"ಕಾಮಿಡಿ ಕಿಲಾಡಿ" ಶಿವರಾಜ್ ಕೆ.ಆರ್.ಪೇಟೆ

ಟೀಮ್​ ವೈ.ಎಸ್​. ಕನ್ನಡ

"ಕಾಮಿಡಿ ಕಿಲಾಡಿ" ಶಿವರಾಜ್ ಕೆ.ಆರ್.ಪೇಟೆ

Wednesday January 04, 2017,

4 min Read

" ಯಾವನ್ಲಾ ಅವ್ನು ? ಬಾಳೆ ಅಣ್ಣಿನ್ ಸಿಪ್ಪೆನಾ ರೋಡ್ನಾಗ್ ಬಿಸಾಕಿರೋನು, ನಾನ್ ಬಿದ್ದೆ ಸರಿ ಓಯಿತು, ಅಕಸ್ಮಾತ್ ಬಸ್ ಏನಾದ್ರೂ ಇದ್ರ ಮ್ಯಾಗೆ ಓಗಿದ್ದಿದ್ರೇ!?" ಎನ್ನುತ್ತಾ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಎಂಟ್ರಿ ಪಡೆದ ಮಾತುಗಾರ ಮಲ್ಲಣ ಶಿವರಾಜ್ ಕೆ ಆರ್ ಪೇಟೆ. ಹೆಸರು ಕೇಳಿದ್ರೆ ಗೊತ್ತಾಗುತ್ತೆ ಇವರು ಮಂಡ್ಯ ಅಣ್ತಮ್ಮ ಅಂತ. ಸಲೀಸಾದ ಡೈಲಾಗ್ ಡೆಲಿವರಿ, ಪಕ್ಕಾ ಟೈಮಿಂಗ್, ಸಹಜವಾದ ಹಾವ-ಭಾವ, ಇಂಪ್ರೂವೈಸೇಷನ್ ಮಾಡಿಕೊಂಡು ಸ್ಕ್ರಿಪ್ಟ್​ಗೆ ಒಂದು ಕಳೆ ತಂದುಕೊಡುವ ಹಾಸ್ಯ ಭಾಷಾಜ್ಞಾನ, ಒಟ್ಟಾರೆ ಕನ್ನಡದ ಕಲಾ ಲೋಕಕ್ಕೆ ಹೊಸದೊಂದು ಫ್ರೆಶ್ ಎನಿಸುವ ಹಾಸ್ಯದ ಟ್ರೆಂಡ್ ಸೃಷ್ಠಿಸುತ್ತಿರುವ ಹೈದ.

image


ನಗುವಿನ ಹಿಂದಿದೆ ಎಷ್ಟೋ ಜೀವನಾನುಭವಗಳು

ಶಿವರಾಜ್ ಕೆಆರ್ ಪೇಟೆಯವರು ಓದಿದ್ದು ಬಿ ಎ ಆದರೂ, ಸಿನಿಮಾ, ಧಾರಾವಾಹಿಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡವರು. ಇದಕ್ಕೆ ಕಾರಣ ತಂದೆ ಪೌರಾಣಿಕ ನಾಟಕ ಕಲಾವಿದರು ಮತ್ತು ನಿರ್ದೇಶಕರು. ಅಪ್ಪನಿಂದ ಬಳುವಳಿಯಾಗಿ ಬಂದ ಕಲೆ. ಶನಿಪ್ರಭಾವ ನಾಟಕದ ಸತ್ಯವ್ರತನ ಮಗನ ಪಾತ್ರದಿಂದ ನಾಟಕದ ವೇದಿಕೆ ಪ್ರವೇಶ. ಹುಟ್ಟಿ ಬೆಳದದ್ದು ಹಾಸನದ ಗೊರೂರಿನಲ್ಲಿ ತಂದೆ ರಾಮೇಗೌಡರು ಸರ್ಕಾರಿ ಕೆಲಸದಲ್ಲಿದ್ದವರು. ತಾಯಿ ಸಾವಿತ್ರಮ್ಮನವರು 7 ಮಕ್ಕಳನ್ನು ಲಾಲಿಸಿ ಪಾಲಿಸಿದವರು. 7 ನೇ ಮಗನೇ ಶಿವರಾಜ್ ಕೆಆರ್ ಪೇಟೆ. ಮುದ್ದಿನ ಮಗನಾದರೂ ಜವಾಬ್ದಾರಿ ಅರಿತು ನಡೆಯುತ್ತಿದ್ದರು. ಗೊರೂರಿನ ಸರ್ಕಾರಿ ಶಾಲೆ ಮತ್ತು ಕಾಲೇಜಿನಲ್ಲಿ ಬಿಎ ತನಕ ವಿದ್ಯಾಭ್ಯಾಸ. ಈ ಹಂತದಲ್ಲೇ ಕುಟುಂಬಕ್ಕೆ ನೆರವಾಗಲು ಎಮ್ಮೆ ಮೇಯಿಸಿ ಹಾಲು ಮಾರುತ್ತಾ ಬೆಳೆದವರು. ಓದು ಮುಗಿದ ನಂತರ ಖಾಲಿ ಕೂರುವ ಬದಲು ಗಾರೆ ಕೆಲಸ, ಸೀಬೆ ಹಣ್ಣು ಮಾರಾಟ ಮಾಡುತ್ತಾ ಕಾಯಕದ ಮಹತ್ವ ಅರಿಯುತ್ತ ಬೆಳೆದರು. ಈ ಹಂತದಲ್ಲೇ ಮುಂಬೈಯಲ್ಲಿ ಅಕ್ಕನ ಮನೆಗೆ ಹೋಗುತ್ತಾರೆ. ಅಲ್ಲಿಯೇ ನೆಲೆ ಕಂಡುಕೊಳ್ಳಲು ಬಾರ್ ನಲ್ಲಿ ಸಪ್ಲೈಯರ್ ಆಗಿ ಸೇರಿಕೊಳ್ಳತ್ತಾರೆ,

