ಇ-ಕಾಮರ್ಸ್‍ನಲ್ಲಿ ಎಫ್‍ಡಿಐ ಗೊಂದಲ-ಸರ್ಕಾರದ ಸ್ಪಷ್ಟನೆಗೆ ಕಂಪನಿಗಳ ಒತ್ತಾಯ

ಟೀಮ್​​ ವೈ.ಎಸ್​. ಕನ್ನಡ

ಇ-ಕಾಮರ್ಸ್‍ನಲ್ಲಿ ಎಫ್‍ಡಿಐ ಗೊಂದಲ-ಸರ್ಕಾರದ ಸ್ಪಷ್ಟನೆಗೆ ಕಂಪನಿಗಳ ಒತ್ತಾಯ

Thursday December 24, 2015,

5 min Read

ಭಾರತದಲ್ಲಿ ಆನ್​​ಲೈನ್ ಮಾರಾಟ ಮಳಿಗೆಗಳನ್ನು ಮುನ್ನಡೆಸುತ್ತಿರುವ ಬಹುತೇಕ ಉದ್ಯಮಿಗಳು, ಎಲ್ಲಾ ಗೊಂದಲ ಮತ್ತು ಅನುಮಾನಗಳನ್ನು ಪರಿಹರಿಸಬಲ್ಲ ಸರ್ವವ್ಯಾಪಿಯಾಗಿರುವ ವಿದೇಶಿ ನೇರ ಹೂಡಿಕೆ ನೀತಿಯನ್ನು (ಎಫ್‍ಡಿಐ) ಎದುರು ನೋಡುತ್ತಿದ್ದಾರೆ. ಆದ್ರೆ ಅವರ ನಿರೀಕ್ಷೆ ಇನ್ನೂ ಸಾಕಾರವಾಗಿಲ್ಲ, ಗೊಂದಲಗಳು ಬಗೆಹರಿದಿಲ್ಲ. ಎಫ್‍ಡಿಐ ಉಲ್ಲಂಘಿಸಿದ 21 ಇ-ಕಾಮರ್ಸ್ ಕಂಪನಿಗಳ ವಿರುದ್ಧ ತನಿಖೆ ಮಾಡುವಂತೆ ನವೆಂಬರ್‍ನಲ್ಲಿ ದೆಹಲಿ ಹೈಕೋರ್ಟ್ ಸರ್ಕಾರಕ್ಕೆ ಆದೇಶ ನೀಡಿತ್ತು. ಅದರಂತೆ ಫ್ಲಿಪ್‍ಕಾರ್ಟ್ ಸೇರಿದಂತೆ ಹಲವು ಕಂಪನಿಗಳ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆಯನ್ನೂ ಆರಂಬಿಸಿದೆ. ದೆಹಲಿ ಹೈಕೋರ್ಟ್ ಆದೇಶದಂತೆ 6 ಕಂಪನಿಗಳ ವಿರುದ್ಧ ತನಿಖೆ ನಡೆಸುತ್ತಿರುವುದಾಗಿ ಸರ್ಕಾರ ಕೂಡ ಹೇಳಿಕೊಂಡಿದೆ. `ರಿಟೇಲರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ' ನಮೂದಿಸಿದ 21 ಕಂಪನಿಗಳ ವಿರುದ್ಧ ತನಿಖೆ ಮಾಡುವಂತೆ ನ್ಯಾಯಾಲಯ ಈಗಾಗ್ಲೇ ಸೂಚನೆ ಕೊಟ್ಟಿದೆ.

image


ಗೊಂದಲ ಏಕೆ..?

