ಕನ್ನಡ ಚಿತ್ರರಂಗಕ್ಕೆ ಹೊಸ ದಾರಿ ಹುಡುಕಿಕೊಟ್ಟ ಟೆಕ್ಕಿ- ಪವನ್ ನಿರ್ದೇಶನದ ಸಿನಿಮಾಗೆ ಪ್ರೇಕ್ಷಕನೇ ನಿರ್ಮಾಪಕ

ಉಷಾ ಹರೀಶ್​​​

0

ತೆಲುಗು ತಮಿಳು ಚಿತ್ರರಂಗಕ್ಕೆ ಹೋಲಿಸಿದರೆ ಕನ್ನಡ ಚಿತ್ರರಂಗದ ಮಾರುಕಟ್ಟೆ ಬಹಳ ಚಿಕ್ಕದು. ಕನ್ನಡ ಚಿತ್ರಗಳು ನಮ್ಮ ರಾಜ್ಯವನ್ನು ಬಿಟ್ಟು ಬೇರೆ ಕಡೆ ಬಿಡುಗಡೆಯಾದರೆ ಅದು ಬಹುದೊಡ್ಡ ವಿಷಯ. ಯಾಕೆಂದರೆ ಬೆಂಗಳೂರಿನಲ್ಲೇ ಸಾಕಷ್ಟು ಚಿತ್ರಮಂದಿರಗಳು ಇತರ ಭಾಷೆಗಳಿಗೆ ಮೀಸಲಾಗಿವೆ. ಇಂತಹ ಚಿತ್ರರಂಗಕ್ಕೆ ವಿದೇಶದಲ್ಲೂ ಮಾರುಕಟ್ಟೆ ಇದೆ. ಆನ್​ಲೈನ್ ಮೂಲಕ ಹಣಗಳಿಸಿಕೊಳ್ಳಬಹುದು. ಕೇವಲ 53 ಲಕ್ಷದಲ್ಲಿ ಸಿನಿಮಾ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟು ಚಿತ್ರರಂಗದ ಮಾರುಕಟ್ಟೆಯನ್ನು ಹೊಸ ಮಜಲಿಗೆ ತೆಗೆದುಕೊಂಡು ಹೋಗಿದ್ದು ಯುವ ನಿರ್ದೇಶಕ ಪವನ್​​ಕುಮಾರ್.

ನಿರ್ದೇಶಕ ಯೋಗರಾಜ್​ ಭಟ್ ಅವರ ಗರಡಿಯಲ್ಲಿ ಪಳಗಿರುವ ಪವನ್​ ಕುಮಾರ್ ಮೂಲತಃ ಒಬ್ಬ ಟೆಕ್ಕಿ. ಇದುವರೆಗೂ ಕೇವಲ ಎರಡೇ ಎರಡು ಚಿತ್ರಗಳನ್ನು ನಿರ್ದೇಶಿಸಿರುವ ಪವನ್ ಭವಿಷ್ಯದ ಕನ್ನಡ ಚಿತ್ರರಂಗಕ್ಕೆ ಒಂದು ಹೊಸ ಮಾರ್ಗವನ್ನೇ ಸೃಷ್ಟಿ ಮಾಡಿದ್ದಾರೆ . ಅವರ ಇತ್ತೀಚಿನ ಸಾಹಸ ಲೂಸಿಯಾ ಚಿತ್ರರಂಗ ಸಾಗಬಲ್ಲ ಹೊಸದೊಂದು ದಾರಿಯೆಡೆಗೆ ಬಾಗಿಲು ತೆರೆದಿದೆ. ಚಿತ್ರ ಯಶಸ್ವಿಯಾಗಿ ಚಿತ್ರರಂಗದ ದಿಕ್ಕನ್ನೇ ಬದಲಿಸಿದೆ. ಆದರೆ ಇತಿಹಾಸದ ಪ್ರಕಾರ ಯಾವುದೇ ಬದಲಾವಣೆಗಳಿಗೆ ಒಗ್ಗಿಕೊಳ್ಳಲು ಪ್ರಾರಂಭದಲ್ಲಿ ಬಹಳಷ್ಟು ಅಡೆತಡೆಗಳಿರುತ್ತದೆ. ಅಂಥ ಬದಲಾವಣೆಗೆ ಮನಸ್ಥಿತಿಗಳು ಸಜ್ಜಾಗಿರುವುದೂ ಬಹಳ ಮುಖ್ಯ. ಚಿತ್ರರಂಗದಲ್ಲಿ ಲೂಸಿಯಾ ನೀಡಿರುವರುವ ಈ ಹೊಸದಿಕ್ಕಿಗೆ ಯಾವ ರೀತಿಯಲ್ಲಿ ಸ್ಪಂದಿಸುತ್ತದೆೆ ಎಂಬುದು ಮುಂದಿನ ದಿನಗಳಲ್ಲಿ ಬಹುಮುಖ್ಯವಾಗಿ ರೆಕಾರ್ಡ್ ಆಗುತ್ತದೆ.

