ವಾರಣಾಸಿಯಲ್ಲಿ ಕನಸು ಹೆಣೆದು ಯಶಸ್ಸಿನ ಚಿತ್ರ ಬಿಡಿಸಿದ ಬಾಲೆ

ಟೀಮ್​​ ವೈ.ಎಸ್​​.ಕನ್ನಡ

ವಾರಣಾಸಿಯಲ್ಲಿ ಕನಸು ಹೆಣೆದು ಯಶಸ್ಸಿನ ಚಿತ್ರ ಬಿಡಿಸಿದ ಬಾಲೆ

Friday November 20, 2015,

4 min Read

ಶ್ರುತಿ ಜೈಸ್ವಾಲ್ ಅವರು ದೇಗುಲ ನಗರಿ ವಾರಣಾಸಿಯ ತುಂಬು ಕುಟುಂಬದಲ್ಲಿ ಮಮತೆಯ ಮಳೆಯಲ್ಲಿ ಬೆಳೆದ ಹುಡುಗಿ. ಮನೆಯಲ್ಲಿ ಕೊನೆಯ ಕುಡಿಯಾಗಿದ್ದರಿಂದ, ಅವರಿಗೆ ಪ್ರೀತಿಯ ಸುರಿಮಳೆಯೇ ಆಗಿತ್ತು. ಆದರೆ, ಇವರು ಎಲ್ಲಾ ಹುಡುಗಿಯರಂತೆ ಬೆಳೆಯಲಿಲ್ಲ. ಅವರ ಕುಟುಂಬದ ಕೀರ್ತಿಯಿಂದಾಗಿ ಅವರಿಗೆ ತಮ್ಮ ಇತಿಮಿತಿಗಳ ಅರಿವಿತ್ತು. ಬೇರೆ ಗೆಳತಿಯರಿಗಿಂತ ಇವರು ಹೆಚ್ಚು ಅದೃಷ್ಟವಂತೆಯಾಗಿದ್ದರು. ಭಾರತದಲ್ಲಿ ಆರ್ಥಿಕ-ಸಾಮಾಜಿಕವಾಗಿ ಕೆಳಹಂತದಲ್ಲಿ ವಾಸಿಸುವ ಮಹಿಳೆಯರು ಮೇಲೆ ಬರಬೇಕಾದರೆ, ದುಪ್ಟಟ್ಟು ಕಷ್ಟಪಡಬೇಕಿತ್ತು.

ಶ್ರುತಿಯವರು ಆಗತಾನೇ ಶಾಲೆ ಮುಗಿಸಿದ್ದರು. ಮನೆಗೆಲಸ ಮಾಡುವ ಕೆಲವು ಮಹಿಳೆಯರ ಜೊತೆ ಆಕಸ್ಮಾತ್ತಾಗಿ ಬೆರೆಯುವ ಅವಕಾಶ ಸಿಕ್ಕಿತ್ತು. ಆದರೆ, ಆ ಮಹಿಳೆಯರು ಶ್ರುತಿ ಬದುಕನ್ನೇ ಬದಲಾಯಿಸಿಬಿಟ್ಟಿದ್ದರು. “ ಆ ಮಹಿಳೆಯರು ಒಂದು ಟೈಲರಿಂಗ್ ಘಟಕ ಆರಂಭಿಸಲು ಯೋಚಿಸಿದ್ದರು. ಆದರೆ ಅವರಿಗೆ ಗಂಡನ ಬೆಂಬಲವಿರಲಿಲ್ಲ. ಅಲ್ಲದೆ ಸಾಮಾಜಿಕ ಪರಿಸ್ಥಿತಿಯೂ ಅವರಿಗೆ ಪೂರಕವಾಗಿರಲಿಲ್ಲ.” ಆದರೆ ಅವರ ಜೊತೆಗಿನ ಮಾತುಕತೆಯಿಂದಾಗಿ, ಶ್ರುತಿ ಮನಸ್ಸಿನಲ್ಲಿ ಹೊಸ ಆಲೋಚನೆಗಳು ಹುಟ್ಟಿಕೊಂಡವು. ಅದರ ಫಲವಾಗಿಯೇ ಕ್ಲಚ್ ಆನ್ ಎನ್ನುವ ಸಂಸ್ಥೆಯೊಂದನ್ನು 2009ರಲ್ಲಿ ಆರಂಭಿಸಿದರು. ಆಗ ಅವರಿಗೆ ಕೇವಲ 19 ವರ್ಷ ವಯಸ್ಸು.

