ಪ್ರತಿ ಉದ್ಯೋಗಿಗೆ ನಾಲ್ಕು ಗಿಡ ಕಡ್ಡಾಯ : ದೆಹಲಿಯ ಈ ಕಚೇರಿಯಲ್ಲಿಲ್ಲ ವಾಯು ಮಾಲಿನ್ಯ   

ಟೀಮ್ ವೈ.ಎಸ್.ಕನ್ನಡ 

1

ರಾಷ್ಟ್ರರಾಜಧಾನಿ ದೆಹಲಿ ವಿಷನಗರಿಯಾಗಿಬಿಟ್ಟಿದೆ. ಮಿತಿಮೀರಿದ ವಾಯುಮಾಲಿನ್ಯದಿಂದ ದೆಹಲಿ ಜನರೆಲ್ಲ ಕಂಗಾಲಾಗಿರೋದಂತೂ ಸತ್ಯ. ವಾಯುಮಾಲಿನ್ಯದಲ್ಲಿ ದೆಹಲಿಯೇ ಸದ್ಯ ನಂಬರ್ ವನ್. ಪರಿಸರ ಮಾಲಿನ್ಯದಿಂದ ಕಂಗಾಲಾಗಿರೋ ದೆಹಲಿಗೆ ಇಲ್ಲೊಂದು ಸಂಸ್ಥೆ ಮಾದರಿಯಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ಮಾಲಿನ್ಯ ಕಡಿಮೆ ಮಾಡುವುದು ಹೇಗೆ ಅನ್ನೋದನ್ನು ತೋರಿಸಿಕೊಟ್ಟಿದೆ ‘ಪಹಾರ್ಪುರ್ ಬ್ಯುಸಿನೆಸ್ ಸೆಂಟರ್’. 1990ರಲ್ಲಿ ನಿರ್ಮಾಣವಾದ 6 ಅಂತಸ್ತಿನ ಈ ಕಟ್ಟಡದಲ್ಲಿ ವಾಯು ಶುದ್ಧೀಕರಣ ಪ್ರಕ್ರಿಯೆ ನಡೆಯುತ್ತಿದೆ. ಹೊರಗಿನಿಂದ ಸಾಮಾನ್ಯ ಕಟ್ಟಡದಂತೆ ಕಂಡ್ರೂ ಅದರ ಒಳಗಿರುವ ಪರಿಸರ ಮಾತ್ರ ವಿಭಿನ್ನವಾಗಿದೆ. ನೂರಾರು ಗಿಡಗಳು ಗಿರಿಶಿಖರಗಳಿಂದ ಹೊರಸೂಸುವಂತಹ ವಿಷಮುಕ್ತ ಗಾಳಿಯನ್ನು ಹೊರಸೂಸುತ್ತಿವೆ.

ಕಮಲ್ ಮಿತ್ತಲ್ ಈ ಬ್ಯುಸಿನೆಸ್ ಸೆಂಟರ್​ನ ಸಿಇಓ. ''ನಮ್ಮ ಸಂಸ್ಥೆಯಲ್ಲಿ ಪ್ರತಿ ಉದ್ಯೋಗಿಗೆ ನಾಲ್ಕರಂತೆ 1200 ಗಿಡಗಳಿವೆ. ಪ್ರತಿಯೊಬ್ಬರಿಗೂ ಉಸಿರಾಡಲು ಶುದ್ಧ ಗಾಳಿ ಸಿಗಲಿ ಅನ್ನೋದೇ ನಮ್ಮ ಉದ್ದೇಶ'' ಎನ್ನುತ್ತಾರೆ ಕಮಲ್. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಭಾರತದಲ್ಲಿ ವಾಯುಮಾಲಿನ್ಯದಿಂದ ವರ್ಷಕ್ಕೆ ಒಂದು ಮಿಲಿಯನ್ ಮಂದಿ ಸಾವನ್ನಪ್ಪುತ್ತಿದ್ದಾರೆ. ಅಧಿಕ ರಕ್ತದೊತ್ತಡ ಬಿಟ್ರೆ ಅತಿ ಹೆಚ್ಚು ಮಂದಿ ಸಾವನ್ನಪ್ಪುತ್ತಿರುವುದು ವಾಯುಮಾಲಿನ್ಯದಿಂದ ಅನ್ನೋದು ನಿಜಕ್ಕೂ ಆಘಾತಕಾರಿ ಸಂಗತಿ.

1992ರಲ್ಲಿ ಕಮಲ್ ಅವರ ಶ್ವಾಸಕೋಶದ ಸಾಮರ್ಥ್ಯ ಅತ್ಯಂತ ಕಡಿಮೆಯಾಗಿತ್ತು, ಹಾಗಾಗಿ ದೆಹಲಿ ತೊರೆಯುವಂತೆ ವೈದ್ಯರು ಸಲಹೆ ನೀಡಿದ್ದರು. ಆದ್ರೆ ಸಮಸ್ಯೆಯಿಂದ ದೂರ ಓಡುವ ಬದಲು ಅದನ್ನು ಎದುರಿಸಲು ಕಮಲ್ ನಿರ್ಧರಿಸಿದ್ರು. ತಮ್ಮ ಬ್ಯುಸಿನೆಸ್ ಸೆಂಟರ್​ನಲ್ಲಿ ಬಗೆಬಗೆಯ ನೂರಾರು ಸಸಿಗಳನ್ನು ನೆಟ್ಟರು. ಗಾಳಿಯನ್ನು ಶುದ್ಧೀಕರಿಸಬಲ್ಲ ಸಾಮರ್ಥ್ಯವಿರುವ ಗಿಡಗಳು ಯಾವುವು ಅನ್ನೋ ಬಗ್ಗೆ ಅಧ್ಯಯನ ನಡೆಸಿದ ಕಮಲ್ ಮೊದಲು ಅವುಗಳನ್ನೆಲ್ಲ ತಮ್ಮ ಮನೆಯಲ್ಲಿ ತಂದು ನೆಟ್ಟರು. ಬಳಿಕ ತಮ್ಮ ‘ಪರ್ಹಾಪುರ್ ಬ್ಯುಸಿನೆಸ್ ಸೆಂಟರ್’ ಕಚೇರಿಯಲ್ಲಿ ಸಸಿಗಳನ್ನು ನೆಟ್ಟಿದ್ದಾರೆ.

