ಚಾಯ್ವಾಲಾ ಆಗಿದ್ದವ ''ಮಿಸ್ಟರ್ ದೆಹಲಿ''ಯಾದ ಯಶೋಗಾಥೆ

ಟೀಮ್ ವೈ.ಎಸ್.ಕನ್ನಡ 

ಚಾಯ್ವಾಲಾ ಆಗಿದ್ದವ ''ಮಿಸ್ಟರ್ ದೆಹಲಿ''ಯಾದ ಯಶೋಗಾಥೆ

Friday April 15, 2016,

4 min Read

ಯಶಸ್ಸಿಗೆ ಯಾವುದೇ ಶಾರ್ಟ್ ಕಟ್ ಮಾರ್ಗಗಳಿಲ್ಲ, ರಾತ್ರೋ ರಾತ್ರಿ ಸಫಲತೆ ದೊರೆಯುವುದಿಲ್ಲ. ಯಶಸ್ಸಿನ ಹಿಂದೆ ಸುದೀರ್ಘ ಸಂಘರ್ಷ ಹಾಗೂ ಅಂತ್ಯವಿಲ್ಲದ ಕಥೆಯಿರುತ್ತದೆ. ಇದನ್ನೆಲ್ಲ ದಾಟಿ ಆತ ಯಶಸ್ಸು ಗಳಿಸಬೇಕು. ಎಲ್ಲ ಕಾಠಿಣ್ಯದ ನಡುವೆಯೂ ಪ್ರಾಮಾಣಿಕವಾಗಿ ಪ್ರಯತ್ನ ಪಟ್ರೆ ಸಫಲತೆ ಅಸಾಧ್ಯವಲ್ಲ. ಈ ರೀತಿ ಸತತ ಪರಿಶ್ರಮ ಹಾಗೂ ಸಮರ್ಪಣೆಯಿಂದ ಸಿಕ್ಕ ಗೆಲುವು ಸದಾ ನಮ್ಮ ಜೊತೆಗಿರುತ್ತದೆ. ಗುರಿ ಸಾಧಿಸಲು ಪ್ರಯತ್ನಶೀಲರಾಗಿರುವವರಿಗೆ ನಿಜಕ್ಕೂ ಇದು ಪ್ರೇರಣೆಯಾಗಬಲ್ಲದು. ಇಂತಹ ಯಶಸ್ಸಿಗೆ ಉತ್ತಮ ಉದಾಹರಣೆ ಅಂದ್ರೆ ದೆಹಲಿಯ ದೇಹಧಾರ್ಢ್ಯ ಪಟು ವಿಜಯ್ ಕುಮಾರ್. ಎಪ್ರಿಲ್ 10ರಂದು ವಿಜಯ್ ಕುಮಾರ್ ಅವರನ್ನು 'ಮಿಸ್ಟರ್ ದೆಹಲಿ'ಯನ್ನಾಗಿ ಆಯ್ಕೆ ಮಾಡಿದ್ದು, ಚಿನ್ನದ ಪದಕ ನೀಡಿ ಗೌರವಿಸಲಾಗಿದೆ. ವಿಜಯ್ ಕುಮಾರ್ ಅವರ ಯಶಸ್ಸಿನ ಬಗ್ಗೆ ಎಲ್ಲೆಡೆ ಸಾಕಷ್ಟು ಚರ್ಚೆಯಾಗಿದೆ. ನೋಡನೋಡುತ್ತಲೇ ದೆಹಲಿಯ ಬಾಡಿ ಬಿಲ್ಡರ್ಗಳ ಪಾಲಿಗೆ ವಿಜಯ್ ಆದರ್ಶಪ್ರಾಯರಾಗಿದ್ದಾರೆ. ಆದ್ರೆ ಈ ಗೆಲುವಿನುದ್ದಕ್ಕೂ ವಿಜಯ್ ಕುಮಾರ್ ಮುಳ್ಳಿನ ಹಾದಿ ಸವೆಸಿದ್ದಾರೆ, ಅನೇಕ ಕಠಿಣ ಪರಿಸ್ಥಿತಿಗಳನ್ನು ಎದುರಿಸಿದ್ದಾರೆ.

