ಬ್ಯಾಡ್ಮಿಂಟನ್​​​ನಲ್ಲಿ ಕನ್ನಡದ ಕಂಪು : ಇದು ಕೊಡಗಿನ ಕುವರಿಯ ಯಶೋಗಾಥೆ

ಪಿ.ಆರ್​​.ಬಿ

0

ಆಗಷ್ಟೇ ನಡೆಯಲು ಶುರುಮಾಡಿದ್ದ ಮೂರು ವರ್ಷದ ಆ ಪುಟಾಣಿ ಬ್ಯಾಡ್ಮಿಂಟನ್ Racketಗಾಗಿ ರಚ್ಚೆ ಹಿಡಿದಿದ್ದಳು. ಅಪ್ಪ ಅಮ್ಮನಿಗೆ ಅದು ಸಹಜವಾದ ಮಕ್ಕಳ ಹಠ ಅನಿಸಿತ್ತು. ವಯಸ್ಸು ಐದಾದ್ರೂ, Racket ಬಿಡಲೊಲ್ಲದ ಆ ಬಾಲೆಯ ಹಠವೂ ಸಹಜವಾಗೇ ಕಂಡಿತು. ಆದ್ರೆ ಶಾಲೆಯ ಒಂದೊಂದು ಮೆಟ್ಟಿಲು ಹತ್ತುತ್ತಿದ್ರೂ, ಆ ಹುಡುಗಿ ಓದಿಗಿಂತ ಹೆಚ್ಚಾಗಿ ಬ್ಯಾಡ್ಮಿಂಟನ್ ಕೋರ್ಟ್ ನತ್ತಲೇ ಹೆಚ್ಚು ಗಮನಕೊಟ್ಟಿದ್ಲು.. ಆಗ ಅದು ಹೆತ್ತವರಿಗೆ ಕೊಂಚ ಗಂಭೀರವಾಗಿ ಕಂಡಿತು. ಹಾಗಂತ ತಮ್ಮ ಮಗಳಿಗೆ ಯಾವುದೇ ಅಡೆತಡೆ ಹಾಕಲು ಮುಂದಾಗಲಿಲ್ಲ.. ಬದಲಾಗಿ ಆಕೆಯ ಆಸಕ್ತಿಗೆ ಪ್ರೋತ್ಸಾಹ ಕೊಟ್ಟು ಪೋಷಿಸಿದ್ರು.

ಅಷ್ಟರಲ್ಲಾಗಲೇ ಶಾಲಾಮಟ್ಟದಲ್ಲಿ ಮಿಂಚಿದ್ದ ಆಕೆ ಭವಿಷ್ಯದಲ್ಲಿ ಬೆಳಗುವ ಸೂಚನೆ ಕೊಟ್ಟಿದ್ಲು. ಅವಳ ಆ ಆಟವನ್ನ ನೋಡಿದ್ದ ಬ್ಯಾಡ್ಮಿಂಟನ್ ಸೀನಿಯರ್ಸ್​ ಗಳೂ ಭಾರೀ ಭವಿಷ್ಯವನ್ನೇ ನುಡಿದಿದ್ರು. ವಿಶೇಷ ಅಂದ್ರೆ ಆ ಭವಿಷ್ಯ, ಲೆಕ್ಕಾಚಾರಗಳಾವುದು ಸುಳ್ಳಾಗಿಲ್ಲ. ಆ ಬಾಲ ಪ್ರತಿಭೆ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ದೈತ್ಯ ಪ್ರತಿಭೆಯಾಗಿ ಮಿಂಚುತ್ತಿದೆ. ಭಾರತೀಯರಿಗೆ ಅವಳ ಬಗ್ಗೆ ಇರುವ ಹೆಮ್ಮೆ ಒಂದು ರೀತಿಯದ್ದಾದ್ರೆ, ಕನ್ನಡಿಗರಿಗೂ ಅಷ್ಟೇ ಅಭಿಮಾನ.. ಆ ಅದ್ಭುತ ಬ್ಯಾಡ್ಮಿಂಟನ್ ತಾರೆ ಕೊಡಗಿನ ಕುವರಿ ಹೆಸರು ಅಶ್ವಿನಿ ಪೊನ್ನಪ್ಪ.

