ಚೀನಾದ ಮಹಾಗೋಡೆಯನ್ನು ಭಾರತದ ಉದ್ಯಮಗಳು ಬೇಧಿಸಬಲ್ಲವೇ..?

ಟೀಮ್​ ವೈ.ಎಸ್​.ಕನ್ನಡ

ಚೀನಾದ ಮಹಾಗೋಡೆಯನ್ನು ಭಾರತದ ಉದ್ಯಮಗಳು ಬೇಧಿಸಬಲ್ಲವೇ..?

Sunday March 13, 2016,

5 min Read

ಸೋಫಿಯಾ ಕೊಪ್ಪೊಲಾ ಅವರ `ಲೊಸ್ಟ್ ಇನ್ ಟ್ರಾನ್ಸ್​​ಲೇಶನ್' ನೆನಪಿರಬೇಕಲ್ಲ? ನಟ ಬೊಬ್ ಹ್ಯಾರಿಸ್ ಶೂಟಿಂಗ್‍ಗಾಗಿ ಟೋಕಿಯೋಗೆ ಬಂದಿದ್ರು. ಹೊಸ ಭಾಷೆಯ ಅಲೆಯಲ್ಲಿ ಬೊಬ್ ನಿಜಕ್ಕೂ ಕಳೆದು ಹೋಗಿದ್ರು. ಅನುವಾದಕ ಜಪಾನೀ ಭಾಷೆಯಲ್ಲಿ ಹೇಳ್ತಾ ಇದ್ದಿದ್ರಿಂದ ಜಾಹೀರಾತು ಶೂಟಿಂಗ್‍ನಲ್ಲಿ ಭಾವನೆಗಳನ್ನು ವ್ಯಕ್ತಪಡಿಸಲು ಅಸಫಲರಾಗಿದ್ರು. ಅಪರಿಚಿತ ನಗರ, ಅಲ್ಲಿ ಸ್ನೇಹಿತರಿಲ್ಲ, ಮಾತೃಭಾಷೆ ಬೇರೆ, ವಿಭಿನ್ನ ಸಂಸ್ಕೃತಿಯಿರುವ ಸ್ಥಳಕ್ಕೆ ತೆರಳಿದ ಪ್ರತಿಯೊಬ್ಬರಿಗೂ ಈ ಸಿನೆಮಾ ಅನ್ವಯವಾಗುತ್ತೆ. ಅಂತಹ ಜಾಗದಲ್ಲಿ ಬ್ಯುಸಿನೆಸ್ ಮಾಡಬೇಕಾಗಿ ಬಂದ್ರೆ ಹೇಗಿರುತ್ತೆ? ಏಷ್ಯಾದಲ್ಲಿ ಅಂತಗ ಸ್ಥಳ ಅಂದ್ರೆ ಬಹುಷಃ ಚೀನಾ - ಅತಿ ದೊಡ್ಡ ಆರ್ಥಿಕತೆ ಹೊಂದಿರುವ ಆ ದೇಶಕ್ಕೆ ಎಂಟ್ರಿ ಪಡೆಯೋದು ಬಹುತೇಕ ಎಲ್ಲ ರಾಷ್ಟ್ರಗಳಿಗೂ ಕಠಿಣ. ಚೀನಾ ತನ್ನ ಸೆನ್ಸಾರ್‍ಶಿಪ್ ಹಾಗೂ ಕಟ್ಟುನಿಟ್ಟಿನ ನಿಯಮಗಳಿಂದ ಕುಖ್ಯಾತಿ ಸಂಪಾದಿಸಿದೆ. ಅಮೆರಿಕದ ದೈತ್ಯರಾದ ಫೇಸ್‍ಬುಕ್ ಹಾಗೂ ಗೂಗಲ್ ಅನ್ನೇ ಚೀನಾ ದೂರವಿಟ್ಟಿದೆ.

