ಸಾಂಪ್ರದಾಯಿಕ ಮತ್ತು ಸಮಕಾಲೀನತೆಯ ನಡುವಿನ ಸೇತುವೆ - ಬಂಧೇಜ್.ಕಾಮ್ 

ಟೀಮ್​ ವೈ.ಎಸ್​.ಕನ್ನಡ

0

ಆಕೆ ನ್ಯಾಶನಲ್ ಇನ್‍ಸ್ಟಿಟ್ಯೂಟ್ ಆಫ್ ಡಿಸೈನ್‍ನಲ್ಲಿ ಶಿಕ್ಷಣ ಪಡೆದ ಯುವ ಪದವೀಧರೆ. ಸಿನಿಮಾ ಹಾಗೂ ಥಿಯೇಟರ್‍ಗಳಿಗೆ ಕಾಸ್ಟ್ಯೂಮ್ ವಿನ್ಯಾಸ ಮಾಡ್ತಾ ಇದ್ರು. ಆದ್ರೆ ಅವರ ಗುರಿ ಮಾತ್ರ ಬೇರೆಯಾಗಿತ್ತು. ಉದ್ಯೋಗ ತ್ಯಜಿಸಿದ ಅರ್ಚನಾ ಶಾ ಸ್ವಂತ ಉದ್ಯಮಕ್ಕೆ ಕೈಹಾಕಿದ್ರು. ಕೈಗಳಿಂದ್ಲೇ ನೇಯ್ದ ವಿಶಿಷ್ಟ ಬಟ್ಟೆಗಳನ್ನು ನಗರಗಳಿಗೆ ಪರಿಚಯಿಸಿದ್ರು. ಅವರ ಉದ್ದೇಶ ಸರಳವಾಗಿತ್ತು, ಕುಶಲಕರ್ಮಿಗಳ ಜೊತೆ ಕೆಲಸ ಮಾಡುವುದು ಅವರ ಬಯಕೆ, ಇದರ ಉದ್ದೇಶ ವಿನಾಶದ ಅಂಚಿನಲ್ಲಿರುವ ಕಲೆಯನ್ನು ಉಳಿಸುವುದು ಮಾತ್ರವಲ್ಲ, ಆಧುನಿಕ ಮತ್ತು ವೇಗವಾಗಿ ಬದಲಾಗುತ್ತಿರುವ ವಿಶ್ವಕ್ಕೆ ಅವರ ಕಲೆಯನ್ನು ಪರಿಚಯಿಸುವುದು, ಆ ಮೂಲಕ ಯಶಸ್ವಿ ಉದ್ಯಮದೊಂದಿಗೆ ಏಳ್ಗೆ ಸಾಧಿಸುವುದು ಅವರ ಗುರಿ.

ಇದಕ್ಕಾಗಿಯೇ ಅರ್ಚನಾ ಶಾ, ಬಂಧೇಜ್ ಡಾಟ್ ಕಾಮ್ ಅನ್ನು ಆರಂಭಿಸಿದ್ದಾರೆ. ಇದು ಕೈಯಿಂದಲೇ ತಯಾರಿಸಿರುವ ಉಡುಪುಗಳನ್ನು ಮಾರಾಟ ಮಾಡ್ತಾ ಇರೋ ಭಾರತದ ಮೊದಲ ಡಿಸೈನರ್ ಲೇಬಲ್ ಮಳಿಗೆ. 1985ರಲ್ಲಿ ಅಹಮದಾಬಾದ್‍ನಲ್ಲಿ ಮೊದಲ ಮಳಿಗೆ ಆರಂಭವಾಗಿತ್ತು. ಅಲ್ಲಿ ಬೆಡ್ ಕವರ್, ಟೇಬಲ್ ಕ್ಲಾಥ್, ನ್ಯಾಪ್‍ಕಿನ್‍ಗಳನ್ನು ಮಾರಾಟ ಮಾಡಲಾಗ್ತಾ ಇತ್ತು. ಎರಡು ವರ್ಷಗಳ ಬಳಿಕ ಸೊಗಸಾದ, ಹೊಸ ಬಗೆಯ ಭಾರತದ ಸಾಂಪ್ರದಾಯಿಕ ವಸ್ತ್ರೋದ್ಯಮಕ್ಕೆ ಆಕಾರ ಕೊಡುವ ಕಾರ್ಯ ಆರಂಭವಾಯ್ತು. ವಿಶಿಷ್ಟ ಬಗೆಯ ಬಟ್ಟೆಗಳಿಂದ್ಲೇ ಬಂಧೇಜ್ ಒಳ್ಳೆಯ ಬ್ರಾಂಡ್ ಎನಿಸಿಕೊಂಡಿದೆ. ಅಹಮದಾಬಾದ್‍ನ ಸ್ಟುಡಿಯೋದಲ್ಲಿ ಧಿರಿಸುಗಳನ್ನೆಲ್ಲ ವಿನ್ಯಾಸ ಮಾಡಲಾಗುತ್ತೆ. ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧೆಡೆ ಬಟ್ಟೆಗಳನ್ನು ನೇಯಲಾಗುತ್ತದೆ. ``ಕೆಲವೊಂದು ಸೀರೆಗಳನ್ನು ಸಿದ್ಧ ಮಾಡಲು 6-8 ತಿಂಗಳು ಬೇಕಾಗುತ್ತೆ. ಕೇವಲ ಉತ್ಪನ್ನವನ್ನು ಮೆಚ್ಚಿಕೊಳ್ಳುವುದು ಮಾತ್ರವಲ್ಲ, ಅದರ ಉತ್ಪಾದನೆಯ ಹಿಂದಿನ ಶ್ರಮವನ್ನು ಕೂಡ ಗ್ರಾಹಕರು ಮೆಚ್ಚಿಕೊಳ್ಳಬೇಕು'' ಎನ್ನುತ್ತಾರೆ ಅರ್ಚನಾ.