image


ವಿಜಯ್ ಕುಮಾರ್ ಇಟ್ಟಿಗೆ ಗೂಡಿನಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿದ್ದಾರೆ. ಮನೆಮನೆಗೆ ಹಾಲು ಹಾಕುವುದು, ದೆಹಲಿಯ ರಕ್ಷಣಾ ಕಾಲೋನಿಯಲ್ಲಿ ಚಹಾ ಮಾರುವುದು ಹೀಗೆ ಕಷ್ಟಪಟ್ಟು ಮೈಬಗ್ಗಿಸಿ ದುಡಿದಿದ್ದಾರೆ. ಗುರಿ ತಲುಪಲು ಹಗಲು ರಾತ್ರಿ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಆದ್ರೆ ಈ ಯಶಸ್ಸಿನ ಬಳಿಕವೂ ಅವರ ಕಾಲು ನೆಲದ ಮೇಲೆಯೇ ಇದೆ. ತಮ್ಮ ಹಳೆಯ ದಿನಗಳನ್ನು ಅವರು ಮರೆತಿಲ್ಲ. ತಮ್ಮಂತಹ ಯುವಕರಿಗೆ ಬಾಡಿ ಬಿಲ್ಡರ್ಗಳಾಗಲು ಟಿಪ್ಸ್ ನೀಡ್ತಿದ್ದಾರೆ. ಮಿಸ್ಟರ್ ದೆಹಲಿ ಆಗುವ ತಮ್ಮ ಕನಸು ನನಸಾದ ಬಗೆ ಹಾಗೂ ಭವಿಷ್ಯದ ಆಲೋಚನೆಗಳನ್ನೆಲ್ಲ ವಿಜಯ್ ಕುಮಾರ್ ಯುವರ್ ಸ್ಟೋರಿ ಜೊತೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ...

ನಿಮ್ಮ ಕಾಲೇಜಿಗೂ ಬರುತ್ತೆ ಟೆಲಿ ಎಜುಕೇಷನ್​..!

ಬಾಲಕಾರ್ಮಿಕತೆಯಿಂದ ಹಿಡಿದು ಹಾಲು ಮಾರಾಟದವರೆಗೆ

ಬಡ ಬಾಲಕನಿಗೆ ಅಪ್ಪನ ಆಸರೆಯೂ ಇಲ್ಲದಿರುವಿಕೆಯ ನೋವನ್ನು ವಿಜಯ್ ಕುಮಾರ್ಗಿಂತ ಚೆನ್ನಾಗಿ ಅರ್ಥಮಾಡಿಕೊಂಡವರು ಇನ್ನಾರೂ ಇಲ್ಲ. ವಿಜಯ್ 10 ವರ್ಷದವರಿದ್ದಾಗಲೇ ತಂದೆಯನ್ನು ಕಳೆದುಕೊಂಡ್ರು. ಐವರು ಸೋದರ ಸೋದರಿಯರಲ್ಲಿ ಹಿರಿಯರಾಗಿದ್ದ ವಿಜಯ್ ಅವರ ಮೇಲೆ ಅಪ್ಪನ ಸಾವಿನಿಂದ ದುಖದ ಬೆಟ್ಟವೇ ಕುಸಿದಂತಿತ್ತು. ಆದ್ರೆ ಕಿಶೋರ್ ತಮ್ಮ ಬಾಲ್ಯವನ್ನು ಲೆಕ್ಕಿಸಲೇ ಇಲ್ಲ. ``ಮನೆ ಖರ್ಚು ತೂಗಿಸಲು ತಾಯಿ ಅಪ್ಪನೊಂದಿಗೆ ನನ್ನನ್ನೂ ಇಟ್ಟಿಗೆ ಕಾರ್ಖಾನೆಗೆ ಕೆಲಸಕ್ಕೆ ಕಳುಹಿಸುತ್ತಿದ್ಲು. ಅಲ್ಲಿ ಕಷ್ಟಪಟ್ಟು ದುಡಿದರೂ ದಿನಕ್ಕೆ 10-15 ರೂಪಾಯಿ ಸಿಗುತ್ತಿತ್ತು. ಅದನ್ನು ನಾನು ಅಮ್ಮನ ಕೈಯಲ್ಲಿಡುತ್ತಿದೆ. ವರ್ಷಗಳಿಂದ ಇದೇ ರೀತಿ ನಡೆದುಕೊಂಡು ಬಂದಿತ್ತು. ಆ ಹಣದಿಂದ ಒಂದು ಎಮ್ಮೆ ಖರೀದಿಸಿದೆ. ನಂತರ ಕಾರ್ಮಿಕ ಕೆಲಸ ಬಿಟ್ಟು ಹಾಲು ಮಾರಲು ಶುರು ಮಾಡಿದೆ''.