image


ಮೊಬೈಲ್ ಜಾಹೀರಾತು ವೇದಿಕೆ `ಇನ್‍ಮೊಬಿ'ಯನ್ನು ಬಿಟ್ರೆ ಭಾರತದ ಯಾವ ಸ್ಟಾರ್ಟ್‍ಅಪ್‍ಗಳನ್ನೂ ಚೀನಾ ಹತ್ತಿರಕ್ಕೂ ಸೇರಿಸಿಲ್ಲ. 2015ರ ಆಗಸ್ಟ್​​ನಲ್ಲಿ ಜೋಸ್ಟೆಲ್ ವಿಯೆಟ್ನಾಂಗೆ ತೆರಳಿದೆ, 6 ತಿಂಗಳ ಹಿಂದಷ್ಟೆ ಸಿಂಗಾಪುರದಲ್ಲಿ ಲಾಜಿನೆಕ್ಸ್ಟ್ ಸೇವೆ ಆರಂಭಿಸಲಾಗಿದೆ. ಡಾಕ್ಟರ್ ಅಪಾಯಿಂಟ್‍ಮೆಂಟ್ ವೇದಿಕೆ `ಪ್ರ್ಯಾಕ್ಟೋ' ಕೂಡ ಸಿಂಗಾಪುರ, ಇಂಡೋನೇಷ್ಯಾ, ಮಲೇಷ್ಯಾ ಮತ್ತು ಫಿಲಿಪೈನ್ಸ್​​ನಲ್ಲಿ ಸೇವೆ ನೀಡುತ್ತಿದೆ. ಆದ್ರೆ ವಿದೇಶೀ ಉದ್ಯಮಗಳಿಗೆ ಚೀನಾ ನಿರ್ಮಿಸಿರುವ ತಡೆಗೋಡೆ ಇನ್ನೂ ಬಲವಾಗಿಯೇ ಇದೆ. ಇದನ್ನು ಬೇಧಿಸುವಲ್ಲಿ ಭಾರತೀಯ ಮಾರುಕಟ್ಟೆಗಳು ಯಶಸ್ವಿಯಾಗುತ್ತವೆಯೇ ಅನ್ನೋದು ಸದ್ಯದ ಪ್ರಶ್ನೆ.

ಚೀನಾ ಭಾರತಕ್ಕೆ ಏಕೆ ಮುಖ್ಯ..?

ಚೀನಾ ಭಾರತದ ಅತಿದೊಡ್ಡ ವ್ಯಾಪಾರ ಉತ್ಪಾದಕ. ಆದರೆ ಭಾರತದಿಂದ ಚೀನಾಕ್ಕೆ ರಫ್ತಾಗುವುದು ಕೇವಲ 14.8 ಬಿಲಿಯನ್ ಡಾಲರ್ ಮೊತ್ತದ ವಸ್ತುಗಳಷ್ಟೆ, 2015ರಲ್ಲಿ ಚೀನಾದಿಂದ ಭಾರತಕ್ಕೆ 51 ಬಿಲಿಯನ್ ಡಾಲರ್ ಮೊತ್ತದ ವಸ್ತುಗಳು ರಫ್ತಾಗಿವೆ. ಚೀನಾದ ವಿಸಿ ಸಂಸ್ಥೆಗಳು ಉದ್ಯಮಗಳು ಭಾರತದ ಸ್ಟಾರ್ಟ್‍ಅಪ್‍ಗಳಲ್ಲಿ ಹೂಡಿಕೆ ಮಾಡಲು ಉತ್ಸುಕವಾಗಿವೆ. 2014-15ರಲ್ಲಿ ಚೀನಾ ಭಾರತದಲ್ಲಿ 72 ಬಿಲಿಯನ್ ಡಾಲರ್ ಹೂಡಿಕೆ ಮಾಡಿವೆ. `ಮೇಕ್‍ಮೈಟ್ರಿಪ್'ನಲ್ಲಿ `ಸಿಟ್ರಿಪ್', `ಸ್ನಾಪ್‍ಡೀಲ್'ನಲ್ಲಿ `ಅಲಿಬಾಬಾ' ಮತ್ತು `ಪೇಟಿಎಮ್', `ಓಲಾ'ದಲ್ಲಿ `ದೀದಿ ಕ್ವೈದಿ' ಮತ್ತು `ಪ್ರಾಕ್ಟೋ'ನಲ್ಲಿ `ಟೆನ್ಸೆಂಟ್' ಹೂಡಿಕೆ ಮಾಡಿವೆ. ಇನ್ನಷ್ಟು ಬಂಡವಾಳ ಹರಿದು ಬರ್ತಾ ಇದೆ. ಜೊಮ್ಯಾಟೋನಲ್ಲಿ ಹೂಡಿಕೆ ಮಾಡಲು ಬೈದು ಮುಂದಾಗಿದ್ರೆ, ಬುಕ್ ಮೈ ಶೋ, ಬಿಗ್ ಬಾಸ್ಕೆಟ್, ಚೀತಾ ಮೊಬೈಲ್ ಕೂಡ ಇನ್ನು ಮೂರು ವರ್ಷಗಳಲ್ಲಿ 20 ವಹಿವಾಟುಗಳನ್ನು ನಡೆಸಲು ಯೋಜನೆ ರೂಪಿಸಿವೆ. ಆಫ್‍ಲೈನ್‍ನಿಂದ ಆನ್‍ಲೈನ್‍ಗೆ ಪರಿವರ್ತಿತವಾಗುವಂತೆ ಲೋಕಲ್ ಕಂಟೆಂಟ್‍ಗಳನ್ನು ಒದಗಿಸುವತ್ತ ಗಮನಹರಿಸುವುದಾಗಿ ಚೀತಾ ಮೊಬೈಲ್‍ನ ಅಲೆಕ್ಸ್ ಯಾಹೋ ತಿಳಿಸಿದ್ದಾರೆ.

