಡ್ ಸೌಲಭ್ಯವು ಪೂರ್ಣ ಪ್ರಮಾಣದ ಆದ್ರ್ರ ಪ್ರಯೋಗಾಲಯ, ಮೂಲ ವಿಶ್ಲೇಷಣಾತ್ಮಕ ಪ್ರಯೋಗಾಲಯ, ಪೈಲಟ್ ಪ್ರಮಾಣದ ಜೀವರಾಸಾಯನಿಕ ಉತ್ಪಾದನಾ ಘಟಕವನ್ನು ಹೊಂದಿದೆ.

image


ಇನ್ನು ಇದೇ ಫೆಬ್ರವರಿಯಲ್ಲಿ ಅವರು ಮಾರುಕಟ್ಟೆ ಪ್ರಕ್ರಿಯೆಗಳು ಮತ್ತು ಮಾರುಕಟ್ಟೆ ಸಂಶೋಧನೆಗೆ, ಏಕಾ ಲ್ಯಾಬ್ಸ್ ಎಂಬ ಮಾರುಕಟ್ಟೆ ವಿಭಾಗವನ್ನು ಪ್ರಾರಂಭಿಸಿದ್ರು. ಜಗತಿಯಲ್ಲಿ ಕಚೇರಿ ಹೊಂದಿರುವ ಏಕಾ ಲ್ಯಾಬ್ಸ್, ಕಂಪನಿಯ ಜೈವಿಕ ಉತ್ಪನ್ನಗಳನ್ನು ಪ್ರಚಾರ ಮಾಡುತ್ತದೆ.

2015ರ ಜೂನ್ 1ರಂದು, ಕಂಪನಿಯಲ್ಲಿ ಹೊಸದಾಗಿ ಸ್ಥಾಪಿಸಲಾದ ವೈಜ್ಞಾನಿಕ ಕಾರ್ಯಗಳಿಗೆ ಡಾ. ವಿ.ಪಿ. ಪಾಟಿ ಚಾಲನೆ ನೀಡಿದರು. ‘ನಗರದ ಹೃದಯಭಾಗದಲ್ಲಿರುವ ಏಕಾದ ವಾಳುತಕಾಡ್ ಸೌಲಭ್ಯದಲ್ಲಿ ಪರಿಸರಸ್ನೇಹಿ, ಮಾಲಿನ್ಯ ರಹಿತ, ಹಸಿರು ಭರಿತ, ಹಾಗೂ ಶೂನ್ಯ ತ್ಯಾಜ್ಯ ಜಲ ವಲಯವನ್ನು ಸೃಷ್ಟಿಸಲಾಗಿದೆ. ಪ್ರಯೋಗಾಲಯ ಮತ್ತು ಉತ್ಪಾದನಾ ಘಟಕಗಳಲ್ಲಿ ಸೂಕ್ಷ್ಮಜೀವ, ಜೈವಿಕ ತಂತ್ರಜ್ಞಾನ, ಗುಣಮಟ್ಟ ನಿಯಂತ್ರಣ ಮತ್ತು ರಾಸಾಯನಿಕಗಳನ್ನು ಉತ್ಪಾದಿಸಲಾಗುತ್ತಿದೆ’ ಅಂತಾರೆ ಆದ್ರ್ರ.

ಇದೇ ಜುಲೈನಲ್ಲಿ ಸಸ್ಯ ಶ್ರೇಣಿಯ ಉತ್ಪನ್ನಗಳ ಉತ್ಪಾದನೆ ಮತ್ತು ಪರೀಕ್ಷಾ ಕೆಲಸಗಳನ್ನೂ ಪ್ರಾರಂಭಿಸಲಾಗಿದೆ.

ಸೆಪ್ಟೆಂಬರ್‍ನಲ್ಲಿ ಹೊಸ ಸುಸಜ್ಜಿತ ವೆಬ್‍ಸೈಟ್‍ಗೂ ಚಾಲನೆ ನೀಡಲಾಗಿದೆ. ಈ ಮೂಲಕ ಆನ್‍ಲೈನ್ ಮತ್ತು ಸಾಮಾಜಿಕ ಅಂತರ್ಜಾಲ ತಾಣಗಳಲ್ಲೂ ತಮ್ಮ ಇರುವಿಕೆಯನ್ನು ಇತರರಿಗೆ ಗೊತ್ತುಪಡಿಸಿದ್ದಾರೆ. 2015ರ ಅಕ್ಟೋಬರ್‍ನಲ್ಲಿ ಏಕಾ ಮೊಟ್ಟ ಮೊದಲ ಶ್ರೇಣಿಯ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಸಸ್ಯಾ ಸರಣಿಯಲ್ಲಿ ಜೀವಗಳನ್ನು ಸುರಕ್ಷಿತ ಹಾಗೂ ರಾಸಾಯನಿಕ ರಹಿತ ಕೃಷಿಗೆ ಸಹಕಾರಿಯಾಗುವ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಈ ಶ್ರೇಣಿಯಲ್ಲಿ ನಿರ್ದಿಷ್ಟ ಬೆಳೆಗಳನ್ನು ಗುರಿಯಾಗಿಸಿಕೊಂಡು ವಿಶೇಷ ಸೂತ್ರಗಳಿಂದ ತಯಾರಿಸಿದ, ಸಸ್ಯ ಸೂತ್ರ, ಸಸ್ಯ ಮಿತ್ರ, ಸಸ್ಯ ರಕ್ಷಾ, ಸಸ್ಯ ಪೋಷಕ್ ಮತ್ತು ಸಸ್ಯ ಪೋಷಕ್ ಪ್ಲಸ್ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ.