ಎಂ.ಎ.ಪೊನ್ನಪ್ಪ ಮತ್ತು ಕಾವೇರಿ ಪೊನ್ನಪ್ಪ ದಂಪತಿಗಳ ಮಗಳಾಗಿ ಸೆಪ್ಟೆಂಬರ್ 18, 1989ರಂದು ಅಶ್ವಿನಿ ಬೆಂಗಳೂರಿನಲ್ಲಿ ಜನಿಸಿದ್ರು. ಇವರ ತಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವ್ಯವಸ್ಥಾಪಕರು. ತಾಯಿ ನ್ಯೂ ಇಂಡಿಯಾ ಅಸ್ಯೂರೆನ್ಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಶ್ವಿನಿ ಕುಟುಂಬ ಮೂಲತಃ ಕೊಡಗಿನದ್ದಾಗಿದ್ರೂ, ನೆಲೆ ಕಂಡುಕೊಂಡಿದ್ದು ಬೆಂಗಳೂರಿನಲ್ಲೇ. ಅಶ್ವಿನಿಯ ಪ್ರಾಥಮಿಕ ಶಿಕ್ಷಣ ಬೆಂಗಳೂರಿನಲ್ಲಿಯೇ ನಡೆಯಿತು. ಬೆಂಗಳೂರಿನ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಗರ್ಲ್ಸ್ ಹೈ ಸ್ಕೂಲ್ ನಲ್ಲಿ ತಮ್ಮ ಶಾಲಾ ಶಿಕ್ಷಣ ಪೂರ್ಣಗೊಳಿಸಿದರು.

ಆದ್ರೆ ಬೆಂಗಳೂರಿನಲ್ಲೇ ಓದು ಹಾಗೂ ಬ್ಯಾಡ್ಮಿಂಟನ್ ನಲ್ಲಿ ತೊಡಗಿಸಿಕೊಳ್ಳುವ ಕನಸುಕಂಡಿದ್ದ ಅಶ್ವಿನಿಗೆ ಅದು ಸಾಧ್ಯವಾಗಲಿಲ್ಲ. ಅವರ ತಂದೆ ಎಂ ಎ ಪೊನ್ನಪ್ಪ ವರಿಗೆ ಹೈದ್ರಾಬಾದ್ ಗೆ ವರ್ಗಾವಣೆಯಾಯ್ತು. ಹೀಗಾಗಿ ಅವರ ಇಡೀ ಕುಟುಂಬ ನಿಜಾಮರ ಊರಿಗೆ ವರ್ಗವಾಗಬೇಕಾಯ್ತು. ಇದ್ರಿಂದ ಅಶ್ವಿನಿ ಪೊನ್ನಪ್ಪ ಹಿರಿಹಿರಿ ಹಿಗ್ಗಿದ್ರು. ಯಾಕಂದ್ರೆ ಭಾರತದಲ್ಲೇ ಹೈದ್ರಾಬಾದ್ ಬ್ಯಾಡ್ಮಿಂಟನ್​​ ಆಟಗಾರರ ತವರು ಅಂತ ಖ್ಯಾತಿ ಪಡೆದಿದೆ. ಸ್ಟಾರ್ ಪ್ಲೇಯರ್ ಗಳ ಉಗಮವೆಲ್ಲಾ ಹೈದ್ರಾಬಾದ್ ಮೂಲದಿಂದಲೇ ಆಗಿದ್ದು, ಅಶ್ವಿನಿಗೆ ತಮ್ಮ ಭವಿಷ್ಯದ ಬಗ್ಗೆ ಕನಸು ಕಟ್ಟಿಕೊಳ್ಳಲು ಇದು ಪ್ರೇರೇಪಿಸಿತು.

ಹೈದ್ರಾಬಾದ್ ಗೆ ಎಂಟ್ರಿಕೊಟ್ಟಿದ್ದೇ, ಅಶ್ವಿನಿ ಪ್ರಸಿದ್ಧ ಬ್ಯಾಡ್ಮಿಂಟನ್ ಅಕಾಡೆಮಿ ಪುಲ್ಲೇಲ ಗೋಪಿಚಂದ್ ಅವರ ತರಬೇತಿ ಶಿಬಿರಕ್ಕೆ ಸೇರ್ಪಡೆಗೊಂಡ್ರು. ಅಲ್ಲಿ ಅವರ ಪ್ರತಿಭೆ ಬೆಳಗಲು ಸಾಕಷ್ಟು ಅವಕಾಶಗಳು ಸಿಕ್ಕಿದ್ವು.. ಜೊತೆಗೆ ಜ್ವಾಲಾಗುಟ್ಟಾ, ಚೇತನ್ ಆನಂದ್ ಅವರಂತಹ ಸಮಕಾಲೀನರೊಂದಿಗೆ ಗುರುತಿಸಿಕೊಂಡ್ರು..