ಇದನ್ನು ಓದಿ: ಕೈಗಾರಿಕಾ ಹಬ್ ಆಗುವತ್ತ ಶೈಕ್ಷಣಿಕ ನಗರಿ ತುಮಕೂರು

ಸ್ವಂತ ಉದ್ಯಮದಲ್ಲಿ ಎದುರಾಗುವ ಸವಾಲುಗಳು ಮತ್ತು ಅಪಾಯಗಳ ಬಗ್ಗೆ ಅರ್ಚನಾ ಭಯಪಡಲಿಲ್ಲ. ``ನನ್ನಲ್ಲಿ ಅದಮ್ಯ ಉತ್ಸಾಹವಿತ್ತು, ಕೆಲಸದಿಂದ ಸಿಗುವ ಸಂತೋಷ, ಅದರಲ್ಲಿರುವ ನಾವೀನ್ಯತೆಗೆ ನಾನು ಮಾರುಹೋಗಿದ್ದೇನೆ'' ಎನ್ನುತ್ತಾರೆ ಅರ್ಚನಾ. ಮೂರು ದಶಕಗಳ ಬಳಿಕವೂ ಇದು ಬದಲಾಗಿಲ್ಲ. ಅರ್ಚನಾ ಬಂಧೇಜ್‍ನ ಉತ್ಪನ್ನಗಳಲ್ಲಿ ತಾಜಾತನ, ಹೊಸತನ ಮತ್ತು ಸಂದರ್ಭಕ್ಕೆ ಹೆಚ್ಚು ಆದ್ಯತೆ ನೀಡ್ತಾರೆ. ಇಂಡಸ್ಟ್ರಿಯ ಅತ್ಯಂತ ಉತ್ತಮ ವಹಿವಾಟಿಗೆ ಹೆಸರಾದವರು ಆಕೆ. 90ರ ದಶಕದಲ್ಲಿ ಹೆಚ್ಹೆಚ್ಚು ಗ್ರಾಹಕರನ್ನು ತಲುಪಲು ಬಂಧೇಜ್, ಕ್ಯಾಟಲೊಗ್‍ಗಳನ್ನು ಬಿಡುಗಡೆ ಮಾಡಿತ್ತು. ನೂರಕ್ಕೂ ಹೆಚ್ಚು ನಗರಗಳಲ್ಲಿ ಈ ಕ್ಯಾಟಲೊಗ್‍ಗಳು ಅತ್ಯಂತ ಜನಪ್ರಿಯವಾಗಿದ್ದವು. ಪ್ರತಿ ರುತುವಿನಲ್ಲೂ 50,000 ಪ್ರತಿಗಳನ್ನು ಮುದ್ರಿಸಲಾಗ್ತಿತ್ತು, ಇವತ್ತಿಗೂ ಗ್ರಾಹಕರು ಅದನ್ನು ನೆನಪಿಸಿಕೊಳ್ತಾರೆ. ``ನಿಜಕ್ಕೂ ಇದೊಂದು ದುಬಾರಿ ಕೆಲಸ. ಆದ್ರೆ ಮಾರಾಟ ಮತ್ತು ಬ್ರಾಂಡ್ ಸೃಷ್ಟಿಯ ಮೂಲಕ ಅತ್ಯುತ್ತಮ ಅನುಭವ ನನಗೆ ಸಿಕ್ಕಿದೆ'' ಅಂತಾ ಅರ್ಚನಾ ಖುಷಿಯಿಂದ ಹೇಳಿಕೊಳ್ತಾರೆ.

