ನಗದು ರಹಿತ ವಹಿವಾಟಿಗಾಗಿ ಮೊಬೈಲ್ ವೇದಿಕೆ- ಸಣ್ಣ ವ್ಯಾಪಾರಿಗಳಿಗಾಗಿ `ಫಟ್‍ಕ್ಯಾಶ್'

ಟೀಮ್​​ ವೈ.ಎಸ್​. ಕನ್ನಡ

0

ಆಫ್‍ಲೈನ್ ಮಾರಾಟಗಾರರಿಗೆ ವಹಿವಾಟು ಸರಳಗೊಳಿಸಲು ಸಂಜೀವ್ ಚಧಕ್ `ಫಟ್‍ಕ್ಯಾಶ್' ಎಂಬ ಹೊಸ ಪರಿಕಲ್ಪನೆಯನ್ನೇ ಹುಟ್ಟುಹಾಕಿದ್ದಾರೆ. ಒಮ್ಮೆ ಬೀದಿಬದಿಯ ವ್ಯಾಪಾರಿಯೊಬ್ಬರ ಬಳಿ ಸಂಜೀವ್ ಫೋನ್‍ನಲ್ಲಿ ತರಕಾರಿ ಆರ್ಡರ್ ಮಾಡುತ್ತಿದ್ರು. ಆತ ಬ್ಯುಸಿಯಾಗಿದ್ದಿದ್ರಿಂದ ಏನೇನು ಬೇಕು ಅನ್ನೋದನ್ನು ವಾಟ್ಸ್​​ಆ್ಯಪ್‍ನಲ್ಲಿ ಕಳಿಸುವಂತೆ ಸೂಚಿಸಿದ್ದ. ಆಶ್ಚರ್ಯ ಎಂಬಂತೆ ಸಂಜೀವ್ ಕಚೇರಿಯಲ್ಲಿದ್ದಾಗ ತರಕಾರಿಯನ್ನು ಅವರ ಮನೆಗೆ ಡೆಲಿವರಿ ಮಾಡಲಾಗಿತ್ತು. ವಹಿವಾಟು ತುಂಬಾನೇ ಸರಳವಾಗಿ ನಡೆದಿತ್ತು. ಆದ್ರೆ ಹಣ ಪಾವತಿಸುವ ಸಂದರ್ಭದಲ್ಲಿ ಸಮಸ್ಯೆ ಎದುರಾಗಿತ್ತು. ಸಂಜೀವ್ ಮನೆಯಲ್ಲಿದ್ದ ಸಮಯದಲ್ಲೇ ಆ ವ್ಯಾಪಾರಿ ಹಣ ಕೊಂಡೊಯ್ಯಲು ಯಾರನ್ನಾದ್ರೂ ಕಳುಹಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಹಾಗಾಗಿ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಕೂಡ ವಿದ್ಯುನ್ಮಾನ ಮಾರ್ಗದ ಮೂಲಕ ಹಣ ಸಂದಾಯ ಮಾಡುವ ಮಾರ್ಗವೊಂದನ್ನು ಆವಿಷ್ಕರಿಸಬೇಕೆಂದು ಸಂಜೀವ್ ಅವರಿಗೆ ಅನಿಸಿತ್ತು. ಇದಕ್ಕಾಗಿಯೇ ಅವರು `ಫಟ್‍ಕ್ಯಾಶ್' ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ರು. ಇದೊಂದು ಮೊಬೈಲ್ ವೇದಿಕೆ, ಇದರ ಮೂಲಕ ಆಫ್‍ಲೈನ್ ವ್ಯಾಪಾರಿಗಳು, ಮೊಬೈಲ್ ಪೇಮೆಂಟ್‍ಗಳನ್ನು, ಜಾಹೀರಾತುಗಳನ್ನು ಸ್ವೀಕರಿಸಬಹುದು.

ಇ-ಕಾಮರ್ಸ್ ಕ್ಷೇತ್ರ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಆದ್ರೂ ಇದರ ಪ್ರಮಾಣ ರಿಟೇಲ್ ಮಾರಾಟದ ಶೇ.1ರಷ್ಟು ಮಾತ್ರವಿದೆ. `ಫಟ್‍ಕ್ಯಾಶ್' ಮೂಲಕ ಉಳಿದ ಶೇ.99ರಷ್ಟು ರಿಟೇಲ್ ಸೇಲ್ಸ್ ಅನ್ನು ಕೂಡ ಮಾಡಬಹುದು ಎನ್ನುತ್ತಾರೆ ಸಂಜೀವ್. ಆದ್ರೆ ನಾವು ವಹಿವಾಟು ನಡೆಸುವ ಹಾಲು ಮಾರಾಟಗಾರರು, ತರಕಾರಿ ವ್ಯಾಪಾರಿಗಳು ಎಲ್ಲರೂ ಆಫ್‍ಲೈನ್ ಮಾದರಿಯನ್ನೇ ಅನುಸರಿಸುತ್ತಿದ್ದಾರೆ.

