10*10 ಚಿಕ್ಕಕೋಣೆಯಿಂದ 1,000 ಕೋಟಿಯ ಮಾಲೀಕನಾದ ತನಕ..!

ಟೀಮ್​ ವೈ.ಎಸ್​. ಕನ್ನಡ

10*10 ಚಿಕ್ಕಕೋಣೆಯಿಂದ 1,000 ಕೋಟಿಯ ಮಾಲೀಕನಾದ ತನಕ..!

Tuesday April 11, 2017,

3 min Read

“ ಹೊಸ ಉದ್ಯಮ ಆರಂಭಿಸಲು ಹೆಚ್ಚು ಹಣ ಬೇಕಾಗಿಲ್ಲ. ಆದ್ರೆ ಕಷ್ಟಪಟ್ಟು ಕೆಲಸ ಮಾಡುವ ಮನಸ್ಸು ಇರಬೇಕು. ನಿಮ್ಮ ಕೆಲಸದ ಬಗ್ಗೆ ನಿಮಗೆ ಹೆಚ್ಚು ನಂಬಿಕೆ ಇರಬೇಕು.”

ಹೀಗಂತ ಹೇಳಿಕೊಂಡು ಮಾತಿಗಿಳಿದವರು ಹನುಮಂತ್ ರಾಮ್​ದಾಸ್ ಗಾಯಕ್ವಾಡ್. ಗಾಯಕ್ವಾಡ್ ಬಿವಿಜಿ ಇಂಡಿಯಾ ಲಿಮಿಟೆಡ್​ನ ಮ್ಯಾನೇಜಿಂಗ್ ಡೈರೆಕ್ಟರ್. ಬಿವಿಜಿ ಇಂಡಿಯಾ ಭಾರತದ ಸಮಗ್ರ ಸೇವೆಗಳ ಉದ್ಯಮದಲ್ಲಿ ಸಾಕಷ್ಟು ಯಶಸ್ಸು ಕಂಡಿದೆ. ಕಷ್ಟದ ದಿನಗಳನ್ನು ಮೆಟ್ಟಿನಿಂತು ಯಶಸ್ಸಿನ ಹಾದಿಯಲ್ಲಿ ಓಡುತ್ತಿದೆ.

ಹನುಮಂತ್ ಹುಟ್ಟಿದ್ದು ಮಹಾರಾಷ್ಟ್ರದ ಸತಾರ ಜಿಲ್ಲೆಯ ರಹೀಮತ್​ಪುರದಲ್ಲಿ. ವಿದ್ಯಾರ್ಥಿ ಜೀವನದಲ್ಲಿ ಹನುಮಂತ್ ಓದಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದರು. ಗಣಿತದಲ್ಲಿ ಹನುಂತ್​ಗೆ, ಹನುಮಂತ್ ಮಾತ್ರ ಸಾಟಿಯಾಗಿದ್ದರು. ಅಂದಹಾಗೇ, ಹನುಮಂತ್ ಕುಟುಂಬ ಒಂದು ಹೊತ್ತಿನ ಊಟಕ್ಕೂ ಸಾಕಷ್ಟು ಪರದಾಟ ನಡೆಸುತ್ತಿತ್ತು. ಕೇವಲ 10 *10 ಸುತ್ತಳತೆಯ ಒಂದೇ ಒಂದು ರೂಮ್​ನಲ್ಲಿ ಜೀವನ ಸಾಗುತ್ತಿತ್ತು. ಕತ್ತಲಾದ್ರೆ ವಿದ್ಯುತ್ ಇಲ್ಲದೆ ಬೆಳಕೇ ಇರುತ್ತಿರಲಿಲ್ಲ. ಬದುಕಿನ ಎಲ್ಲಾ ಕಷ್ಟಗಳನ್ನು ಹನುಮಂತ್ ಜೀವನದ ಆರಂಭದಲ್ಲೇ ಅನುಭವಿಸಿದ್ದರು. ಆದ್ರೆ ಕನಸುಗಳನ್ನು ಮಾತ್ರ ಕೈ ಬಿಟ್ಟಿರಲಿಲ್ಲ. ಬದುಕಿನ ಎಲ್ಲಾ ಕಷ್ಟಗಳನ್ನು ದೂರ ಮಾಡಬೇಕಾದರೆ ಕಠಿಣ ಪರಿಶ್ರಮ ಬೇಕು ಅನ್ನುವುದನ್ನು ಅರಿತುಕೊಂಡ್ರು. ತನ್ನ ಮುಂದೆ ಇರುವ ದಾರಿ ಕೇವಲ ಓದು ಮಾತ್ರ ಅನ್ನುವುದು ಹನುಮಂತ್ ಅವರಿಗೆ ಬೇಗನೆ ಅರ್ಥವಾಯಿತು. ಅಷ್ಟೇ ಅಲ್ಲ ಓದಿನ ಕಡೆ ಹೆಚ್ಚು ಗಮನಕೊಟ್ರು. 4ನೇ ತರಗತಿಯಿಂದಲೇ ಹನುಮಂತ್ ಸರಕಾರದಿಂದ 10 ರೂಪಾಯಿ ವಿದ್ಯಾರ್ಥಿವೇತನ ಪಡೆಯಲು ಆರಂಭಿಸಿದ್ದರು.