ಕ್ರೋಢೀಕರಿಸಿದ ಎಫ್‍ಡಿಐ ನೀತಿಯ ಪ್ರಕಾರ: ಇ-ಕಾಮರ್ಸ್ ಚಟುವಟಿಕೆಗಳು, ಕಂಪನಿಗಳ ಇ-ಕಾಮರ್ಸ್ ವೇದಿಕೆ ಮೂಲಕ ನಡೆಯುವ ಖರೀದಿ ಮತ್ತು ಮಾರಾಟವನ್ನು ಪ್ರತಿನಿಧಿಸುತ್ತವೆ. ಅಂತಹ ಕಂಪನಿಗಳು ಬಿ2ಬಿ ಇ-ಕಾಮರ್ಸ್‍ನಲ್ಲಿ ಮಾತ್ರ ತೊಡಗಿಕೊಳ್ಳಬೇಕು. ಚಿಲ್ಲರೆ ವ್ಯಾಪಾರ ಮಾಡುವಂತಿಲ್ಲ. ಎಫ್‍ಡಿಐ ಮೇಲಿನ ಈ ನಿರ್ಬಂಧಗಳು ಇ-ಕಾಮರ್ಸ್ ಮತ್ತು ದೇಶೀಯ ಮಾರಾಟಕ್ಕೂ ಅನ್ವಯಿಸುತ್ತವೆ.

ಏಕೀಕೃತ ಎಫ್‍ಡಿಐ ನೀತಿಯ ಪ್ರಕಾರ ಸಿಂಗಲ್ ಬ್ರಾಂಡ್‍ನ ರಿಟೇಲ್ ಕಂಪನಿಗಳು, ಇ-ಕಾಮರ್ಸ್‍ನಲ್ಲಿ ತೊಡಗಿಕೊಳ್ಳುವಂತಿಲ್ಲ. ನವೆಂಬರ್‍ನಲ್ಲಿ ಸರ್ಕಾರ, ಸಿಂಗಲ್ ಬ್ರಾಂಡ್ ರಿಟೇಲ್ ಸೇರಿದಂತೆ 15 ವಲಯಗಳಲ್ಲಿ ಎಫ್‍ಡಿಐ ನಿರ್ಬಂಧಗಳನ್ನು ತೆಗೆದುಹಾಕಿದೆ. ವಿದೇಶಿ ಹೂಡಿಕೆಯ ಜೊತೆಗೆ ಸಿಂಗಲ್ ಬ್ರಾಂಡ್ ರಿಟೇಲ್ ಘಟಕಕ್ಕೆ ಭಾರತದಲ್ಲಿ ಮಳಿಗೆ ತೆರೆಯಲು ಅನುಮೋದನೆ ಸಿಕ್ಕಿದೆ ಎಂದಾದಲ್ಲಿ ಅವರು ಆನ್‍ಲೈನ್ ರಿಟೇಲ್ ಮಾರಾಟದಲ್ಲೂ ತೊಡಗಿಕೊಳ್ಳಬಹುದು. ಎಫ್‍ಡಿಐ ನೀತಿಯಲ್ಲಿನ ಈ ಸಡಿಲತೆಯಿಂದ, ಇನ್ನಷ್ಟು ಕ್ಷೇತ್ರಗಳಲ್ಲಿ ಎಫ್‍ಡಿಐ ತೆರೆಯಲು ಹೆಜ್ಜೆ ಮುಂದಿಟ್ಟಂತಾಗಿದೆ. ದೆಹಲಿ ಹೈಕೋರ್ಟ್ ಆದೇಶ ಹೊರಬೀಳುವ 10 ದಿನಗಳ ಮುನ್ನ ಸರ್ಕಾರ ಈ ಬದಲಾವಣೆಯನ್ನು ಮಾಡಿದೆ.

