ಇಂಡೋನೇಷ್ಯಾದ ಕಬಾಬ್ ಕಿಂಗ್- ಕಿರಿ ವಯಸ್ಸಿನಲ್ಲಿ ಹಿರಿ ಸಾಧನೆ ಮಾಡಿದ ಹೆಂಡಿ..!

ಟೀಮ್​​ ವೈ.ಎಸ್​​.

0

ನಿಜಕ್ಕೂ ಇವನೊಬ್ಬ ಸಾಹಸಿ ಉದ್ಯಮಿ. ಅರ್ಧಕ್ಕೆ ಓದು ನಿಲ್ಲಿಸಿ ಬದುಕನ್ನೇ ಗೆದ್ದ ಛಲದಂಕ ಮಲ್ಲ. ಹೌದು ಹೆಂಡಿ ಸೆತಿಯೋನೋ ವಿಶ್ವದ ಕಬಾಬ್ ಕಿಂಗ್. ಏಷ್ಯಾದ ಬೆಸ್ಟ್ ಉದ್ಯಮಿ ಎಂಬ ಹೆಗ್ಗಳಿಕೆಗೂ ಹೆಂಡಿ ಪಾತ್ರರಾಗಿದ್ದಾರೆ. ಇಂಟರ್‍ನ್ಯಾಶನಲ್ ಬ್ಯುಸಿನೆಸ್ ವೀಕ್ ಮ್ಯಾಗಝೀನ್ ಅವರನ್ನು ಗೌರವಿಸಿದೆ.

ಹವ್ಯಾಸದಿಂದಲೇ ದುಡಿಮೆ..

ಹೆಂಡಿ ಸೆತಿಯೋನೋ ಹುಟ್ಟಿದ್ದು ಇಂಡೋನೇಷ್ಯಾದ ಎರಡನೇ ಅತಿದೊಡ್ಡ ನಗರ ಸುರಬಯಾದಲ್ಲಿ. ಹೆಂಡಿ ಅವರ ಬಾಲ್ಯವಂತೂ ಬಲು ವಿನೋದವಾಗಿಯೇ ಕಳೆದಿತ್ತು. ಉಳಿದ ಮಕ್ಕಳಿಗಿಂತ ಹೆಂಡಿ ಅವರ ಅಭಿರುಚಿ ಭಿನ್ನವಾಗಿತ್ತು. ಆಗಲೇ ಸಂಗೀತ ಪರಿಕರಗಳನ್ನೆಲ್ಲ ಬಿಚ್ಚಿ ಜೋಡಿಸುವ ವಿಭಿನ್ನ ಹವ್ಯಾಸ ಅವರಿಗಿತ್ತು. ಬಾಲ್ಯದಲ್ಲೇ ಹಣ ಮಾಡೋದು ಹೇಗೆ ಅನ್ನೋ ಆಲೋಚನೆ ಹೆಂಡಿ ಅವರನ್ನು ಕಾಡುತ್ತಿತ್ತು. ಹವ್ಯಾಸದಿಂದಲೇ ಹಣ ಮಾಡಬಹುದು ಅನ್ನೋದು ಕೂಡ ಅವರಿಗೆ ಗೊತ್ತಿತ್ತು. ಪ್ರೌಢಶಾಲೆಯಲ್ಲಿದ್ದಾಗ್ಲೇ ಕಾರ್‍ಗಳಲ್ಲಿನ ಮ್ಯೂಸಿಕ್ ಸಿಸ್ಟಮ್ ರಿಪೇರಿ ಮಾಡೋ ಕೆಲಸ ಮಾಡ್ತಿದ್ದ ಹೆಂಡಿ ಅದರಿಂದ್ಲೇ ಪಾಕೆಟ್ ಮನಿ ಸಂಪಾದಿಸುತ್ತಿದ್ರು. ಹೆಂಡಿ ಅವರನ್ನು ಕುತೂಹಲದ ಕಣಜ ಎನ್ನಬಹುದು. ಯಾಕಂದ್ರೆ ಚಿಕ್ಕವರಿದ್ದಾಗಿನಿಂದ್ಲೇ ಅವರಿಗೆ ಸ್ವಂತ ಉದ್ಯಮ ಆರಂಭಿಸುವುದು ಹೇಗೆ ಅನ್ನೋ ಕುತೂಹಲ ಇದ್ದೇ ಇತ್ತು. ಸೈಫುಲ್ಲಾ ನವೆಂಬರ್ ಟೆಕ್ನಾಲಜಿ ಇನ್‍ಸ್ಟಿಟ್ಯೂಟ್‍ನಲ್ಲಿ ಎಂಜಿನಿಯರಿಂಗ್ ಮಾಡ್ತಾ ಇದ್ದ ಹೆಂಡಿ ಅವರಿಗೆ ಐಟಿ ಕ್ಷೇತ್ರದಲ್ಲಿದ್ರೂ ಕಂಪ್ಯೂಟರ್‍ಗಿಂತ ಹೆಚ್ಚಾಗಿ ಬ್ಯುಸಿನೆಸ್ ಬಗ್ಗೆ ಹೆಚ್ಚು ಆಸಕ್ತಿ ಇತ್ತು.

