ಜೀನಿ ನಾಡಲ್ಲಿ ಜಾದು ನಡೆದ ಕಥೆ

ಚೈತ್ರ ಎನ್​​

ಜೀನಿ ನಾಡಲ್ಲಿ ಜಾದು ನಡೆದ ಕಥೆ

Wednesday January 20, 2016,

6 min Read

ಜೀನಿ ಮರಳುಗಾಡಲ್ಲಿ ಯಾಕೆ ಹುಟ್ಟಿದ ಗೊತ್ತಾ? ನಿಜಕ್ಕೂ ಆ ಮರಳಿನಲ್ಲಿ ಮ್ಯಾಜಿಕಲ್ ಪವರ್ ಇದೆ. ಎಸ್! ಆ ಕಾರಣದಿಂದಲೇ ದುಬೈ ವಿಶ್ವದ ಎಲ್ಲರ ಚಿತ್ತ ತನ್ನೆಡೆ ಸೆಳೆದುಕೊಂಡಿರೋದು. ಕಾಲಿಟ್ಟರೇ ಹೂತುಕೊಳ್ಳುವ, ಕೈಯಲ್ಲಿ ಹಿಡಿದರೆ ಸರಕ್ಕನೇ ಜಾರುವ ಮರಳುಗಾಡ ನೆಲದಲ್ಲಿ ಎಣ್ಣೆ ಪೆಟ್ರೋಲ್ ತೈಲವನ್ನೆ ಎರೆದು ಚಿನ್ನದ ನಾಡಗಿಸಿಕೊಂಡಿರುವ ದುಬೈ ಪ್ರವಾಸಿಗರನ್ನು ಸೆಳೆಯುವುದು ಇದೇ ಕಾರಣಕ್ಕೆ! ಒಬ್ಬ ಪ್ರವಾಸಿಗಳಾಗಿ ದುಬೈ ನನ್ನ ಕಣ್ಣಲ್ಲಿ ಅಚ್ಚರಿಗಳನ್ನು ಮೂಡಿಸಿತ್ತು. ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿತ್ತು. "ಏನು ಇಲ್ಲದ ಬರಡು ಭೂಮಿ ಚಿನ್ನದ ನೆಲೆಯಾಗಿರುವ ಕಥೆಯೇ ರೋಚಕ ಸ್ಟೋರಿ"

image


ತೈಲದ ಸಾಗರದ ಮೇಲೆ ಕಾಂಚಣ ಯಾತ್ರೆ

ಹೇಳಿ ಕೇಳಿ ದುಬೈ ಮರಳು ಗಾಡಿನ ನೆಲ. ನನಗೆ ಮೊದಲು ಅನ್ನಿಸಿದ್ದು ಇಲ್ಲಿ ಕುಡಿಯೋದಕ್ಕೆ ನೀರಿಲ್ಲ ಇನ್ನು ಸ್ನಾನಕ್ಕೆಲ್ಲಾ ಹೇಗಪ್ಪ ಅಂತಾ. ಆದರೆ ಮೊದಲ ಅಚ್ಚರಿ ಕಾಡಿದ್ದೇ ಅಲ್ಲಿ. ಉಪ್ಪು ನೀರಿಗೆ ಉಪ್ಪಿನ ಋಣ ತೀರಿಸಿದ ಜಾಣರು ದುಬೈ ದೊರೆಗಳು. ಹೌದು! ಸಮುದ್ರದ ಉಪ್ಪಿನ ನೀರನ್ನು ಶುದ್ಧೀಕರಿಸಿ ಪ್ರತಿ ಮನೆಗೂ ನೀರನ್ನು ಸರಬರಾಜು ಮಾಡಲಾಗುತ್ತದೆ. 200 ಎಮ್ ಎಲ್‍ನ ನೀರಿನ ಬಾಟೆಲ್ ಬೆಲೆ 5 ಧೀರಮ್ಸ್ ಅಂದರೆ ಭಾರತದ ರೂಪಾಯಿಯಲ್ಲಿ 100 ರೂಪಾಯಿಯಾಗುತ್ತದೆ. ದುಬೈ ಲೈಫ್‍ಸ್ಟೈಲ್‍ನಲ್ಲಿ ಇದು ಕಡಿಮೆ ಬೆಲೆ. ಇನ್ನು ಪೆಟ್ರೋಲ್ ಅನ್ನು ರಫ್ತು ಮಾಡುವ ಮೂಲಕ ತನ್ನ ಆದಾಯಕ್ಕೆ ದಾರಿ ಮಾಡಿಕೊಂಡಿರುವ ದುಬೈ ಒಡಲೊಳಗೆ ಕಿಚ್ಚು ಹಾಗೇ ಉಳಿದಿತ್ತು. ಇದು ಜ್ಯೋತಿಯಾಗಿ ಹೊರ ಹೊಮ್ಮಿದ್ದು ಪ್ರವಾಸೋದ್ಯಮದ ಕನಸು ಮೂಡಿದಾಗ!

