ರಕ್ಷಾ ಸೇಫ್ ಡ್ರೈವ್...ಅಪಘಾತ ತಪ್ಪಿಸಲು ಹೊಸ ತಂತ್ರಜ್ಞಾನ

ಟೀಮ್​​ ವೈ.ಎಸ್​​.

0

ಭಾರತದಲ್ಲಿ ಅಪಘಾತಗಳಿಗೆ ಲೆಕ್ಕವೇ ಇಲ್ಲ. ಪ್ರತಿ ನಾಲ್ಕು ನಿಮಿಷಕ್ಕೊಬ್ಬರು ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಅತೀವ ಕಳವಳ ವ್ಯಕ್ತಪಡಿಸಿದ್ದಾರೆ. ರೇಡಿಯೋದಲ್ಲಿ ಮನ್ ಕಿ ಬಾತ್ ಸಂದರ್ಭದಲ್ಲಿ ಮೋದಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ರಾಷ್ಟ್ರೀಯ ತುರ್ತು ಪರಿಸ್ಥಿತಿ ನಿಯಂತ್ರಣ ನಿಯಮವನ್ನು ಅಳವಡಿಸುವ ಅಗತ್ಯವಿದೆಯೆಂದು ಪ್ರತಿಪಾದಿಸಿದ್ದರು. ಎಲ್ಸಿಸ್ ಇಂಟೆಲಿಜೆಂಟ್ ಪ್ರೈವೇಟ್ ಲಿಮಿಟೆಡ್ ಕೂಡ ರಸ್ತೆ ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳುತ್ತಿದೆ. ಈ ಸಂಸ್ಥೆಯ ಮೂಲಕ ಜಯಂತ್ ಜಗದೀಶ್ ಪ್ರಯಾಣಿಕರಿಗೆ ನೆರವಾಗುತ್ತಿದ್ದಾರೆ. ಅಷ್ಟೇ ಅಲ್ಲ ಕ್ರಾಂತಿಕಾರಿ ಬದಲಾವಣೆಗಳೊಂದಿಗೆ ರಸ್ತೆ ಅಪಘಾತಗಳಂತ ತುರ್ತು ಪರಿಸ್ಥಿತಿಯಲ್ಲಿ ಭಾರತ ಹೇಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ ಅನ್ನೋದನ್ನೂ ಜಯಂತ್ ಜಗದೀಶ್ ಮನವರಿಕೆ ಮಾಡಿಕೊಡುತ್ತಿದ್ದಾರೆ.

ಐಓಟಿ ಮೂಲಕ ರಸ್ತೆ ಸುರಕ್ಷತೆ...

ಅತ್ಯುನ್ನತ ತಂತ್ರಜ್ಞಾನದ ಮೂಲಕ ಎಲ್ಸಿಸ್ ರಸ್ತೆ ಸುರಕ್ಷತಾ ಕ್ರಮಗಳನ್ನು ಅಳವಡಿಸಿದೆ. ರಕ್ಷಾ ಸೇಫ್ ಡಿವೈಸ್ ಅನ್ನೋ ಉತ್ಪನ್ನವನ್ನು ತಯಾರಿಸಿದೆ. ಅಪಘಾತ ನಡೆದ ಸಂದರ್ಭದಲ್ಲಿ ಇಂಟರ್ನೆಟ್ ಆಫ್ ಥಿಂಗ್ಸ್ ಡಿವೈಸ್ ಮೂಲಕವೇ ಮಾಹಿತಿ ಪಡೆಯುವಂಥ ತಂತ್ರಜ್ಞಾನ ಇದು. ಅಪಘಾತ ನಡೆದ ಸಂದರ್ಭದಲ್ಲಿ ಆಟೋಮ್ಯಾಟಿಕ್ ಆಗಿ ಅದನ್ನು ಕಂಡುಹಿಡಿಯಬಲ್ಲ ಸಾಮರ್ಥ್ಯ ಈ ಡಿವೈಸ್‍ಗಿದೆ. ಟು ವೇ ಕಾಲ್ ಸಂಪರ್ಕ, ಜಿಪಿಎಸ್ ಟ್ರ್ಯಾಕಿಂಗ್, ಆರೋಗ್ಯವನ್ನು ಮಾನಿಟರಿಂಗ್ ಮಾಡುವಂಥ ತಂತ್ರಜ್ಞಾನ ಹಾಗೂ ಸ್ಮಾರ್ಟ್ ಪ್ಯಾನಿಕ್ ಬಟನ್ ಇರುವ ಡಿವೈಸ್ ಇದು.

