ಕನಸುಗಳ ಬೆನ್ನುಹತ್ತಿರುವ ಸಿದ್ಧಾರ್ಥ್ ಜೋಷಿಯ ಟೆಲ್ ಮಿ ಯುವರ್ ಡ್ರೀಮ್ ಯೋಜನೆ

ಟೀಮ್​ ವೈ.ಎಸ್​.

ಕನಸುಗಳ ಬೆನ್ನುಹತ್ತಿರುವ ಸಿದ್ಧಾರ್ಥ್ ಜೋಷಿಯ ಟೆಲ್ ಮಿ ಯುವರ್ ಡ್ರೀಮ್ ಯೋಜನೆ

Monday October 26, 2015,

3 min Read

ಪುಣೆಯ ರಸ್ತೆಗಳಿಂದ ಹಿಡಿದು ಸಿಂಗಾಪುರದ ಗಗನಚುಂಬಿ ಕಟ್ಟಡಗಳ ಬಳಿ ಹೋದರೂ ಸಿದ್ಧಾರ್ಥ್ ಜೋಷಿ ಮತ್ತು ಅವರ ಕ್ಯಾಮೆರಾ ಜನರ ಬಳಿ ಕೇಳುವುದು ಒಂದೇ ಪ್ರಶ್ನೆ. ನಿಮ್ಮ ಕನಸೇನು ಎಂಬುದು. ಸದಾ ಕಥೆಗಳತ್ತಲೇ ಗಮನ ಹರಿಸುವ, ಸಿದ್ಧಾರ್ಥ್ ಜೋಷಿ ಒಬ್ಬ ಉತ್ಸಾಹಿ ಪ್ರವಾಸಿಗ. ತಮಗೆ ದೊರೆತ ಕಥೆಗಳನ್ನು ಚಿತ್ರವಾಗಿಸುತ್ತಿದ್ದಾರೆ.

ವೃತ್ತಿಯಲ್ಲಿ ಕೈಗಾರಿಕಾ ವಿನ್ಯಾಸಗಾರರಾಗಿರುವ ಸಿದ್ಧಾರ್ಥ್, ಪ್ರಸಿದ್ಧ ಬ್ಲಾಗರ್‌ ಆಗಿಯೂ ಸಕ್ರಿಯರು ಮತ್ತು ಛಾಯಾಗ್ರಾಹಕರು. ಸುತ್ತಮುತ್ತಲಿನ ಜನರ ಕನಸಿನ ಬಗ್ಗೆ ತಿಳಿದುಕೊಳ್ಳುತ್ತಾ ಆ ಕುರಿತಾಗಿ ಛಾಯಾಗ್ರಹಣ ಮಾಡುವುದು ಸಿದ್ಧಾರ್ಥ್ ಅವರ ಹವ್ಯಾಸ. ಇದೇ ಹವ್ಯಾಸ ಈಗ ಟೆಲ್‌ ಮಿ ಯುವರ್ ಡ್ರೀಮ್ ಎಂಬ ಸಾಮಾಜಿಕ ಪರಿಣಾಮವನ್ನುಂಟು ಮಾಡುವ ಯೋಜನೆಯಾಗಿ ಬದಲಾಗಿದೆ.

ಆರಂಭ

“ನಮ್ಮ ತಂದೆಗೆ ಕ್ಯಾಮೆರಾ ಆಪ್ತ ಸಂಗಾತಿಯಾಗಿತ್ತು. ಹೀಗೆಯೇ ನನ್ನ ಬದುಕಿನಲ್ಲೂ ಕ್ಯಾಮೆರಾ ಬಂತು ಮತ್ತು ಫೋಟೋಗ್ರಫಿಯಲ್ಲಿ ಮನಸ್ಸನ್ನು ತೊಡಗಿಸಲು ಕಾರಣವಾಯಿತು. ಸಮಯದೊಂದಿಗೆ ನಾನೊಬ್ಬ ಪ್ರವಾಸಿಗನಾಗಿ ಬದಲಾದೆ ಮತ್ತು ಪ್ರವಾಸದ ಸಂದರ್ಭಗಳನ್ನು ಸೆರೆ ಹಿಡಿಯಲು ಕ್ಯಾಮೆರಾವನ್ನು ಸಮರ್ಥವಾಗಿ ಬಳಸತೊಡಗಿದೆ. ಈಗ ಕ್ಯಾಮೆರಾವನ್ನು ಒಂದು ದೊಡ್ಡ ಶಕ್ತಿಯಾಗಿ ಬಳಸಲು ಯತ್ನಿಸುತ್ತಿದ್ದೇನೆ. ಜನರನ್ನು ಹತ್ತಿರ ತರುವ, ಕನಸುಗಳನ್ನು ಹಂಚಿಕೊಳ್ಳುವ, ಕೆಲವೊಂದು ಕನಸುಗಳನ್ನು ನನಸಾಗಿಸಿಕೊಳ್ಳುವ ಚಿತ್ರಕಥೆಗಳನ್ನು ಸೆರೆಹಿಡಿಯುವ ಸಾಧನವಾಗಿದೆ ನನ್ನ ಕ್ಯಾಮೆರಾ” ಎನ್ನುತ್ತಾರೆ ಸಿದ್ಧಾರ್ಥ.