image


ಈ ನಡುವೆ ಹನುಮಂತ್ ತಂದೆಯ ಕೆಲಸದಲ್ಲಿ ಬದಲಾವಣೆಯಾಯಿತು. ಹೀಗಾಗಿ ಕುಟುಂಬ ಮುಂಬೈಗೆ ವರ್ಗಾವಾಗಬೇಕಾಯಿತು. ವಾತಾವರಣದಲ್ಲಿನ ಬದಲಾವಣೆಯಿಂದಾಗಿ ಹನುಮಂತ್ ತಂದೆ ಕಾಯಿಲೆಗೆ ಬಿದ್ರು. ಕುಟುಂಬ, ಜೀವನಕ್ಕೆ ಆಧಾರವಿಲ್ಲದೆ ಕಂಗಾಲಾಯಿತು. ಈ ವೇಳೆಯಲ್ಲಿ ಹನುನಂತ್ ಶಾಲೆಯಿಂದ ಬಂದ ಕೂಡಲೇ ರೈಲ್ವೇ ಸ್ಟೇಷನ್​ನಲ್ಲಿ ಹಣ್ಣು ಮಾರಲು ಆರಂಭಿಸಿದ್ರು. ತಾಯಿ ಸ್ಥಳೀಯ ಶಾಲೆಯೊಂದರಲ್ಲಿ ಟೀಚರ್ ಆಗಿ ಕೆಲಸಕ್ಕೆ ಸೇರಿಕೊಂಡ್ರು. ಅಷ್ಟೇ ಅಲ್ಲ ಬಟ್ಟೆ ಹೊಲಿಯುವ ಕೆಲಸ ಶುರುಮಾಡಿಕೊಂಡು ಹಣ ಸಂಪಾದನೆ ಮಾಡಲು ಆರಂಭಿಸಿದ್ರು. ಎಲ್ಲಾ ಕಷ್ಟಗಳ ಮಧ್ಯೆ ಹನುಮಂತ್ ತನ್ನ ಸೆಕೆಂಡರ್ ಸ್ಕೂಲ್ ಎಕ್ಸಾಂ ಅನ್ನು ಶೇಕಡಾ 88 ಅಂಕಗಳೊಂದಿಗೆ ಪಾಸ್ ಮಾಡಿದ್ರು. ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಪಾಲಿಟೆಕ್ನಿಕ್ ಕೋರ್ಸ್​ಗೆ ಸೇರಿಕೊಂಡ್ರು.

