`ಮುತ್ತಿನಂಥ' ಸಾಧಕಿ ಪಿಯಾ ಸಿಂಗ್

ಟೀಮ್​ ವೈ.ಎಸ್​.

0

ಛಲವೊಂದಿದ್ರೆ ಸಾಧನೆ ಸವಾಲೇ ಅಲ್ಲ ಅನ್ನೋ ಮಾತಿದೆ. ಇದಕ್ಕೆ ಉತ್ತಮ ಉದಾಹರಣೆ ಅಂದ್ರೆ ಪಿಯಾ ಸಿಂಗ್. ಇವರ ಸಾಧನೆಯ ಶಿಖರಕ್ಕೆ ಮೆಟ್ಟಿಲಾಗಿದ್ದು ಮುತ್ತಿನ ಹರಗಳು. ಅಜ್ಜಿ ಹಾಗೂ ತಾಯಿಯ ಕತ್ತು ಮತ್ತು ಕಿವಿಯಲ್ಲಿ ಮಿನುಗುತ್ತಿದ್ದ ಮುತ್ತುಗಳೇ ಪಿಯಾ ಸಿಂಗ್‍ರ ಯಶಸ್ವಿ ಬದುಕಿಗೆ ಸ್ಪೂರ್ತಿ. ಯಶಸ್ವಿ ಆಭರಣ ಉದ್ಯಮಿ ಎನಿಸಿಕೊಂಡಿರುವ ಪಿಯಾ ಸಿಂಗ್ ಅವರ ಸಾಧನೆಯ ಹಾದಿಯಂತೂ ಕುತೂಹಲಕಾರಿಯಾಗಿದೆ. ಪಿಯಾ ಸಿಂಗ್ ಹುಟ್ಟಿದ್ದು ದೆಹಲಿಯಲ್ಲಿ. ಹೈದ್ರಾಬಾದ್, ಚೆನ್ನೈ, ಬೆಂಗಳೂರು, ಗೋವಾ, ದೆಹಲಿ ಹೀಗೆ ಹಲವೆಡೆ ಪಿಯಾ ತಮ್ಮ ಬಾಲ್ಯವನ್ನು ಕಳೆದರು. ಕಸೌಲಿ ಬಳಿಯ ಬೋರ್ಡಿಂಗ್ ಶಾಲೆಯಲ್ಲೂ ಪಿಯಾ ಬಾಲ್ಯದ ಶಿಕ್ಷಣ ಪಡೆದರು. ಪಿಯಾ ಅವರದ್ದು ಶ್ರೀಮಂತ ಬಾಲ್ಯವೇ. ಯಾಕಂದ್ರೆ ಬೇಸಿಗೆ ರಜೆ ಬಂದಾಗಲೆಲ್ಲ ಪಿಯಾ ಲಂಡನ್ ಹಾಗೂ ಯುರೋಪ್ ರಾಷ್ಟ್ರಗಳಲ್ಲಿ ಸುತ್ತಾಡುತ್ತಿದ್ದರು. ದಕ್ಷಿಣ ಭಾರತದಲ್ಲಿ ನೆಲೆಸಿದ್ದಾಗ್ಲೇ ಪಿಯಾ ಸಿಂಗ್‍ರ ಚಿತ್ತ ಕಲೆಯತ್ತ ಆಕರ್ಷಿತವಾಗಿತ್ತು. ತಂಜಾವೂರ್ ಪೇಂಟಿಂಗ್ ಹಾಗೂ ಭರತನಾಟ್ಯವನ್ನ ಆಗಲೇ ಪಿಯಾ ಅಭ್ಯಾಸ ಮಾಡಿದ್ದರು. ಪಿಯಾ ಉನ್ನತ ಶಿಕ್ಷಣವನ್ನ ಪೂರೈಸಿದ್ದು ಯೂನಿವರ್ಸಿಟಿ ಕಾಲೇಜಿನಲ್ಲಿ. ಹಾಗಂತ ಅವರೇನು ದೂರದ ದೇಶದಲ್ಲಿ ನೆಲೆಯೂರಲಿಲ್ಲ. ಕಾರ್ಪೊರೇಟ್ ವಕೀಲೆಯಾಗುವ ಕನಸು ಹೊತ್ತು ತಮ್ಮ ತವರು ದೆಹಲಿಗೇ ಬಂದಿಳಿದ್ರು.