image


ಟೆಲ್‌ ಮಿ ಯುವರ್ ಡ್ರೀಮ್

ಕಿರಾಣಿ ಅಂಗಡಿಯವರು, ಬಟ್ಟೆ ತೊಳೆಯುವ ಅಗಸರು, ಕಸ ಸಂಗ್ರಹಿಸುವವರು ಹೀಗೆ ನೆರೆಹೊರೆಯ ಹಲವು ದೃಶ್ಯಗಳನ್ನು ಸೆರೆಹಿಡಿಯುವುದರಿಂದ ಕ್ಯಾಮೆರಾದೊಂದಿಗೆ ನಂಟು ಸಾಧಿಸಿದವರು ಸಿದ್ಧಾರ್ಥ್. ಅವರ ಕನಸುಗಳಲ್ಲಿನ ಮುಗ್ಧತೆ ಸಿದ್ಧಾರ್ಥ್​ರ ಗಮನ ಸೆಳೆದಿತ್ತು. ಹೀಗೆ ಫೋಟೋಗಳನ್ನು ತೆಗೆಯುತ್ತಾ ಸಾಮಾಜಿಕ ಮಾಧ್ಯಮವಾಗಿ ಕ್ಯಾಮೆರಾವನ್ನು ಬಳಸಿಕೊಳ್ಳಲಾರಂಭಿಸಿದರು. ಇದೇ ಅವರನ್ನು ಹೆಚ್ಚು ಹೆಚ್ಚು ಪ್ರವಾಸಗಳನ್ನು ಕೈಗೊಳ್ಳಲು ಮತ್ತು ಕನಸುಗಳನ್ನು, ಆಕಾಂಕ್ಷೆಗಳನ್ನು ಸೆರೆಹಿಡಿಯಲು ಪ್ರೇರೇಪಿಸಿತು. ಸೆರೆಹಿಡಿದ ಕನಸುಗಳ ಕುರಿತು ಜವಾಬ್ದಾರಿಯನ್ನೂ ಹೊಂದಿದ್ದಾರೆ ಸಿದ್ಧಾರ್ಥ್. ಚೈತನ್ಯ ಮಹಿಳಾ ಮಂಡಳ್ ಎಂಬ ಎನ್‌ಜಿಓ ಮೂಲಕ ಕನಸುಗಳನ್ನು ಸಂಗ್ರಹಿಸುತ್ತಿದ್ದಾರೆ ಸಿದ್ಧಾರ್ಥ್. ಸಾಮಾನ್ಯವಾಗಿ ಯಾರನ್ನೂ ಗುರುತಿಸಲಾಗದ ಜನರನ್ನು ಸಿದ್ಧಾರ್ಥ್ ಗುರುತಿಸುತ್ತಾರೆ ಮತ್ತು ಅವರ ಫೋಟೋ ತೆಗೆಯುತ್ತಾರೆ. ಅವರ ಕನಸುಗಳನ್ನು ಹಂಚಿಕೊಳ್ಳುತ್ತಾರೆ. ಮಹಾರಾಷ್ಟ್ರದ ರೆಡ್‌ಲೈಟ್ ಏರಿಯಾಜ ಜನ, ಉತ್ತರಪ್ರದೇಶದ ಗ್ರಾಮೀಣ ಪ್ರದೇಶಗಳ ರೈತರಿಂದ ಹಿಡಿದು ತಾವು ಕೆಲಸ ಮಾಡುವ ಸಿಂಗಾಪುರದಲ್ಲಿರುವ ಜನರ ಕನಸುಗಳನ್ನು ಸಿದ್ಧಾರ್ಥ್ ಸೆರೆಹಿಡಿಯುತ್ತಾರೆ. ಅನೇಕ ಸಂಘಟನೆಗಳ ಜೊತೆ ಕಾರ್ಯನಿರ್ವಹಿಸಲು ಸಿದ್ಧಾರ್ಥ್ ಉತ್ಸುಕರಾಗಿದ್ದಾರೆ. ತಾವು ಸೆರೆ ಹಿಡಿದ ಕನಸುಗಳನ್ನು ಪ್ರಪಂಚದಾದ್ಯಂತ ಪಸರಿಸಲು, ಫಂಡ್‌ಗಳನ್ನು ಸಂಗ್ರಹಿಸುವ ಮೂಲಕ ಬಡಜನರ, ಮುಗ್ಧರ ಕನಸುಗಳನ್ನು ನನಸಾಗಿಸಲು ಶ್ರಮಿಸುತ್ತಿದ್ದಾರೆ.

