ಹಳೆ ವಿದ್ಯಾರ್ಥಿಗಳ ಹೊಸ ಸಾಧನೆ- ಖರ್ಚು-ವೆಚ್ಚದ ಪಕ್ಕಾ ಲೆಕ್ಕಕ್ಕೆ ಬಂದಿದೆ ಆ್ಯಪ್

ಟೀಮ್​​ ವೈ.ಎಸ್​​. ಕನ್ನಡ

ಹಳೆ ವಿದ್ಯಾರ್ಥಿಗಳ ಹೊಸ ಸಾಧನೆ- ಖರ್ಚು-ವೆಚ್ಚದ ಪಕ್ಕಾ ಲೆಕ್ಕಕ್ಕೆ ಬಂದಿದೆ ಆ್ಯಪ್

Monday November 30, 2015,

3 min Read

ವೈಯಕ್ತಿಕ ಬದುಕು ಮತ್ತು ಉದ್ಯಮದ ಹಣಕಾಸು ಸ್ಥಿತಿ ಬಗ್ಗೆ ಸ್ಪಷ್ಟ ಚಿತ್ರಣ ಹೊಂದಿರುವುದು ಅತ್ಯಗತ್ಯ. ಬಹುತೇಕ ಎಲ್ಲರೂ ಕಾಲ ಮಿಂಚಿ ಹೋಗುವವರೆಗೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸಾಮಾನ್ಯವಾಗಿ ತಿಂಗಳ ಕೊನೆಯಲ್ಲಿ ಖರ್ಚು-ವೆಚ್ಚಗಳನ್ನು ಲೆಕ್ಕ ಹಾಕುತ್ತೇವೆ. ಹಲವರಿಗೆ ತಾವು ಎಲ್ಲೆಲ್ಲಿ ಹಣವನ್ನು ಖರ್ಚು ಮಾಡಿದ್ದೇವೆ ಅನ್ನೋದೆ ಗೊತ್ತಿರೋದಿಲ್ಲ. ಬಾಕಿ ಇರುವ ಬಿಲ್ ಪಾವತಿ ಸಂದರ್ಭದಲ್ಲಿ ಗೊಂದಲ ಶುರುವಾಗಿರುತ್ತೆ. ಇಂತಹ ಸಂದರ್ಭಗಳಲ್ಲಿ ಪರ್ಸನಲ್ ಫೈನಾನ್ಸ್ ಆ್ಯಪ್‍ಗಳು ಪ್ರಯೋಜನಕಾರಿಯಾಗಿದ್ದರೂ ಸ್ನೇಹಿತರ ಜೊತೆ ಹಂಚಿಕೊಂಡಿರುವ ಖರ್ಚನ್ನು ಲೆಕ್ಕ ಇಡುವುದು ಕಷ್ಟ. ಐಬಿಎಸ್ ಹೈದ್ರಾಬಾದ್ ಹಾಗೂ ಮಣಿಪಾಲದ ಟ್ಯಾಪ್‍ಮಿಯ ಹಳೆ ವಿದ್ಯಾರ್ಥಿಗಳಿಬ್ರು ಜೊತೆಯಾಗಿ `ನೋ-ಡ್ಯೂಸ್' ಎಂಬ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿದ್ದಾರೆ. ಸ್ನೇಹ ಹಾಗೂ ಹಣ ಎರಡನ್ನೂ ಉಳಿಸುವ ಉದ್ದೇಶ ಅವರದ್ದು.

image


`ನೋ-ಡ್ಯೂಸ್' ಎಂದರೇನು..?