image


ಕ್ಲಚ್ ಆನ್, ಹಲವು ಆರ್ಥಿಕ ದುರ್ಬಲ ಮಹಿಳೆಯರಿಗೆ, ಈ ಹಿಂದೆ ಮಾತನಾಡಿದ್ದ ಮಹಿಳೆಯರಿಗೆ ಕೈಯಲ್ಲಿ ಹೆಣೆದ ಬ್ಯಾಗ್ಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿತು. ಬಳಿಕ ಅವರಿಗೆ, ಸ್ಟಿಚ್ಚಿಂಗ್, ನಿಟ್ಟಿಂಗ್ ಸೇರಿದಂತೆ ಹಲವು ಕೆಲಸಗಳಲ್ಲಿ ತರಬೇತಿಯನ್ನೂ ಆಯೋಜಿಸಿತು. ಅಲ್ಲದೆ, ಉದ್ಯಮ ನಡೆಸುವುದು, ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ನೆಲೆಯೂರಲು ಬೇಕಾದ ತಂತ್ರಗಳ ಕುರಿತೂ ಮಾಹಿತಿ ಒದಗಿಸಲಾಯಿತು. ಶ್ರುತಿ ಹೆಚ್ಚಿನ ಶಿಕ್ಷಣಕ್ಕಾಗಿ ಬೇರೆ ಊರಿಗೆ ತೆರಳಿದರು. ಈಗ ಕ್ಲಚ್ ಆನ್ ನಿಂತುಹೋಗಿದೆ. ಆದರೆ, ಇದರ ಮೂಲಕ ಬದುಕು ಕಂಡುಕೊಂಡ ಹಲವು ಮಹಿಳೆಯರು ಬೇರೆ ಬೇರೆ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವು ಸ್ವಂತ ಉದ್ಯಮವನ್ನೂ ಸ್ಥಾಪಿಸಿದ್ದಾರೆ.

ಭುವನೇಶ್ವರದಲ್ಲಿನ ಕ್ಸೇವಿಯರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಗ್ರಾಮೀಣಾಭಿವೃದ್ಧಿ ಸ್ನಾತಕೋತ್ತರ ಪದವಿ ಪಡೆದ ಶ್ರುತಿಯವರು ಬಳಿಕ ಭಾರತದ ಟಾಪ್ ಬ್ಯಾಂಕ್ ಒಂದರಲ್ಲಿ ಕೆಸಲ ಮಾಡಿದರು. ಆದರೆ, ಒಂದೇ ತಿಂಗಳಿನಲ್ಲಿ, ಈ ಕೆಲಸ ನನಗಲ್ಲ ಎಂಬ ನಿರ್ಧಾರಕ್ಕೆ ಬಂದುಬಿಟ್ಟರು. ಪದವಿ ಪಡೆಯುತ್ತಿರುವಾಗಲೇ, ಶ್ರುತಿಯವರು ಸಣ್ಣ ಸಣ್ಣ ಪ್ರಾಜೆಕ್ಟ್ಗಳಿಗಾಗಿ ಹಲವು ಚಿಕ್ಕಪುಟ್ಟ ನಗರಗಳನ್ನು ಹಳ್ಳಿಗಳನ್ನು ಸುತ್ತಾಡಿದ್ದರು. ಹಲವು ಮಹಿಳೆಯರ ಜೊತೆ ಸಂವಹನ ನಡೆಸಿದ್ದರು. ಈಗ ಅವರಿಗಾಗಿ ಏನಾದರೂ ಮಾಡಬೇಕೆಂಬ ಆಸೆ ಅವರಲ್ಲಿ ಹುಟ್ಟಿಕೊಂಡಿತ್ತು.