ಜವಳಿ ಸೇರಿದಂತೆ ಈ ವಲಯದಲ್ಲಿರುವ ಭಾರತೀಯ ಉತ್ಪಾದಕರು ಶೇ.100ರಷ್ಟು ಎಫ್‍ಡಿಐ ಹೊಂದಿರಬೇಕು. `ಝೋವಿ' ಕೂಡ ಇವುಗಳಲ್ಲೊಂದು. ಈ ನೀತಿ ಸ್ಪಷ್ಟವಾಗಿದೆಯೇ? ಸರಿಯಾಗಿದೆಯೇ ಅಥವಾ ತಪ್ಪಾಗಿದೆಯೇ? ಕಾನೂನಿನ ವ್ಯಾಖ್ಯಾನ ಮತ್ತು ಫ್ಲಿಪ್‍ಕಾರ್ಟ್, ಸ್ನಾಪ್‍ಡೀಲ್‍ನಂತಹ ಮಾರುಕಟ್ಟೆಗಳ ವರ್ತನೆಯಿಂದ ಗೊಂದಲ ಸೃಷ್ಟಿಯಾಗಿದೆ. ಸ್ನಾಪ್‍ಡೀಲ್, ಪ್ಲಿಪ್‍ಕಾರ್ಟ್‍ನಂತಹ ಮಾರುಕಟ್ಟೆಗಳು, ಭಾಗಶಃ ಚಿಲ್ಲರೆ ಮಾರಾಟಗಾರರಂತೆ ವರ್ತಿಸುತ್ತಿವೆ ಅನ್ನೋದು ರಿಟೇಲರ್ಸ್ ಅಸೋಸಿಯೇಶನ್‍ನ ಆರೋಪ. ಭಾರೀ ರಿಯಾಯಿತಿ ನೀಡುತ್ತಿರುವುದರಿಂದ ದೊಡ್ಡ ಮೊತ್ತವನ್ನು ಭರಿಸಲು ಅವರು ಶಕ್ತರಾಗಿದ್ದಾರೆ.

ಬಹುತೇಕ ಆನ್‍ಲೈನ್ ಮಾರುಕಟ್ಟೆಗಳು ಆನ್‍ಲೈನ್ ಮಲ್ಟಿಬ್ರಾಂಡ್ ಚಿಲ್ಲರೆ ಮಾರಾಟ ತಪ್ಪಿಸುವ ಎಫ್‍ಡಿಐ ಕಾಯಿದೆಯಿಂದ ತಪ್ಪಿಸಿಕೊಳ್ಳಲು ಸಂಕೀರ್ಣವಾದ ಕಂಪನಿಯ ರಚನೆಗಳನ್ನು ಹೊಂದಿವೆ. ಇನ್ನು ಕೆಲವು ಕಂಪನಿಗಳು ಬಿ2ಬಿ ಸಗಟು ವ್ಯಾಪಾರವನ್ನೂ ಮಾಡುತ್ತಿವೆ. ` WS ಖeಣಚಿiಟ' ಫ್ಲಿಪ್‍ಕಾರ್ಟ್‍ಗೆ ಸಹಾಯಕನಂತೆ ಕೆಲಸ ಮಾಡುತ್ತಿತ್ತು, ಬಳಿಕ ಹಿಂದೆ ಸರಿದಿದೆ. `ಕ್ಲೌಡ್‍ಟೇಲ್ ಇಂಡಿಯಾ' ಕೂಡ ಅಮೇಝಾನ್ ಹಾಗೂ ಎನ್.ಆರ್.ನಾರಾಯಣ ಮೂರ್ತಿ ಅವರ `ಕೆಟಮರನ್ ವೆಂಚರ್ಸ್' ನಡುವಣ ಜಂಟಿ ಸಾಹಸೋದ್ಯಮವಾಗಿ ಕಾರ್ಯನಿರ್ವಹಿಸುತ್ತಿತ್ತು. ದೆಹಲಿ ಹೈಕೋರ್ಟ್ ಮೆಟ್ಟಿಲೇರಿರುವ ಪ್ರಕರಣದಲ್ಲಿ ಅಮೇಝಾನ್ ಹೆಸರಿಲ್ಲ, ಆದ್ರೆ ಸಹೋದರಿ ಸಂಸ್ಥೆ ಜಂಗ್ಲಿ ತನಿಖೆಯ ಸುಳಿಗೆ ಸಿಲುಕಿದೆ. ಬಂಡವಾಳ ಹೂಡಿಕೆ ಹೆಚ್ಚಳವನ್ನು ಬಿಟ್ರೆ ಭಾರತದ ಇ-ಕಾಮರ್ಸ್ ಕಂಪನಿಗಳಿಗೆ ಬೇರೆ ಮಾರ್ಗವೇ ಇಲ್ಲ ಅನ್ನೋದು ತಜ್ಞರ ಅಭಿಪ್ರಾಯ.

