ಲೋಕಲ್​ ಬಿಎಂಟಿಸಿಗೆ ಹೈಟೆಕ್​ ಆ್ಯಪ್​ನ ಸ್ಪರ್ಷ..!

ಟೀಮ್​ ವೈ.ಎಸ್​.ಕನ್ನಡ

0

ನೀವು ಬಿಎಂಟಿಸಿ ಬಸ್​ನಲ್ಲಿ ಓಡಾಡುವವರಾಗಿದ್ರೆ ಇನ್ನುಮುಂದೆ ಅವರಿವರನ್ನ, ಬಸ್​ಸ್ಟ್ಯಾಂಡ್​ನಲ್ಲಿ ಟಿ.ಸಿ.ಗಳನ್ನ ಬಸ್ ನಂಬರ್ ಯಾವುದು, ಎಲ್ಲಿಗೆ ಹೋಗುತ್ತೆ ಎಂಬುದನ್ನು ಕೇಳೋ ತೊಂದರೆ ತಗೋಬೇಕಿಲ್ಲ. ಯಾಕೆಂದ್ರೆ ದೇಶದಲ್ಲೇ ಮೊದಲ ಬಾರಿಗೆ ಬಿಎಂಟಿಸಿ ಇಂಟೆಲಿಜೆಂಟ್ ಟ್ರಾನ್ಸ್​ಪೋರ್ಟ್ ಸಿಸ್ಟಮ್ ಅನ್ನು ಪರಿಚಯಿಸಿದೆ. ಈ ಮೂಲಕ ಸಿಲಿಕಾನ್ ಸಿಟಿಯ ಬ್ಯುಸಿ ಲೈಫ್​ಗೆ ಬಿಎಂಟಿಸಿ ಮತ್ತಷ್ಟು ಹೈಟೆಕ್ ಆಗಿ ತೆರೆದುಕೊಂಡಿದೆ.

ರಾಜಧಾನಿಯ ಸಿಕ್ಕಾಪಟ್ಟೆ ಬ್ಯುಸಿ ಲೈಫ್​ಗೆ ಈಗ ರಾಜಧಾನಿಯ ಸಂಚಾರದ ಜೀವನಾಡಿ ಬಿಎಂಟಿಸಿ ಕೂಡಾ ಹೈಟೆಕ್ ಆಗಿ ಪ್ರಯಾಣಿಕರ ಮುಂದೆ ಬಂದಿದೆ. ಸುಗಮ ಸಂಚಾರದ ಜೊತೆಗೆ ಪ್ರಯಾಣಿಕ ಸ್ನೇಹಿ ವ್ಯವಸ್ಥೆಯಾಗಿ ಇಂಟೆಲಿಜೆಂಟ್ ಟ್ರಾನ್ಸ್​ಪೋರ್ಟ್ ಸಿಸ್ಟಮ್ ಅನ್ನು ಬೆಂಗಳೂರಿನ ಪ್ರಯಾಣಿಕರಿಗೆ ಪರಿಚಯಿಸಿದೆ. ಈ ಆ್ಯಪ್​ನ್ನು  ಡೌನ್​ಲೋ​ಡ್ ಮಾಡಿಕೊಂಡರೆ ಸಾಕು, ಬಿಎಂಟಿಸಿಯ ಎಲ್ಲ ಸೇವೆಗಳು ಇಲ್ಲಿ ಲಭ್ಯ ಇದೆ. ಯಾವ ಸಮಯಕ್ಕೆ ಬಸ್​ಗಳು ಯಾವ ರೂಟ್​ನಲ್ಲಿ ಓಡಾಟುತ್ತವೆ, ಅವುಗಳ ವೇಳಾಪಟ್ಟಿ, ಬಸ್ ಚಲಿಸುವ ಮಾರ್ಗ, ಒಟ್ಟು ನಿಲ್ದಾಣಗಳೆಷ್ಟು ಎಲ್ಲವನ್ನು ಈ ಆ್ಯಪ್ ತಿಳಿಸುತ್ತದೆ.

ಇದನ್ನು ಓದಿ: ಜೇಬಲ್ಲಿ ದುಡ್ಡಿಲ್ಲ...ಮೊಬೈಲ್​ನಲ್ಲಿ ಕರೆನ್ಸಿ ಇಲ್ಲ.. ಡೋಂಟ್​ವರಿ ಉಚಿತವಾಗಿ ವೈ-ಫೈ ಬಳಸಿಕೊಳ್ಳಿ

ಬಿಎಂಟಿಸಿ ಹೊರತಂದಿರುವ ಐಟಿಎಸ್ ಮೊಬೈಲ್ ಆ್ಯಪ್​ನಿಂದ ಈ ಸೌಲಭ್ಯ ಪಡೆಯಬಹುದಾಗಿದೆ. ದೇಶದಲ್ಲೇ ಈ ವ್ಯವಸ್ಥೆ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಅಳವಡಿಸಲಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇಂತಹವೊಂದು ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ ಹಿನ್ನಲೆ ಬಿಎಂಟಿಸಿ ಈ ತಂತ್ರಜ್ಞಾನ ಆಳವಡಿಸಿಕೊಂಡ ದೇಶದ ಮೊದಲ ಸಾರಿಗೆ ಸಂಸ್ಥೆಯಾಗಿದೆ. ಬೇರೆ ರಾಜ್ಯದವರು ಮತ್ತು ವಿದೇಶಿ ಪ್ರವಾಸಿಗರು ಬೆಂಗಳೂರಿಗೆ ಬಂದರೆ ಈ ಆ್ಯಪ್ ಡೌನ್​ಲೋಡ್ ಮಾಡಿಕೊಂಡರೆ ಸಾಕು, ಬೆಂಗಳೂರಿನ ಯಾವ ಪ್ರದೇಶಕ್ಕಾದ್ರು ನಿಶ್ಚಿಂತೆಯಿಂದ ಓಡಾಡಬಹುದು. ಯಾವುದೇ ಕಿರಿಕಿರಿಯಿಲ್ಲದೆ ಬೆಂಗಳೂರಿನ ಅಂದ-ಚೆಂದವನ್ನು ಬಿಎಂಟಿಸಿಯಲ್ಲೇ ಅನುಭವಿಸಬಹುದು.

