ಪಾಕಶಾಲೆಯ ರಾಣಿ ಶುಭಾಂಗಿ ಧೈಮಡೆ

ಟೀಮ್​​ ವೈ.ಎಸ್​​.

0

ನಿಮಗೆ ಡಯಟ್ ಮಾಡೋದು ತುಂಬಾ ಕಷ್ಟ ಆಗ್ತಿದ್ಯಾ? ಹೊರಗೆ ವಾಯುವಿಹಾರಕ್ಕೆ ಹೊರಟಾಗ ದಾರಿಯಲ್ಲಿ ತಿಂಡಿ, ತಿನಿಸುಗಳ ಹೋರ್ಡಿಂಗ್ ನೋಡಿ ಬಾಯಲ್ಲಿ ನೀರೂರುತ್ತಾ? ಟಿವಿಯಲ್ಲಿ ರುಚಿ-ರುಚಿಯಾದ ತಿಂಡಿಗಳ ಜಾಹೀರಾತು ನೋಡಿದ್ರೂ ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳೋದು ಕಷ್ಟವಾಗುತ್ತಾ? ನೀವು ಸೇವಿಸುವ ಆಹಾರವನ್ನು ಜಾಹೀರಾತುಗಳಲ್ಲಿ ಅದ್ಭುತವಾಗಿ ಕಾಣುವಂತೆ, ಅಷ್ಟೇ ಚೆನ್ನಾಗಿ ರುಚಿಸುವಂತೆ ಮಾಡುವ ಆ ಅಪರಾಧಿಯನ್ನು ನಾವು ಕಂಡುಹಿಡಿದಿದ್ದೀವಿ. ಹೌದು, ಅವರೇ ಅಂತಾರಾಷ್ಟ್ರೀಯ ಮಟ್ಟದ ಐವರು ಭಾರತೀಯ ಫುಡ್ ಸ್ಟೈಲಿಸ್ಟ್‍ಗಳಲ್ಲಿ ಒಬ್ಬರಾದ ಶುಭಾಂಗಿ ಧೈಮಡೆ.

ನೀವು ನಿಮ್ಮ ಜೀವನದಲ್ಲಿ ನೋಡಿರುವ ಅಥವಾ ಇದುವರೆಗೂ ನೋಡಿರದ ಅತ್ಯಂತ ಆಸಕ್ತಿದಾಯಕ ವೃತ್ತಿ ಇವರದು. ಹೌದು, ಆಹಾರವನ್ನು ಅಂದವಾಗಿ ಕಾಣುವಂತೆ ಮಾಡಲು ಕೈತುಂಬಾ ಹಣ ಪಡಿತಾರೆ ಶುಭಾಂಗಿ. ಅದು ತಿಂಡಿ-ತಿನಿಸುಗಳ ಪ್ಯಾಕೇಜಿಂಗ್ ಆಗಿರಬಹುದು ಅಥವಾ, ಆಹಾರ ಬ್ರಾಂಡ್ ಒಂದರ ಜಾಹೀರಾತೇ ಆಗಿರಬಹುದು, ಸಿನಿಮಾಗಳಿಗೇ ಇರಬಹುದು ಅಥವಾ ಟಿವಿ ಕಾರ್ಯಕ್ರಮಗಳಿಗೆ ಆಗಿರಬಹುದು. ಕೈಚಳಕ ತೋರಿಸಿ, ಕೈತುಂಬಾ ಹಣ ಪಡಿತಾರೆ ಇವರು. ಅರ್ಧಂಬರ್ಧ ಕರಗಿದ ಚಾಕ್‍ಲೇಟ್‍ಅನ್ನು ತಿನ್ನಲು ಸುಂದರ ಮಾಡೆಲ್ ಒಬ್ಬಳ ತುಟಿ ಸಮೀಪಕ್ಕೆ ತೆಗೆದುಕೊಂಡು ಹೋಗುತ್ತಿರುವ ವೀಡಿಯೋ ನೋಡುತ್ತಾ, ಯಾವಾಗ ಆ ಚಾಕ್‍ಲೇಟ್ ಆಕೆಯ ತುಟಿಗೆ ತಾಕುತ್ತೋ ಅಂತ ಕಾತುರದಿಂದ ಕಾಯುತ್ತಿರುತ್ತೇವೆ. ಆದ್ರೆ ಅಂತಹ ಒಂದು ಅದ್ಭುತ ದೃಶ್ಯಾವಳಿಯನ್ನು ತೆರೆಗೆ ತರಲು ಫುಡ್ ಸ್ಟೈಲಿಸ್ಟ್ ಒಬ್ಬರು ತಾಸುಗಟ್ಟಲೆ ಶ್ರಮವಹಿಸಿರುತ್ತಾರೆ. ಅದ್ಭುತ ವೀಡಿಯೋ ಸೃಷ್ಟಿಸಲು ಅವರು ಚಾಕ್‍ಲೇಟ್ ವಿನ್ಯಾಸ, ಚಾಕ್‍ಲೇಟ್ ಮತ್ತು ತುಟಿ ನಡುವಿನ ಅಂತರ, ಕ್ಯಾಮರಾ ಆ್ಯಂಗಲ್, ದೃಶ್ಯಾವಳಿ ಸೆರೆಹಿಡಿಯಲು ಬೇಕಾದ ಬೆಳಕು ಸೇರಿದಂತೆ ಇನ್ನೂ ನಾನಾ ರೀತಿಯ ಸಿದ್ಧತೆಗಳನ್ನು ಸರಿಯಾಗಿ ಮಾಡಿಕೊಂಡಿರಬೇಕು.

