ಮಹಿಳೆಯರನ್ನು ಕಾಡುವ ಮಹಾಮಾರಿ - ಭಾರತದಲ್ಲಿ ದುಪ್ಪಟ್ಟಾಗಲಿದೆ ಸ್ತನ ಕ್ಯಾನ್ಸರ್ ಪೀಡಿತರ ಸಂಖ್ಯೆ

ಟೀಮ್​ ವೈ.ಎಸ್​.ಕನ್ನಡ

ಮಹಿಳೆಯರನ್ನು ಕಾಡುವ ಮಹಾಮಾರಿ - ಭಾರತದಲ್ಲಿ ದುಪ್ಪಟ್ಟಾಗಲಿದೆ ಸ್ತನ ಕ್ಯಾನ್ಸರ್ ಪೀಡಿತರ ಸಂಖ್ಯೆ

Sunday January 10, 2016,

2 min Read

ಸ್ತನ ಕ್ಯಾನ್ಸರ್ ಮಹಿಳೆಯರನ್ನು ಕಾಡುತ್ತಿರುವ ಮಹಾಮಾರಿ. ಭಾರತದಲ್ಲಂತೂ ಸ್ತನ ಕ್ಯಾನ್ಸರ್ ಭೀತಿ ಮತ್ತಷ್ಟು ಹೆಚ್ಚಾಗಿದೆ. ಈ ಆತಂಕಕ್ಕೆ ಕಾರಣ 2030ರ ವೇಳೆಗೆ ಭಾರತದಲ್ಲಿ ಸ್ತನ ಕ್ಯಾನ್ಸರ್ ಪೀಡಿತರ ಸಂಖ್ಯೆ ದುಪ್ಪಟ್ಟಾಗಲಿದೆ. ಕೇಂದ್ರ ಸರ್ಕಾರ ಇತ್ತೀಚೆಗಷ್ಟೆ ರಾಜ್ಯಸಭೆಯಲ್ಲಿ ಈ ಆಘಾತಕಾರಿ ಮಾಹಿತಿಯನ್ನು ಹೊರಗೆಡವಿದೆ. 2014ರಲ್ಲಿ ಭಾರತದಲ್ಲಿ ಸ್ತನ ಕ್ಯಾನ್ಸರ್‍ನಿಂದ ಬಳಲುತ್ತಿರುವವ ಸಂಖ್ಯೆ 97,328ರಷ್ಟಿತ್ತು. 2030ರ ವೇಳೆಗೆ ಸ್ತನ ಕ್ಯಾನ್ಸರ್ ಪೀಡಿತರ ಸಂಖ್ಯೆ 1,84,000 ದಷ್ಟಾಗಲಿದೆ ಅಂತಾ ರಾಜ್ಯಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ ಹೇಳಿದ್ದಾರೆ.

ಈ ಬಗ್ಗೆ ಅಧ್ಯಯನ ನಡೆಸಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ವರದಿಯೊಂದನ್ನು ನೀಡಿದೆ. ವರದಿ ಪ್ರಕಾರ ದಿನೇ ದಿನೇ ಸ್ತನ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರು, ಚೆನ್ನೈ, ದೆಹಲಿ ಮತ್ತು ಮುಂಬೈನಲ್ಲಿ ಸ್ತನ ಕ್ಯಾನ್ಸರ್‍ನಿಂದ ಬಳಲುತ್ತಿರುವವರ ಸಂಖ್ಯೆ ಅಧಿಕವಾಗಿದೆ. ಬೆಂಗಳೂರಲ್ಲಿ 35-44 ವರ್ಷ ವಯಸ್ಸಿನ ಮಹಿಳೆಯರಲ್ಲಿ ಈ ಖಾಯಿಲೆ ಹೆಚ್ಚಾಗಿ ಕಂಡುಬರುತ್ತಿದೆ. ಚೆನ್ನೈ, ದೆಹಲಿ ಮತ್ತು ಮುಂಬೈನಲ್ಲಿ 45-54 ವರ್ಷದೊಳಗಿನ ಮಹಿಳೆಯರು ಸ್ತನ ಕ್ಯಾನ್ಸರ್‍ಗೆ ತುತ್ತಾಗಿದ್ದಾರೆ. ಅಷ್ಟೇ ಅಲ್ಲ ಮುಂಬೈನಲ್ಲಿ 24 ವರ್ಷದೊಳಗಿನ ಯುವತಿಯರಲ್ಲೂ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ತಾ ಇದೆ.