ಹೊಸ ತಂತ್ರಜ್ಞಾನದ ಹುಟ್ಟು...

2013ರಲ್ಲಿ ಪ್ರಸಾದ್ ಪಿಳ್ಳೈ ಅವರಿಗೆ ಹೊಳೆದ ಐಡಿಯಾ ಇದು. ಸನ್ನೆಯ ಮೂಲಕ ಅಪಘಾತವನ್ನು ಅರಿಯುವ ಈ ತಂತ್ರಜ್ಞಾನವನ್ನು ಅವರು ಆವಿಷ್ಕರಿಸಿದ್ರು. ಭಾರತದಲ್ಲಿ ಪ್ರತಿಯೊಬ್ಬ ಪ್ರಯಾಣಿಕರೂ ವಾರದಲ್ಲಿ ಒಮ್ಮೆಯಾದ್ರೂ ಅಪಘಾತದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾಗುವಂಥ ಸಂದರ್ಭಗಳು ಬರುತ್ತವೆ. ಪ್ರಸಾದ್ ಅವರಿಗೂ ಅಂಥ ಅನುಭವವಾಗಿತ್ತು. ಹಾಗಾಗಿ ಅಂತಹ ಘಟನೆಗಳನ್ನು ತಪ್ಪಿಸಲು ವ್ಯವಸ್ಥಿತ ನಿಯಮ ರೂಪಿಸಬೇಕೆಂಬ ಹಂಬಲ ಪ್ರಸಾದ್ ಅವರಿಗಿತ್ತು. ರಸ್ತೆಗಳಲ್ಲಿ ಸುರಕ್ಷತೆ ಅಳವಡಿಸುವುದು ಹಾಗೂ ಚಾಲಕರಿಗೆ ಜವಾಬ್ಧಾರಿಯ ಬಗ್ಗೆ ಅರಿವು ಮೂಡಿಸುವ ಸಲುವಾಗಿಯೇ ಹೊಸ ತಂತ್ರಜ್ಞಾನವನ್ನು ಪ್ರಸಾದ್ ಸಂಶೋಧಿಸಿದ್ದಾರೆ.

ಜಯಂತ್‍ಗೆ ಸಿಕ್ಕಾಪಟ್ಟೆ ಬೈಕ್ ಕ್ರೇಜ್ ಇದೆ. ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಏಕಾಂಗಿಯಾಗಿ ಬೈಕ್ ಸವಾರಿ ಮಾಡಿದ್ದಾರೆ. ಸುಮಾರು 5 ಸಾವಿರ ಕಿಲೋಮೀಟರ್ ಕ್ರಮಿಸಿದ್ದಾರೆ. ಆಗಲೇ ಅವರಿಗೆ ಪ್ರಸಾದ್ ಪರಿಚಯವಾಗಿದ್ದು. ಇಬ್ಬರಿಗೂ ರಸ್ತೆ ಸುರಕ್ಷತೆ ಬಗ್ಗೆ ಕಳಕಳಿ ಇದ್ದಿದ್ರಿಂದ ಈ ಯೋಜನೆಗೆ ಪರಸ್ಪರ ಕೈಜೋಡಿಸಿದ್ದಾರೆ. ರಸ್ತೆ ಸವಾರಿ ಪ್ರಯಾಣಿಕರಿಗೆ ರೋಮಾಂಚಕಾರಿ ಅನುಭವ. ಆದ್ರೆ ಇಂತಹ ಅವಘಡಗಳಿಂದಾಗಿ ಪ್ರಯಾಣಿಕರಲ್ಲಿ ಅಸುರಕ್ಷತೆಯ ಭಾವ ಮೂಡುತ್ತದೆ. ಜೊತೆಗೆ ಅವ್ಯಕ್ತ ಭಯವೂ ಇರುತ್ತದೆ. ಅವನ್ನೆಲ್ಲ ಹೊಡೆದೋಡಿಸಲು ರಕ್ಷಾ ಸೇಫ್ ಡ್ರೈವ್ ಸಹಾಯ ಮಾಡಲಿದೆ.