ಇದನ್ನು ಓದಿ: ಆನ್​ಲೈನ್​ನಲ್ಲಿ ಪೂಜಾ ಸಾಮಗ್ರಿ: ದೇಶ ವಿದೇಶದಲ್ಲೂ ಸತೀಶ್ ಸ್ಟೋರ್ಸ್​ನ ಕಮಾಲ್

ಮೆಕಿನ್ಸೆ&ಕಂಪನಿಯ ವರದಿ ಪ್ರಕಾರ ವೇಗವಾಗಿ ಬೆಳೆಯುತ್ತಿರುವ ಮಧ್ಯಮ ವರ್ಗದವರ ಸಂಖ್ಯೆ ಮುಂದಿನ ದಶಕದಲ್ಲಿ ಚೀನಾ ಗ್ರಾಹಕರ ವೆಚ್ಚವನ್ನು ಹೆಚ್ಚಿಸಲಿದೆ. 2014ರಲ್ಲಿ ನಗರ ಪ್ರದೇಶದಲ್ಲಿ ಮಧ್ಯಮ ವರ್ಗದವರ ವಸತಿ ಶೇ.14ರಷ್ಟಿತ್ತು. 2022ರ ವೇಳೆಗೆ ಈ ಸಂಖ್ಯೆ ಶೇ.54ರಷ್ಟಾಗುವ ನಿರೀಕ್ಷೆಯಿದೆ. ಚೀನಾ ವಿಶ್ವದ ಸ್ಮಾರ್ಟ್​ಫೋನ್ ಬಳಕೆದಾರರ ಅತಿ ದೊಡ್ಡ ನೆಲೆಯಾಗಿದೆ. ಭಾರತದಂತೆ ಚೀನಾ ಕೂಡ ಮೊಬೈಲ್-ಫಸ್ಟ್ ದೇಶ. ಮೊಬೈಲ್ ಫೋಕಸ್ಡ್ ಬ್ಯುಸಿನೆಸ್‍ನಲ್ಲಿ ಚೀನಾ ಭಾರತವನ್ನು ಹಿಂದಿಕ್ಕಿದೆ. ``ಬಳಕೆದಾರರು ಮೊಬೈಲ್‍ನತ್ತ ಹೆಚ್ಚು ಮಾರುಹೋಗುತ್ತಿದ್ದಾರೆ. ದೇಶದಲ್ಲಿ ಮೂಲಸೌಕರ್ಯದ ಪಾವತಿಯನ್ನು ಸಹ ಮೊಬೈಲ್ ವಾಲೆಟ್‍ಗಳೇ ನಿಯಂತ್ರಿಸುತ್ತಿವೆ. ಈ ವಲಯದಲ್ಲಿ ಭಾರತ ಇನ್ನಷ್ಟು ಪ್ರಯತ್ನ ಮಾಡಬೇಕಿದೆ'' ಎನ್ನುತ್ತಾರೆ ಇನ್‍ಮೊಬಿ ಚೀನಾದ ಸೀನಿಯರ್ ವೈಸ್ ಪ್ರೆಸಿಡೆಂಟ್ ಜೆಸ್ಸಿ ಯಾಂಗ್. ಇನ್‍ಮೊಬಿ ಈಗಾಗ್ಲೇ ಚೀನಾದ ಅತಿದೊಡ್ಡ ಮೊಬೈಲ್ ಜಾಹೀರಾತು ವೇದಿಕೆಯಾಗಿದೆ.

ಚೀನಾದಲ್ಲಿ ವಿದೇಶಿ ವ್ಯವಹಾರಗಳಿಗೆ ಅಡಚಣೆ...