image


ಇ-ಕಾಮರ್ಸ್ ಸಂಸ್ಥೆಗಳು ಬ್ಯಾಂಕ್‍ಗಳಿಂದ ಹಣಕಾಸಿನ ನೆರವು ಪಡೆಯುತ್ತಿವೆ. ವಿಸಿ ಮತ್ತು ಹೊರದೇಶಗಳಿಂದ್ಲೂ ನಿಧಿ ಸಂಗ್ರಹವಾಗ್ತಿದೆ. ಸುಲಭವಾಗಿ ಬಂಡವಾಳ ಗಿಟ್ಟಿಸಿಕೊಳ್ಳಲು ಇ-ಕಾಮರ್ಸ್ ಕಂಪನಿಗಳು ಭಾರತದಿಂದ ಹೊರನಡೆಯುತ್ತಿವೆ ಅನ್ನೋದು ಟೆಕ್ನೋಪಾರ್ಕ್‍ನ ಅಧ್ಯಕ್ಷ ಅರವಿಂದ್ ಸಿಂಘಾಲ್ ಅವರ ಅಭಿಪ್ರಾಯ.

ಬಹುತೇಕ ದೊಡ್ಡ ಮಾರುಕಟ್ಟೆಗಳು ಆನ್‍ಲೈನ್ ಚಿಲ್ಲರೆ ಉದ್ಯಮವನ್ನೇ ಬೆಳೆಸುತ್ತಿದ್ದಾರೆ, ಕಾನೂನು ಪಾಲನೆಯಲ್ಲಿ ತೊಡಗಿದ್ರೆ ಅಂದುಕೊಂಡ ವೇಗದಲ್ಲಿ ಪ್ರಗತಿ ಸಾಧ್ಯವಿಲ್ಲ. ನಿಯಮಗಳು ಸಂಕೀರ್ಣವಾಗಿದ್ದಾಗ ಎಫ್‍ಡಿಐ ಮೊರೆಹೋಗುವ ಅಗತ್ಯವೇನು ಅನ್ನೋದು `ಜಬಾಂಗ್'ನ ಸಹ ಸಂಸ್ಥಾಪಕ ಪ್ರವೀಣ್ ಸಿನ್ಹಾ ಅವರ ಪ್ರಶ್ನೆ. ವಿದೇಶೀ ಹೂಡಿಕೆದಾರರು ಯುವ ಇಂಡಸ್ಟ್ರಿಯನ್ನು ಕಟ್ಟಿ ಬೆಳೆಸಲು ಬಿಲಿಯನ್ ಡಾಲರ್‍ಗಟ್ಟಲೆ ಹಣ ವ್ಯಯಿಸುವ ಸಾಮಥ್ರ್ಯ ಹೊಂದಿದ್ದಾರೆ.

ನಾವು ರಕ್ಷಣಾತ್ಮಕ ಸ್ಥಿತಿಯಲ್ಲಿದ್ದೇವೆ ಅಂತಾದ್ರೆ ಭಾರತದಲ್ಲಿ ಉದ್ಯಮಿಗಳಿಗೇಕೆ ಬಂಡವಾಳ ಸಿಗುತ್ತಿಲ್ಲ? ಸರ್ಕಾರ ಹಾಗೂ ಬ್ಯಾಂಕ್‍ಗಳು ಒಳ್ಳೆ ಬಡ್ಡಿ ದರದಲ್ಲಿ ಸಾಲ ಕೊಡಲು ಏಕೆ ಮುಂದಾಗುತ್ತಿಲ್ಲ? ದೇಶದಲ್ಲಿ ಹೂಡಿಕೆ ಸಂಸ್ಥೆಗಳಿಗೇನೂ ಕೊರತೆಯಿಲ್ಲ ಆದ್ರೆ ಪ್ರಯೋಗಕ್ಕೆ ಮುಂದಾಗುವವರು ಕಡಿಮೆ ಎನ್ನುತ್ತಾರೆ ಪ್ರವೀಣ್.