ಶುಭಾಂಗಿ ನಡೆದು ಬಂದ ಹಾದಿ

23 ವರ್ಷಗಳ ಹಿಂದೆ ಶುಭಾಂಗಿ ಜಪಾನ್ ಮೂಲದ ಎಂಜಿನಿಯರಿಂಗ್ ಕಂಪನಿಯೊಂದರಲ್ಲಿ ದೊಡ್ಡ ರಾಸಾಯನಿಕ ಸಾಗಾಣಿಕೆಗಳ ಮೌಲ್ಯಮಾಪನದ ಕೆಲಸ ಮಾಡುತ್ತಿದ್ದರು. ಮದುವೆಯಾಗಿ, ಗರ್ಭಿಣಿಯಾದ ಕಾರಣ ಕೆಲಸಕ್ಕೆ ಗುಡ್‍ಬೈ ಹೇಳಿದರು. ಅವರು ಮುದ್ದಾದ ಗಂಡುಮಗು ಶಾರಂಗ್‍ಗೆ ಜನ್ಮ ನೀಡಿದರು. ಹೀಗೆ ಸುಮಾರು 5 ವರ್ಷಗಳ ಕಾಲ ಗಂಡ, ಮಗ, ಮನೆ ಅಂತ ಹೊರಗೆ ಬರಲಿಲ್ಲ. ‘ಆದ್ರೆ ಕ್ರಮೇಣ ನನಗೆ ಏನನ್ನಾದರೂ ಮಾಡಬೇಕು ಅಂತನ್ನಿಸತೊಡಗಿತು. ಮತ್ತೆ ತನ್ನ ಕಾಲ ಮೇಲೆ ತಾನು ನಿಲ್ಲಬೇಕು ಅನ್ನೋ ಆಸೆ ಉಂಟಾಯ್ತು. ಆದ್ರೆ ಹಿಂದಿನ ಕೆಲಸಕ್ಕೆ ಹೋಗುವ ಮನಸ್ಸಿರಲಿಲ್ಲ. ಹೀಗಾಗಿಯೇ ಬೇರೆ ಅವಕಾಶಗಳ ಕುರಿತು ಯೋಚನೆ ಮಾಡತೊಡಗಿದೆ. ಅದರಲ್ಲಿ ಅಡುಗೆ ಮಾಡುವ ಕೆಲಸ ನನಗೆ ಇಷ್ಟವಾಯ್ತು. ಹೇಗಿದ್ದರೂ ಕಾಲೇಜು ದಿನಗಳಲ್ಲಿ ಆಹಾರ ಸರಬರಾಜು ಮಾಡುವ ಕೋರ್ಸ್​ ಒಂದನ್ನು ಮಾಡಿದ್ದೆ. ಜಾಹೀರಾತು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಪತಿ ಕೂಡ ಇದು ಒಳ್ಳೆ ಆಯ್ಕೆ ಎಂದರು. ಹೀಗಾಗಿ ನಾನೂ ಅಡುಗೆಯನ್ನೇ ನನ್ನ ಹೊಸ ವೃತ್ತಿಯನ್ನಾಗಿಸಿಕೊಳ್ಳಲು ತೀರ್ಮಾನಿಸಿದೆ. ಹಾಗೇನಾದ್ರೂ ಕೆಲಸ ಮಾಡಲಾಗದಿದ್ರೆ, ಹೇಗಿದ್ರೂ ಮನೆ ಕೆಲಸ ಮಾಡಿಕೊಂಡಿರಬಹುದು ಅಲ್ವಾ’ ಅಂತ ವೃತ್ತಿ ಜೀವನದ ಎರಡನೇ ಇನ್ನಿಂಗ್ಸ್​​ಗೆ ಮತ್ತೆ ಎದ್ದು ನಿಂತರು ಶುಭಾಂಗಿ.