ಚೀನಾ ಹೊರಗಿನವರನ್ನು ಸ್ವಾಗತಿಸುವ ರಾಷ್ಟ್ರವಲ್ಲ. ಆ್ಯಪಲ್, ಊಬರ್, ಸ್ಟಾರ್‍ಬಕ್ಸ್ ಬಿಟ್ರೆ ಜಗತ್ತಿನಾದ್ಯಂತ ಯಶಸ್ವಿಯಾದ ಅಮೆರಿಕದ ಉಳಿದ ಯಾವ ಕಂಪನಿಗಳಿಗೆ ಚೀನಾದಲ್ಲಿ ಜಾಗವಿಲ್ಲ. ಆದ್ರೆ ಚೀನಾದಲ್ಲಿ ದೀದಿ ಕ್ವೈದಿ ಪೈಪೋಟಿಯಿಂದ ಊಬರ್ ಪ್ರತಿವರ್ಷ ಒಂದು ಬಿಲಿಯನ್ ಡಾಲರ್ ನಷ್ಟ ಅನುಭವಿಸ್ತಾ ಇದೆ ಅನ್ನೋ ವರದಿ ಇದೆ. ವಿದೇಶಿ ಉದ್ಯಮಗಳ ವಿರುದ್ಧ ಚೀನಾ ಸರ್ಕಾರ ಸಂಕೀರ್ಣ ನಿಯಮಗಳನ್ನು ಅಳವಡಿಸಿದೆ. ಇಡೀ ವಿಶ್ವವನ್ನೇ ಆಳುತ್ತಿರುವ ಗೂಗಲ್ ಕೂಡ ಚೀನಾದಿಂದ ದೂರವಿದೆ. 2010ರಲ್ಲಿ ಸೈಬರ್ ಅಟ್ಯಾಕ್ ಬಳಿಕ ಗೂಗಲ್ ಚೀನಾ ಸಹವಾಸವೇ ಬೇಡ ಎನ್ನುತ್ತಿದೆ. ಇನ್ನು ಚೀನಾದಲ್ಲಿ ವಾಟ್ಸ್​​ಆ್ಯಪ್ ಹಣೆಬರಹ ಕೂಡ ಇದೇ. ಪೈಪೋಟಿದಾರ ಸಂಸ್ಥೆ ವಿ ಚಾಟ್ ಚೀನಾ ಕಾನೂನಿಗೆ ಒಳಪಟ್ಟಿದೆ. ವಾಟ್ಸ್​​ಆ್ಯಪ್ ಗೌಪ್ಯತೆಯ ಪರವಾಗಿದೆ. 2009ರಲ್ಲಿ ಚೀನಾ ಸರ್ಕಾರ ಫೇಸ್‍ಬುಕ್ ಮೇಲೆ ನಿಷೇಧ ಹೇರಿದೆ. ವೃತ್ತಿಪರ ನೆಟ್‍ವರ್ಕಿಂಗ್ ಸೈಟ್ ಲಿಂಕ್‍ಡಿನ್, ಸರ್ಕಾರದ ಬೇಡಿಕೆಗಳಿಗೆ ಮಣಿದು, ಚೀನಾದ ಕಾನೂನಿಗೆ ಅಂಟಿಕೊಂಡಿದೆ.

2013ರಲ್ಲಿ ಮುಂಬೈನಲ್ಲಿ ಲಾಜಿನೆಕ್ಸ್ಟ್ ಅನ್ನು ಲಾಂಚ್ ಮಾಡಿದ ಧ್ರುವಿಲ್ ಸಂಘ್ವಿ ಹಾಗೂ ಮನೀಶಾ ರಾಯ್‍ಸಿಂಘಾನಿ, ಮಾರುಕಟ್ಟೆ ವಿಸ್ತರಿಸಲು ಚೀನಾಕ್ಕೆ ತೆರಳಿದ್ರು. ಆದ್ರೆ ಒಂದೇ ತಿಂಗಳಲ್ಲಿ ಪಾಠ ಕಲಿತ ಅವರು ಚೀನಾ ಮಾರುಕಟ್ಟೆಯನ್ನು ಪ್ರವೇಶಿಸದಿರಲು ನಿರ್ಧರಿಸಿದ್ರು. ಯಾಕಂದ್ರೆ ಅಲ್ಲಿ ಗೂಗಲ್ ಮ್ಯಾಪ್ ಲಭ್ಯವಿರಲಿಲ್ಲ, ಬೈದು ಚೀನಾ ಭಾಷೆಯಲ್ಲಿ ಮಾತ್ರ ಲಭ್ಯವಿತ್ತು. ಅಲ್ಲಿ ಯಾರೊಬ್ಬರಿಗೂ ಇಂಗ್ಲಿಷ್ ಅರ್ಥವಾಗುತ್ತಿರಲಿಲ್ಲ.

ಚೀನಾಗೇಕೆ ವಿಶ್ವದ ಅಗತ್ಯವಿಲ್ಲ..?