ಕಂಪನಿಗಳು ಏನು ಹೇಳುತ್ತವೆ?

ಕೋರ್ಟ್ ಮೆಟ್ಟಿಲೇರಿದ ಪ್ರಕರಣಗಳು ಹಾಗೂ ತನಿಖೆಯ ಬಿಸಿ ಸಣ್ಣ ಪುಟ್ಟ ಉದ್ಯಮಗಳಿಗೂ ತಟ್ಟಿದೆ. ಹೈಕೋರ್ಟ್ ಮೆಟ್ಟಿಲೇರಿರುವ ಪ್ರಕರಣದಲ್ಲಿ ಸದ್ದು ಮಾಡಿರುವ 21 ಕಂಪನಿಗಳ ಪೈಕಿ ಹಲವು ಸಂಸ್ಥೆಗಳು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿವೆ. `ಯುವರ್‍ಸ್ಟೋರಿ' ಜೊತೆಗೆ ಮಾತನಾಡಿದ ಕೆಲವರು, ಸರ್ಕಾರದ ಏಜೆನ್ಸಿ ತನಿಖೆ ನಡೆಸ್ತಾ ಇದ್ದು ಅದಕ್ಕೆ ಸಹಕರಿಸುತ್ತಿರುವುದಾಗಿ ತಿಳಿಸಿದ್ದಾರೆ.

`ಮಿಂತ್ರಾ'ದ ಸಿಇಓ ಅನಂತ್ ನಾರಾಯಣನ್ ಮಾತನಾಡಿ, ಸರ್ಕಾರದ ಯಾವ ಅಧಿಕಾರಿಗಳೂ ತಮ್ಮನ್ನು ಸಂಪರ್ಕಿಸಿಲ್ಲ ಎಂದಿದ್ದಾರೆ. ಇನ್ನು ಕೆಲವರು ಶುದ್ಧ ಮಾರುಕಟ್ಟೆ ಮಾದರಿಯನ್ನೇ ಅನುಸರಿಸುತ್ತಿದ್ರೂ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದಿದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ``ನಮ್ಮ ಮಾರುಕಟ್ಟೆಯಲ್ಲಿ ಸಗಟು ಮಾರಾಟಗಾರರು, ಮರು ಮಾರಾಟಗರರು ಮತ್ತು ಬೊಟಿಕ್ ವ್ಯವಸ್ಥಾಪಕರು ನಮ್ಮ ವೇದಿಕೆ ಮೂಲಕ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ನಾವು ಇಲ್ಲಿ ಕಮಿಷನ್ ಏಜೆಂಟ್‍ಗಳು, ಬೆಲೆ ಅಥವಾ ರಿಯಾಯಿತಿಯಲ್ಲಿ ನಮ್ಮ ಪಾತ್ರ ಇರುವುದಿಲ್ಲ ಅನ್ನೋದು `ವೂನಿಕ್'ನ ಸಹ ಸಂಸ್ಥಾಪಕ ಸುಜಯತ್ ಅಲಿ ಅವರ ಸ್ಪಷ್ಟ ನುಡಿ.