ಮುಂಬೈಯಲ್ಲಿ ಮಳೆ ಬಂದು ಕೊಚ್ಚಿ ಹೋಗುತ್ತಿರುತ್ತದೆ, ಅದೆ ಮಟ್ಟಿನ ನೀರಿನಲ್ಲಿ ನಡೆದು ಹೋಗಿದ್ದಾರೆ, ಆ ಪಯಣದಲ್ಲೇ ಹಸುವಿನ ಹೆಣ ತೇಲುವುದು, ನಾಯಿಯೊಂದು ಕೊಚ್ಚಿಕೊಂಡು ಮ್ಯಾನ್ ಹೋಲ್‍ನಲ್ಲಿ ಮುಳುಗುವುದನ್ನು ಕಾಣುತ್ತಾ ಬದುಕಿನ ಅಸ್ಥಿರತೆ ಬಗ್ಗೆ ಸ್ಥಿತ ಪ್ರಜ್ಞರಾಗಿ ಉಳಿದಿದ್ದಾರೆ, ಇನ್ನೂ ಬಾಂಬ್ ಬ್ಲ್ಯಾಸ್ಟಿಂಗ್‍ಳ ನರಳಾಟದ ದುರಂತಗಳಿಗೆ ಸಾಕ್ಷಿಯಾಗಿದ್ದಾರೆ. ಹೀಗೆ ಬದುಕಿನ ನಾನಾ ಮಜಲುಗಳಗೆ ತೆರೆದುಕೊಂಡ ಶಿವರಾಜ್ ಜೀವನವನ್ನು ನೋಡುವ ರೀತಿಯನ್ನೇ ಬದಲಾಯಿಸಿಕೊಳ್ಳುತ್ತಾರೆ. ಇಷ್ಟರಲ್ಲೇ ಅಣ್ಣನೊಂದಿಗೆ ಬೆಂಗಳೂರಿಗೆ ಬರುತ್ತಾರೆ.

ಇದನ್ನು ಓದಿ: ಅಂದು ವೇಶ್ಯೆ, ಇಂದು ಬಾಲಿವುಡ್ ಕಥೆಗಾರ್ತಿ..!

ಮಾಯನಗರಿ "ಬ್ಯಾಂಗ್ಲೂರ್"