ಚೀನಾದಲ್ಲಿ ಇ-ಕಾಮರ್ಸ್ ಪಾಲು ಚಿಲ್ಲರೆ ವ್ಯಾಪಾರದ ಹತ್ತನೆಯ ಒಂದು ಪಾಲಿನಷ್ಟಿದೆ. ಅಲಿಬಾಬಾ, ಅಮೇಝಾನ್ ಅನ್ನು ಹಿಂದಿಕ್ಕಿದೆ. ಫೈನಾನ್ಷಿಯಲ್ ಟೈಮ್ಸ್ ಪ್ರಕಾರ, ವಿ ಚಾಟ್ ತಿಂಗಳಿಗೆ 650 ಮಿಲಿಯನ್ ಬಳಕೆದಾರರನ್ನು ಹೊಂದುತ್ತಿದೆ. ಅಲೆಕ್ಸ್ ಯಾಹೋ ಅವರ ಪ್ರಕಾರ ಚೀನಾದ ಉದ್ಯಮಗಳು ಹೆಚ್ಹೆಚ್ಚು ಸೇವಾ ಆಧಾರಿತವಾಗಿವೆ. ಚೀನಾದಲ್ಲಿ ಆನ್‍ಲೈನ್‍ನಿಂದ ಆಫ್‍ಲೈನ್ ನಾವೀನ್ಯತೆ ಅಮೆರಿಕವನ್ನೂ ಹಿಂದಿಕ್ಕಿದೆ. ತಂತ್ರಜ್ಞಾನ ಸಾಮರ್ಥ್ಯದಲ್ಲಿ ಚೀನಾ ಕೊಂಚ ಹಿಂದಿದ್ರೂ ಕಾರ್ಯಾಚರಣಾ ಸಾಮರ್ಥ್ಯ ಉತ್ತಮವಾಗಿದೆ. ಭಾರತೀಯ ಸ್ಟಾರ್ಟ್‍ಅಪ್ ಪ್ರವೇಶಕ್ಕೆ ಕನ್ಸ್ಯೂಮರ್ ಇಂಟರ್ನೆಟ್ ಬ್ಯುಸಿನೆಸ್ ಸೂಕ್ತವಲ್ಲ ಅನ್ನೋದನ್ನು ಎಲ್ರೂ ಒಪ್ಪಿಕೊಳ್ತಾರೆ. ಇದರಲ್ಲಿ ಚೀನಾದ ಕಂಪನಿಗಳು ಮುಂಚೂಣಿಯಲ್ಲಿವೆ. ಬೀಜಿಂಗ್ ಮೂಲದ ಮೊಬೈಲ್ ಇಂಟರ್ನೆಟ್ ಸಂಸ್ಥೆ ಚೀತಾ ಮೊಬೈಲ್, ಚೀನಾದಿಂದ ಹೊರಗಡೆ ಶೇಕಡಾ 70ರಷ್ಟು ಯೂಸರ್ ಬೇಸನ್ನು ಹೊಂದಿದೆ. ಸಮಂಜಸವಾದ ಕಾರ್ಮಿಕ ಬೆಲೆ, ನಿಧಿ ಸಂಗ್ರಹ ಪರಿಸರ, ಟೆಕ್ ಪ್ರತಿಭೆಗಳ ಉತ್ತಮ ಸರಬರಾಜು ಮತ್ತು ಇತರ ಅಂಶಗಳೇ ಇದಕ್ಕೆಲ್ಲ ಕಾರಣ ಅನ್ನೋದು ಅಲೆಕ್ಸ್ ಯಾಹೋ ಅವರ ಅಭಿಪ್ರಾಯ.

ಚೀನಾ ಬಳಕೆದಾರರ ಹವ್ಯಾಸಗಳು ಭಾರತೀಯರಿಗಿಂತ ವಿಭಿನ್ನವಾಗಿವೆ. ಅದನ್ನೆಲ್ಲ ಸ್ಟಾರ್ಟ್‍ಅಪ್‍ಗಳು ಅರ್ಥಮಾಡಿಕೊಳ್ಳಬೇಕು. ಸ್ಮಾರ್ಟ್​ಫೋನ್ ಉತ್ಪಾದನಾ ಸಂಸ್ಥೆ ವನ್ ಪ್ಲಸ್ ಸಂಸ್ಥಾಪಕ ಹಾಗೂ ಸಿಇಓ ಪೆಟೆ ಲೌ ಅವರ ಪ್ರಕಾರ, ``ಚೀನಾಕ್ಕೆ ಪ್ರವೇಶಿಸುವ ಕಂಪನಿಗಳು ಈಗಾಗ್ಲೇ ಪ್ರಸ್ತುತವಿರುವ ಅನುಭವದ ಬಗ್ಗೆ ಮಾಹಿತಿ ಪಡೆದುಕೊಂಡು ವಿಭಿನ್ನವಾದುದನ್ನು ಒದಗಿಸಬೇಕು''.

image


ವೀಕ್ಷಿಸಿ, ಸ್ಟಾರ್ಟ್‍ಅಪ್..