ಪ್ರತಿದಿನ ದಿನ ಸುಮಾರು 50 ಲಕ್ಷಕ್ಕೂ ಅಧಿಕ ಮಂದಿ ಬಿಎಂಟಿಸಿ ಬಸ್‌ಗಳನ್ನೇ ನೆಚ್ಚಿಕೊಂಡಿದ್ದಾರೆ. ಆದ್ರೆ ಬಸ್‌ಗಳು ಎಷ್ಟು ಹೊತ್ತಿಗೆ ಬರುತ್ತವೆ, ಎಷ್ಟು ಹೊತ್ತಿಗೆ ಹೋಗುತ್ತವೆ ಎಂಬುದು ಗೊತ್ತಾಗುತ್ತಿರಲಿಲ್ಲ. ಇನ್ನುಮುಂದೆ ಇಂತಹ ಹಲವು ಗೊಂದಲಗಳಿಗೆ ಬ್ರೇಕ್ ಹಾಕಲು ಬಿಎಂಟಿಸಿಯ ಹೊಸ ಮೊಬೈಲ್ ಆ್ಯಪ್ ಸಹಾಯ ಮಾಡಲಿದೆ. ಗೂಗಲ್ ಪ್ಲೇಸ್ಟೋರ್ ಮೂಲಕ ಈ ಆ್ಯಪ್​ನ್ನು ಸುಲಭವಾಗಿ ಡೌನ್​ಲೋಡ್ ಮಾಡಿಕೊಳ್ಳಬಹುದಾಗಿದೆ. ಆ್ಯಂಡ್ರಾಯ್ಡ್ ಮೊಬೈಲ್ ಇಲ್ಲದಿದ್ರೆ ಬಿಎಂಟಿಸಿ ಸ್ಥಾಪಿಸಿರುವ ಟೋಲ್ ಫ್ರೀ ನಂಬರ್​ಗೆ ಮಿಸ್​ಕಾಲ್ ನೀಡುವ ಮೂಲಕವೂ ಮಾಹಿತಿಯನ್ನು ಪಡೆಯಬಹುದಾಗಿದೆ.

ವಿಶೇಷವೆಂದರೆ 6,420 ಬಸ್​ಗಳಿಗೂ ಜಿಪಿಎಸ್ ಅಳವಡಿಸಿ ಕೇಂದ್ರ ಕಚೇರಿಯಲ್ಲಿರುವ ನಿಯಂತ್ರಣಾ ಕೊಠಡಿಯಿಂದಲೇ ಮೇಲ್ವಿಚಾರಣೆ ನೋಡಿಕೊಳ್ಳಲು ಸಿದ್ದತೆ ಮಾಡಲಾಗಿದೆ. ಅಲ್ಲದೆ ಬಸ್​​ಗಳಲ್ಲಿ ಆಗುವ ಕ್ಷಣ ಕ್ಷಣದ ಬೆಳವಣಿಗೆಗಳನ್ನು ನಿಯಂತ್ರಣ ಕೊಠಡಿಯಲ್ಲೇ ಇದ್ದುಕೊಂಡು ವೀಕ್ಷಿಸಬಹುದು. ಈ ವ್ಯವಸ್ಥೆ ಮೂಲಕ ಬಸ್ ಎಲ್ಲಿದೆ, ಎಷ್ಟು ಪ್ರಯಾಣಿಕರು ಇದ್ದಾರೆ ಎಂಬುದು ಸೇರಿದಂತೆ ಬಸ್‌ನ ಸಮಗ್ರ ಚಿತ್ರಣ ದೊರಕಲಿದೆ. ಶಾಂತಿನಗರದಲ್ಲಿರುವ ಬಿಎಂಟಿಸಿ ಕಛೇರಿಯಲ್ಲಿ ಇದಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ಮೂಲಕ ಬಿಎಂಟಿಸಿ ಇನ್ನಷ್ಟು ಜನ ಸ್ನೇಹಿಯಾಗಲು ಹೊರಟಿದೆ. 

ಬಿಎಂಟಿಸಿ ಈಗಾಗಲೇ ದೇಶದಲ್ಲೇ ಸುಗಮ ಸಾರಿಗೆ ಅನ್ನೋ ಖ್ಯಾತಿ ಗಳಿಸಿದೆ. ಈಗ ಬಿಎಂಟಿಸಿ ಪ್ರಯಾಣಿಕರಿಗೆ ಮತ್ತಷ್ಟು ಹತ್ತಿರವಾಗುತ್ತಿರುವುದು ಖುಷಿಯಲ್ಲದೆ ಇನ್ನೇನು..?

ಇದನ್ನು ಓದಿ:

1. ಕಾಲೇಜು ಕಟ್ಟಡದಲ್ಲೊಂದು ವಿಭಿನ್ನ ಹಸಿರು ಉದ್ಯಾನವನ..!

2. ಪ್ರಾಣಿಗಳ ಧ್ವನಿ ಕೇಳಿಸುವ ಗೂಗಲ್..!

3. ಹಿರಿಯ ಐಎಎಸ್​​ ಅಧಿಕಾರಿಯಿಂದ ಜೀವ ಜಲಕ್ಕಾಗಿ ಜಾಗೃತಿ

Related Stories