ವಾಸ್ತವವಾದ ಮ್ಯಾಜಿಕ್ ಕಾರ್ಪೆಟ್ ಸವಾರಿ...

ರಿಟೇಲ್ ಮಾರಾಟ ಜನಪ್ರಿಯವಾಗ್ತಿದ್ದಂತೆ, ಆನ್‍ಲೈನ್‍ನಲ್ಲಿ ಸವಾರಿ ಮಾಡುವುದು ಮುಂದಿನ ಸವಾಲಾಗಿತ್ತು. ವೆಬ್ ಉಪಸ್ಥಿತಿ ಕೂಡ ಅತ್ಯಗತ್ಯ ಅನ್ನೋದನ್ನು ಅರಿತುಕೊಂಡ ಅರ್ಚನಾ ಬಂಧೇಜ್ ಡಾಟ್ ಕಾಮ್ ಅನ್ನು ಅಭಿವೃದ್ಧಿಪಡಿಸಿದ್ರು. ಕೆಲ ವರ್ಷಗಳ ಬಳಿಕ ಇ-ಕಾಮರ್ಸ್‍ಗೆ ನಿಜಕ್ಕೂ ಭವಿಷ್ಯವಿದೆ ಅನ್ನೋದು ಅವರಿಗೆ ಅರಿವಾಗಿತ್ತು. ರಿಟೇಲ್ ಮಳಿಗೆಗಳಿಲ್ಲದ ಪ್ರದೇಶಗಳಲ್ಲಂತೂ ಆನ್‍ಲೈನ್ ಸ್ಟೋರ್‍ಗಳಿಂದ ಸಾಕಷ್ಟು ಪ್ರಯೋಜನವಾಗಿತ್ತು. ಗ್ರಾಹಕರಿಗೆ ಬಂಧೇಜ್ ಉತ್ಪನ್ನಗಳನ್ನು ಕೊಂಡುಕೊಳ್ಳುವ ಸೌಲಭ್ಯ ಕಲ್ಪಿಸಿದ ಅರ್ಚನಾ, ವೆಬ್‍ಸೈಟ್ ಅನ್ನು ರಿಲಾಂಚ್ ಮಾಡಿದ್ರು. ಅವರದ್ದೇ ಆದ ಸಿಗ್ನೆಚರ್ ಸ್ಟೈಲ್‍ನ ಸೀರೆಗಳು, ಚೋಲಿ, ಕುರ್ತಾ, ಟ್ಯೂನಿಕ್ಸ್, ಡ್ರೆಸ್‍ಗಳು, ದುಪ್ಪಟ್ಟಾ ಎಲ್ಲವೂ ಆನ್‍ಲೈನ್‍ನಲ್ಲಿ ಲಭ್ಯವಿವೆ. ಆನ್‍ಲೈನ್ ಮಾರಾಟದಿಂದಾಗಿ ಬಂಧೇಜ್ ಬ್ರಾಂಡ್ ಇನ್ನಷ್ಟು ಜನಪ್ರಿಯವಾಗಿದೆ. ವೆಬ್‍ಸೈಟ್‍ನಿಂದಾಗಿ ಮಳಿಗೆಗಳಿಗೆ ಬರುವ ಗ್ರಾಹಕರ ಸಂಖ್ಯೆ ಕೂಡ ಹೆಚ್ಚಿದೆ. ``ಒಂದರ ಮೇಲೆ ಇನ್ನೊಂದು ಪರಸ್ಪರ ಪ್ರಭಾವ ಬೀರಿದೆ, ಗ್ರಾಹಕರು ಆನ್‍ಲೈನ್ ಸೈಟ್ ನೋಡಿ ಮಳಿಗೆಗಳಿಗೆ ಬರುತ್ತಿದ್ದಾರೆ'' ಎನ್ನುತ್ತಾರೆ ಅರ್ಚನಾ. ಅಹಮದಾಬಾದ್, ಬೆಂಗಳೂರು, ಮುಂಬೈ, ಕೋಲ್ಕತ್ತಾ, ದೆಹಲಿ, ಪುಣೆ ಮತ್ತು ಕೊಚ್ಚಿಯಲ್ಲಿ ಬಂಧೇಜ್ ಮಳಿಗೆಗಳಿವೆ.