ತಂಡ ಮತ್ತು ಅದರ ಗುರಿ

ಒಂದು ತಂಡವಾಗಿ ಏಕಾ ಪ್ರಕೃತಿಗೆ ಮೊದಲ ಆದ್ಯತೆ ನೀಡುತ್ತದೆ. ಸ್ಥಳೀಯ ಸಮುದಾಯದ ಬೇಡಿಕೆಗಳನ್ನು ಪೂರೈಸುವುದು ಅದರ ಎರಡನೆಯ ಆದ್ಯತೆ. ಏಕಾದಲ್ಲಿ ಪರೀಕ್ಷಿಸಿ, ಬಿಡುಗಡೆ ಮಾಡಿದ ಉತ್ಪನ್ನಗಳನ್ನು ಹೆಚ್ಚಿನ ಮಟ್ಟದಲ್ಲಿ ಜನರಿಗೆ ಮುಟ್ಟಿಸುವುದು ನಮ್ಮ ಮೂರನೆಯ ಆದ್ಯತೆ ಅಂತಾರೆ ಆದ್ರ್ರ.

‘ಸಾಮಾಜಿಕ ಮತ್ತು ಪ್ರಾಕೃತಿಕ ಅವಶ್ಯಗಳಿಗೆ ಪರಿಹಾರ ಕಂಡುಹಿಡಿಯುವುದು ಮತ್ತು ಆ ಮೂಲಕ ಅದನ್ನು ಬಗೆಹರಿಸುವುದು ನಮ್ಮ ಉದ್ದೇಶ. ಸಣ್ಣ ಮಟ್ಟದಲ್ಲಿ ಪ್ರಾರಂಭಿಸುವುದು ನಮ್ಮ ಪ್ರಜ್ಞಾಪೂರ್ವಕ ನಿರ್ಧಾರವಾಗಿತ್ತು. ಆ ಮೂಲಕ ತ್ಯಾಜ್ಯದ ಉತ್ಪಾದನೆ ಮತ್ತು ಅನವಶ್ಯಕ ವಿದ್ಯುತ್ ನಷ್ಟವಾಗುವುದನ್ನು ತಪ್ಪಿಸಲು ಶಕ್ತಿಮೀರಿ ಪ್ರಯತ್ನಿಸಲು ಸಾಧ್ಯವಾಯ್ತು. ಹಸಿರಿಗೆ ಹಾಗೂ ಪರಿಸರಕ್ಕೆ ಯಾವುದೇ ಧಕ್ಕೆ ಮಾಡದೇ ಗರಿಷ್ಠ ಮಟ್ಟದಲ್ಲಿ ಸಮಾಜಕ್ಕೆ ಕೊಡುಗೆ ನೀಡುವುದು ನಮ್ಮ ಪ್ರಯತ್ನವಾಗಿದೆ’ ಅಂತ ಮಾತನ್ನು ಮುಂದುವರೆಸುತ್ತಾರೆ ಆದ್ರ್ರ.

ಆದಾಯ ಮಾದರಿ ಮತ್ತು ಭವಿಷ್ಯ

ಉತ್ಪಾದನಾ ಮಾದರಿಯನ್ನೇ ತನ್ನ ಆದಾಯ ಮಾದರಿಯನ್ನಾಗಿ ಅಳವಿಡಿಸಕೊಂಡಿದೆ ಏಕಾ. ಇಲ್ಲಿ ತಾನು ಉತ್ಪಾದಿಸಿದ ಉತ್ಪನ್ನಗಳನ್ನು, ಕಂಪನಿ ಗುರಿಯಾಗಿಸಿಕೊಂಡಿರುವ ಗ್ರಾಹಕರಿಗೆ ಮಾರಾಟ ಮಾಡುತ್ತದೆ. ಆ ಮೂಲಕ ಆದಾಯ ಗಳಿಸುತ್ತದೆ. ಮೊದಲ ವರ್ಷ ಏಕಾ ವಿವಿಧ ರೀತಿಯ ಸೌಲಭ್ಯಗಳ ಸ್ಥಾಪನೆಯತ್ತ ಹೆಚ್ಚು ಗಮನ ಹರಿಸಿದೆ.

ಈಗ ತನ್ನ ಕಂಪನಿಯಲ್ಲಿನ ಉತ್ಸಾಹೀ ತಂಡ ಹಾಗೂ ಅನುಭವೀ ಸಲಹೆಗಾರರ ಬೆಂಬಲದೊಂದಿಗೆ ಏಕಾ ಭವಿಷ್ಯದಲ್ಲಿ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಹಸಿರು ಸ್ನೇಹೀ ವಾತಾವರಣ ನಿರ್ಮಾಣ ಹಾಗೂ ಜಲತ್ಯಾಜ್ಯ ರಹಿತ ಘಟಕಗಳನ್ನು ನಿರ್ಮಿಸುವತ್ತ ಮತ್ತು ಸ್ಥಳೀಯ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ಪೂರೈಸುವ ಜೊತೆಗೆ ಜಾಗತಿಕ ಮಟ್ಟದ ಗ್ರಾಹಕರಿಗೂ ತಮ್ಮ ಉತ್ಪನ್ನಗಳನ್ನು ಪೂರೈಸಲು ಚಿಂತನೆ ನಡೆಸಿದೆ.

ಲೇಖಕರು: ಸಿಂಧೂ ಕಶ್ಯಪ್​​

ಅನುವಾದಕರು: ವಿಶಾಂತ್​​