ಮರಳು "ಮರಳು" ಮಾಡೋ ಕಥೆ

ಬಿರುಗಾಳಿಗೆ ಧೂಳೆಬ್ಬಿಸುವ ದುಬೈ ಮರಳ ಮೇಲೆ ಕಾಲಿಟ್ಟಾಗ ಅದೆನೋ ಪುಳಕ ನನ್ನೊಳಗೆ. ಅಬ್ಬಾ ಅರಬ್ಬೀ ಜನರು ಅದೆಷ್ಟು ಕುಶಲಮತಿಗಳು ಅನ್ನಿಸಿತ್ತು. ಮರಳಿನ ಮೇಲೆ ಮೈ ಜುಂ ಎನ್ನುವ ಡೆಸರ್ಟ್ ಸಫಾರಿ ಪ್ರವಾಸಿಗರನ್ನು ತನ್ನೆಡೆ ಸುಂಟರಗಾಳಿಯಂತೆ ಸೆಳೆದುಕೊಳ್ಳುತ್ತಿತ್ತು. ಅದರಲ್ಲು ಯುವ ಮನಸನ್ನು ಸೆಳೆದುದರಲ್ಲಿ ಆಶ್ಚರ್ಯವೇನಿಲ್ಲ. ನಿಮಗೆ ಗೊತ್ತಾ ಈ ಮರಳು ಗಾಡ ಮೇಲೆ ಮನಸು ಮಸ್ತಿ ಮಾಡಲು 150 ಧೀರಮ್ಸ್ ಅಂದರೆ ಭಾರತೀಯ ರೂಪಾಯಿಯಲ್ಲಿ 2500 ರೂಪಾಯಿಗಳನ್ನು ನೀಡಬೇಕು. ಇದಲ್ಲವೇ ಮರಳಲ್ಲೂ ಚಿನ್ನ ತೆಗೆಯೋ ಜಾಣತನ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡೆ. ಆಗೊಮ್ಮೆ ಈಗೊಮ್ಮೆ ನೀರು ಕುಡಿದು ಗಿಡ ಗಂಟೆಗಳನ್ನು ತಿನ್ನುವ ಒಂಟೆ ತನ್ನ ಮೇಲೆ ಪ್ರವಾಸಿಗರನ್ನು ಕೂರಿಸಿಕೊಂಡು ಪಲ್ಲಕ್ಕಿ ಮೇಲೆ ಹೊತ್ತೋಯುವ ಹಾಗೆ ಸವಾರಿ ಕರೆದುಕೊಂಡು ಹೋಗುವ ಆ ಚಾಣಕ್ಷ ತನಕ್ಕೆ ದುಬೈ ಆದಾಯಲ್ಲಿ ಮತ್ತಷ್ಟು ಏರಿಕೆಯಾಗ್ತಿರೋದು ಸುಳ್ಳಲ್ಲ. ಏನೇ ಹೇಳಿ ಇದನ್ನೆಲ್ಲಾ ಒಮ್ಮೆಯಾದರೂ ಅನುಭವಿಸು ಮನವೇ ಎಂದು ಕುಟುಕುತ್ತಿರುತ್ತದೆ ಜೀವನ ಪ್ರೀತಿ.