ಶಿಕ್ಷಣ ಪಡೆಯುತ್ತಿರುವಾಗಲೇ ರೂಹ್ಸರ್ವ್ ಎಂಬ ಕಲ್ಪನೆಯೊಂದನ್ನು ಅಭಿವೃದ್ಧಿಪಡಿಸಿದ್ದರು. ಈ ಕಾನ್ಸೆಪ್ಟ್ ಆಯ್ಕೆಯಾಗಿ, ಹೆಚ್ಚಿನ ಸಂಶೋಧನೆಗೆ ಜರ್ಮನಿಯಿಂದ ಸಹಾಯವೂ ದೊರೆಯಿತು. ಆದರೆ, ಅದಕ್ಕೆ ತಗಲುವ ವೆಚ್ಚ ಮತ್ತು ಪೋಷಕರು ವಿದೇಶಕ್ಕೆ ಕಳುಹಿಸಲು ಒಪ್ಪದೇ ಇದ್ದ ಕಾರಣಕ್ಕೆ, ಆಸೆಯನ್ನು ಕೈಬಿಡಬೇಕಾಯಿತು.

ಬಲ್ಲವರು ಹೇಳುತ್ತಾರೆ ಸಮಯ ಬಂದರೆ, ಯಾವ ಐಡಿಯಾವನ್ನೂ ಅದುಮಿಟ್ಟುಕೊಳ್ಳುವುದು ಸಾಧ್ಯವಿಲ್ಲ ಅಂತ. ಶ್ರುತಿಯವರ ಹುಟ್ಟೂರಿನಲ್ಲೇ ರೂಹ್ ಸ್ಥಾಪನೆಯಾಯಿತು. ಬಡ ಮಹಿಳೆಯರಿಗೆ ಅವರಿಗೆ ಬೇಕಾದ ಕೌಶಲ್ಯ ಸಿದ್ಧಿಸಿಕೊಳ್ಳಲು ತರಬೇತಿ ನೀಡಲಾರಂಭಿಸಿದರು. ಕ್ರಾಫ್ಟಿಂಗ್, ಟೈಲರಿಂಗ್ ಸೇರಿದಂತೆ ಭಾರತೀಯ ಸಾಂಪ್ರದಾಯಿಕ ಉಡುಗೆಗಳನ್ನು ತಯಾರಿಸುವ ಕಲೆ ಹೇಳಿಕೊಡಲಾರಂಭಿಸಿದರು. ರೂಹ್ ಸರ್ವ್ನ ಮುಖ್ಯ ಉದ್ದೇಶವೇನೆಂದರೆ, ಕರಕುಶಲಕರ್ಮಿಗಳ ಶ್ರಮಕ್ಕೆ ತಕ್ಕ ಬೆಲೆ ಸಿಗಬೇಕು, ಆದರೆ, ಗ್ರಾಹಕರಿಗೂ ಅನ್ಯಾಯವಾಗಬಾರದು, ಅವರ ಕಾಸಿಗೆ ಗುಣಮಟ್ಟದ ವಸ್ತು ಸಿಗಬೇಕು ಎನ್ನುವುದು.