ಬಹಳಷ್ಟು ಸಿನಿಮಾಪಂಡಿತರು ಲೂಸಿಯಾ ಚಿತ್ರವನ್ನು ಒಂದು ಸಿನಿಮಾ ಎಂದು ಕರೆಯುದಕ್ಕಿಂತಲೂ ಸಹಕಾರಿ ತತ್ವದಡಿ ನಿರ್ಮಿತವಾದ ಒಂದು ಮಾಡೆಲ್ ಎನ್ನುತ್ತಿದ್ದಾರೆ. ಯಾಕೆಂದರೆ ಸಾಮಾಜಿಕ ತಾಣದ ಮೂಲಕ ಚಿತ್ರ ನಿರ್ಮಾಣಕ್ಕೆ ಹಣ ತೊಡಗಿಸಲು ಪ್ರೇರಪಣೆ ಮಾಡಿದ್ದು ಒಂದಾದರೆ ಪ್ರೇಕ್ಷಕರನ್ನೆ ನಿರ್ಮಾಪಕರನ್ನಾಗಿ ಮಾಡಿಸಿಕೊಂಡಿದ್ದು ಮತ್ತೊಂದು ಈ ತರಹದ ಒಂದು ಪ್ರಯತ್ನ ಭಾರತೀಯ ಚಿತ್ರರಂಗದಲ್ಲೇ ಪ್ರಥಮ ಅಂತಲೇ ಹೇಳಬಹುದು.

ಹೀಗೆ ಪ್ರೇಕ್ಷಕನನ್ನು ನಿರ್ಮಾಪಕನನ್ನಾಗಿ ಮಾಡಿಕೊಳ್ಳಲು ನಿರ್ದೇಶಕ ಪವನ್ ಕೊಡುವ ಬಹುಮುಖ್ಯ ಕಾರಣ ಸಿನಿಮಾದ ಗುಣಮಟ್ಟವನ್ನು ಹೆಚ್ಚಿಸುವುದು. ಹೌದು ಒಬ್ಬ ಸಿಂಗಲ್ ನಿರ್ಮಾಪಕನಿದ್ದರೆ ಅವನ ಕನಸಿನಂತೆ ಸಿನಿಮಾಗಳನ್ನು ನಿರ್ಮಾಣ ಮಾಡಬೇಕಾಗುತ್ತದೆ. ಆಗ ನಿರ್ದೇಶಕನ ಕ್ರಿಯೇಟಿವಿಟಿಗೆ ಕಡಿವಾಣ ಬಿದ್ದು ಸಿನಿಮಾದ ಗುಣಮಟ್ಟ ಕಡಿಮೆಯಾಗುತ್ತದೆ. ಆದರೆ ಲೂಸಿಯಾದಲ್ಲಿ ಹಾಗಾಗಲಿಲ್ಲ, ಸಿನಿಮಾದ ಪ್ರೇಕ್ಷಕರು ಹಣ ತೊಡಗಿಸಿದ್ದರಿಂದ ಅವರಿಗೆ ಬೇಕಾದ ಉತ್ತಮ ಸಿನಿಮಾ ನಿರ್ಮಾಣವಾಯಿತು.