ಚೀನಾ ಮಾರುಕಟ್ಟೆಯಲ್ಲಿ ಸಾಂಸ್ಕøತಿಕ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳುವುದು ನಿರ್ಣಾಯಕ. ಇನ್‍ಮೊಬಿ ಪ್ರಕಾರ, ಚೀನಾ ಪ್ರಬಲ ನೈತಿಕ ಮತ್ತು ಸಾಂಸ್ಕøತಿಕ ಪರಂಪರೆಯನ್ನು ಹೊಂದಿದೆ. ``ಚೀನಾದಲ್ಲಿ ಸಮಾಜ ಮತ್ತು ವ್ಯಾಪಾರ ಎರಡೂ ಬಲವಾದ ಶ್ರೇಣಿ ಹೊಂದಿವೆ. ಸಂವಹನ ಬಾಟಮ್-ಅಪ್ ಪ್ರಯತ್ನದ ಬದಲು ಟಾಪ್-ಡೌನ್ ಪ್ರಯತ್ನ ಮಾಡಬೇಕು ಎನ್ನುತ್ತಾರೆ ಇನ್‍ಮೊಬಿಯ ಜೆಸ್ಸಿ ಯಾಂಗ್. ಚೀನಾದಲ್ಲಿ ಪ್ರಮಾಣೀಕರಣಕ್ಕೆ ಅರ್ಹ ಸಂಪನ್ಮೂಲ ಮತ್ತು ಬೆಂಬಲ ಇರಲೇಬೇಕು. ಭಾರತೀಯ ಮೂಲದ ಕ್ರೀಡಾ ನಿರ್ವಹಣೆ ಸಂಸ್ಥೆ ಆ್ಯಡೆಡ್ ಸ್ಪೋರ್ಟ್ಸ್​​​ , ಮಲೇಷಿಯಾ, ಸಿಂಗಾಪುರ, ಫಿಲಿಪೈನ್ಸ್ ಹಾಗೂ ಚೀನಾದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಚೀನಾದಲ್ಲಿ ಭಾರತೀಯ ಉದ್ಯಮವನ್ನು ನಡೆಸಲು ವಿಶ್ವಾಸಾರ್ಹ ಚೀನಾ ಪಾಲುದಾರರ ಅವಶ್ಯಕತೆಯಿದೆ. ನಿಮ್ಮ ಐಪಿ ರಕ್ಷಣೆಯ ಜೊತೆಗೆ ಅದು ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತಿದೆ ಅನ್ನೋದು ಖಚಿತವಾಗಬೇಕು. ಚೀನಾ ಗ್ರಾಹಕರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದೇ ಬಹುದೊಡ್ಡ ಸವಾಲು ಎನ್ನುತ್ತಾರೆ ಸಂಸ್ಥಾಪಕ ಅಕ್ಷಯ್ ಮಲಿವಲ್.

ಅತ್ಯುತ್ತಮ ಸ್ಥಳೀಯ ಪ್ರತಿಭೆಗಳನ್ನು ನೇಮಕ ಮಾಡಿಕೊಳ್ಳುವುದೇ ಒಂದು ಚಮತ್ಕಾರ ಅನ್ನೋದು ಇನ್‍ಮೊಬಿ ನಂಬಿಕೆ. ``ಈಗಾಗ್ಲೇ ಚೀನಾದಲ್ಲಿ ಅಸ್ಥಿತ್ವದಲ್ಲಿರುವ ಕಂಪನಿ ಜೊತೆಗೆ ಜಂಟಿಯಾಗಿ ಕಾರ್ಯನಿರ್ವಹಿಸಬೇಕು ಅಥವಾ ಸ್ವತಂತ್ರವಾಗಿ ಸ್ಥಳೀಯ ಪ್ರತಿಭೆಗಳನ್ನು ನೇಮಕ ಮಾಡಿಕೊಳ್ಳಬೇಕು'' ಎನ್ನುತ್ತಾರೆ ಜೆಸ್ಸಿ ಯಾಂಗ್. ಜಾಯಿಂಟ್ ವೆಂಚರ್‍ನಿಂದ ಚೀನಾ ಮಾರುಕಟ್ಟೆಯ ಒಳನೋಟಗಳನ್ನು ತಿಳಿದುಕೊಳ್ಳಬಹುದಾದರೂ ನಿಮ್ಮ ಸ್ವಾತಂತ್ರ್ಯ ಮತ್ತು ನಮ್ಯತೆ ಮೇಲೆ ಅದು ಪರಿಣಾಮ ಬೀರಬಹುದು. ಒಂಟಿಯಾಗಿ ಮುನ್ನಡೆಯುವುದ ಅಂದ್ರೆ ಲೈಸನ್ಸ್​​ಗೆ ಅರ್ಜಿ ಸಲ್ಲಿಸುವುದು ಎಂದರ್ಥ, ಅದು ಸಿಗಲು ಕನಿಷ್ಠ 6 ತಿಂಗಳಾಗಬಹುದು. ``ಚೀನಾದ ಕಂಪನಿಯನ್ನು ಗುರುತಿಸಿ, ಪ್ರಯತ್ನಿಸಿ, ಪಾಲುದಾರಿಕೆ ಮಾಡಿಕೊಳ್ಳಲು ಬಹಳಷ್ಟು ಸಮಯ ಹಿಡಿಯುತ್ತದೆ. ಹಾಗಾಗಿ ಲೈಸನ್ಸ್ ಪಡೆದು ಒಂಟಿಯಾಗಿ ಮುನ್ನಡೆಯುವುದೇ ಸುರಕ್ಷಿತ ಎನಿಸಿತ್ತು'' ಎಂದಿದ್ದಾರೆ ಜೆಸ್ಸಿ ಯಾಂಗ್.