ವಿಶ್ವದ ಅತಿದೊಡ್ಡ ಕಬಾಬ್ ಚೈನ್ ನಿರ್ಮಾಣ..

ಹೆಂಡಿ ಅವರ ತಂದೆ ಕತಾರ್‍ನಲ್ಲಿ ಕೆಲಸ ಮಾಡ್ತಿದ್ರು. ರಜಾ ದಿನಗಳಲ್ಲೆಲ್ಲ ಹೆಂಡಿ ಅಪ್ಪನನ್ನು ನೋಡಲು ಕತಾರ್‍ಗೆ ಹೋಗ್ತಾ ಇದ್ರು. ಹಾಗೆ ಕತಾರ್ ನಗರವನ್ನು ಸುತ್ತಾಡುತ್ತಿದ್ದಾಗ ಅಲ್ಲೇ ಒಂದುಕಡೆ ಕಬಾಬ್ ಸವಿದ್ರು. ಅದು ಎಂಥಾ ಅದ್ಭುತ ರುಚಿ ಅಂದ್ರೆ ಹೆಂಡಿಗೆ ಅದನ್ನು ಮರೆಯಲಾಗಲಿಲ್ಲ. ಇಂಡೋನೇಷ್ಯಾದಲ್ಲಿ ಇಂಥದ್ದೇ ಒಂದು ಕಬಾಬ್ ಅಂಗಡಿ ತೆರೆಯೋ ಯೋಚನೆ ಅವರಿಗೆ ಹೊಳೆದಿತ್ತು. ಕತಾರ್‍ನಲ್ಲೇ ಹೆಂಡಿ ಕಬಾಬ್ ತಯಾರಿಕೆಯನ್ನು ಕಲಿತ್ರು. ರಜೆ ಮುಗಿಸಿಕೊಂಡು ಇಂಡೋನೇಷ್ಯಾಗೆ ಮರಳಿದ್ದೇ ತಡ ಅವರಿಗೆ ಕಬಾಬ್ ಅಂಗಡಿ ತೆರೆಯಬೇಕೆಂಬ ಹಂಬಲ ಹೆಚ್ಚಾಗಿತ್ತು. ಕೂಡಲೇ ಸ್ವಲ್ಪ ಸಾಲ ಪಡೆದ ಹೆಂಡಿ ಒಬ್ಬನನ್ನ ಕೆಲಸಕ್ಕೆ ತೆಗೆದುಕೊಂಡ್ರು. ಅವನಿಗೆ ಕಬಾಬ್ ಮಾಡೋದನ್ನು ಕಲಿಸಿ ಯೂನಿವರ್ಸಿಟಿ ಬಳಿ ಅಂಗಡಿ ತೆರೆದೇ ಬಿಟ್ರು. ಆದ್ರೆ ಕಬಾಬ್ ಅಂಗಡಿ ಹೆಚ್ಚು ದಿನ ನಡೆಯಲೇ ಇಲ್ಲ. ಕೆಲಸಕ್ಕಿದ್ದವರೆಲ್ಲ ಪದೇ ಪದೇ ಕೈಕೊಟ್ಟಿದ್ರಿಂದ ಕಬಾಬ್ ಬ್ಯುಸಿನೆಸ್‍ನಿಂದ ಹಣ ಗಳಿಸುವ ಹೆಂಡಿ ಕನಸು ಕನಸಾಗಿಯೇ ಉಳಿಯಿತು. ಜೊತೆಗೆ ಸುರಬಯಾದಲ್ಲಿ ಕಬಾಬ್‍ಗೆ ಅಷ್ಟೇನೂ ಬೇಡಿಕೆ ಇರಲಿಲ್ಲ.