ಲೈಫು ಇಷ್ಟೇನೆ ಚಿತ್ರದಿಂದ ಕ್ರೌಡ್ ಫಂಡ್​​ಗೆ ಐಡಿಯಾ

ಪವನ್ ತಮ್ಮ ಚೊಚ್ಚಲ ಚಿತ್ರ ಲೈಫು ಇಷ್ಟೇನೆ ಚಿತ್ರವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿದಾಗ ಅವರಿಗೆ ಮಿಶ್ರಪ್ರತಿಕ್ರಿಯೆ ಬಂತು. ಆದರೆ ತಂತ್ರಜ್ಞಾನ ಬಳಕೆಯಲ್ಲಿ ಮುಂದಿದ್ದ ಪವನ್ ಅದನ್ನು ಆನ್​ಲೈನ್ ಮಾರ್ಕೆಟಿಂಗ್ ಮಾಡಿದರು ಅದರಿಂದ ಸಾಕಷ್ಟು ಲಾಭ ಗಳಿಸಿದ ಅವರು ಹೀಗೆ ಪ್ರೇಕ್ಷಕರಿಂದಲೇ ಸಿನಿಮಾ ನಿರ್ಮಾಣ ಮಾಡಿದರೆ ಹೇಗೆ ಎಂಬ ಐಡಿಯಾ ಹೊಳೆದಾಗ ತಯಾರಾಗಿದ್ದೇ ಲೂಸಿಯಾ ಪ್ರಾಜೆಕ್ಟ್. ಈ ಸಿನಿಮಾ ನಿರ್ಮಾಣದ ಸಮಯದಲ್ಲಿ ನಿರ್ದೇಶಕ ಪವನ್ ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಸಿನಿಮಾ ಮುಗಿಯವರೆಗೂ ಯಾವುದೇ ತಂತ್ರಜ್ಞರಿಗೆ ವೇತನವಿಲ್ಲ. ಅದಕ್ಕಾಗಿ ಸಾಕಷ್ಟು ಜನ ಹೊಸಬರನ್ನು ಈ ಚಿತ್ರದ ಮೂಲಕ ಪವನ್ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.

ವಿಶ್ವ ಮಟ್ಟದಲ್ಲಿ ಸದ್ದು ಮಾಡಿದ್ದ ಲೂಸಿಯಾ

ಪವನ್ ಅವರು ಲೂಸಿಯಾ ಕ್ರೌಡ್ ಫಂಡ್ ಸಿನಿಮಾ ಎಂಬ ಕಾರಣಕ್ಕೆ ಭಾರತದ್ಯಾಂತ ಸಾಕಷ್ಟು ಸದ್ದು ಮಾಡಿತು. ಹಿಂದಿ ಚಿತ್ರರಂಗದ ನಟ ಇರ್ಫಾನ್ ಖಾನ್ ಚಿತ್ರವನ್ನು ಸಾಕಷ್ಟು ಮೆಚ್ಚಿಕೊಂಡರು. ಈ ಚಿತ್ರದ ಮೊದಲ ಪ್ರೀಮಿಯರ್ ಪ್ರದರ್ಶನ ಕಂಡಿದ್ದು ಇಂಗ್ಲೆಂಡ್​​​ನಲ್ಲಿ. ಅತಿ ಕಡಿಮೆ ಬಜೆಟ್​​​ನಲ್ಲಿ ಉತ್ತಮ ಚಿತ್ರ ನೀಡಿದ್ದಕ್ಕಾಗಿ ಪವನ್ ಪ್ರಶಂಸೆಯ ಜತೆಗೆ ಸಾಕಷ್ಟು ಪ್ರಶಸ್ತಿಗಳನ್ನು ಗಳಿಸಿಕೊಂಡರು.

ಈಗ ಲೂಸಿಯಾ ಚಿತ್ರ ಯಶಸ್ವಿಯಾಗಿದ್ದು ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೆ ಪವನ್ ಋಣ ಸಂದಾಯ ಮಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಕ್ರೌಡ್ ಫಂಡಿಂಗ್ ಎಂಬ ಹೊಸ ಮಾರ್ಗವನ್ನು ಕಂಡು ಹಿಡಿದುಕೊಟ್ಟು ತಮ್ಮ ಮುಂದಿನ ಚಿತ್ರ C10H14N2 ಗೂ ಕ್ರೌಡ್ ಫಂಡ್​​ನ್ನೇ ಬಳಸಿಕೊಳ್ಳಲು ತೀರ್ಮಾನಿಸಿದ್ದಾರೆ. ಒಟ್ಟಾರ ರಂಗಭೂಮಿ ಹಿನ್ನೆಲೆಯಿಂದ ಬಂದು ಯಾವುದಾದರೂ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಆರಾಮಾಗಿ ಸಂಬಳ ಏಣಿಸುವುದನ್ನು ಬಿಟ್ಟು ಹೊಸ ರೀತಿಯಲ್ಲಿ ಸಿನಿಮಾ ಮಾಡಿ ಯಶಸ್ವಯಾಗಿದ್ದಾರೆ ಪವನ್. ಲೂಸಿಯಾ ಚಿತ್ರ ಪ್ರಾರಂಭವಾದಗ ಪವನ್ ಬಲವಾಗಿ ನಂಬಿದ್ದು ನಂಬಿಕ ಎಂಬ ಅಡಿಪಾಯ.

Related Stories