ರಿಯೋ ಒಲಿಂಪಿಕ್ಸ್​ನಲ್ಲಿ 'ಸೌದಿ'ಯ ಮಿಂಚು..

ಟೀಮ್ ವೈ.ಎಸ್.ಕನ್ನಡ 

0

ಈಗ ಎಲ್ಲಾ ಕಡೆ ರಿಯೋ ಒಲಿಂಪಿಕ್ಸ್​ನದ್ದೇ ಮಾತು. ಅಥ್ಲೀಟ್​ಗಳೆಲ್ಲ ಈ ಕ್ರೀಡಾಹಬ್ಬಕ್ಕೆ ಸಜ್ಜಾಗ್ತಿದ್ದಾರೆ. ಈ ಬಾರಿಯ ಸ್ಪರ್ಧಿಗಳಲ್ಲಿ ಎಲ್ಲರ ಗಮನಸೆಳೆಯುತ್ತಿರುವವರು ಸೌದಿ ಅರೇಬಿಯಾದ ಸಾರಾ ಅಲ್ ಅತ್ತರ್. ಈಕೆ ಸೌದಿ ಅರೇಬಿಯಾದ ಮಹಿಳಾ ಕ್ರೀಡೆಗಳ ಪ್ರವರ್ತಕಿ ಅಂದ್ರೂ ತಪ್ಪಾಗಲಾರದು. ರಿಯೋ ಓಲಿಂಪಿಕ್ಸ್​ನಲ್ಲಿ ಅವರದ್ದು ಈ ಬಾರಿ ಹೋರಾಟದ ಮ್ಯಾರಥಾನ್, ಯಾಕಂದ್ರೆ ಸಂಪ್ರದಾಯವಾದಿ ರಾಷ್ಟ್ರದಲ್ಲಿ ಮಹಿಳೆಯರಿಗಿರುವ ಅಡೆತಡೆಗಳನ್ನು ಬೇಧಿಸಲು ಸಾರಾ ಅಲ್ ಅತ್ತರ್ ಸಿದ್ಧವಾಗಿದ್ದಾರೆ. 2012ರಲ್ಲಿ ನಡೆದ ಲಂಡನ್ ಗೇಮ್ಸ್​ನಲ್ಲೂ ಸಾರಾ ಪಾಲ್ಗೊಂಡಿದ್ದರು. ಆ ಸಮಯದಲ್ಲಿ ಆಕೆಯೇ ಸೌದಿಯ ಮೊದಲ ಮಹಿಳಾ ಒಲಂಪಿಯನ್. ಈಗ ಸಾರಾಗೆ 23ರ ಹರೆಯ, ರಿಯೋ ಒಲಿಂಪಿಕ್ಸ್ನಲ್ಲಿ 42 ಕಿಲೋ ಮೀಟರ್ ಮ್ಯಾರಥಾನ್ ರೇಸ್​ನಲ್ಲಿ ಅವರು ಓಡಲಿದ್ದಾರೆ. ಸೌದಿ ಅರೇಬಿಯಾದ ಒಟ್ಟು ನಾಲ್ವರು ಮಹಿಳೆಯರು ಮ್ಯಾರಥಾನ್​ನಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ಸೌದಿ ಅರೇಬಿಯಾದ 7 ಮಂದಿ ಪುರುಷ ಕ್ರೀಡಾಪಟುಗಳು ಸಹ ರಿಯೋ ಗೇಮ್ಸ್​ನಲ್ಲಿ ಪೈಪೋಟಿಗಿಳಿಯುತ್ತಿದ್ದಾರೆ.