ನಮ್ಮಲ್ಲಿ ಗ್ರಾಹಕರು ಕೊಡುವ ಹಣಕ್ಕೆ ಸರಿಯಾದ ಮೌಲ್ಯ ಸಿಕ್ಕಿಯೇ ಸಿಗುತ್ತದೆ ಎನ್ನುತ್ತಾರೆ ಶ್ರುತಿ. ಅವರಿಗೆ ತಮ್ಮ ಕನಸಿನ ಧಿರಿಸುಗಳನ್ನು ಧರಿಸುವ ಅವಕಾಶ ಸಿಗುತ್ತಿದೆ. ಎಲ್ಲ ಕಿರಿಯ ಉದ್ಯಮಿಗಳಂತೆ ಶ್ರುತಿಯವರಿಗೂ ತುಂಬಾ ಚಿಕ್ಕವಳು ಎನ್ನುವ ತಾತ್ಸಾರವೇ ಆರಂಭದಲ್ಲಿ ಎದುರಾಗಿತ್ತು. ಒಂದು ಹಂತದಲ್ಲಿ ಅವರು ವಯಸ್ಸಾದವರಂತೆ ಕಾಣಲು ಬಟ್ಟೆ ತೊಡುವ ಶೈಲಿಯನ್ನೂ ಬದಲಾಯಿಸಿಕೊಂಡಿದ್ದರು.

image


ಸೆಪ್ಟಂಬರ್ 2014ರಲ್ಲು ರೂಹ್ ಆರಂಭಿಸಿದ ಶ್ರುತಿ ಕೊಂಚ ವೇಗವಾಗಿಯೇ ಬೆಳೆಯುತ್ತಿದ್ದಾರೆ. ಆರಂಭದಲ್ಲಿ ತಿಂಗಳಿಗೆ 10 ಆರ್ಡರ್ ಪಡೆಯುತ್ತಿದ್ದ ಅವರು ಈಗ ದಿನಕ್ಕೆ 7-10 ಆರ್ಡರ್ ಪಡೆಯುತ್ತಿದ್ದಾರೆ. 9 ಜನರ ತಂಡದಲ್ಲಿ 6 ಮಂದಿ ಕುಶಲಕರ್ಮಿಗಳಿದ್ದಾರೆ. ಒಬ್ಬರು ಲಾಜಿಸ್ಟಿಕ್ ಸ್ಪೆಷಲಿಸ್ಟ್ ಮತ್ತೊಬ್ಬರು ಸೂಪರ್ವೈಸರ್ ಇದ್ದಾರೆ.

ರೂಹ್ನಲ್ಲಿ ಕೆಲಸ ಮಾಡುತ್ತಿರುವವರು ಒಂದು ಕುಟುಂಬದಂತೆ ಬೆರೆಯುತ್ತಾರೆ. ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಬೆಳೆಯುತ್ತಿದ್ದಾರೆ. ಅವರ ಕಾರ್ಯಕ್ಷೇತ್ರವು ಅವರೆಲ್ಲರಿಗೂ ಎರಡನೇ ಮನೆಯಂತೆ ಭಾಸವಾಗುತ್ತಿದೆ. ಎಲ್ಲಾ ವೈಯುಕ್ತಿಕ ಸಮಸ್ಯೆಗಳನ್ನು ಮರೆತು ಖುಷಿಯಾಗಿ ದುಡಿಯುತ್ತಿದ್ದಾರೆ. ಈಗ ಯಾರೂ ಕೂಡಾ ಅವರನ್ನು ನಿರ್ಲಕ್ಷ್ಯದಿಂದ ಕಾಣುತ್ತಿಲ್ಲ ಎನ್ನುವುದೇ ಅವರಿಗೆ ದೊಡ್ಡ ಸಮಾಧಾನ.