ಮುಂಬೈನಿಂದ ಬೆಂಗಳೂರಿಗೆ ಬಂದ ನಂತರ ಕೆಲಸಕ್ಕೆ ನಾನಾ ಕಡೆ ಪ್ರಯತ್ನಿಸುತ್ತಾರೆ. ವೈಖರಿ ನಾಟಕ ತಂಡದಲ್ಲಿ ತೊಡಗಿಸಿಕೊಳ್ಳುತ್ತಾರೆ. ತಮ್ಮ ಹುಟ್ಟಿನಿಂದಲೇ ಬಂದ ಹಾಸ್ಯ ಪ್ರಗ್ನೆಯನ್ನೆ ನಂಬಿ ಆರ್ಕೇಸ್ಟ್ರಾ, ಗಣೇಶ ಹಬ್ಬಗಳಲ್ಲಿ ಸ್ಟ್ಯಾಂಡಪ್ ಕಾಮಿಡಿಗಳನ್ನು ಮಾಡುತ್ತಾ ಹೊಸ ಬದುಕು ಆರಂಭಿಸುತ್ತಾರೆ, ಆಗೆಲ್ಲಾ ಪ್ರಾಣೇಶ್, ಸುಧಾಬರಗೂರು ಅವರನ್ನು ಬಿಟ್ಟರೇ ಸ್ಟ್ಯಾಂಡಪ್ ಕಾಮಿಡಿ ಅನ್ನೋ ಕಲ್ಪನೆ ತೀರ ಹೊಸದು. ಇದರ ಜೊತೆಗೆ ಕರೋಕೆ ಹಾಡುವುದು, ಮಿಮಿಕ್ರಿ ಮಾಡುತ್ತಾ ಬೆಳೆಯುತ್ತಾರೆ. ಈ ಹಂತದಲ್ಲೇ ಕನ್ನಡದ ಖ್ಯಾತ ನ್ಯೂಸ್​ ಚಾನೆಲ್​ ಒಂದರ ಕಾಮಿಡಿ ಪ್ರೋಗ್ರಾಂಗೆ ಆಯ್ಕೆ ಆಗುತ್ತಾರೆ. ಬಸ್ಯ ಪಾತ್ರದ ಮೂಲಕ ಮನೆ ಮನೆ ಮಾತಾಗುತ್ತಾರೆ. ಎಂಥದ್ದೇ ಪಾತ್ರ ಕೊಟ್ಟರು ಲೀಲಾಜಾಲವಾಗಿ ಅಭಿನಯಿಸಿ ಭರವಸೆ ಮೂಡಿಸುತ್ತಾರೆ. ಜೊತೆಗೆ ಅದೇ ಚಾನೆಲ್​ನಲ್ಲಿ ಸಟೈರ್​ ಒಂದಕ್ಕೆ ಧೀರೆಂದ್ರ ಗೋಪಾಲ್ ಅವರ ಧ್ವನಿಯನ್ನು ಮಿಮಿಕ್ರಿ ಮಾಡುವ ಗೋಪಾಲಣ್ಣೆ ಧ್ವನಿ ಮತ್ತಷ್ಟು ಹೆಸರು ತಂದು ಕೊಡುತ್ತದೆ. ಇದೇ ಜನಪ್ರಿಯತೆ ಶಿವರಾಜ್‍ರನ್ನು ಮತ್ತೊಂದು ಸುದ್ದಿವಾಹಿನಿ ಸಮಯಕ್ಕೆ ಕರೆದುಕೊಂಡು ಹೋಗುತ್ತದೆ. ಅಲ್ಲಿಯೂ ಹಲವಾರು ಹಾಸ್ಯ ಕಾರ್ಯಕ್ರಮಗಳನ್ನು ಮಾಡುತ್ತಾ ಕಾರ್ಯಕ್ರಮ ನಿರ್ಮಾಪಕರಾಗಿಯೂ ಕಾರ್ಯ ನಿರ್ವಹಿಸುತ್ತಾರೆ. ಬದುಕು ನಿಂತ ನೀರಾಗುವುದಿಲ್ಲ. 

" ನನ್ನ ಎರಡನೇ ಅಣ್ಣ ಮುಂಬೈನಿಂದ ಬೆಂಗಳೂರಿಗೆ ಕರೆದುಕೊಂಡು ಬಂದರು, ಬದುಕಿನ ಎಷ್ಟೋ ಪಾಠಗಳನ್ನು ಹೇಳಿಕೊಟ್ಟರು. ಆದರೆ ಡೆಂಗ್ಯೂವಿನಿಂದ ಅವರನ್ನು ಕಳೆದುಕೊಳ್ಳಬೇಕಾಯಿತು. ಆ ನರಕದ ದಿನಗಳು ಯಾರಿಗೂ ಬಾರದಿರಲಿ. ಇಂದಿಗೂ ಆ ನೋವು ನನ್ನ ಬಾಧಿಸುತ್ತಲೇ ಇದೆ ಎಂದು ನಿರ್ಲಿಪ್ತರಾಗುತ್ತಾರೆ. ಹಾಸ್ಯ ಅಷ್ಟು ಸುಲಭವಲ್ಲ, ಮನದೊಳಗೆ ಏನೇ ಇದ್ದರೂ ಬದಿಗೊತ್ತಿ ನಗಿಸಲೇಬೇಕು"
- ಶಿವರಾಜ್​ ಕೆ.ಆರ್​. ಪೇಟೆ, ಕಾಮಿಡಿ ಆರ್ಟಿಸ್ಟ್​