ಈ ಪ್ರಕರಣದಲ್ಲಿ ತನಿಖೆ ಬಗ್ಗೆ ತನಿಖಾಧಿಕಾರಿಗಳಿಗೆ ಗೊಂದಲ ಮೂಡಿದೆ. `ಅಮೆರಿಕನ್ ಸ್ವಾನ್' ಬಹು ಬ್ರಾಂಡ್‍ನ ಪ್ಲೇಯರ್ ಅಲ್ಲ. ನಾವು ಏಕೈಕ ಆಲ್‍ನೈನ್ ಲೇಬಲ್ ಹೊಂದಿದ್ದು, ಬೇರೆ ಬ್ರಾಂಡ್‍ನ ಉತ್ಪನ್ನಗಳನ್ನು ಮಾರಾಟ ಮಾಡುವುದಿಲ್ಲ ಅಂತಾ ಮುಖ್ಯ ವ್ಯವಹಾರ ಅಧಿಕಾರಿ ಶರದ್ ಠಾಕೂರ್ ತಿಳಿಸಿದ್ದಾರೆ. ಬಿ2ಸಿ ಮತ್ತು ಬಿ2ಬಿ ಮಾದರಿಯಲ್ಲಿ ಅಮೆರಿಕನ್ ಸ್ವಾನ್ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಇರುವ ಎಫ್‍ಡಿಐ ಕಾನೂನನ್ನು ಅನುಸರಿಸುತ್ತಿರುವುದಾಗಿ ಶರದ್ ಸ್ಪಷ್ಟಪಡಿಸಿದ್ದಾರೆ. ಈ ಪ್ರಕರಣದ ಬಗ್ಗೆ ಮಾಧ್ಯಮಗಳಿಂದ ತಿಳಿದುಕೊಂಡಿರೋದಾಗಿ `ಲೈಮ್‍ರೋಡ್' ಸಿಇಓ ಸುಚಿ ಮುಖರ್ಜಿ ತಿಳಿಸಿದ್ದಾರೆ. ಎಫ್‍ಡಿಐ ನೀತಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಅದನ್ನು ಅನುಸರಿಸಿರುವುದಾಗಿ ಅವರು ತಿಳಿಸಿದ್ದಾರೆ. ಇ-ಕಾಮರ್ಸ್ ಬಗ್ಗೆ ಆದಷ್ಟು ಬೇಗ ಸ್ಪಷ್ಟ ಚಿತ್ರಣ ನೀಡುವುದು ಒಳಿತು ಅನ್ನೋದು ಸುಚಿ ಅವರ ಅಭಿಪ್ರಾಯ.

ನಮ್ಮ ಬಳಿಯಿಲ್ಲ ಎಫ್‍ಡಿಐ..!

ಚಿಲ್ಲರೆ ವ್ಯಾಪಾರಿಗಳ ಅಸೋಸಿಯೇಶನ್ ಹೆಸರಿಸಿರುವ ಕೆಲ ಕಂಪನಿಗಳು ವಿದೇಶಿ ಹೂಡಿಕೆಯನ್ನೇ ಪಡೆದಿಲ್ಲ. ಎಫ್‍ಡಿಐ ಹೆಚ್ಚಳ ಮಾಡಿದ್ರೂ ಅವರು ಮಾರುಕಟ್ಟೆಯಲ್ಲಿ ಉಳಿದುಕೊಳ್ತಾರೆ, ಅಲ್ಲಿ ನೂರಕ್ಕೆ ನೂರರಷ್ಟು ಎಫ್‍ಡಿಐ ಕಾನೂನು ಅನ್ವಯವಾಗುತ್ತದೆ, ತಮ್ಮ ಕಂಪನಿಯಲ್ಲಿ ಏನಾಗುತ್ತಿದೆ ಅನ್ನೋದನ್ನು ಅಧಿಕಾರಿಗಳು ಅರ್ಥಮಾಡಿಕೊಳ್ಳಲ್ಲಿ, ತಮಗೆ ಸ್ಪಷ್ಟ ಚಿತ್ರಣ ಕೊಡಲಿ ಅನ್ನೋದು ಆಚಿಡಿveಥಿsನ ಸಿಇಓ ನಕುಲ್ ಬಜಾಜ್ ಅವರ ಅಭಿಮತ. `ಫ್ಯಾಮೋಜಿ'ಯ ಸಂಸ್ಥಾಪಕ ಹಾಗೂ ನಿರ್ದೇಶಕ ಪುನೀತ್ ಖನ್ನಾ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ತಮ್ಮ ಸಂಸ್ಥೆಯ ಹೆಸರು ಪಟ್ಟಿಯಲ್ಲಿ ಇರಬಾರದಾಗಿತ್ತು, ಅಲ್ಲಿ ಪ್ರಮಾದವಾಗಿ ಅನ್ನೋದು ಪುನೀತ್ ಅವರ ಹೇಳಿಕೆ. ಯಾಕಂದ್ರೆ ತಮ್ಮ ಸಂಸ್ಥೆ ವಿದೇಶಿ ನಿಧಿಯನ್ನು ಪಡೆದಿಲ್ಲ ಅಂತಾ ಅವರು ಸ್ಪಷ್ಟಪಡಿಸಿದ್ದಾರೆ. ಇನ್ನು `ಝೋವಿ' ಕೂಡ ಸರ್ಕಾರದ ಜೊತೆಗಿನ ಮಾತುಕತೆಯ ನಿರೀಕ್ಷೆಯಲ್ಲಿದೆ. ``ನಾವು ಭಾರತೀಯ ಉತ್ಪಾದಕರು, ಈಗಾಗ್ಲೇ ಎಲ್ಲಾ ರೀತಿಯ ಅನುಮತಿಗಳನ್ನೂ ಪಡೆದಿದ್ದೇವೆ, ಹಾಗಾಗಿ ನಾವು ಮಾಡುವುದೇನೂ ಉಳಿದಿಲ್ಲ, ಎಫ್‍ಡಿಐ ಬಗ್ಗೆ ಸ್ಪಷ್ಟ ಚಿತ್ರಣ ನೀಡಿದ್ರೆ ಒಳಿತಾಗುತ್ತದೆ'' ಎನ್ನುತ್ತಾರೆ `ಝೋವಿ'ಯ ಸಿಇಓ ಮನೀಶ್ ಚೋಪ್ರಾ.