ಇದು ಕೇವಲ ತರಬೇತಿ, ಕೆಲಸ ಅಥವಾ ಆದಾಯ ಕೊಡುವ ಸಂಸ್ಥೆಯಲ್ಲ. ಬದಲಿಗೆ ಪ್ರತಿಯೊಬ್ಬರಿಗೂ ಬದುಕಿನಲ್ಲಿ ಸ್ಥಿರವಾದ ಅಭಿವೃದ್ಧಿ ಕಲ್ಪಿಸುವ ಸಂಸ್ಥೆಯಾಗಿದೆ ಎನ್ನುತ್ತಾರೆ ಶ್ರುತಿ. ಬಡವರಿಗೆ ಆಧಾರ್ ಕಾರ್ಡ್, ಪ್ರಧಾನ ಮಂತ್ರಿ ಜನಧನ್ ಯೋಜನೆಯ ಪ್ರಯೋಜನಗಳನ್ನೂ ಅವರು ಕಲ್ಪಿಸಿಕೊಟ್ಟಿದ್ದಾರೆ. ಈಗ ಇವರ ಜೊತೆಗೆ ಇರುವ ಮಹಿಳೆಯರು ಆರ್ಥಿಕವಾಗಿ ಸ್ವತಂತ್ರವಾಗಿರುವುದರ ಮಹತ್ವ ತಿಳಿದುಕೊಂಡಿದ್ದಾರೆ. ಮಧ್ಯವರ್ತಿಗಳ ಬಲೆಗೆ ಬೀಳದಂತೆ ಆಗಿಂದಾಗ್ಗೆ ಈ ಮಹಿಳೆಯರಿಗೆ ಆಪ್ತ ಸಲಹೆಯನ್ನೂ ಶ್ರುತಿ ನೀಡುತ್ತಿದ್ದಾರೆ.

ರೂಹ್​​ನಲ್ಲಿ ಕೆಲಸ ಮಾಡುತ್ತಿರುವ ರೀನಾ ತುಂಬಾ ನಾಚಿಕೆ ಸ್ವಭಾವದವರಾಗಿದ್ದರು. ಆದರೆ, ಕೆಲಸದ ವಿಚಾರ ಮಾತನಾಡಿದರೆ, ಅವರ ಮಾತಿನಲ್ಲಿ ಆಶಾವಾದ ಕಾಣುತ್ತಿತ್ತು. ಅವರು ಪತಿಯಿಂದ ಹಿಂಸೆಗೆ ಒಳಗಾಗಿ, ಕೊನೆಗೆ ಪತಿಯಿಂದ ಪರಿತ್ಯಕ್ತರಾಗಿ ಬಂದಿದ್ದರು. ತವರಿನಲ್ಲೂ ಆಕೆಯನ್ನು ಹೊರೆಯಾಗಿ ಕಾಣಲಾಯಿತು. ವಿಧಿಯಿಲ್ಲದೆ ಬೀದಿಗೆ ಬಿದ್ದ ರೀನಾ ರೂನ್ ಸೇರಿಕೊಂಡ ಬಳಿಕ ಮಾನಸಿಕ ನೆಮ್ಮದಿ ಪಡೆದಿದ್ದಾಳೆ. ಈಗ ಅವರು ಸುಂದರ ಬದುಕಿನ ಕನಸು ಕಾಣತೊಡಗಿದ್ದಾರೆ. ಮತ್ತೊಂದು ಮದುವೆಯಾಗುವ ಸಿದ್ಧತೆಯಲ್ಲಿದ್ದಾರೆ.

ಇದು ಶ್ರುತಿಯವರು ಕಂಡ ಅತಿ ದೊಡ್ಡ ಕನಸಾಗಿತ್ತು. ಅಬಲೆಯರಿಗೆ ಸ್ವಂತ ಕಾಲಿನ ಮೇಲೆ ನಿಲ್ಲುವ ಶಕ್ತಿ ತುಂಬುವ ಅವರ ಕನಸು ರೂಹ್ ಮೂಲಕ ನನಸಾಗಲಾರಂಭಿಸಿತ್ತು. ಅವರಲ್ಲಿ ಭರವಸೆಗಳನ್ನು ಬಿತ್ತುವ ಮೂಲಕ ಅವರೊಳಗೆ ಅಡಗಿರುವ ಕೌಶಲ್ಯಗಳನ್ನು ಉತ್ಪಾದನೆ ರೂಪದಲ್ಲಿ ಹೊರತಂದರು. ಸಾಂಪ್ರದಾಯಿಕ ತಂತ್ರಗಳನ್ನು ಬಳಸಿ ತಯಾರಿಸಿದ ಉತ್ಪನ್ನಗಳು ಮಾರುಕಟ್ಟೆಯಿಂದ ಮರೆಯಾಗುವ ಹಂತದಲ್ಲಿದ್ದವು. ಈಗ ಅವುಗಳಿಗೂ ಶ್ರುತಿ ಜಾಗ ದೊರಕಿಸಿಕೊಟ್ಟಿದ್ದಾರೆ.