ಟ್ರೈ ಲೀಗಲ್, ಜೆಎಸ್‍ಎನಂಥ ಸಂಸ್ಥೆಗಳಲ್ಲಿ ವಕೀಲೆಯಾಗಿ ಕೆಲಸ ಮಾಡಿದ ಅನುಭವ ಪಿಯಾ ಸಿಂಗ್ ಅವರಿಗಿದೆ. 8 ವರ್ಷಗಳ ಕಾಲ ವಕೀಲೆಯಾಗಿ ಕರ್ತವ್ಯ ನಿರ್ವಹಿಸಿದ ಪಿಯಾ ಅವರ ಮನದಲ್ಲಿ ಮಿಂಚೊಂದು ಹೊಳೆದಿತ್ತು. ಅದೇ ಮುತ್ತುಗಳ ಉದ್ಯಮ. 2014ರಲ್ಲಿ ಪಿಯಾ ಸಿಂಗ್ ಮುತ್ತುಗಳ ಆಭರಣ ಉದ್ಯಮವನ್ನ ಆರಂಭಿಸಿಯೇಬಿಟ್ಟರು. ಅಲ್ಲಿಂದ ಇಲ್ಲಿಯವರೆಗೂ ಪಿಯಾ ಹಿಂತಿರುಗಿ ನೋಡಿಲ್ಲ. ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ವಕೀಲೆಯಾಗಿ ಕೆಲಸ ಮಾಡಿದ 8 ವರ್ಷಗಳ ಅನುಭವವೇ ಆಭರಣ ಉದ್ಯಮದ ಯಶಸ್ಸಿಗೆ ಕಾರಣ ಎನ್ನುತ್ತಾರೆ ಅವರು. ಪಿಯಾ ಸಿಂಗ್‍ರ ಆಭರಣ ಸಂಸ್ಥೆ ಅಂತಿಂಥದ್ದಲ್ಲ. ಇಲ್ಲಿ ನೈಜ ಹಾಗೂ ಉತ್ಕೃಷ್ಟ ಗುಣಮಟ್ಟದ ಮುತ್ತಿನ ಆಭರಣ ಗ್ರಾಹಕರಿಗೆ ದೊರೆಯುತ್ತದೆ. ಈ ವಿಶ್ವಾಸವನ್ನು ಕಾಪಾಡಿಕೊಂಡು ಹೋಗಲು ಖುದ್ದು ಪಿಯಾ ಅವರೇ ಶ್ರಮಿಸುತ್ತಾರೆ. ತಾವೇ ಹೋಗಿ ಅಸಲಿ ಮುತ್ತುಗಳನ್ನ ಆಯ್ದು ಖರೀದಿಸುತ್ತಾರೆ. ಗ್ರಾಹಕರಿಗೆ ನೈಜ ಹಾಗೂ ಪರಿಶುದ್ಧ ಆಭರಣಗಳ ಬಗ್ಗೆ ಪಿಯಾ ಅವರ ಕಂಪನಿ ಪ್ರಮಾಣ ಪತ್ರವನ್ನು ಕೂಡ ನೀಡುತ್ತದೆ. ಅಷ್ಟೇ ಅಲ್ಲ 30 ದಿನಗಳ ಮರುಪಾವತಿ ಅವಕಾಶವೂ ಇದೆ. ಹಾಗಾಗಿ ಮುತ್ತಿನಾಭರಣ ಕೊಳ್ಳಲು ಗ್ರಾಹಕರು ಹಿಂದೇಟು ಹಾಕಬೇಕಾಗಿಯೇ ಇಲ್ಲ. ಸದ್ಯ ಆನ್‍ಲೈನ್‍ನಲ್ಲಿ ಮಾರಾಟವಿದ್ದು, ಮನೆಗೆ ತಲುಪಿಸುವ ಸೌಲಭ್ಯವೂ ಇದೆ. ಆಭರಣವನ್ನು ಒಮ್ಮೆ ಧರಿಸಿ ಇಷ್ಟವಾದಲ್ಲಿ ಮಾತ್ರ ಗ್ರಾಹಕರು ಖರೀದಿಸಬಹುದು.