ಬದುಕಿನ ಏರುಪೇರುಗಳ ನಡುವೆಯೇ ವಿಜಯ್ ಅವರ ಮನಸ್ಸಿನಲ್ಲಿ ಕನಸೊಂದು ಮೊಳಕೆಯೊಡೆದಿತ್ತು. ಅಖಾಡದಲ್ಲಿ ಗುದ್ದಾಡುವ ಕುಸ್ತಿ ಪೈಲ್ವಾನರನ್ನು ವಿಜಯ್ ಕಣ್ಣರಳಿಸಿ ನೋಡುತ್ತಿದ್ರು. ತಾವು ಕೂಡ ಇದೇ ರೀತಿ ಜಗಜಟ್ಟಿಯಂತೆ ಅಖಾಡಕ್ಕಿಳಿಯಬೇಕೆಂದು ಅವರಿಗನಿಸಿತ್ತು. ಆದ್ರೆ ಪರಿಸ್ಥಿತಿಯ ಒತ್ತಡದಿಂದಾಗಿ ವರ್ಷಗಟ್ಟಲೆ ಈ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಆದ್ರೆ ತಮ್ಮ ಕನಸನ್ನು ಸಾಯಲು ಅವರು ಬಿಡಲಿಲ್ಲ.

ದೆಹಲಿಯಲ್ಲಿ ಸಿಕ್ಕಿತ್ತು ಗುರಿ ತಲುಪುವ ಮಾರ್ಗ

ಸುಮಾರು 5-6 ವರ್ಷಗಳ ಕಾಲ ಉತ್ತರ ಪ್ರದೇಶದ ಮೀರತ್ನ ಕೆಹೋವಿ ಜಿಲ್ಲೆಯಲ್ಲಿ ಕಷ್ಟಪಟ್ಟ ವಿಜಯ್ 15 ವರ್ಷಗಳ ಹಿಂದೆ ತುತ್ತು ಕೂಳು ಅರಸಿ ದೆಹಲಿಗೆ ಬಂದ್ರು. ಇಲ್ಲಿನ ರಕ್ಷಣಾ ಕಾಲೋನಿಯಲ್ಲಿ ಚಿಕ್ಕ ಚಹಾ ಅಂಗಡಿ ತೆರೆದ್ರು. ಹೊಸ ಕೆಲಸ ಆರಂಭಿಸುತ್ತಲೇ ಬಾಡಿ ಬಿಲ್ಡರ್ ಆಗುವ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನವನ್ನೂ ಶುರು ಮಾಡಿದ್ರು. ಲಾಜ್ಪತ್ ನಗರದಲ್ಲಿರುವ ಆಶೋಕ್ ಅವರ ಜಿಮ್ ಸೇರಿಕೊಂಡ್ರು. ``ನಾನು ಬಾಡಿ ಬಿಲ್ಡಿಂಗ್ನಲ್ಲಿ ಒಳ್ಳೆ ಪ್ರದರ್ಶನ ನೀಡಬಹುದೆಂದು ಜಿಮ್ ಮಾಲೀಕ ಸುಭಾಷ್ ಅವರಿಗೆ ಅನಿಸಿತ್ತು. ನನ್ನ ಪ್ರತಿಭೆಯನ್ನು ಗುರುತಿಸಿ ಅವರು ಪ್ರೋತ್ಸಾಹಿಸಿದ್ರು. ವಿಶೇಷ ಅಂದ್ರೆ ಅವರು ಕೂಡ ಬಾಡಿ ಬಿಲ್ಡಿಂಗ್ನಲ್ಲಿ ಚಾಂಪಿಯನ್''.

ಈ ಜಿಮ್ನಲ್ಲಿ ಬಾಡಿ ಬಿಲ್ಡಿಂಗ್ಗಾಗಿ ವಿಜಯ್ ಸಾಕಷ್ಟು ಕಸರತ್ತು ಮಾಡಿದ್ರು. ಹಗಲು ಕೆಲಸ ಮಾಡಿ, ರಾತ್ರಿ ಬಾಡಿ ಬಿಲ್ಡಿಂಗ್ ಅಭ್ಯಾಸ ಮಾಡ್ತಾ ಇದ್ರು. ಆದ್ರೆ ಅದಕ್ಕೆ ತಕ್ಕಂತೆ ಪೋಷಕಾಂಶಗಳುಳ್ಳ ಆಹಾರ ಮಾತ್ರ ಅವರಿಗೆ ಸಿಗಲಿಲ್ಲ. ಆದ್ರೂ ವಿಜಯ್ ಜಿಮ್ನಲ್ಲಿ ಬೆವರು ರಕ್ತ ಸುರಿಸಿ ತಮ್ಮ ದೇಹಕ್ಕೆ ಒಳ್ಳೆಯ ಆಕಾರ ಕೊಡುವ ಸರ್ಕಸ್ ನಡೆಸಿದ್ರು. ಇದಕ್ಕೆ ನೆರವಾದವರು ಜಿಮ್ ಮಾಲೀಕ ಸುಭಾಷ್. ತಮ್ಮ ಯಶಸ್ಸನ್ನು ಗುರು ಸುಭಾಷ್ ಅವರಿಗೆ ವಿಜಯ್ ಅರ್ಪಿಸಿದ್ದಾರೆ.