ಅಶ್ವಿನಿ ಪೊನ್ನಪ್ಪ ಪ್ರತಿಭೆ ಮೊದಲು ಗುರುತಿಸಿಕೊಂಡಿದ್ದು 2001ರ ಇಂಡಿಯನ್ ಜೂನಿಯರ್ ಚಾಂಪಿಯನ್ ಶಿಪ್ ನಲ್ಲಿ. 12 ವರ್ಷದ ಅಶ್ವಿನ್ ಟೂರ್ನಿಯಲ್ಲಿ ಚಾಂಪಿಯನ್ ಆಟವಾಡಿದ್ರು. ಅಲ್ಲದೆ ಪ್ರಶಸ್ತಿ ಗೆದ್ದು ಮೊಟ್ಟ ಮೊದಲ ಬಾರಿಗೆ ಸ್ಪರ್ಧಾತ್ಮಕ ಇವೆಂಟ್ ನಲ್ಲಿ ವಿಜೃಂಭಿಸಿದ್ರು. ಅದು ಕನ್ನಡತಿಯ ಬ್ಯಾಡ್ಮಿಂಟನ್ ಭವಿಷ್ಯಕ್ಕೆ ಭರ್ಜರಿ ವೇದಿಕೆ ಕಲ್ಪಿಸಿತು. ದೀಪಾಂಕರ್ ಭಟ್ಟಾಚಾರ್ಯ ಅವರ ಮಾರ್ಗದರ್ಶನದಲ್ಲಿ ಬೆಳೆದ ಅಶ್ವಿನಿ ಮಿಂಚಿದ್ರು. 2006ರಲ್ಲಿ ನಡೆದ ಸೌಥ್ ಇಂಡಿಯನ್ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದು ಇಡೀ ದೇಶದ ಗಮನ ಸೆಳೆದ್ರು. ಹೀಗೆ ಸಿಂಗಲ್ಸ್ ನಲ್ಲಿ ಗೆಲುವಿನ ಹಾದಿಯಲ್ಲಿ ಸಾಗುತ್ತಿದ್ದ ಅಶ್ವಿನಿ ಪೊನ್ನಪ್ಪಗೆ ಸಾಥಿಯಾಗಿ ಸಿಕ್ಕಿದ್ದು ಹೈದ್ರಾಬಾದ್ ನ ಮತ್ತೊಂದು ಪ್ರತಿಭೆ ಜ್ವಾಲಾ ಗುಟ್ಟಾ..

ಜ್ವಾಲಾ ಗುಟ್ಟಾ ಜೊತೆ ಸೇರಿಕೊಂಡ ಅಶ್ವಿನಿ ಡಬಲ್ಸ್ ನಲ್ಲೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ರು. ಎಡ್ವಿನ್ ಇರೈವನ್ ಮತ್ತು ಎಸ್.ಎಂ. ಆರೀಫ್ ಅವರಿಂದಲೂ ತರಬೇತಿ ಪಡೆದ ಅಶ್ವಿನಿ ಪೊನ್ನಪ್ಪ ಡಬಲ್ಸ್ ನಲ್ಲಿ ಶ್ರೇಷ್ಠ ಶ್ರೇಯಾಂಕವನ್ನೂ ತಲುಪಿದ್ರು. ಇನ್ನು ಅಶ್ವಿನಿ ಪೊನ್ನಪ್ಪ ಹಾಗೂ ಜ್ವಾಲಾ ಗುಟ್ಟ ಜೋಡಿ ಅದ್ಭುತವನ್ನ ಸಾಧಿಸಿದ್ದು 2010ರ ಕಾಮನ್ ವೆಲ್ತ್ ಗೇಮ್ಸ್​​ನಲ್ಲಿ. ದೆಹಲಿಯಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಟಾಪ್ ಪ್ಲೇಯರ್ ಗಳ ಸವಾಲಿನ ನಡುವೆಯೂ ಅಶ್ವಿನಿ ಪೊನ್ನಪ್ಪ ಜೋಡಿ ಚಿನ್ನದ ಪದಕಕ್ಕೆ ಕೊರಳೊಡ್ಡಿತು. ಬಳಿಕ ಇದೇ ಪ್ರದರ್ಶನ ಮಟ್ಟವನ್ನ ಕಾಯ್ದುಕೊಂಡ ಈ ಬ್ಯಾಡ್ಮಿಂಟನ್ ಜೋಡಿ 2011ರಲ್ಲಿ ನಡೆದ ವಿಶ್ವಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದ ಸಾಧನೆ ತೋರಿತು.