ಪಿಯಾ ಸಿಂಗ್ ಮೊದಮೊದಲು ಆಭರಣಗಳ ಗುಣಮಟ್ಟ ಪರೀಕ್ಷೆ ಹಾಗೂ ಸಿಬ್ಬಂದಿಗೆ ತರಬೇತಿ ನೀಡುವುದರಲ್ಲೇ ಬ್ಯುಸಿಯಾಗಿರುತ್ತಿದ್ದರು. ವಿಶೇಷ ಅಂದ್ರೆ ಹತ್ತಾರು ನೌಕರರಿಗೆ ಉದ್ಯೋಗ ನೀಡಿದ ಕೀರ್ತಿಯೂ ಇವರಿಗೇ ಸಲ್ಲುತ್ತದೆ. ಪಿಯಾ ಸಿಂಗ್ ಅವರ ಸಂಸ್ಥೆಯಲ್ಲಿ ಉತ್ಪಾದನಾ ವಿಭಾಗದಲ್ಲೇ 10ಕ್ಕೂ ಹೆಚ್ಚು ಕೆಲಸಗಾರರಿದ್ದಾರೆ. ಉಳಿದ ಮೂವರು ಪಿಯಾರ ವ್ಯಾಪಾರಕ್ಕೆ ಸಾಥ್ ಕೊಡುತ್ತಿದ್ದಾರೆ. ಮುತ್ತುಗಳ ವಿನ್ಯಾಸ ಹಾಗೂ ಸ್ಟೈಲಿಂಗ್‍ನಲ್ಲಿ ಪಿಯಾರನ್ನ ಮೀರಿಸುವವರೇ ಇಲ್ಲ. ಭಾರತದಲ್ಲಿ ಆಭರಣ ಉದ್ಯಮವನ್ನು ಆಳುತ್ತಿರುವವರು ಪುರುಷರು. ಅಂಥದ್ರಲ್ಲಿ ಮಹಿಳೆಯೊಬ್ಬಳು ಏಕಾಂಗಿ ಮುತ್ತಿನ ಉದ್ದಿಮೆ ನಡೆಸುತ್ತಿದ್ದಾಳೆ ಎಂದರೆ ನಿಜಕ್ಕೂ ಶಾಘನೀಯ ಸಂಗತಿ. ಪಿಯಾ ಸಿಂಗ್ ವ್ಯವಹಾರದಲ್ಲಿ ಎದುರಾಗುವ ಸಮಸ್ಯೆಗಳನ್ನ ಎದುರಿಸಲು ಮೊದಲೇ ಸಜ್ಜಾಗಿದ್ದರು. ಏಕಾಂಗಿಯಾಗೇ ಸವಾಲುಗಳನ್ನ ಸ್ವೀಕರಿಸಿದ ಪಿಯಾ ಯಾವುದಕ್ಕೂ ಧೃತಿಗೆಡಲಿಲ್ಲ. ಅಪಾರ ಬಂಡವಾಳವನ್ನು ಹೂಡಿದ್ದರೂ ಕಂಗೆಟ್ಟು ಕೂರಲಿಲ್ಲ. ಪಿಯಾ ಅವರಿಗೆ ಬಹುದೊಡ್ಡ ಸವಾಲಾಗಿದ್ದು ನಂಬರ್ ಗೇಮ್. ಹಿಂದಿಯಲ್ಲಿ ಪಿಯಾರಿಗೆ ಎಣಿಕೆ ಸರಿಯಾಗಿ ಬರುತ್ತಿರಲಿಲ್ಲ. ಹಾಗಾಗಿ ಅಳತೆ ಮತ್ತು ಲೆಕ್ಕದಲ್ಲಿ ಸ್ಥಳೀಯ ವ್ಯಾಪಾರಿಗಳು ಪಿಯಾ ಅವರನ್ನ ವಂಚಿಸುವ ಸಾಧ್ಯತೆಯಿತ್ತು. ಆದರೆ ಭಾಷಾಂತರದ ಮೊರೆ ಹೋದ ಪಿಯಾ ಮುತ್ತುಗಳ ವ್ಯಾಪಾರ ವಹಿವಾಟಿನಲ್ಲಿ ಜೀನಿಯಸ್ ಎನಿಸಿಕೊಂಡರು.