ಗ್ರಾಹಕರು ಮತ್ತು ಮಾರಾಟಗಾರರೊಂದಿಗೆ ಕೆಲಸ...

`ಫಟ್‍ಕ್ಯಾಶ್' ಮೂಲಕ ಆಫ್‍ಲೈನ್ ವ್ಯಾಪಾರಿಗಳು ವಹಿವಾಟನ್ನು ಎಂಜಾಯ್ ಮಾಡಬಹುದು, ಅಕ್ಕಪಕ್ಕದ ವ್ಯಾಪಾರಿಗಳು ಮತ್ತು ಸೇವೆ ಪೂರೈಕೆದಾರರು ನಗದು ಪಾವತಿಗೆ ಗುಡ್‍ಬೈ ಹೇಳಬಹುದು. ಮೊಬೈಲ್ ಫೋನ್ ಬಳಸಿ ಗ್ರಾಹಕರು ಹಣ ಪಾವತಿಸಿ, ಬಿಲ್ ಕೂಡ ಪಡೆಯಬಹುದು. ಈ ವೇದಿಕೆಯನ್ನು ಬಳಸಿ ವ್ಯಾಪಾರಿಗಳು ಹೈಪರ್ ಲೋಕಲ್ ಪ್ರಚಾರ ಮಾಡಬಹುದು, ತಮ್ಮ ನಿಷ್ಠಾವಂತ ಗ್ರಾಹಕರಿಗೆ ಬಹುಮಾನಗಳನ್ನೂ ಕೊಡಬಹುದು ಅನ್ನೋದು ಸಂಜೀವ್ ಅವರ ಅಭಿಪ್ರಾಯ. ಅತ್ಯಂತ ಕಡಿಮೆ ವೆಚ್ಚದಲ್ಲಿ ವ್ಯಾಪಾರಿಗಳು ಈ ಡಿಜಿಟಲ್ ವೇದಿಕೆಯನ್ನು ಬಳಸಿಕೊಳ್ಳಬಹುದು. ವ್ಯಾಪಾರಿಗಳೇ ಖುದ್ದಾಗಿ ತಮ್ಮ ಅಕ್ಕಪಕ್ಕದಲ್ಲೇ ಇರುವ ಗ್ರಾಹಕರನ್ನು ಗುರುತಿಸಿ ಅವರನ್ನು ಆಕರ್ಷಿಸಬಹುದು. ಹಣ ಸಂದಾಯ ಆಟೋಮ್ಯಾಟಿಕ್ ಆಗಿ ಆಗುವುದರಿಂದ ಅವರು ತಮ್ಮ ವಹಿವಾಟನ್ನು ವಿಸ್ತರಿಸಲು ಕೂಡ ಅನುಕೂಲವಾಗಲಿದೆ.

`ಫಟ್‍ಕ್ಯಾಶ್' ಆರಂಭಿಸುವ ಮುನ್ನ ಸಂಜೀವ್ ಡಾಯ್ಚ್ ಬ್ಯಾಂಕ್‍ನ ಡೆಪ್ಯೂಟಿ ಸಿಇಓ ಆಗಿದ್ದರು. ಸಹ ಸಂಸ್ಥಾಪಕ ದೀಪಕ್ ಕೊಠಾರಿ, ಸಂಜೀವ್ ಅವರಿಗೆ ಸಾಥ್ ಕೊಡುವ ಮೊದಲು `ಗ್ರಾಂಟ್ ಥಾನ್ರ್ಟ್‍ನ್'ನಲ್ಲಿ ಕೆಲಸ ಮಾಡುತ್ತಿದ್ರು. 2014ರಲ್ಲಿ ಇವರಿಬ್ಬರ ಉದ್ಯಮ ಪಯಣ ಆರಂಭವಾಗಿದೆ. ಮೂರು ತಿಂಗಳ ಕಾಲ ಈ ಬಗ್ಗೆ ಚರ್ಚಿಸಿ, ಕ್ಷೇತ್ರ ಸಮೀಕ್ಷೆ ನಡೆಸಿ, ಗ್ರಾಹಕರು ಮತ್ತು ವ್ಯಾಪಾರಿಗಳ ಜೊತೆ ಸಂಜೀವ್ ಹಾಗೂ ದೀಪಕ್ ಮಾತುಕತೆ ನಡೆಸಿದ್ರು.

ಸ್ಥಿರವಾದ ಹಂತಕ್ಕೆ ಬಂದ ಪ್ರಕ್ರಿಯೆ...

