ಕಾಂಕ್ರಿಟ್ ಕಾಡಲ್ಲೊಂದು ಹಳ್ಳಿ ಮದರ್ ಸಾಂಕ್ಚುರಿ !

ಅಗಸ್ತ್ಯ

0

ವೀಡಿಯೋ ಗೇಮ್, ಇಂಟರ್‍ನೆಟ್ ಹಾವಳಿಯಿಂದಾಗಿ ಈಗಿನ ಮಕ್ಕಳಿಗೆ ಮರ ಕೋತಿ, ಕುಂಟೆ ಬಿಲ್ಲೆ, ಲಗೋರಿ, ದೇಸಿ ಆಟಗಳ ಬಗ್ಗೆ ಗೊತ್ತೇ ಇರುವುದಿಲ್ಲ. ಇನ್ನು ಹಳ್ಳಿಯಲ್ಲಿ ಹುಟ್ಟಿ ಬೆಳೆದು ಸಿಟಿ ಸೇರಿಕೊಂಡಿರುವವರಿಗೆ ಬಾಲ್ಯ ಒಂದು ಮಧುರ ನೆನಪಾಗಿರುತ್ತದೆ. ಬಾಲ್ಯ ಎಂದರೆ ಸಾಕು ಮನೆ ಪಕ್ಕದ ತೊರೆಯಲ್ಲಿ ತೇಲಿ ಬಿಟ್ಟ ಕಾಗದದ ದೋಣಿ, ಮಳೆ ಬಂದಾಗ ಬಿದ್ದು ಎದ್ದ ಕೆಸರು ಗದ್ದೆ, ಚಾಕ್ ಪೀಸ್ ಹಿಡ್ಕೊಂಡು ಮನಸ್ಸಿಗೆ ಬಂದ ಚಿತ್ರ ಬಿಡಿಸಿದ ಮಣ್ಣಿನ ಗೋಡೆ, ಆಟಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಪೊದೆಯಿಂದ ಚೆಂಗನೆಹಾರಿ ಹೋದ ಬಿಳಿ ಮೊಲ, ಮೊದಮೊದಲು ಮರ ಕೋತಿ ಆಟಾಡಿದ ಚೆಂದದ ಮರ ಎಲ್ಲವೂ ಹಾಗೆ ನೆನಪಾಗುತ್ತವೆ.

ಆ ನೆನಪೇ ಅಷ್ಟು ಖುಷಿ ಕೊಡುತ್ತಿದೆ ಅಂದರೆ ಆ ಆಟಗಳು ಮತ್ತಿನ್ನೆಷ್ಟು ಖುಷಿಯಾಗಿರಿಸಿರಲಿಕ್ಕಿಲ್ಲ. ಆದರೆ ಅಂಥಾ ಆಟಗಳು ಈ ಸಿಟಿಯಲ್ಲಿ ಹುಟ್ಟಿ ಬೆಳೆದ ಮಕ್ಕಳಿಗೆ ಸಿಗೋದು ಕಷ್ಟವೇ. ಅವರಿಗೆ ಕಾಗದದ ದೋಣಿ ತೇಲಿ ಬಿಡೋಣವೆಂದರೆ ತೊರೆ, ಕೆರೆ ಏನೂ ಇಲ್ಲ. ಮನೆಯ ಬಕೆಟ್‍ನಲ್ಲಿ ನೀರು ತುಂಬಿಸಿ ಬಿಡಬೇಕು, ಇಲ್ಲಾ ರಸ್ತೆ ಗುಂಡಿಯಲ್ಲಿ ತುಂಬುವ ನೀರಿನಲ್ಲಿ ತೇಲಿಸಬೇಕಷ್ಟೇ. ಮಣ್ಣಿನಲ್ಲಿ ಆಟಾಡೋಣವೆಂದರೆ ಈ ಕಾಂಕ್ರಿಟ್ ಕಾಡಿನಲ್ಲಿ ಮಣ್ಣನ್ನು ಎಲ್ಲಿ ಹುಡುಕಿಕೊಂಡು ಹೋಗುವುದು. ಮೊಲ, ಮರಗಳಂತೂ ಕಾಣಲು ಸಾಧ್ಯವೇ ಇಲ್ಲ. ಅಂಥದ್ದರಲ್ಲಿ ಮಕ್ಕಳನ್ನು ಖುಷಿ ಪಡಿಸೋದು ಹೇಗೆ? ಅದಕ್ಕೊಂದು ದಾರಿ ಇದೆ. ಸಿಟಿಯ ಮಕ್ಕಳಿಗೆ ಹಳ್ಳಿ ಆಟಗಳನ್ನಾಡಿ, ಹಳ್ಳಿ ವಾತಾವರಣದ ಸವಿ ಸವಿಯುವಂತೆ ಮಾಡಲು ಸರ್ಜಾಪುರದಲ್ಲಿ ಮದರ್ ಸಾಂಕ್ಚುರಿ ಎಂಬ ತಾಣವೊಂದು ಹುಟ್ಟಿಕೊಂಡಿದೆ.