ಬೆಲ್ಲದ ಸವಿಯಂಥ ಬೆಲ್ಲಿ ಡ್ಯಾನ್ಸ್

ಕಲಾ ರಸಿಕರ ಕೈ ಬೀಸಿ ಕರೆಯೋ, ಮನಸ್ಸನ್ನು ಹಿಂಡಿ ಹೆಪ್ಪೆ ಮಾಡೋ ಹಿಪ್ ತಾಳಕ್ಕೆ ಬೆಲ್ಲಿಯ ಸಾತ್ ನೀಡೋ ಬೆಲ್ಲಿ ಡ್ಯಾನ್ಸ್ ಮೋಹಕ್ಕೆ ಮರುಳಾಗದಿದ್ದರೆ ಹಾಳು ಬಿದ್ದು ಹೋಗು ಮನವೇ ಅನ್ನಿಸಿಬಿಡುತ್ತೆ. ಸಾವಿರಾರು ವರುಷಗಳ ಕಾಲದಿಂದ ಅರಬ್ಬೀ ದೊರೆಗಳ ಮನರಂಜನೆಯ ಪ್ರಮುಖ ಅಂಶವಗಿರೋ ಬೆಲ್ಲಿ ನಿಜಕ್ಕೂ ದೈವಿಕ ನೃತ್ಯ. ಬಾಲ್ಯದಿಂದಲೇ ಆ ನೃತ್ಯಕ್ಕಾಗಿ ನಿರಂತರ ಅಭ್ಯಾಸ ಮತ್ತು ಶ್ರಮವನ್ನು ಬೇಡುವ ಬೆಲ್ಲಿ ನೃತ್ಯ ಅರಬ್ ಸಂಸ್ಕøತಿಯ ದ್ಯೋತಕವಾಗಿದೆ ಜೊತೆಗೆ ಪ್ರವಾಸಿಗರನ್ನು ಬರಸೆಳೆದು ಅಪ್ಪಿಕೊಳ್ಳುತ್ತಿದೆ. ದೊಡ್ಡ ಬಯಲು ಪ್ರದೇಶದಲ್ಲಿ ರಾತ್ರಿಯ ಊಟ, ಹಣ್ಣಿನ ಪಾನದ ನಡುವೆ ಬಾನಂಗಳದ ನಕ್ಷತ್ರಗಳ ಸೊಬಗಿನೊಡನೆ ಬೆಲ್ಲಿ ನೃತ್ಯಕ್ಕೆ ಮನಸೋಲದ ಅರಸಿಕನಿಲ್ಲ ಈ ಜಗದಲಿ.

image


ಮ್ಯಾಜಿಕ್ ಲ್ಯಾಂಡ್ "ಪಾಮ್ ಝುಮ್ಹೆರಾ"

ಪಾಮ್ ಝುಮ್ಹೆರಾ ಇದು ಮಾನವ ನಿರ್ಮಿತ ದ್ವೀಪ. ಹೌದು, ದುಬೈನಲ್ಲಿ ಕಣ್ಮನ ಸೆಳೆಯೋ ಅದ್ಭುತಗಳಲ್ಲಿ ಅದ್ಭುತವೆನಿಸೋ ಸಮುದ್ರದ ಮೇಲಿನ ಈ ಮಾನವ ನಿರ್ಮಿತ ದ್ವೀಪ ದುಬೈ ಜನರ ಮಿದುಳಿನ ಶಕ್ತಿಗೆ ಹಿಡಿದ ಕನ್ನಡಿ. ಯುರೋಪಿಯನ್‍ನ ನಖಿಲ್ ಡೆವೆಲಪರ್ಸ್ ಸುಮಾರು 9 ವರ್ಷಗಳ ಕಾಲ. ಅರಬ್‍ನ ಕಲ್ಲು ಬಂಡೆಗಳನ್ನು ಸಿಡಿಸಿ, ಮರಳನ್ನು ಸುರಿಸಿ ಕಟ್ಟಿರುವ ದ್ವೀಪ. ಇದರ ಹಿಂದಿರುವ ಮಾಸ್ಟರ್ ಮೈಂಡ್ ದುಬೈ ದೊರೆಗಳು. ಇಲ್ಲಿಯೇ ಶಾರುಖ್ ಖಾನ್‍ನ ವಿಲ್ಲಾ ಇದೆ. 4000 ಅಪಾರ್ಟ್‍ಮೆಂಟ್ ಮತ್ತು ಶಾಪಿಂಗ್ ಕಾಂಪ್ಲೆಕ್ಸ್ ಇದೆ. 200 ಮಿಲಿಯನ್ ಡಾಲರ್ ಪ್ರಾರಂಭಿಕ ಮಾರಟದ ಬೆಲೆ. ಈ ದ್ವೀಪವನ್ನು ಕಣ್ತುಂಬಿಕೊಳ್ಳಲು 750 ಧೀರಮ್ಸ್ ಅಂದರೆ 17 ಸಾವಿರ ಭಾರತೀಯ ರೂಪಾಯಿಗಳನ್ನು ನೀಡಬೇಕು. ಅಲ್ಲದೇ ಸಕೈ ಡೈವ್ ಮೂಲಕವೂ ಈ ದ್ವೀಪವನ್ನು ಕಣ್ತುಂಬಿಕೊಳ್ಳಬಹುದು. ದುಬೈನ ಅತಿ ಹೆಚ್ಚ ಆದಾಯದ ಮೂಲದ ಈ ಪಾಮ್ ಝುಮ್ಹೆರಾ ದ್ವೀಪದಿಂದಲೇ ಬರುತ್ತದೆ. ಇನ್ನು ಇಲ್ಲಿ ಒಂದು ಕಿಲೋಮೀಟರ್​ ಅಂಡರ್ ಪಾಸ್‍ನಲ್ಲಿ ಹೋಗುವಾಗ ನಮ್ಮ ಮೇಲೆ ಸಮುದ್ರದ ಅಲೆಗಳ ಮೋರೆತ ಕೇಳುತ್ತದೆ. ನಿಜಕ್ಕೂ ಒಬ್ಬ ಪ್ರವಾಸಿಗಳಾಗಿ ನನ್ನ ಯಾತ್ರೆಗೆ ಹೊಸ ಹುರುಪು ಮೂಡಿಸಿದ್ದು ಪಾಮ್ ಝುಮ್ಹೆರಾ!