ಕೆಲ ಕಾರ್ಯ ಯೋಜನೆಗಳು ಪೂರ್ಣಗೊಳ್ಳುತ್ತಲೇ, ಅವರಿಗೆ ಇದೇ ನನಗೆ ಸರಿಯಾಗಿ ಹೊಂದುವ ಕೆಲಸ ಅನ್ನೋ ಅರಿವಾಯ್ತು. ಅದು 1997ರ ವರ್ಷವಾದ್ದರಿಂದ ಆಹಾರ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪ್ರಸ್ತುತ ಪಡಿಸಲು ಹಾಗೂ ಪ್ಯಾಕೇಜ್ ಮಾಡಲು ಸ್ಟೈಲಿಸ್ಟ್​​​ಗಳ ಅಗತ್ಯ ಇಲ್ಲ ಎಂದುಕೊಂಡಿದ್ದವು. ‘ಆಗಿನ್ನೂ ಇಂಟರ್‍ನೆಟ್ ವ್ಯವಸ್ಥೆ ಕೂಡ ಸರಿಯಾಗಿ ಇರಲಿಲ್ಲ. ಹೀಗಾಗಿಯೇ ನನ್ನ ಬಗ್ಗೆ ಅಷ್ಟಾಗಿ ಯಾರಿಗೂ ಗೊತ್ತೂ ಇರಲಿಲ್ಲ. ಕೆಲಸವೂ ತುಂಬಾ ಅಪರೂಪವಾಗಿತ್ತು. ತಿಂಗಳಿಗೆ 2, 3 ಆರ್ಡರ್‍ಗಳು ಬಂದ್ರೂ ಅದೃಷ್ಟ ಎನ್ನುವಂತಿತ್ತು’ ಅಂತ ನೆನಪಿಸಿಕೊಳ್ತಾರೆ ಶುಭಾಂಗಿ.

ಹಾಗಿದ್ದರೂ ದಿನಕ್ರಮೇಣ ಆಹಾರ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಿತು. ಆ ಮೂಲಕ ಆಹಾರ ವಿನ್ಯಾಸಗಾರರಿಗೂ ಬೇಡಿಕೆ ಹೆಚ್ಚಾಯಿತು. ‘ಈಗ ತಿಂಗಳಲ್ಲಿ 2, 3 ದಿನ ಕೆಲಸವಿಲ್ಲದೆ ಇದ್ದರೆ ಅದೇ ಹೆಚ್ಚು, ಅಷ್ಟೊಂದು ಕೆಲಸ’ ಅಂತ ನಗುತ್ತಲೇ ನಿಟ್ಟುಸಿರು ಬಿಡ್ತಾರೆ ಶುಭಾಂಗಿ.