ವಿಶೇಷ ಅಂದ್ರೆ ಪ್ರತಿ ಮಹಡಿಯಲ್ಲಿ ಎಷ್ಟು ಕೆಲಸಗಾರರಿದ್ದಾರೋ ಅವರ ನಾಲ್ಕರಷ್ಟು ಸಸಿಗಳು ಇಲ್ಲಿವೆ. ಈ ಕಟ್ಟಡದಲ್ಲಿ ಏರ್ ಕಂಡಿಷನರ್ ಮಷಿನ್​ಗಳಿವೆ. ಆದ್ರೆ ಪ್ರತಿದಿನ ಅವುಗಳನ್ನು ಚಾಲನೆಯಲ್ಲಿಡುವುದಿಲ್ಲ, ವೀಕೆಂಡ್ ಗಳಲ್ಲಿ ಮಾತ್ರ ಆನ್ ಮಾಡಲಾಗುತ್ತದೆ. ವಾತಾವರಣದಲ್ಲಿರುವ ಅಶುದ್ಧ ಗಾಳಿ ಸಂಸ್ಕರಿಸಿದ ಶುದ್ಧೀಕರಣ ಪ್ರಕ್ರಿಯೆ ಮೂಲಕ ಸ್ವಚ್ಛವಾಗುತ್ತದೆ. ನಂತರ ಆರನೇ ಮಹಡಿಯ ಮೇಲ್ಭಾಗದಲ್ಲಿರುವ ಗ್ರೀನ್ ಹೌಸ್ ನಲ್ಲಿರೋ ಗಿಡಗಳಿಂದ ಬಿಡುಗಡೆಯಾಗುತ್ತದೆ. ಕಾರ್ಬನ್ ಮೊನಾಕ್ಸೈಡ್, ಫಾರ್ಮಾಲ್ಡಿಹೈಡ್ ಮತ್ತು ಬ್ಯಾಕ್ಟಿರೀಯಾವನ್ನು ಹೊಡೆದೋಡಿಸುವುದೇ ಇದರ ಉದ್ದೇಶ.

ಈ ಬ್ಯುಸಿನೆಸ್ ಸೆಂಟರ್ ನಲ್ಲಿರುವ ಕೆಫೆ ಐನ್ ಸ್ಟೈನ್ ರೆಸ್ಟೋರೆಂಟ್ ಕೂಡ ಅಡುಗೆಯನ್ನು ಬಿಸಿ ಮಾಡಲು ಇಂಡಕ್ಷನ್ ಹೀಟರ್ ಗಳನ್ನು ಬಳಸುತ್ತದೆ. ಯಾಕಂದ್ರೆ ಮೇಣದ ಬತ್ತಿ ಮತ್ತು ಬರ್ನರ್ ಗಳು ಅದಕ್ಕಿಂತ್ಲೂ ಹೆಚ್ಚು ಅಪಾಯಕಾರಿ. ಇಡೀ ಕಟ್ಟಡದಲ್ಲಿ ಅಳವಡಿಸಿರುವ ಬಲ್ಬ್ ಗಳೆಲ್ಲ ಎಲ್ ಇಡಿ. ಕಿಟಕಿಗಳಿಗೆ ಸೆಣಬಿನ ಪರದೆಗಳನ್ನು ಅಳವಡಿಸಲಾಗಿದೆ. ಇದರಿಂದ ಕೂಡ ಸೆಖೆಯ ಪ್ರಮಾಣ ಕಡಿಮೆಯಾಗುತ್ತದೆ. ಈ ರೆಸ್ಟೋರೆಂಟ್ ನ ಮಾಲಿನ್ಯ ಹಾಗೂ ಶಿಲೀಂಧ್ರ ಮಟ್ಟ ಭಾರತದ ಯಾವುದೇ ಆಸ್ಪತ್ರೆಗಿಂತಲೂ ಕಡಿಮೆ ಇದೆ ಯಾವುದೇ ಇನ್ಫೆಕ್ಷನ್ ಅಪಾಯವಿಲ್ಲದೆ ವೈದ್ಯರು ಇಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಬಹುದು ಅಂತಾ ಕಮಲ್ ಹೇಳಿದ್ದಾರೆ.  

ಇದನ್ನೂ ಓದಿ...

ಎಂಟರ ನಂಟು ಬಿಡಲಿಲ್ಲ ಬಣ್ಣದ ನಂಟು 

ತಾಂಜಾನಿಯಾದಲ್ಲಿ ಭಾರತೀಯ ವಿದ್ಯಾರ್ಥಿನಿಗೆ ಸಂಕಷ್ಟ : ಸಚಿವೆ ಸುಷ್ಮಾ ಸ್ವರಾಜ್ ಸಹಾಯಹಸ್ತ