ಇನ್ನಷ್ಟು ಕೊಡುಗೆಗಳ ಮೂಲಕ ವಹಿವಾಟನ್ನು ವಿಸ್ತರಿಸಲು, ಮತ್ತಷ್ಟು ಗ್ರಾಹಕರನ್ನು ಸಂಪಾದಿಸಲು ಅರ್ಚನಾ ಯೋಜನೆ ಹಾಕಿಕೊಂಡಿದ್ದಾರೆ. ಈ ಡಿಜಿಟಲ್ ವೇದಿಕೆ ಮೂಲಕ ಅವರು ಕಲಿತ ಬಹುದೊಡ್ಡ ಪಾಠ ಅಂದ್ರೆ, ಕಂಪನಿಯ ಉತ್ಪನ್ನಗಳನ್ನು ಪರಿಚಯಿಸಲು ವಿಭಿನ್ನ ದೃಷ್ಟಿಕೋನದಿಂದ ನೋಡುವುದು. ``ರಿಟೇಲ್ ಮಳಿಗೆಗಳಲ್ಲಿ ಮುಟ್ಟಿ ನೋಡಿ ಕೊಂಡುಕೊಳ್ಳುವ ಹವ್ಯಾಸ ಆನ್‍ಲೈನ್ ಮಾರಾಟದೆದುರು ಮಂಕಾಗುವ ಸಾಧ್ಯತೆಗಳಿಲ್ಲ. ಎರಡೂ ಪರಸ್ಪರ ಒಂದಕ್ಕೊಂದು ಪೂರಕವಾಗಿವೆ'' ಅನ್ನೋದು ಅರ್ಚನಾ ಅವರ ಅಭಿಪ್ರಾಯ. ಅರ್ಚನಾ ಫೇಸ್‍ಬುಕ್ ಮತ್ತು ಟ್ವಿಟ್ಟರ್ ಮೂಲಕ ಬಂಧೇಜ್ ಗ್ರಾಹಕರೊಂದಿಗೆ ಸಂಪರ್ಕ ಇರಿಸಿಕೊಂಡಿದ್ದಾರೆ. ಇದರಿಂದಾಗಿ ಆನ್‍ಲೈನ್ ಸ್ಟೋರ್‍ನಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ.

ಆನ್‍ಲೈನ್ ರಿಟೇಲ್ ಅನುಭವಗಳಿಗೆ ಉತ್ತಮ ಭವಿಷ್ಯವಿದೆ ಅನ್ನೋದು ಅವರ ವಿಶ್ವಾಸ. ವಾಕ್ ಇನ್ ಗ್ರಾಹಕರ ಜೊತೆಗೆ ಈಗಾಗ್ಲೇ ಒಳ್ಳೆಯ ಬಾಂಧವ್ಯ ಮತ್ತು ನಂಬಿಕೆ ಬೆಸೆದುಕೊಂಡಿರುವ ಕಂಪನಿಗಳಿಗೆ ಇದು ಸುಲಭ ಅನ್ನೋದು ಅರ್ಚನಾರ ಅಭಿಪ್ರಾಯ. ಆನ್‍ಲೈನ್ ಮಾಧ್ಯಮಕ್ಕೂ ಭವಿಷ್ಯವಿದೆ ಎನ್ನುವ ಮೂಲಕ ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡ್ತಿದ್ದಾರೆ ಅರ್ಚನಾ. ಬಂಧೇಜ್ ಡಾಟ್ ಕಾಮ್ ಮೂಲಕ ತಮ್ಮ ಅನನ್ಯ ಬ್ರಾಂಡ್‍ಗೆ ಅರ್ಚನಾ ಶಾ ವಿಶೇಷ ಬೇಡಿಕೆಯನ್ನು ಸೃಷ್ಟಿಸಿದ್ದಾರೆ.

ಲೇಖಕರು: ಅನಲಿಸ್​ ಪೀಯರ್ಸ್​

ಅನುವಾದಕರು: ಭಾರತಿ ಭಟ್​

ಇದನ್ನು ಓದಿ

1. ಟೀಂ ಇಂಡಿಯಾದಲ್ಲಿ ಕಾಫಿನಾಡಿನ ಕುವರಿ - ಕರುನಾಡಿಗೆ ಹೆಮ್ಮೆ ತಂದ ವೇದಾ ಕೃಷ್ಣಮೂರ್ತಿ  

2. ಸುಮಧುರ ಕಂಠದ ಮನಸ್ಸಿನಲ್ಲಿದೆ ನೂರಾರು ಕನಸು- ಚಿಕ್ಕ ವಯಸ್ಸಿನಲ್ಲೇ ನೂರಾರು ಮಕ್ಕಳಿಗೆ ಆಸರೆ

3. ಹೆಣ್ ಮಕ್ಳೇ ಸ್ಟ್ರಾಂಗು ಗುರು -ನಾವೆಲ್ಲಾ ಒಂದೇ...

Related Stories