ಇದೆಲ್ಲದರ ಮಧ್ಯೆ ಹನುಮಂತ್ ಅಪ್ಪನ ಆರೋಗ್ಯ ದಿನದಿಂದ ದಿನಕ್ಕೆ ಕಂಗೆಟ್ಟುಹೋಗಿತ್ತು. ಅಷ್ಟೇ ಅಲ್ಲ ಇಹಲೋಕವನ್ನು ಕೂಡ ತ್ಯಜಿಸಿದ್ರು. ಹನುಮಂತ್ ಆಘಾತಕ್ಕೆ ಒಳಗಾದ್ರೂ ಹಠ ಬಿಡಲಿಲ್ಲ. ಔರಂಗಬಾದ್​ನ ಸರ್ಕಾರಿ ಕಾಲೇಜಿನಲ್ಲಿ ಎಂಜಿನಿಯರಿಂಗ್​ಗೆ ಪ್ರವೇಶ ಗಿಟ್ಟಿಸಿಕೊಂಡ್ರು. ಈ ನಡುವೆ ಹನುಮಂತ್ ಅಮ್ಮ ತಿಂಗಳಿಗೆ ಕೇವಲ 2300 ರೂಪಾಯಿ ಸಂಪಾದನೆ ಮಾಡುತ್ತಿದ್ದರೂ ಮಗನನ್ನು ಉತ್ತಮ ಕಾಲೇಜಿಗೆ ಸೇರಿಸಬೇಕು ಅನ್ನುವ ಹಠ ಹೊಂದಿದ್ದರು. ಇದಕ್ಕಾಗಿ ಬ್ಯಾಂಕ್ ಒಂದರಿಂದ 15000 ರೂಪಾಯಿ ಸಾಲ ಪಡೆದು ಮಗನಿಗೆ ವಿಶ್ವಕರ್ಮ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರವೇಶ ಕೊಡಿಸಿದ್ರು. ಕಾಲೇಜು ಓದುವ ಸಂದರ್ಭದಲ್ಲಿ ವಿವಿಧ ಕೆಲಸಗಳ ಮೂಲಕ ಹನುಮಂತ್ ತನ್ನ ಖರ್ಚಿಗೆ ಬೇಕಾಗುವಷ್ಟು ಸಂಪಾದನೆ ಮಾಡುತ್ತಿದ್ದರು.

ಇದನ್ನು ಓದಿ: ನಾಳಿನ ಬಗ್ಗೆ ಕನಸು- ಸೋಲಿನ ಬಗ್ಗೆ ಅವಲೋಕನ- ಸ್ಟಾರ್ಟ್​ಅಪ್​ ಯಶಸ್ಸಿನ ಮಂತ್ರ

1994ರಲ್ಲಿ ಪುಣೆಯ ಟಾಟಾ ಮೋಟಾರ್ಸ್​ನಲ್ಲಿ ಟ್ರೈನಿ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಂಡ್ರು. ಅಲ್ಲಿ ಹನುಮಂತ್ "ಭಾರತ್ ವಿಕಾಸ್ ಪ್ರತಿಷ್ಠಾನ" ಎನ್ನುವ ನಾನ್ ಪ್ರಾಫಿಟ್ ಟ್ರಸ್ಟ್ ಮೂಲಕ ಕೆಲಸ ಕೊಡುವ ಐಡಿಯಾವನ್ನು ನೀಡಿದ್ರು. ಆರಂಭದಲ್ಲಿ ಹನುಮಂತ್ ಅವರ 8 ಗೆಳೆಯರು ಕೆಲಸ ಪಡೆದುಕೊಂಡು ಸಂಸ್ಥೆಯನ್ನು ಬೆಳೆಸಿದ್ರು. ಇವತ್ತು ದೇಶದ 20 ರಾಜ್ಯಗಳಲ್ಲಿ ಬಿವಿಪಿ ಕಾರ್ಯ ನಡೆಸುತ್ತಿದೆ. ಈ ವಲಯದಲ್ಲಿ ಬಿವಿಪಿ ವಿಶ್ವದ ಹಲವು ಕಂಪನಿಗಳ ಜೊತೆ ಒಪ್ಪಂದಗಳನ್ನು ಕೂಡ ಮಾಡಿಕೊಂಡಿದೆ. ಸುಮಾರು 700 ಕ್ಲೈಂಟ್​ಗಳನ್ನು ಹೊಂದಿದೆ. ಏಷ್ಯಾದಲ್ಲೇ ತುರ್ತು ವೈದ್ಯಕೀಯ ಸೇವೆ ಒದಗಿಸುವ ಕಂಪನಿಗಳಲ್ಲಿ ಬಿಜಿವಿ ಅತೀ ದೊಡ್ಡ ಸಂಸ್ಥೆ ಎನಿಸಿದೆ. ಬಿವಿಜಿ ಪಾರ್ಲಿಮೆಂಟ್ ಶುದ್ಧಗೊಳಿಸುವ ಕೆಲಸವನ್ನು ಕೂಡ ಮಾಡುತ್ತಿದೆ. ದೆಹಲಿ ಹೈಕೋರ್ಟ್, ಪ್ರಧಾನಿ ನಿವಾಸ ಮತ್ತು ರಾಷ್ಟ್ರಪತಿ ಭವನವನ್ನು ಶುದ್ಧಗೊಳಿಸುವ ಕೆಲಸವನ್ನು ಕೂಡ ಬಿವಿಜಿ ಮಾಡುತ್ತಿದೆ.