image


ಸಂಪತ್ತಿನ ಖಜಾನೆ ದುಬೈ ಬೀಚ್

ದುಬೈಗೆ ಹೋಗಿ ದುಬೈ ಬೀಚ್‍ನಲ್ಲಿ ಮೀಯದಿದ್ದರೇ ಕಾಶಿಗೆ ಹೋಗಿ ಗಂಗಾ ಜಲ ಕುಡಿಯದಷ್ಟೆ ಅಸಂಗತವಾಗಿರುತ್ತದೆ. ದುಬೈನಲ್ಲಿ ಹಳೆ ದುಬೈನಲ್ಲಿ ಈ ಬೀಚ್ ಕಾಣಬಹುದು. ಹಳೆ ದುಬೈನಲ್ಲಿ ಬಹಳ ಹಳೆಯ ಕಾಲದ ಮನೆಗಳಿವೆ. ಏಕೆಂದರೆ ಅದನ್ನು 50 ವರ್ಷಗಳಿಗೊಮ್ಮೆ ಕೆಡವಿ ಕಟ್ಟುವ ಸಂಪ್ರದಾಯ ದುಬೈನಲ್ಲಿತ್ತು. ಈಗ ಹೊಸ ದುಬೈನಲ್ಲಿ ಸಟೀಲ್ ಮತ್ತು ಕಾಂಕ್ರೀಟ್ ಬಲಸಿ ಬೂಕಂಪಕ್ಕೆ ಸೆಡ್ಡು ಹೊಡೆಯುವ ಹಾಗೇ ಮನೆಗಳನ್ನ ನಿರ್ಮಿಸಲಾಗುತ್ತಿದೆ. ದುಬೈ ಬೀಚ್ ಮತ್ತು ಝುಮ್ಹೆರಾ ಬೀಚ್‍ಗಳು ಪ್ರವಾಸಿಗರ ಕೈ ಬೀಸಿ ಕರೆಯುತ್ತವೆ. ಇಲ್ಲಿ ಸುನಾಮಿ, ಜಲ ಪ್ರಳಯದ ಯಾಔಉದೇ ಭಯವಿಲ್ಲ. ಪ್ರಕೃತಿ ಹಾಗೇ ಡಿಸೈನ್ ಮಾಡಿಕೊಂಡಿದೆ. ಇಲ್ಲಿ ಅಲೆಗಳ ರಭಸದ ನಡುವೆ ಕಪ್ಪೆ ಚಿಪ್ಪುಗಳನ್ನ ಸಂಗ್ರಹಿಸುವುದೇ ಒಂದು ಮಜಾ. ವಿದೇಶಿ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುವ ಈ ಬೀಚ್‍ಗಳು ಪ್ರವಾಸದ ಉದ್ಯಮದಲ್ಲಿ ಬಹು ದೊಡ್ಡ ಪಾಲನ್ನು ತನ್ನದಾಗಿಸಿಕೊಂಡಿದೆ.