ಯುಪಿ ಯುವಕ ಈಗ `ಮಿಸ್ಟರ್ ದೆಹಲಿ'

2016ರ ಎಪ್ರಿಲ್ 10ರಂದು ದೆಹಲಿಯಲ್ಲಿ ವಿಶ್ವ ಬಾಡಿ ಬಿಲ್ಡಿಂಗ್ ಫೆಡರೇಶನ್ ಹಾಗೂ ದೆಹಲಿ ಬಾಡಿ ಬಿಲ್ಡಿಂಗ್ ಫೆಡರೇಶನ್ ಸಹಯೋಗದಲ್ಲಿ ದೇಹಧಾಡ್ರ್ಯ ಸ್ಪರ್ಧೆಯಿತ್ತು. ವಿಜಯ್ ಅವರ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದ್ದು ಅಲ್ಲೇ. ಹಲವು ರಾಜ್ಯಗಳಿಂದ ಬಂದಿದ್ದ ಪಟುಗಳನ್ನೆಲ್ಲ ಹಿಂದಿಕ್ಕಿ ವಿಜಯ್ ಚಿನ್ನದ ಪದಕ ಗೆದ್ದುಕೊಂಡ್ರು. ಈ ಗೆಲುವಿನೊಂದಿಗೆ ಅವರನ್ನು ಮಿಸ್ಟರ್ ದೆಹಲಿ ಎಂದು ಘೋಷಿಸಿ ಗೌರವಿಸಲಾಯ್ತು. ಇದೇ ಅವರ ಮೊದಲ ಗೆಲುವಲ್ಲ, ಹಲವು ಸ್ಪರ್ಧೆಗಳಲ್ಲಿ ವಿಜಯಿಯಾಗಿರುವ ಅವರು ಅಗ್ರ ಶ್ರೇಯಾಂಕ ಸಂಪಾದಿಸಿದ್ದಾರೆ. 2011ರಲ್ಲಿ ನಡೆದ ಮಿಸ್ಟರ್ ಕೋಲ್ಕತ್ತಾ ಸ್ಪರ್ಧೆಯಲ್ಲಿ 5ನೇ ಸ್ಥಾನ ಪಡೆದ ವಿಜಯ್, ಮಿಸ್ಟರ್ ಏಷ್ಯಾ ಸ್ಪರ್ಧೆಯಲ್ಲೂ ಪಾಲ್ಗೊಂಡಿದ್ದಾರೆ. ಆದ್ರೆ ಅಲ್ಲಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದೇ ಇರುವುದಕ್ಕೆ ಕಾರಣ ಹಣದ ಕೊರತೆ ಎನ್ನುತ್ತಾರೆ ಅವರು. ಬಾಡಿ ಬಿಲ್ಡರ್ಗೆ ಬೇಕಾದ ಸೌಲಭ್ಯಗಳು ಅವರಿಗೆ ಸಿಗುತ್ತಿಲ್ಲ. ಭವಿಷ್ಯದಲ್ಲಿ ಮಿಸ್ಟರ್ ಇಂಡಿಯಾ, ಮಿಸ್ಟರ್ ಏಷ್ಯಾ ಹಾಗೂ ಮಿಸ್ಟರ್ ಯೂನಿವರ್ಸ್ ಪದಕ ಗೆಲ್ಲುವುದೇ ಅವರ ಗುರಿ. ದೇಶಕ್ಕಾಗಿ ಗೆಲ್ಲಬೇಕು ಅನ್ನೋದು ಅವರಾಸೆ. ವಿಜಯ್ ಅವರ ಈ ಸಾಧನೆ ಮೀರತ್ನ ಬಾಡಿ ಬಿಲ್ಡರ್ಗಳಿಗೆ ಪ್ರೇರಣೆಯಾಗಿದೆ.