ಪಿಯಾ ಸಿಂಗ್‍ರ ಈ ಸಾಧನೆಗೆ ಬೆನ್ನೆಲುಬಾಗಿ ನಿಂತವರು ಅವರ ಕುಟುಂಬ ಮತ್ತು ಸ್ನೇಹಿತರು. ವಕೀಲ ವೃತ್ತಿ ಬಿಟ್ಟು ಆಭರಣ ಉದ್ಯಮ ಆರಂಭಿಸುತ್ತೇನೆಂದ ಪಿಯಾರಿಗೆ ತಂದೆ ತಾಯಿಯೇ ಬೆನ್ನುತಟ್ಟಿ ಪ್ರೋತ್ಸಾಹಿಸಿದರು. ಸ್ನೇಹಿತರು ಕೂಡ ಅವರಾಸೆಗೆ ನೀರೆರೆದು ಪೋಷಿಸಿದರು. ಇವರೆಲ್ಲರ ಹಾರೈಕೆ ಮತ್ತು ಪ್ರೋತ್ಸಾಹದ ಫಲವೇ ಈ ಯಶಸ್ಸು. ಇನ್ನು ಮುತ್ತುಗಳ ವಿನ್ಯಾಸ ಮತ್ತು ವಿವಿಧತೆಯಲ್ಲಿ ಪಿಯಾರ ಸಂಸ್ಥೆಯೇ ಅಪ್ರತಿಮ. ಗ್ರಾಹಕರಿಂದ್ಲೂ ಪಿಯಾರಿಗೆ ಅದ್ಭುತವಾದ ಪ್ರತಿಕ್ರಿಯೆ ಸಿಗುತ್ತಿದೆ. ಬಾಲ್ಯದಲ್ಲೇ ಮುತ್ತುಗಳ ಬಗೆಗಿದ್ದ ಪ್ರೀತಿ ಪಿಯಾರನ್ನ ಯಶಸ್ಸಿನ ಉತ್ತುಂಗಕ್ಕೇರಿಸಿದೆ. ಆಭರಣ ಉದ್ಯಮದಲ್ಲಿ ಸೈ ಎನಿಸಿಕೊಂಡಿರುವ ಪಿಯಾ, ನಿಜಕ್ಕೂ ಮಾದರಿ ಮಹಿಳೆ. ರಾಷ್ಟ್ರರಾಜಧಾನಿ ದೆಹಲಿಯ ನಿಜವಾದ ಮುತ್ತು ಎಂದರೂ ತಪ್ಪಾಗಲಿಕ್ಕಿಲ್ಲ. ಬದುಕಿನಲ್ಲಿ ಯಶಸ್ಸು ಸಾಧಿಸಲು ಪ್ರಯತ್ನವೇ ಮೊದಲ ಹೆಜ್ಜೆ ಅನ್ನೋದನ್ನ ಪಿಯಾ ಸಿಂಗ್ ರುಜುವಾತು ಮಾಡಿದ್ದಾರೆ.

Related Stories

Stories by YourStory Kannada