ಸೌದಿ ಅರೇಬಿಯಾದಲ್ಲಿ ಲಿಂಗ ವಿಭಾಗಗಳು ತುಂಬಾನೇ ಸಂವೇದನಾಶೀಲ ವಿಷಯ. ಹಾಗಾಗಿ ಸೌದಿ ಒಲಿಂಪಿಕ್ ಸಮಿತಿಯ ವೆಬ್​ಸೈಟ್​ನಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ಮಹಿಳಾ ಕ್ರಿಡಾಪಟುಗಳ ಹೆಸರನ್ನು ಕೂಡ ಉಲ್ಲೇಖಿಸಿಲ್ಲ. ಸಾರಾ ಅಲ್ ಅತ್ತರ್ ಅವರೊಂದಿಗೆ ಜೂಡೋ ಪಟು ವುಜುದ್ ಫಾಹ್ಮಿ, ಫೆನ್ಸರ್ ಲುಬ್ನಾ ಅಲ್ ಒಮೈರ್, ಅಥ್ಲೀಟ್ ಕೆರಿಮನ್ ಅಬು ಅಲ್ ಜದೈಲ್ ಕೂಡ ಸ್ಪರ್ಧಾಕಣಕ್ಕಿಳಿಯುತ್ತಿದ್ದಾರೆ. ಇವರ್ಯಾರೂ ಸ್ಪರ್ಧೆಗೆ ನೇರವಾಗಿ ಅರ್ಹತೆ ಪಡೆದಿಲ್ಲ, ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ ವಿಶೇಷ ಆಹ್ವಾನ ನೀಡಿದೆ.

ಲಂಡನ್ ಗೇಮ್ಸ್​ನಲ್ಲಿ ಪಾಲ್ಗೊಂಡಿದ್ದಕ್ಕೆ ಅತ್ತರ್ ಅವರಿಗೆ ಬೇಸರವೇನಿಲ್ಲ, ರಿಯೋ ಒಲಿಂಪಿಕ್ಸ್​ನಲ್ಲಿ ಭಾಗವಹಿಸುವ ಬಗ್ಗೆ ಯಾವುದೇ ಅನುಮಾನಗಳೂ ಇಲ್ಲ. ``ನಾನು ಸೌದಿ ಅರೇಬಿಯಾದ ಮಹಿಳೆಯರ ಪರವಾಗಿ ಹೋಗುತ್ತಿದ್ದೇನೆ. ದೇಶದ ನೂರಾರು ಬಾಲಕಿಯರಿಗೆ ಪ್ರೇರಣೆಯಾಗಬೇಕು ಎಂಬುದೇ ನನ್ನಾಸೆ'' ಎನ್ನುತ್ತಾರೆ ಅವರು. ಲಂಡನ್ ಗೇಮ್ಸ್​ನಲ್ಲಿ 800 ಮೀಟರ್ ರಿಲೆಯಲ್ಲಿ ಪಾಲ್ಗೊಂಡಿದ್ದ ಸಾರಾ ಅಲ್ ಅತ್ತರ್ ಉತ್ತಮ ಪ್ರದರ್ಶನ ನೀಡಿದ್ದರು. ಹತ್ತಿರದ ಪ್ರತಿಸ್ಪರ್ಧಿಗಿಂತ ಕೇವಲ 30 ಸೆಕೆಂಡ್ ತಡವಾಗಿ ಗುರಿಮುಟ್ಟಿದ್ದ ಸಾರಾ ಅಲ್ ಅತ್ತರ್​ಗೆ ಪ್ರೇಕ್ಷಕರು ಕರತಾಡನ ಮಾಡಿ ಅಭಿನಂದಿಸಿದ್ರು. ಈ ಬಾರಿ ಆಕೆ ಪದಕ ಗೆದ್ದು ಬರಲಿ ಎಂದೇ ಎಲ್ರೂ ಹಾರೈಸ್ತಿದ್ದಾರೆ.

ಇನ್ನು ಈ ಬಾರಿ ಒಲಿಂಪಿಕ್ಸ್ ಕ್ರೀಡಾಕೂಡ ಆಗಸ್ಟ್ 5ರಿಂದ 21ರ ವರೆಗೆ ಬೆಜಿಲ್​ನ ರಿಯೋ ಡಿ ಜನೆರಿಯೋದಲ್ಲಿ ನಡೆಯಲಿದೆ. ದಾಖಲೆಯ ಸಂಖ್ಯೆಯ ಕ್ರೀಡೆಗಳನ್ನು ಆಯೋಜಿಸಲಾಗಿದ್ದು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಕೂಡ ಪಾಲ್ಗೊಳ್ತಿದ್ದಾರೆ. 206 ದೇಶಗಳ 10,500ಕ್ಕೂ ಹೆಚ್ಚು ಅಥ್ಲೀಟ್ಗಳು ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸುತ್ತಿದ್ದಾರೆ.

Related Stories

Stories by YourStory Kannada