image


ಅಂತಿಮವಾಗಿ...

ಕಂಪನಿಗಳು ಕಾರ್ಯಾಚರಣೆಯ ಸಾಮರ್ಥ್ಯ ಹೊಂದಿವೆ ಅಂತಾದಲ್ಲಿ ಅವುಗಳಿಗ್ಯಾಕೆ ಸರ್ಕಾರದಿಂದ ಸ್ಪಷ್ಟನೆ ಬೇಕು? ಹೂಡಿಕೆದಾರರ ಭಾವನೆಗೆ ಧಕ್ಕೆಯಾದ್ರೆ ಬಂಡವಾಳ ಸಂಗ್ರಹದಲ್ಲಿ ಕೊಂಚ ಹಿನ್ನಡೆಯಾಗಬಹುದು. ಇದು ಸಣ್ಣ ಪುಟ್ಟ ಉದ್ಯಮಗಳಿಗೂ ಹೊಡೆತ ನೀಡುವ ಸಾಧ್ಯತೆ ಇದೆ. ಆದ್ರೆ ಪಾಲಿಸಿಯಲ್ಲಿನ ಅನಿಶ್ಚಿತತೆ ಉದ್ಯಮಕ್ಕೆ ಒಳಿತು ಮಾಡಲಾರದು, ಜೊತೆಗೆ ಉದ್ಯಮಿಗಳಿಗೆ ನಿರ್ಧಾರ ತೆಗೆದುಕೊಳ್ಳಲು ಅಡ್ಡಿಯಾಗಲಿದೆ. ಆನ್‍ಲೈನ್ ಫ್ಯಾಷನ್ ಬ್ರಾಂಡ್ `ಫ್ಯಾಬಲ್ಲೇ' ಬಂಡವಾಳ ಸಂಗ್ರಹಕ್ಕೆ ಮುಂದಾಗಿತ್ತು, ಆದ್ರೆ ಎಫ್‍ಡಿಐ ಗೊಂದಲದಿಂದಾಗಿ ತಟಸ್ಥವಾಗಿರುವುದಾಗಿ ಸಂಸ್ಥೆಯ ಸಹ ಸಂಸ್ಥಾಪಕಿ ಶಿವಾನಿ ಪೊದ್ದರ್ ತಿಳಿಸಿದ್ದಾರೆ.