ಬೇಡಿಕೆ ಹೆಚ್ಚಾದರೂ, ಪೂರೈಕೆ ಬೆರಳೆಣಿಕೆಯಷ್ಟು ಮಾತ್ರ

ಹೀಗೆ ಆಹಾರ ವಿನ್ಯಾಸಗಾರರಿಗೆ ಹಠಾತ್ ಬೇಡಿಕೆ ಹೆಚ್ಚಾಯ್ತು. ಆದ್ರೆ ಫುಡ್ ಸ್ಟೈಲಿಸ್ಟ್​​​ಗಳ ಸಂಖ್ಯೆ ಮಾತ್ರ ಏರಿಕೆಯಾಗಲೇ ಇಲ್ಲ. ಅದರ ಫಲಿತಾಂಶವೇ ಕಳೆದ 18 ವರ್ಷಗಳಲ್ಲಿ ಹೊರಹೊಮ್ಮಿದ ಕೇವಲ 5 ಮಂದಿ ಆಹಾರ ವಿನ್ಯಾಸಗಾರರು. ಸದ್ಯ ಅವರೇ ಈ ವಿಶಾಲ ಉದ್ಯಮದಲ್ಲಿ ರಾಜ್ಯಭಾರ ನಡೆಸುತ್ತಿದ್ದಾರೆ. ‘ಈಗ ಆಹಾರ ಉತ್ಪಾದನಾ ಸಂಸ್ಥೆಗಳ ಅವಶ್ಯಕತೆಗಳು ಬದಲಾಗಿವೆ, ಅರ್ಥಾತ್ ಹೆಚ್ಚಾಗಿದೆ. ನಮಗೆಲ್ಲರಿಗೂ ಕೈತುಂಬಾ ಕೆಲಸಗಳಿವೆ. ಅದರಲ್ಲೂ ಇಂಟರ್‍ನೆಟ್ ಸಹಾಯದಿಂದ ನಾವೀಗ ಜಾಗತಿಕ ಸಮುದಾಯದ ಸದಸ್ಯರಾಗಿದ್ದೇವೆ. ಹೀಗಾಗಿಯೇ ನಾವು ಕೇವಲ ಭಾರತೀಯ ಕಂಪನಿಗಳ ಮೇಲೆ ಅವಲಂಬಿತರಾಗಿಲ್ಲ’ ಅಂತ ಯಶಸ್ಸಿನ ಕುರಿತು ಹೇಳಿಕೊಳ್ತಾರೆ ಶುಭಾಂಗಿ.