ಅನುಭವಗಳು

ಜೀವನದ ವಿವಿಧ ಹಾದಿಗಳಲ್ಲಿ ನಡೆಯುತ್ತಿರುವ ಜನರನ್ನು ಭೇಟಿಯಾಗುವುದು ಒಂದು ಆಸಕ್ತಿದಾಯಕ ವಿಚಾರ. “ಕಸ ಸಂಗ್ರಹಿಸುವ ಹುಡುಗನನ್ನು ಒಮ್ಮೆ ಭೇಟಿಯಾಗಿದ್ದೆ. ಅವನ ಬಳಿ ನಿನ್ನ ಕನಸೇನು ಎಂದು ಕೇಳಿದ್ದೆ. ಕಸ ಸಂಗ್ರಹಿಸುವ ಆ ಹುಡುಗ ಡಾಕ್ಟರ್ ಆಗಬಯಸಿದ್ದ. ಇಂತಹ ಕನಸುಗಳನ್ನು ಮನಸ್ಸಿಗೆ ನಾಟುತ್ತವೆ ಮತ್ತು ಇಂತಹ ಮಕ್ಕಳ ಸಬಲೀಕರಣದತ್ತ ಗಮನಹರಿಸುವಂತೆ ಮಾಡುತ್ತದೆ” ಎಂದು ತಮ್ಮ ಅನುಭವವನ್ನು ಹಂಚಿಕೊಳ್ಳಲಾರಂಭಿಸುತ್ತಾರೆ ಸಿದ್ಧಾರ್ಥ್. ಗೋವಾದಲ್ಲಿ ಮರೆಯಲಾಗದ ಅನುಭವ ನೀಡಿದ ವೃದ್ಧೆಯ ಬಗ್ಗೆಯೂ ಸಿದ್ಧಾರ್ಥ್ ಹೇಳುತ್ತಾರೆ. ಆ ಅಜ್ಜಿ ಒಂದು ಹಳೆಯ ಮನೆಯಲ್ಲಿ ವಾಸಿಸುತ್ತಿದ್ದರು. ಆ ಮನೆಯನ್ನು ಸಂರಕ್ಷಿಸಿಕೊಳ್ಳುವುದಕ್ಕಾಗಿ ತಮ್ಮ ಇಡೀ ಜೀವನವನ್ನು ಸವೆಸಿದ್ದರು. ಎಲ್ಲಾ ಅನುಭವಗಳೂ ಇಂಥದ್ದೇ ಭಾವಾನಾತ್ಮಕವಾಗಿರುವುದಿಲ್ಲ. ಎಲ್ಲರೂ ಅವರ ಫೋಟೋ ತೆಗೆಯಲು, ಅವರ ಕನಸುಗಳನ್ನು ಹಂಚಿಕೊಳ್ಳಲು ಇಚ್ಛಿಸುವುದಿಲ್ಲ. ತಿರಸ್ಕಾರದಿಂದ ಬೇಸರವಾಗುತ್ತದೆ. ಇಂತಹ ಘಟನೆಗಳು ನಡೆದ ಬಳಿಕ ಮುಂದಿನ ವ್ಯಕ್ತಿಯ ಬಳಿ ಮಾತನಾಡುವಾಗ ಸಿದ್ಧಾರ್ಥ್ ಹೆಚ್ಚಿನ ಎಚ್ಚರಿಕೆ ವಹಿಸುತ್ತಾರೆ.