ಹನುಮಂತ್ ಕನಸುಗಳು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. 2017ರ ವೇಳೆಗೆ ಹನುಮಂತ್ ಸುಮಾರು 10 ಲಕ್ಷ ಜನರಿಗೆ ಉದ್ಯೋಗ ನೀಡುವ ಯೋಜನೆ ರೂಪಿಸಿಕೊಂಡಿದ್ದಾರೆ. ಬಿವಿಜಿ ಇಂಡಿಯಾ ಇವತ್ತು ಸುಮಾರು 1000 ಕೋಟಿ ರೂಪಾಯಿ ಮೌಲ್ಯವನ್ನು ಹೊಂದಿದೆ. ಹನುಮಂತ್ ಯಾವುದೇ ಬೆಂಬಲವಿಲ್ಲದೆ ಈ ಸಾಧನೆ ಮಾಡಿದ್ದಾರೆ. ಕಠಿಣ ಪರಿಶ್ರಮ ಮತ್ತು ಗುರಿ ಸಾಧಿಸುವ ಛಲವಿದ್ದರೆ ಯಾವ ಸಾಧನೆಯನ್ನು ಬೇಕಾದ್ರೂ ಮಾಡಬಹುದು ಅನ್ನುವುದಕ್ಕೆ ಹನುಂತ್ ರಾಮ್​ದಾಸ್ ಗಾಯಕ್ವಾಡ್ ಸಾಧನೆ ಅತ್ಯಂತ ದೊಡ್ಡ ಉದಾಹರಣೆ .

ಇದನ್ನು ಓದಿ:

1. ನಾಯಿಗಳ ಪಾಲಿಗೆ ಸ್ವರ್ಗ- ಬೆಂಗಳೂರಿನಲ್ಲಿದೆ "ಡಾಗ್ಸ್​ಪಾರ್ಕ್​"

2. ಸ್ವೈಪಿಂಗ್​ ಮಷಿನ್​ಗಳಿಗೆ ಸಿಗಲಿದೆ ಬಹುಭಾಷೆಯ ಟಚ್​- ಡಿಜಿಟಲ್​ ಪಾವತಿ ವ್ಯವಸ್ಥೆಗೆ ಹೊಸ ​ಕಿಕ್​

3. ಪ್ರವಾಸಿಗರನ್ನು ಸೆಳೆಯಲು ವರ್ಚುವಲ್​ ರಿಯಾಲಿಟಿ- ರಾಮನಗರದಲ್ಲಿ "ಶೋಲೆ"ಮರು ಸೃಷ್ಟಿ..!