ಕಲೆ

ಈ ಉದ್ಯಮವನ್ನು ಸಂಘಟಿತವಾಗಿ, ವ್ಯವಸ್ಥಿತವಾಗಿ ಮಾಡಿದರೆ, ಉತ್ತಮ ಫಲಿತಾಂಶ ಸಿಗುತ್ತಾ? ಅನ್ನೋ ಪ್ರಶ್ನೆ ನಿಮ್ಮನ್ನು ಕಾಡಬಹುದು. ಆದ್ರೆ ಈ ವಲಯದಲ್ಲಿ ಇನ್ನೂ ಅಂತಹ ಹೇಳಿಕೊಳ್ಳುವಂತಹಾ ಸ್ಪರ್ಧೆಯಿಲ್ಲ. ಅದಕ್ಕೂ ಹೆಚ್ಚಾಗಿ ಇದೊಂದು ಕಲೆಯಾದ್ದರಿಂದ ಸ್ವತಂತ್ರ್ಯ ವೃತ್ತಿಪರರಷ್ಟೇ ಇದನ್ನು ಅಭ್ಯಾಸ ಮಾಡ್ತಾರೆ. ನಿಮ್ಮಲ್ಲಿ ಕಲೆಯಿದ್ದರೆ ಹಾಗೂ ಅದನ್ನು ಕಲಿಯುವ ಆಸಕ್ತಿಯಿದ್ರೆ, ಈ ವಲಯದಲ್ಲಿ ಬೆಳೆಯಬಹುದು’ ಅನ್ನೋದು ಶುಭಾಂಗಿ ಅಭಿಮತ. ಆಹಾರ ವಿನ್ಯಾಸ ಕಲೆಯ ಒಂದು ವಿಧ ಅನ್ನೋದಾದ್ರೆ, ಶುಭಾಂಗಿಯವರ ಅತ್ಯುತ್ತಮ ಮೇರುಕೃತಿ ಯಾವುದು ಅನ್ನೋ ಕುತೂಹಲ ನಿಮ್ಮಲ್ಲಿ ಮೂಡಬಹುದು. ಆದ್ರೆ ಅವರ ಬಗ್ಗೆ ಗೊತ್ತಿಲ್ಲದೆಯೇ, ಶುಭಾಂಗಿಯವರ ಕೆಲಸದ ಬಗ್ಗೆ ಈಗಾಗಲೇ ನೀವು ಅಭಿಮಾನಿಗಳಾಗಿದ್ದೀರಿ. ಅದಕ್ಕೆ 2008ರ ಬಾಲಿವುಡ್ ಚಿತ್ರ ‘ಜೋಧಾ ಅಕ್ಬರ್’ ಒಂದು ಉತ್ತಮ ನಿದರ್ಶನ. ಮಾರ್ವಾಡಿ ಖಾದ್ಯಗಳನ್ನು ನಾಯಕಿ ಐಶ್ವರ್ಯಾ ರೈ, ನಾಯಕ ಹೃತಿಕ್ ರೋಷನ್ ಮುಂದೆ ತಂದಿಡ್ತಾಳೆ, ಆ ಆಹಾರ ವಿನ್ಯಾಸವನ್ನು ಮಾಡಿರೋದು ಇನ್ಯಾರೂ ಅಲ್ಲ, ಬದಲಿಗೆ ಇದೇ ಶುಭಾಂಗಿ ಧೈಮಡೆ. ‘ಈ ಸಿನಿಮಾದಲ್ಲಿ ಕೆಲಸ ಮಾಡಿದ್ದು ನನಗೆ ತುಂಬಾ ಸವಾಲಾಗಿ ಪರಿಣಮಿಸಿತ್ತು. ಖಾದ್ಯಗಳ ಕುರಿತು ಹಾಗೂ ಅದನ್ನು ಪ್ರಸ್ತುತಪಡಿಸಲು ಸಾಕಷ್ಟು ಸಂಶೋಧನೆ ಮಾಡಬೇಕಾಯ್ತ್ತು. ಆದ್ರೆ ನನ್ನ ಅದೃಷ್ಟವೋ ಎಂಬಂತೆ ನಾನು ಹೆಚ್ಚಾಗಿ ಇಂತಹ ವಿಭಿನ್ನ ಹಾಗೂ ವಿನೂತನ ಪರಿಕಲ್ಪನೆಗಳತ್ತ ಸೆಳೆತಕ್ಕೊಳಗಾಗುತ್ತೇನೆ’ ಅಂತಾರೆ ಶುಭಾಂಗಿ.