ಐಡಿಜಿ ವೆಂಚರ್ಸ್ ಇಂಡಿಯಾ ಉಪಾಧ್ಯಕ್ಷ ಕಾರ್ತಿಕ್ ಪ್ರಭಾಕರ್ ಅವರ ಪ್ರಕಾರ, ಭಾರತದಲ್ಲಿ ಗ್ರಾಹಕ ಮಾರುಕಟ್ಟೆ ಚೀನಾದಲ್ಲಿ ಹಿಂದೆ ನಡೆದಿದ್ದರ ಪ್ರತಿರೂಪದಂತಿದೆ. ಭಾರತೀಯ ಕಂಪನಿಗಳಲ್ಲಿ ಸ್ಪರ್ಧಾತ್ಮಕತೆ ಕಡಿಮೆ, ಹಾಗಾಗಿ ಉದ್ಯಮ ಪರಿಹಾರ ಒಂದು ಆಯ್ಕೆ. ಸ್ಥಳೀಯ ಗ್ರಾಹಕರ ಬೇಡಿಕೆ ಬಗ್ಗೆ ಸ್ಟಾರ್ಟ್‍ಅಪ್‍ಗಳು ಹೆಚ್ಚು ಗಮನಹರಿಸಬೇಕಿದೆ.

ಭಾರತವೇ ಸಾಕಾ..?

ಪೆಟೆ ಲೌ ಮೊದಲು ಅಮೇಝಾನ್ ಇಂಡಿಯಾ ಸಿಇಓ ಅಮಿತ್ ಅಗರ್ವಾಲ್ ಅವರನ್ನು ಭೇಟಿಯಾದಾಗ ಅವರ ಮಾತುಕತೆಯ ಮೊದಲ ಭಾಗ ಕಂಪನಿಯ ತತ್ವ ಮತ್ತು ಸಂಸ್ಕೃತಿಗೆ ಮೀಸಲಾಗಿತ್ತು. ಜಾಗತಿಕ ಮಟ್ಟದಲ್ಲಿ ಹೆಜ್ಜೆಗುರುತು ಮೂಡಿಸಲು ಯಾವುದೇ ಕಂಪನಿಗೆ ಚೀನಾಗೆ ಪ್ರವೇಶ ಪಡೆಯುವುದು ಅನಿವಾರ್ಯ. ಪೆಟೆ ಲೌ ಅವರ ಅಭಿಪ್ರಾಯ ಸರಿ ಎಂದಾದಲ್ಲಿ ಸ್ಥಳೀಯ ಸಂಸ್ಕೃತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡಲ್ಲಿ ಭಾರತೀಯ ಉದ್ಯಮಗಳು ಚೀನಾ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಬಹುದು. ಭಾರತದ ಮೂಲ ಸೌಕರ್ಯ ಆಧಾರಿತ ಉದ್ಯಮ ಹಾಗೂ ಸಾಸ್ ಆಧಾರಿತ ಪರಿಹಾರಗಳು ಚೀನಾದಲ್ಲಿ ಅಸ್ತಿತ್ವ ಕಂಡುಕೊಳ್ಳಬಹುದು ಅನ್ನೋದು ಕಾರ್ತಿಕ್ ಪ್ರಭಾಕರ್ ಅವರ ವಿಶ್ವಾಸ.