ಬುರ್ಝ್ ಖಲೀಫ

ಪ್ರಪಂಚದ ಎತ್ತರದ ಬಿಲ್ಡಿಂಗ್‍ಗಳಲ್ಲಿ ಒಂದಾಗಿರುವ ಬುರ್ಜ್ ಖಲೀಫಾ ಕಟ್ಟಡ ಯುರೋಪಿಯನ್ ಪ್ರವಾಸಿಗರ ಮೆಚ್ಚಿನ ತಾಣ. ಇಲ್ಲಿರುವ 7 ಸ್ಟಾರ್ ಹೋಟೇಲ್ ವಿಶ್ವದಲ್ಲಿ ಎಲ್ಲೂ ಕಾಣ ಸಿಗುವುದಿಲ್ಲ. ಒಳಗೆ ಪ್ರವೇಶಕ್ಕೆ 4000 ರೂಪಾಐಇಗಳನ್ನು ತೆರಬೇಕಾಗುತ್ತದೆ. ಅಲ್ಲದೇ ಈಡೀ ಕಟ್ಟಡದೊಳಗೆ ಪ್ರವೇಶ ನಿಡುವುದಿಲ್ಲ. ಒಟ್ಟಾರೆ ವಿಸ್ಮಯ ಮತ್ತು ಅದ್ಭುತಗಳನ್ನ ತನ್ನ ತೆಕ್ಕೆಯೊಳಗೆ ಇರಿಸಿಕೊಂಡಿರುವ ಬುರ್ಝ್ ಖಲೀಫಾ ಮಾಯನಗರವೇ ಸರಿ.

ಪ್ರ್ರಿನ್ಸ್ ಟವರ್ ಮತ್ತು ಮದೀನತ್ 7 ಸ್ಟಾರ್ ಹೋಟೆಲ್

ದುಬೈನ ಆದಾಯದಲ್ಲಿ ಬಹು ಪಾಲು ಮದೀನತ್ 7 ಸ್ಟಾರ್ ಹೋಟೆಲ್‍ಗೆ ಸಲ್ಲುತ್ತದೆ. ಯುರೋಪಿಯನ್ ಪ್ರವಾಸಿಗರನ್ನೇ ತನ್ನತ್ತ ಸೆಳೆಯುವ ಹೋಟೆಲ್, ರೂಪಾಯಿಗೆ ಗಗನ ಕುಸುಮ. ಇಲ್ಲೆನಿದ್ದರೂ ಡಾಲರ್‍ನದ್ದೇ ವೈಭವ. ಹಾಗಾಗಿ ಇದು ದುಬೈ ಮೇಲಿನ ಸ್ವರ್ಗವೇ ಸರಿ.

ದುಬೈ ಮಾಲ್

ದುಬೈ ಮಾಲ್ ಎಂದೇ ಪ್ರಸಿದ್ದಿ ಹೊಂದಿರುವ ದುಬೈ ಮಾಲ್‍ನಲ್ಲಿ ಎಲ್ಲವೂ ಲಭ್ಯ ಆದರೆ ಇಲ್ಲಿ ಎಲ್ಲವೂ ಕಾಸ್ಟ್ಲಿ. ಅಗೇನ್ ಇದು ಯೂರೋಪಿಯನ್ನರಿಗೆ ಕೈಗೆಟಕುವ ಕುಸುಮ. ಇಲ್ಲಿ ಪ್ರತಿ ವಸ್ತುಗಳು, ಟ್ಯಾಕ್ಸ್ ದುಬೈ ಆದಾಯದ ಖಜಾನೆಯನ್ನು ತುಂಬಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇಲ್ಲಿರುವ ಫಿಶ್ ಟ್ಯಾಂಕ್‍ಗೆ ಮನಸೋಲದವರಿಲ್ಲ.

ಪ್ರವಾಸಿಗರ ಫೇವರೇಟ್ "ಲುಲು ಬಜಾರ್"