ಇದೊಂದು ಸ್ಮಾರ್ಟ್‍ಫೋನ್ ಅಪ್ಲಿಕೇಷನ್. ಸ್ನೇಹಿತರು ಮತ್ತು ಪ್ರೀತಿಪಾತ್ರರ ಮಧ್ಯೆ ಹಂಚಿಹೋದ ಹಣದ ಲೆಕ್ಕ ಇಡಲು ಇದು ಸಹಾಯ ಮಾಡುತ್ತೆ. ಬಾಕಿ ಇರುವ ಹಣವನ್ನು ನೆನಪಿನಲ್ಲಿಟ್ಟುಕೊಳ್ಳುವ ಜೊತೆಗೆ ಯಾವ ಸಮಯದಲ್ಲಾದ್ರೂ ಅದನ್ನು ಪಾವತಿ ಮಾಡಲು ಅನುಕೂಲವಾಗುತ್ತೆ. `ಶೇರ್ಡ್ ಎಕ್ಸ್​​​ಪೆನ್ಸಸ್ ಬಡ್ಡಿ' ಅನ್ನೋ ಹೆಸರಲ್ಲಿ ಇದನ್ನು ಆರಂಭಿಸಲಾಗಿದೆ. ಹಂಚಿಕೆಯ ವೆಚ್ಚಗಳನ್ನು ದಾಖಲಿಸಿ, ಅದರಲ್ಲಿ ಬಾಕಿ ಎಷ್ಟಿದೆ ಅನ್ನೋದನ್ನು ಪತ್ತೆ ಮಾಡಿ ಅದನ್ನು ವಿಭಾಗಿಸಲು ಇದು ನೆರವಾಗುತ್ತದೆ. ನೋ-ಡ್ಯೂಸ್ ಇದ್ರೆ ನೀವು ಪೆನ್ನಿನಲ್ಲಿ ಬರೆದಿಟ್ಟುಕೊಳ್ಳುವ ಅಗತ್ಯವಿಲ್ಲ, ಕಾಲ್ಕ್ಯುಲೇಟರ್ ಕೂಡ ಬೇಕಾಗಿಲ್ಲ.

`ನೋ-ಡ್ಯೂಸ್' ಲಕ್ಷಣಗಳು...

ಗುಂಪು ಹಾಗೂ ಈವೆಂಟ್‍ಗಳನ್ನು ಕ್ರಿಯೇಟ್ ಮಾಡಬಹದು : ಬಳಕೆದಾರರಿಗೆ ರಜಾದಿನಗಳ ಈವೆಂಟ್‍ಗಳು, ಪ್ರವಾಸ, ಫ್ಲಾಟ್, ಅಪಾರ್ಟ್‍ಮೆಂಟ್‍ಗಳ ಬಗ್ಗೆ ಸ್ವಯಂಚಾಲಿತ ಮತ್ತು ಸರಳೀಕೃತ ಸಾರಾಂಶ ದೊರೆಯುತ್ತದೆ. ಒಂದು ನಿರ್ದಿಷ್ಟವಾದ ಈವೆಂಟ್‍ಗೆ ಖರ್ಚಾಗಿದ್ದೆಷ್ಟು, ಅದರಲ್ಲಿ ಯಾರ್ಯಾರು ಎಷ್ಟು ಹಣ ಕೊಡಬೇಕು ಎಂಬುದನ್ನು ಕೂಡ ಆ್ಯಪ್‍ನಲ್ಲಿ ಹಾಕಬಹುದು.

ಮೊಬೈಲ್ ನಂಬರ್ ಆಧಾರಿತ : ನೋಡ್ಯೂಸ್ ಆ್ಯಪ್‍ಗೆ ಬಳಕೆದಾರರ ಇಮೇಲ್ ಐಡಿ ಕೊಡಬೇಕಾಗಿಲ್ಲ. ಮೊಬೈಲ್ ನಂಬರ್ ಆಧಾರದ ಮೇಲೆ ಇದು ಕಾರ್ಯನಿರ್ವಹಿಸುತ್ತೆ. ಆ್ಯಪ್ ಇನ್‍ಸ್ಟಾಲ್ ಮಾಡಿಕೊಳ್ಳದೇ ಇದ್ರೂ ಸ್ನೇಹಿತರು ಕಳುಹಿಸಿದ ಅಂಕಿ-ಅಂಶಗಳ ಸಂದೇಶ ಬಳಕೆದಾರರನ್ನು ತಲುಪುತ್ತೆ.

ರಿಮೈಂಡರ್ : ಸ್ನೇಹಿತರಲ್ಲಿ ಬಾಕಿ ಪಾವತಿ ಬಗ್ಗೆ ನೋಟಿಫಿಕೇಷನ್ ಕಳಿಸುವ ಮೂಲಕ ಇದು ನೆನಪಿಸುತ್ತೆ. ಮುಖತಃ ಭೇಟಿಯಾದಾಗ ಆಗುವ ಮುಜುಗರವನ್ನು ತಪ್ಪಿಸಲು ಇದು ಸಹಕಾರಿ.

ಇದುವರೆಗಿನ ಕಥೆ...