ಆನ್‍ಲೈನ್ ಚಿಲ್ಲರೆ ವ್ಯಾಪಾರ ಹೊಸದು, ಜೊತೆಗೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕೈಗಾರಿಕೆ. ಸದ್ಯ ಮಾರುಕಟ್ಟೆಯ ಮೌಲ್ಯ ಸುಮಾರು 20 ಬಿಲಿಯನ್ ಡಾಲರ್. 2020ರ ವೇಳೆಗೆ ಆನ್‍ಲೈನ್ ರಿಟೇಲ್ ಮಾರುಕಟ್ಟೆ ಮೌಲ್ಯ 69 ಬಿಲಿಯನ್ ಡಾಲರ್‍ಗೆ ತಲುಪಲಿದೆ ಅಂತಾ ` Goldman Sachs ' ಅಂದಾಜಿಸಿದೆ. ಫ್ಲಿಪ್‍ಕಾರ್ಟ್, ಅಮೇಝಾನ್, ಸ್ನಾಪ್‍ಡೀಲ್ ಹಾಗೂ ಸಣ್ಣ ಪುಟ್ಟ ಕಂಪನಿಗಳ ಬೆಳವಣಿಗೆಯಿಂದ ಹಲವು ಉದ್ಯಮಗಳು, ಕೈಗಾರಿಕೆಗಳು, ಪ್ಯಾಕಿಂಗ್ ಉತ್ಪನ್ನಗಳ ತಯಾರಕರಿಗೆ ತಮ್ಮ ಉತ್ಪನ್ನ ಮಾರಾಟ ಮಾಡಲು ವೇದಿಕೆ ಸಿಕ್ಕಂತಾಗಿದೆ.

``ಇ-ಕಾಮರ್ಸ್ ಇಲ್ಲೇ ಉಳಿದುಕೊಳ್ಳಲಿದೆ ಅನ್ನೋದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು. ಇದರಿಂದ ಉದ್ಯೋಗ ಸೃಷ್ಟಿಯಾಗುತ್ತಿದ್ದು, ಗ್ರಾಹಕರಿಗೂ ಪ್ರಯೋಜನವಾಗುತ್ತಿದೆ. ಹಾಗಾಗಿ ಎಫ್‍ಡಿಐ ನೀತಿ ಬಗ್ಗೆ ಸ್ಪಷ್ಟತೆ ಅತ್ಯಗತ್ಯ'' ಎನ್ನುತ್ತಾರೆ ` Walker Chandiok & Co LLP'ನ ರಾಧಿಕಾ ಜೈನ್.

ಆನ್‍ಲೈನ್ ಮಲ್ಟಿ ಬ್ರಾಂಡ್ ಪ್ಲೇಯರ್‍ಗಳು ಎಫ್‍ಡಿಐ ಅನ್ನು ತಮ್ಮ ಸಂಸ್ಥೆಯ ಅಭಿವೃದ್ಧಿಗಾಗಿ ಬಳಸಿಕೊಳ್ಳುವಂತಾದ್ರೆ ಆಫ್‍ಲೈನ್ ಪ್ಲೇಯರ್‍ಗಳಿಗೂ ಆ ಅವಕಾಶ ದಕ್ಕಬೇಕು. ಹಾಗಾಗಿ ಸರ್ಕಾರ ಇ-ಕಾಮರ್ಸ್ ಮೇಲೆ ಕೇಂದ್ರೀಕೃತವಾದ ಏಕೀಕೃತ ನಿಯಮವನ್ನು ಜಾರಿ ಮಾಡುವ ಸಾಧ್ಯತೆ ಇದೆ. ಆರಂಭದಿಂದ್ಲೂ ಆನ್‍ಲೈನ್ ಇಂಡಸ್ಟ್ರಿಯನ್ನು ಕಾಡುತ್ತಿರುವ ಈ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಹುಡುಕಬೇಕಿದೆ.

ಲೇಖಕರು: ಅತಿರಾ ಎ ನಾಯರ್​ ಮತ್ತು ರಾಧಿಕಾ ಪಿ ನಾಯರ್​

ಅನುವಾದಕರು: ಭಾರತಿ ಭಟ್​​