ರಕ್ಷಾ ಸೇಫ್ ಡ್ರೈವ್ ಕಾರ್ಯವೈಖರಿ...

ಅಪಘಾತವನ್ನು ತಾನಾಗಿಯೇ ಪತ್ತೆಹಚ್ಚಬಲ್ಲ ಸಾಮರ್ಥ್ಯ ರಕ್ಷಾ ಸೇಫ್ ಡ್ರೈವ್ ಡಿವೈಸ್‍ಗೆ ಇದೆ. ತುರ್ತಾಗಿ ನೆರವು ಪಡೆಯಲು ಕೂಡ ಈ ಡಿವೈಸ್ ಸಂದೇಶ ರವಾನಿಸಲಿದೆ. ಅಪಘಾತಕ್ಕೆ ಕಾರಣವಾಗಬಲ್ಲ ಅತಿ ವೇಗದ ಚಾಲನೆ ಅಥವಾ ಚಾಲಕನ ಅಜಾಗರೂಕತೆ ಕಂಡು ಬಂದಲ್ಲಿ ಈ ಡಿವೈಸ್ ಅವರನ್ನು ಅಲರ್ಟ್ ಮಾಡುತ್ತದೆ. ಒಮ್ಮೆ ಈ ಡಿವೈಸ್‍ಗೆ ಚಂದಾದಾರರಾದರೆ ನಿರಂತರವಾಗಿ ಅದರ ಪ್ರಯೋಜನ ಪಡೆಯಬಹುದು.

ಸವಾಲು - ಭವಿಷ್ಯ ...

ರಕ್ಷಾ ಸೇಫ್ ಡ್ರೈವ್ ಒಂದು ಎಲೆಕ್ಟ್ರಾನಿಕ್ ಉತ್ಪನ್ನ. ಸತತ 2 ವರ್ಷಗಳ ಕಾಲ ಶ್ರಮಪಟ್ಟು ಎಲ್ಸಿಸ್ ಇಂಟೆಲಿಜೆಂಟ್ ಪ್ರೈವೇಟ್ ಲಿಮಿಟೆಡ್ ಕಂಪನಿ ಈ ಡಿವೈಸನ್ನು ತಯಾರಿಸಿದೆ. ಈ ಡಿವೈಸ್‍ನ ಕಾರ್ಯಾಚರಣೆಯನ್ನು ನಿರ್ವಹಿಸಲು ಸಂಸ್ಥೆ ಬಂಡವಾಳದ ನಿರೀಕ್ಷೆಯಲ್ಲಿದೆ. ಭಾರತದಲ್ಲಿ ತಂತ್ರಜ್ಞಾನ ನೆರವಿನ ಅಪಘಾತ ನಿರ್ವಹಣೆ ಮತ್ತು ವಿಶ್ಲೇಷಣೆ ವ್ಯವಸ್ಥೆ ನಿರ್ಮಿಸುವುದು ಜಯಂತ್ ಮತ್ತವರ ತಂಡದ ಕನಸು. ಇದಕ್ಕಾಗಿಯೇ ರಸ್ತೆ ಸುರಕ್ಷತಾ ಒಕ್ಕೂಟವೊಂದನ್ನು ಸಹ ಆರಂಭಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ವಿವಿಧ ಎನ್‍ಜಿಓಗಳು ಮತ್ತು ಸಂಘ ಸಂಸ್ಥೆಗಳು ಕೂಡ ಇವರೊಂದಿಗೆ ಕೈ ಜೋಡಿಸಿವೆ. ರಕ್ಷಾ ಸೇಫ್ ಡ್ರೈವ್ ಡಿವೈಸ್ ಅನ್ನು ವೈಯಕ್ತಿಕವಾಗಿಯೂ ಖರೀದಿಸಬಹುದು. ಬುಕ್ಕಿಂಗ್‍ಗಾಗಿ www.raksha.meಗೆ ವಿಸಿಟ್ ಮಾಡಿ.

Related Stories