ಮೂಲತಃ ಉತ್ತರಾಖಂಡ್‌ನವರಾದರೂ ಸಿದ್ಧಾರ್ಥ್ ಹುಟ್ಟಿದ್ದು ಬಿಹಾರದಲ್ಲಿ ಈಗ ಪುಣೆಯಲ್ಲಿ ವಾಸಿಸುತ್ತಿದ್ದಾರೆ. ದೇಶದ ಉದ್ದಗಲಕ್ಕೂ ಸಿದ್ಧಾರ್ಥ್ ಸಂಚರಿಸಿದ್ದಾರೆ. ಈ ಪ್ರವಾಸ ಸಿದ್ಧಾರ್ಥ್‌ರ ಕೆಲಸ ಹಾಗೂ ಚಿಂತನೆಯ ಮೇಲೆ ಪರಿಣಾಮಕಾರಿ ಪ್ರಭಾವ ಬೀರಿದೆ. ಪ್ರಯಾಣಗಳು ಕಲಿಸಿದ ಪಾಠಗಳ ಬಗ್ಗೆ ಸಿದ್ಧಾರ್ಥ್ ಹೀಗೆ ಹೇಳಿಕೊಳ್ಳುತ್ತಾರೆ. “ಪ್ರವಾಸಗಳಿಂದ ನನ್ನ ವರ್ತನೆಯಲ್ಲಿ ಹಲವು ಸುಧಾರಣೆಯಾಗಿದೆ. ಜನರನ್ನು ಅವರಿರುವ ರೀತಿಯಲ್ಲೇ ಒಪ್ಪಿಕೊಳ್ಳುವುದು ನನಗೆ ಸಾಧ್ಯವಾಗಿದೆ. ಎಲ್ಲರೂ ವಿಭಿನ್ನ ಮತ್ತು ವಿಶಿಷ್ಟವಾದ ವ್ಯಕ್ತಿತ್ವ ಹೊಂದಿರುತ್ತಾರೆ. ಎಲ್ಲರಿಗೂ, ಅವರ ಎಲ್ಲಾ ನಂಬಿಕೆಗಳು ಮತ್ತು ಅಭಿಪ್ರಾಯದೊಂದಿಗೆ ಬದುಕಲು ಈ ಪ್ರಪಂಚದಲ್ಲಿ ಜಾಗವಿದೆ. ಈ ಪ್ರಪಂಚ ತುಂಬಾ ಸುರಕ್ಷಿತವಾದ ಜಾಗ ಎಂಬುದನ್ನು ಅರಿತಿದ್ದೂ ಸಹ ಪ್ರವಾಸಗಳಿಂದಲೇ. ಜನರು ಮತ್ತು ಅವರ ಅಂತರಾಳದಲ್ಲಿ ಅಡಗಿರುವ ಆಕಾಂಕ್ಷೆಗಳು ಅವರು ಯಾವುದೇ ಪ್ರದೇಶದಿಂದ ಬಂದಿದ್ದರೂ ಕೆಲವು ಬಾರಿ ಒಂದೇ ರೀತಿಯಾಗಿರುತ್ತವೆ” ಎನ್ನುತ್ತಾರೆ ಸಿದ್ಧಾರ್ಥ್.