ಮಣ್ಣಿನ ರುಣ ತೀರಿಸಲು ತವರಿನಲ್ಲಿ ಜಿಮ್ ತೆರೆಯುವಾಸೆ

ನೊಯ್ಡಾದಲ್ಲಿ ಹೆಲ್ತ್ ಕ್ಲಬ್ ಹೆಸರಲ್ಲಿ ವಿಜಯ್ ಕುಮಾರ್ ಜಿಮ್ ನಡೆಸುತ್ತಿದ್ದಾರೆ. ಅಲ್ಲಿ ಸಾಮಾನ್ಯ ಫಿಟ್ನೆಸ್ನಿಂದ ಹಿಡಿದು ವೃತ್ತಿಪರ ಬಾಡಿ ಬಿಲ್ಡಿಂಗ್ ತರಬೇತಿ ನೀಡಲಾಗುತ್ತಿದೆ. ಸ್ನೇಹಿತರಿಂದ ಸಾಲ ಪಡೆದು ವಿಜಯ್ ಈ ಜಿಮ್ ಆರಂಭಿಸಿದ್ರು, ಸೌಲಭ್ಯಗಳ ಕೊರತೆ ಇರುವವರು ಕೂಡ ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಬಡವರಿಗೆ ಉಚಿತವಾಗಿ ತರಬೇತಿ ನೀಡುತ್ತಿರುವುದು ವಿಶೇಷ. ವಿಪಿನ್ ತ್ಯಾಗಿ, ಕುಲದೀಪ್ ತ್ಯಾಗಿ, ಅಮಿತ್ ಪಾಲ್, ಕಂಚನ್ ಲೋಹಿಯಾ, ಸುರಜೀತ್ ಚೌಧರಿ, ಪ್ರಶಾಂತ್ ಚೌಧರಿ ಸೇರಿ 6 ಜನರಿಗೆ ಮಿಸ್ಟರ್ ಇಂಡಿಯಾ ಸ್ಪರ್ಧೆಗಾಗಿ ವಿಜಯ್ ತರಬೇತಿ ನೀಡುತ್ತಿದ್ದಾರೆ. ``ನನಗೊಂದು ಕನಸಿದೆ. ನನ್ನ ಹಳ್ಳಿಯಲ್ಲಿರುವ ಪ್ರತಿಭಾವಂತರಿಗೆ ಕೋಚಿಂಗ್ ನೀಡಬೇಕು. ಹಣದ ಕೊರತೆ ಇರುವ ಪ್ರತಿಭಾ ಸಂಪನ್ನರಿಗೆ ಪ್ರೋತ್ಸಾಹ ನೀಡಬೇಕು. ಅದಕ್ಕಾಗಿ ಹಳ್ಳಿಯಲ್ಲಿ ಜಿಮ್ ಆರಂಭಿಸಿ, ನನ್ನ ತವರಿನ ಮಣ್ಣಿನ ರುಣ ತೀರಿಸಬೇಕು ಎನ್ನುವುದೇ ನನ್ನಾಸೆ''.

ಬದುಕಿನ ಕಠಿಣ ದಿನಗಳಲ್ಲಿ ಆ ಹಳ್ಳಿಯೇ ತಮಗೆ ಆಸರೆಯಾಗಿತ್ತು ಎನ್ನುತ್ತಾರೆ ವಿಜಯ್. ಅವರ ತಾಯಿ ಇಂದಿಗೂ ಅದೇ ಗ್ರಾಮದಲ್ಲಿದ್ದಾರೆ, ಈಗಲೂ ಎಮ್ಮೆ ಸಾಕುತ್ತಿದ್ದಾರೆ. ಆದ್ರೆ ಜೀವನದ ಈ ಹಾವು ಏಣಿ ಆಟದಲ್ಲಿ ತಮ್ಮ ಶಿಕ್ಷಣ ಅರ್ಧಕ್ಕೆ ನಿಂತು ಹೋಯ್ತಲ್ಲ ಎನ್ನುವ ಕೊರಗು ವಿಜಯ್ ಕುಮಾರ್ ಅವರನ್ನು ಸದಾ ಕಾಡುತ್ತಿರುತ್ತದೆ.

ಲೇಖಕರು: ಹುಸೇನ್ ತಬಿಶ್

ಅನುವಾದಕರು: ಭಾರತಿ ಭಟ್ 

ಇದನ್ನೂ ಓದಿ...

ಎಂಎನ್‍ಸಿ ಕಂಪನಿಗಳಿಗೆ ನಡುಕ ಹುಟ್ಟಿಸಿದ "ಪತಂಜಲಿ''