ಹಾಗಂತ ಹೆಂಡಿ ತಲೆಮೇಲೆ ಕೈಹೊತ್ತು ಕೂರಲಿಲ್ಲ. ಉದ್ಯಮದ ಕನಸನ್ನೂ ಕೈಬಿಡಲಿಲ್ಲ. ಪದವಿಯ ಎರಡನೇ ವರ್ಷ ಕಾಲೇಜು ಬಿಟ್ಟುಬಿಟ್ರು. ಕಾಲೇಜು ಬಿಟ್ಟು ಬ್ಯುಸಿನೆಸ್ ಮಾಡುವ ಅವರ ನಿರ್ಧಾರದಿಂದ ಸಹಜವಾಗಿಯೇ ಪೋಷಕರು ಆತಂಕಗೊಂಡಿದ್ರು. ಅವರನ್ನು ಒಪ್ಪಿಸಿದ ಹೆಂಡಿ 2003ರಲ್ಲಿ ದೊಡ್ಡಮಟ್ಟದಲ್ಲೇ ಕಬಾಬ್ ಉದ್ಯಮ ಶುರುಮಾಡಿಯೇ ಬಿಟ್ರು. ಈಗ ಹೆಂಡಿ ಅವರ ಕಬಾಬ್ ಟರ್ಕಿ ಬಾಬಾ ರಫಿ, 1000 ಅಂಗಡಿಗಳನ್ನು ಹೊಂದಿದೆ. ವಿಶ್ವದ ಅತಿ ದೊಡ್ಡ ಕಬಾಬ್ ಚೈನ್ ಎನಿಸಿಕೊಂಡಿದೆ. ಇಂಡೋನೇಷ್ಯಾ, ಮಲೇಷಿಯಾ ಹಾಗೂ ಫಿಲಿಪೈನ್ಸ್​​ನಲ್ಲಿ 1900 ಮಂದಿಗೆ ಹೆಂಡಿ ಉದ್ಯೋಗ ಕೊಟ್ಟಿದ್ದಾರೆ. ಹೆಂಡಿ ಅವರ ಪರಿಶ್ರಮ ಹಾಗೂ ದೂರದೃಷ್ಟಿಯ ಪ್ರತಿಫಲ ಇದು.

ಸವಾಲಿಗೇ ಸವಾಲಾದ ಉದ್ಯಮಿ...

ಹೆಂಡಿ ಹೊಸ ಉತ್ಸಾಹ ಹಾಗೂ ದೃಢಸಂಕಲ್ಪದೊಂದಿಗೆ ಉದ್ಯಮ ಆರಂಭಿಸಿದ್ರು. ಅವರ ಈ ಪ್ರಯತ್ನಕ್ಕೆ ಭಾವೀ ಪತ್ನಿ ಕೂಡ ಸಾಥ್ ಕೊಟ್ಟಿದ್ದಾರೆ. ಚಿಕ್ಕದಾಗಿ ಪ್ರಾರಂಭವಾದ ಅವರ ಕಬಾಬ್ ಉದ್ಯಮ ಈಗ ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದೆ. ಕಬಾಬ್‍ನ ರುಚಿ-ಶುಚಿಯ ಜೊತೆ ಅಂಗಡಿಗಳನ್ನೂ ಆಕರ್ಷಕವಾಗಿಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದಾರೆ. ಅವರ ಈ ಯಶಸ್ಸಿಗೆ ಕಾರಣ ಧನಾತ್ಮಕ ಚಿಂತನೆ. ಹೋಟೆಲ್‍ನ ಪ್ರತಿಯೊಬ್ಬ ಸಿಬ್ಬಂದಿಗೂ ಕಬಾಬ್ ಮಾಡೋದನ್ನು ಕಲಿಸಿಕೊಟ್ಟಿರುವ ಹೆಂಡಿ ಅದನ್ನು ಹೇಗೆ ಬಡಿಸಬೇಕು, ಗ್ರಾಹಕರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದನ್ನೂ ತಿಳಿಹೇಳಿದ್ದಾರೆ. ಸವಾಲುಗಳು ಹಾಗೂ ಪೈಪೋಟಿಗೆ ಕೊನೆಯಿಲ್ಲ. ಆದ್ರೆ ಅದೆಲ್ಲವನ್ನೂ ಎದುರಿಸುವ ವಿಶ್ವಾಸವಿದೆ ಅಂತಾರೆ ಹೆಂಡಿ. ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿರುವ ಹೆಂಡಿ ಅವರನ್ನು ಹತ್ತಾರು ಪ್ರಶಸ್ತಿಗಳು ಅರಸಿ ಬಂದಿವೆ. ಮಲೇಷಿಯಾದ ಉದ್ಯಮಿ ಟೋನಿ ಫರ್ನಾಂಡಿಸ್ ಅವರೇ ಹೆಂಡಿ ಅವರಿಗೆ ಸ್ಪೂರ್ತಿ.