ಕಾಮಿಡಿ ಕಿಲಾಡಿಗಳು

ನನ್ನ ಜೀವನದ ಅತ್ಯಂತ ಮಹತ್ತರವಾದ ಘಟ್ಟ ಅಂದರೇ ಅದು ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ. ಕರ್ನಾಟಕದ ನಾನಾ ಭಾಗದ ಹಾಸ್ಯ ಪ್ರತಿಭೆಗಳೊಟ್ಟಿಗೆ ಕೆಲಸ ನಿರ್ವಹಿಸೋ ಅದ್ಭುತ ಅವಕಾಶ, ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮದ ಯಶಸ್ವಿ ನಿರ್ದೆಶಕರಾದ, ಮೈಸೂರಿನ ನಿರಂತರ ಫೌಂಡೇಷನ್ ನ ಪ್ರತಿಭೆ ಶರಣಯ್ಯರವರು ಈ ಕಾರ್ಯಕ್ರಮ ನಿರ್ದೇಶಕರು, ಮೈಸೂರಿನ ರಂಗಾಯಣದ ಗಣಪ ಸರ್ ಕಾಮಿಡಿ ಕಿಲಾಡಿಯಲ್ಲಿ ಅಭಿನಯ ಹೇಳಿಕೊಟ್ಟ ಮೆಂಟರ್. ಈಗಾಗಲೇ ಚಿಕ್ಕಣ್ಣ, ಕುರಿ ಪ್ರತಾಪ್, ಮಿಮಿಕ್ರಿ ಗೋಪಿಯಂಥ ನೂರಾರೂ ಹಾಸ್ಯ ಕಲಾವಿದರಿಗೆ ಅವಕಾಶ ಒದಗಿದಿಕೊಟ್ಟ ವೇದಿಕೆ ಕಾಮಿಡಿ ಕಿಲಾಡಿಗಳು. ಸಾಕಷ್ಟು ಹುಡುಕಿ ಕಲಾವಿದರನ್ನು ಆಯ್ಕೆ ಮಾಡಿದ್ದಾರೆ. ಆಡಿಷನ್ ಪ್ರಕ್ರಿಯೆಯಂತೂ ಮರೆಯಲಾಗುವುದಿಲ್ಲ. ಬಹಳ ಚಾಲೆಂಜಿಂಗ್ ಆಗಿತ್ತು.