ಏನಿದು ಮದರ್ ಸಾಂಕ್ಚುರಿ ?

ಬಾಲ್ಯದಲ್ಲಿ ಏನೆಲ್ಲಾ ಮಾಡಬೇಕೆಂದು ನೀವು ಅಂದುಕೊಂಡಿದ್ದಿರೋ ಅದನ್ನು ನಿಮ್ಮ ಮಕ್ಕಳು ಮದರ್ ಸಾಂಕ್ಚುರಿಯಲ್ಲಿ ಮಾಡಬಹುದು. ಇಡೀ ಪರಿಸರ ಹಳ್ಳಿಯ ಚಿತ್ರಣ ಕಟ್ಟಿಕೊಡುತ್ತದೆ. ಕಾಂಕ್ರಿಟ್ ಸಿಟಿಯ ನಡುವೆ ಹಳ್ಳಿಯೊಂದು ದೃಢವಾಗಿ ನಿಂತಿದೆಯೇನೋ ಎಂಬ ಫೀಲ್ ನಿಮ್ಮಲ್ಲಿ ಮೂಡಿಸುತ್ತದೆ. ವಿಶೇಷವಾಗಿ ಮಕ್ಕಳಿಗೆ ಹಳ್ಳಿಯ ವಾತಾವರಣ ಹೇಗಿರುತ್ತದೆ ಎಂಬ ಕಲ್ಪನೆಯನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತದೆ ಮದರ್ ಸಾಕ್ಚುಂರಿ.

ಏನೆಲ್ಲಾ ಇದೆ?