ಆರಂಭದಲ್ಲಿ ಮೂಲಮಾದರಿಯೇ ಇಲ್ಲದ ಈ ಉತ್ಪನ್ನ ಹೇಗೆ ಕಾರ್ಯನಿರ್ವಹಿಸುತ್ತೆ ಅನ್ನೋದನ್ನು ನಾವೇ ವಿವರಿಸಬೇಕಾಗಿ ಬಂದಿತ್ತು ಎನ್ನುತ್ತಾರೆ ಸಂಜೀವ್. ಹೊಸ ಪರಿಕಲ್ಪನೆಯನ್ನು ಸಣ್ಣ ವ್ಯಾಪಾರಿಗಳಿಗೆ ವಿವರಿಸುವುದು ದೊಡ್ಡ ಸವಾಲಾಗಿತ್ತು. ಉತ್ಪನ್ನ ಒಂದು ಆಕಾರಕ್ಕೆ ಬರುತ್ತಿದ್ದಂತೆ ಸಂಜೀವ್ ಹಾಗೂ ದೀಪಕ್ ವ್ಯಾಪಾರಿಗಳಿಗೆ ಅದರ ಬಳಕೆ ಬಗ್ಗೆ ಡೆಮೋ ಪ್ರದರ್ಶಿಸಿದ್ರು. ಬಳಿಕ ಗ್ರಾಹಕರು ಹಾಗೂ ಮಾರಾಟಗಾರರು ಅದನ್ನು ಒಪ್ಪಿಕೊಂಡ್ರು. ಸಣ್ಣ ಪುಟ್ಟ ವ್ಯಾಪಾರಿಗಳು ತಮ್ಮ ವಹಿವಾಟು ವಿಸ್ತರಿಸಲು ತಂತ್ರಜ್ಞಾನದ ಹುಡುಕಾಟದಲ್ಲಿದ್ದಾರೆ ಅನ್ನೋದು ಆರಂಭದಲ್ಲೇ `ಫಟ್‍ಕ್ಯಾಶ್' ತಂಡಕ್ಕೆ ಖಚಿತವಾಗಿತ್ತು. ವಹಿವಾಟು ಸಮಸ್ಯೆಗಳನ್ನೆಲ್ಲ ಬಗೆಹರಿಸಿಕೊಳ್ಳಲು ಇಷ್ಟು ಸಂಘಟಿತ ಉತ್ಪನ್ನ ಬೇರೊಂದಿರಲಿಲ್ಲ. ವ್ಯಾಪಾರಿಗಳ ದೃಷ್ಟಿಯಿಂದ ನೋಡಿದ್ರೆ ಈ ಉತ್ಪನ್ನ ಅವರಿಗೆ ಹೊಸದು ಹಾಗಾಗಿ ಇದನ್ನು ಅಳವಡಿಸಿಕೊಳ್ಳಲು ಸಮಯ ಬೇಕು ಎನ್ನುತ್ತಾರೆ ಸಂಜೀವ್. ದಶಕಗಳಿಂದ ಒಂದೇ ರೀತಿಯಲ್ಲಿ ವ್ಯಾಪಾರ ಮಾಡ್ತಾ ಇರೋದ್ರಿಂದ ಬದಲಾವಣೆ ಕೊಂಚ ನಿಧಾನವಾಗೋದು ಸಹಜ.

ಬೆಳವಣಿಗೆ ಮತ್ತು ಸೆಳೆತ...

`ಫಟ್‍ಕ್ಯಾಶ್' ವೇದಿಕೆ ಜೂನ್‍ನಲ್ಲಿ ಕಾರ್ಯಾರಂಭ ಮಾಡಿದ್ದು, ಸದ್ಯ ಪೊವೈನಲ್ಲಿ ಸಕ್ರಿಯವಾಗಿದೆ. ಆದಷ್ಟು ಬೇಗ ಮುಂಬೈನ ಇತರೆಡೆಗಳಲ್ಲೂ ಅದನ್ನು ವಿಸ್ತರಿಸುವ ಯೋಜನೆಯನ್ನು ಸಂಜೀವ್ ಹಾಕಿಕೊಂಡಿದ್ದಾರೆ. ಸದ್ಯ 100 ಹೆಚ್ಚು ವ್ಯಾಪಾರಿಗಳನ್ನು ಈ ವೇದಿಕೆ ಹೊಂದಿದ್ದು, 10 ಲಕ್ಷ ರೂಪಾಯಿಗೂ ಅಧಿಕ ವಹಿವಾಟು ನಡೆದಿದೆ. ಪ್ರತಿ ವಹಿವಾಟಿಗೂ ಶುಲ್ಕ ಪಡೆಯುವ ಮೂಲಕ `ಫಟ್‍ಕ್ಯಾಶ್' ಆದಾಯ ಸಂಗ್ರಹಿಸುತ್ತಿದೆ. ತಮ್ಮ ವ್ಯಾಪಾರದ ಬಗ್ಗೆ ಪ್ರಚಾರ ಮಾಡಬೇಕಾದ ಸಂದರ್ಭದಲ್ಲಿ ವ್ಯಾಪಾರಿಗಳು ಅದಕ್ಕೆ ಹಣ ಕೊಡಬೇಕು.