ಕಾಮಿಡಿ ಕಿಲಾಡಿಗಳ ಜಡ್ಜ್‍ಗಳ ಫೇವರೀಟ್ ಸ್ಪರ್ಧಿ

ಕಾಮಿಡಿ ಕಿಲಾಡಿಗಳ ತೀರ್ಪುಗಾರರ ಮುಚ್ಚಿನ ಸ್ಪರ್ಧಿ ಶಿವರಾಜ್. ಅದರಲ್ಲೂ ಜಗ್ಗೇಶ್ ಅವರು ಶಿವರಾಜ್ ಅಭಿನಯವನ್ನು ವಿಶೇಷ ದೃಷ್ಟಿಕೋನದಿಂದಲೇ ಗಮನಿಸುತ್ತಾರೆ, ನಟಿ ರಕ್ಷಿತಾ ಅವರಂತೂ ನಕ್ಕು ನಕ್ಕೂ ಸುಸ್ತಾಗ್ತಾರೆ. ಇನ್ನು ಯೋಗರಾಜ್ ಭಟ್ ರವರಂತೂ ತಮ್ಮ ಮುಗ್ಧತೆಯ ಅಂಚಿನ ಹಾಸ್ಯದ ಮಾತುಗಳಿಂದಲೇ ಶಿವರಾಜ್‍ರನ್ನು ಹೊಗಳುವುದನ್ನು ಟಿವಿಯಲ್ಲಿ ನೋಡುವಾಗ ವೀಕ್ಷಕರ ಫೇವರೀಟ್ ಅನ್ನಿಸಿಬಿಟ್ಟಿದ್ದಾರೆ ಶಿವು. ಎಲ್ಲ ವಿಭಿನ್ನ ಸ್ಪರ್ಧಿಗಳ ನಡುವೆಯೂ ಹುಬ್ಬಳ್ಳಿಯ ನಯನ ಶಿವರಾಜ್‍ಗೆ ಸ್ವಲ್ಪ ಹೆಚ್ಚಿಗೆ ಸವಾಲೊಡ್ಡುವ ಸ್ಪರ್ಧಿಯಾಗಿದ್ದಾರೆ. ಈಗಾಗಲೇ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಹೊಸ ಹೊಸ ಕಲಾವಿದರ ಆಗಮನದ ನಿರೀಕ್ಷೆ ಇದೆ, ನೋಡೋಣ ನಮ್ಮ ಪ್ರಯತ್ನ ಪ್ರ್ರಾಮಾಣಿಕವಾಗಿರಬೇಕು ಅಂತಾರೆ. "ಆಸ್ಪತ್ರೆಯಲ್ಲಿ ತಾಯಿಯನ್ನು ಮಲಗಿಸಿ, ಮೆಡಿಕಲ್ ಸ್ಟೋರಿನಲ್ಲಿ ನಮ್ಮನ್ನು ಕಂಡು ' ಸಾರ್ ನೀವು ಕಾಮಿಡಿ ಕಿಲಾಡಿಗಳಲ್ಲಿ ಮಾಡ್ತಿರಲ್ವ ಸೂಪರ್ ಸರ್ ಅಂತಾರೆ, ಆ ಎರಡು ನಿಮಿಷ ತಮ್ಮ ಎಲ್ಲ ನೋವನ್ನು ಮರೆಯುತ್ತಾರೆ ಅಷ್ಟೇ ಅಲ್ವ ಬದುಕಿನ ತೃಪ್ತಿ!" ಎಂದು ವೀಕ್ಷಕರೊಬ್ಬರ ಘಟನೆಯನ್ನು ಹಂಚಿಕೊಳ್ಳುತ್ತಾರೆ. ಇನ್ನು ಕಾಮಿಡಿ ಕಿಲಾಡಿಗಳು ಸೆಟ್‍ನಲ್ಲಿ ನಗುವಿಗೆ ಕೊರತೆ ಇಲ್ಲ. ಹೊರಗಡೆ ನಾವೆಲ್ಲರೂ ಸ್ಪರ್ಧಿಗಳಾಗಿದ್ದರೂ ರಿಹರ್ಸಲ್ ಸಮಯದಲ್ಲಿ ಒಬ್ಬರೊನ್ನಬ್ಬರೂ ತಿದ್ದುತ್ತೇವೆ. ಒಟ್ಟಿಗೆ ಊಟ ಮಾಡುತ್ತೇವೆ. ಚರ್ಚೆ ಮಾಡುತ್ತೇವೆ. ಒಟ್ಟಾರೆ ಇಲ್ಲಿ ಏನನ್ನು ಗೆಲ್ಲುತ್ತೇವೋ ಗೊತ್ತಿಲ್ಲ ಆದರೆ ಬದುಕಿನ ಸುಂದರ ಕ್ಷಣಗಳನ್ನಂತೂ ಗೆದ್ದುಕೊಂಡಿದ್ದೇವೆ ಅದು ನಮ್ಮ ಬದುಕಿಗೆ ತೃಪ್ತಿ ನೀಡಿದೆ ಎನ್ನುತ್ತಾರೆ ಶಿವು

ನಮ್ಮ ಸಂಸಾರ ಆನಂದ ಸಾಗರ

ಮಾವನ ಮಗಳು ಶೃತಿಯನ್ನು ಇಷ್ಟಪಟ್ಟು, ಕಷ್ಟಪಟ್ಟು ಮಾವನನ್ನು ಒಪ್ಪಿಸಿ ಮದುವೆಯಾದರು. ಇತ್ತಿಚೆಗಷ್ಟೆ ಗಂಡು ಮಗುವಿನ ತಂದೆಯಾಗಿದ್ದಾರೆ. ವೈಯಕ್ತಿಕ ಬದುಕಿನಲ್ಲಿ ಸಂತೋಷ ತುಂಬಿದೆ, ವೃತ್ತಿ ಬದುಕಿನಲ್ಲಿ ಸವಾಲಿನ ಪಯಣ ಸಾಗಿದೆ. ಬದುಕು ಬ್ಯೂಟಿಫುಲ್ ಲೈಫು ವಂಡರ್‍ಫುಲ್.

ಇದನ್ನು ಓದಿ:

1. ರೀಲ್​ನಲ್ಲೂ ಹೀರೋ... ರಿಯಲ್​ ಆಗಿಯೂ ಹೀರೋ..!

2. ಎಲ್ಲಾ ಬಸ್‍ನಿಲ್ದಾಣಗಳಲ್ಲೂ ಎ2ಬಿಯದ್ದೇ ಸವಿ

3. ನಾಟಿ ಫ್ಯಾಕ್ಟರಿಯ Naughty ಸ್ಟೋರಿ..!