image


ಸ್ಫೂರ್ತಿ

ನೊಬೆಲ್ ಪ್ರಶಸ್ತಿ ವಿಜೇತರಾದ ಕೈಲಾಶ್ ಸತ್ಯಾರ್ಥಿಯವರಿಂದ ಸಿದ್ಧಾರ್ಥ್ ಬಹಳಷ್ಟು ಪ್ರೇರೇಪಿತರಾಗಿದ್ದಾರೆ. “ಕೈಲಾಶ್ ಸತ್ಯಾರ್ಥಿ ಕೈಗೊಂಡಿರುವ ಕಾರ್ಯ ಶ್ಲಾಘನೀಯ ಮತ್ತು ಅವರೊಂದಿಗೆ ಕೆಲಸ ಮಾಡಲು ನನಗೆ ಬಹಳ ಇಷ್ಟವಾಗುತ್ತದೆ. ಅಲ್ಲದೇ ಹೆಲ್ಪ್ ಏಜ್ ಇಂಡಿಯಾ, ತುಂಬಾ ಒಳ್ಳೆಯ, ಸಮರ್ಪಕ ಕೆಲಸ ಮಾಡುತ್ತಿದೆ. ಈ ಸಂಸ್ಥೆಯೂ ಸಹ ನನ್ನ ಕೆಲಸಕ್ಕೆ ಮತ್ತು ಇನ್‌ಸ್ಟಾಗ್ರಾಮ್ ಯೋಜನೆಯೊಂದಕ್ಕೆ ಬೆಂಬಲ ನೀಡಿದ್ದಾರೆ.” ಎನ್ನುತ್ತಾರೆ ಸಿದ್ಧಾರ್ಥ್. ಸಿದ್ಧಾರ್ಥ್‌ರ ಫೋಟೋಗ್ರಫಿಗಳು ನಮ್ಮಲ್ಲಿ ಒಂದು ಮರೆಯಲಾರದ ಅನುಭವವನ್ನು ಅಚ್ಚೊತ್ತಿಬಿಡುತ್ತವೆ. ಫೋಟೋದೊಂದಿಗೆ ಸೇರಿಹೋಗಿರುವ ಕನಸುಗಳು ನಮ್ಮಲ್ಲಿ ಗಾಢವಾದ ಪರಿಣಾಮ ಬೀರುತ್ತವೆ.

ನಿರೀಕ್ಷೆ...

“ಅವರ ಕನಸುಗಳ ತುಂಬಾ ಸರಳ, ತುಂಬಾ ಮಹತ್ವಾಕಾಂಕ್ಷೆ ಮತ್ತು ಅವುಗಳನ್ನು ಯಾವಾಗಲೂ ನನ್ನನ್ನು ಸಂತೋಷಪಡಿಸುತ್ತವೆ. ಕೆಲವೊಂದು ಮನಸ್ಸಿಗೆ ನಾಟಿ, ಅಲ್ಲೇ ಉಳಿದುಬಿಡುತ್ತವೆ. ಕೆಲವೊಮ್ಮೆ ಕನಸು ಕಾಣುವ ಸ್ಥಿತಿಯಲ್ಲಿಲ್ಲದೇ ಇದ್ದರೂ ಅವರು ಅಸಾಧ್ಯವಾದ ಕನಸುಗಳನ್ನು ಹೆಣೆಯುತ್ತಿರುತ್ತಾರೆ” ಎನ್ನುತ್ತಾರೆ ಸಿದ್ಧಾರ್ಥ್. ತಮ್ಮ ಫೋಟೋಗಳು ಮತ್ತು ಟೆಲ್ ಮಿ ಯುವರ್ ಡ್ರೀಮ್ ಮೂಲಕ ಇಂತಹ ಕನಸುಗಳನ್ನು ನನಸಾಗಿಸುವುದು ಮತ್ತು ಅದು ನನಸಾಗಲು ಸರಿಯಾದ ವ್ಯಕ್ತಿಗಳನ್ನು ತಲುಪುವುದು ಸಿದ್ಧಾರ್ಥ್​ರ ಗುರಿ. ಕನಸುಗಳು ಮತ್ತು ಕನಸುಗಳನ್ನು ನನಸಾಗಿಸುವ ಜನರ ಮಧ್ಯದ ಸಂಪರ್ಕಸೇತುವೆಯಾಗಿ ಕೆಲಸ ಮಾಡಲು ಸಿದ್ಧಾರ್ಥ್ ಇಚ್ಛಿಸುತ್ತಾರೆ. ಇದೆಲ್ಲಾ ಆರಂಭವಾಗಿದ್ದೇ ಕನಸುಗಳಿಂದ. ಸಿದ್ಧಾರ್ಥ್‌ರ ನಿರೀಕ್ಷೆಗಳು ಮತ್ತು ಯೋಜನೆಗೆ ಯುವರ್ ಸ್ಟೋರಿ ಶುಭಹಾರೈಸುತ್ತದೆ.