ದುಬೈ ನಲ್ಲಿ ಅತಿ ಕಡಿಮೆ ಬೆಲೆಗೆ ಶಾಪಿಂಗ್ ಮಾಡಬಹುದಾದ ಖರ್ಜೂರಗಳು, ಡ್ರೈ ಫ್ರುಟ್ಸ್​​ಗಳು ಹೆಚ್ಚೆಚ್ಚು ಫೇಮಸ್. ದುಬೈ ವಾಚ್‍ಗಳು ದೀರ್ಘಕಾಲ ಬಾಳಿಕೆ ಬರುತ್ತವೆ. ಇನ್ನು ಇಲ್ಲಿ ಹ್ಯಾಂಡ್ ಬ್ಯಾಗ್‍ಗಳು ಕಡಿಮೆ ಬೆಲೆಯಲ್ಲಿ ಲಭ್ಯ. ಪರ್ಫ್ಯೂ ಮ್‍ಗಳು, ಟೀ ಶರ್ಟ್‍ಗಳು ಕಡಿಮೆ ಬೆಲೆಗೆ ಸಿಗುತ್ತವೆ. ಆದರೆ ಹುಡುಕಬೇಕು. ಇನ್ನು ಚಾಕೋಲೆಟ್‍ಗಳಂತೂ ತುಂಬಾ ಕಡಿಮೆ ಬೆಲೆಗೆ ಸಿಗುತ್ತವೆ. 2000 ರೂಪಾಯಿಗೆ ಒಂದು ಸೂಟ್‍ಕೇಸ್ ತುಂಬಾ ತುಂಬುವಷ್ಟು. ಮೇಕಪ್ ಕಿಟ್ ಅಂತೂ ತುಂಬಾ ಫೇಮಸ್, ದುಬೈ ಮಹಿಳೆಯರು ಅಲಂಕಾರ ಪ್ರಿಯರು. ತೆಳ್ಳಗೆ ಬೆಳ್ಳಗೆ ಕಾಣುವ ಹೆಣ್ಣುಮಕ್ಕಳು ಮೇಕ್‍ಅಪ್ ಇಲ್ಲದೇ ಹೊರಗಡೆ ಬರುವುದೇ ಇಲ್ಲ. ಮುತ್ತಿನ ಸರಗಳು, ಡಿಸೈನ್ ಸಿಸೈನ್ ಜ್ಯವೆಲ್ಲರಿಗಳು ಕೂಡ ನಿಮ್ಮನ್ನು ಸೆಳೆಯುತ್ತವೆ. ಗೋಲ್ಡ್ ಕೂಡ ಕಡಿಮೆ ಬೆಲೆಗೆ ಸಿಗುತ್ತದೆ. ಪ್ಯೂರಿಟಿ ಕೂಡ 100%. ನಮ್ಮ ಸಹ ಪ್ರಯಾಣಿಕರೊಬ್ಬರು ತಮ್ಮ ಚಿನ್ನದ ಚೈನ್ ಮಾರುವಾಗ ಬಹಳ ಕಳಪೆ ಚಿನ್ನ ಬಳಸಲಾಗಿದೆ ಎಂದು ಕಡಿಮೆ ಬೆಲೆಗೆ ಕೊಂಡರು ಜ್ಯುಎವೆಲರಿ ಶಾಪಿನವರು.

ಈ ಎಲ್ಲಾ ಪ್ರವಾಸಿ ತಾಣಗಳ ಮೂಲಕ ಅರಬ್ಬರು ತಮ್ಮ ಆದಾಯದ ಬೊಕ್ಕಸವನ್ನು ತುಂಬಿಕೊಳ್ಳುತ್ತಿದ್ದಾರೆ. ಏನೂ ಇಲ್ಲದೇ ಕೇವಲ ಮರಳು ಮತ್ತು ಸಮುದ್ರದಿಂದ ಮಿಲಿಯನ್‍ಗಟ್ಟಲೇ ಆದಾಯ ಗಳಿಸುತ್ತಿರುವ ದುಬೈನಲ್ಲಿ ದೊಡ್ಡ ದೊಡ್ಡ ಯುನಿರ್ವಸಿಟಿಗಳಿವೆ. ಯುರೋಪಿಯನ್ ಸಂಸ್ಕೃತಿಯಲ್ಲಿ ಬದುಕು ನಡೆಸಲು ಪ್ರತ್ಯೇಕ ನಗರವಿದೆ. ಐಟಿ ಸಿಟಿಗಳಿವೆ. ಕಾರ್ ಶೋರುಮ್‍ಗಳ ಪ್ರತ್ಯೇಕ ಪ್ರದೇಶವಿದೆ. ಮಾಧ್ಯಮಗಳಿಗೆ ಸೆಪರೇಟ್ ಸ್ಥಳಗಳಿವೆ. ಆದರೆ ಇವೆಲ್ಲಾ ಇರುವುದು ದುಬೈನ ಕಾಸ್ಟಲಿ ನಗರದೊಳಗೆ. ಇಲ್ಲಿಯ ಸಮುದ್ರ ಆಹಾರಗಳು, ಶಿಪ್ಪಿಂಗ್ಗಳು ಅರಬ್ಬರನ್ನು ಇನ್ನು ಶ್ರೀಮಂತಗೊಳೀಸಿವೆ. ಅಷ್ಟೆ ಅಲ್ಲದೇ ಹೋಟೆಲ್ ಉದ್ಯಮದಲ್ಲಿ ಪವಾಡವನ್ನೇ ಮಾಡಿದೆ. ಭಾರತದಿಂದ ಅದರಲ್ಲೂ ಮಂಗಳೂರಿನಿಂದ ಹೊರಟ ಅದೆಷ್ಟೋ ಕನ್ನಡಿಗರಿಗೆ ದುಬೈ ಹೋಟೆಲ್ ಉದ್ಯಮ ರೆಡ್ ಕಾರ್ಪೆಟ್ ಹಾಸಿದೆ. ಜೊತೆಗೆ ಭಾರತೀಯ ವೈದ್ಯರಿಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇನ್ನು ಓಡಾಡಲೂ ಟ್ಯಾಕ್ಸಿ ಸೌಲಭ್ಯವಿದ್ದು 12 ಧೀರಮ್ಸ್ ಮಿನಿಮಮ್ ಅಂದರೆ 140 ಭಾರತೀಯ ರೂಪಾಯಿಗಳು.