ನೋಡ್ಯೂಸ್‍ನ ಸಹ ಸಂಸ್ಥಾಪಕರಾದ ಸಾಕೇತ್ ಬಗ್ದಾ ಹಾಗೂ ಸಾಹಿಲ್ ಸೇಥಿ ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿದ್ದಾರೆ. ಐಬಿಎಸ್ ಹೈದ್ರಾಬಾದ್‍ನಲ್ಲಿ ಎಂಬಿಎ ಮಾಡಿದ ಸಾಕೇತ್ `ಅನ್ಸ್ರ್ಟ್ & ಯಂಗ್'ನಲ್ಲಿ ಕೆಲಸ ಕೂಡ ಮಾಡಿದ್ದಾರೆ. ಮಣಿಪಾಲದ ಟ್ಯಾಪ್‍ಮಿಯಲ್ಲಿ ಎಂಬಿಎ ಮುಗಿಸಿದ್ದ ಸಾಹಿಲ್ ಕ್ರಿಸಿಲ್‍ನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಜೊತೆಯಾಗಿ ವಾಸಿಸ್ತಾ ಇದ್ದ ಅವರಿಗೆ, ಖರ್ಚುಗಳ ನಿರ್ವಹಣೆ ಮತ್ತು ಅದನ್ನು ಸರಿಯಾಗಿ ಹಂಚಿಕೊಳ್ಳುವಲ್ಲಿ ಜಗಳ ಬರುವ ಸಾಧ್ಯತೆ ಇದೆ ಅನ್ನೋದು ಅರಿವಾಗಿತ್ತು. ಮೊದಮೊದಲು ಖರ್ಚು ಕಡಿಮೆಯಿತ್ತು, ಆದ್ರೆ ಬರ್ತಾ ಬರ್ತಾ ವೆಚ್ಚ ಜಾಸ್ತಿಯಾಗುತ್ತಲೇ ಹೋಯ್ತು ಎನ್ನುತ್ತಾರೆ ಸಾಹಿಲ್. ಸ್ನೇಹಿತರ ಜೊತೆ ಸುತ್ತಾಟ, ಸಿನಿಮಾ, ಊಟ, ಎಂಜಾಯ್‍ಮೆಂಟ್ ಇದ್ದೇ ಇರುತ್ತೆ. ಆದ್ರೆ ಆ ಸಂದರ್ಭದಲ್ಲಿ ಖರ್ಚಾದ ಹಣದ ಲೆಕ್ಕ ಇಟ್ಟು ವಸೂಲಿ ಮಾಡುವುದು ನೋವಿನ ವಿಚಾರ. ಅದನ್ನು ಸರಿಯಾಗಿ ನಿರ್ವಹಿಸದೇ ಇದ್ರೆ ಸ್ನೇಹಕ್ಕೇ ಕುತ್ತು ಬರುವ ಸಾಧ್ಯತೆ ಇರುತ್ತೆ ಅನ್ನೋದು ಸಾಹಿಲ್ ಅವರ ಅಭಿಪ್ರಾಯ. ಅವರ ಸ್ವಂತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶುರುವಾದ ಪ್ರಯತ್ನದಿಂದ್ಲೇ ನೋಡ್ಯೂಸ್ ಜನ್ಮ ತಳೆದಿದೆ.

ಸಾಕೇತ್ ಮತ್ತು ಸಾಹಿಲ್ ಜೊತೆಗೆ ನಾಲ್ವರು ಟೆಕ್ಕಿಗಳು, ಇಬ್ಬರು ಗ್ರಾಫಿಕ್ ಡಿಸೈನರ್‍ಗಳು ಕೂಡ ನೋಡ್ಯೋಸ್‍ನಲ್ಲಿ ಕೆಲಸ ಮಾಡ್ತಿದ್ದಾರೆ. 2015ರ ಆಗಸ್ಟ್ 24ರಂದು ನೋಡ್ಯೂಸ್‍ನಲ್ಲಿ ಗೂಗಲ್ ಪ್ಲೇ ಸ್ಟೋರ್‍ಗೆ ಪ್ರವೇಶಿಸಿತ್ತು. ಸದ್ಯ ನೋಡ್ಯೂಸ್‍ಗೆ 1600ಕ್ಕಿಂತ ಅಧಿಕ ಬಳಕೆದಾರರಿದ್ದಾರೆ. 160ಕ್ಕೂ ಹೆಚ್ಚು ಬಳಕೆದಾರರು 4.7 ನಷ್ಟು ರೇಟಿಂಗ್ ನೀಡಿದ್ದಾರೆ. ಈ ಸೇವೆಯನ್ನು ಇನ್ನಷ್ಟು ವಿಸ್ತರಿಸಲು ಸಾಕೇತ್ ಹಾಗೂ ಸಾಹಿಲ್ ಮುಂದಾಗಿದ್ದಾರೆ. ಬಳಕೆದಾರರ ಅನುಕೂಲಕ್ಕಾಗಿ ಆ್ಯಪ್‍ನಲ್ಲಿ ಇನ್ನಷ್ಟು ಫೀಚರ್‍ಗಳನ್ನು ಅಳವಡಿಸುವ ಪ್ರಯತ್ನ ನಡೆಯುತ್ತಿದೆ. ಬಿ2ಬಿ ಹಾಗೂ ಬಿ2ಸಿ ಚಾನಲ್ ಮೂಲಕ ಆದಾಯ ಸಂಗ್ರಹಕ್ಕೂ ಯೋಜನೆ ಹಾಕಿಕೊಳ್ಳಲಾಗಿದೆ. ಬಾಕಿ ಇರುವ ಹಣ ಪಾವತಿಯನ್ನು ಲೆಕ್ಕ ಹಾಕುವುದರ ಜೊತೆಗೆ ಆ್ಯಪ್‍ನಲ್ಲೇ ಅದನ್ನು ಪಾವತಿಸುವ ಸೌಲಭ್ಯವನ್ನು ಅಳವಡಿಸಲು ಪ್ರಯತ್ನ ನಡೆಯುತ್ತಿದೆ. ಐಓಎಸ್ ಆ್ಯಪ್ ಮತ್ತು ವೆಬ್ ವಿಭಾಗವನ್ನು ಅಭಿವೃದ್ಧಿಪಡಿಸಲು ಕೂಡ ಸಾಕೇತ್ ಹಾಗೂ ಸಾಹಿಲ್ ಪ್ರಯತ್ನಿಸ್ತಿದ್ದಾರೆ.

ವಲಯ ಅವಲೋಕನ

ಆರ್ಥಿಕ ಹಂಚಿಕೆ ಅನ್ನೋ ಪರಿಕಲ್ಪನೆ ಭಾರತದಲ್ಲಿ ಹೆಚ್ಚು ಪ್ರಚಲಿತಕ್ಕೆ ಬರ್ತಾ ಇದೆ. ಕ್ಯಾಬ್‍ಗಳ ಸಂಚಾರಕ್ಕೆ ಇದನ್ನು ಬಳಸಿಕೊಳ್ಳಲಾಗ್ತಿದೆ. ಇತ್ತೀಚೆಗೆ ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ತಾ ಇದೆ. ಬ್ಯಾಚ್ಯುಲರ್‍ಗಳು ವಸತಿ ಹಂಚಿಕೊಳ್ಳೋದು ಕಾಮನ್ ಆಗ್ಬಿಟ್ಟಿದೆ. ಹಾಗಾಗಿ ಪಾರದರ್ಶಕವಾಗಿ ಖರ್ಚು-ವೆಚ್ಚಗಳ ನಿರ್ವಹಣೆಗೆ, ಸಮಯ ಉಳಿತಾಯಕ್ಕೆ ಆ್ಯಪ್ ನೆರವಾಗುತ್ತದೆ. ಈ ಕ್ಷೇತ್ರದಲ್ಲಿ `ಸ್ಪ್ಲಿಟ್‍ವೈಸ್' ಮುಂಚೂಣಿಯಲ್ಲಿದ್ದು 2014ರ ಡಿಸೆಂಬರ್ ವರೆಗೆ ವಹಿವಾಟು 1.4 ಮಿಲಿಯನ್ ಡಾಲರ್‍ಗೆ ಏರಿಕೆಯಾಗಿದೆ. ನಮ್ಮ ಬಳಿ ಎಲ್ಲರ ಇ-ಮೇಲ್ ಐಡಿ ಇಟ್ಕೊಳ್ಳೋದು ಕಷ್ಟ, ಆದ್ರೆ ಸ್ನೇಹಿತರೆಲ್ಲರ ಫೋನ್ ನಂಬರ್‍ಗಳು ಇದ್ದೇ ಇರುತ್ತೆ. ಹಾಗಾಗಿ ಮೊಬೈಲ್ ನಂಬರ್‍ಗಳ ಆಧಾರದ ಮೇಲೆ ಕಾರ್ಯನಿರ್ವಹಿಸುವಂತೆ ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಸ್ಪ್ಲಿಟ್‍ವೈಸ್ ಬಿಟ್ರೆ, ಹ್ಯಾಪೇ ಮತ್ತು ಸ್ಮಾರ್ಟ್‍ಸ್ಪೆಂಡ್ಸ್ ಕೂಡ ಪಕ್ಕಾ ಲೆಕ್ಕಕ್ಕೆ ಬೆಸ್ಟ್ ಎನಿಸಿವೆ.

image


ನಮಗಿಷ್ಟವಾಗಿದ್ದೇನು..?