ತಪ್ಪುಗಳೇ ಪಾಠವಾಯ್ತು..!

ಹೊಸದೇನನ್ನಾದ್ರೂ ಮಾಡುವಾಗ ತಪ್ಪುಗಳಾಗೋದು ಸಹಜ. ಅದನ್ನೆಲ್ಲ ತಿದ್ದಿ ನಡೆದವನೇ ಮನುಜ ಅನ್ನೋದು ಹೆಂಡಿ ಅವರ ಅನುಭವದ ಮಾತು. ಹೊಸದಾಗಿ ಉದ್ಯಮ ಕ್ಷೇತ್ರಕ್ಕೆ ಕಾಲಿಡುತ್ತಿರುವವರು ಮಾಡುವ ತಪ್ಪುಗಳನ್ನೂ ಹೆಂಡಿ ಪಟ್ಟಿ ಮಾಡಿದ್ದಾರೆ.

1.ಎಲ್ಲವನ್ನೂ ಸರಿಯಾಗಿ ನಾವೇ ಮಾಡುತ್ತೇವೆಂಬ ಅತಿಯಾದ ಆತ್ಮವಿಶ್ವಾಸ ಸರಿಯಲ್ಲ.

2.ನೀವು ತಯಾರಿಸಿದ ಉತ್ಪನ್ನ ತನ್ನಿಂತಾನೇ ಮಾರಾಟವಾಗುತ್ತದೆ ಎಂದು ಊಹಿಸಿಕೊಳ್ಳಬೇಡಿ.

3.ಹಣಕಾಸು ವ್ಯವಹಾರದಲ್ಲಿ ನೈಪುಣ್ಯತೆ ಇರಬೇಕು.

4.ನಿಮ್ಮ ಯೋಜನೆ ಹಾಗೂ ಗುರಿಯತ್ತ ಗಮನವಿರಲಿ. ಬೇಡದ ವಿಚಾರಗಳಿಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿಲ್ಲ.

5.ಉದ್ಯಮಕ್ಕೆ ಅಗತ್ಯವಾದಷ್ಟು ಬಂಡವಾಳ ಇರಲೇಬೇಕು

ಸಹನೆ ಹಾಗೂ ನಿಮ್ಮ ಮೇಲೆ ನಿಮಗೆ ನಂಬಿಕೆ ಇದ್ರೆ ಬ್ಯುಸಿನೆಸ್ ಬಲು ಈಸಿ ಅನ್ನೋದು ಹೆಂಡಿ ಅವರ ಅನುಭವದ ಮಾತು. ಕಿರಿ ವಯಸ್ಸಿನ ಯಶಸ್ವಿ ಉದ್ಯಮಿ ಎನಿಸಿಕೊಂಡಿರುವ ಹೆಂಡಿ ಅವರು ಮತ್ತಷ್ಟು ಸಾಧನೆ ಮಾಡಲಿ ಅನ್ನೋದೇ ಎಲ್ಲರ ಹಾರೈಕೆ.

Related Stories

Stories by YourStory Kannada