ಬೇರೆ ಕೆಲಸಗಳಿಗಿಂತ ಈ ಕೆಲಸವೇ ಉತ್ತಮ

ಆಹಾರ ವಿನ್ಯಾಸ ವಲಯದಲ್ಲಿ ಉತ್ತುಂಗಕ್ಕೇರಿದ್ದರೂ, ಕೈತುಂಬಾ ಕೆಲಸವಿದ್ದು, ಬ್ಯುಸಿಯಿದ್ದರೂ ಸಹ ಶುಭಾಂಗಿ ತಮ್ಮ ಮನೆಗೆ ಇಂತಿಷ್ಟು ಸಮಯ ಅಂತ ಮೀಸಲಿಡ್ತಾರೆ. ವಿಶೇಷ ಅಂದ್ರೆ ‘ಸ್ವತಂತ್ರ್ಯ ಉದ್ಯೋಗಿಯಾದ ಕಾರಣ ನನಗಿಷ್ಟವಾದ ಕೆಲಸವನ್ನು ನಾನು ಒಪ್ಪಿಕೊಳ್ತೀನಿ. ಇಷ್ಟವಾಗದಿದ್ರೆ ಇಲ್ಲ ಅಂದುಬಿಡ್ತೀನಿ’ ಅಂತಾರೆ ಅವರು. ಅವರಿಗಿಲ್ಲಿ ಇದುವರೆಗೂ ಲಿಂಗ ತಾರತಮ್ಯ ಅಥವಾ ಬೇರಾವ ರೀತಿಯ ಸಮಸ್ಯೆಯೂ ಎದುರಾಗಿಲ್ಲ. ದೇಶ, ವಿದೇಶಗಳನ್ನು ಸುತ್ತಿಕೊಂಡು ನೂರಾರು ಜಾಹೀರಾತುಗಳು, ವೀಡಿಯೋಗಳು ಹಾಗೂ ಕಾರ್ಯಕ್ರಮಗಳಲ್ಲಿ ಫುಡ್ ಡಿಸೈನ್ ಮಾಡಿ ಬಂದಿರುವ ಶುಭಾಂಗಿ ಅವರಿಗೆ ಮನೆಯಲ್ಲೂ ಉತ್ತಮ ಬೆಂಬಲವಿದೆ.

ಇಲ್ಲಿನ ಊಟ, ತಿಂಡಿ ಹಾಗೂ ವಿವಿಧ ಖಾದ್ಯಗಳ ಬಗ್ಗೆ ಭಾರತೀಯರೇ ಕಡೆಗಣಿಸುತ್ತಿರುವ ಕಾರಣ ಇನ್ನೂ ಈ ವೃತ್ತಿ ಭಾರತದಲ್ಲಿ ಮುಖ್ಯವಾಹಿನಿಗೆ ಬಂದಿಲ್ಲ. ‘ನಾವು ನಮ್ಮ ಸ್ಥಳೀಯ ತಿಂಡಿ- ತಿನಿಸುಗಳಿಗೇ ಕಿಮ್ಮತ್ತು ನೀಡಲ್ಲ. ಮೆಕ್‍ಡೊನಾಲ್ಡ್ಸ್ ಅಥವಾ ಡಾಮಿನೋಸ್ ಮಂದಿ ಹುಚ್ಚರಂತೆ ಜಾಹೀರಾತುಗಳನ್ನು ನೀಡ್ತಾರೆ. ಆದ್ರೆ ಸ್ಥಳೀಯ ಕಂಪನಿಗಳು ಪ್ರಚಾರದ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಹೀಗಾಗಿಯೇ ಆ ವಿದೇಶೀ ಕಂಪನಿಗಳಂತೆ ಹೇಳಿಕೊಳ್ಳುವಂತಾ ಕಂಪನಿಗಳು ಇಲ್ಲಿಲ್ಲ. ನಾವು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತೀವೆಯೇ ಹೊರತು ಗೌರವಿಸುತ್ತಿಲ್ಲ. ಇಲ್ಲಿನ ಕಂಪನಿಗಳು ಆಹಾರ ವಿನ್ಯಾಸ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ತೊಡಗಿಸಿಕೊಳ್ಳದಿದ್ದರೆ, ಮುಂದೆಯೂ ಪಾಶ್ಚಿಮಾತ್ಯ ರಾಷ್ಟ್ರಗಳೇ ಮೊದಲಿಗರಾಗಿ ಮುಂದುವರಿಯುತ್ತಾರಷ್ಟೇ...’ ಹೀಗೆ ಹೇಳಿ ತಮ್ಮ ಮಾತು ಮುಗಿಸುತ್ತಾರೆ ಶುಭಾಂಗಿ.