ಮಕ್ಕಳು ಆಟವಾಡಲು ಆಟಿಕೆಗಳು, ಕುರಿ, ಎತ್ತು, ಮೊಲ, ಕೋಳಿಯಂತಹ ಸಾಕು ಪ್ರಾಣಿಗಳ ಹೀಗೆ ಎಲ್ಲವೂ ಇಲ್ಲಿದೆ. ಎಲ್ಲಿ ನೋಡಿದರೂ ಹಸಿರು, ಹಸಿ ಮಣ್ಣಿನ ಪರಿಮಳ, ಅಲ್ಲೊಂದು ಕಡೆ ಸಾಲಾಗಿ ನಿಂತ ಪ್ರಾಣಿಗಳು, ಎತ್ತಿನಗಾಡಿ, ಇಷ್ಟ ಬಂದ ಚಿತ್ರ ಬಿಡಿಸಬಹುದಾದ ಗೋಡೆ, ಮಣ್ಣಿನ ಮಡಕೆ ತಯಾರಿಸುವ ಸ್ಥಳ, ಬಗೆ ಬಗೆ ಆಟಿಕೆಗಳು, ಮರದ ಮೇಲೆ ಅಟ್ಟಣಿಗೆ ಹೀಗೆ ಮಕ್ಕಳು ಬೆರಗಾಗುವ, ಮಕ್ಕಳು ಖುಷಿ ಪಡುವ ಸಾಲು ಸಾಲು ಅಚ್ಚರಿಗಳು ಇಲ್ಲಿವೆ. ಅಷ್ಟೇ ಅಲ್ಲ, ಆಸಕ್ತಿ ಇರೋ ಮಕ್ಕಳಿಗೆ ಮಣ್ಣಿನಲ್ಲಿ ಮೂರ್ತಿ ತಯಾರಿಸುವುದನ್ನು ಹೇಳಿಕೊಡುತ್ತಾರೆ. ಪೇಂಟಿಂಗ್ ಇಷ್ಟ ಇರೋ ಮಕ್ಕಳು ಪೇಂಟಿಂಗ್ ಕಲಿಯಬಹುದು. ಹೀಗೆ ಒಂದಿಡೀ ದಿನವನ್ನು ಸಂತೋಷದಿಂದ ಕಲಿಯಲು ಬೇಕಾದ ಎಲ್ಲವೂ ಇಲ್ಲಿ ಅಡಗಿಕೊಂಡಿವೆ.

ಮಣ್ಣಿನಾಟವೇ ವಿಶೇಷ

ಮದರ್ ಸಾಂಕ್ಚುರಿಯಲ್ಲಿ ಮಕ್ಕಳು ಮಣ್ಣಿನಲ್ಲಿ ಆಟವಾಡುವುದೇ ವಿಶೇಷ. ಮೊದಲು ಮನಸೋ ಇಚ್ಛೆ ಮಣ್ಣಿನಾಟ, ನಂತರ ಬಿಸಿನೀರ ಸ್ನಾನ. ಮಕ್ಕಳಿಗೆ ಮಣ್ಣು ಮತ್ತು ನೀರು ತುಂಬಾ ಖುಷಿ ಕೊಡುತ್ತದೆ. ಹಳ್ಳಿಯಲ್ಲಿ ಕೆಲವು ಮಕ್ಕಳಂತೂ ಮಣ್ಣಿನಲ್ಲೇ ಸ್ನಾನ ಮಾಡಿಕೊಂಡು ಬಂದು ಮನೆಯಲ್ಲಿ ಬೈಸಿಕೊಳ್ಳುತ್ತಾರೆ. ಮದರ್ ಸ್ಯಾಂಕ್ಚುರಿಗೆ ಹೋದರೆ ಸಿಟಿ ಮಕ್ಕಳಿಗೆ ಮಣ್ಣಿನಲ್ಲಿ ಸ್ನಾನ ಮಾಡಬಹುದಾದ ಅವಕಾಶ ಸಿಗುತ್ತದೆ. ಆಮೇಲೆ ಬಿಸಿ ನೀರ ಸ್ನಾನ ಮಾಡಬಹುದು.ಇಲ್ಲಿ ಮಕ್ಕಳ ಜೊತೆ ತಾಯಂದಿರೂ ಆಟದಲ್ಲಿ ಸೇರಿಕೊಳ್ಳುವುದಾದರೆ ಹಗ್ಗಜಗ್ಗಾಟ ಆಡಿ ಸಂತೋಷ ಪಡಬಹುದು. ನಿಮ್ಮ ಮಕ್ಕಳನ್ನು ಮದರ್ ಸಾಂಕ್ಚುರಿಗೆ ಕರೆದುಕೊಂಡು ಹೋಗಬೇಕೆನಿಸಿದರೆ www.mycity4kids.com/Bangalore ಈ ವೆಬ್‍ಸೈಟ್‍ಗೆ ಭೇಟಿ ನೀಡಿ ವಿವರ ಪಡೆದುಕೊಳ್ಳಬಹುದು.

Related Stories