5 ವರ್ಷಗಳ ಹಿಂದೆ ಗಣ್ಯವ್ಯಕ್ತಿಗಳು ಮಾತ್ರ ಸ್ಮಾರ್ಟ್‍ಫೋನ್ ಬಳಸುತ್ತಿದ್ರು. ತಮ್ಮ ಉದ್ಯಮದ ಯಶಸ್ಸಿಗಾಗಿ ವಾಟ್ಸ್​​ಆ್ಯಪ್‍ನಂತಹ ಅಪ್ಲಿಕೇಷನ್‍ಗಳನ್ನು ಬಳಸುತ್ತಿದ್ರು. ಗ್ರಾಹಕರ ಮನಸ್ಥಿತಿ ಈಗ ಬದಲಾಗಿದ್ದು, ಹೆಚ್ಹೆಚ್ಚು ಅನುಕೂಲತೆಗಳನ್ನು ಬಯಸುತ್ತಿದ್ದಾರೆ. ಕಚೇರಿಯಲ್ಲಿ ಕುಳಿತು ತರಕಾರಿ ವ್ಯಾಪಾರಿಗೆ ಹಣ ವಾವತಿಸುವ ಬದಲು, ಭಾನುವಾರ ಮನೆ ಬಾಗಿಲಲ್ಲಿ ಆ ಕೆಲಸ ಮಾಡಲು ಇಚ್ಛಿಸುತ್ತಾರೆ.

ನಗದುರಹಿತ ವಹಿವಾಟು ಮಾರುಕಟ್ಟೆ...

ಸಣ್ಣ ವ್ಯಾಪಾರಿಗಳು ಕೂಡ ತಂತ್ರಜ್ಞಾನದ ಮೊರೆಹೋಗುತ್ತಿರುವುದರಿಂದ ಭಾರತದಲ್ಲಿ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಇಂತಹ ವ್ಯಾಪಾರಿಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡು ಅವರ ಬೆಳವಣಿಗೆಗೆ ನೆರವಾಗಲು `ಫಟ್‍ಕ್ಯಾಶ್' ಮುಂದಾಗಿದೆ. ಮಾರ್ಚ್ 2016ರ ವೇಳೆಗೆ ಈ ವೇದಿಕೆಯಲ್ಲಿ 2000 ವ್ಯಾಪಾರಿಗಳನ್ನು ಹೊಂದುವ ಗುರಿ ಅದರ ಮುಂದಿದೆ. ಆನ್‍ಲೈನ್ ಪ್ಲೇಯರ್‍ಗಳ ಜೊತೆ ಪೈಪೋಟಿಗಿಳಿಯಲು ನಮ್ಮ ಅಕ್ಕಪಕ್ಕದ ವ್ಯಾಪಾರಿಗಳನ್ನು ಸಿದ್ಧಮಾಡಲು `ಫಟ್‍ಕ್ಯಾಶ್' ಕಸರತ್ತು ಮಾಡುತ್ತಿದೆ. `ಫ್ಲಿಂಟ್' ಮತ್ತು `ಲೆವಲ್‍ಅಪ್' ಕೂಡ ಫಟ್‍ಕ್ಯಾಶ್ ಮಾದರಿಯಲ್ಲೇ ಕಾರ್ಯನಿರ್ವಹಿಸುತ್ತಿವೆ. ಆದ್ರೆ ಭಾರತೀಯ ಮಾರುಕಟ್ಟೆ ಇನ್ನೂ ಸಂಪೂರ್ಣವಾಗಿ ನಗದುರಹಿತ ವಹಿವಾಟನ್ನು ಅಳವಡಿಸಿಕೊಂಡಿಲ್ಲ. ನಗರ ಪ್ರದೇಶದ ಶೇ.11ರಷ್ಟು ಜನರು ಮಾತ್ರ ನಗದುರಹಿತ ವಹಿವಾಟು ನಡೆಸುತ್ತಿದ್ದಾರೆ. ಐಡಿಎಫ್ ಮತ್ತು ಐಎಎಂಎಐ ವರದಿಯ ಪ್ರಕಾರ ಶೇ.43ರಷ್ಟು ಮಾರುಕಟ್ಟೆ ನಗದುರಹಿತ ವಹಿವಾಟಿನಲ್ಲಿ ನಿರತವಾಗಿದೆ.

ಲೇಖಕರು: ಸಿಂಧೂ ಕಶ್ಯಪ್​​
ಅನುವಾದಕರು: ಭಾರತಿ ಭಟ್​​