ನೋ-ಡ್ಯೂಸ್ ಅನ್ನು ಅತ್ಯಂತ ಸುಂದರವಾಗಿ ವಿನ್ಯಾಸ ಮಾಡಲಾಗಿದೆ. ಬೇರೆ ಪರಿಚಯ ಪತ್ರಗಳ ಬದಲು ಮೊಬೈಲ್ ನಂಬರ್‍ಗಳ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತೆ. ಅಸಮಾನವಾಗಿ ಅಥವಾ ಸಮವಾಗಿ ಬಿಲ್ ಅನ್ನು ಹಂಚುವ ಸಾಮರ್ಥ್ಯ ಹೊಂದಿದೆ. ಎಷ್ಟು ಜನರನ್ನು ಬೇಕಾದ್ರೂ ಈವೆಂಟ್ ಒಂದರ ಲೆಕ್ಕದ ಗ್ರೂಪ್‍ಗೆ ಸೇರಿಸಬಹುದು. ಆ್ಯಪ್ ಚಾಟ್ ಹಾಗೂ ರಿಮೈಂಡರ್ ಸೌಲಭ್ಯವಿದೆ.

ಯಾವ ಸುಧಾರಣೆ ಸಾಧ್ಯ..?

ಪಾವತಿ ಏಕೀಕರಣ ವೈಶಿಷ್ಟ್ಯಗಳಿಲ್ಲದೇ ಸಂಪೂರ್ಣ ಪರಿಹಾರ ಸಿಕ್ಕಂತಾಗುವುದಿಲ್ಲ. ಸ್ಥಳೀಯ ಭಾಷೆಗಳ ಬಳಕೆ ಅವಕಾಶವನ್ನು ಸೇರ್ಪಡೆಗೊಳಿಸಬೇಕಿದೆ. ಪ್ರತಿ ತಿಂಗಳ ಖರ್ಚು-ವೆಚ್ಚದ ವರದಿ ದೊರೆತರೆ ಬಳಕೆದಾರರಿಗೆ ಇನ್ನಷ್ಟು ಅನುಕೂಲವಾಗಲಿದೆ. ವೈಯಕ್ತಿಕ ಹಣಕಾಸು ವೈಶಿಷ್ಟ್ಯಗಳನ್ನು ಕೂಡ ಸೇರ್ಪಡೆಗೊಳಿಸುವಂತೆ ಬಳಕೆದಾರರು ಮನವಿ ಮಾಡಿದ್ದಾರೆ.

`ಯುವರ್‍ಸ್ಟೋರಿ' ತೀರ್ಪು..?

ನೋ-ಡ್ಯೂಸ್ ಆ್ಯಪ್ ಬ್ರಹ್ಮಚಾರಿಗಳಿಗೆ ಹಾಗೂ ವಿವಾಹಿತರಿಗೆ ತಮ್ಮ ಸೋಶಿಯಲ್ ಗ್ರೂಪ್‍ಗಳಲ್ಲಿ ಖರ್ಚು-ವೆಚ್ಚ ನಿರ್ವಹಣೆಯ ತಲೆನೋವನ್ನು ನಿವಾರಿಸಿದೆ. ಮುಜುಗರ ತರುವಂತಹ ಸಂಭಾಷಣೆಗಳಿಂದಲೂ ಅವರು ಪಾರಾಗಬಹುದು. ನೋಡ್ಯೂಸ್ ತನ್ನ ಆ್ಯಪ್ ಅನ್ನು ಹೇಗೆ ಅಭಿವೃದ್ಧಿಪಡಿಸುತ್ತೆ? ಈ ಮೂಲಕ ಹಣ ಉಳಿತಾಯಕ್ಕೆ ಯಾವ ರೀತಿ ನೆರವು ನೀಡುತ್ತೆ ಅನ್ನೋದು ಕುತೂಹಲ ಮೂಡಿಸಿದೆ.

ಲೇಖಕರು: ಹರ್ಷಿತ್​​ ಮಲ್ಯ

ಅನುವಾದಕರು: ಭಾರತಿ ಭಟ್​​​​