ಭಾರತದಲ್ಲಿ ಪ್ರಗತಿಗೆ ಸಾಕಷ್ಟು ಅವಕಾಶಗಳಿವೆ ಅನ್ನೋದನ್ನು ಮರೆಯುವಂತಿಲ್ಲ. ಉತ್ತಮ ಮೂಲಸೌಕರ್ಯ ಮತ್ತು ಇಂಟರ್ನೆಟ್ ಸೇವೆಯೊಂದಿಗೆ ಇ-ಕಾಮರ್ಸ್ ಮತ್ತು ಸಾರಿಗೆ ಕ್ಷೇತ್ರಗಳು ಅಭಿವೃದ್ಧಿಯತ್ತ ಮುನ್ನಡೆಯುತ್ತಿವೆ. ಯುವ ಕಂಪನಿಗೆ ಭಾರತೀಯ ಮಾರುಕಟ್ಟೆಯನ್ನು ಬೇಧಿಸುವುದು ಸುಲಭದ ಮಾತಲ್ಲ. ಇದನ್ನು ಅಲಿಬಾಬಾ ಸಂಸ್ಥೆ ಕೂಡ ಒಪ್ಪಿಕೊಳ್ಳುತ್ತೆ. ಭಾರತ ಬಳಕೆ ಚಾಲಿತ ಅರ್ಥವ್ಯವಸ್ಥೆಯನ್ನು ಹೊಂದಿದೆ. ಒಟ್ಟು ಬಳಕೆಯ ಪ್ರಮಾಣ ಜಿಡಿಪಿಯ ಶೇ.70ರಷ್ಟಿದೆ. ಅದರಲ್ಲಿ ಶೇ.10ರಷ್ಟು ಆನ್‍ಲೈನ್ ಪಾಲಾಗುತ್ತಿದ್ದು, ಉತ್ತಮ ಅವಕಾಶದ ಬಾಗಿಲು ತೆರೆದಿದೆ. ಉಳಿದ 100 ಮಿಲಿಯನ್ ಜನರನ್ನು ಆನ್‍ಲೈನ್‍ನತ್ತ ಆಕರ್ಷಿಸುವುದು ಮತ್ತು ಬಳಕೆದಾರರಲ್ಲಿ ಡಿಜಿಟಲ್ ಹವ್ಯಾಸ ಬೆಳೆಸುವುದು ಕಂಪನಿಗಳ ಪ್ರಮುಖ ಉದ್ದೇಶ. ಸ್ಥಳೀಯ ಮಾರುಕಟ್ಟೆಯನ್ನು ವಶಪಡಿಸಿಕೊಂಡ್ರೆ, ಯಶಸ್ವಿ ಮಾರುಕಟ್ಟೆಗೆ ನುಗ್ಗುವುದು ಸುಲಭ.

ಆದ್ರೆ ಭವಿಷ್ಯದಲ್ಲಿ ಪರಿಸ್ಥಿತಿ ಬದಲಾಗಬಹುದು. 2015ರಲ್ಲಿ ಭಾರತ ಮತ್ತು ಚೀನಾದ ಜಿಡಿಪಿ ದರ ಒಂದೇ ತೆರನಾಗಿದೆ, 6.9 ರಷ್ಟು. ಭಾರತದ ಪಾಲಿಗಿತ್ತು ಒಳ್ಳೆಯ ಸಂಖ್ಯೆ, ಆದ್ರೆ ಚೀನಾಕ್ಕೆ 25 ವರ್ಷಗಳಲ್ಲೇ ಅತ್ಯಂತ ಕಡಿಮೆ. ಶೀಘ್ರದಲ್ಲೇ ಹೊಸ ಹೊಸ ಐಡಿಯಾಗಳು ಮತ್ತು ಉತ್ತಮ ತಂತ್ರಜ್ಞಾನಕ್ಕಾಗಿ ಚೀನಾ ಎಲ್ಲಾ ರಾಷ್ಟ್ರಗಳಿಗೂ ಅವಕಾಶದ ಬಾಗಿಲು ತೆರೆದರೂ ಅಚ್ಚರಿಯಿಲ್ಲ. ಲಿಂಕ್‍ಡೆನ್ ಯಶಸ್ಸೇ ಇದಕ್ಕೆ ಸಾಕ್ಷಿ. ಚೀನಾದ 1.7 ಬಿಲಿಯನ್ ಜನತೆಗೆ ಇದುವರೆಗೂ ಸಿಗದೇ ಇರುವುದನ್ನೇನಾದ್ರೂ ನೀಡಬೇಕು ಎಂಬ ಪಾಠ ಇದು.

ಲೇಖಕರು: ಅಥಿರಾ ಎ.ನಾಯರ್ & ತಾರುಶ್ ಭಲ್ಲಾ

ಅನುವಾದಕರು: ಭಾರತಿ ಭಟ್ 

ಇದನ್ನು ಓದಿ

1. 14ರ ಹರೆಯದಲ್ಲೇ ವಿಮಾನ ತಯಾರಿಸುವ ಸಾಹಸದಲ್ಲಿ ಜೂನಿಯರ್ ಐನ್ ಸ್ಟೀನ್...!

2. ಬೆಂಗಳೂರಿಗೆ ಕಾಲಿಡುತ್ತಿದೆ ಗರ್ಭಕೋಶ ಕಸಿ..

3. ಕಾಡಿನ ಗುಹೆಯೊಳಗೆ ಡಿನ್ನರ್ ಪಾರ್ಟಿ...