image


ಇಷ್ಟೆಲ್ಲಾ ಸಿರಿವಂತಿಕೆಯ ಹಿಂದೆ ಕೇವಲ ಪ್ರವಾಸೋದ್ಯಮವಷ್ಟೇ ಅಲ್ಲ ದುಬೈ ದೊರೆಗಳ ಕಟ್ಟು ನಿಟ್ಟಿನ ಆಡಳಿತವೂ ಕಾರಣವಿದೆ. ಮಹಿಳೆಯರಿಗೆ ಈಡೀ ಪ್ರಪಂಚದಲ್ಲಿ ಅತಿ ಹೆಚ್ಚು ಸೇಫ್ ಪ್ಲೇಸ್ ಅಂದ್ರೆ ಅದು ದುಬೈ. ಹೆಣ್ಣು ಮಕ್ಕಳನ್ನು ಕಣ್ಣೆತ್ತಿ ನೋಡಲು ಹೆದರಬೇಕು ಎನ್ನುವ ಹಾಗೇ ರೂಲ್​​ಗಳಿವೆ. ಅದಕ್ಕೂ ಮಿಗಿಲಾಗಿ ರಸ್ತೆಯಲ್ಲಿ ಚಲಿಸುವ ಪಾದಾಚಾರಿಗಳ ಬಗ್ಗೆ ಅತೀವ ಕಾಳಜಿ ಇದೆ. ರಸ್ತೆ ದಾಟುವಾಗ ಯಾವುದೇ ಕಾರು ಬಂದರು ಪಾದಾಚಾರಿಗಳು ಕೈ ತೋರಿಸಿದರೇ ಸಾಕು ಕಾರು ನಿಂತು ನಮಗೆ ರಸ್ತೆ ದಾಟಲು ಅನುವು ಮಾಡಿಕೊಡುವುದನ್ನು ನೋಡಿದಾಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಕುಡಿದು ಕಾರು ಚಲಾಯಿಸಿದ್ರೋ ಮುಗಿಯಿತು ನಿಮ್ಮ ಕಥೆ. ಇನ್ನು ದುಬೈನ ಪ್ರತಿಯೋಮದು ಮನೆಗಳನ್ನ ಸ್ಟೀಲ್ ಮತ್ತು ಕಾಂಕ್ರಿಟ್‍ನಿಂದ ಕಟ್ಟಲಾಗುತ್ತಿದೆ. ಮತ್ತು ಕಣ್ಣು ಹಾಯಿಸಿದಷ್ಟು ದೂರ ಗಗನಚುಂಬಿ ಕಟ್ಟಡಗಳೆ ಕಾಣುತ್ತವೆ. ಎಂತದ್ದೇ ಭೂಕಂಪನವಾದರೂ ಈ ಕಟ್ಟಡಗಳು ಅಲುಗಾಡುವುದಿಲ್ಲ. ಇನ್ನು ಪ್ರತಿಯೊಬ್ಬರ ಮನೆ ಮೇಲೂ ಒಂದೊಂದು ಹೆಲಿಪ್ಯಾಡ್‍ಗಳಿದ್ದು ಭವಿಷ್ಯದ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಕಾಪ್ಟರ್ಗಳು ಬರುತ್ತಿವೆ. ಇನ್ನು ದುಬೈನಲ್ಲಿ ಎಲ್ಲೆಂದರಲ್ಲಿ ಅಲೆದಾಡುವಂತಿಲ್ಲ. ಅಪ್ಪಿ ತಪ್ಪಿ ಅಡ್ರೆಸ್ ತಪ್ಪಿ ಬೇರೆ ಸ್ಥಳಕ್ಕೆ ಹೋದರೂ ಫೈನ್ ಕಟ್ಟಬೇಕು. ಮೆಟ್ರೋ ಟ್ರೈನ್‍ನನಲ್ಲಿ ಕಣ್ತಪ್ಪಿ ಮಹಿಳಾ ಮೀಸಲು ಪ್ರವೇಶ ದ್ವಾರದಿಂದ ಟ್ರೈನ್ ಹತ್ತಿದಿರೋ ಮುಗಿತು 4000 ರೂಪಾಯಿ ದಂಡ ತೆರಲು ಸಿದ್ದರಾಗಬೇಕು, ಹೀಗೆ ಕಟ್ಟು ನಿಟ್ಟಿನ ಕಾನುನು ಪಾಲನೆ ಪ್ರವಾಸಿಗರಿಗೆ ಭಧ್ರತೆ ಮತ್ತು ಕಂಫರ್ಟ್ ಒದಗಿಸಿದೆ. ಆದರೆ ಸಂಬಂಧಗಳನ್ನು ನೋಡದೇ ರೂಲ್ಸ್ ಫಾಲೋ ಮಾಡೋ ಆ ದೇಶ ತನ್ನೊಳಗೆ ಅದೆಷ್ಟೋ ಗುಟ್ಟನ್ನು ಬಚ್ಚಿಟ್ಟುಕೊಂಡಿದೆ. ಕ್ರೈಂ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲು ನಿರಾಕರಿಸುತ್ತದೆ. ಅದಕ್ಕೆ ಆ ದೇಶ ಅಷ್ಟು ಆರ್ಗನೈಸ್ಡ್ ಆಗಿದೆ ಎಂದು ನನ್ನ ಸಹಪ್ರಯಾಣಿಕರು ಹೇಳುವಾಗ, " ಸ್ವತಂತ್ರಕ್ಕೆ ನಿಯಮಗಳನ್ನು ಜೋಡಿಸಿಟ್ಟು ಅಭಿವುದ್ಧಿ ಹೊಂದಿದ ದೇಶವಾಗಿರೋ ದುಬೈಗಿಂತ, ಸಂಬಂಧಗಳ ಸೆಲೆ ಬಲೆಯೊಳಗೆ ನಿತ್ಯ ನಮ್ಮನ್ನು ಭಾವನಾತ್ಮಕವಾಗಿ ಕಾಯುವ ನನ್ನ ಭಾರತ ಎಷ್ಟು ಬ್ಯೂಟಿಫುಲ್ ಅಲ್ವಾ?" ಅನ್ನೋ ಟಿಪಿಕಲ್ ಇಂಡಿಯನ್ ಥಾಟ್ ನನ್ನ ಬಗ್ಗೆ ದೇಶದ ಬಗ್ಗೆ ಹೆಮ್ಮೆ ಮೂಡಿಸಿತ್ತು.

ಅದೇನೆ ಇರಲಿ ಈ ಜನುಮವೇ ಆಹಾ ದೊರಕಿದೆ ರುಚಿ ಸವಿಯಲು ಅದು ನಾಲಿಗೆ ಮೂಲಕ ಇಲ್ಲ ಪ್ರವಾಸಿಗನಾಗುವ ಮೂಲಕ! ಜೀವನದಲ್ಲಿ ಒಮ್ಮೆಯಾದರೂ ಕಣುಂಬಿಕೊಳ್ಳಲೇ ಬೇಕಾದ ದೇಶಗಳಲ್ಲಿ ದುಬೈ ಕೂಡ ಒಂದು. ಇಲ್ಲ ಅಂದ್ರೆ ಮತ್ತೊಮ್ಮೆ ಹುಟ್ಟಿ ಬರೋದನ್ನ ಮರಿಬೇಡಿ ಪ್ಲೀಸ್!

    Share on
    close