ಆನ್ಲೈನ್ ಮಾರುಕಟ್ಟೆ ಅವರಿಗೆ ಈಗ ಸರಿಯಾದ ವೇದಿಕೆ ಕಲ್ಪಿಸಿಕೊಟ್ಟಿದೆ. ಇತ್ತೀಚೆಗಷ್ಟೇ ಈ-ಬೇಗೆ ಕಾಲಿಟ್ಟಿರುವ ರೂಹ್ ಸರ್ವ್ ಈಗಾಗಲೇ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಆನ್ಲೈನ್ ವೇದಿಕೆಗಳು ಶ್ರುತಿಯಂತಹ ಮಹಿಳೆಯರಿಗೆ ಕೇವಲ 13,000 ರೂಪಾಯಿ ಬಂಡವಾಳದೊಂದಿಗೆ ದೇಶಾದ್ಯಂತ ಮಾರುಕಟ್ಟೆ ಸೃಷ್ಟಿಸಿಕೊಳ್ಳಲು ನೆರವಾಗುತ್ತಿವೆ.

image


ಈಗಾಗಲೇ ಶ್ರುತಿಯವರ ಉದ್ಯಮ ಜನರ ಗಮನ ಸೆಳೆಯುತ್ತಿದೆ. ಈಬೇ ಆಯೋಜಿಸಿದ್ದ ಶೀ ಮೀನ್ಸ್ ಬ್ಯುಸಿನೆಸ್ ಸ್ಪರ್ಧೆಯ 6 ಜನ ವಿಜೇತರಲ್ಲಿ ಶ್ರುತಿ ಕೂಡಾ ಒಬ್ಬರಾಗಿದ್ದಾರೆ.

ನಿಧಾನಕ್ಕೆ ಬೆಳೆಯುತ್ತಿರುವ ತಮ್ಮ ಉದ್ಯಮವನ್ನು ಶ್ರುತಿಯವರು ತಮ್ಮ ಕೂಸಿನಂತೆಯೇ ಕಾಣುತ್ತಿದ್ದಾರೆ. ಇನ್ನೇನು ಮದುವೆಯ ತಯಾರಿಯಲ್ಲಿರುವ ಶ್ರುತಿ, ವೈವಾಹಿಕ ಜೀವನವು ತಮ್ಮ ಉದ್ಯಮಕ್ಕೆ ಅಡ್ಡಿಯಾಗಲ್ಲ ಎನ್ನುವ ನಂಬಿಕೆಯಲ್ಲಿದ್ದಾರೆ. ಮದುವೆಯಾದ ಬಳಿಕ ತಮ್ಮ ಆಯ್ಕೆಗಳೇನಾದರೂ ಬದಲಾಗುತ್ತವೆಯೇ ಎಂದು ಕೇಳಿದರೆ, ಶ್ರುತಿ ಕೊಡುವ ಉತ್ತರ ಕೇಳಿ.. “ಗಂಡಸರಿಗೆ ಯಾರೂ ಇಂತಹ ಪ್ರಶ್ನೆಗಳನ್ನು ಕೇಳುವುದು ಇಲ್ವಲ್ಲಾ”. ಅವರ ಮಾತಿನಲ್ಲಿ ಎಷ್ಟೊಂದು ಅರ್ಥ ಇದ್ಯಲ್ಲಾ?

ಅಂದ ಹಾಗೆ ರೂಹ್ ಎಂದರೆ ಉತ್ಸಾಹ ಎಂದರ್ಥ.

ಲೇಖಕರು: ಶಾರಿಕಾ ನಾಯರ್​​

ಅನುವಾದಕರು: ಪ್ರೀತಮ್​​​