image


ಸ್ತನ ಕ್ಯಾನ್ಸರ್ ಲಕ್ಷಣಗಳು ಕಂಡುಬಂದಿದ್ರೂ ಅದನ್ನು ನಿರ್ಲಕ್ಷಿಸುತ್ತಿರುವವರ ಸಂಖ್ಯೆ ಲಭ್ಯವಾಗಿಲ್ಲ ಅಂತಾ ಸಚಿವ ಜೆ.ಪಿ.ನಡ್ಡಾ ತಿಳಿಸಿದ್ದಾರೆ. ಅದರ ಜೊತೆಜೊತೆಗೆ ಸ್ತನ ಕ್ಯಾನ್ಸರ್‍ನ ಅಪಾಯದ ಬಗ್ಗೆ ಭಾರತೀಯ ಮಹಿಳೆಯರಲ್ಲಿ ಹೆಚ್ಚು ಜಾಗೃತಿ ಮೂಡಿಲ್ಲ ಅನ್ನೋದನ್ನು ಕೂಡ ಅವರು ಉಲ್ಲೇಖಿಸಿದ್ದಾರೆ. ಸದ್ಯ ಭಾರತದಲ್ಲಿ ಸ್ತನ ಕ್ಯಾನ್ಸರ್ ಮಹಾಪಿಡುಗಿನಂತೆ ಕಾಡುತ್ತಿದೆ. ಜಗತ್ತಿನ ಸ್ತನ ಕ್ಯಾನ್ಸರ್ ಭಾದಿತ ದೇಶಗಳ ಪೈಕಿ ಭಾರತ 2ನೇ ಸ್ಥಾನದಲ್ಲಿದೆ. ಅದರಲ್ಲೂ ಮಹಾನಗರಗಳಲ್ಲೇ ಸ್ತನ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚು. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ಸ್ತನ ಕ್ಯಾನ್ಸರ್ ಬಾಧಿತ ಮಹಿಳೆಯರಿದ್ದಾರೆ. ಒಂದು ಲಕ್ಷ ಜನರಲ್ಲಿ ಸುಮಾರು 36 ಮಂದಿ ಸ್ತನ ಕ್ಯಾನ್ಸರ್‍ನಿಂದ ಬಳಲುತ್ತಿದ್ದಾರೆ. ಒಂದು ಲಕ್ಷ ಜನಸಂಖ್ಯೆಯಲ್ಲಿ ತಿರುವನಂತಪುರದಲ್ಲಿ 35, ಚೆನ್ನೈನಲ್ಲಿ 32, ದೆಹಲಿಯಲ್ಲಿ 32, ಮುಂಬೈನಲ್ಲಿ 31, ಅಹಮದಾಬಾದ್‍ನಲ್ಲಿ 27 ಹಾಗೂ ಕೋಲ್ಕತ್ತಾದಲ್ಲಿ 25 ಮಂದಿ ಸ್ತನ ಕ್ಯಾನ್ಸರ್‍ಗೆ ತುತ್ತಾಗಿದ್ದಾರೆ.

ಸ್ತನ ಕ್ಯಾನ್ಸರ್‍ಗೆ ಆನುವಂಶಿಕ ಕಾರಣಗಳಿವೆ ಅನ್ನೋದು ಸಂಶೋಧನೆಯಿಂದಲೂ ದೃಢಪಟ್ಟಿದೆ. ಶೇ.10 ರಿಂದ 15ರಷ್ಟು ಆನುವಂಶೀಯತೆ ಕೂಡ ಸ್ತನ ಕ್ಯಾನ್ಸರ್‍ಗೆ ಕಾರಣವಾಗುತ್ತಿದೆ. ಕುಟುಂಬದಲ್ಲಿ ಯಾರಾದ್ರೂ ಸ್ತನ ಕ್ಯಾನ್ಸರ್‍ನಿಂದ ಬಳಲಿದ್ದರೆ, ಉಳಿದ ಹೆಣ್ಣು ಮಕ್ಕಳು ಆ ಬಗ್ಗೆ ಎಚ್ಚರಿಕೆ ವಹಿಸಲೇಬೇಕು. ಸಾಮಾನ್ಯವಾಗಿ 55 ವರ್ಷ ದಾಟಿದವರಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತೆ ಅನ್ನೋ ಮಾತಿತ್ತು. ಆದ್ರೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಅಧ್ಯಯನದ ಪ್ರಕಾರ ಹದಿಹರೆಯದವರನ್ನೂ ಸ್ತನ ಕ್ಯಾನ್ಸರ್ ಆವರಿಸಿಕೊಳ್ಳುತ್ತಿದೆ. ಪಾಶ್ಚಿಮಾತ್ಯ ಮಹಿಳೆಯರಿಗೆ ಹೋಲಿಸಿದಲ್ಲಿ, ಭಾರತೀಯ ಮಹಿಳೆಯರಿಗೆ 10 ವರ್ಷ ಮೊದಲೇ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ.

ಎಲ್ಲ ಮಹಿಳೆಯರು ನಿಯಮಿತವಾಗಿ ತಜ್ಞ ವೈದ್ಯರಿಂದ ತಪಾಸಣೆಗೆ ಒಳಗಾಗಬೇಕು. ರೋಗದ ಕೌಟುಂಬಿಕ ಹಿನ್ನೆಲೆ ಉಳ್ಳವರಂತೂ ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಲೇಬೇಕು. ರೋಗದ ಲಕ್ಷಣಗಳು, ಅದರಿಂದಾಗುವ ಅಪಾಯ ಮತ್ತು ಚಿಕಿತ್ಸೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರೆ ಮಾತ್ರ ಸ್ತನ ಕ್ಯಾನ್ಸರ್‍ಗೆ ಬ್ರೇಕ್ ಹಾಕಬಹುದು.