ಇದಾದ ನಂತ್ರ ಅಶ್ವಿನಿ ಪೊನ್ನಪ್ಪ ಅವರ ಬ್ಯಾಡ್ಮಿಂಟನ್ ಕೆರಿಯರ್​​​ನಲ್ಲಿ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿರೋದು ಲಂಡನ್ ಒಲಿಂಪಿಕ್ಸ್.. 2012ರಲ್ಲಿ ನಡೆದ ಈ ಕ್ರೀಡಾಕೂಟ ಪೊನ್ನಪ್ಪ ಹಾಗೂ ಗುಟ್ಟಾ ಜೋಡಿಗೆ ಅಷ್ಟೊಂದು ಸುಲಭವಾಗಿರಲಿಲ್ಲ. ಆರಂಭಿಕ ಮ್ಯಾಚ್ ಅನ್ನು ಜಪಾನೀ ಜೋಡಿ ರಿಕಾ ಕಕೀವಾ ಮತ್ತು ಮಿಝುಕಿಯ ಫುಜಿ ವಿರುದ್ಧ ಆಡಿ ಸೋತರು. ಆದರೆ ಆಟಕ್ಕೆ ಮರಳಿದ ಈ ಜೋಡಿ ಮುಂದಿನ ಪಂದ್ಯದಲ್ಲಿ ಚೈನಾ ತೈಪೆಯ ಜೋಡಿ ಚೆಂಗ್ ಮತ್ತು ಚೈನ್ ಆಫ್ ವಿರುದ್ಧ 25-23, 14-21, 21-18 ರಲ್ಲಿ ಗೆಲುವು ಸಾಧಿಸಿತು. ಆದ್ರೆ ಮುಂದಿನ ಪಂದ್ಯಗಳಲ್ಲಿ ಗಮನಾರ್ಹ ಸಾಧನೆ ತೋರಿದರೂ ಸಹ ಪದಕ ಗೆಲ್ಲುವಲ್ಲಿ ವಿಫಲವಾಯ್ತು. ಒಲಿಂಪಿಕ್ ಸೋಲಿನಿಂದ ಹೊರಬಂದ ಅಶ್ವಿನಿ ಪೊನ್ನಪ್ಪ ಮತ್ತೆ ತಮ್ಮ ಹಳೆಯ ಲಯಕ್ಕೆ ವಾಪಸ್ಸಾಗಿದ್ದು ವಿಶೇಷ.

ಸಕಲ ಕಲಾ ವಲ್ಲಭೆ ಅಂತ ಕರೆಸಿಕೊಳ್ಳುವ ಅಶ್ವಿನಿಗೆ ಕೇವಲ ಬ್ಯಾಡ್ಮಿಂಟನ್ ಮಾತ್ರ ಅಚ್ಚುಮೆಚ್ಚಲ್ಲ. ನೃತ್ಯ, ಚಾರಣ ಕೂಡ ತುಂಬಾ ಇಷ್ಟ.. 2010ರಲ್ಲಿ ನಡೆದ ಸಹರಾ ಇಂಡಿಯಾ ಸ್ಪೋರ್ಟ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಶ್ರೀಶಾಂತ್ ಜೊತೆಗೆ ಹೆಜ್ಜೆ ಹಾಕಿ ಮಿಂಚಿದ್ದು ನೆನಪೇ ಇದೆ. ಇನ್ನು ಕುಟುಂಬದ ಸದಸ್ಯರೊಂದಿಗೆ ಬಾಂಧವ್ಯ ಬೆಳೆಸಿಕೊಂಡಿರೋ ಅಶ್ವಿನಿಪೊನ್ನಪ್ಪಗೆ ಬ್ಯಾಡ್ಮಿಂಟನ್ ನಲ್ಲಿ ಇನ್ನಷ್ಟು ಸಾಧಿಸುವ ಉತ್ಸಾಹವಿದೆ. ಈ ಕನ್ನಡತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಮಿಂಚಲಿ ಅಂತ ನಾವೂ ಹಾರೈಸೋಣ..